Tag: ockhi

  • ಹುಣ್ಣಿಮೆ ಜೊತೆ ಕೈ ಜೋಡಿಸಿದ ಓಖಿ- ಬೆಳದಿಂಗಳ ಇಂದಿನ ರಾತ್ರಿ ಏನಾಗುತ್ತೋ..?

    ಹುಣ್ಣಿಮೆ ಜೊತೆ ಕೈ ಜೋಡಿಸಿದ ಓಖಿ- ಬೆಳದಿಂಗಳ ಇಂದಿನ ರಾತ್ರಿ ಏನಾಗುತ್ತೋ..?

    – ದೀಪಕ್ ಜೈನ್
    ಉಡುಪಿ: ಓಖಿ ಚಂಡಮಾರುತ ತಮಿಳ್ನಾಡು ಮತ್ತು ಕೇರಳ ರಾಜ್ಯದ ನಿದ್ದೆಗೆಡಿಸಿದೆ. ಕರ್ನಾಟಕದ ಕರಾವಳಿಗರಿಗೆ ಚಳಿ ಹಿಡಿಸಿದೆ. ಸಮುದ್ರದಲ್ಲೆದ್ದ ಸುಳಿಗಾಳಿಗೂ ಬಾನಿನಲ್ಲಿರುವ ಚಂದ್ರನಿಗೂ ಲಿಂಕ್ ಇದೆ. ಸಮುದ್ರದ ಅಲೆಗಳನ್ನು ಫುಲ್ ಕಂಟ್ರೋಲ್ ಮಾಡೋನೇ ಆ ಚಂದ ಮಾಮ.

    ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನ ಸಾಮಾನ್ಯವಾಗಿ ಕಡಲು ಎಂದಿನಂತೆ ಇರೋದಿಲ್ಲ. ಅಲೆಗಳ ಅಬ್ಬರ ಜಾಸ್ತಿ ಇರುತ್ತದೆ. ಈ ಬಾರಿ ಹುಣ್ಣಿಮೆ ಜೊತೆ ಓಖಿ ಚಂಡಮಾರುತ ರೌದ್ರ ನರ್ತನ ತೋರುತ್ತಿದೆ. ಕೇರಳ ಹಾಗೂ ತಮಿಳುನಾಡಿನಲ್ಲಿ ಭಾರಿ ಅನಾಹುತ ಸೃಷ್ಟಿಸಿರುವ ಓಖಿ ಹುಣ್ಣಿಮೆ ಸಂದರ್ಭದಲ್ಲೇ ಹುಟ್ಟಿಕೊಂಡಿರೋದರಿಂದ ಅಪಾಯ ಜಾಸ್ತಿ.

    ಓಖಿ ಚಂಡಮಾರುತದ ಎಫೆಕ್ಟ್ ರಾಜ್ಯದ ಕರಾವಳಿ ಜಿಲ್ಲೆಗಳಿಗೆ ತಟ್ಟಿದೆ. ಉಡುಪಿಯಲ್ಲಿ ಹುಣ್ಣಿಮೆಯ ಹಿಂದಿನ ದಿನ (ಡಿ.2) ಕಡಲು ತನ್ನ ರೌದ್ರ ನರ್ತನ ತೋರಿದೆ. ಕಾಪು- ಪಡುಕೆರೆಯಲ್ಲಿ ಸಮುದ್ರದ ನೀರು ರಸ್ತೆಗೆ ಅಪ್ಪಳಿಸಿದೆ. ರಾತ್ರೋ ರಾತ್ರಿ ದೋಣಿಗಳನ್ನು ತೀರದಿಂದ ತಟಕ್ಕೆ ಎಳೆದು ಹಾಕಲಾಗುತ್ತಿದೆ.

    200 ನಾಟಿಕಲ್ ಮೈಲಿ ದೂರ ಚಂಡಮಾರುತದ ಸುಂಟರಗಾಳಿ ಇದ್ದರೂ, ಹುಣ್ಣಿಮೆ ಎಫೆಕ್ಟ್ ನಿಂದ ಸಮುದ್ರ ತೀರದಲ್ಲಿ ಅಲೆಗಳು ಉಬ್ಬುಬ್ಬಿ ಬರುತ್ತಿದೆ. ಅಬ್ಬರದ ಅಲೆಗಳಿಗೆ ಹೆದರಿ ಕಡಲತೀರದ ಜನ ಬೇರೆಡೆ ಶಿಫ್ಟ್ ಆಗುತ್ತಿದ್ದಾರೆ. ಹುಣ್ಣಿಮೆಯ ಭಯವೂ ಜನರನ್ನು ಕಾಡುತ್ತಿದೆ.

    ಸಮುದ್ರಕ್ಕೂ ಚಂದ್ರನಿಗೂ ಸಂಬಂಧ!: ಸಮುದ್ರಕ್ಕೂ ಚಂದ್ರನಿಗೂ ಸಂಬಂಧವಿದೆ. ಚಂದ್ರನ ಚಲನೆಯ ಮೇಲೆಯೇ ಎಲ್ಲಾ ರಾಶಿ, ನಕ್ಷತ್ರಗಳು ನಿಂತಿರುವುದು. ತಿಂಗಳಿಗೊಂದು ಹುಣ್ಣಿಮೆ ಅಮವಾಸ್ಯೆ ಬರುತ್ತದೆ. 15 ದಿನಕ್ಕೊಮ್ಮೆ ಸಮುದ್ರದ ಮೇಲೆ ಎಫೆಕ್ಟ್ ಆಗುತ್ತದೆ. ಸಾಗರದ ನೀರು ದಡಕ್ಕೆ ಹತ್ತಿರಾಗೋದು ಈ ಎರಡು ದಿನಗಳಲ್ಲೇ ಜಾಸ್ತಿ.

    ಅಮಾವಾಸ್ಯೆಯ ಹಿಂದಿನ ಮತ್ತು ನಂತರದ ದಿನ, ಹುಣ್ಣಿಮೆ ಮತ್ತು ಎರಡು ದಿನ ಅಲೆಗಳ ಸಂಖ್ಯೆ ಮತ್ತು ಅಪ್ಪಳಿಸುವ ರಭಸ ಹೆಚ್ಚಾಗಿರುತ್ತದೆ. ಹೀಗಾಗಿ ಓಖಿ ಮತ್ತು ಹುಣ್ಣಿಮೆ ಒಟ್ಟಾಗಿದ್ದು, ಅರಬ್ಬೀ ಸಮುದ್ರದ ಅಬ್ಬರ ಹೆಚ್ಚಾಗಲು ಒಂದು ಕಾರಣವಾಗಿದೆ. ಓಖಿ ಚಂಡಮಾರುತದಿಂದ ಸಮುದ್ರ ತೀರದ ಜನರು ಆತಂಕಗೊಂಡಿದ್ದಾರೆ. ಎರಡು ದಿನಗಳಲ್ಲಿ ಕಡಲು ಸಮಸ್ಥಿತಿಗೆ ಬರಲಪ್ಪಾ ಎಂದು ಸಮುದ್ರ ರಾಜನಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ.

    ಕಾಪು, ಪಡುಕೆರೆ, ಮಲ್ಪೆ, ಪಿತ್ರೋಡಿ ಆಸುಪಾಸಿನಲ್ಲಿ ಸಮುದ್ರ ತೀರದಲ್ಲಿದ್ದ ದೋಣಿಗಳನ್ನು ಮೇಲಕ್ಕೆ ಶಿಫ್ಟ್ ಮಾಡಿದ್ದೇವೆ. ಮೀನುಗಾರಿಕೆಗೆ ಹೋಗದಂತೆ ಎಚ್ಚರಿಕೆ ಕೊಟ್ಟಿರುವ ಕಾರಣ ಎರಡು ದಿನ ರಜೆ ತೆಗೆದುಕೊಂಡಿದ್ದೇವೆ ಎಂದು ಪಿತ್ರೋಡಿ ಸಂಜೀವ ಸಾಲಿಯಾನ್ ಮಾಹಿತಿ ನೀಡಿದರು.

    ಪ್ರತೀ ಅಮವಾಸ್ಯೆ – ಹುಣ್ಣಿಮೆ ದಿನ ಬರುವಾಗ ಕಡಲು ಕಪ್ಪಗೆ ಮತ್ತು ಬೆಳ್ಳಗೆ ಆಗುತ್ತದೆ. ಈ ಬಾರಿ ಹುಣ್ಣಿಮೆ ದಿನದಂದೇ ದಕ್ಷಿಣದಲ್ಲಿ ಸುಳಿಗಾಳಿ ಎದ್ದಿರುವುದರಿಂದ ನಾವು ಕಸುಬಿಗೆ ಇಳಿಯಲು ಸ್ವಲ್ಪ ಯೋಚನೆ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದರು.

    ಹುಣ್ಣಿಮೆಯ ಹಿಂದಿನ ದಿನದ ರಾತ್ರಿ ಕೊಂಚಮಟ್ಟಿನ ರೌದ್ರಾವತಾರ ತೋರಿರುವ ಕಡಲು, ಹುಣ್ಣಿಮೆ ರಾತ್ರಿ ಯಾವ ರೀತಿಯಲ್ಲಿ ವರ್ತಿಸುತ್ತದೆ ಎಂಬ ಕುತೂಹಲ ಮತ್ತು ಆತಂಕ ಕರಾವಳಿಯ ಜನರಲ್ಲಿ ಇದೆ. ಅದರಲ್ಲೂ ಸಮುದ್ರವನ್ನೇ ಜೀವನ ಮಾಡಿಕೊಂಡಿರುವ, ತಟದಲ್ಲಿ ಮನೆ ಕಟ್ಟಿಕೊಂಡಿರುವ ಮೀನುಗಾರರಿಗೆ ಆತಂಕ ಕೊಂಚ ಹೆಚ್ಚೇ ಇದೆ.

  • ಓಖಿ ವಕ್ರದೃಷ್ಟಿಗೆ ಕೇರಳ, ತಮಿಳ್ನಾಡು ತತ್ತರ- ಬೆಂಗ್ಳೂರು, ಕರಾವಳಿಯಲ್ಲಿ ಇಂದೂ ಮಳೆ ಸಾಧ್ಯತೆ

    ಓಖಿ ವಕ್ರದೃಷ್ಟಿಗೆ ಕೇರಳ, ತಮಿಳ್ನಾಡು ತತ್ತರ- ಬೆಂಗ್ಳೂರು, ಕರಾವಳಿಯಲ್ಲಿ ಇಂದೂ ಮಳೆ ಸಾಧ್ಯತೆ

    ಚೆನ್ನೈ: ಸುಮಾರು 12 ಮಂದಿಯನ್ನು ಬಲಿ ಪಡೆದಿರುವ ಓಖಿ ಚಂಡಮಾರುತ ಇನ್ನೂ ತಣ್ಣಗಾಗಿಲ್ಲ. ಲಕ್ಷದ್ವೀಪ, ಕೇರಳ, ತಮಿಳುನಾಡಿನಲ್ಲಿ ಅನಾಹುತ ಸೃಷ್ಟಿಸಿರುವ ಚಂಡಮಾರುತ ಇಂದು ಮತ್ತಷ್ಟು ತೀವ್ರತೆ ಪಡೆದುಕೊಳ್ಳಲಿದೆ. ಮುಂದಿನ 24 ಗಂಟೆಗಳಲ್ಲಿ ಬಿರುಗಾಳಿ ಸಹಿತ ಇನ್ನಷ್ಟು ಅಬ್ಬರ ಮಾಡಲಿದೆ. 48 ಗಂಟೆಗಳಲ್ಲಿ ಧಾರಾಕಾರ ಮಳೆಯಾಗಲಿದೆ ಅಂತಾ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಕೇರಳ ಮತ್ತು ತಮಿಳುನಾಡಿನ ಕರಾವಳಿ ಪ್ರದೇಶಗಳಲ್ಲಿರುವ ಶಾಲಾ-ಕಾಲೇಜುಗಳಿಗೆ ಈಗಾಗಲೇ ರಜೆ ಘೋಷಿಸಲಾಗಿದೆ. ತಿರುವನಂತಪುರಂ ತೀರದಲ್ಲಿ ಇನ್ನೂ 80 ಮಂದಿ ಮೀನುಗಾರರು ಸಿಲುಕಿರುವ ಸಾಧ್ಯತೆ ಇದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ. ಚೆನ್ನೈನಲ್ಲಿಯೂ ಮಳೆಯಾಗ್ತಿದೆ. ಕೇರಳ ಮತ್ತು ತಮಿಳುನಾಡಿನಲ್ಲಿರುವ ನದಿಗಳು ಅಪಾಯದ ಮಟ್ಟ ಮೀರಿ ಹರಿಯುವ ಸಾಧ್ಯತೆ ಇದೆ.

    ಓಖಿ ಚಂಡಮಾರುತ ಹಿನ್ನೆಲೆಯಲ್ಲಿ ಕರ್ನಾಟಕದ ಕರಾವಳಿ ತೀರ ಪ್ರದೇಶಗಳಲ್ಲೂ ಕಟ್ಟೆಚ್ಚರ ಘೋಷಿಸಲಾಗಿದೆ. ಗಂಟೆಗೆ 45 ರಿಂದ 65 ಕಿಲೋ ಮೀಟರ್ ವೇಗದಲ್ಲಿ ಬಿರುಗಾಳಿ ಸಹಿತ ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಸೂಚಿಸಲಾಗಿದೆ.

    ಇತ್ತ ಬೆಂಗಳೂರಲ್ಲೂ ಇಂದು ಮತ್ತು ನಾಳೆ ಮಳೆ ಮುಂದುವರಿಯಲಿದೆ ಅಂತಾ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಳಿಗಾಳಿ ಬೀಸುತ್ತಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲೂ ಮಳೆಯಾಗುವ ಸಾಧ್ಯತೆ ಇದೆ.

    ಓಖಿ ಚಂಡಮಾರುತಕ್ಕೆ ಲಕ್ಷದ್ವೀಪದಲ್ಲಿರುವ ಕಲ್ಪೇನಿ ಮತ್ತು ಮಿನಿಕಾಯ್ ದ್ವೀಪಗಳು ಥಂಡಾ ಹೊಡೆದಿವೆ. ಭೀಮಗಾತ್ರದ ಅಲೆಗಳು ತೀರ ಪ್ರದೇಶದಲ್ಲಿರುವ ಮನೆ, ರೆಸಾರ್ಟ್‍ಗಳಿಗೆ ನುಗ್ಗಿದೆ. ಸಾವು ನೋವು ಸಂಭವಿಸಿಲ್ಲವಾದರೂ ಹಲವಾರು ಮನೆಗಳು ಸಮುದ್ರ ಪಾಲಾಗಿವೆ ಎಂದು ವರದಿಯಾಗಿದೆ.

    https://www.youtube.com/watch?v=nI9KBpvAA3k

  • ಎಚ್ಚರ, ಸಮುದ್ರದಲ್ಲಿ ಏಳಲಿದೆ 6 ಮೀಟರ್ ಎತ್ತರದ ಅಲೆ – ಓಖಿ ಚಂಡಮಾರುತಕ್ಕೆ ಮಂಗಳೂರಿನ 2 ಹಡಗು ಮುಳುಗಡೆ

    ಎಚ್ಚರ, ಸಮುದ್ರದಲ್ಲಿ ಏಳಲಿದೆ 6 ಮೀಟರ್ ಎತ್ತರದ ಅಲೆ – ಓಖಿ ಚಂಡಮಾರುತಕ್ಕೆ ಮಂಗಳೂರಿನ 2 ಹಡಗು ಮುಳುಗಡೆ

    ಮಂಗಳೂರು/ಬೆಂಗಳೂರು/ಕೊಚ್ಚಿ: ಓಖಿ ಚಂಡಮಾರುತ ಹೊಡೆತದಿಂದಾಗಿ ಲಕ್ಷದ್ವೀಪ ಸಮೀಪದ ಅರಬ್ಬಿ ಸಮುದ್ರದಲ್ಲಿ ಮಂಗಳೂರಿನಿಂದ ಹೊರಟಿದ್ದ 2 ಹಡಗು ಮುಳುಗಡೆಯಾಗಿದೆ. ಆದರೆ ಓಖಿ ಎಫೆಕ್ಟ್ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

    ಅದೃಷ್ಟವಶಾತ್ ಮಂಗಳೂರಿನಿಂದ ಹೊರಟ ಮೂರು ಹಡಗಿನಲ್ಲಿದ್ದ ಒಟ್ಟು 14 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಿನ್ನೆ ಮಂಗಳೂರು ಹಳೆ ಬಂದರಿನಿಂದ ಸರಕು ಮತ್ತು ತರಕಾರಿ ಹೇರಿಕೊಂಡು ಹೋಗಿದ್ದ ಈ ಹಡಗುಗಳು ಅಪಾಯಕ್ಕೆ ಸಿಲುಕಿರುವ ಬಗ್ಗೆ ಬೋಟ್ ಮಾಲಕರಿಗೆ ಇಂದು ಸಂಜೆ ಮಾಹಿತಿ ಸಿಕ್ಕಿತ್ತು. ಕೂಡಲೇ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ.

    ಮಂಗಳೂರಿನಿಂದ ಹೊರಟಿದ್ದ ಒಂದು ಬೋಟ್ ಸಂಪೂರ್ಣ ಮುಳುಗಡೆಯಾಗಿದ್ದರೆ, ಎರಡನೇ ಬೋಟ್ ಅರ್ಧ ಮುಳುಗಿದೆ. ಮೂರನೇ ಬೋಟ್ ಗೆ ಡ್ಯಾಮೇಜ್ ಆಗಿದೆ. ಈ ಎಲ್ಲಾ ಹಡಗುಗಳು ಮಂಗಳೂರು ಹಳೆ ಬಂದರಿನಲ್ಲಿ ನೋಂದಣಿಯಾಗಿವೆ. ಬೋಟಿನಲ್ಲಿದ್ದ ಕಾರ್ಮಿಕರು ಗುಜರಾತ್ ಹಾಗೂ ತಮಿಳುನಾಡಿನವರು ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಈ ನಡುವೆ ಮೀನುಗಾರಿಕೆಗೆ ತೆರಳಿ ಚಂಡಮಾರುತದ ನಡುವೆ ಸಿಲುಕಿಕೊಂಡಿದ್ದ 214 ಮೀನುಗಾರರನ್ನು ಇದುವರೆಗೆ ನೌಕಾ ಪಡೆ ಹಾಗೂ ವಿಪತ್ತು ನಿರ್ವಹಣಾ ಸಿಬ್ಬಂದಿ ರಕ್ಷಿಸಿದ್ದಾರೆ. ಇನ್ನೊಂದೆಡೆ ಸಿಲುಕಿದ್ದ 60 ಮಂದಿಯನ್ನು ಜಪಾನ್ ಹಡಗು ರಕ್ಷಿಸಿದೆ. ಇವರು ಕರಾವಳಿ ಪಡೆಯ ಸಹಾಯದ ಮೂಲಕ ದಡ ಸೇರಲಿದ್ದಾರೆ. ತಿರುವನಂತಪುರಂ ಜಿಲ್ಲಾಧಿಕಾರಿ ವಾಸುಕಿನೇತೃತ್ವದಲ್ಲಿ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ತಾವು ಹೋಗಿದ್ದ ಬೋಟ್ ಬಿಟ್ಟು ಬರಲು ಹೆಚ್ಚಿನವರು ತಯಾರಾಗದೇ ಇರುವ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ವಿಳಂಬವಾಗುತ್ತಿದೆ. ರಕ್ಷಣೆ ಮಾಡಿದ ಹೆಚ್ಚಿನ ಮೀನುಗಾರರು ಅಸ್ವಸ್ಥರಾಗಿದ್ದು ಚಿಕಿತ್ಸೆ ಮುಂದುವರೆದಿದೆ.

    ಕೇರಳ ಸಮುದ್ರ ತೀರದಿಂದ 10 ಕಿಮೀ ದೂರದವರೆಗೆ ಸಮುದ್ರದಲ್ಲಿ ಭಾರೀ ಗಾತ್ರದ ಅಲೆಗಳು ಏಳುವ ಸಾಧ್ಯತೆಯಿದೆ ಎಂದು ಹವಾಮಾನಾ ಇಲಾಖೆ ಹಾಗೂ ಇಂಡಿಯನ್ ನ್ಯಾಷನಲ್ ಸೆಂಟರ್ ಫಾರ್ ಓಷಿಯನ್ ಇನ್ಫಾರ್ಮೇಷನ್ ಸರ್ವೀಸ್ ಎಚ್ಚರಿಕೆ ನೀಡಿದೆ. ಕೊಲ್ಲಂ, ಆಲೆಪ್ಪಿ, ಕೊಚ್ಚಿ, ತ್ರಿಶೂರ್ ಜಿಲ್ಲೆಗಳಲ್ಲಿ 4.4 ಮೀಟರ್ ನಿಂದ 6.1 ಮೀಟರ್ ಎತ್ತರದವರೆಗೆ ಅಲೆಗಳು ಅಪ್ಪಳಿಸುವ ಸಾಧ್ಯತೆಯಿದೆ. ಕೇರಳದ ವಿಯಿಞಂನಿಂದ ಕರ್ನಾಟಕದ ಗಡಿ ಭಾಗವಾದ ಕಾಸರಗೋಡುವರೆಗೆ ಓಖಿ ಎಫೆಕ್ಟ್ ಬರುವ ಸಾಧ್ಯತೆಯಿದೆ. ಡಿಸೆಂಬರ್ 2ರಂದು ರಾತ್ರಿ 11.30ರವರೆಗೆ ಎಚ್ಚರಿಕೆಯಿಂದಿರುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಕಾಸರಗೋಡಿಗೂ ಎಫೆಕ್ಟ್ ತಟ್ಟುವ ಹಿನ್ನೆಲೆಯಲ್ಲಿ ಮಂಗಳೂರಿಗೂ ಇದರ ಎಫೆಕ್ಟ್ ತಟ್ಟುವ ಸಾಧ್ಯತೆಯಿದೆ. ಕೇರಳ ತೀರದಲ್ಲಿ 45ರಿಂದ 65 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ. ಈ ನಡುವೆ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಸಮುದ್ರ 100 ಮೀಟರ್ ತೀರವನ್ನು ನುಂಗಿಕೊಂಡಿದೆ.

    ಬೆಂಗಳೂರು: ಓಖಿ ಚಂಡಮಾರುತದ ಹಿನ್ನೆಲೆಯಲ್ಲಿ ನಿನ್ನೆ ಸಂಜೆಯಿಂದ ತುಂತುರು ಮಳೆ ಸಹಿತ ಮೋಡ ಕವಿದ ವಾತಾವರಣವಿದೆ. ಈ ವಾತಾವರಣ ಇನ್ನೂ ಎರಡು ದಿನಗಳ ಕಾಲ ಮುಂದುವರೆಯುತ್ತದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕಳೆದ 24 ಗಂಟೆಯಿಂದ ಕೋಲಾರದಲ್ಲಿ ಮಳೆ ಆರ್ಭಟ ಮುಂದುವರೆದಿದೆ. ಕಳೆದ 24 ಗಂಟೆಯಿಂದ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದರೂ ಮಳೆಯಲ್ಲೇ ದಿನ ನಿತ್ಯದ ಕೆಲಸಕಾರ್ಯ ಗಳಲ್ಲಿ ಜನರು ತೊಡಗಿದ್ದಾರೆ. ನಿನ್ನೆಯಿಂದಲೇ ಜಿಲ್ಲೆಗೆ ಅಪ್ಪಳಿಸಿರುವ ಓಕ್ಲಿ ಚಂಡ ಮಾರುತ, ಮತ್ತೆ ಜಿಲ್ಲೆಯನ್ನ ತಂಪಾಗಿಸಿದ್ದಾನೆ. ಆದ್ರೆ ಜಿಲ್ಲೆಯ ರೈತರಲ್ಲಿ ಆತಂಕ ಮನೆ ಮಾಡಿದ್ದು, ರಾಗಿ ಸೇರಿದಂತೆ ದ್ವಿದಳ ಧಾನ್ಯಗಳ ಕಟಾವು ಹಾಗೂ ಒಕ್ಕಣಿಯಲ್ಲಿ ರೈತರು ತೊಡಗಿರುವ ಕಾರಣ, ಈ ಚಂಡ ಮಾರುತ ರೈತರಿಗೆ ಕಂಟಕವಾಗಲಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾದ ಓಖಿ ಚಂಡಮಾರುತ ಎಫೆಕ್ಟ್ ತುಮಕೂರು ಜೆಲ್ಲೆಗೂ ತಟ್ಟಿದೆ. ಪರಿಣಾಮ ತುಮಕೂರು ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣವಿತ್ತು. ಮೈಸೂರು, ಮಂಡ್ಯ ಜಿಲ್ಲೆಯಲ್ಲೂ ತುಂತುರು ಮಳೆಯಾಗಿದೆ.

     

     

     

     

     

  • ಶಬರಿಮಲೆಗೆ ಹೋಗ್ತಿದ್ದೀರಾ? – ಹಾಗಾದ್ರೆ ಈ ಸುದ್ದಿ ಓದಿ ‘ಸನ್ನಿಧಾನ’ದತ್ತ ತೆರಳಿ..!

    ಶಬರಿಮಲೆಗೆ ಹೋಗ್ತಿದ್ದೀರಾ? – ಹಾಗಾದ್ರೆ ಈ ಸುದ್ದಿ ಓದಿ ‘ಸನ್ನಿಧಾನ’ದತ್ತ ತೆರಳಿ..!

    ಶಬರಿಮಲೆ: ನೀವು ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಹೊರಟಿದ್ದೀರಾ..? ಹಾಗಿದ್ದರೆ ಸ್ವಲ್ಪ ಎಚ್ಚರ ವಹಿಸಿ, ಸಾಧ್ಯವಾದರೆ ನಿಮ್ಮ ಯಾತ್ರೆಯನ್ನು ಇನ್ನೆರಡು ದಿನ ಮುಂದೂಡೋಕಾಗುತ್ತಾ ನೋಡಿ. ಯಾಕೆಂದರೆ ಬಂಗಾಳಕೊಲ್ಲಿಯ ನೈಋತ್ಯ ಭಾಗದಲ್ಲಿ ಬುಧವಾರ ಉಂಟಾದ ವಾಯುಭಾರ ಕುಸಿತದಿಂದಾಗಿ ಗುರುವಾರ ಬೆಳಗಿನಿಂದ ತಮಿಳುನಾಡು ಹಾಗೂ ಕೇರಳದ ಕೆಲವೆಡೆ ಭಾರೀ ಮಳೆಯಾಗುತ್ತಿದೆ.

    ‘ಓಖಿ’ ಚಂಡಮಾರುತದ ಬಗ್ಗೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದು ಕನ್ಯಾಕುಮಾರಿ, ತಿರುವನಂತಪುರ ಹಾಗೂ ಕೊಲ್ಲಂ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕೇರಳದ ದಕ್ಷಿಣ ಜಿಲ್ಲೆಗಳಲ್ಲಿ ಜನರು ಮನೆಯಿಂದ ಹೊರ ಬರದಂತೆ ವಿಪತ್ತು ನಿರ್ವಹಣಾ ಅಧಿಕಾರಿಗಳು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.

    ಚಂಡಮಾರುತದಿಂದಾಗಿ ಶಬರಿಮಲೆ ದೇಗುಲವಿರುವ ಪತ್ತನಂತಿಟ್ಟ ಜಿಲ್ಲೆಯಲ್ಲೂ ಭಾರೀ ಮಳೆಯಾಗುತ್ತಿದೆ. ಇಂದು ಬೆಳಗ್ಗೆ ಶಬರಿಮಲೆ ಸುತ್ತಮುತ್ತ ಭಾರೀ ಮಳೆಯಾಗಿದೆ. ಇದರಿಂದಾಗಿ ಪಂಪಾ ನದಿಯಲ್ಲಿ ನೀರಿನ ಹರಿವಿನ ಮಟ್ಟ ಏರಿಕೆಯಾಗಿದೆ. ಪಂಪಾ ನದಿಯಲ್ಲಿ ಯಾರೂ ನೀರಿಗಿಳಿಯಬೇಡಿ ಎಂದು ಈಗಾಗಲೇ ಅಯ್ಯಪ್ಪ ಭಕ್ತರಿಗೆ ಸೂಚನೆ ಹೊರಡಿಸಲಾಗಿದೆ. ಜೊತೆಯಲ್ಲಿ ಪಂಪಾ ನದಿಯ ಸುತ್ತಮುತ್ತ ಹೈ ಅಲರ್ಟ್ ಘೋಷಿಸಲಾಗಿದೆ.

    ಅಯ್ಯಪ್ಪನ ದರ್ಶನಕ್ಕೆ ಬ್ರೇಕ್!: ಶಬರಿಮಲೆ ಯಾತ್ರಿಕರು ಬೆಟ್ಟ ಪ್ರದೇಶದಲ್ಲಿ ಸಂಜೆ 6ರಿಂದ ಬೆಳಗ್ಗೆ 7 ಗಂಟೆವರೆಗೆ ಯಾವುದೇ ಸಂಚಾರ ಮಾಡಬೇಡಿ. ಶಬರಿಮಲೆಗೆ ಹೋಗಲು ಅರಣ್ಯ ಪ್ರದೇಶದಲ್ಲಿರುವ ಕಾಲು ದಾರಿಯಲ್ಲಿ ರಾತ್ರಿ ವೇಳೆ ಸಂಚರಿಸಬೇಡಿ ಎಂದು ಸರ್ಕಾರ ಮೌಖಿಕ ಸೂಚನೆ ನೀಡಿದೆ. ಮೊಬೈಲ್ ಫೋನ್ ಚಾರ್ಜ್ ಹಾಗೂ ಲೈಟ್ ಗಳಲ್ಲಿ ಬ್ಯಾಟರಿ ಚಾರ್ಜ್ ಫುಲ್ ಆಗಿರುವಂತೆ ನೋಡಿಕೊಳ್ಳಿ.

    ಭಾರೀ ಮಳೆಯಾಗುತ್ತಿದ್ದರೆ ಸನ್ನಿಧಾನದಿಂದ ಬೆಟ್ಟ ಇಳಿಯಬೇಡಿ. ಮರದ ಕೆಳಗೆ ನಿಲ್ಲಬೇಡಿ. ನದಿ ನೀರಿನಲ್ಲಿ ಸ್ನಾನ ಮಾಡುವ ಸಾಹಸಕ್ಕೆ ಇಳಿಯಬೇಡಿ. ಪಂಪಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ನೀರಿನಲ್ಲಿ ಮುಳುಗಿ ಸ್ನಾನ ಮಾಡುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಪಂಪಾ ನದಿ ಸಮೀಪದ ತ್ರಿವೇಣಿ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಎಲ್ಲಾ ವಾಹನಗಳನ್ನು ನೀರಿನ ಮಟ್ಟ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಸ್ಥಳಾಂತರಿಸಲಾಗಿದೆ. ಶಬರಿಮಲೆ ಯಾತ್ರೆ ವೇಳೆ ಮರದ ರೆಂಬೆ ಮುರಿದು ಬಿದ್ದು ಆಲೆಪ್ಪಿಯ ಅಯ್ಯಪ್ಪ ವ್ರತಧಾರಿ ವಿವೇಕ್ ಎಂಬವರಿಗೆ ಗಾಯವಾಗಿದೆ. ಈ ಕ್ಷಣದವರೆಗೆ ಭಕ್ತರು ಶಬರಿಮಲೆ ದರ್ಶನಕ್ಕೆ ಯಾವುದೇ ರೀತಿಯ ನಿರ್ಬಂಧ ವಿಧಿಸಿಲ್ಲ. ಆದರೆ, ಮಳೆ ಹಿನ್ನೆಲೆಯಲ್ಲಿ ಶಬರಿಮಲೆಗೆ ಆಗಮಿಸುತ್ತಿರುವ ಭಕ್ತರ ಸಂಖ್ಯೆ ಕಡಿಮೆಯಾಗಿದೆ. (ಇದನ್ನೂ ಓದಿ:ಶಬರಿಮಲೆಗೆ ಹೋಗುವ ಅಯ್ಯಪ್ಪ ಭಕ್ತರಿಗೆ ಶಾಕಿಂಗ್ ನ್ಯೂಸ್: ಐಸಿಸ್ ಸಂಚು ಏನು ಗೊತ್ತಾ?)

    85 ಕಿಮೀ ವೇಗ: ದಕ್ಷಿಣ ತಮಿಳುನಾಡಿನಿಂದ ಗಂಟೆಗೆ 85 ಕಿಮೀ ವೇಗದಲ್ಲಿ ಲಕ್ಷದ್ವೀಪದ ಕಡೆಗೆ ಚಂಡಮಾರುತ ಸಾಗುತ್ತಿದೆ. ಈಗಾಗಲೇ ತಮಿಳುನಾಡು, ಕನ್ಯಾಕುಮಾರಿ, ಕೇರಳದಲ್ಲಿ ಮಳೆಗೆ ನಾಲ್ವರು ಸಾವನ್ನಪ್ಪಿದ್ದು, 23 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

    ಮುಂದಿನ 24 ಗಂಟೆಗಳಲ್ಲಿ ಕೇರಳ, ತಮಿಳುನಾಡಿನ ಕೆಲಭಾಗ ಹಾಗೂ ಕರಾವಳಿಯಲ್ಲಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಮುಂದಿನ 24 ಗಂಟೆಗಳ ಕಾಲ ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಲಾಗಿದೆ.

    ಬೆಂಗಳೂರಿನಲ್ಲೂ ಮಳೆ: ಚಂಡಮಾರುತದ ಎಫೆಕ್ಟ್ ನಿಂದಾಗಿ ಬೆಂಗಳೂರಿನ ಕೆಲವೆಡೆ ಇಂದು ಬೆಳಗ್ಗೆಯಿಂದಲೇ ತುಂತುರು ಮಳೆಯಾಗಿದೆ. ದಿನದ ಬಹುತೇಕ ಅವಧಿಯಲ್ಲಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿತ್ತು. ಸಂಜೆಯಾಗುತ್ತಿದ್ದಂತೆಯೇ ಮತ್ತೆ ತುಂತುರು ಮಳೆ ಶುರುವಾಗಿದೆ. ಯಶವಂತಪುರ, ಮಲ್ಲೇಶ್ವರಂ, ಜಾಲಹಳ್ಳಿ, ಕೆ.ಆರ್.ಸರ್ಕಲ್, ಕಾರ್ಪೊರೇಷನ್, ಶಾಂತಿನಗರ, ರಾಜರಾಜೇಶ್ವರಿ ನಗರ, ಸೇರಿದಂತೆ ಹಲವು ಕಡೆ ಮಳೆಯಾಗಿದೆ. ಮೋಡ ಕವಿದ ವಾತಾವರಣ, ತುಂತುರು ಮಳೆ ನಾಳೆಯೂ ಮುಂದುವರೆಯುವ ಸಾಧ್ಯತೆಯಿದೆ.