Tag: ocean

  • ಸುನಾಮಿ ಎಂದರೇನು? ಭೂಕಂಪಕ್ಕೂ ಇದಕ್ಕೂ ಏನು ಸಂಬಂಧ?

    ಸುನಾಮಿ ಎಂದರೇನು? ಭೂಕಂಪಕ್ಕೂ ಇದಕ್ಕೂ ಏನು ಸಂಬಂಧ?

    ನೈಸರ್ಗಿಕವಾಗಿ ಉಂಟಾಗುವ ಚಟುವಟಿಕೆಗಳ ಪೈಕಿ ಸುನಾಮಿ ಹಾಗೂ ಭೂಕಂಪನವೂ ಹೆಚ್ಚಿನ ಪರಿಣಾಮ ಬೀರುವ ಅಂಶಗಳು ಎಂದೇ ಹೇಳಬಹುದು. ಭೂಮಿಯಲ್ಲಾಗುವ ಕೆಲವು ವೈಜ್ಞಾನಿಕ ಪ್ರಕ್ರಿಯೆಗಳಿಂದ ಉಂಟಾಗುವ ನೈಸರ್ಗಿಕ ವಿದ್ಯಮಾನಗಳೇ ಸುನಾಮಿ ಹಾಗೂ ಭೂಕಂಪನ. ಇವೆರಡು ತನ್ನದೇ ಆದ ಕೆಲವು ಕಾರಣಗಳಿಂದ ಸೃಷ್ಟಿಯಾಗುತ್ತವೆ. ಕೆಲವೊಮ್ಮೆ ಮಾನವನ ಚಟುವಟಿಕೆಗಳು ಸಣ್ಣಮಟ್ಟದ ಭೂಕಂಪಕ್ಕೆ ಕಾರಣವಾಗುವ ಸಾಧ್ಯತೆಗಳು ಇರುತ್ತವೆ. ಹೀಗಿರುವಾಗ ಸುನಾಮಿಗೂ ಭೂಕಂಪಕ್ಕೂ ಏನು ವ್ಯತ್ಯಾಸ? ಇವೆರಡಕ್ಕೂ ಏನಾದರೂ ಸಂಬಂಧವಿದೆಯಾ? ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

    ಸದ್ಯಕ್ಕೆ ರಷ್ಯಾ, ಚೀನಾ ದೇಶಗಳಲ್ಲಿ ನಿಸರ್ಗ ತನ್ನ ಅಬ್ಬರವನ್ನೇ ಶುರುಮಾಡಿದೆ. ಹೌದು ಇದೀಗ ರಷ್ಯಾದ ಕಮ್ಚಟ್ಕಾದಲ್ಲಿ ಸಂಭವಿಸಿದ 8.8 ತೀವ್ರತೆಯ ಭಾರಿ ಭೂಕಂಪದ ಬಳಿಕ ಚೀನಾದ ಪೂರ್ವ ಕರಾವಳಿಯಲ್ಲಿ ಚಂಡಮಾರುತದ ಆತಂಕ ಶುರುವಾಗಿದೆ. ಜೊತೆಗೆ ಪೆಸಿಫಿಕ್ ಸಾಗರದಾದ್ಯಂತ ಸುನಾಮಿಯ ಭೀತಿ ಹಬ್ಬಿಕೊಂಡಿದೆ. ಹೀಗಾಗಿ ಚೀನಾ ಹಾಗೂ ರಷ್ಯಾ ಎರಡು ದೇಶಗಳು ನೈಸರ್ಗಿಕ ವಿಪತ್ತನ್ನು ಎದುರಿಸುವ ಸ್ಥಿತಿಯಲ್ಲಿ ಒದ್ದಾಡುತ್ತಿವೆ.

    ಕಮ್ಚಟ್ಕಾ ದ್ವೀಪದ ಪೆನಿನ್ಸುಲಾದಲ್ಲಿರುವ ಪೆಟ್ರೋಪಾವ್ಲೋವ್ಸಕ್‌ ನಿಂದ ಸುಮಾರು 136 ಕಿಲೋಮೀಟರ್ ದೂರದ 19 ಕಿ.ಮೀ ಆಳದಲ್ಲಿ ಕೇಂದ್ರ ಬಿಂದು ಪತ್ತೆಯಾಗಿದೆ. ಇದು 1952ರ ಬಳಿಕ ಸಂಭವಿಸಿದ ಅತೀ ಪ್ರಬಲ ಭೂಕಂಪವಾಗಿದೆ. ಅಮೆರಿಕದ ಅಲಾಸ್ಕಾದ ಭಾಗಗಳು ಹಾಗೂ ಜಪಾನ್‌ಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ.

    ಬಂದರು ಪಟ್ಟಣವಾಗಿರುವ ಸೆವೆರೊ-ಕುರಿಲ್ಸ್ಕ್‌ ಕೆಲ ಭಾಗಗಳು ಈಗ ಸಮದ್ರ ನೀರಿನಲ್ಲಿ ಮುಳುಗಡೆಯಾಗಿದ್ದು, ಸುಮಾರು 2,000 ಜನರನ್ನು ಸ್ಥಳಾಂತರ ಮಾಡಲಾಗಿದೆ. ಸುನಾಮಿ ಪೀಡಿತ ಪ್ರದೇಶಗಳಲ್ಲಿ ಜನರು ಸಮುದ್ರಕ್ಕೆ ತೆರಳದಂತೆ ಧ್ವನಿವರ್ಧಕದ ಮೂಲಕ ಪ್ರಕಟಣೆಯನ್ನು ಹೊರಡಿಸಲಾಗಿದೆ.

    ಸುನಾಮಿ ಎಂದರೇನು?
    ಸಾಗರದ ತಳಭಾಗದಲ್ಲಿ ಸಂಭವಿಸುವ ಭೂಕಂಪನದಿಂದ ಉಂಟಾಗುವ ಸಮುದ್ರದ ಬೃಹತ್ ಅಲೆಗಳನ್ನು ಸುನಾಮಿ ಎಂದು ಕರೆಯಲಾಗುತ್ತದೆ. ಸಣ್ಣ ಮಟ್ಟದಲ್ಲಿ ಭೂಕಂಪನ ಆದಾಗ ಹೆಚ್ಚಿನ ಪರಿಣಾಮ ಬೀರುವುದಿಲ್ಲ, ಆದರೆ ತೀವ್ರತೆಯ ಭೂಕಂಪನ ಉಂಟಾದಾಗ ಅಲೆಗಳ ಅಬ್ಬರ ಜೋರಾಗಿ ಸುತ್ತಮುತ್ತಲಿನ ದೇಶಗಳಿಗೆ ಪರಿಣಾಮ ಬೀರುವ ಸಾಧ್ಯತೆಗಳು ಇರುತ್ತವೆ. ಕೆಲವು ಸಂದರ್ಭದಲ್ಲಿ ಇಡೀ ಊರಿಗೆ ಊರೇ ಜಲಾವೃತವಾಗುವ ಸಂಭವವು ಇರುತ್ತದೆ. ಕೆಲವೊಮ್ಮೆ ಸಮುದ್ರದ ಅಡಿಯಲ್ಲಿ ಜ್ವಾಲಾಮುಖಿ ಸ್ಪೋಟವಾದಾಗ ನೀರಿನಲ್ಲಿ ಬಾರಿ ಚಲನೆ ಉಂಟಾದಾಗ ಸುನಾಮಿಯಾಗುವ ಸಂಭವ ಇರುತ್ತದೆ. ಜೊತೆಗೆ ಸಮುದ್ರದೊಳಗೆ ಭೂಕುಸಿತ ಉಂಟಾದಾಗ ಅಥವಾ ಹಿಮಪಾತ ಆದಾಗ ಸುನಾಮಿಗೆ ಕಾರಣವಾಗಬಹುದು.

    ಸುನಾಮಿಗೆ ಕಾರಣಗಳೇನು?
    * ಸಮುದ್ರದಲ್ಲಿ ತೀವ್ರತೆಯ ಭೂಕಂಪನವಾಗಿ ಬೃಹತ್ ಅಲೆಗಳು ಉಂಟಾದಾಗ, ಜ್ವಾಲಾಮುಖಿ ಸ್ಪೋಟ, ಗಾಳಿಯ ವೇಗ ಹೆಚ್ಚಾಗಿ ಅಪ್ಪಳಿಸುವ ಅಲೆಗಳಿಂದ, ಬಾಹ್ಯಾಕಾಶದಿಂದ ಭೂಮಿಗೆ ಬೀಳುವ ಉಲ್ಕಾಶಿಲೆಯಿಂದಲೂ ಸುನಾಮಿ ಉಂಟಾಗುವ ಸಾಧ್ಯತೆಗಳು ಇರುತ್ತವೆ.

    ಅಬ್ಬರದ ಅಲೆಗಳು ದಡಕ್ಕೆ ಸಮೀಪಿಸುತ್ತಿದ್ದಂತೆ ಮತ್ತಷ್ಟು ಎತ್ತರಕ್ಕೆ ಹೋಗುತ್ತವೆ. ಕೆಲವೊಮ್ಮೆ 30 ಮೀಟರ್ ಅಥವಾ ಅದಕ್ಕಿಂತ ಹೆಚ್ಚು ಎತ್ತರಕ್ಕೆ ತಲುಪುತ್ತವೆ. ಇದರಿಂದ ಸುನಾಮಿಯು ಸುತ್ತಮುತ್ತಲಿನ ಪ್ರದೇಶಗಳಿಗೆ ವ್ಯಾಪಿಸುತ್ತದೆ. ಇದರಿಂದ ಜನವಸತಿ ಪ್ರದೇಶಗಳಲ್ಲಿ ಹಾನಿಯನ್ನು ಉಂಟುಮಾಡುತ್ತದೆ.

    ಭೂಕಂಪನ ಎಂದರೇನು?
    ಭೂಕಂಪ ಎಂದರೆ ಭೂಮಿಯ ಹೊರಪದರವು ಏಕಾಏಕಿ ತೀವ್ರ ಚಲನೆಯನ್ನು ಉಂಟುಮಾಡುತ್ತದೆ. ಇದರಿಂದ ನೆಲವು ತೀವ್ರವಾಗಿ ಅಲುಗಾಡಲು ಪ್ರಾರಂಭವಾಗುತ್ತದೆ. ಕೆಲವೊಮ್ಮೆ ಇದು ಭೂಕುಸಿತ, ಪ್ರವಾಹ ಮತ್ತು ಸುನಾಮಿಗೆ ಕಾರಣವಾಗಬಹುದು. ವೈಜ್ಞಾನಿಕವಾಗಿ ಹೇಳುವುದಾದರೆ ಭೂಮಿಯಲ್ಲಿ ಲಿಥೋಸ್ಫಿಯರ್ ಪರಸ್ಪರ ವಿರುದ್ಧವಾಗಿ ಚಲಿಸಿದಾಗ ಘರ್ಷಣೆ ಉಂಟಾಗುತ್ತದೆ.

    ಮೇಲ್ಮೈಯಿಂದ ಘನವಾಗಿ ಕಾಣುವ ಭೂಮಿಯು ವಾಸ್ತವವಾಗಿ ಮೇಲ್ಮೈಗಿಂತ ಸ್ವಲ್ಪ ಕೆಳಗೆ ಅತ್ಯಂತ ಸಕ್ರಿಯವಾಗಿದೆ. ಇದು ನಾಲ್ಕು ಮೂಲಭೂತ ಪದರಗಳಿಂದ ಮಾಡಲ್ಪಟ್ಟಿದೆ. ಹೊರಪದರ, ನಿಲುವಂಗಿ, ಹೊರಭಾಗ ಮತ್ತು ಒಳಭಾಗ.ಲಿಥೋಸ್ಫಿಯರ್ ಘನವಾದ ಹೊರಪದರ ಮತ್ತು ನಿಲುವಂಗಿಯ ಗಟ್ಟಿಯಾದ ಪದರವನ್ನು ಒಳಗೊಂಡಿದೆ. ಲಿಥೋಸ್ಫಿಯರ್ ವಾಸ್ತವವಾಗಿ ಟೆಕ್ಟೋನಿಕ್ ಪ್ಲೇಟ್‌ಗಳು ಎಂದು ಕರೆಯಲ್ಪಡುವ ದೈತ್ಯ ಒಗಟು ತುಣುಕುಗಳಿಂದ ಮಾಡಲ್ಪಟ್ಟಿದೆ. ನಾಸಾ ಪ್ರಕಾರ, ನಿಧಾನವಾಗಿ ಹರಿಯುವ ನಿಲುವಂಗಿ ಪದರದ ಮೇಲೆ ಚಲಿಸುವಾಗ ಲಿಥೋಸ್ಫಿಯರ್ ನಿರಂತರವಾಗಿ ಬದಲಾಗುತ್ತಿರುತ್ತವೆ.

    ಈ ನಿರಂತರ ಚಲನೆಯು ಭೂಮಿಯ ಹೊರಪದರದ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಒತ್ತಡಗಳು ಜಾಸ್ತಿಯಾದಾಗ ಬಿರುಕುಗಳು ಉಂಟಾಗುತ್ತದೆ. ಚಲನೆಯಲ್ಲಿ ಅಡಚಣೆ ಉಂಟಾಗುತ್ತದೆ. ಇನ್ನೂ ಭೂಕಂಪ ಪ್ರಾರಂಭವಾಗುವ ಸ್ಥಳವನ್ನು ಭೂಕಂಪ ಕೇಂದ್ರ ಎಂದು ಕರೆಯಲಾಗುತ್ತದೆ. ಭೂಕಂಪದ ಅತ್ಯಂತ ತೀವ್ರವಾದ ಕಂಪನವು ಕೇಂದ್ರಬಿಂದುವಿನಲ್ಲಿ ಅನುಭವವಾಗುತ್ತದೆ.

    ಇಲ್ಲಿಯವರೆಗೆ ಎಷ್ಟು ಭೂಕಂಪಗಳು ಸಂಭವಿಸಿವೆ?
    ಭಾರತದ ರಾಷ್ಟ್ರೀಯ ಭೂಕಂಪ ಮಾಹಿತಿ ಕೇಂದ್ರದ ಪ್ರಕಾರ, ಪ್ರತಿ ವರ್ಷ ಜಗತ್ತಿನಾದ್ಯಂತ ಸುಮಾರು 20,000 ಭೂಕಂಪಗಳು, ದಿನಕ್ಕೆ ಸುಮಾರು 55 ಭೂಕಂಪಗಳು ಸಂಭವಿಸುತ್ತವೆ. ಅತಿ ಹೆಚ್ಚು ಭೂಕಂಪಗಳು ಸಂಭವಿಸಿದ ವರ್ಷ 2010, ಇದರಲ್ಲಿ 23 ಪ್ರಮುಖ ಭೂಕಂಪಗಳು (7.0 ಕ್ಕಿಂತ ಹೆಚ್ಚು ಅಥವಾ7) ಆಗಿತ್ತು.

    ಭೂಕಂಪಕ್ಕೂ ಸುನಾಮಿಗೂ ಸಂಬಂಧವಿದೆಯಾ?
    ಹೆಚ್ಚಾಗಿ ಸಮುದ್ರದಲ್ಲಿ ಉಂಟಾಗುವ ಭೂಕಂಪದಿಂದ ಸುನಾಮಿಗೆ ಕಾರಣವಾಗುತ್ತದೆ. ಭೂಮಿಯಲ್ಲಿ ಸಬ್ ಡಕ್ಷನ್ ಎಂಬ ವಲಯವಿರುತ್ತದೆ.

    ಏನಿದು ಸಬ್ ಡಕ್ಷನ್ ವಲಯ?
    ಭೂಮಿಯ ಮೇಲ್ಮೈಯನ್ನು ನಿರ್ಮಿಸುವ ಗಟ್ಟಿಯಾದ ಪದರಗಳನ್ನು ಟೆಕ್ಟೋನಿಕ್ ಲೇಟುಗಳು ಎಂದು ಕರೆಯುತ್ತಾರೆ. ಈ ಪ್ಲೇಟುಗಳು ಸದಾ ಚಲಿಸುತ್ತಿರುತ್ತವೆ. ಈ ಪ್ಲೇಟುಗಳು ಪರಸ್ಪರ ಡಿಕ್ಕಿಯಾದಾಗ ಒಂದು ಪ್ಲೇಟು ಇನ್ನೊಂದು ಪ್ಲೇಟಿನ ಕೆಳಗೆ ಹೋಗುತ್ತದೆ. ಇದರಿಂದ ರಚನೆ ಯಾಗುವ ವಲಯವನ್ನು ಸಬ್ ಡಕ್ಷನ್ ಎನ್ನುತ್ತಾರೆ. ಇಂತಹ ಸ್ಥಳಗಳಲ್ಲಿ ಹೆಚ್ಚಾಗಿ ಭೂಕಂಪ ಹಾಗೂ ಸುನಾಮಿ ಸಂಭವಿಸುತ್ತದೆ. ಇದ್ದಕ್ಕಿದ್ದಂತೆ ಪ್ಲೇಟ್ ಜಾರಿದಾಗ ಬೃಹತ್ ಪ್ರಮಾಣದ ಅಲೆಯು ಸೃಷ್ಟಿಯಾಗುತ್ತದೆ ಇದರಿಂದ ಸುನಾಮಿ ಉಂಟಾಗುತ್ತದೆ. ಕೆಲವೊಮ್ಮೆ ಒಂದು ಪ್ರದೇಶದಲ್ಲಿ 7ಕ್ಕಿಂತ ಹೆಚ್ಚಿನ ತೀವ್ರತೆಯಲ್ಲಿ ಭೂಕಂಪನ ಉಂಟಾದಾಗ ಸುನಾಮಿ ಎಚ್ಚರಿಕೆಯನ್ನೂ ನೀಡುತ್ತಾರೆ. ಆದರೆ ಎಲ್ಲಾ ಭೂಕಂಪಗಳು ಸುನಾಮಿಗೆ ಕಾರಣವಾಗುವುದಿಲ್ಲ. ಹೆಚ್ಚಿನ ಸಮಯದಲ್ಲಿ ಆಳವಿರುವ ಭೂಕಂಪಗಳು ಸುನಾಮಿಗೆ ಕಾರಣವಾಗುತ್ತವೆ. ಭೂಕಂಪ ಹಾಗೂ ಸುನಾಮಿ ಎರಡು ಅವಿನಾಭಾವ ಸಂಬಂಧವನ್ನು ಹೊಂದಿದೆ.

    ಈ ಹಿಂದೆ ಸಂಭವಿಸಿದ ಮಾರಕ ಸುನಾಮಿಗಳು:

    • 2004ರಲ್ಲಿ ಇಂಡೋನೇಷ್ಯಾದ ಸುಮತ್ರಾದ ಪಶ್ಚಿಮ ಕರಾವಳಿಯಲ್ಲಿ 9.1 ತೀವ್ರತೆಯ ಭೂಕಂಪ ಉಂಟಾದಾಗ ಅತ್ಯಂತ ವಿನಾಶಕಾರಿಯದ ಸುನಾಮಿ ಸಂಭವಿಸಿತ್ತು. ಈವರೆಗೂ ಇತಿಹಾಸದಲ್ಲಿ ದಾಖಲೆಯನ್ನು ಸೃಷ್ಟಿಸಿದ ಅತ್ಯಂತ ಮಾರಕ ಸುನಾಮಿ ಎಂದು ಹೇಳಬಹುದು. ಹಿಂದೂ ಮಹಾಸಾಗರದಲ್ಲಿ ಇದುವರೆಗೂ ಉಂಟಾಗಿರುವ ತೀವ್ರ ಸುನಾಮಿ ಇದಾಗಿದೆ. ಇದರಿಂದ ಥೈಲ್ಯಾಂಡ್, ಇಂಡೋನೇಷ್ಯಾ, ಶ್ರೀಲಂಕಾ, ಭಾರತ ಸೇರಿದಂತೆ ಇನ್ನಿತರ ದೇಶಗಳಲ್ಲಿ ಅಲೆಗಳನ್ನು ಹುಟ್ಟು ಹಾಕಿತ್ತು. ಈ ಸಮಯದಲ್ಲಿ 2.50 ಲಕ್ಷಕ್ಕೂ ಅಧಿಕ ಜನರು ಸಾವನ್ನಪ್ಪಿದ್ದರು.
    • 2011ರಲ್ಲಿ ಜಪಾನ್ ದೇಶದ ತೂಹೋಕು ಎಂಬಲ್ಲಿ 9.0 ತೀವ್ರತೆಯ ಭೂಕಂಪ ಉಂಟಾದಾಗ ದೊಡ್ಡ ಮಟ್ಟದ ಸುನಾಮಿ ಉಂಟಾಗಿತ್ತು. ಈ ವೇಳೆ ಸುನಾಮಿ ಅಲೆಗಳು 40 ಮೀಟರ್ ಎತ್ತರಕ್ಕೆ ತಲುಪಿ ಸುತ್ತಮುತ್ತಲಿನ 15 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಜೊತೆಗೆ ಫುಕುಷಿಮಾ ಎಂಬಲ್ಲಿ ಅಣು ವಿದ್ಯುತ್ ಸ್ಥಾವರ ಹಾನಿಯಾಗಿತ್ತು
    • 2018 ರಲ್ಲಿ ಇಂಡೋನೇಷ್ಯಾದ ಅನಾಕ್ ಕ್ರಕಟೋವಾ ಸುನಾಮಿ ಉಂಟಾಗಿ 450ಕ್ಕೂ ಅಧಿಕ ಜನ ಸಾವನಪ್ಪಿದರು. ಜೊತೆಗೆ ಸುಡಾಕ್ರ ಮತ್ತು ಜಾವಾದ್ವೀಪಗಳಲ್ಲಿ ಹಾನಿಯಾಗಿತ್ತು.
    • 1945ರಲ್ಲಿ ಪಾಕಿಸ್ತಾನದಲ್ಲಿ ಉಂಟಾದ 8.1 ತೀವ್ರತೆಯ ಕಂಪನದಿಂದಾಗಿ ಮ್ಯಾಕ್ರಾನ್ ಸುನಾಮಿ ಉಂಟಾಗಿತ್ತು. ಈ ವೇಳೆ ಪಾಕಿಸ್ತಾನ, ಗುಜರಾತ್, ಕರ್ನಾಟಕ, ಕೊಂಕಣ ಭಾಗದಲ್ಲಿ ಸುನಾಮಿಯಿಂದಾಗಿ ಪ್ರಭಾವ ಬೀರಿತ್ತು. ಅರಬ್ಬಿ ಸಮುದ್ರದ ತಳದಲ್ಲಿ ಸಂಭವಿಸಿದ ಭೂಕಂಪದ ಭಾರತಕ್ಕೆ ತೀವ್ರವಾದ ಅಲೆಗಳು ಅಪ್ಪಳಿಸಿದ್ದವು.
  • ಕಡಲ ನಡುವೆ ರಕ್ಷಣೆಗಾಗಿ ಅಂಗಲಾಚುತ್ತಿರುವ 9 ಕಾರ್ಮಿಕರು

    ಕಡಲ ನಡುವೆ ರಕ್ಷಣೆಗಾಗಿ ಅಂಗಲಾಚುತ್ತಿರುವ 9 ಕಾರ್ಮಿಕರು

    ಉಡುಪಿ: ಇಲ್ಲಿನ ಎನ್‍ಎಂಪಿಟಿಯ ಕೋರಮಂಡಲ ಎಕ್ಸ್‍ಪ್ರೆಸ್ ಟಗ್‍ನ 9 ಮಂದಿ ಸಿಬ್ಬಂದಿ ಕಳೆದ ಮೂರು ದಿನದಿಂದ ಸಮುದ್ರದಲ್ಲೇ ಸಿಲುಕಿಕೊಂಡಿದ್ದಾರೆ. ಸಮುದ್ರದಲ್ಲಿ ಗಾಳಿ ಇರುವ ಕಾರಣ ಇನ್ನೂ ಕೂಡಾ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿಲ್ಲ. ಈ ನಡುವೆ ಟಗ್‍ನಲ್ಲಿರುವ ಸಿಬ್ಬಂದಿ ಅಪಾಯದಲ್ಲಿರುವ ಸ್ಥಿತಿ ವಿವರಿಸುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಶುಕ್ರವಾರ ಬೆಳಗ್ಗೆ 11.30 ರಿಂದ ಕಡಲಲ್ಲಿ ತೇಲುತ್ತಿರುವ ಕೋರಮಂಡಲ ಎಕ್ಸ್‍ಪ್ರೆಸ್ ಟಗ್, ಶನಿವಾರ ಬೆಳಗ್ಗೆ 8.30ಕ್ಕೆ ಕಾಪು ಲೈಟ್ ಹೌಸ್ ಬಳಿಯಿಂದ ಸುಮಾರು ಹದಿನೈದು ಕಿಲೋ ಮೀಟರ್ ದೂರದ ಕಾಪು ಪಾರ್ ಬಳಿ ಬಂಡೆಗೆ ಡಿಕ್ಕಿ ಹೊಡೆದು ನಿಂತಿರುವುದು ಪತ್ತೆಯಾಗಿದೆ. ತಮ್ಮನ್ನು ರಕ್ಷಿಸುವಂತೆ 9 ಮಂದಿ ಸಿಬ್ಬಂದಿ ಎಲ್ಲರಲ್ಲಿ ಅಂಗಲಾಚುತ್ತಿದ್ದಾರೆ. ವೀಡಿಯೋಗಳನ್ನು ಮಾಡಿ ಕಳುಹಿಸಿರುವ ಸಿಬ್ಬಂದಿ, ಅಪಾಯದಲ್ಲಿರುವುದನ್ನು ದಡದಲ್ಲಿರುವವರಿಗೆ ಮನವರಿಕೆ ಮಾಡಿದ್ದಾರೆ. ಜೀವಭಯ ಕಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

    ಟಗ್‍ನಲ್ಲಿರುವ 9 ಮಂದಿ ಸಿಬ್ಬಂದಿ 40 ಗಂಟೆಗಳನ್ನು ಈಗಾಗಲೇ ಸಮುದ್ರ ಮಧ್ಯದಲ್ಲೇ ಕಳೆದಿದ್ದಾರೆ. ಟಗ್‍ನಲ್ಲಿ ಇರುವ ನೀರು, ಆಹಾರ ಪದಾರ್ಥಗಳು ಖಾಲಿಯಾಗುತ್ತಿದೆ. ಮಳೆ, ಗಾಳಿ ಮತ್ತು ಜೀವ ಭಯದಿಂದ ಎಲ್ಲರೂ ಮಾನಸಿಕ ಸ್ಥೈರ್ಯ ಕಳೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಟಗ್‍ನಲ್ಲಿರುವ ಸಿಬ್ಬಂದಿ ದೂರವಾಣಿಯ ಮೂಲಕ ಮಾತನಾಡಿ, ಕೋಸ್ಟ್ ಗಾರ್ಡ್ ಹಡಗು ನಮಗಿಂತ ದೂರದ 2 ಮೈಲಿಯಲ್ಲಿ ನಿಂತುಕೊಂಡಿದೆ. ಯಾವಾಗ ನಮ್ಮನ್ನು ರಕ್ಷಿಸುತ್ತಾರೆ ಎನ್ನುವುದನ್ನು ಜೀವ ಕೈಯ್ಯಲ್ಲಿ ಹಿಡಿದು ಕಾಯುತ್ತಿದ್ದೇವೆ. ದಯವಿಟ್ಟು ನಮ್ಮನ್ನು ಬದುಕಿಸಲು ಯಾವುದಾದರೂ ಪ್ರಯತ್ನವನ್ನು ಮಾಡಿ ಎಂದು ದಡದಲ್ಲಿರುವ ಬೋಟ್ ಸಿಬ್ಬಂದಿ ಬಳಿ ಮನವಿ ಮಾಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕರಾವಳಿ ಕಾವಲು ಪಡೆ ಎಸ್ಪಿ ಚೇತನ್, ಮಂಗಳೂರಿಗೆ ನೇವಿ ಹೆಲಿಕಾಪ್ಟರ್ ಬಂದಿದೆ. ಹವಾಮಾನ ನೋಡಿಕೊಂಡು ರಕ್ಷಣಾ ಕಾರ್ಯ ಆರಂಭಿಸುತ್ತಾರೆ. ನಮ್ಮ ಅಥವಾ ಕೋಸ್ಟ್ ಗಾರ್ಡ್ ಬಂಡೆ ಸಮೀಪ ಹೋಗಲು ಸಾಧ್ಯವಾಗುತ್ತಿಲ್ಲ ಎಂದರು.

    ಅರಬ್ಬೀ ಸಮುದ್ರದಲ್ಲಿ ಆರೇಳು ಮೀಟರ್ ಅಲೆಗಳು ಏಳುತ್ತಿರುವ ಕಾರಣ, ಬೋಟ್ ಬೃಹತ್ ಬಂಡೆಯಲ್ಲಿ ಸಿಲುಕಿದ ಕಾರಣ ರಕ್ಷಣೆ ವಿಳಂಬವಾಗಿದೆ.

  • ನಾನು ಸಮುದ್ರವನ್ನು ಮಿಸ್ ಮಾಡುತ್ತಿದ್ದೇನೆ: ರಾಧಿಕಾ ಪಂಡಿತ್

    ನಾನು ಸಮುದ್ರವನ್ನು ಮಿಸ್ ಮಾಡುತ್ತಿದ್ದೇನೆ: ರಾಧಿಕಾ ಪಂಡಿತ್

    ಬೆಂಗಳೂರು: ನಾನು ಸಮುದ್ರವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ನಟಿ ರಾಧಿಕಾ ಪಂಡಿತ್ ಅವರು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.

    ಕೊರೊನಾ ಲಾಕ್‍ಡೌನ್ ಸಡಿಲಿಕೆಯಾದರೂ ಇಷ್ಟಪಟ್ಟ ಜಾಗಕ್ಕೆ ಹೋಗಲು ಇನ್ನೂ ಜನರು ಹಿಂಜರಿಯುತ್ತಿದ್ದಾರೆ. ಸದಾ ಶೂಟಿಂಗ್ ಎಂದು ಹೊರಗೆ ಇರುತ್ತಿದ್ದ ಸಿನಿಮಾ ನಟ-ನಟಿಯರಿಗಂತೂ ಕೊರೊನಾ ಬಂದು ಕಾಲು ಕಟ್ಟಿಹಾಕಿದಂತಾಗಿದೆ. ಹಾಗೆಯೇ ರಾಧಿಕಾ ಅವರು ತಾನು ಕೆಲ ವಿಷಯಗಳನ್ನು ಮಿಸ್ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

    https://www.instagram.com/p/CC-e1fpA5S5/?igshid=3

    ನಾನು ಸಮುದ್ರವನ್ನು ಮಿಸ್ ಮಾಡುತ್ತಿದ್ದೇನೆ. ನನ್ನ ಮಕ್ಕಳನ್ನು ಪಾರ್ಕಿಗೆ ಕರೆದುಕೊಂಡು ಹೋಗುವುದನ್ನು ಮಿಸ್ ಮಾಡುತ್ತಿದ್ದೇನೆ. ಈ ದಿನಗಳಲ್ಲಿ ಸ್ನೇಹಿತರನ್ನು ಭೇಟಿಯಾಗುವುದನ್ನು ಮಿಸ್ ಮಾಡುತ್ತಿದ್ದೇನೆ. ಇನ್ನೂ ಹಲವಾರು ವಿಚಾರಗಳನ್ನು ಮಿಸ್ ಮಾಡುತ್ತಿದ್ದೇನೆ. ಆದರೆ ನಾವು ಸೇಫ್ ಆಗಿ ಮತ್ತು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಕೊರೊನಾ ನಿವಾರಣೆಯಾಗವವರೆಗೂ ನಾವು ಈ ಯಾವುದನ್ನು ಮಾಡಲು ಆಗುವುದಿಲ್ಲ. ನೀವು ಏನನ್ನೂ ಮಿಸ್ ಮಾಡುತ್ತಿದ್ದೀರಾ? ಎಂದು ಕೆಲವೊಂದು ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಅಪ್ಲೋಡ್ ಮಾಡಿ ಬರೆದುಕೊಂಡಿದ್ದಾರೆ.

    ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ರಾಧಿಕಾ ಪಂಡಿತ್, ಇತ್ತೀಚೆಗೆ ಖಂಡಿತ ನಾನು ಪರದೆ ಮೇಲೆ ಬರುತ್ತೇನೆ ಎಂದು ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದರು. ರಾಧಿಕಾ ಅವರ ಫೋಟೋಗೆ ಅಭಿಮಾನಿಯೊಬ್ಬರು, ಹೇಗಿದ್ದೀರಾ ರಾಧಿಕಾ? ನಾವು ನಿಮ್ಮನ್ನು ಮತ್ತೆ ಪರದೆ ಮೇಲೆ ನೋಡುವುದು ಯಾವಾಗ..? ಆದಷ್ಟು ಬೇಗ ಬನ್ನಿ ಎಂದು ಕಮೆಂಟ್ ಮಾಡಿದ್ದರು. ಇದಕ್ಕೆ ಉತ್ತರಿಸಿದ ಸಿಂಡ್ರೆಲಾ, ಖಂಡಿತ ಬರುತ್ತೇನೆ ಎಂದು ಹೇಳಿದ್ದರು.

    ಇದೇ ರೀತಿ ಇನ್ನೊಬ್ಬರು ಕಮೆಂಟ್ ಮಾಡಿ, ನಿಮ್ಮ ಒಂದು ಪೋಸ್ಟ್ ಗಾಗಿ ಹಲವು ದಿನಗಳಿಂದ ಕಾಯ್ತಿದ್ದೀನಿ. ಕೊನೆಗೂ ಒಂದು ಪೋಸ್ಟ್ ಹಾಕಿದ್ದೀರಿ ಧನ್ಯವಾದಗಳು. ಅಲ್ಲದೆ ಆದಷ್ಟು ಬೇಗ ಐರಾ ಫೋಟೋಗಳನ್ನು ಅಪ್ಲೋಡ್ ಮಾಡಿ. ನಾನು ಆಕೆಯನ್ನು ತುಂಬಾ ಮಿಸ್ ಮಾಡಿಕೊಳ್ತಿದ್ದೇನೆ. ದಯಮಾಡಿ ಆಕೆಯ ಫೋಟೋಗಳನ್ನು ಪೋಸ್ಟ್ ಮಾಡಿ ಎಂದು ಮನವಿ ಮಾಡಿಕೊಂಡಿದ್ದರು. ಇದಕ್ಕೆ ಶೀಘ್ರವೇ ಆಕೆಯ ಫೋಟೋಗಳನ್ನು ಅಪ್ಲೋಡ್ ಮಾಡುವುದಾಗಿ ರಾಧಿಕಾ ತಿಳಿಸಿದ್ದರು.

  • ಸುರತ್ಕಲ್ ನಲ್ಲಿ ಬೃಹತ್ ಗಾತ್ರದ ತಿಮಿಂಗಿಲದ ಮೃತದೇಹ ಪತ್ತೆ

    ಸುರತ್ಕಲ್ ನಲ್ಲಿ ಬೃಹತ್ ಗಾತ್ರದ ತಿಮಿಂಗಿಲದ ಮೃತದೇಹ ಪತ್ತೆ

    ಮಂಗಳೂರು: ಬೃಹತ್ ಗಾತ್ರದ ತಿಮಿಂಗಿಲದ ಮೃತದೇಹ ಮಂಗಳೂರು ಸಮೀಪದ ಸುರತ್ಕಲ್ ದೊಡ್ಡಕೊಪ್ಲ ಕಡಲ ತೀರದಲ್ಲಿ ಪತ್ತೆಯಾಗಿದೆ.

    ಬೆಳಗ್ಗಿನ ವಾಯುವಿಹಾರಕ್ಕೆ ಸಮುದ್ರದ ದಡಕ್ಕೆ ಹೋದ ವಿಹಾರಿಗಳಿಗೆ ಮೃತ ತಿಮಿಂಗಿಲದ ದರ್ಶನವಾಗಿದೆ. ಅರಬ್ಬೀ ಸಮುದ್ರದ ಕಡಲಿನಲ್ಲಿ ಗಜ ಗಾತ್ರದ ತಿಮಿಂಗಿಲಗಳಿದ್ದರೂ ಬಹಳ ವಿರಳವಾಗಿ ಕಾಣಸಿಗುತ್ತದೆ.

    ಈ ತಿಮಿಂಗಿಲ ಮೃತಪಟ್ಟು ಕೆಲ ದಿನಗಳ ಬಳಿಕ ಸಮುದ್ರದ ದಡ ಸೇರಿದೆ. ತಿಮಿಂಗಿಲವನ್ನ ನೋಡಲು ಜನ ತಂಡೋಪತಂಡವಾಗಿ ತೀರಕ್ಕೆ ಬಂದು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಮೃತದೇಹ ಕೊಳೆತು ನಾರುತ್ತಿದ್ದು ಮಹಾನಗರ ಪಾಲಿಕೆ ಮಣ್ಣು ಮಾಡಲಿದೆ.

    ಒಂದು ತಿಂಗಳ ಬಳಿಕ ಪಣಂಬೂರು ಬೀಚ್ ಅಭಿವೃದ್ಧಿ ಮಂಡಳಿ ತಿಮಿಂಗಿಲದ ಅಸ್ಥಿಪಂಜರವನ್ನು ಹೊರ ತೆಗೆದು ವಸ್ತು ಸಂಗ್ರಹಾಲಯಕ್ಕೆ ನೀಡಲು ತೀರ್ಮಾನಿಸಿದೆ.

  • ಪ್ರವಾಸಿಗರ ಮನಸೆಳೆಯುವ ಕಡಲಾಳದ ಸ್ಕೂಬಾ ಡೈವಿಂಗ್-ಅಂತರಾಷ್ಟ್ರೀಯ ಸ್ಕೂಬಾ ಡೈವ್ ಫೆಸ್ಟಿವಲ್

    ಪ್ರವಾಸಿಗರ ಮನಸೆಳೆಯುವ ಕಡಲಾಳದ ಸ್ಕೂಬಾ ಡೈವಿಂಗ್-ಅಂತರಾಷ್ಟ್ರೀಯ ಸ್ಕೂಬಾ ಡೈವ್ ಫೆಸ್ಟಿವಲ್

    ಕಾರವಾರ : ಕಡಲಾಳದ ವಿಸ್ಮಯ ನೋಡಬೇಕೆಂದರೇ ಯಾರಿಗೆ ತಾನೇ ಇಷ್ಟವಿರುವುದಿಲ್ಲ. ಈ ವಿಸ್ಮಯ ಜಗತ್ತನ್ನು ನೋಡಲು ವಿದೇಶಕ್ಕೂ ಅಥವಾ ಅಂಡಮಾನ್ ನಿಕೋಬಾರ್ ಗೆ ತೆರಳಿ ಸಾವಿರಾರು ರೂ. ವ್ಯಯಿಸಿ ಕಣ್ತುಂಬಿಕೊಳ್ಳಬೇಕಿತ್ತು. ಆದರೆ ಈಗ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಮುರಡೇಶ್ವರ ನೇತ್ರಾಣಿ ಗುಡ್ಡದ ಅರಬ್ಬಿ ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ಗೆ ಅವಕಾಶ ನೀಡಲಾಗಿದೆ.

    ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಡಳಿತ ಸ್ಕೂಬಾ ಡೈವ್ ಗೆ ಕಳೆದ ಒಂದು ವರ್ಷಗಳಿಂದ ಅವಕಾಶ ಮಾಡಿಕೊಟ್ಟಿದ್ದು, ಮೊದಲ ಬಾರಿಗೆ ಅಂತರಾಷ್ಟ್ರೀಯ ಸ್ಕೂಬಾ ಡೈವ್ ಫೆಸ್ಟಿವಲ್ ನಡೆಯಿತು. ಎರಡು ದಿನಗಳಿಂದ ದೇಶ ವಿದೇಶದ 150 ಸ್ಕೂಬಾ ಡೈವರ್ಸ್ ಗಳು ಸಮುದ್ರದಾಳದಲ್ಲಿ ಇಳಿದು ಎಂಜಾಯ್ ಮಾಡಿದರು.

    ಏನಿದು ಸ್ಕೂಬಾ ಡೈವಿಂಗ್?
    ಆಮ್ಲಜನಕ ಸಿಲಿಂಡರನ್ನು ಹೆಗಲಿಗೆ ಕಟ್ಟಿಕೊಂಡು ನೀರಿಗೆ ಧುಮುಕಿ ಕಡಲಾಳದ ಜಲಚರಗಳ ವೀಕ್ಷಣೆ ಮಾಡುವುದು ಸ್ಕೂಬಾ ಡೈವಿಂಗ್ ಆಗಿದೆ. ಮುರಡೇಶ್ವರದ ನೇತ್ರಾಣಿಯಲ್ಲಿ 2007 ರಿಂದಲೇ ಸ್ಕೂಬಾ ಡೈವಿಂಗ್ ನಡೆಯುತ್ತಿದೆ. ಆದರೆ, ಇದು ಪ್ರವಾಸಿಗರಿಗೆ ತೆರೆದುಕೊಂಡಿರಲಿಲ್ಲ. ಹೆಚ್ಚು ಪ್ರಚಾರವು ಆಗಿರಲಿಲ್ಲ. ಕೆಲವು ಕಡಲ ಜೀವ ವಿಜ್ಞಾನಿಗಳು ಮಾತ್ರ ಇಲ್ಲಿಗೆ ಬಂದು ಈ ಕಾರ್ಯ ನಡೆಸುತ್ತಿದ್ದರು. ಆದರೆ 2017 ರಲ್ಲಿ ಅಧಿಕೃತವಾಗಿ ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಸಾರ್ವಜನಿಕರಿಗೆ ಸ್ಕೂಬಾ ಡೈವಿಂಗ್ ಮಾಡಲು ಅವಕಾಶ ಮಾಡಿಕೊಟ್ಟಿದೆ.

    ಯಾರು ಯಾರು ಸ್ಕೂಬಾ ಡೈವಿಂಗ್ ಮಾಡಬಹುದು?
    ತೀವ್ರ ತರಹದ ಕಾಯಿಲೆ ಅಥವಾ ತೊಂದರೆ ಇರುವವರನ್ನು ಹೊರತುಪಡಿಸಿ ಉಳಿದೆಲ್ಲರೂ ಸ್ಕೂಬಾ ಡೈವಿಂಗ್ ಮಾಡಬಹುದಾಗಿದೆ. ವಯಸ್ಸಿನ ಬೇಧವಿಲ್ಲ. ನಿಮಗೆ ಈಜಲು ಬರಬೇಕೆಂದಿಲ್ಲ. ಅನುಭವಿ ತರಬೇತುದಾರರ ತಂಡ ನಮ್ಮನ್ನು ನೀರಿನಾಳಕ್ಕೆ ಕರೆದೊಯ್ದು ವಾಪಸ್ ಕರೆ ತರುತ್ತದೆ. ಇದಕ್ಕಾಗಿ ನುರಿತ ಸ್ಕೂಬಾ ತರಬೇತಿದಾರರು ಅರ್ಧ ಗಂಟೆಗಳ ಕಾಲ ಮಾಹಿತಿ ಮತ್ತು ತರಬೇತಿ ನೀಡುತ್ತಾರೆ.

    ನೇತ್ರಾಣಿ ಗುಡ್ಡದ ಮಹತ್ವವೇನು?
    ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರಡೇಶ್ವರ ಕಡಲ ತೀರದಿಂದ ಅರಬ್ಬಿ ಸಮುದ್ರದಲ್ಲಿ (10 ನಾಟಿಕಲ್ ಮೈಲು) 19 ಕಿಲೋಮೀಟರ್ ಬೋಟ್ ನಲ್ಲಿ ಸಾಗಿದರೆ ನೇತ್ರಾಣಿ ಗುಡ್ಡ ಸಿಗುತ್ತದೆ. ಸುಮಾರು 2 ಕಿಲೋಮೀಟರ್ ಸುತ್ತಳತೆ ಹೊಂದಿರುವ ಬೃಹದಾಕಾರದ ಕಲ್ಲುಬಂಡೆಗಳಿಂದ ಆವೃತವಾಗಿದೆ.

    ಅಪರೂಪದ ಜೀವ ವೈವಿದ್ಯ: ನೇತ್ರಾಣಿ ದ್ವೀಪ ಜಲಚರಗಳ ಜೊತೆ ಅಪರೂಪದ ಕಾಡು ಕುರಿ ಹಾಗೂ ಪಕ್ಷಿಗಳಿಗೂ ವಾಸಸ್ಥಳವಾಗಿದೆ. ಪಾರಿವಾಳದ ದ್ವೀಪ ಎಂದೇ ಪ್ರಸಿದ್ಧವಾಗಿದ್ದು, ಈ ಹಿಂದೆ ಗುಡ್ಡದ ಬಳಿ ಭಾರತೀಯ ನೌಕಾದಳವು ಸಮರಾಭ್ಯಾಸ ಮಾಡುತಿತ್ತು. ಪರಿಸರವಾದಿಗಳ ಹೋರಾಟದಿಂದ ಈಗ ನಿಲ್ಲಿಸಲಾಗಿದೆ. ಈ ಗುಡ್ಡವನ್ನ ಹತ್ತಿದರೆ ಕಾಡು ಕುರಿಗಳು, ಕಾಡುಕೋಳಿ, ಪಾರಿವಾಳ, ವಿವಿಧ ಜಾತಿಯ ಹದ್ದು, ಗಿಡುಗಗಳ ಜೊತೆ ಸಮರಾಭ್ಯಾಸದ ವೇಳೆ ಉಳಿದ ಕಾಲಿಷಲ್ ಗಳು, ನಿಷ್ಕ್ರಿಯ ಬಾಂಬ್‍ಗಳು ನೋಡಸಿಗುತ್ತದೆ.

    ಗುಡ್ಡದ ಭಾಗದಲ್ಲಿ ಗುಹೆ ಕೂಡ ಇದ್ದು ಇದರ ವೀಕ್ಷಣೆಗೆ ನಿಷೇಧವಿದೆ. ಇನ್ನು ಈ ಗುಡ್ಡದ ಬಳಿ ನೀಲಿ ಬಣ್ಣದ ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ಮಾಡಿದರೆ ಹವಳದ ದಿಬ್ಬ, ಪ್ಯಾರೆಟ್ ಫಿಶ್, ಕ್ವೀನ್ ಫಿಷ್, ಮಿಂಚುಳ್ಳಿ ಮೀನು, ಚಿಟ್ಟೆಮೀನು, ಮುಳ್ಳಿನ ಮೀನು, ಸಮುದ್ರದ ಹಾವುಗಳು, ಜಲ್ಲಿ ಫಿಷ್, ವಿವಿಧ ಬಣ್ಣದ ಮೀನು, ವಿವಿಧ ಜಾತಿಯ ಸಮುದ್ರ ಸಸ್ಯಗಳು, ಸಮುದ್ರದ ಆಮೆಗಳು, ಚಿಕ್ಕ ಜಾತಿಯ ಷಾರ್ಕ್‍ಗಳು, ಡಾಲ್ಫಿನ್‍ಗಳು ಕೂಡ ನೋಡಲು ಸಿಗುತ್ತವೆ.

    ಸ್ಕೂಬಾ ಡೈವಿಂಗ್ ಗಾಗಿ ಜಿಲ್ಲಾಡಳಿ ಮಾನ್ಯತೆ ಪಡೆದ ಮೂರು ಸಂಸ್ಥೆಗಳಿಗೆ ಗುತ್ತಿಗೆ ನೀಡಿದೆ. ವೆಸ್ಟ್ ಕೋಸ್ಟ್ ಅಡ್ವೆಂಚರ್ಸ್, ನೇತ್ರಾಣಿ ಅಡ್ವೆಂಚರ್ಸ್ ಹಾಗೂ ಡೈವ್ ಗೋವಾ ಎಂಬ ಮೂರು ಕಂಪನಿಗಳು ಇಲ್ಲಿ ಸ್ಕೂಬಾ ಡೈವಿಂಗ್ ನಡೆಸುತ್ತಿವೆ. ಇವುಗಳಲ್ಲಿ ನೇತ್ರಾಣಿ ಅಡ್ವೆಂಚರ್ಸ್ ಹಾಗೂ ಡೈವ್ ಗೋವಾ ಎಂಬ ಕಂಪನಿಗಳು ಹೆಚ್ಚಿನ ತಾಂತ್ರಿಕತೆ ಹಾಗೂ ಭದ್ರತೆವದಗಿಸುವ ಜೊತೆ ಉತ್ತಮ ಗುಣಮಟ್ಟ ಕಾಯ್ದುಕೊಂಡಿದೆ. ಪ್ರತಿ ವ್ಯಕ್ತಿಗೆ 5000 ದರ ನಿಗದಿ ಮಾಡಿದೆ. ಆದರೇ ಸಮುದ್ರದಲ್ಲಿ ತೊಂದರೆಗಳಾದರೇ ಯಾವ ಗುತ್ತಿಗೆ ಪಡೆದ ಕಂಪನಿಗಳೂ ಪ್ರಥಮ ಚಿಕಿತ್ಸೆಗೆ ಬೇಕಾದ ಸವಲತ್ತುಗಳನ್ನು ಹೊಂದಿರದ ಕಾರಣ ಡೈವಿಂಗ್ ಮಾಡುವವರು ಮುನ್ನೆಚ್ಚರಿಕೆ ವಹಿಸುವುದುವಳಿತು. ಇಲ್ಲವಾದಲ್ಲಿ ಪ್ರಾಣಕ್ಕೆ ಸಂಚುಕಾರ ಕಟ್ಟಿಟ್ಟ ಬತ್ತಿಯಾಗಿದೆ.

    ಸಂಪರ್ಕ ಹೇಗೆ ..?
    ಸ್ಕೂಬಾ ಡೈವಿಂಗ್ ಎಂಬುದು ಒಂದು ದಿನದ ಪ್ಯಾಕೇಜ್. ಪ್ರಸಿದ್ಧ ಪ್ರವಾಸಿ ತಾಣ ಮುರ್ಡೇಶ್ವರ ತೀರದಿಂದ 19 ಕಿಮೀ ದೂರದಲ್ಲಿರುವ ನೇತ್ರಾಣಿ ದ್ವೀಪಕ್ಕೆ ದೋಣಿಯಲ್ಲಿ ಬೆಳಗ್ಗೆ ತೆರಳಿದರೆ ಸಂಜೆ ಹೊತ್ತಿಗೆ ವಾಪಸ್ ಬರಬಹುದು. ದೋಣಿಯಿಂದಲೇ ಸಮುದ್ರಾಳಕ್ಕೆ ಧುಮುಕುವ ವ್ಯವಸ್ಥೆ ಮಾಡಲಾಗುತ್ತದೆ.

    ಮಹಾರಾಷ್ಟ್ರ, ಗೋವಾ ಬೆಂಗಳೂರಿನಿಂದ ಇಲ್ಲಿಗೆ ಬರುವವರು ಸಾರಿಗೆ ಮುಖಾಂತರ ಅಥವಾ ವಿಮಾನದ ಮೂಲಕವೂ ಬರಬಹುದಾಗಿದ್ದು, ವಿಮಾನದಲ್ಲಿ ಬರುವವರು ಮಂಗಳೂರಿನಿಂದ ಬರಬಹುದಾಗಿದೆ. ರೈಲ್ವೆ ಸಂಪರ್ಕ ಕೂಡ ಇರುವುದರಿಂದ ಹಣ ಉಳಿತಾಯ ಮಾಡಬಹುದು.

    ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಸ್ಕೂಬಾ ಡೈವಿಂಗ್ ಗೆ ಹೆಚ್ಚಿನ ಪ್ರೋತ್ಸಹ ನೀಡುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಮುರಡೇಶ್ವರ ದಲ್ಲಿ ಮೊದಲ ಬಾರಿ ಸ್ಕೂಬಾ ಡೈವಿಂಗ್ ಪ್ರಾರಂಭಿಸಿದ್ದು ಪ್ರತಿ ದಿನ 60 ಕ್ಕೂ ಹೆಚ್ಚು ಜನರು ಡೈವಿಂಗ್ ಮಾಡುತಿದ್ದಾರೆ. ಇನ್ನು ಕಾರವಾರ ಹಾಗೂ ಉಡುಪಿಯ ಕಾಪುವಲ್ಲಿ ಸಹ ಸ್ಕೂಬಾ ಡೈವಿಂಗ್ ಗೆ ಅವಕಾಶ ವದಗಿಸಲು ಅನುಮತಿ ನೀಡಲಾಗಿದ್ದು ಪ್ರಾರಂಭದ ಹಂತದಲ್ಲಿದೆ. ಇನ್ನು ಕರ್ನಾಟಕದಲ್ಲೇ ಮೊದಲ ಬಾರಿ ಎರಡು ದಿನಗಳ ಸ್ಕೂಬಾ ಡೈವಿಂಗ್ ಫೆಸ್ಟಿವಲ್ ಆಯೋಜನೆ ಮಾಡುವ ಮೂಲಕ ಪ್ರವಾಸಿರನ್ನು ಹೆಚ್ಚು ಆಕರ್ಷಿಸುವ ಜೊತೆಗೆ ವಿದೇಶಿಯರನ್ನೂ ಆಕರ್ಷಿಸುತ್ತಿದೆ. ಇದಲ್ಲದೇ ಕಾರವಾರ ಜಿಲ್ಲಾಡಳಿತ ಡೈವಿಂಗ್ ತರಬೇತಿ ಪಡೆಯುವವರಿಗಾಗಿ ಕಲಿಕಾ ಕೇಂದ್ರವನ್ನು ಸದ್ಯದರಲ್ಲೇ ಸ್ಥಾಪನೆ ಮಾಡಲಿದೆ.

  • ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಮುದ್ರಕ್ಕೆ ಹಾರಿದ, ಶಾರ್ಕ್ ಹಿಂಬಾಲಿಸ್ತು! ಮುಂದೇನಾಯ್ತು ಅಂತ ಕೇಳಿದ್ರೆ ಅಚ್ಚರಿಪಡ್ತೀರ

    ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಮುದ್ರಕ್ಕೆ ಹಾರಿದ, ಶಾರ್ಕ್ ಹಿಂಬಾಲಿಸ್ತು! ಮುಂದೇನಾಯ್ತು ಅಂತ ಕೇಳಿದ್ರೆ ಅಚ್ಚರಿಪಡ್ತೀರ

    ವಾಷಿಂಗ್ಟನ್: ವ್ಯಕ್ತಿಯೊಬ್ಬ ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಮುದ್ರಕ್ಕೆ ಹಾರಿದ್ದು, ಶಾರ್ಕ್‍ವೊಂದು ಆತನನ್ನು ಹಿಂಬಾಲಿಸಿ ಕೊನೆಗೆ ಪೊಲೀಸರೇ ಆತನನ್ನು ಕಾಪಾಡಿದ ವಿಚಿತ್ರ ಘಟನೆ ಅಮೆರಿಕದಲ್ಲಿ ನಡೆದಿದೆ.

    ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ, ಬುಧವಾರದಂದು ನಾರ್ತ್ ಕ್ಯಾರೊಲಿನಾದ ಸರ್ಫ್ ಸಿಟಿಯಲ್ಲಿ 20 ವರ್ಷದ ಝಚಾರಿ ಕಿಂಗ್ಸ್ ಬರಿನನ್ನು ಟ್ರಾಫಿಕ್ ಪೊಲೀಸರು ತಡೆದಿದ್ರು. ಕಿಂಗ್ಸ್ ಬರಿ ಕಾರಿನಲ್ಲಿ ನಿಷೇಧಿತ ವಸ್ತುವೊಂದನ್ನ ಅಕ್ರಮವಾಗಿ ಇಟ್ಟುಕೊಂಡಿದ್ದು ಪತ್ತೆಯಾಗಿತ್ತು. ಹೀಗಾಗಿ ಪೊಲೀಸರು ಕಿಂಗ್ಸ್ ಬರಿಗೆ ಕಾರಿನಿಂದ ಕೆಳಗಿಳಿಯುವಂತೆ ಹೇಳಿದ್ದರು. ಆದ್ರೆ ಆತ ಆಶ್ಚರ್ಯಕರ ರೀತಿಯಲ್ಲಿ ಕಾರನ್ನ ಬೀಚ್ ಕಡೆಗೆ ತಿರುಗಿಸಿ, ನಂತರ ಸಮುದ್ರಕ್ಕೆ ಹಾರಿ ಈಜಲು ಶುರು ಮಾಡಿದ್ದ.

    ಸರ್ಫ್ ಸಿಟಿ ಪೊಲೀಸರು ಕಿಂಗ್ಸ್ ಬರಿನನ್ನು ಪತ್ತೆಹಚ್ಚಿ ಬಂಧಿಸಲು ಸುಮಾರು ಮೂರು ಗಂಟೆಯೇ ಬೇಕಾಯ್ತು. ಪೊಲೀಸರು ಆತನ ಪತ್ತೆಗೆ ಡ್ರೋನ್ ಕೂಡ ಹಾರಿಬಿಡಬೇಕಾಯ್ತು ಎಂದು ಇಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.

    ಶಾರ್ಕ್‍ವೊಂದು ಕಿಂಗ್ಸ್ ಬರಿ ಸಮೀಪದಲ್ಲೇ ಈಜುತ್ತಿದ್ದುದು ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ವೇಳೆ ಕಿಂಗ್ಸ್ ಬರಿಗಾಗಿ ನಡೆಯುತ್ತಿದ್ದ ಶೋಧ ಕಾರ್ಯ ರಕ್ಷಣಾ ಕಾರ್ಯವಾಗಿ ಮಾರ್ಪಾಡಾಗಿತ್ತು.

    ಡ್ರೋನ್ ಆಪರೇಟ್ ಮಾಡುತ್ತಿದ್ದ ಪೊಲೀಸರಿಗೆ ಶಾರ್ಕ್ ಕಾಣಿಸುವ ವೇಳೆಗೆ ಕಿಂಗ್ಸ್ ಬರಿ ಸುಮಾರು 1 ಗಂಟೆಯಷ್ಟು ಕಾಲ ಈಜಾಡಿ ಸಮುದ್ರ ತೀರದಿಂದ 4 ಸಾವಿರ ಅಡಿಗಳಷ್ಟು ದೂರಕ್ಕೆ ಹೋಗಿದ್ದ.

    ಕೊನೆಗೆ ಪೊಲೀಸರಿಂದ ದೂರ ಹೋಗಬಯಸಿದ್ದ ಕಿಂಗ್ಸ್ ಬರಿನನ್ನು ಪೊಲೀಸರೇ ಕಾಪಾಡಿ ಬಂಧಿಸಿದ್ದಾರೆ. ಕಿಂಗ್ಸ್‍ಬರಿ ವಿರುದ್ಧ ಹಲವಾರು ಡ್ರಗ್ಸ್ ಸಂಬಂಧಿತ ಆರೋಪಗಳಿವೆ ಎಂದು ವರದಿಯಾಗಿದೆ.