Tag: Occupy

  • ರಾಜಕಾಲುವೆ ಒತ್ತುವರಿ ಕಾರ್ಯಾಚರಣೆ ಕೈ ಬಿಟ್ಟ ಬಿಬಿಎಂಪಿ?

    ರಾಜಕಾಲುವೆ ಒತ್ತುವರಿ ಕಾರ್ಯಾಚರಣೆ ಕೈ ಬಿಟ್ಟ ಬಿಬಿಎಂಪಿ?

    ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ರಾಜಕಾಲುವೆ ಒತ್ತುವರಿ ತೆರವು ಕಾರ್ಯಮಾಡುವುದಾಗಿ ತಿಳಿಸಿದ್ದ ಬಿಬಿಎಂಪಿ ಈಗ ಜಾಣಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

    ಸಮ್ಮಿಶ್ರ ಸರ್ಕಾರದ ಡಿಸಿಎಂ ಹಾಗೂ ಬೆಂಗಳೂರು ಉಸ್ತುವಾರಿ ಸಚಿವ ಜಿ. ಪರಮೇಶ್ವರ್ ರಾಜಕಾಲುವೆ ಅಕ್ರಮ ಒತ್ತುವರಿ ಮಾಡಿಕೊಂಡ ಸ್ಥಳಗಳನ್ನು ನಿರ್ದಾಕ್ಷಿಣ್ಯವಾಗಿ ತೆರವು ಮಾಡುವುದಾಗಿ ಹೇಳಿದ್ದರು. ಅಲ್ಲದೇ ಸರ್ವೇ, ಮಾರ್ಕಿಂಗ್ ಕಾರ್ಯ ಮುಗಿಯುವ ಮೊದಲೇ, ತೆರವು ಮಾಡುತ್ತೀವಿ ಎಂದು ಹೇಳಿದ್ದರು. ಸದ್ಯದ ಪರಿಸ್ಥಿತಿಯನ್ನು ನೋಡುತ್ತಿದ್ದರೇ ಬಿಬಿಎಂಪಿ ಒತ್ತುವರಿ ಕಾರ್ಯಾಚರಣೆಗೆ ಎಳ್ಳು-ನೀರು ಬಿಟ್ಟಂತೆ ಕಾಣುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

    ಒತ್ತುವರಿ ತೆರವು ಮಾಡುತ್ತೀವಿ ಎಂದು ಪದೇ ಪದೇ ಹೇಳಿಕೊಳ್ಳುತ್ತಿದ್ದ ಪಾಲಿಕೆಯು, ಅಕ್ಟೋಬರ್ 27ಕ್ಕೆ ತೆರವು ಕಾರ್ಯಚರಣೆಗೆ ಚಾಲನೆ ನೀಡಬೇಕಿತ್ತು. ಆದರೆ ಇದೀಗ ಬಿಬಿಎಂಪಿ ಸದ್ಯ ಸರ್ವೇ ಕಾರ್ಯ ಮಾತ್ರ ಸಂಪೂರ್ಣವಾಗಿದೆ ಎನ್ನುವ ಮೂಲಕ ಕಳೆದ ನಾಲ್ಕು ತಿಂಗಳಿಂದ ರಾಜಕಾಲುವೆ ಒತ್ತುವರಿಯ ಸರ್ವೇ ಮಾಡುವ ಡ್ರಾಮಾ ಮಾಡುತ್ತಿದೆಯಾ ಎನ್ನುವ ಪ್ರಶ್ನೆ ಮೂಡಿದೆ. ಅಲ್ಲದೇ ಲೋಕಸಭಾ ಚುನಾವಣೆ ಹತ್ತಿರದಲ್ಲಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ತೆರವು ಕಾರ್ಯ ಕೈಬಿಟ್ಟಿದೆ ಎನ್ನುವ ಆರೋಪಗಳು ಸಹ ಕೇಳಿಬರುತ್ತಿವೆ.

    ಇದಲ್ಲದೇ ಸಮ್ಮಿಶ್ರ ಸರ್ಕಾರ ಒತ್ತುವರಿ ಮತ್ತು ಭೂಕಬಳಿಕೆ ತಡೆಗೆ ರಚಿಸಿದ್ದ ಬೆಂಗಳೂರು ಮೆಟ್ರೊಪಾಲಿಟನ್ ಕಾರ್ಯಪಡೆಗೆ(ಬಿಎಂಟಿಎಫ್) ಇತಿಶ್ರೀ ಹಾಡಲು ಮುಂದಾಗುವುದರ ಜೊತೆಗೆ ಸ್ಲಮ್ ಬೋರ್ಡ್ ಹಾಗೂ ಬಿಡಿಎ ಪೊಲೀಸ್ ವಿಂಗ್ ಮುಚ್ಚಿಸಿ, ಹೊಸ ಸೆಕ್ಯೂರಿಟಿ ಫೋರ್ಸ್ ತರಲು ಚಿಂತನೆ ನಡೆಸಿದೆ ಎನ್ನುವ ಮಾಹಿತಿಗಳು ಸಹ ಲಭ್ಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನೀರವ್ ಮೋದಿಯ ಹಾಂಗ್​ಕಾಂಗ್​ನ 255 ಕೋಟಿ ರೂ. ಆಸ್ತಿ ಇಡಿ ವಶಕ್ಕೆ

    ನೀರವ್ ಮೋದಿಯ ಹಾಂಗ್​ಕಾಂಗ್​ನ 255 ಕೋಟಿ ರೂ. ಆಸ್ತಿ ಇಡಿ ವಶಕ್ಕೆ

    ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ವಂಚನೆ ಮಾಡಿ ತಲೆಮರೆಸಿಕೊಂಡಿರುವ ಉದ್ಯಮಿ ನೀರವ್ ಮೋದಿಗೆ ಸೇರಿದ ಹಾಂಗ್​ಕಾಂಗ್​ನಲ್ಲಿರುವ ಸುಮಾರು 255 ಕೋಟಿ ರೂಪಾಯಿ ಆಸ್ತಿಯನ್ನು ಜಾರಿ ನಿರ್ದೇಶನಾಲಯ(ಇಡಿ) ಮುಟ್ಟುಗೋಲು ಹಾಕಿಕೊಂಡಿದೆ.

    ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಇಡಿ ನೀರವ್ ಮೋದಿಯ ಆಸ್ತಿಯನ್ನು ವಶಪಡಿಸಿಕೊಂಡಿದ್ದು, ಗುರುವಾರವೂ ಸಹ ಹಾಂಗ್​ಕಾಂಗ್​ನಲ್ಲಿರುವ ಸುಮಾರು 255 ಕೋಟಿ ರೂ. ಮೌಲ್ಯದ ಆಸ್ತಿಯನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಮಾಹಿತಿಗಳ ಪ್ರಕಾರ ಇಲ್ಲಿಯವರೆಗೂ ಇಡಿ ಅಂದಾಜು 4,744 ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದೆ.

    ದೇಶದಲ್ಲೇ ಸಂಚಲನ ಮೂಡಿಸಿದ್ದ ಪಿಎನ್‍ಬಿ ವಂಚನೆ ಬೆಳಕಿಗೆ ಬರುತ್ತಲೇ ವಜ್ರೋದ್ಯಮಿ ನೀರವ್ ಮೋದಿ ವಿದೇಶಕ್ಕೆ ಹಾರಿ ತಲೆಮರೆಸಿಕೊಂಡಿದ್ದ. ಈತನ ವಿರುದ್ಧ ಇಡಿ ಇಂಟರ್ಪೋಲ್ ಮೂಲಕ ರೆಡ್‍ಕಾರ್ನರ್ ನೋಟಿಸ್ ಸಹ ಜಾರಿಗೊಳಿಸಿದೆ. ಅಕ್ಟೋಬರ್ ತಿಂಗಳೊಂದರಲ್ಲೇ ಭಾರತದ ಸೇರಿದಂತೆ 5 ದೇಶಗಳಲ್ಲಿ ಸುಮಾರು 637 ಕೋಟಿ ರುಪಾಯಿಯನ್ನು ಜಪ್ತಿಮಾಡಲಾಗಿದೆ.

    ಏನಿದು ಪ್ರಕರಣ?
    ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13 ಸಾವಿರ ಕೋಟಿ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಜ್ರಾಭರಣ ವ್ಯಾಪಾರಿ ನೀರವ್ ಮೋದಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಯಾಗಿದ್ದು, ಯಾವುದೇ ದೇಶದಲ್ಲಿ ಅಡಗಿದ್ದರೂ ಬಂಧನಕ್ಕೆ ಆದೇಶ ಸಿಕ್ಕಿದೆ.

    ನೀರವ್ ಮೋದಿ ಜೊತೆ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದ ಗೀತಾಂಜಲಿ ಜುವೆಲ್ಲರಿಯ ಮೆಹುಲ್ ಚೋಕ್ಸಿ ವಿರುದ್ಧ ಕೂಡ ಸಿಬಿಐ ಎಫ್‍ಐಆರ್ ದಾಖಲಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ನಾಲ್ಕು ಬಾರಿ ಸಮನ್ಸ್ ನೀಡಿದರೂ ಆರೋಪಿಗಳಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸುವಂತೆ ಇಂಟರ್ ಪೋಲ್‍ಗೆ ಮನವಿ ಮಾಡಿಕೊಂಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv