Tag: obc

  • ಆಯುರ್ವೇದ ವಿದ್ಯಾರ್ಥಿಗಳ 24 ಲಕ್ಷ ರೂ. ವಿದ್ಯಾರ್ಥಿ ವೇತನ ನಕಲಿ ಖಾತೆಗೆ ಜಮೆ

    ಆಯುರ್ವೇದ ವಿದ್ಯಾರ್ಥಿಗಳ 24 ಲಕ್ಷ ರೂ. ವಿದ್ಯಾರ್ಥಿ ವೇತನ ನಕಲಿ ಖಾತೆಗೆ ಜಮೆ

    ಹುಬ್ಬಳ್ಳಿ: ಹೆಗ್ಗೇರಿ ಆಯುರ್ವೇದ ಕಾಲೇಜಿನ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆ ತೆರೆದ ಹಿಂದುಳಿದ ವರ್ಗ ಇಲಾಖೆಯ ಸಿಬ್ಬಂದಿಯೊಬ್ಬ ಬರೋಬ್ಬರಿ 24 ಲಕ್ಷ ರೂ. ಹಿಂದುಳಿದ ವರ್ಗದ ವಿದ್ಯಾರ್ಥಿ ವೇತನವನ್ನು ಆ ಖಾತೆಗೆ ಜಮಾ ಮಾಡಿಸಿ ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲ ಪ್ರಶಾಂತ್ ಎ.ಎಸ್.ಅವರು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ನಕಲಿ ಖಾತೆ ತೆರೆದು ಸಿಎಂ ವಿರುದ್ಧ ಪೋಸ್ಟ್ ಹಾಕಿದ್ದ ಮಂಡ್ಯದ ಟೆಕ್ಕಿಯ ಬಂಧನ

    ದೂರಿನಲ್ಲಿ ಏನಿದೆ?
    ಹಿಂದುಳಿದ ವರ್ಗದ ವಿದ್ಯಾರ್ಥಿ ವೇತನವನ್ನು ಕಾಲೇಜಿನ ಪ್ರಾಚಾರ್ಯರ ಖಾತೆಗೆ ಜಮೆ ಮಾಡುತ್ತಾರೆ. ಹೀಗಿರುವಾಗ ಇಲಾಖೆಯ ಸಿಬ್ಬಂದಿ ಹುಬ್ಬಳ್ಳಿ ಪ್ರವಾಸಿ ಮಂದಿರ ರಸ್ತೆಯಲ್ಲಿರುವ ಐಸಿಐಸಿಐ ಬ್ಯಾಂಕ್‍ನಲ್ಲಿ ಆಯುರ್ವೇದ ಕಾಲೇಜಿನ ಹೆಸರಿನಲ್ಲಿ ಖಾತೆ ತೆರೆದ್ದಿದ್ದಾನೆ. ಖಾತೆಗೆ 2017ರ ಏ.1ರಿಂದ 2018ರ ಮಾ. 31ರವರೆಗಿನ ಅವಧಿಯಲ್ಲಿ 24,04,090 ರೂ. ವಿದ್ಯಾರ್ಥಿ ವೇತನವನ್ನು ಪ್ರಾಚಾರ್ಯರ ಖಾತೆ ಬದಲಾಗಿ ನಕಲಿ ಖಾತೆಗೆ ಜಮಾ ಮಾಡಿಸಿಕೊಂಡು ಕಾಲೇಜು, ವಿದ್ಯಾರ್ಥಿಗಳಿಗೆ ವಂಚಿಸಿ ಸ್ವಂತಕ್ಕೆ ಬಳಸಲಾಗಿದೆ ಎಂದು ದೂರು ದಾಖಲಾಗಿದೆ.

    ಬೆಳಕಿಗೆ ಬಂದಿದ್ದು ಹೇಗೆ?
    ಕಳೆದ ಆಡಿಟ್ ವೇಳೆ ವಂಚನೆ ಆಗಿರುವುದು ಪತ್ತೆಯಾಗಿದೆ. ಹಿಂದುಳಿದ ವರ್ಗ ಇಲಾಖೆಯಿಂದ ಕಾಲೇಜಿನ ಖಾತೆಗೆ ಆಗಬೇಕಿದ್ದ ಹಣ ಎಲ್ಲಿ ಜಮಾ ಆಗಿದೆ ಎಂದು ಪತ್ತೆಗೆ ಮುಂದಾದಾಗ ವಿಷಯ ಬೆಳಕಿಗೆ ಬಂದಿದೆ. ಸುಮಾರು 100 ವಿದ್ಯಾರ್ಥಿಗಳಿಗೆ ಬರಬೇಕಾದ ವಿದ್ಯಾರ್ಥಿವೇತನ ಇದು. ಯಾವ ಸಿಬ್ಬಂದಿ ವಂಚನೆ ಎಸಗಿದ್ದಾನೆ ಎನ್ನುವುದು ತನಿಖೆಯಿಂದ ತಿಳಿದು ಬರಬೇಕಿದೆ ಎಂದು ಪ್ರಾಚಾರ್ಯ ಪ್ರಶಾಂತ್ ಎ.ಎಸ್. ತಿಳಿಸಿದ್ದಾರೆ.

  • 2ಎ ಮೀಸಲಾತಿ ಯಥಾಸ್ಥಿತಿಗೆ ಒತ್ತಾಯಿಸಿ ರಾಜ್ಯಾದ್ಯಂತ ಉಗ್ರ ಹೋರಾಟ

    2ಎ ಮೀಸಲಾತಿ ಯಥಾಸ್ಥಿತಿಗೆ ಒತ್ತಾಯಿಸಿ ರಾಜ್ಯಾದ್ಯಂತ ಉಗ್ರ ಹೋರಾಟ

    – ನ್ಯಾಯಮೂರ್ತಿ ಸುಭಾಷ್ ಅಡಿ ನೇಮಕಕ್ಕೆ ವಿರೊಧ

    ಬೆಂಗಳೂರು: 2ಎ ಮೀಸಲಾತಿಗೆ ಪಂಚಮಸಾಲಿ ಸಮುದಾಯವನ್ನು ಸೇರಿಸುವುದರಿಂದ ಹಿಂದುಳಿದ ವರ್ಗ ಕೆಳ ಸಮುದಾಯಕ್ಕೆ ಹೊಡೆತ ಬೀಳಲಿದೆ. 2ಎ ಮೀಸಲಾತಿ ಯಥಾಸ್ಥಿತಿ ಕಾಪಾಡುವಂತೆ ಆಗ್ರಹಿಸಿ ಇದೇ 17 ರಂದು ಹಿಂದುಳಿದ ವರ್ಗಗಳ ಪ್ರಮುಖರ ಸಭೆಯನ್ನು ಕರೆಯಲಾಗಿದೆ ಎಂದು ನೇಕಾರ ಸಮುದಾಯದ ಹಿರಿಯ ಮುಖಂಡ, ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀ ನಾರಾಯಣ ತಿಳಿಸಿದರು.

    ನಗರದ ಗಾಂಧಿ ಭವನದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಹಿತಾರಕ್ಷಣಾ ಸಂಘ ಇಂದು ಹಮ್ಮಿಕೊಂಡಿದ್ದ 2ಎ ಮೀಸಲಾತಿ ಯಥಾಸ್ಥಿತಿ ಕಾಪಾಡುವಂತೆ ಆಗ್ರಹಿಸಿ ನಡೆದ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ, ಮಾತನಾಡಿದ ಅವರು ಇದೇ 17 ರಂದು ಹಿಂದುಳಿದ ವರ್ಗಗಳ ಪ್ರಮುಖರ ಸಭೆಯನ್ನು ಕರೆಯಲಾಗಿದೆ ಈ ಸಭೆಯ ಬಳಿಕ ರಾಜ್ಯಾದ್ಯಂತ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದರು.

    ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಂಡಿಸಿದ ಈ ಸಾಲಿನ ಬಜೆ ಟ್ ನಲ್ಲಿ ಹಿಂದುಳಿದ ಸಮುದಾಯಕ್ಕೆ ಕೇವಲ 500 ಕೋಟಿ ರೂ.ಗಳನ್ನು ನೀಡಿರುವುದನ್ನು ಸರಿಯಲ್ಲ. ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸುಮಾರು 300ಕ್ಕೂ ಹೆಚ್ಚು ಸಮುದಾಯಗಳು ಬರಲಿದ್ದು, ಕೇವಲ 500 ಕೋಟಿ ರೂ.ಗಳನ್ನು ನೀಡಿರುವುದು ಸರಿಯಲ್ಲ ಎಂದು ಅವರು ತಿಳಿಸಿದರು.

    ವೀರಶೈವ ಅನುಭವ ಮಂಟಪಕ್ಕೆ 500 ಕೋಟಿ ರೂ.ಗಳನ್ನು ಮುಖ್ಯಮಂತ್ರಿಗಳು ಬಜೆಟ್‍ನಲ್ಲಿ ಘೋಷಣೆ ಮಾಡಿದ್ದಾರೆ. ಆದರೆ 300ಕ್ಕೂ ಹೆಚ್ಚು ಜಾತಿಗಳನ್ನು ಒಳಗೊಂಡಿರುವ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಕೇವಲ 500 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

    ನ್ಯಾ. ಸುಭಾಷ್ ಅಡಿ ನೇಮಕಕ್ಕೆ ವಿರೋಧ:
    2ಎ ಮೀಸಲಾತಿ ಪಂಚಮಶಾಲಿ ಜನಾಂಗಕ್ಕೆ ಮೀಸಲಾತಿ ನೀಡುವ ಸಂಬಂಧ ಅಧ್ಯಯನಕ್ಕೆ ನ್ಯಾಯಮೂರ್ತಿ ಸುಭಾಷ್ ಅಡಿ ಅವರನ್ನು ನೇಮಕ ಮಾಡಲಾಗಿದ್ದು ಅವರ ಮೇಲೆ ನಮಗೆ ವಿಶ್ವಾಸ ವಿಲ್ಲ ಅವರು ಪಾರದರ್ಶಕವಾಗಿ ವರದಿ ನೀಡುವುದು ಅನುಮಾನವಿದೆ. ಇವರ ನೇಮಕಕ್ಕೆ ವಿರೋಧವಿದೆ ಎಂದು ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಕೆ. ಎಂ. ರಾಮಚಂದ್ರಪ್ಪ ತಿಳಿಸಿದರು.

    ಪ್ರಧಾನ ಕಾಯದರ್ಶಿ ಸೈದಪ್ಪ ಗುತ್ತೇದಾರ್ ಮಾತನಾಡಿ ಹಿಂದುಳಿದ ವರ್ಗಗಳ 2ಎ ಪ್ರವರ್ಗದಲ್ಲಿ 362 ಜಾತಿಗಳು ಬರಲಿದ್ದು, ಇದುವರೆಗೂ ಕೇವಲ ಒಂದೆರಡು ಪ್ರಬಲ ಸಮುದಾಯಗಳು ಶೇ. 15 ರಷ್ಟು ಮೀಸಲಾತಿಯಲ್ಲಿ ಲಾಭ ಪಡೆದವರಾಗಿದ್ದಾರೆ. ಹಿಂದುಳಿದ ವರ್ಗದಲ್ಲಿ ಕೆಳ ಸಮುದಾಯಗಳು ಸರ್ಕಾರದ ಸವಲತ್ತು, ಸೌಲಭ್ಯಗಳಿಂದ ವಂಚಿತರಾಗಿ ಹಾಗೇ ಉಳಿದಿದ್ದಾರೆಂದು ತಿಳಿಸಿದರು.

    ರಾಜ್ಯದಲ್ಲಿ ಮೀಸಲಾತಿ ಕೂಗು ಎದ್ದಿರುವ ಸಂದರ್ಭದಲ್ಲಿ ಪ್ರಬಲ ಸಮುದಾಯಗಳು 2ಎ ಮೀಸಲಾತಿ ಒಳಗಡೆ ಬರುವುದರಿಂದ ಈಗಾಗಲೇ ಇರುವ ಕೆಳ ಸಮುದಾಯಗಳ ಮೇಲೆ ಪರಿಣಾಮ ಬೀಳಲಿದೆ. ಈ ಬಗ್ಗೆ ನಾವು ಮುಂದಿನ ಹೋರಾಟ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದರು. ಸಭೆಯಲ್ಲಿ ಅಧ್ಯಕ್ಷ ಮಂಜುನಾಥ್ ಲಕ್ಷ್ಮಣ ನಾಯ್ಕ್, ಮತ್ತಿತರರು ಭಾಗವಹಿಸಿದ್ದರು.

  • ಲಿಂಗಾಯತ ಮೀಸಲು ಸಿಎಂ ಬ್ರಹ್ಮಾಸ್ತ್ರಕ್ಕೆ ಹೈಕಮಾಂಡ್ ಬ್ರೇಕ್

    ಲಿಂಗಾಯತ ಮೀಸಲು ಸಿಎಂ ಬ್ರಹ್ಮಾಸ್ತ್ರಕ್ಕೆ ಹೈಕಮಾಂಡ್ ಬ್ರೇಕ್

    – ಸಿಎಂಗೆ ದೆಹಲಿ ಬರಲು ತುರ್ತು ಬುಲಾವ್
    – ಒಬಿಸಿ ಅಸ್ತ್ರದಿಂದ ಇಕ್ಕಟ್ಟಿಗೆ ಸಿಲುಕ್ತಾರಾ ಯಡಿಯೂರಪ್ಪ?

    ಬೆಂಗಳೂರು: ವೀರಶೈವ ಲಿಂಗಾಯಗತರಿಗೆ ಓಬಿಸಿ ಸ್ಥಾನಮಾನ ನೀಡುವ ಕುರಿತು ರಾತ್ರಿ ಪ್ರಹಸನ ನಡೆದಿದ್ದು, ಕೇಂದ್ರದ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಇದಕ್ಕೆ ಸಮುದಾಯದವರು ಸಿಎಂ ಮೇಲೆ ಮುಗಿಬಿದ್ದಿದ್ದಾರೆ.

    ಕಳೆದ ರಾತ್ರಿ ಸಿಎಂ ಪಡಸಾಲೆಯಿಂದ ಹೊರಬಿದ್ದ ಒಂದೇ ಸುದ್ದಿ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿತ್ತು. ಇವತ್ತಿನ ಸಂಪುಟ ಸಭೆಯಲ್ಲಿ ವೀರಶೈವ ಲಿಂಗಾಯತರಿಗೆ ಓಬಿಸಿ ಸ್ಥಾನಮಾನ ನೀಡಲು ಕೇಂದ್ರಕ್ಕೆ ಸರ್ಕಾರ ಶಿಫಾರಸ್ಸು ಮಾಡಲಿದೆ ಎಂಬ ಸುದ್ದಿಯೂ ಹರಿದಾಡಿತ್ತು. ಸಂಪುಟ ಸಭೆ ಬಳಿಕ ಮುಖ್ಯಮಂತ್ರಿಗಳೇ ಸುದ್ದಿಗೋಷ್ಠಿ ನಡೆಸಿ ಅಧಿಕೃತವಾಗಿ ಪ್ರಕಟಿಸುತ್ತಾರೆ ಎಂಬ ಮಾಹಿತಿಯೂ ಹೊರಬಿದ್ದಿತ್ತು. ಈ ಮೂಲಕ ಸಂಪುಟ ಸರ್ಜರಿಗೆ ಗ್ರೀನ್ ಸಿಗ್ನಲ್ ನೀಡದೇ ಸತಾಯಿಸುತ್ತಿರುವ ಬಿಜೆಪಿ ಹೈಕಮಾಂಡ್‍ಗೆ ಸಡ್ಡು ಹೊಡೆಯಲು ಮುಂದಾಗಿದ್ದಾರೆ ಎನ್ನಲಾಗಿತ್ತು. ಇದಕ್ಕೆ ಪೂರಕವಾಗಿ ಲಿಂಗಾಯತ ಸಮುದಾಯವನ್ನು ಓಬಿಸಿ ಪಟ್ಟಿಗೆ ಸೇರಿಸುವ ವಿಚಾರವನ್ನು ಇಂದಿನ ಕ್ಯಾಬಿನೆಟ್ ಅಜೆಂಡಾದಲ್ಲಿಯೂ ಸೇರಿಸಲಾಗಿತ್ತು. ಆದರೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಎಲ್ಲವೂ ಉಲ್ಟಾ ಆಗಿದೆ.

    ಸಿಎಂ ಯಡಿಯೂರಪ್ಪ ನಡೆಗೆ ಬೆಚ್ಚಿಬಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕರೆ ಮಾಡಿ ದೆಹಲಿಗೆ ಬನ್ನಿ ಮಾತಾಡೋಣ. ಅಲ್ಲಿಯವರೆಗೂ ಯಾವುದೇ ಪ್ರಮುಖ ನಿರ್ಣಯ ಕೈಗೊಳ್ಳಬೇಡಿ ಎಂದು ಸೂಚನೆ ನೀಡಿದ್ದಾರೆ. ಹೀಗಾಗಿ ಇಂದಿನ ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಬೇಕಿದ್ದ ವಿಷಯವನ್ನು ಮುಂದಿನ ಸಭೆಗೆ ಮುಂದೂಡಲಾಯಿತು. ದೆಹಲಿಗೆ ತೆರಳಿ ಅಮಿತ್ ಶಾ ಜೊತೆಗೆ ಚರ್ಚಿಸಿದ ಬಳಿಕ ಈ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಸಿಎಂ ಸಚಿವರಿಗೆ ಹೇಳಿದರು.

    ಲಿಂಗಾಯತರನ್ನು ಓಬಿಸಿಗೆ ಸೇರಿಸುವ ಬಗ್ಗೆ ಇನ್ನೂ ಕಾನೂನಾತ್ಮಕ ಚರ್ಚೆ ಅಗತ್ಯ ಇದೆ ಎಂದು ಅಡ್ವೋಕೇಟ್ ಜನರಲ್ ಕೂಡ ಸಲಹೆ ನೀಡಿದ್ದರಿಂದ ಸಂಪುಟದಲ್ಲೂ ಚರ್ಚೆ ನಡೆಸಿಲ್ಲ. ಸಿಎಂ ಉದ್ದೇಶಿತ ಸುದ್ದಿಗೋಷ್ಟಿಯನ್ನೂ ರದ್ದು ಮಾಡಲಾಯಿತು.

    ಸಂಪುಟ ಸಭೆ ಬಳಿಕ ಮಾತನಾಡಿದ ಸಚಿವ ಮಾಧುಸ್ವಾಮಿ, ವೀರಶೈವ ಲಿಂಗಾಯತ ಸಮುದಾಯವನ್ನು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸಲು ಕೆಲ ಅಂಶಗಳ ಅಧ್ಯಯನ ನಡೆಸಬೇಕಿದೆ. ಈ ಕಾರಣಕ್ಕೆ ಶಿಫಾರಸು ಮುಂದೂಡಿದ್ದೇವೆ ಅಷ್ಟೇ. ಇದರಲ್ಲಿ ಕೇಂದ್ರದ ಪಾತ್ರವಿಲ್ಲ. ಸಂಪುಟ ಸರ್ಜರಿ ವಿಳಂಬಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು. ಸಚಿವ ಸೋಮಣ್ಣ ಸಹ ಡ್ಯಾಮೇಜ್ ಕಂಟ್ರೋಲ್ ಪ್ರಯತ್ನ ನಡೆಸಿದರು. ದೆಹಲಿ ನಾಯಕರೇನು ಮಧ್ಯ ಪ್ರವೇಶ ಮಾಡಿಲ್ಲ. ಸಮುದಾಯಕ್ಕೂ ಆಶಾ ಭಂಗ ಆಗಿಲ್ಲ ಎಂದರು.

    ಸಿಎಂ ಪ್ಲಾನ್ ಏನು?
    ಸದ್ಯ ಹಿಂದುಳಿದ ವರ್ಗ 3ಬಿ ಅಡಿಯಲ್ಲಿ ಶೇ.5ರಷ್ಟು ಮೀಸಲಾತಿ ಇದೆ. ವೀರಶೈವ ಲಿಂಗಾಯತ ಸೇರಿ 42 ಉಪ ಜಾತಿಗಳಿಗೆ ಮೀಸಲಾತಿ ಅನ್ವಯವಾಗಲಿದೆ. ಹೀಗಾಗಿ 2(ಎ)ಗೆ ಸೇರಿಸುವಂತೆ ವೀರಶೈವ ಮುಖಂಡರು ಒತ್ತಡ ಹೇರಿದ್ದರು. ಆದರೆ 2(ಎ)ಗೆ ಸೇರಿಸುವ ಬದಲು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸಲು ಶಿಫಾರಸು ಮಾಡಲು ಯೋಜನೆ ರೂಪಿಸಲಾಗಿತ್ತು. ಈ ಮೂಲಕ ರಾಜ್ಯ ಮೀಸಲಾತಿ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡದಿರಲು ಪ್ಲಾನ್ ಮಾಡಲಾಗಿತ್ತು.

    ದಾಳ ಉರುಳಲಿಲ್ಲ ಏಕೆ?
    ಸಿಎಂ ಯಡಿಯೂರಪ್ಪ ನಡೆಯಿಂದ ಆರ್‍ಎಸ್‍ಎಸ್‍ಗೆ ಶಾಕ್ ಆಗಿದೆ. ಹೀಗಾಗಿ ಆರ್‍ಎಸ್‍ಎಸ್ ಕೂಡಲೇ ಹೈಕಮಾಂಡ್ ಗಮನಕ್ಕೆ ತಂದಿದೆ. ಪಕ್ಷ, ಸಂಘದ ಅಜೆಂಡಾದಲ್ಲಿ ಇಲ್ಲದ ವಿಚಾರ ಇದು. ಮೀಸಲಾತಿಯಂತಹ ಪ್ರಮುಖ ವಿಚಾರ ಚರ್ಚೆ ನಡೆದ ಬಳಿಕ ಅನುಷ್ಠಾನವಾಗಬೇಕು. ಈಗ ಲಿಂಗಾಯತರಿಗೆ ಓಬಿಸಿ ಸ್ಥಾನಮಾನ ಕೊಟ್ಟರೆ ಮುಂದೆ ಬೇರೆ ಜಾತಿಗಳು ಪ್ರಶ್ನಿಸಬಹುದು. ಕೂಡಲೇ ಈ ನಿರ್ಧಾರದಿಂದ ಹಿಂದೆ ಸರಿಯಲು ಹೇಳಿ ಎಂದು ಬಿಜೆಪಿ ಹೈಕಮಾಂಡ್‍ಗೆ ಆರ್‍ಎಸ್‍ಎಸ್ ಪ್ರಮುಖರು ನಿರ್ದೇಶಿಸಿದ್ದಾರೆ.

    ಈ ಬೆನ್ನಲ್ಲೇ ಖುದ್ದು ಅಖಾಡಕ್ಕೆ ಇಳಿದ ಗೃಹ ಸಚಿವ ಅಮಿತ್ ಶಾ, ಬೆಳಗ್ಗೆ ಸಿಎಂ ಯಡಿಯೂರಪ್ಪಗೆ ತುರ್ತು ಕರೆ ಮಾಡಿ, ದೆಹಲಿಗೆ ಬರುವಂತೆ ಬುಲಾವ್ ನೀಡಿದ್ದಾರೆ. ಅಲ್ಲದೆ ಯಾವುದೇ ನಿರ್ಣಯ ಕೈಗೊಳ್ಳದಂತೆ ಸೂಚಿಸಿದ್ದಾರೆ. ಇತ್ತ ಶಿಫಾರಸು ವಿಚಾರವಾಗಿ ಎಜಿ ಆಕ್ಷೇಪ ವ್ಯಕ್ತಪಡಿಸಿ, ಇನ್ನಷ್ಟು ಅಧ್ಯಯನ ಅಗತ್ಯತೆ, ಕಾನೂನು ವ್ಯಾಪ್ತಿ ಪರಿಶೀಲನೆ ಹಿನ್ನೆಲೆ ಮುಂದೂಡಲು ಸಲಹೆ ನೀಡಿದ್ದಾರೆ.

    ಬಿಎಸ್‍ವೈ ಮುಂದಿರುವ ಸವಾಲು
    ವೀರಶೈವ ಲಿಂಗಾಯತರನ್ನು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸುವ ಬೇಡಿಕೆಗೆ ಬಿಜೆಪಿ ಹೈಕಮಾಂಡ್ ಅಸ್ತು ಎನ್ನದೇ ಇರಬಹುದು. ಅಲ್ಲದೆ ಓಬಿಸಿ ವಿಚಾರದಲ್ಲಿ ಸೈಲೆಂಟಾಗಿರುವಂತೆ ಸೂಚಿಸಬಹುದು. ಇದರಿಂದ ವೀರಶೈವ ಲಿಂಗಾಯತರು ಹೋರಾಟ ಆರಂಭಿಸುತ್ತಾರೆ. ವೀರಶೈವ ಲಿಂಗಾಯತರನ್ನು ಮನವರಿಕೆ ಮಾಡುವ ಸವಾಲು ಎದುರಾಗಲಿದೆ. ಬಳಿಕ ಸಮುದಾಯ ಓಲೈಕೆ ತಂತ್ರವೇ ತಿರುಗುಬಾಣ ಆಗಬಹುದು.

    ನಿರ್ಧಾರದ ಕುರಿತು ಸಿಎಂ ಹಿಂದೆ ಸರಿಯುತ್ತಿದ್ದಂತೆ ವೀರಶೈವ ಲಿಂಗಾಯತ ಸಮುದಾಯದವರು ಆಕ್ರೋಶ ವ್ಯಕ್ತಪಡಿಸಿದ್ದು, ಇವತ್ತು ಸಿಹಿ ಸುದ್ದಿ ನಿರೀಕ್ಷೆಯಲ್ಲಿದ್ದ ಸಮುದಾಯ ಶಾಕ್ ಆಗಿದೆ. ಕೇಂದ್ರದ ಒತ್ತಡಕ್ಕೆ ಮಣಿದ ಸಿಎಂ ವಿರುದ್ಧ ವೀರಶೈವ ಸ್ವಾಮೀಜಿಗಳು ಸಿಟ್ಟಾಗಿದ್ದಾರೆ. ಸುದ್ದಿಗೋಷ್ಠಿ ನಡೆಸಿದ ಪಂಚಮಸಾಲಿ ಮಠದ ಜಯಮೃತ್ಯುಂಜಯ ಸ್ವಾಮೀಜಿ, ಸಿಎಂ ವಿರುದ್ಧ ಗುಡುಗಿದ್ದಾರೆ. ನಿಮ್ಮ ರಾಜಕೀಯ ನಮಗೆ ಗೊತ್ತಿಲ್ಲ. ನಮ್ಮ ಬೇಡಿಕೆ ಈಡೇರಲೇಬೇಕು. ನಾಳೆಯೊಳಗೆ ಈ ವಿಚಾರದಲ್ಲಿ ಮುಖ್ಯಮಂತ್ರಿಗಳು ಅಂತಿಮ ನಿರ್ಧಾರ ತೆಗೆದುಕೊಳ್ಳಲೇಬೇಕು. ಇಲ್ಲದಿದ್ದರೆ ಕೂಡಲಸಂಗಮದಿಂದ ಹೋರಾಟ ತೀವ್ರಗೊಳಿಸುತ್ತೇವೆ. ಒಂದು ತಿಂಗಳು ಪಾದಯಾತ್ರೆ ನಡೆಸಿ ಡಿಸೆಂಬರ್ 23ರಂದು ವಿಧಾನಸೌಧ ಚಲೋ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ.

    ಇದರಿಂದ ಸಿಎಂ ಇಕ್ಕಟ್ಟಿಗೆ ಸಿಲುಕಿದಂತೆ ಕಂಡು ಬಂದಿದೆ. ಇನ್ನು ವೀರಶೈವ ಲಿಂಗಾಯತರಿಗೆ ಓಬಿಸಿ ಸ್ಥಾನಮಾನ ನೀಡದಿದ್ದರೆ ರಾಜ್ಯದಲ್ಲಿ ಬೆಂಕಿ ಹತ್ತಬಹದು ಹುಷಾರ್ ಎಂದು ಕಲಬುರಗಿಯ ಸಾರಂಗ ಮಠದ ಶ್ರೀಗಳು ಎಚ್ಚರಿಸಿದ್ದಾರೆ. ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ನೋಡಿದರೆ ರಾಜ್ಯದಲ್ಲಿ ಬಿಜೆಪಿ ನಾಮಾವಶೇಷ ಆಗುತ್ತೆ ಎಂದು ಬಿಜೆಪಿ ಹೈಕಮಾಂಡ್‍ಗೆ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಸಿಲು ಸಚಿವರು, ಶಾಸಕರು ನಿರಾಕರಿಸಿದ್ದಾರೆ.

  • ಕಾಂಗ್ರೆಸ್ಸಿಗೆ ಸೇರಿದ್ದು ಯಾಕೆ? ‘ಕೈ’ಗೆ ಯುವಕರು ಮತ ಹಾಕಬೇಕು ಯಾಕೆ: ಗುಜರಾತ್ ಒಬಿಸಿ ನಾಯಕ ಅಲ್ಪೇಶ್ ಠಾಕೂರ್ ಹೇಳ್ತಾರೆ ಓದಿ

    ಕಾಂಗ್ರೆಸ್ಸಿಗೆ ಸೇರಿದ್ದು ಯಾಕೆ? ‘ಕೈ’ಗೆ ಯುವಕರು ಮತ ಹಾಕಬೇಕು ಯಾಕೆ: ಗುಜರಾತ್ ಒಬಿಸಿ ನಾಯಕ ಅಲ್ಪೇಶ್ ಠಾಕೂರ್ ಹೇಳ್ತಾರೆ ಓದಿ

    ಗುಜರಾತ್‍ನಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇತ್ತೀಚಿಗೆ ಗುಜರಾತ್ ಯುವ ನಾಯಕರಾದ ಪಾಟೀದಾರ ಸಮುದಾಯದ ನಾಯಕ ಹಾರ್ದಿಕ್ ಪಟೇಲ್, ಹಿಂದುಳಿದ ವರ್ಗಗಳ ನಾಯಕ ಅಲ್ಪೇಶ್ ಠಾಕೂರ್ ಮತ್ತು ದಲಿತ ನಾಯಕ ಜಿಗ್ನೇಶ್ ಮೇವಾನಿ ಕಾಂಗ್ರೆಸ್ ಸೇರ್ಪಡೆ ಯಾಗಿದ್ದಾರೆ. ಈ ಮೂಲಕ ಕಾಂಗ್ರೆಸ್ ಮತ್ತಷ್ಟು ಬಲ ಬಂದಿದೆ. ಒಗ್ಗಟಿನ ಮೂಲಕ ಕಾಂಗ್ರೆಸ್ ಎದುರಾಳಿ ಬಿಜೆಪಿಯನ್ನು ಬಗ್ಗು ಬಡಿದು ಶತಾಯಗತಾಯ ಅಧಿಕಾರದ ಚುಕ್ಕಾಣಿ ಹಿಡಿಯಲು ಪ್ರಯತ್ನಿಸುತ್ತಿದೆ. ಹೀಗಾಗಿ ಒಬಿಸಿ ನಾಯಕ ಅಲ್ಪೇಶ್ ಠಾಕೂರ್ ಅವರು ನಾನು ರಾಜಕೀಯ ಪ್ರವೇಶಿಸಿದ್ದು ಯಾಕೆ? ಕಾಂಗ್ರೆಸ್ ಸೇರಿದ್ದು ಯಾಕೆ ಎನ್ನುವುದನ್ನು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

    ನೀವು ರಾಜಕೀಯ ಪ್ರವೇಶಿಸಲು ಕಾರಣ ಏನು? ಅದರಲ್ಲೂ ಕಾಂಗ್ರೆಸ್ಸನ್ನೇ ಆಯ್ಕೆ ಮಾಡಿಕೊಂಡಿದ್ದು ಯಾಕೆ?
    ಬಿಜೆಪಿ ವಿರುದ್ಧದ ಧೋರಣೆಯಿಂದ ನಾನು ರಾಜಕೀಯ ಪ್ರವೇಶ ಮಾಡಿದ್ದೇನೆ. ನಾನು ಕಾಂಗ್ರೆಸ್ ಸೇರುವುದು ಜನಾದೇಶವಾಗಿತ್ತು. ಬಿಜೆಪಿ ಸುಧಾರಿಸದಿದ್ರೆ ರಾಜಕೀಯ ಪ್ರವೇಶಿಸುತ್ತೇವೆ ಎಂದು ನಾವು ಈ ಮೊದಲೇ ಹೇಳಿದ್ದೇವು. ಅದರಂತೆ ಜನಾದೇಶ ಪಡೆದು ಕಾಂಗ್ರೆಸ್ ಸೇರಿದ್ದೇನೆ. ನಾನು ಬಿಜೆಪಿ ಸೇರಿದರೆ ಅಪಾದಿತನಾಗುತ್ತಿದ್ದೆ ಮತ್ತು ಎಷ್ಟು ಹಣಕ್ಕೆ ನಾನು ಖರೀದಿಯಾದೆ ಎಂಬಂತೆ ಸಾರ್ವಜನಿಕ ವಲಯದಲ್ಲಿ ಚರ್ಚಗೆ ಗ್ರಾಸವಾಗುತ್ತಿತ್ತು. ಸಿದ್ಧಾಂತದ ವಿರುದ್ಧ ಹಾಗೂ ಬಿಜೆಪಿ ವೈಫಲ್ಯದ ವಿರುದ್ಧ ಹೋರಾಡಲು ನಾನು ಕಾಂಗ್ರೆಸ್ ಸೇರಿದ್ದೇನೆ.

    ಹಾರ್ದಿಕ್ ಪಟೇಲ್ ರೀತಿಯಲ್ಲಿ ನೀವೂ ಕಾಂಗ್ರೆಸ್ ಸೇರ್ಪಡೆಯಿಂದ ನಿಮ್ಮ ಪ್ರತಿಷ್ಠೆ ಕಡಿಮೆಯಾಗಿದೆ ಎಂದು ನಿಮ್ಮ ಪ್ರತಿಸ್ಪರ್ಧಿಗಳು ಹೇಳುತ್ತಿದ್ದಾರೆ
    ಸಮಯ ಬರಲಿ ಎಲ್ಲದಕ್ಕೂ ಉತ್ತರ ಸಿಗಲಿದೆ, ನಾವು ಎಲ್ಲರನ್ನು ತಯಾರಿ ಮಾಡುತ್ತಿದ್ದೇವೆ ಕಾರ್ಯಕರ್ತರರೊಂದಿಗೆ ಸಭೆ ನಡೆಸುತ್ತಿದ್ದೇವೆ. ಉತ್ತರ ಗುಜರಾತ್ ನಲ್ಲಿ ಅಭ್ಯರ್ಥಿಗಳನ್ನು ಪ್ರಕಟಿಸಿದ ನಂತರ ಪರಿಸ್ಥಿತಿ ಅರ್ಥವಾಗಲಿದೆ.

    ನೀವೂ ಚುನಾವಣೆಗೆ ಸ್ವರ್ಧಿಸುವುದಿಲ್ಲ ಎಂದು ಬಿಜೆಪಿ ಸಾರ್ವಜನಿಕವಾಗಿ ಹೇಳುತ್ತಿದೆ. ನೀವೇನು ಮಾಡುತ್ತೀರಿ?
    ಆಡಳಿತದಲ್ಲಿರುವ ಬಿಜೆಪಿಯವರು ಸುಧಾರಣೆ ಮಾಡದೇ ಇದ್ದರೆ ನಾವು ರಾಜಕೀಯ ಸೇರುವುದು ನಿಶ್ಚಿತ ಎಂದು ಈ ಮೊದಲೇ ತಿಳಿಸಿದ್ದೆವು. ಕಳೆದ ಎರಡು ವರ್ಷದಲ್ಲಿ ಬಡತನ, ರೈತರ ಸಮಸ್ಯೆ, ನಿರುದ್ಯೋಗ, ಶಿಕ್ಷಣದ ಬಗೆಗೆ ನಾವು ಎತ್ತಿದ ಸಮಸ್ಯೆ ಗಳಿಗೆ ಉತ್ತರ ಇನ್ನು ಬಂದಿಲ್ಲ. ಈಗ ಬಿಜೆಪಿ ವಿರುದ್ಧ ಜನಾಕ್ರೋಶ ಇರುವ ಕಾರಣ ನಾವು ರಾಜಕೀಯ ಪ್ರವೇಶ ಮಾಡಿದ್ದೇವೆ.

    ಪಾಟೀದಾರ್ ಮೀಸಲಾತಿ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಕಾರಣ ನೀವೂ ಪ್ರತಿಪಾದಿಸುವ ಒಬಿಸಿ ಕೋಟಾಕ್ಕೆ ಪಾಟೀದಾರ ಮೀಸಲಾತಿ ಪೆಟ್ಟಾಗಬಹುದು
    ಮೀಸಲಾತಿಯ ಬಗ್ಗೆಯೇ ಎಲ್ಲ ಚರ್ಚೆ ಆರಂಭವಾಗಿ ಕೊನೆಗೊಳ್ಳುವುದು ಯಾಕೆ? ಬಹಳಷ್ಟು ಬೇರೆ ವಿಚಾರಗಳು ಇದೆಯಲ್ಲವೇ. ನಿರುದ್ಯೋಗ, ಬಡತನ, ಶಿಕ್ಷಣ ಬಡ ರೈತರು, ಸಣ್ಣ ಕೈಗಾರಿಕೆಗಳು ಸಾಯುತ್ತಿವೆ. ಜಿಎಸ್‍ಟಿ ಮತ್ತು ನೋಟ್ ಬ್ಯಾನ್ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕು. ಶ್ರೀಮಂತ ಸಮುದಾಯವೇ ಯಾಕೆ ಮೀಸಲಾತಿ ಕೇಳುತ್ತಿವೆ? ಗುಜರಾತ್ ನಲ್ಲಿ ಸರ್ಕಾರ ನೀತಿಯಿಂದ ಬೇಸತ್ತು ಹತಾಶೆಯಿಂದ ಅವರು ಕೇಳುತ್ತಿದ್ದಾರೆ. ಶ್ರೀಮಂತ ಸಮುದಾಯದವರೇ ಹತಾಶರಾಗಿರುವ ಬಡವರು ಮತ್ತು ಮಧ್ಯಮ ವರ್ಗದವರ ಸ್ಥಿತಿಯನ್ನು ಒಮ್ಮೆ ಊಹಿಸಿಕೊಳ್ಳಿ. ಹೀಗಾಗಿ ಮಧ್ಯಮ ವರ್ಗದ ಮತ್ತು ಬಡವರಾಗಿರುವ ನಾವು ಅಹಂಕಾರದ ವಿರುದ್ಧ ಹೋರಾಡುತ್ತಿದ್ದೇವೆ.

    ಮೀಸಲಾತಿ ಬೇಡಿಕೆಯನ್ನು ಇಡದೇ ಆಡಳಿತದಲ್ಲಿ ನೀತಿಗಳು ಬದಲಾವಣೆಯಾಗಬೇಕು ಎಂದು ನೀವು ಹೇಳುತ್ತೀರಾ?
    ನಾನು ಹಾಗಂತ ಹೇಳುತ್ತಿಲ್ಲ, ಮೀಸಲಾತಿ ಬೇಡಿಕೆ ಅವಶ್ಯಕತೆ ಯಾಕೇ ಬೇಕು? ಎಲ್ಲ ನೀತಿಗಳನ್ನು ರೂಪಿಸುವಲ್ಲಿ ಬಿಜೆಪಿ ವಿಫಲವಾಗಿದೆ. ಅವರು ಓಬಿಸಿ ಕೋಟಾದ 49% ಬೇಕೆಂದು ಕೇಳುತ್ತಿಲ್ಲ. ಅವರು (ಪಾಟೀದಾರ್) ಮೆಲ್ಜಾತಿಯ ಬಡ ಮಕ್ಕಳಿಗಾಗಿ ಮನವಿ ಮಾಡುತ್ತಿದ್ದಾರೆ. ನನ್ನ ಪ್ರಕಾರ ಕೇವಲ ಗುಜುರಾತ್ ಮಾತ್ರವಲ್ಲದೇ ಇಡೀ ದೇಶದಲ್ಲಿ ಮೇಲ್ವರ್ಗದಲ್ಲಿರುವ ಬಡ ಮಕ್ಕಳಿಗೆ ಮೀಸಲಾತಿ ನೀಡಿದರೆ ತಪ್ಪಲ್ಲ.

    ನೀವು ಚಾನಸ್ಮಾದಿಂದ ಸ್ವರ್ಧಿಸುತ್ತೀರಿ ಎನ್ನುವ ವರದಿ ಬಂದಿದೆ. ಇದು ನಿಜವೇ?
    ಇಲ್ಲ. ನಾನು ಎಲ್ಲ ಕ್ಷೇತ್ರಗಳನ್ನು ನೋಡುತ್ತಿದ್ದೇನೆ. ಪಕ್ಷ ಮತ್ತು ಕಾರ್ಯಕರ್ತರು ಎಲ್ಲಿ ಸ್ಪರ್ಧಿಸಬೇಕೆಂದು ಸೂಚಿಸುತ್ತಾರೋ ಅಲ್ಲಿ ಸ್ವರ್ಧಿಸುತ್ತೇನೆ.

    ವ್ಯಸನ ಮುಕ್ತಿ ಅಭಿಯಾನ್ ಎಂದು ನೀವೂ ಪ್ರಚಾರ ಆರಂಭಿಸಿದ್ದೀರಿ. ಗುಜರಾತ್ ನಲ್ಲಿ ಯುವಕರು ವ್ಯಸನಕ್ಕೆ ದಾಸರಾಗಿದ್ದಾರೆ ಎಂದು ಹೇಳ್ತೀರಾ?
    ಮದ್ಯ ನಿಷೇಧದ ಹೊರತಾಗಿಯೂ ಮದ್ಯಪಾನ, ಡ್ರಗ್ಸ್, ತಂಬಾಕು ದೊಡ್ಡ ಚಟವಾಗಿ ಯುವಕರಲ್ಲಿ ಕಾಡುತ್ತಿದೆ. ಪ್ರತಿವರ್ಷ 10 ಸಾವಿರ – 15 ಸಾವಿರ ಯುವಕರು ಮದ್ಯಪಾನಕ್ಕೆ ಬಲಿಯಾಗುತ್ತಿದ್ದಾರೆ. ಹೀಗಾಗಿ ಕಟ್ಟುನಿಟ್ಟಿನ ಕಾನೂನು ಜಾರಿಯಾಗಬೇಕಾದ ಅವಶ್ಯಕತೆ ಇದೆ. ಆದರೆ ಅದು ಅನುಷ್ಠಾನವಾಗುತ್ತಿಲ್ಲ.

    ಒಬಿಸಿ ಏಕತಾ ವೇದಿಕೆ ನಡೆಸಿದ ಸರ್ವೆ ವರದಿ ಆಧರಿಸಿ ಈ ಸಂಖ್ಯೆ ಹೇಳ್ತಾ ಇದ್ದೀರಾ?
    ನಾವು ಗುಜುರಾತ್‍ನ ಪ್ರತಿ ಹಳ್ಳಿಗಳಲ್ಲೂ ಸಭೆ ನಡೆಸಲಾಗುತ್ತಿದೆ. ಅಲ್ಲಿ ಸ್ಥಳಿಯ ಅಂಕಿ ಅಂಶಗಳನ್ನು ಕಲೆಹಾಕಿ ವರದಿ ತಯಾರಿಸಿದೆ. ನಗರ ಪ್ರದೇಶಗಳಲ್ಲಿ ಪರಿಸ್ಥಿತಿ ಇನ್ನೂ ಹದಗೆಟ್ಟಿದ್ದು ಈ ಹಿನ್ನೆಲೆ ಮದ್ಯಪಾನದ ವಿರುದ್ಧ ನಾವು ಪ್ರಚಾರ ಆರಂಭಿಸಿದ್ದೇವೆ

    ಕಾಂಗ್ರೆಸ್ ಗೆ ಯುವಕರು ಮತ ಹಾಕಬೇಕು ಯಾಕೆ?
    ಕಳೆದ 22 ವರ್ಷದಲ್ಲಿ ಬಿಜೆಪಿ ಏನು ಮಾಡಿದೆ? ಇಂದು ಗುಜುರಾತ್ ನಲ್ಲಿ 60 ಲಕ್ಷ ನಿರುದ್ಯೋಗಿ ಯುವಕರಿದ್ದಾರೆ. ಎಲ್ಲ ಯುವಕರು ನಮ್ಮ ಚಳುವಳಿಯ ಭಾಗವಾಗಿದ್ದಾರೆ. ರೈತರು, ಬಡವರು, ಮಹಿಳೆಯರು ಸಹ ಈ ಚಳುವಳಿಯ ಭಾಗವಾಗಿದ್ದು ಅವರಿಗೆಲ್ಲ ಬದಲಾವಣೆ ಬೇಕಾಗಿದೆ. ಇದು ಕಾಂಗ್ರೆಸ್, ಬಿಜೆಪಿ ನಡುವಿನ ಹೋರಾಟವಲ್ಲ, ಬಿಜೆಪಿ ಗುಜುರಾತ್ ನಡುವಣ ಹೋರಾಟ.

    ಪ್ರಚಾರಕ್ಕಾಗಿ ಗುಜರಾತ್ ನ ಒಂದು ಭಾಗವನ್ನು ಕೇಂದ್ರಿಕರಿಸುತ್ತಿರಾ..?
    ನಾಳೆಯಿಂದ ಸಾರ್ವಜನಿಕ ಸಭೆಗಳನ್ನು ನಡೆಸಲು ಯೋಚಿಸಿದ್ದಿನಿ, ಬಿಜೆಪಿ ಸೌರಾಷ್ಟ್ರ ಉತ್ತರ ಮತ್ತು ಮಧ್ಯ ಗುಜುರಾತ್ ನಿಂದ ನಿರ್ಗಮಿಸುತ್ತಾರೆ. ನಮಗಾಗಿ ಏನು ಮಾಡಿದ್ದಾರೆ ಅಂತಾ ಬಿಜೆಪಿಯನ್ನು ಕೇಳಲು ನಾನು ಜನರಿಗೆ ಹೇಳುತ್ತೇನೆ. ಇದುವರೆಗೂ ಸುಳ್ಳು ಮತ್ತು ಪೊಳ್ಳು ಭರವಸೆಗಳನ್ನು ನೀಡಿದ್ದಾರೆ. ಜಾತಿ ಸಮಸ್ಯೆಗಳನ್ನು ಸೃಷ್ಟಿಸುವ ಮೂಲಕ ಮತದಾರರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಾರೆ.

    ಬಿಜೆಪಿಯ ದೊಡ್ಡ ಕಾರ್ಯಕರ್ತರ ಪಡೆ ಮತ್ತು ಬೂತ್ ಗಳ ನಿರ್ವಹಣೆ ಯನ್ನು ಕಾಂಗ್ರೆಸ್ ಹೇಗೆ ಮಾಡುತ್ತದೆ?
    ಕಾಂಗ್ರೆಸ್ ಈಗಾಗಲೇ ಬೂತ್ ಮಟ್ಟದಲ್ಲಿ ಹೇಗೆ ಕೆಲಸ ಮಾಡಬೇಕು ಎಂಬುದರ ಬಗ್ಗೆ ಯೋಚಿಸಿದೆ. ಮತದಾರರ ಮೂಲಕವೇ ಸಾಧ್ಯವಾದಷ್ಟು ಬೂತ್ ಗಳಲ್ಲಿ ಕಾಂಗ್ರೆಸ್ ಪರ ಮತ ಹಾಕಿಸುವ ಪ್ರಯತ್ನ ಮಾಡುತ್ತೇವೆ. ಒಂದು ಮತಗಟ್ಟೆಗೆ ನೂರು ಸ್ವಯಂ ಸೇವಕರು ನೇಮಕ ಮಾಡಿದ್ದೇವೆ. ಮಹಿಳೆಯರು ಯುವಕರು ಮಕ್ಕಳು ಇರುವಂತೆ ಸ್ವಯಂ ಸೇವಕನ್ನು ಎಲ್ಲ ವಿಭಾಗದಲ್ಲೂ ಸೇರಿಸಲು ಪ್ರಯತ್ನಿಸುತ್ತಿದ್ದೇವೆ. ಜೊತೆಗೆ ಇವಿಎಂಗಳು ಪರೀಕ್ಷೆ ಗೆ ಒಳಗೊಳ್ಳಬೇಕು, ಎಣಿಕೆ ಅಂತ್ಯವಾಗುವರೆಗೂ ಮತಯಂತ್ರಗಳನ್ನು ಆಯೋಗ ಕಾವಲು ಕಾಯಬೇಕು.

    ರಾಹುಲ್ ಗಾಂಧಿಗೆ ಎಐಸಿಸಿ ಪಟ್ಟಕಟ್ಟಿದ್ದರೆ  ಗುಜರಾತ್ ಚುನಾವಣೆಯ ಮೇಲೆ ಪ್ರಭಾವ ಬೀರಬಹುದು ಎಂದು ಭಾವಿಸುತ್ತೀರಾ?
    ಸಾಕಷ್ಟು ಯುವಕರು ರಾಹುಲ್ ಅವರನ್ನು ಬೆಂಬಲಿಸುತ್ತಿದ್ದಾರೆ. ರಾಹುಲ್ ಗಾಂಧಿ ಉತ್ತಮ ರೀತಿಯಲ್ಲಿ ಪರಿಣಾಮ ಬೀರಲಿದ್ದಾರೆ. ಯುವಕರು ಹೊಸ ನಾಯಕತ್ವವನ್ನು ಬಯಸುತ್ತಿದ್ದಾರೆ.

    ಇದನ್ನೂ ಓದಿ: ಚುನಾವಣಾ ಸಮೀಕ್ಷೆ: ಗುಜರಾತ್‍ನಲ್ಲಿ ಈ ಬಾರಿ ಗೆಲುವು ಯಾರಿಗೆ?