Tag: NWC

  • 2021ಕ್ಕೆ ಹೋಲಿಸಿದರೆ 2022ರಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು 30% ಹೆಚ್ಚಳ – NWC

    2021ಕ್ಕೆ ಹೋಲಿಸಿದರೆ 2022ರಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು 30% ಹೆಚ್ಚಳ – NWC

    ನವದೆಹಲಿ: 2021 ಕ್ಕೆ ಹೋಲಿಸಿದರೆ 2022 ರಲ್ಲಿ ಮಹಿಳೆಯರ (Women) ಮೇಲಿನ ದೌರ್ಜನ್ಯ ಪ್ರಕರಣಗಳು 30% ಹೆಚ್ಚಳವಾಗಿದೆ ಎಂದು ರಾಷ್ಟ್ರೀಯ ಮಹಿಳಾ ಹಕ್ಕುಗಳ ಆಯೋಗ (NWC) ವರದಿ ನೀಡಿದೆ. ಮಣಿಪುರ ಹಾಗೂ ಪಶ್ಚಿಮ ಬಂಗಾಳದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಬಳಿಕ ದೇಶದ್ಯಾಂತ ಮಹಿಳೆಯರ ಸುರಕ್ಷತೆ ಬಗ್ಗೆ ಚರ್ಚೆ ಶುರುವಾಗಿರುವ ಹೊತ್ತಲ್ಲೇ ಬಿಡುಗಡೆಯಾಗಿರುವ ಈ ಅಂಕಿ ಅಂಶಗಳು ದೊಡ್ಡ ಆಘಾತ ಮೂಡಿಸಿದೆ.

    2021 ರಲ್ಲಿ ರಾಷ್ಟ್ರೀಯ ಮಹಿಳಾ ಹಕ್ಕುಗಳ ಆಯೋಗದಲ್ಲಿ 23,700 ಪ್ರಕರಣಗಳು ದಾಖಲಾಗಿದ್ದವು, 2022 ರಲ್ಲಿ ಇದು 30,957ಕ್ಕೆ ಏರಿಕೆಯಾಗಿದೆ. 2014ರಲ್ಲಿ 33,906 ಪ್ರಕರಣಗಳು ದಾಖಲಾಗಿರುವುದು ಈವರೆಗೂ ಅತಿ ಹೆಚ್ಚಿನ ಸಂಖ್ಯೆಯಾಗಿದೆ ಎಂದು ಆಯೋಗ ಬಿಡುಗಡೆ ಮಾಡಿರುವ ಮಾಹಿತಿ ಹೇಳಿದೆ.

    2022 ರಲ್ಲಿ ಮಹಿಳಾ ಆಯೋಗದಲ್ಲಿ ದಾಖಲಾಗಿರುವ ಒಟ್ಟು ಪ್ರಕರಣಗಳ ಪೈಕಿ 54.5% ರಷ್ಟು (16,872) ಪ್ರಕರಣಗಳು ಉತ್ತರ ಪ್ರದೇಶದಿಂದ ದಾಖಲಾಗಿದೆ. ದೆಹಲಿಯಿಂದ 3,004 (10%), ಮಹಾರಾಷ್ಟ್ರದಿಂದ 1,381 (5%), ಬಿಹಾರದಿಂದ 1,368 (4.4%), ಹರಿಯಾಣದಲ್ಲಿ 1,362 (4.4%), ರಾಜಸ್ಥಾನ 1,030 (3.3%), ತಮಿಳುನಾಡು 668 (2.2%), ಪಶ್ಚಿಮ ಬಂಗಾಳ 621 (2%), ಕರ್ನಾಟಕದಿಂದ 554 (1.8%) ಮತ್ತು ಉಳಿದ ರಾಜ್ಯಗಳು 2,955 (9.5%) ಪ್ರಕರಣಗಳು ದಾಖಲಾಗಿವೆ.

    ಈ ದೂರುಗಳಲ್ಲಿ ಹೆಚ್ಚಿನವು ಭಾವನಾತ್ಮಕ ನಿಂದನೆ ಮತ್ತು ಕೌಟುಂಬಿಕ ಹಿಂಸಾಚಾರದ ಹಿನ್ನೆಲೆಯದಾಗಿದೆ. ಘನತೆಯಿಂದ ಬದುಕುವ ಹಕ್ಕು (ಭಾವನಾತ್ಮಕ ನಿಂದನೆ) ವಿಭಾಗದಲ್ಲಿ ಒಟ್ಟು 9,710 ದೂರುಗಳು, 6,970 ದೂರುಗಳು ಮಹಿಳೆಯರ ರಕ್ಷಣೆ, ಕೌಟುಂಬಿಕ ದೌರ್ಜನ್ಯದ ವಿರುದ್ಧ ಮತ್ತು 4,600 ದೂರುಗಳು ವಿವಾಹಿತ ಮಹಿಳೆಯರ ಕಿರುಕುಳ/ವರದಕ್ಷಿಣೆ ಕಿರುಕುಳದ ಅಡಿಯಲ್ಲಿ ದಾಖಲಾಗಿವೆ. ಉತ್ತರ ಪ್ರದೇಶದ ಹೆಚ್ಚಿನ ದೂರುಗಳು ಕೌಟುಂಬಿಕ ಹಿಂಸಾಚಾರ ಮತ್ತು ಭಾವನಾತ್ಮಕ ನಿಂದನೆಯ ಹಿನ್ನಲೆಯದಾಗಿವೆ ಎಂದು ಆಯೋಗದ ಅಂಕಿ ಅಂಶಗಳು ಹೇಳಿದೆ.

    2,500 ಕ್ಕೂ ಹೆಚ್ಚಿನ ದೂರುಗಳನ್ನು ‘ಮಹಿಳೆ ಅಥವಾ ಕಿರುಕುಳದ ದೌರ್ಜನ್ಯ’ ವಿಭಾಗದ ಅಡಿಯಲ್ಲಿ ದಾಖಲಿಸಿದೆ. 1,701 ದೂರುಗಳು ‘ಅತ್ಯಾಚಾರ/ಅತ್ಯಾಚಾರದ ಪ್ರಯತ್ನ’ ಅಡಿಯಲ್ಲಿ, 1,623 ದೂರುಗಳು ‘ಮಹಿಳೆಯರ ಪ್ರಕರಣದಲ್ಲಿ ಪೊಲೀಸ್ ನಿರಾಸಕ್ತಿ’ ಅಡಿಯಲ್ಲಿ ಮತ್ತು 924 ದೂರುಗಳು ‘ಸೈಬರ್ ಅಪರಾಧಗಳ’ ಅಡಿಯಲ್ಲಿ ದಾಖಲಾಗಿವೆ. ಇದನ್ನೂ ಓದಿ: ಸಾಂವಿಧಾನಿಕ ಜವಾಬ್ದಾರಿ, ಹೊಣೆಗಾರಿಕೆಯಿಂದ ಮೋದಿ ಸರ್ಕಾರ ಓಡಿ ಹೋಗುವಂತಿಲ್ಲ: ಖರ್ಗೆ ಟೀಕೆ

    ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರ ನೀಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ, 2022 ರಲ್ಲಿ ‘ವಿವಾಹಿತ ಮಹಿಳೆಯರಿಗೆ ಕಿರುಕುಳ/ವರದಕ್ಷಿಣೆ ಕಿರುಕುಳ’ ಅಡಿಯಲ್ಲಿ 357 ದೂರುಗಳ ಡೇಟಾವನ್ನು ಪ್ರಸ್ತುತಪಡಿಸಿದರು. 2021 ರಲ್ಲಿ 341 ಮತ್ತು 2020 ರಲ್ಲಿ 330 ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದ್ದರು. 2022 ರಲ್ಲಿ 1,710, 2021 ರಲ್ಲಿ 1,681 ಮತ್ತು 2020 ರಲ್ಲಿ 1,236 ದೂರುಗಳು ‘ಅತ್ಯಾಚಾರ/ಅತ್ಯಾಚಾರ ಯತ್ನ’ ಅಡಿಯಲ್ಲಿ ದಾಖಲಾಗಿವೆ. ಕಳೆದ 3 ವರ್ಷ ಹಾಗೂ ಪ್ರಸುತ್ತ ವರ್ಷದಲ್ಲಿ ಆಯೋಗದಲ್ಲಿ ‘ವರದಕ್ಷಿಣೆ’ ಮತ್ತು ‘ಅತ್ಯಾಚಾರ ಅಥವಾ ಅತ್ಯಾಚಾರ ಯತ್ನ’ ವಿಭಾಗಗಳ ಅಡಿಯಲ್ಲಿ ದಾಖಲಾದ ದೂರುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಕೇಂದ್ರ ಸಚಿವರು ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ.

    ಸಚಿವರ ಅಂಕಿ ಅಂಶಗಳ ಪ್ರಕಾರ ಜನವರಿ 2023ರ ವೇಳೆಗೆ 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 411 ಇ-ಪೋಕ್ಸೊ ನ್ಯಾಯಾಲಯಗಳು ಸೇರಿದಂತೆ 764 ತ್ವರಿತ ವಿಶೇಷ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ಈ ನ್ಯಾಯಾಲಯಗಳು 1,44,000 ಕ್ಕೂ ಹೆಚ್ಚು ದೂರುಗಳನ್ನು ವಿಲೇವಾರಿ ಮಾಡಿದೆ, 1,98,000 ಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಉಳಿದಿವೆ. ಇದನ್ನೂ ಓದಿ: ಪಬ್‌ಜೀ ಮೂಲಕವೇ ಭಾರತದ ಹಲವರನ್ನ ಸಂಪರ್ಕಿಸಿದ್ದಾಳೆ ಸೀಮಾ – ಸ್ಫೋಟಕ ರಹಸ್ಯ ಬಯಲು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಶುವೈದ್ಯೆ ರೇಪ್, ಕೊಲೆ ಪ್ರಕರಣ- ನಿರ್ಲಕ್ಷ್ಯ ತೋರಿದ ಮೂವರು ಪೊಲೀಸರ ಅಮಾನತು

    ಪಶುವೈದ್ಯೆ ರೇಪ್, ಕೊಲೆ ಪ್ರಕರಣ- ನಿರ್ಲಕ್ಷ್ಯ ತೋರಿದ ಮೂವರು ಪೊಲೀಸರ ಅಮಾನತು

    – ದೂರು ಕೊಡಲು ಹೋದ ತಂದೆಯನ್ನು ಅಲೆದಾಡಿಸಿದ ಪೊಲೀಸರು

    ಹೈದರಾಬಾದ್: ತೆಲಂಗಾಣ ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣ ಸಂಬಂಧ ನಿರ್ಲಕ್ಷ್ಯ ತೋರಿದ ಮೂವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

    ಮೊದಲು ಪ್ರಿಯಾಂಕಾ ಅವರು ನಾಪತ್ತೆಯಾಗಿದ್ದಾರೆ ಎಂದು ಪೋಷಕರು ಪೊಲೀಸರಿಗೆ ದೂರು ಕೊಡಲು ಹೋದಾಗ ಶಂಶಾಬಾದ್ ಠಾಣೆಯ ಪೊಲೀಸರು ನಿರ್ಲಕ್ಷ್ಯ ತೋರಿದ್ದರು. ಪೋಷಕರು ನಾಪತ್ತೆ ದೂರು ನೀಡಲು ಹೋದಾಗ ಒಂದು ಠಾಣೆಯಿಂದ ಇನ್ನೊಂದು ಠಾಣೆಗೆ ಅವರನ್ನು ಪೊಲೀಸರು ಅಲೆದಾಡಿಸಿದ್ದರು. ಒಂದು ವೇಳೆ ಪೊಲೀಸರು ನಿರ್ಲಕ್ಷ್ಯ ತೋರದೇ ತಮ್ಮ ಕೆಲಸ ಮಾಡಿದ್ದರೆ ಈ ಅನಾಹುತ ನಡೆಯುವುದನ್ನು ತಡೆಯಬಹುದಿತ್ತು ಎಂದು ಮಹಿಳಾ ರಾಷ್ಟ್ರೀಯ ಆಯೋಗ(ಎನ್‍ಡಬ್ಲುಸಿ) ಕಾರ್ಯಕರ್ತರು ಆರೋಪಿಸಿದ್ದಾರೆ. ಇದನ್ನೂ ಓದಿ: ಪಶುವೈದ್ಯೆಯನ್ನು ಕೊಂದಂತೆ ನನ್ನ ಮಗನನ್ನು ಕೊಲ್ಲಿ – ಸಿಡಿದೆದ್ದ ಅತ್ಯಾಚಾರಿಯ ತಾಯಿ

    ಈ ಹಿನ್ನೆಲೆಯಲ್ಲಿ ನಿರ್ಲಕ್ಷ್ಯ ಮೆರೆದ ಶಂಶಾಬಾದ್ ಪೊಲೀಸ್ ಠಾಣೆಯ ಎಸ್‍ಐ ಎಂ. ರವಿ ಕುಮಾರ್, ರಾಜೀವ್ ಗಾಂಧಿ ಅಂತರಾಷ್ಟ್ರೀಯ ಏರ್‌ಪೋರ್ಟ್‌ ಪೊಲೀಸ್ ಠಾಣೆಯ ಮುಖ್ಯ ಪೇದೆ ಪಿ. ವೇಣುಗೋಪಾಲ್ ರೆಡ್ಡಿ ಹಾಗೂ ಎ. ಸತ್ಯನಾರಾಯಣ ಗೌಡ್ ಅವರನ್ನು ಅಮಾನತು ಮಾಡಲಾಗಿದೆ. ಇದನ್ನೂ ಓದಿ: ವೈದ್ಯೆಗೆ ಕೂಲ್ ಡ್ರಿಂಕ್ಸ್‌ನಲ್ಲಿ ವಿಸ್ಕಿ ಕುಡಿಸಿ ಅತ್ಯಾಚಾರಗೈದ ಪಾಪಿಗಳು

    ಈ ಬಗ್ಗೆ ಸೈಬರಾಬಾದ್ ಪೊಲೀಸ್ ಆಯುಕ್ತರಾದ ವಿ.ಸಿ ಸಜ್ಜನರ್ ಅವರು ಪ್ರತಿಕ್ರಿಯಿಸಿ, ಈಗಾಗಲೇ ನಿರ್ಲಕ್ಷ್ಯ ತೋರಿದ ಮೂವರು ಪೊಲೀಸರನ್ನು ಅಮಾನತುಗೊಳಿಸಿದ್ದೇವೆ. ಮುಂದಿನ ಆದೇಶದವರೆಗೂ ಅವರು ಕೆಲಸಕ್ಕೆ ಬರುವಂತಿಲ್ಲ. ಪೊಲೀಸರು ಪ್ರಿಯಾಂಕ ನಾಪತ್ತೆ ದೂರು ದಾಖಲಿಸಿಕೊಳ್ಳಲು ಸಮಯ ಹಾಳು ಮಾಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ ಎಂದು ತಿಳಿಸಿದರು.

    ಈ ಬಗ್ಗೆ ತಂದೆ ಮಾತನಾಡಿ, ಪ್ರಿಯಾಂಕ ಬುಧವಾರ ರಾತ್ರಿ 9.15ಕ್ಕೆ ಸೋದರಿ ಜೊತೆ ಮಾತನಾಡಿದ್ದಳು. ಮತ್ತೆ ರಾತ್ರಿ 11 ಗಂಟೆಗೆ ಕರೆ ಮಾಡಿದಾಗ ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಚಾರ್ಜ್ ಇಲ್ಲದೆ ಫೋನ್ ಆಫ್ ಆಗಿರಬಹುದೆಂದು ತಿಳಿದು ಆಕೆಯನ್ನು ಹುಡುಕಿಕೊಂಡು ಟೋಲ್ ಪ್ಲಾಜಾ ಬಳಿ ನಾವು ಹೋದೆವು. ಆದರೆ ಅಲ್ಲಿ ಪ್ರಿಯಾಂಕ ಇರಲಿಲ್ಲ. ನಂತರ ಮಗಳು ಕಾಣೆಯಾದ ಬಗ್ಗೆ ದೂರು ನೀಡಲು ಶಂಶಾಬಾದ್ ಠಾಣೆಗೆ ಹೋದೆವು. ಆದರೆ ಈ ಪ್ರಕರಣ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂಬ ನೆಪ ಹೇಳಿ, ಪೊಲೀಸರು ನಮ್ಮನ್ನು ಒಂದು ಠಾಣೆಯಿಂದ ಮತ್ತೊಂದು ಠಾಣೆಗೆ ಅಲೆದಾಡಿಸಿದರು. ಇದನ್ನೂ ಓದಿ: ಪಶುವೈದ್ಯೆಯನ್ನ ಗ್ಯಾಂಗ್‍ರೇಪ್ ಮಾಡಿ, ಕೊಲೆ – 25 ಕಿ.ಮೀ ದೂರ ಶವವೊಯ್ದು ಸುಟ್ಟರು

    ಪೊಲೀಸರು ಈ ಪ್ರಕರಣ ಯಾವ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುತ್ತದೆ ಎನ್ನುವುದನ್ನ ನಿರ್ಧರಿಸುವಲ್ಲೇ ಕಾಲ ಹರಣ ಮಾಡಿದರು. ಕೊನೆಗೆ ಇಬ್ಬರು ಕಾನ್‍ಸ್ಟೇಬಲ್‍ಗಳ ನೆರವು ಕೋರಿದೆವು. ಆದರು ಏನೂ ಪ್ರಯೋಜನವಾಗಲಿಲ್ಲ. ಮಗಳನ್ನು ಹುಡುಕಿಕೊಂಡು ಗುರುವಾರ ಬೆಳಗ್ಗಿನ ಜಾವ 3 ಗಂಟೆಗೆ ನಾನೇ ಹೋದೆ ಎಂದು ತಂದೆ ಅಳಲನ್ನು ತೋಡಿಕೊಂಡರು.

    26 ವರ್ಷದ ಪಶುವೈದ್ಯೆ ಪ್ರಿಯಾಂಕ ರೆಡ್ಡಿಯನ್ನು ಸ್ಕೂಟಿ ಪಂಕ್ಚರ್ ಹಾಕಿಸಿಕೊಡುವ ನೆಪದಲ್ಲಿ ಲಾರಿ ಚಾಲಕ ಮಹ್ಮದ್ ಪಾಷಾ, ಮೂವರು ಕ್ಲೀನರ್‍ಗಳಾದ ನವೀನ್, ಚೆನ್ನಕೇಶವುಲು ಮತ್ತು ಶಿವಾ ಸೇರಿ ಕಿಡ್ನಾಪ್ ಮಾಡಿ, ಸಾಮೂಹಿಕ ಅತ್ಯಾಚಾರ ಮಾಡಿದ್ದರು. ಅಲ್ಲದೆ ವೈದ್ಯೆಯ ಮೃತ ದೇಹವನ್ನು ಸುಟ್ಟು ಹಾಕಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸೈಬರಾಬಾದ್ ಪೊಲೀಸರು, ನಾಲ್ವರು ಮೃಗೀಯ ಮನುಷ್ಯರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗಳನ್ನು 14 ದಿನಗಳ ಕಾಲ ರಿಮ್ಯಾಂಡ್‍ನಲ್ಲಿ ಇರಿಸುವಂತೆ ಕೋರ್ಟ್ ಆದೇಶಿಸಿದೆ.

    ಮಗನ ಕೃತ್ಯಕ್ಕೆ ತಾಯಿ ಕಿಡಿ:
    ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಚೆನ್ನಕೇಶವುಲು ತಾಯಿ ಪ್ರತಿಕ್ರಿಯಿಸಿ, ಮಗನ ಅಮಾನುಷ ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ನನ್ನ ಮಗ ಈ ಪಾಪ ಮಾಡಿದ್ದಾನೆ ಎಂದು ಸಾಬೀತಾದರೆ ಖಂಡಿತಾ ಆತನಿಗೆ ಶಿಕ್ಷೆಯಾಗಬೇಕು. ಬೇಕಾದರೆ ಪ್ರಿಯಾಂಕ ರೆಡ್ಡಿಯನ್ನು ಹೇಗೆ ಆರೋಪಿಗಳು ಅಮಾನುಷವಾಗಿ ಕೊಲೆಗೈದಿದ್ದಾರೋ ಹಾಗೆಯೇ ನನ್ನ ಮಗನನ್ನೂ ಹತ್ಯೆ ಮಾಡಿ ಎಂದು ತಾಯಿ ಕಣ್ಣೀರಿಟ್ಟಿದ್ದಾರೆ.

    ನಾನು ಒಬ್ಬಳು ಹೆಣ್ಣು. ನನಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮಕ್ಕಳಿಗೆ ಹೀಗಾದರೆ ಹೆತ್ತ ಕರುಳು ಎಷ್ಟು ನೋವು ಪಡುತ್ತದೆ ಎಂದು ನನಗೂ ತಿಳಿದಿದೆ. ನನ್ನ ಮಗ ತಪ್ಪಿತಸ್ಥ ಆಗಿದ್ದರೆ ಆತನಿಗೆ ಶಿಕ್ಷೆ ಖಂಡಿತ ಆಗಬೇಕು. ಈ ರೀತಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಿ ಹೀನಾಯ ಕೆಲಸ ಮಾಡುವವರಿಗೆ ಕಠಿಣ ಶಿಕ್ಷೆ ಕೊಡಬೇಕು. ಆಗ ಮುಂದೆ ಇಂತಹ ದುಷ್ಕೃತ್ಯಕ್ಕೆ ಯಾರು ಕೈ ಹಾಕಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಆರೋಪಿಗಳನ್ನು ಗಲ್ಲಿಗೇರಿಸುವಂತೆ ಆಗ್ರಹ:
    ಈಗಾಗಲೇ ದೇಶಾದ್ಯಂತ ಈ ಪ್ರಕರಣ ವಿರುದ್ಧ ಸಾರ್ವಜನಿಕರು ಸಿಡಿದೆದ್ದಿದ್ದಾರೆ. ಪ್ರಿಯಾಂಕ ರೆಡ್ಡಿಗಾದ ಅನ್ಯಾಯಕ್ಕೆ ನ್ಯಾಯ ಕೊಡಿಸಿ ಎಂದು ಎಲ್ಲೆಡೆ ಕ್ಯಾಂಡಲ್ ಮಾರ್ಚ್, ಪ್ರತಿಭಟನೆ ಮಾಡುತ್ತಿದ್ದಾರೆ. ಅಲ್ಲದೆ ಟ್ರಾಫಿಕ್ ನಿಯಮ ಉಲ್ಲಂಘಿಸಿದವರಿಗೆ ದೊಡ್ಡ ಮೊತ್ತದ ದಂಡ ವಿಧಿಸಿ ಬಿಸಿ ಮುಟ್ಟಿಸಿ ನಿಯಮ ಪಾಲಿಸುವಂತೆ ಸರ್ಕಾರ ಮಾಡಿದೆ. ಅದರಂತೆ ಅತ್ಯಾಚಾರಿಗಳಿಗೆ ಗಲ್ಲಿಗೇರಿಸಿ, ಆಗ ಕಾಮುಕರ ಅಟ್ಟಹಾಸ ಅಂತ್ಯವಾಗುತ್ತದೆ. ಇಂಥವರಿಗೆ ಜೀವಾವಧಿ ಶಿಕ್ಷೆ ನೀಡರೆ ಆರಾಮಾಗಿ ಸಾಯುವ ತನಕ ಜೈಲಿನಲ್ಲಿ ಇರುತ್ತಾರೆ. ಅದರ ಬದಲು ಶಿಕ್ಷೆ ಸಾಬೀತಾದ ಕೂಡಲೇ ಗಲ್ಲಿಗೇರಿಸಿ ಎಂದು ಆಗ್ರಹಿಸಿದ್ದಾರೆ.