Tag: Nursing mother

  • ಆರೋಗ್ಯ ಸಚಿವ ಶ್ರೀರಾಮುಲು ತವರು ಜಿಲ್ಲೆಯಲ್ಲೇ ಬಾಣಂತಿಯರ ನರಳಾಟ

    ಆರೋಗ್ಯ ಸಚಿವ ಶ್ರೀರಾಮುಲು ತವರು ಜಿಲ್ಲೆಯಲ್ಲೇ ಬಾಣಂತಿಯರ ನರಳಾಟ

    – ಬೆಡ್ ಇಲ್ಲದೇ ನೆಲದ ಮೇಲೆ ಮಲಗುವ ಬಾಣಂತಿಯರು

    ಚಿತ್ರದುರ್ಗ: ಗರ್ಭಿಣಿಯರಿಗೆ ಹೆರಿಗೆ ಸಮಯದಲ್ಲಿ ತೊಂದರೆ ಆಗಬಾರದು ಅಂತ 9 ತಿಂಗಳು ಕುಟುಂಬಸ್ಥರು ಮನೆಯಲ್ಲಿ ಎಷ್ಟೇ ಬಡತನವಿದ್ದರೂ ಸುರಕ್ಷಿತವಾಗಿ ನೋಡಿಕೊಂಡಿರುತ್ತಾರೆ. ಆದರೆ ಹೆರಿಗೆಗೆಂದು ಬರುವ ಮಹಿಳೆಯರಿಗೆ ಚಿತ್ರದುರ್ಗದ ಜಿಲ್ಲಾಸ್ಪತ್ರೆಯು ಕೇವಲ ಐದು ದಿನಗಳಲ್ಲೇ ನರಕ ದರ್ಶನವನ್ನು ಮಾಡಿಸುತ್ತದೆ.

    ಜಿಲ್ಲಾಸ್ಪತ್ರೆಗೆ ಹೆರಿಗೆಗೆಂದು ಬರುವ ಗರ್ಭಿಣಿಯರು ಅವರೊಂದಿಗೆ ಪೋಷಕರನ್ನು ಕರೆತರಲೇಬೇಕಾದ ಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಒಂದು ವೇಳೆ ಅನಿವಾರ್ಯವಾಗಿ ಒಬ್ಬರೆ ಬಂದರೆ ಆಸ್ಪತ್ರೆ ಆವರಣದಲ್ಲಿ ಪುಟ್ಟ ಪುಟ್ಟ ಕಂದಮ್ಮಗಳನ್ನು ತಮ್ಮ ತೊಡೆಯ ಮೇಲೆ ಮಲಗಿಸಿಕೊಂಡು ನೆಲದ ಮೇಲೆ ಬಾಣಂತಿಯರು ಕುಳಿತುಕೊಳ್ಳವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಅದರಲ್ಲೂ ರಾತ್ರಿ ಹೆರಿಗೆಯಾದ ಬಾಣಂತಿಯರಿಗೆ ವಾರ್ಡ್ ಮುಂಭಾಗದಲ್ಲಿರುವ ಗ್ರಾನೈಟ್ ಕುರ್ಚಿಗಳ ಮೇಲೆ ಅವರನ್ನು ಮಲಗಿಸಲಾಗುತ್ತದೆ. ಆ ಜಾಗ ಸಿಗದಿದ್ದಾಗ ಸಿಕ್ಕ ಸಿಕ್ಕ ಜಾಗದಲ್ಲೇ ಅಥವಾ ನೆಲದಮೇಲೆ ಬಾಣಂತಿಯರ ನರಳುಡುತ್ತಾ ಮಲಗಬೇಕಾಗುತ್ತದೆ. ಇಷ್ಟೆಲ್ಲಾ ಮನಕಲುಕುವ ದೃಶ್ಯಗಳು ಕಣ್ಣಿಗೆ ಬಿದ್ದರೂ ಆರೋಗ್ಯ ಇಲಾಖೆ ಸಿಬ್ಬಂದಿಗೆ ಈ ದೃಶ್ಯಗಳು ಸಾಮಾನ್ಯವೆನಿಸಿವೆ ಎಂದು ಸಾರ್ವಜನಿಕರು ದೂರಿದ್ದಾರೆ.

    ಈ ಸಮಸ್ಯೆ ತಲೆದೂರಿರೋದು ಕೂಡ ಆರೋಗ್ಯ ಸಚಿವ ಶ್ರೀರಾಮುಲು ಅವರ ತವರು ಜಿಲ್ಲೆಯಾದ ಚಿತ್ರದುರ್ಗದ ಸರ್ಕಾರಿ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡನಲ್ಲಿ ಎನ್ನುವುದು ಕೂಡ ವಿಪರ್ಯಾಸವೇ ಸರಿ. ನೋಡುವುದಕ್ಕೆ ಅಷ್ಟೇ ಇದು ಚಿತ್ರದುರ್ಗ ಜಿಲ್ಲಾಸ್ಪತ್ರೆ. ಆದರೆ ಯಾವುದೇ ಮೂಲ ಸೌಕರ್ಯಗಳು ಈ ಆಸ್ಪತ್ರೆಯಲ್ಲಿಲ್ಲ. ಒಂದು ವಾರ ಬಾಣಂತಿಯರು ಕಂದಮ್ಮಗಳ ಜೊತೆಗೆ ನೆಲದ ಮೇಲೆ ಮಲಗುವ ಪರಿಸ್ಥಿತಿ ಇಲ್ಲಿದೆ. ಯಾವಾಗಲೂ ಫುಲ್ ಆಗಿರುವ ಆಸ್ಪತ್ರೆಯಲ್ಲಿ ಕೆಲ ಹಾಸಿಗೆಗಳು ರಾಜಕಾರಣಿಗಳ ಬೆಂಬಲಿಗರ ಕಡೆಯವರಿಗೆ ಮಾತ್ರ ಮೀಸಲಾಗಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

    ಬಡವರು, ನಿರ್ಗತಿಕ ಬಾಣಂತಿಯರು ಹೆರಿಗೆಯಾದಾಗ ಬೆಡ್ ಕೇಳಿದರೆ ಇಲ್ಲಿ ಬೆಡ್ ಖಾಲಿ ಇಲ್ಲ. ಚಿಕಿತ್ಸೆ ಬೇಕಂದ್ರೆ ನೆಲದ ಮೇಲೆ ವಾಸ್ತವ್ಯ ಹೂಡಿ ಅಂತ ಸಿಬ್ಬಂದಿ ದಬಾಯಿಸುತ್ತಾರೆ. ಅಷ್ಟೇ ಅಲ್ಲದೆ ಸಿಜೇರಿಯನ್ ಆಗಿ ಹೆರಿಗೆಯಾದ ತಾಯಿಯೇ ಒಂದು ಕಡೆ ಇದ್ದರೆ, ಗಂಭೀರ ಸ್ಥಿತಿಯಲ್ಲಿರುವ ಶಿಶು ಒಂದು ಕಡೆ ಇರುವ ಪರಿಸ್ಥಿತಿ ಕೂಡ ನಿರ್ಮಾಣವಾಗಿದೆ. ಕೆಲವು ಸಂದರ್ಭದಲ್ಲಿ ಮಗು ಕೂಡ ಅದಲು ಬದಲಾಗುವ ಆತಂಕ ಸಹ ಬಾಣಂತಿಯರನ್ನು ಕಾಡುತ್ತಿದೆ. ಹೀಗಾಗಿ ಸಮೀಪದಲ್ಲೇ ಇರುವ ವಾರ್ಡ್ ನಲ್ಲಿ ಅವಕಾಶ ಕೇಳಿದರೆ ಸಿಬ್ಬಂದಿ ಸ್ಪಂದಿಸುವುದಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

    ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ಅವರು ಗೆದ್ದಂತಹ ಜಿಲ್ಲೆಯಲ್ಲೇ ಇಂತಹ ದುಸ್ಥಿತಿ ಇದ್ದರೆ ಬೇರೆ ಜಿಲ್ಲಾಸ್ಪತ್ರೆಗಳ ಪಾಡೇನು ಎಂಬ ಪ್ರಶ್ನೆ ನಮಗೆ ಮೂಡುತ್ತಿದೆ ಎಂದು ಸಾರ್ವಜನರಿಕರು ಅಸಮಾಧಾನ ಹೊರಹಾಕಿದ್ದಾರೆ. ಈ ಪರಿಸ್ಥಿತಿಯ ಬಗ್ಗೆ ಜಿಲ್ಲಾಸ್ಪತ್ರೆಯ ಆರೋಗ್ಯಾಧಿಕಾರಿ ಬಸವರಾಜ್ ಪ್ರತಿಕ್ರಿಯಿಸಿದ್ದು, ಆಸ್ಪತ್ರೆಯಲ್ಲಿ ಕೇವಲ 50 ಬೆಡ್‍ಗಳ ವ್ಯವಸ್ಥೆಯಿಂದೆ. ಆದರೆ ಇಲ್ಲಿ ಒಂದು ದಿನಕ್ಕೆ 30ರಿಂದ 40 ಮಹಿಳೆಯರಿಗೆ ಹೆರಿಗೆ ಮಾಡಿಸಲಾಗುತ್ತದೆ. ಆದ್ದರಿಂದ ಈ ರೀತಿಯ ಸಮಸ್ಯೆ ಉಂಟಾಗುವುದು ಸಹಜ. ಹೀಗಾಗಿ ಹೆಚ್ಚಿನ ಬೆಡ್‍ಗಳ ಆಸ್ಪತ್ರೆ ಜಿಲ್ಲೆಗೆ ಅಗತ್ಯವಿದೆ. ಈಗಾಗಲೇ ನೂತನ ಕಟ್ಟಡಕ್ಕಾಗಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅತಿ ಶೀಘ್ರದಲ್ಲೇ ಈ ಸಮಸ್ಯೆ ಬಗೆಹರೆಯಲಿದೆ ಎಂದು ಹೇಳಿದ್ದಾರೆ.

  • ವೈದ್ಯರ ನಿರ್ಲಕ್ಷ್ಯದಿಂದ ತೀವ್ರ ರಕ್ತಸ್ರಾವ – ಬಾಣಂತಿ ಸಾವು

    ವೈದ್ಯರ ನಿರ್ಲಕ್ಷ್ಯದಿಂದ ತೀವ್ರ ರಕ್ತಸ್ರಾವ – ಬಾಣಂತಿ ಸಾವು

    ಗದಗ: ವೈದ್ಯರ ನಿರ್ಲಕ್ಷ್ಯಕ್ಕೆ ತೀವ್ರ ರಕ್ತಸ್ರಾವದಿಂದ ಬಾಣಂತಿ ಮೃತಪಟ್ಟಿರುವ ಘಟನೆ ಗದಗ ಜಿಲ್ಲೆಯ ಜಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.

    ಗದಗ ತಾಲೂಕಿನ ಬೆಳದಡಿ ತಾಂಡ ನಿವಾಸಿಯಾದ 23 ವರ್ಷದ ಸುಮಿತ್ರಾ ಪೀರಪ್ಪ ಚವ್ಹಾಣ್ ಮೃತಪಟ್ಟಿದ್ದಾರೆ. ಸುಮಿತ್ರಾ ಅವರಿಗೆ ಹೆರಿಗೆ ನೋವು ಕಾಣಿಸಿಕೊಳ್ಳುತ್ತಿದ್ದಂತೆ ಕುಟುಂಬಸ್ಥರು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ಸುಮಿತ್ರಾ ನೋವಿನ ಪರಿಸ್ಥಿತಿ ಚಿಂತಾಜನಕವಾಗುತ್ತಿದ್ದಂತೆ ಹೆಚ್ಚಿನ ಚಿಕಿತ್ಸೆಗೆ ಗದಗ ಜಿಮ್ಸ್ ರವಾನಿಸಲಾಯಿತು.

    ಇಲ್ಲಿ ವೈದ್ಯೆ ಶೃತಿ ಪಾಟೀಲ್ ಒಂದು ಗಂಟೆವರೆಗೆ ಚಿಕಿತ್ಸೆ ನೀಡದೇ ನಿರ್ಲಕ್ಷ್ಯ ತೋರಿದ್ದಾರೆ. ಜೊತೆಗೆ ಆಸ್ಪತ್ರೆಯಲ್ಲಿ ರಕ್ತ ಇಲ್ಲದೇ ಇರುವುದರಿಂದ ಸುಮಿತ್ರಾ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಈ ಎಲ್ಲಾ ಘಟನೆಗಳಿಗೆಲ್ಲಾ ಕಾರಣ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಮೃತಳ ಸಂಬಂಧಿಕರು ಹೇಳುತ್ತಿದ್ದಾರೆ.

    ಸುಮಿತ್ರಾ ಸಾವಿನಿಂದ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಬಗ್ಗೆ ವೈದ್ಯಾಧಿಕಾರಿಗಳನ್ನು ಕೇಳಿದರೆ ನಮ್ಮದು ಯಾವುದು ತಪ್ಪಿಲ್ಲ. ನಾವು ಎಷ್ಟೇ ಪ್ರಯತ್ನ ಮಾಡಿದರೂ ಬಾಣಂತಿಯನ್ನು ಉಳಿಸಿಕೊಳ್ಳಲಾಗಲಿಲ್ಲ ಎಂದು ಸಮಜಾಯಿಸಿಕೊಳ್ಳುತ್ತಿದ್ದಾರೆ.