Tag: Nur-Sultan

  • ಟೇಕಾಫ್ ಆದ ಕೆಲವೇ ಕ್ಷಣದಲ್ಲಿ 100 ಪ್ರಯಾಣಿಕರಿದ್ದ ವಿಮಾನ ಪತನ

    ಟೇಕಾಫ್ ಆದ ಕೆಲವೇ ಕ್ಷಣದಲ್ಲಿ 100 ಪ್ರಯಾಣಿಕರಿದ್ದ ವಿಮಾನ ಪತನ

    ನೂರ್ ಸುಲ್ತಾನ್: ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನವೊಂದು ಕಟ್ಟಡಕ್ಕೆ ಡಿಕ್ಕಿ ಹೊಡೆದು 14 ಸಾವನ್ನಪ್ಪಿದ ದುರಂತ ಕಝಾಕಿಸ್ತಾನದ ಅಲ್ಮಾಟಿ ಪ್ರದೇಶದಲ್ಲಿ ಸಂಭವಿಸಿದೆ.

    ಸುಮಾರು 100 ಮಂದಿ ಪ್ರಯಾಣಿಸುತ್ತಿದ್ದ ವಿಮಾನ ಕಝಾಕಿಸ್ತಾನದ ಅಲ್ಮಾಟಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೂರ್ ಸುಲ್ತಾನ್‍ಗೆ ಹೊರಟಿತ್ತು. 95 ಪ್ರಯಾಣಿಕರು ಹಾಗೂ 5 ಮಂದಿ ವಿಮಾನ ಸಿಬ್ಬಂದಿಯನ್ನು ಹೊತ್ತು ಈ ವಿಮಾನ ನೂರ್ ಸುಲ್ತಾನ್‍ಗೆ ಹೊರಟಿತ್ತು. ಆದರೆ ಏರ್‌ಪೋರ್ಟ್‌ನಿಂದ ವಿಮಾನ ಟೇಕಾಪ್ ಆದ ಕೆಲವೇ ಕ್ಷಣದಲ್ಲಿ ಈ ದುರ್ಘಟನೆ ಘಟಿಸಿದೆ.

    ಏರ್‌ಪೋರ್ಟ್‌ ಸಮೀಪವಿದ್ದ ಎರಡು ಅಂತಸ್ತಿನ ಕಟ್ಟಡಕ್ಕೆ ವಿಮಾನ ಡಿಕ್ಕಿ ಹೊಡೆದ ಪರಿಣಾಮ 14 ಮಂದಿ ಪ್ರಯಾಣಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಜೊತೆಗೆ 22ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದು, ಗಾಯಗೊಂಡವರನ್ನು ವಿಮಾನ ನಿಲ್ದಾಣದ ಆಸ್ಪತ್ರೆಗೆ ರವಾನಿಸಲಾಗಿದೆ.

    ಪೈಲೆಟ್ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಆದರೆ ವಿಮಾನ ಪತನಕ್ಕೆ ನಿಖರ ಕಾರಣವೇನು ಎಂಬುದು ತಿಳಿದು ಬಂದಿಲ್ಲ. ಸದ್ಯ ಸ್ಥಳಕ್ಕೆ ಅಧಿಕಾರಿಗಳು ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದು, ತನಿಖೆ ಆರಂಭಿಸಿದ್ದಾರೆ.

    ಈ ಅಪಘಾತದಲ್ಲಿ ವಿಮಾನವು ಎರಡು ಭಾಗವಾಗಿದದ್ದು, ಅರ್ಧದಷ್ಟು ಕಟ್ಟಡ ನೆಲಸಮವಾಗಿದೆ. ಈ ಬಗ್ಗೆ ಕಝಾಕಿಸ್ತಾನ ಅಧ್ಯಕ್ಷ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಈ ಅಪಘಾತಕ್ಕೆ ಕಾರಣರಾದ ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆ ಆಗುತ್ತದೆ ಎಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

  • ಮಗುವಿಗೆ ಜನ್ಮ ನೀಡಿ 11 ವಾರದಲ್ಲಿ ಎರಡನೇ ಬಾರಿ ತಾಯಿಯಾದ ಲಿಲಿಯಾ

    ಮಗುವಿಗೆ ಜನ್ಮ ನೀಡಿ 11 ವಾರದಲ್ಲಿ ಎರಡನೇ ಬಾರಿ ತಾಯಿಯಾದ ಲಿಲಿಯಾ

    ನೂರ್ ಸುಲ್ತಾನ್: ಮಹಿಳೆಯೊಬ್ಬರು ಮೊದಲ ಮಗುವಿಗೆ ಜನ್ಮ ನೀಡಿ 11 ವಾರದಲ್ಲೇ ಮತ್ತೊಂದು ಶಿಶುವಿಗೆ ಜನ್ಮ ನೀಡಿದ ಘಟನೆ ಕಜಾಖಸ್ತಾನದಲ್ಲಿ ನಡೆದಿದೆ.

    ಲಿಲಿಯಾ ಕೋನೋವಾಲೋವಾ ಮೊದಲ ಮಗುವಿಗೆ ಜನ್ಮ ನೀಡಿದ 11 ವಾರದಲ್ಲೇ ಮತ್ತೊಂದು ಮಗುವಿಗೆ ಜನ್ಮ ನೀಡಿದ್ದಾರೆ. ವಿಶೇಷ ಅಂದರೆ ಇಬ್ಬರು ಅವಳಿ ಮಕ್ಕಳು. ಲಿಲಿಯಾ ಆರೋಗ್ಯದ ಪರಿಸ್ಥಿತಿ ತಿಳಿದ ವೈದ್ಯರು ಡೆಲಿವರಿಗೆ ಮೊದಲೇ ಎಲ್ಲಾ ತಯಾರಿ ನಡೆಸಿದ್ದರು. ಈಗಾಗಲೇ ಲಿಲಿಯಾ ಅವರಿಗೆ 7 ವರ್ಷದ ಮಗಳಿದ್ದಾಳೆ. ಲಿಲಿಯಾ ಮೊದಲ ಬಾರಿಗೆ ಗರ್ಭಿಣಿಯಾಗಿದ್ದಾಗ, ಅವರಿಗೆ ಎರಡು ಗರ್ಭಕೋಶ ಇರುವುದಾಗಿ ವೈದ್ಯರು ಹೇಳಿದ್ದರು.

    ಎರಡನೇ ಬಾರಿಗೆ ಲಿಲಿಯಾ ಗರ್ಭಿಣಿಯಾಗಿದ್ದಾಗ, ಅವಳಿ ಮಕ್ಕಳಿಗೆ ಜನ್ಮ ನೀಡುವುದಾಗಿ ವೈದ್ಯರು ತಿಳಿಸಿದ್ದರು. ಇಬ್ಬರು ಮಕ್ಕಳು ಲಿಲಿಯಾಳ ಬೇರೆ ಬೇರೆ ಗರ್ಭದಲ್ಲಿ ಬೆಳೆಯುತ್ತಿತ್ತು. ಮೇ 24ರಂದು ಲಿಲಿಯಾ 6 ತಿಂಗಳ ಗರ್ಭಿಣಿಯಾಗಿದ್ದಾಗಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆಗ ಮಗುವಿನ ತೂಕ ಕೇವಲ 850 ಗ್ರಾಂ ಇತ್ತು. ಲಿಲಿಯಾ ಅವರ ಮತ್ತೊಂದು ಗರ್ಭದಲ್ಲಿ ಬೆಳೆಯುತ್ತಿದ್ದ ಮಗು 9 ತಿಂಗಳು ನಂತರ ಜನಿಸಿದೆ. ಇಬ್ಬರು ಮಕ್ಕಳು ಈಗ ಆರೋಗ್ಯದಿಂದ ಇದ್ದಾರೆ.

    ವೈದ್ಯರು ನನ್ನ ಆರೋಗ್ಯದ ಸ್ಥಿತಿ ಬಗ್ಗೆ ಹೇಳಿದ್ದಾಗ ನಾನು ಆತಂಕಗೊಂಡಿದೆ. 9 ತಿಂಗಳು ಆಗುವ ಮೊದಲೇ ಮಗಳು ಜನಿಸಿದರಿಂದ ನಾನು ಚಿಂತೆಗೊಳಗಾಗಿದೆ. ಆದರೆ ವೈದ್ಯರು ದೊಡ್ಡವರು. ಅವರು ನನ್ನ ಮಗುವನ್ನು ಉಳಿಸಿದರು. ಅಗಸ್ಟ್ 9ರಂದು ನಾನು ಗಂಡು ಮಗುವಿಗೆ ಜನ್ಮ ನೀಡಿದ್ದೇನೆ. ನಾನು ಈಗ ಶೀಘ್ರದಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತೇನೆ ಎಂದು ಲಿಲಿಯಾ ಸ್ಥಳೀಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

    ಬೇರೆ ಬೇರೆ ಸಮಯದಲ್ಲಿ ಅವಳಿ ಮಕ್ಕಳು ಜನಿಸಿರುವುದು ಇದು ಕಜಾಖಸ್ತಾನದ ಇತಿಹಾಸದಲ್ಲೇ ಮೊದಲ ಬಾರಿ ಆಗಿದೆ. ಅವಳಿ ಮಕ್ಕಳು ಇಬ್ಬರು ಅಣ್ಣ-ತಂಗಿಯಾಗಿದ್ದು, ಇಬ್ಬರ ನಡುವೆ 11 ವಾರ ಅಂತರವಿದೆ. ತಾಯಿ ಹಾಗೂ ಇಬ್ಬರು ಮಕ್ಕಳು ಕ್ಷೇಮವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.