Tag: nuclear policy

  • ನ್ಯೂಕ್ಲಿಯರ್ ಶಕ್ತಿ ‘ನೋ ಫಸ್ಟ್ ಯೂಸ್’ ನೀತಿ ಭವಿಷ್ಯದಲ್ಲಿ ಬದಲಾಗಬಹುದು: ರಾಜನಾಥ್ ಸಿಂಗ್

    ನ್ಯೂಕ್ಲಿಯರ್ ಶಕ್ತಿ ‘ನೋ ಫಸ್ಟ್ ಯೂಸ್’ ನೀತಿ ಭವಿಷ್ಯದಲ್ಲಿ ಬದಲಾಗಬಹುದು: ರಾಜನಾಥ್ ಸಿಂಗ್

    ನವದೆಹಲಿ: ಭಾರತ ಪರಮಾಣು ‘ಮೊದಲ ಬಳಕೆ ಇಲ್ಲ’ ಎಂಬ ಸಿದ್ಧಾಂತವನ್ನು ಪಾಲಿಸುತ್ತದೆ. ಆದರೆ ಇದು ಭವಿಷ್ಯದ ಸನ್ನಿವೇಶಗಳ ಮೇಲೆ ಅವಲಂಬಿಸಿದೆ. ಮುಂದೆ ಈ ಸಿದ್ಧಾಂತ ಬದಲಾಗಬಹುದು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

    ಇಂದು ಮಾಜಿ ಪ್ರಧಾನಿ ಅಟಲ್ ಬಿಹಾರ್ ವಾಜಪೇಯಿ ಅವರ ಪುಣ್ಯ ಸ್ಮರಣೋತ್ಸವದ ದಿನವಾದ ಹಿನ್ನೆಲೆ ರಾಜನಾಥ್ ಸಿಂಗ್ ಪೋಖ್ರಾನ್‍ಗೆ ಭೇಟಿಕೊಟ್ಟಿದ್ದರು. ಈ ವೇಳೆ ಅವರು 1998ರಲ್ಲಿ ಭಾರತ ರಹಸ್ಯವಾಗಿ ಐದು ಪರಮಾಣು ಪರೀಕ್ಷೆಗಳನ್ನು ನಡೆಸಿದೆ ಎಂದು ತಿಳಿಸಿದರು.

    ಅಟಲ್ ಜಿ ಅವರ ಪರಮಾಣು ಶಕ್ತಿಯಿಂದ ವ್ಯವಹಾರ ಪರಿಹರಿಸುವ ನೀತಿಗೆ ಪೋಖ್ರಾನ್ ಸಾಕ್ಷಿಯಾಗಿದೆ. ಇಂದಿಗೂ ನಮ್ಮಲ್ಲಿ ಪರಮಾಣು ‘ನೋ ಫಸ್ಟ್ ಯೂಸ್’ ನೀತಿಯನ್ನು ಪಾಲಿಸಲಾಗುತ್ತಿದೆ. ಆದರೆ ಭವಿಷ್ಯದಲ್ಲಿ ಏನಾಗಬಹುದು ಎಂಬುದು ಮುಂದಿನ ಸನ್ನಿವೇಶದ ಮೇಲೆ ನಿರ್ಧರವಾಗುತ್ತದೆ ಎಂದು ರಾಜನಾಥ ಸಿಂಗ್ ಹೇಳಿದರು.

    ಪೋಖ್ರಾನ್‍ಗೆ ಭೇಟಿ ನೀಡುವ ಮೊದಲು ರಾಜನಾಥ್ ಸಿಂಗ್ ಅವರು ರಾಜಸ್ತಾನದ ಜೈಸಲ್ಮೇರ್ ಗೆ ಭೇಟಿಕೊಟ್ಟಿದ್ದರು. ಅಲ್ಲಿ 5ನೇ ಅಂತರಾಷ್ಟ್ರೀಯ ಆರ್ಮಿ ಸ್ಕೌಟ್ ಮಾಸ್ಟರ್ಸ್ ಸ್ಪರ್ಧೆಯ ಮುಕ್ತಾಯ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಅವರು ಇದು ಕಾಕತಾಳಿಯದಂತೆ ಆಗಿದೆ, ನಾನು ಅಂತರಾಷ್ಟ್ರೀಯ ಆರ್ಮಿ ಸ್ಕೌಟ್ ಮಾಸ್ಟರ್ಸ್ ಸ್ಪರ್ಧೆಗೆ ಬಂದೆ. ಆದರೆ ಇಂದೇ ಅಟಲ್ ಜಿ ಅವರ ಮೊದಲ ಪುಣ್ಯಸ್ಮರಣೆಯ ದಿನವಾಗಿದೆ. ಹೀಗಾಗಿ ಪೋಖ್ರಾನ್ ನಿಂದಲೇ ಅವರಿಗೆ ನಮನ ಸಲ್ಲಿಸಲು ನಿರ್ಧರಿಸಿದೆ ಎಂದರು.

    ಎದುರಾಳಿಗಳು ಪರಮಾಣು ಶಸ್ತ್ರಾಸ್ತ್ರ ದಾಳಿ ಮಾಡುವ ಮೊದಲು ಪರಮಾಣು ಶಸ್ತ್ರಾಸ್ತ್ರವನ್ನು ಬಳಸುವಂತಿಲ್ಲ ಎಂಬದೇ ‘ನೋ ಫಸ್ಟ್ ಯೂಸ್’ ನೀತಿಯಾಗಿದೆ. 1998ರಲ್ಲಿ ಪೋಖ್ರಾನ್-2 ಪರಮಾಣು ಪರೀಕ್ಷೆ ಬಳಿಕ ‘ನೋ ಫಸ್ಟ್ ಯೂಸ್’ ನೀತಿಯನ್ನು ಭಾರತ ಸ್ವೀಕರಿಸಿತ್ತು. ಈವರೆಗೂ ಭಾರತ ಈ ನೀತಿಯನ್ನು ಚಾಚುತಪ್ಪದೆ ಪಾಲಿಸಿಕೊಂಡು ಬಂದಿದೆ. ಇದುವರೆಗೂ ಕೇವಲ ಪ್ರತಿಕಾರಕ್ಕೆ ಮಾತ್ರ ಪರಮಾಣು ಬಳಸುವ ನೀತಿಯನ್ನು ಭಾರತ ಮುಂದುವರಿಸಿಕೊಂಡು ಬಂದಿದೆ.