Tag: NTPC

  • ಎನ್‍ಟಿಪಿಸಿ ದುರಂತ- ಸಾವಿನ ಸಂಖ್ಯೆ 20ಕ್ಕೆ ಏರಿಕೆ, ರಾಯ್‍ಬರೇಲಿಯ ಆಸ್ಪತ್ರೆಗೆ ರಾಹುಲ್ ಗಾಂಧಿ ಭೇಟಿ

    ಎನ್‍ಟಿಪಿಸಿ ದುರಂತ- ಸಾವಿನ ಸಂಖ್ಯೆ 20ಕ್ಕೆ ಏರಿಕೆ, ರಾಯ್‍ಬರೇಲಿಯ ಆಸ್ಪತ್ರೆಗೆ ರಾಹುಲ್ ಗಾಂಧಿ ಭೇಟಿ

    ಲಕ್ನೋ: ಉತ್ತರಪ್ರದೇಶದ ರಾಯ್‍ಬರೇಲಿಯಲ್ಲಿ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮಕ್ಕೆ (ಎನ್‍ಟಿಪಿಸಿ)ಸೇರಿದ ಸ್ಥಾವರದಲ್ಲಿ ಬುಧವಾರದಂದು ಸ್ಫೋಟ ಸಂಭವಿಸಿದ್ದು, ಸಾವಿನ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.

    ಈವರೆಗೆ 20 ಜನ ಮೃತಪಟ್ಟಿರುವುದಾಗಿ ಜಿಲ್ಲಾ ಆಡಳಿತ ದೃಢಪಡಿಸಿದೆ. ಘಟನೆಯಲ್ಲಿ 90 ರಿಂದ 100 ಮಂದಿ ಗಾಯಗೊಂಡಿದ್ದಾರೆ. ತೀವ್ರವಾಗಿ ಸುಟ್ಟ ಗಾಯಗಳಾಗಿರುವ 22 ಮಂದಿಯನ್ನು ಲಕ್ನೋದ ಆಸ್ಪತ್ರೆಗೆ ರವಾನಿಸಲು ಸೂಚಿಸಲಾಗಿದೆ. ಇನ್ನುಳಿದ 15 ಮಂದಿ ರಾಯ್‍ಬರೇಲಿಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ಉತ್ತರಪ್ರದೇಶದ ಎಡಿಜಿ ಆನಂದ್ ಕುಮಾರ್ ಹೇಳಿದ್ದಾರೆ.

    ಮೃತರ ಸಂಖ್ಯೆ ಮತ್ತಷ್ಟು ಏರಿಕೆ ಆಗುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ. ಸೋನಿಯಾ ಗಾಂಧಿ ಪ್ರತಿನಿಧಿಸುವ ರಾಯ್‍ಬರೇಲಿಗೆ ಇಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆಗಮಿಸಿದ್ದು, ರಾಯ್‍ಬರೇಲಿಯ ಜಿಲ್ಲಾಸ್ಪತ್ರೆಯಲ್ಲಿ ಗಾಯಾಳುಗಳನ್ನ ಭೇಟಿಯಾಗಿದ್ದಾರೆ

    ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ, ಗಂಭೀರ ಗಾಯಾಳುಗಳಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ದುರಂತದಲ್ಲಿ ಮೃತಪಟ್ಟವರಿಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಈ ದುರಂತದಿಂದ ತುಂಬಾ ನೋವಾಗಿದೆ. ಗಾಯಾಳುಗಳು ಬೇಗನೆ ಗುಣಮುಖರಾಗಲಿ ಎಂದು ಟ್ವೀಟ್ ಮಾಡಿದ್ದಾರೆ.

    ಘಟನೆಗೆ ನಿರ್ದಿಷ್ಟ ಕಾರಣ ತಿಳಿಯಲು ಎನ್‍ಟಿಪಿಸಿ ತನಿಖೆ ಆರಂಭಿಸಿದೆ.

     

     

  • ಎನ್‍ಟಿಪಿಸಿ ಘಟಕದಲ್ಲಿ ಬಾಯ್ಲರ್ ಸ್ಫೋಟ: 10 ಸಾವು, 100 ಮಂದಿಗೆ ಗಾಯ

    ಎನ್‍ಟಿಪಿಸಿ ಘಟಕದಲ್ಲಿ ಬಾಯ್ಲರ್ ಸ್ಫೋಟ: 10 ಸಾವು, 100 ಮಂದಿಗೆ ಗಾಯ

    ನವದೆಹಲಿ: 30 ವರ್ಷ ಹಳೆಯ ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್ ನಿಗಮದ(ಎನ್‍ಟಿಪಿಸಿ) ಬಾಯ್ಲರ್ ಸ್ಫೋಟಗೊಂಡ ಪರಿಣಾಮ 10 ಮಂದಿ ಮೃತಪಟ್ಟು 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ರಾಯ್‍ಬರೇಲಿಯಲ್ಲಿ ನಡೆದಿದೆ.

    ಉಚಾಹಾರ್ ಘಟಕದಲ್ಲಿ ಈ ದುರಂತ ಸಂಭವಿಸಿದ್ದು, ಬಾಯ್ಲರ್ ಪೈಪ್ ಒಡೆದು ಈ ದುರ್ಘಟನೆ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ.

    ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಗಾಯಗೊಂಡವರ ಪೈಕಿ ಹಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಗಾಯಗೊಂಡವರ ಪೈಕಿ ಹಲವರ ದೇಹ ಸುಟ್ಟು ಹೋಗಿದೆ ಎಂದು ತಿಳಿಸಿದ್ದಾರೆ.

    ಗಾಯಗೊಂಡವರನ್ನು ಎನ್‍ಟಿಪಿಸಿ ಕ್ಯಾಂಪಸ್ ನಲ್ಲಿರುವ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡವರನ್ನು ಲಕ್ನೋ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಬಾಯ್ಲರ್ ಪೈಪ್ ಒಡೆದ ಬಳಿಕ ಘಟಕವನ್ನು ಈಗ ಮುಚ್ಚಲಾಗಿದೆ. 210 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಸಾಮರ್ಥ್ಯ ಹೊದಿರುವ 5 ಘಟಕ 1988ರಲ್ಲಿ ಆರಂಭಗೊಂಡಿತ್ತು. 500 ಮೆಗಾ ವ್ಯಾಟ್ ಸಾಮರ್ಥ್ಯದ  6ನೇ ಘಟಕ ಈ ವರ್ಷವೇ ಆರಂಭಗೊಳ್ಳಬೇಕಿತ್ತು.

    ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಧನ, ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.