Tag: NRI Appeal Day

  • 30 ದೇಶಗಳ ಅನಿವಾಸಿ ಕನ್ನಡಿಗರಿಂದ ಇಂದು ‘ಎನ್ಆರ್‌ಐ ಅಪೀಲ್ ಡೇ’ ಟ್ವಿಟ್ಟರ್ ಅಭಿಯಾನ

    30 ದೇಶಗಳ ಅನಿವಾಸಿ ಕನ್ನಡಿಗರಿಂದ ಇಂದು ‘ಎನ್ಆರ್‌ಐ ಅಪೀಲ್ ಡೇ’ ಟ್ವಿಟ್ಟರ್ ಅಭಿಯಾನ

    ಬೆಂಗಳೂರು: ತಮಗಿರುವ ಸಮಸ್ಯೆಗಳು ಹಾಗೂ ಬಹುಕಾಲದಿಂದ ಈಡೇರದ ಬೇಡಿಕೆಗಳ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆಯಲು 30ಕ್ಕೂ ಹೆಚ್ಚಿನ ದೇಶಗಳಲ್ಲಿ ನೆಲೆಸಿರುವ ಅನಿವಾಸಿಗಳು ಪ್ರತಿನಿಧಿಸುವ ನೂರಕ್ಕೂ ಹೆಚ್ಚಿನ ಕನ್ನಡಪರ ಸಂಘಟನೆಗಳ ಸಹಯೋಗದಲ್ಲಿ ಮತ್ತೊಮ್ಮೆ ಟ್ವಿಟರ್ ಮತ್ತು ಇ-ಮೇಲ್ ಅಭಿಯಾನ ನಡೆಸಲು ಅನಿವಾಸಿ ಕನ್ನಡಿಗರು ಮುಂದಾಗಿದ್ದಾರೆ.

    ಇಂದು ಮಧ್ಯಾಹ್ನ 3 ಗಂಟೆಗೆ (ಭಾರತೀಯ ಕಾಲಮಾನ) ಟ್ವಿಟರ್ ಅಭಿಯಾನಕ್ಕೆ ಏಕಕಾಲದಲ್ಲಿ ಚಾಲನೆ ನೀಡಿ ಸರಣಿ ಮನವಿ ಮತ್ತು ಬೇಡಿಕೆಗಳನ್ನು ಇಡಲಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್‌ ಸ್ಫೋಟ – ಬೆಂಗಳೂರಿನಲ್ಲಿ ಲಾಕ್‌ಡೌನ್‌ ಸುಳಿವು ನೀಡಿದ ಸಚಿವ ಆರ್‌.ಅಶೋಕ್‌

    ತಮ್ಮ ಕುಟುಂಬದ ಜವಾಬ್ದಾರಿ ಹೊತ್ತು ಉದ್ಯೋಗ ಹರಸಿ ವಿದೇಶಕ್ಕೆ ತೆರಳಿದರೂ ಹುಟ್ಟೂರು ಮತ್ತು ರಾಜ್ಯದ ಆಗುಹೋಗುಗಳ ಬಗ್ಗೆ ಕಾಳಜಿ ತೋರಿಸುವವರು ಅನಿವಾಸಿ ಕನ್ನಡಿಗರು. ರಾಜ್ಯದಲ್ಲಿ ನೆರೆ, ಬರ ಸೇರಿದಂತೆ ಯಾವುದೇ ಸಂಕಷ್ಟ ಬಂದೊದಗಿದರೂ ತತ್‌ಕ್ಷಣ ಸಹಾಯಹಸ್ತ ಚಾಚುವವರೇ ಲಕ್ಷಾಂತರ ಅನಿವಾಸಿಗಳು. ಆದರೆ ಆಶ್ಚರ್ಯವೆಂದರೆ ಈ ಅನಿವಾಸಿಗಳ ಬೇಡಿಕೆಗಳಿಗೆ ಸ್ಪಂದಿಸುವವರೇ ಇಲ್ಲ. ಬಹುಕಾಲದಿಂದ ಅವರ ಬೇಡಿಕೆಗಳ ಪಟ್ಟಿ ಬೆಳೆಯುತ್ತಾ ಇದ್ದರೂ ಅಧಿಕಾರಕ್ಕೆ ಬಂದ ಯಾವುದೇ ಸರ್ಕಾರ ಈ ಬಗ್ಗೆ ಗಮನ ಹರಿಸಿಲ್ಲ. ಕೊರೊನಾ ಸಂಕಷ್ಟ ಸಂದರ್ಭದಲ್ಲಂತೂ ಇವರ ಗೋಳನ್ನು ಕೇಳುವವರೇ ಇರಲಿಲ್ಲ. ಇದೇ ಕಾರಣಕ್ಕೆ ಇದೀಗ ಅನಿವಾಸಿಗಳು ಒಗ್ಗಟ್ಟಾಗಿ ತಮ್ಮ ಬೇಡಿಕೆಗಳ ಮನವಿ ಸಲ್ಲಿಸಲೆಂದೇ ಒಂದು ದಿನವನ್ನು ಆಚರಿಸಲು ನಿರ್ಧರಿಸಿದ್ದಾರೆ. ಇಂದು ‘ಎನ್ಆರ್‌ಐ ಅಪೀಲ್ ಡೇ’ಯಾಗಿ ‌ಆಚರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನದ ಮೂಲಕ ವಿಶಿಷ್ಟ ರೀತಿಯಲ್ಲಿ ಕರ್ನಾಟಕ ಸರ್ಕಾರವನ್ನು ಎಚ್ಚರಿಸಲಿದ್ದಾರೆ. ಈ ಬಾರಿಯಾದರೂ ತಮ್ಮನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು, ಮಂತ್ರಿಗಳು ಸ್ಪಂದಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ.

    2021ರ ಜನವರಿ‌ 2ರಂದು ಮೊದಲ ಬಾರಿ ‘ಎನ್ಆರ್‌ಐ ಅಪೀಲ್ ಡೇ’ ಯಶಸ್ವೀ ಟ್ವಿಟ್ಟರ್ ಅಭಿಯಾನ ನಡೆಸಿ ಮುಖ್ಯಮಂತ್ರಿ ಯಡಿಯೂರಪ್ಪನವರ ಗಮನಸೆಳೆದಿದ್ದ ಅನಿವಾಸಿ ಕನ್ನಡಿಗರಿಗೆ ‘ಖಂಡಿತಾ ನಿಮ್ಮ ಬೇಡಿಕೆ ಈಡೇರಿಸುವೆ’ ಎಂಬ ಭರವಸೆ ಸಿಕ್ಕಿದ್ದರೂ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಹೊಸ ಮುಖ್ಯಮಂತ್ರಿಯಾದ ಬಸವರಾಜ ಬೊಮ್ಮಾಯಿ ಅವರಿಗೆ ಮನವರಿಕೆ ಮಾಡಿಕೊಡಲು ಮತ್ತೊಮ್ಮೆ ಟ್ವಿಟ್ಟರ್ ಅಭಿಯಾನ ನಡೆಸಲೇಬೇಕಾದ ಅನಿವಾರ್ಯತೆ ಇದೆ. ಇದನ್ನೂ ಓದಿ: ದೇವರೊಂದಿಗೆ ದೇವರಾದ ಪುನೀತ್ ರಾಜ್‌ಕುಮಾರ್

    13 ವರ್ಷಗಳ ಹಿಂದೆ ರಾಜ್ಯ ಸರ್ಕಾರ ವಿದೇಶದಲ್ಲಿ ನೆಲೆಸಿರುವ ಕನ್ನಡಿಗರ ಕ್ಷೇಮಾಭಿವೃಧ್ಧಿಯಗಾಗಿ ಸ್ಥಾಪಿತವಾದ ಸಮಿತಿಯೇ ಕನ್ನಡಿಗರ ಅನಿವಾಸಿ ಭಾರತೀಯ ಸಮಿತಿ. ಸಿಎಂ ಅವರ ನೇರ ನಿಯಂತ್ರಣಕ್ಕೆ ಒಳಪಡುವ ಈ ಸಮಿತಿಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯಲ್ಲಿ ಬಂದರೂ ಮುಖ್ಯಮಂತ್ರಿಗಳೇ ಇದರ ಅಧ್ಯಕ್ಷರು. ಮುಖ್ಯಮಂತ್ರಿಗಳಿಗೆ ಸರ್ಕಾರದ ಇತರ ಗಂಭೀರ ಜವಾಬ್ದಾರಿಗಳಿರುವ ಕಾರಣ ಉಪಾಧ್ಯಕ್ಷರೇ ಈ ಸಮಿತಿಗೆ ಬೆನ್ನೆಲುಬು. ಆದರೆ ಕಳೆದ ನಾಲ್ಕು ವರ್ಷಗಳಿಂದ ಈ ಸಮಿತಿಗೆ ಉಪಾಧ್ಯಕ್ಷರೇ ಇಲ್ಲದೇ ಅನಾಥವಾಗಿದೆ.

    ಅನಿವಾಸಿ ಕನ್ನಡಿಗರಿಗೆ ಅದರಲ್ಲೂ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸುವ ಅನಿವಾಸಿಗಳಿಗೆ ವಿಮಾನ ನಿಲ್ದಾಣದಲ್ಲಿ ವಿನಾಕಾರಣ ಕಿರುಕುಳ ನೀಡುವ ಹಲವು ದೂರುಗಳು ನಿರಂತರವಾಗಿ ಬರುತ್ತಿವೆ. ಅಧಿಕಾರಿಗಳು ತಪಾಸಣೆಯ ಹೆಸರಿನಲ್ಲಿ ಪ್ರಯಾಣಿಕರ ಲಗೇಜು ಮಾತ್ರವಲ್ಲದೇ ದಿನಬಳಕೆಯ ವಸ್ತುಗಳನ್ನೂ ವಶಪಡಿಸಿಕೊಂಡು ವಿಚಾರಣೆ ನಡೆಸುವುದು ಕಂಡುಬರುತ್ತಿದೆ. ಈ ರೀತಿ ಬೇಜವಾಬ್ದಾರಿತನದಿಂದ ವರ್ತಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ವಿನಾಕಾರಣ ಕಿರುಕುಳ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂಬುದು ಅನಿವಾಸಿ ಕನ್ನಡಿಗರ ಬೇಡಿಕೆ.

    ಅನಿವಾಸಿ ಕನ್ನಡಿಗರ ಗುರುತಿನ ಚೀಟಿಯಾಗಿ ಜಾರಿಗೆ ಬಂದ ‘Norka Card’ ವಿತರಣೆಯಾಗದೆ ಉಳಿದಿದ್ದು, ಪ್ರತಿಯೊಬ್ಬ ಅನಿವಾಸಿ ಕನ್ನಡಿಗರಿಗೂ ವಿತರಣೆಯಾಗಿ ಉಪಯುಕ್ತವಾಗಿರಬೇಕು. ಅದೇ ರೀತಿ ಅನಿವಾಸಿ ಕನ್ನಡಿಗರು ಹೆಚ್ಚಿನ ಸಂದ್ರತೆಯಲ್ಲಿರುವ ದೇಶದಲ್ಲಿ ಕನ್ನಡ ಭವನ ನಿರ್ಮಾಣವಾಗಬೇಕು. ಆ ಮೂಲಕ ಕನ್ನಡ ಪಾಠ ಶಾಲೆ, ಕನ್ನಡ ಕಲೆ ಸಂಸ್ಕೃತಿಯ ನಿರಂತರ ಪಸರುವಿಕೆಗೆ ನಾಂದಿಯಾಗಬೇಕು. ಈ ರೀತಿಯ ಹಲವು ಬೇಡಿಕೆಗಳನ್ನು ಈಡೇರಿಸಲು ವಿಶ್ವದಾದ್ಯಂತ ಅನಿವಾಸಿ ಕನ್ನಡಿಗರಿಂದ ಏಕಕಾಲದಲ್ಲಿ ಅಭಿಯಾನ ನಡೆಯಲಿದೆ.

  • 30ಕ್ಕೂ ಹೆಚ್ಚು ದೇಶಗಳ ಅನಿವಾಸಿ ಕನ್ನಡಿಗರ ಟ್ವಿಟ್ಟರ್ ಅಭಿಯಾನ

    30ಕ್ಕೂ ಹೆಚ್ಚು ದೇಶಗಳ ಅನಿವಾಸಿ ಕನ್ನಡಿಗರ ಟ್ವಿಟ್ಟರ್ ಅಭಿಯಾನ

    ಬೆಂಗಳೂರು: ಇದೇ ಮೊದಲ ಬಾರಿಗೆ ವಿಶ್ವದಾದ್ಯಂತವಿರುವ ಮೂವತ್ತಕ್ಕೂ ಹೆಚ್ಚು ದೇಶಗಳ ನೂರಕ್ಕೂ ಹೆಚ್ಚು ಅನಿವಾಸಿ ಕನ್ನಡಪರ ಸಂಘಟನೆಗಳು ಒಗ್ಗಟ್ಟಾಗಿ ಒಂದೇ ದಿನ, ಒಂದೇ ಧ್ವನಿಯೊಂದಿಗೆ ಟ್ವಿಟ್ಟರ್ ಮತ್ತು ಇಮೇಲ್ ಮೂಲಕ ಕರ್ನಾಟಕ ಸರಕಾರಕ್ಕೆ ಬೇಡಿಕೆಯನ್ನು ಈಡೇರಿಸಲು ಒತ್ತಾಯಿಸಿ ಇಂದು ಅಭಿಯಾನ ನಡೆಸಲಾಯಿತು.

    ‘ಎನ್‍ಆರ್‍ಐ ಅಪೀಲ್ ಡೇ’ #NRIappealDay ಎಂಬ ಹ್ಯಾಷ್ ಟ್ಯಾಗ್ ನೊಂದಿಗೆ ಜನವರಿ 2ನ್ನು ಅಂತರಾಷ್ಟ್ರೀಯ ಅನಿವಾಸಿ ಕನ್ನಡಿಗರ ಮನವಿ ದಿನವಾಗಿ ಆಚರಿಸಲಾಯಿತು. ಅಭಿಯಾನದಲ್ಲಿ ಅಮೆರಿಕ, ಯುಎಇ, ಬ್ರಿಟನ್, ಆಸ್ಟ್ರೇಲಿಯಾ, ಕತಾರ್, ಕುವೈಟ್, ಇಟಲಿ, ಜರ್ಮನಿ, ಕೀನ್ಯಾ, ದಕ್ಷಿಣ ಆಫ್ರಿಕಾ, ಉಗಾಂಡಾ, ಇಥಿಯೋಪಿಯ, ಡೆನ್ಮಾರ್ಕ್, ನೈಜೀರಿಯಾ, ಹಾಲೆಂಡ್, ಓಮನ್, ಬಹರೈನ್, ಇಂಡೋನೇಷಿಯಾ, ಸೌದಿ ಅರೇಬಿಯಾ, ಇಸ್ರೇಲ್, ಈಜಿಪ್ಟ್, ಸ್ವಿಜಲ್ರ್ಯಾಂಡ್, ಘಾನ, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ಹಾಂಕಾಂಗ್, ಸಿಂಗಪೂರ್, ಸ್ಕಾಟ್ಲ್ಯಾಂಡ್, ನಾರ್ವೆ, ನೆದಲ್ರ್ಯಾಂಡ್, ಸೌತ್ ಕೊರಿಯಾ ಸೇರಿದಂತೆ ಇನ್ನಿತರ ದೇಶದ ನೂರಕ್ಕೂ ಹೆಚ್ಚು ಕನ್ನಡ ಪರ ಸಂಘಟನೆಗಳು ಭಾಗವಹಿಸಿದ್ದವು.

    ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಗೆ ಕೂಡಲೇ ಉಪಾಧ್ಯಕ್ಷರನ್ನ ನೇಮಿಸಬೇಕು, ಉಪಾಧ್ಯಕ್ಷ ಸ್ಥಾನಕ್ಕೆ ಅನಿವಾಸಿಗಳ ಕಷ್ಟ ಬಲ್ಲ ಒಬ್ಬ ಅನಿವಾಸಿ ಕನ್ನಡಿಗರನ್ನೇ ನೇಮಿಸಬೇಕು. ನೆನೆಗುದಿಗೆ ಬಿದ್ದಿರುವ ಎನ್‍ಆರ್‍ಕೆ ಕಾರ್ಡ್ ಯೋಜನೆಯನ್ನು ತ್ವರಿತವಾಗಿ ಜಾರಿಗೆಗೊಳಿಸಬೇಕು. ಹೆಚ್ಚು ಅನಿವಾಸಿ ಕನ್ನಡಿಗರ ಸಾಂದ್ರತೆ ಇರುವ ದೇಶಗಳಲ್ಲಿ ಕನ್ನಡ ಭವನ ನಿರ್ಮಾಣ ಮಾಡಿ ಕನ್ನಡ ಪಾಠಶಾಲೆ ನಡೆಸಲು ವ್ಯವಸ್ಥೆ ಮಾಡಬೇಕು ಎಂಬ ನಾಲ್ಕು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರವನ್ನು ಆಗ್ರಹಿಸಲಾಯಿತು.

  • ಅನಿವಾಸಿ ಕನ್ನಡಿಗರ #NRIappealDay ಅಭಿಯಾನಕ್ಕೆ ಕರವೇ ಬೆಂಬಲ

    ಅನಿವಾಸಿ ಕನ್ನಡಿಗರ #NRIappealDay ಅಭಿಯಾನಕ್ಕೆ ಕರವೇ ಬೆಂಬಲ

    ಬೆಂಗಳೂರು: ಸತತ ಕೋರಿಕೆ, ಹಲವಾರು ಮನವಿಗಳ ನಂತರವೂ ಹಲವು ವರ್ಷಗಳಿಂದ ಕಡೆಗಣಿಸಲ್ಪಟ್ಟು, ಸ್ಪಂದನೆ ಸಿಗದೇ ಹೋದರೆ ಗಮನ ಸೆಳೆಯಬೇಕಾದರೆ ವಿಭಿನ್ನ ರೀತಿಯ ಪ್ರಯತ್ನ ಮಾಡಬೇಕಾಗುತ್ತದೆ ಅಂತದ್ದೇ ಒಂದು ಪ್ರಯತ್ನಕ್ಕೆ ವಿಶ್ವದಾದ್ಯಂತ ಇರುವ ಅನಿವಾಸಿ ಕನ್ನಡಿಗರು ಕೈಹಾಕಿದ್ದಾರೆ. ಇದೇ ಮೊದಲ ಬಾರಿಗೆ ವಿಶ್ವದಾದ್ಯಂತವಿರುವ ಮೂವತ್ತಕ್ಕೂ ಹೆಚ್ಚು ದೇಶಗಳ ನೂರಕ್ಕೂ ಹೆಚ್ಚು ಅನಿವಾಸಿ ಕನ್ನಡಪರ ಸಂಘಟನೆಗಳು ಒಗ್ಗಟ್ಟಾಗಿ ಒಂದೇ ದಿನ ಒಂದೇ ಧ್ವನಿಯೊಂದಿಗೆ ಟ್ವಿಟರ್ ಮತ್ತು ಇಮೇಲ್ ಮೂಲಕ ಕರ್ನಾಟಕ ಸರ್ಕಾರಕ್ಕೆ ಬೇಡಿಕೆಯನ್ನು ಈಡೇರಿಸಲು ಒತ್ತಾಯಿಸುವ ಅಭಿಯಾನವನ್ನು ಜನವರಿ 2ರಂದು ಮಧ್ಯಾಹ್ನ ನಡೆಸಲು ತೀರ್ಮಾನಿಸಿದ್ದಾರೆ. #NRIappealDay ಎಂಬ ಹ್ಯಾಷ್ ಟ್ಯಾಗ್ ನೊಂದಿಗೆ ಜನವರಿ 2ರಂದು ಅಂತರಾಷ್ಟ್ರೀಯ ಅನಿವಾಸಿ ಕನ್ನಡಿಗರ ಮನವಿ ದಿನವಾಗಿ ಆಚರಿಸಲು ಮುಂದಾಗಿದ್ದಾರೆ.

    ಅನಿವಾಸಿ ಕನ್ನಡಿಗರಿಗಾಗಿಯೇ ಕರ್ನಾಟಕ ಸರ್ಕಾರದಲ್ಲಿ ಅನಿವಾಸಿ ಭಾರತೀಯ ಸಮಿತಿ ಇದೆ(ಕೆಎನ್‍ಆರ್‍ಐ ಫೋರಂ). ಅದರ ಅಧ್ಯಕ್ಷರು ಸ್ವತಃ ಮುಖ್ಯಮಂತ್ರಿಗಳು, ಆದರೆ ಮುಖ್ಯಮಂತ್ರಿಗಳಿಗೆ ಸರ್ಕಾರದ ಇತರ ಗಂಭೀರ ಜವಾಬ್ದಾರಿಗಳಿರುವ ಕಾರಣ ಕೆಎನ್‍ಆರ್‍ಐ ಸಮಿತಿಯಲ್ಲಿ ಉಪಾಧ್ಯಕ್ಷರಿಗೇ ಹೆಚ್ಚಿನ ಜವಾಬ್ದಾರಿ. ಆದರೆ ಕಳೆದ ಮೂರು ವರ್ಷಗಳ ಹಿಂದೆ ತೆರವುಗೊಂಡ ಉಪಾಧ್ಯಕ್ಷ ಸ್ಥಾನಕ್ಕೆ ಹೊಸದಾಗಿ ಯಾರನ್ನೂ ನೇಮಕವೇ ಮಾಡಿಲ್ಲ. ಹಲವಾರು ಕನ್ನಡಪರ ಸಂಘಟನೆಗಳು ಈ ಕುರಿತು ಸರ್ಕಾರದ ಗಮನ ಸೆಳೆದಿದ್ದರೂ ಯಾರು ಸ್ಪಂದಿಸುವ ಗೋಜಿಗೆ ಹೋಗಿರಲಿಲ್ಲ. ಇದೀಗ ಶತಾಯಗತಾಯ ಬೇಡಿಕೆಯನ್ನು ಕರ್ನಾಟಕ ಸರ್ಕಾರಕ್ಕೆ ತಲುಪಿಸಿ ಸೇರಿಸಿಕೊಳ್ಳಬೇಕೆಂದು ಈಡೇರಿಸಿ ಕೊಳ್ಳಬೇಕೆಂದು ಅನಿವಾಸಿ ಕನ್ನಡಿಗರು ತೀರ್ಮಾನಿಸಿದಂತಿದೆ. ಹಾಗಾಗಿ ಈ ವಿಭಿನ್ನ ಅಭಿಯಾನದ ಮೂಲಕ ಒಗ್ಗಟ್ಟಾಗಿ ಧ್ವನಿ ಎತ್ತಲಿದ್ದಾರೆ.

    ಅಂತರರಾಷ್ಟ್ರೀಯ ಕನ್ನಡಿಗಾಸ್ ಫೆಡರೇಷನ್ ಕರೆಕೊಟ್ಟಿರುವ ಈ ಅಭಿಯಾನಕ್ಕೆ ಈಗಾಗಲೇ ಅಮೆರಿಕ, ಯುಎಇ, ಬ್ರಿಟನ್, ಆಸ್ಟ್ರೇಲಿಯಾ, ಕತಾರ್, ಕುವೈಟ್, ಇಟಲಿ, ಜರ್ಮನಿ, ಕೀನ್ಯಾ, ದಕ್ಷಿಣ ಆಫ್ರಿಕಾ, ಉಗಾಂಡಾ, ಇಥಿಯೋಪಿಯ, ಡೆನ್ಮಾರ್ಕ್, ನೈಜೀರಿಯಾ, ಹಾಲೆಂಡ್, ಓಮನ್, ಬಹರೈನ್, ಇಂಡೋನೇಷಿಯಾ, ಸೌದಿ ಅರೇಬಿಯಾ, ಇಸ್ರೇಲ್, ಈಜಿಪ್ಟ್, ಸ್ವಿಜಲ್ರ್ಯಾಂಡ್, ಘಾನ, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ಹಾಂಕಾಂಗ್, ಸಿಂಗಪೂರ್, ಸ್ಕಾಟ್ಲ್ಯಾಂಡ್, ನಾರ್ವೆ, ನೆದಲ್ರ್ಯಾಂಡ್, ಸೌತ್ ಕೊರಿಯಾ ಇನ್ನಿತರ ದೇಶದ ನೂರಕ್ಕೂ ಹೆಚ್ಚು ಕನ್ನಡ ಪರ ಸಂಘಟನೆಗಳು ಬೆಂಬಲ ಘೋಷಿಸಿವೆ.

    ‘ಅನಿವಾಸಿಗಳಿಗಾಗಿ ಒಂದು ದಿನ’ ಎಂದು ದೇಶ ವಿದೇಶಗಳಲ್ಲಿ ಇರುವ ಎಲ್ಲ ಕನ್ನಡಿಗರೊಂದಿಗೆ ಅಭಿಯಾನದಲ್ಲಿ ಭಾಗವಹಿಸಲು ವಿನಂತಿಸಿದ್ದಾರೆ. ಅನಿವಾಸಿ ಕನ್ನಡಿಗರ ಈ ಅಭಿಯಾನವನ್ನು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರು ಬೆಂಬಲಿಸಿದ್ದು, ಈ ಟ್ವಿಟ್ಟರ್ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಕರವೇ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಸರ್ಕಾರ ಅನಿವಾಸಿ ಕನ್ನಡಿಗರ ಈ ಕೂಗನ್ನು ಆಲಿಸಬೇಕು. ರಾಜ್ಯ ಸರ್ಕಾರ ಅನಿವಾಸಿ ಭಾರತೀಯ ಸಮಿತಿಗೆ ಉಪಾಧ್ಯಕ್ಷರನ್ನು ತಕ್ಷಣವೇ ನೇಮಿಸಿ, ಸರ್ಕಾರ ಮತ್ತು ಅನಿವಾಸಿ ಕನ್ನಡಿಗರ ನಡುವಿನ ಸಂಬಂಧ-ಸಂವಹನವನ್ನು ಹೆಚ್ಚು ಮಾಡಬೇಕು ಎಂದು ವಿನಂತಿಸಿದ್ದಾರೆ.