Tag: Nrega

  • ನರೇಗಾ ಕಾಮಗಾರಿಯಲ್ಲಿ ಕೋಟ್ಯಂತರ ರೂ. ಗೋಲ್ಮಾಲ್- ಅಧಿಕಾರಿಗಳಿಬ್ಬರ ವಿರುದ್ಧ ಎಫ್‌ಐಆರ್

    ನರೇಗಾ ಕಾಮಗಾರಿಯಲ್ಲಿ ಕೋಟ್ಯಂತರ ರೂ. ಗೋಲ್ಮಾಲ್- ಅಧಿಕಾರಿಗಳಿಬ್ಬರ ವಿರುದ್ಧ ಎಫ್‌ಐಆರ್

    ರಾಯಚೂರು: ಜಿಲ್ಲೆಯ ದೇವದುರ್ಗ (Devadurga) ತಾಲೂಕಿನಲ್ಲಿ 2020-21 ರಿಂದ 2022-23ರವರೆಗೆ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಲ್ಲಿ ಮಹಾ ಲೂಟಿ ನಡೆದಿರುವುದು ವಿಶೇಷ ಸಾಮಾಜಿಕ ಲೆಕ್ಕ ಪರಿಶೋಧನಾ ಸಮಿತಿ ವರದಿಯಲ್ಲಿ ಬಯಲಾದ ಬೆನ್ನಲ್ಲೇ ದೇವದುರ್ಗ ತಾಲೂಕು ಪಂಚಾಯ್ತಿಯ (Taluk Panchayat) ಹಿಂದಿನ ಇಬ್ಬರು ಅಧಿಕಾರಿಗಳ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ.

    ಹಿಂದಿನ ಇಓ ಪಂಪಾಪತಿ ಹಿರೇಮಠ ಹಾಗೂ ಸಹಾಯಕ ನಿರ್ದೇಶಕ ಬಸಣ್ಣ ವಿರುದ್ಧ ಪ್ರಕರಣ ದಾಖಲಾಗಿದೆ. ನರೇಗಾ ಕಾಮಗಾರಿಗಳ ಒಟ್ಟು 49.29 ಕೋಟಿ ರೂ. ಸರ್ಕಾರದ ಹಣ ನಷ್ಟ ಮಾಡಿದ ಆರೋಪ ಹಿನ್ನೆಲೆ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೇವದುರ್ಗ ತಾಲೂಕಿನ 33 ಗ್ರಾ.ಪಂ ನರೇಗಾ (NREGA) ಕಾಮಗಾರಿಯಲ್ಲಿ ಲೂಟಿಯಾಗಿರುವುದು ಬಯಲಾಗಿದ್ದು, ದೇವದುರ್ಗ ತಾ.ಪಂ ಸಹಾಯಕ ನಿರ್ದೇಶಕ ಅಣ್ಣಾರಾವ್ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಇಂದು ಬೆಂಗಳೂರಲ್ಲಿ 2ನೇ ದಿನದ ಕಂಬಳ – ಏನೇನಿದೆ ಕಾರ್ಯಕ್ರಮ?

    115 ಕಾಮಗಾರಿಗಳು ಅನುಷ್ಠಾನಗೊಳ್ಳದೇ ಇದ್ದರೂ 66.86 ಕೋಟಿ ರೂ. ಪಾವತಿ ಮಾಡಲಾಗಿದೆ. ಅಸ್ತಿತ್ವದಲ್ಲೇ ಇರದ ಮಾರುತೇಶ್ವರ ಎಂಟರ್ಪ್ರೈಸ್ ಸಾಮಗ್ರಿ ಖರೀದಿ ಅಂತ 102 ಕೋಟಿ ರೂ. ಪಾವತಿ ಮಾಡಿದ್ದು, 19.26 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಕಡತಗಳೇ ಇಲ್ಲಾ. ಈ ಎಲ್ಲಾ ಗೋಲ್‌ಮಾಲ್‌ಗಳ ಹಿನ್ನೆಲೆ ಜಿಲ್ಲಾ ಪಂಚಾಯ್ತಿ ಸಿಇಓ ನಿರ್ದೇಶನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ. ಇದನ್ನೂ ಓದಿ: ಹಣ ಲಪಟಾಯಿಸಿದ್ರೂ ಬಿಡದಿ ಇನ್ಸ್‌ಪೆಕ್ಟರ್‌ ಸಸ್ಪೆಂಡ್ ಯಾಕಿಲ್ಲ?- ಭ್ರಷ್ಟನಿಗೆ ರಾಜಕೀಯ ರಕ್ಷಣೆ ಎಂದ ಮಾಜಿ ಶಾಸಕ

  • ನರೇಗಾ ಬಿಲ್ ಪಾವತಿಗೆ ಗ್ರಾ.ಪಂ ಅಧಿಕಾರಿಯಿಂದ ಲಂಚಕ್ಕೆ ಬೇಡಿಕೆ- ಹಣವಿಲ್ಲದೆ ಎತ್ತುಗಳನ್ನು ನೀಡಲು ಮುಂದಾದ ರೈತ

    ನರೇಗಾ ಬಿಲ್ ಪಾವತಿಗೆ ಗ್ರಾ.ಪಂ ಅಧಿಕಾರಿಯಿಂದ ಲಂಚಕ್ಕೆ ಬೇಡಿಕೆ- ಹಣವಿಲ್ಲದೆ ಎತ್ತುಗಳನ್ನು ನೀಡಲು ಮುಂದಾದ ರೈತ

    ಬೀದರ್: ನರೇಗಾ (NREGA) ಬಿಲ್ ಪಾವತಿಸಲು ಲಂಚಕ್ಕೆ (Bribe) ಬೇಡಿಕೆಯನ್ನಿಟ್ಟ ಗ್ರಾಮ ಪಂಚಾಯತಿ ಅಧಿಕಾರಿಗೆ ನೀಡಲು ಹಣವಿಲ್ಲದೆ ತನ್ನ ಎರಡು ಎತ್ತುಗಳನ್ನು (Ox) ಲಂಚದ ರೂಪದಲ್ಲಿ ನೀಡಲು ರೈತ ಮುಂದಾದ ಘಟನೆ ಬೀದರ್ (Bidar) ಜಿಲ್ಲೆಯ ಬಸವಕಲ್ಯಾಣ ಪಟ್ಟಣದ ತಾಲೂಕು ಪಂಚಾಯತ್ ಕಚೇರಿ ಬಳಿ ನಡೆದಿದೆ.

    ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಬಗದೂರಿ ಗ್ರಾಮದ ರೈತ ಪ್ರಶಾಂತ ಬಿರಾದಾರ ತನ್ನ ಎರಡು ಎತ್ತುಗಳನ್ನು ಲಂಚದ ರೂಪದಲ್ಲಿ ನೀಡಲು ಮುಂದಾಗಿ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ. ಉದ್ಯೋಗ ಖಾತರಿ ಯೋಜನೆಯಲ್ಲಿ ರೈತನ ಜಮೀನಿಗೆ ತಡೆಗೋಡೆ ನಿರ್ಮಾಣ ಮಾಡಲಾಗಿದ್ದು, ಈ ಕಾಮಗಾರಿಗೆ ಒಂದು 1 ಲಕ್ಷ ರೂ. ಅನುದಾನ ಮಂಜೂರಾಗಿತ್ತು. 1 ಲಕ್ಷ ರೂ. ಅನುದಾನದ ಪೈಕಿ 55 ಸಾವಿರ ಹಣ ಮಾತ್ರ ಅಧಿಕಾರಿಗಳು ನೀಡಿದ್ದು, ಉಳಿದ 45 ಸಾವಿರ ಹಣ ನೀಡಲು ಗ್ರಾ.ಪಂ ಅಧಿಕಾರಿ (Grampanchayat Officer) ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ. ಇದರಿಂದ ಬೇಸತ್ತ ರೈತ ತನ್ನ ಎರಡು ಎತ್ತುಗಳನ್ನು ಲಂಚದ ರೂಪದಲ್ಲಿ ನೀಡಲು ಮುಂದಾಗಿದ್ದಾರೆ. ಇದನ್ನೂ ಓದಿ: ಡಿಸ್ನಿಯಲ್ಲೂ ಶುರುವಾಯ್ತು ಜಾಬ್ ಕಟ್ – ಮುಂದಿನ 4 ದಿನದಲ್ಲಿ 7,000 ಉದ್ಯೋಗಿಗಳು ವಜಾ 

    ರೈತ ತನ್ನ ಎರಡು ಎತ್ತುಗಳ ಸಮೇತ ತಾಲೂಕು ಪಂಚಾಯತ್‌ಗೆ ಆಗಮಿಸಿದ್ದು, ಲಂಚದ ರೂಪದಲ್ಲಿ ಈ ಎರಡು ಎತ್ತುಗಳನ್ನು ತೆಗೆದುಕೊಂಡು ಉಳಿದ 45 ಸಾವಿರ ಹಣ ನೀಡಿ ಎಂದು ಪಟ್ಟು ಹಿಡಿದಿದ್ದಾರೆ. ಈ ಘಟನೆಯಿಂದಾಗಿ ಕೆಲ ಕಾಲ ತಾ.ಪಂ ಅಧಿಕಾರಿಗಳಿಗೆ ಮುಜುಗರ ಉಂಟಾಗಿದ್ದು, ಸುದ್ದಿ ತಿಳಿದು ತಾ.ಪಂ ಎಡಿ ಸಂತೋಷ್ ಚವ್ಹಾಣ್ ಸ್ಥಳಕ್ಕೆ ಬಂದು ರೈತನಿಗೆ ಬಿಲ್ ಪಾವತಿಸುವುದಾಗಿ ಭರವಸೆ ನೀಡಿ ರೈತನನ್ನು ಮನೆಗೆ ಕಳುಹಿಸಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಪ್ರತಿಷ್ಠಿತ ಉದ್ಯಮಿ ಗಡಿಪಾರು!

  • ಇಂಜಿನೀಯರ್ ಬಾಳಿಗೆ ಆಸರೆಯಾದ ನರೇಗಾ – ಹೆಚ್ಚಿನ ವಿದ್ಯಾಭ್ಯಾಸಕ್ಕೆ ಕೂಲಿ ಹಣ ಬಳಕೆ

    ಇಂಜಿನೀಯರ್ ಬಾಳಿಗೆ ಆಸರೆಯಾದ ನರೇಗಾ – ಹೆಚ್ಚಿನ ವಿದ್ಯಾಭ್ಯಾಸಕ್ಕೆ ಕೂಲಿ ಹಣ ಬಳಕೆ

    – ಲಾಕ್‍ಡೌನ್ ಕಷ್ಟದಲ್ಲಿ ಕುಟುಂಬಕ್ಕೆ ಆಸರೆ

    ಕೊಪ್ಪಳ: ಕೋವಿಡ್ ಹಿನ್ನೆಲೆಯಲ್ಲಿ ಸಾಕಷ್ಟು ಜನ ನಿರುದ್ಯೋಗಿಗಳಾಗಿದ್ದು, ಕೆಲಸದ ನಿರೀಕ್ಷೆಯಲ್ಲಿ ಇದ್ದ ಪದವೀಧರರಿಗೂ ಮಹಾಮಾರಿ ಕೊರೊನಾ ಸಂಕಷ್ಟವನ್ನು ಉಂಟು ಮಾಡಿತ್ತು. ಆದರೆ ಇಂತಹ ಪರಿಸ್ಥಿತಿಯಲ್ಲಿ ಇಂಜಿನೀಯರಿಂಗ್ ಮುಗಿಸಿ ಕೆಲಸದ ನಿರೀಕ್ಷೆಯಲ್ಲಿದ್ದ ಯುವಕನಿಗೆ ಸರ್ಕಾರದ ನರೇಗಾ ಯೋಜನೆಯು ಆಸರೆ ಆಗಿದೆ.

    ಕೊಪ್ಪಳ ಗಂಗಾವತಿ ತಾಲೂಕಿನ ಸಣಾಪೂರ ಗ್ರಾಮದ ಬಡ ಕುಟುಂಬದ ನಿವಾಸಿ ರಾಮಾಂಜನೇಯ ಬೆಂಗಳೂರಿನಲ್ಲಿ ಬಿಇ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದರು. ಬಿಇ ಮುಗಿಸಿಕೊಂಡು ಕೆಲಸಕ್ಕೆ ಹುಡುಕುವ ವೇಳೆಯಲ್ಲಿಯೇ ಕೋವಿಡ್ ಅಲೆಯಿಂದಾಗಿ ಲಾಕ್‍ಡೌನ್ ಘೋಷಣೆ ಆಯ್ತು. ಉದ್ಯೋಗ ಇಲ್ಲದೆ ಮಾನಸಿಕವಾಗಿ ನೊಂದ ರಾಮಾಂಜನೇಯ ಬರಿಗೈಯಲ್ಲಿ ಗ್ರಾಮಕ್ಕೆ ವಾಪಸ್ಸ ಆಗಮಿಸಿದ್ದರು. ಉದ್ಯೋಗ ಇಲ್ಲದೆ ಗ್ರಾಮದಲ್ಲಿ ತಿಂಗಳುಗಳ ಕಾಲ ಕಳೆದ ವಿದ್ಯಾರ್ಥಿಗೆ ಸದ್ಯ ಉದ್ಯೋಗ ಖಾತರಿ ಯೋಜನೆಯು ಆಸರೆಯಾಗಿದೆ.

    ಗ್ರಾಮದಲ್ಲಿ ವಿದ್ಯಾರ್ಥಿಯ ಕುಟುಂಬಸ್ಥರು, ಗ್ರಾಮಸ್ಥರು ನರೇಗಾ ಯೋಜನೆಯಲ್ಲಿ ಕೆಲಸ ಮಾಡುವುದನ್ನು ಕಂಡು ರಾಮಾಂಜನೇಯ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ತಾನು ಕೂಡ ನರೇಗಾ ಯೋಜನೆಯಲ್ಲಿ ಕೆಲಸ ಮಾಡಲು ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಅಧಿಕಾರಿಗಳು ನಿಯಮಗಳ ಪ್ರಕಾರ ಅರ್ಜಿಯನ್ನು ಪಡೆದುಕೊಂಡು, ವಿದ್ಯಾರ್ಥಿಗೆ ಕೆಲಸವನ್ನು ನೀಡಿದ್ದಾರೆ. ಕಳೆದ ಒಂದು ವರ್ಷದಿಂದ ನರೇಗಾ ಯೋಜನೆಯಡಿಯಲ್ಲಿ ಕೆಲಸ ಮಾಡುತ್ತಿರುವ ರಾಮಾಂಜನೇಯ ಬರುವ ಕೂಲಿ ಹಣದಲ್ಲಿ ಕುಟುಂಬಕ್ಕೆ ಆಸರೆಯಾಗುವುದರ ಜೊತೆಗೆ ಆತನ ಹೆಚ್ಚಿನ ವಿದ್ಯಾಭ್ಯಾಸಕ್ಕೂ ಕೂಡ ಅನುಕೂಲವಾಗಿದೆ.

    ಆನ್‍ಲೈನ್ ಕ್ಲಾಸ್‍ಗೂ ಅನುಕೂಲ: ಹೊರಗಡೆ ಕೆಲಸ ಇಲ್ಲದೆ ಮನೆಯಲ್ಲಿ ಇದ್ದ ರಾಮಾಂಜನೇಯ ನರೇಗಾದಡಿಯಲ್ಲಿ ಕೆಲಸ ಪಡೆದುಕೊಂಡಿದ್ದಾರೆ. ಕೆಲಸಕ್ಕೆ ತಕ್ಕ ಕೂಲಿಯನ್ನು ನೇರವಾಗಿ ಖಾತೆಗೆ ಜಮಾ ಆಗುತ್ತಿರೋದರಿಂದ ರಾಮಾಂಜನೇಯನಿಗೆ ಸಾಕಷ್ಟು ಅನುಕೂಲವಾಗಿದೆ. ಹೆಚ್ಚಿನ ವಿದ್ಯಾಭ್ಯಾಸ ಮಾಡುವ ಆಸೆಯನ್ನು ಹೊಂದಿರುವ ವಿದ್ಯಾರ್ಥಿಗೆ ನರೇಗಾದಿಂದ ಆರ್ಥಿಕ ಸಹಾಯಕ್ಕೆ ಆಗುತ್ತಿರುವುದರಿಂದ ಸದ್ಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಯನ್ನು ನಡೆಸಿದ್ದಾರೆ. ಬರುವ ಕೂಲಿ ಹಣದಲ್ಲಿ ಕುಟುಂಬಕ್ಕೆ ಒಂದಿಷ್ಟು ನೀಡಿ, ತನ್ನ ಅಭ್ಯಾಸಕ್ಕೂ ಕೂಡ ಬಳಕೆ ಮಾಡುತ್ತಿದ್ದಾರೆ.

    ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ಇರುವ ರಾಮಾಂಜನೇಯ ಅದಕ್ಕೆ ಸಂಬಂಧಪಟ್ಟಂತೆ ಆನ್‍ಲೈನ್ ತರಗತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಕುಟುಂಬಸ್ಥರಿಗೆ ಹೊರೆಯಾಗಿದ್ದ ರಾಮಾಂಜನೇಯ ನರೇಗಾ ಯೋಜನೆಯು ಆಸರೆಯಾಗಿದ್ದು, ಬರುವ ಕೂಲಿ ಹಣದಲ್ಲಿ ಹೆಚ್ಚಿನ ವಿದ್ಯಾಭ್ಯಾಸವನ್ನು ಮುಂದುವರಿಸಿದ್ದಾರೆ. ಇದನ್ನೂ ಓದಿ: ಸೂಪರ್‌ ಟೆಕ್ನಾಲಜಿ ಅಭಿವೃದ್ಧಿ ಪಡಿಸಿದವರಿಗೆ 729 ಕೋಟಿ ಬಹುಮಾನ ಘೋಷಿಸಿದ ಮಸ್ಕ್‌

    ಇಂಜಿನಿಯರಿಂಗ್ ಮುಗಿಸಿಕೊಂಡು ಕಳೆದ ವರ್ಷ ಕೋವಿಡ್ ಸಮಯಕ್ಕೆ ಗ್ರಾಮಕ್ಕೆ ಆಗಮಿಸಿದೆ. ಎಲ್ಲೂ ಕೆಲಸ ಸಿಗದೇ ಇರುವುದರಿಂದ ನಮ್ಮೂರಲ್ಲಿಯೇ ಉದ್ಯೋಗ ಖಾತರಿ ಯೋಜನಯಲ್ಲಿ ಕೆಲಸ ಮಾಡುತ್ತಿದ್ದೆನೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ನರೇಗಾದಡಿಯಲ್ಲಿ ಕೆಲಸ ಮಾಡುತ್ತೇನೆ. ಉಳಿದ ಸಮಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರು ನಡೆಸುತ್ತಿದ್ದೆನೆ. ನರೇಗಾ ಯೋಜನೆಯಿಂದ ಸಾಕಷ್ಟು ಅನುಕೂಲವಾಗಿದೆ. ಇದನ್ನೂ ಓದಿ: ಕೃಷಿಯಲ್ಲಿ ಯಶಸ್ಸು ಕಂಡ ಕಾನೂನು ಪದವೀಧರೆ – ದಿನಕ್ಕೆ 30 ಸಾವಿರ ರೂ. ವ್ಯಾಪಾರ

  • ವಾರದೊಳಗೆ ನರೇಗಾ ಕೂಲಿ ಬಾಕಿ ಪಾವತಿ – ಕೆ.ಎಸ್.ಈಶ್ವರಪ್ಪ

    ವಾರದೊಳಗೆ ನರೇಗಾ ಕೂಲಿ ಬಾಕಿ ಪಾವತಿ – ಕೆ.ಎಸ್.ಈಶ್ವರಪ್ಪ

    – ಸಿಮ್ಸ್ ನಿರ್ದೇಶಕ ಡಾ.ಲೇಪಾಕ್ಷಿ ಅಮಾನತು

    ಶಿವಮೊಗ್ಗ: ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿ ಬಾಕಿ ಇರುವ ಎಲ್ಲಾ ಮೊತ್ತವನ್ನು ವಾರದೊಳಗಾಗಿ ಪಾವತಿ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಭರವಸೆ ನೀಡಿದ್ದಾರೆ.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ನದಿ ಪುನಶ್ಚೇತನ ಕಾರ್ಯಕ್ರಮ ಅನುಷ್ಠಾನ ಕುರಿತು ಪಿಡಿಒ, ಗ್ರಾಮ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಪ್ರತಿನಿಧಿಗಳಿಗೆ ಆಯೋಜಿಸಲಾಗಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

    ಕೇಂದ್ರ ಸರ್ಕಾರ ಬಾಕಿ ಅನುದಾನ ಬಿಡುಗಡೆ ಮಾಡಿದ್ದು, ಹೊಸ ಕಾಮಗಾರಿಗಳನ್ನು ಕೈಗೊಳ್ಳಲು ಇನ್ನೂ ಒಂದು ಸಾವಿರ ಕೋಟಿ ರೂ. ಮುಂಗಡವಾಗಿ ಜಿಲ್ಲೆಗೆ ಬಿಡುಗಡೆ ಮಾಡಿದೆ. ಕೊರೊನಾ ಹಿನ್ನೆಲೆಯಲ್ಲಿ ಕೂಲಿ ಮೊತ್ತವನ್ನು ರೂ. 249ರಿಂದ 275ಕ್ಕೆ ಹೆಚ್ಚಳ ಮಾಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಯೋಜನೆಯಡಿ ಹೆಚ್ಚೆಚ್ಚು ಉದ್ಯೋಗ ಸೃಷ್ಟಿ ಮಾಡಬೇಕು. ವಾರದೊಳಗಾಗಿ ಕೂಲಿ ಹಣವನ್ನು ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಹೇಳಿದರು.

    ಉದ್ಯೋಗ ಖಾತ್ರಿ ಯೋಜನೆಯಡಿ 5 ಜನರ ತಂಡಗಳನ್ನು ರಚಿಸಿ ಕಾಮಗಾರಿ ಅನುಷ್ಠಾನಗೊಳಿಸಬೇಕು. ಗುಂಪಾಗಿ ಕೆಲಸ ಮಾಡದೆ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕೆಲಸ ಮಾಡಬೇಕು. ನದಿ ಪುನಶ್ಚೇತನ ಯೋಜನೆಯಡಿ, ಮಳೆ ನೀರು ಹರಿದು ಪೋಲಾಗಿ ಹೋಗದೆ ಪ್ರತಿ ಹನಿ ನೆಲದ ಒಳಗೆ ಇಂಗುವಂತಹ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಇದಕ್ಕಾಗಿ ಇಂಗು ಗುಂಡಿಗಳ ರಚನೆ, ಮಣ್ಣಿನ ಸವಕಳಿ ತಡೆಯುವುದು, ಗಿಡ ಮರ ಬೆಳೆಸುವುದು ಸೇರಿದಂತೆ ಎಲ್ಲಾ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.

    ಸಭೆಯಲ್ಲಿ ಶಾಸಕ ಅಶೋಕ್ ನಾಯ್ಕ, ವಿಧಾನ ಪರಿಷತ್ ಸದಸ್ಯ ರುದ್ರೇಗೌಡ, ಪ್ರಸನ್ನ ಕುಮಾರ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಜಿ.ಪಂ.ಸಿಇಒ ಎಂ.ಎಲ್.ವೈಶಾಲಿ ಉಪಸ್ಥಿತರಿದ್ದರು.

    ಶಿವಮೊಗ್ಗದ ಮೆಗ್ಗಾನ್ ಭೋಧನಾ ಆಸ್ಪತ್ರೆಯ ಮಕ್ಕಳ ವಾರ್ಡ್ ನಲ್ಲಿ ಕಳೆದ ವಾರ ಬೆಂಕಿ ಕಾಣಿಸಿಕೊಂಡಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ. ಈ ಘಟನೆಗೆ ಮೆಗ್ಗಾನ್ ಭೋಧನಾ ಆಸ್ಪತ್ರೆ ನಿರ್ದೇಶಕ ಡಾ.ಲೇಪಾಕ್ಷಿ ಅವರ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನವೇ ಕಾರಣ ಎಂಬುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ. ಹೀಗಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಡಾ.ಲೇಪಾಕ್ಷಿ ಅವರನ್ನು ಅಮಾನತುಗೊಳಿಸಿದ್ದಾರೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು.

    ಬೆಂಗಳೂರಿನಲ್ಲಿ ಮೊನ್ನೆ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಸಿಎಂ ಅಮಾನತು ನಿರ್ಧಾರ ಕೈಗೊಂಡಿದ್ದಾರೆ. ಶೀಘ್ರದಲ್ಲಿಯೇ ಅವರ ಸ್ಥಾನಕ್ಕೆ ಮತ್ತೊಬ್ಬರು ಸಮರ್ಥರನ್ನು ನೇಮಕ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.