Tag: NRBC

  • NRBC ಕಳಪೆ ಕಾಮಗಾರಿ ಆರೋಪ: ಜಿಲ್ಲಾ ಜೆಡಿಎಸ್‍ನಿಂದ ಪ್ರತಿಭಟನೆ

    NRBC ಕಳಪೆ ಕಾಮಗಾರಿ ಆರೋಪ: ಜಿಲ್ಲಾ ಜೆಡಿಎಸ್‍ನಿಂದ ಪ್ರತಿಭಟನೆ

    -ಸವದಿ ಜಿಲ್ಲೆಗೆ ಪರ್ಸೆಂಜೇಟ್‍ಗಾಗಿ ಬಂದು ಹೋಗ್ತಾರೆ

    ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ಭರದಿಂದ ಸಾಗಿರುವ ನಾರಾಯಣಪುರ ಬಲದಂಡೆ ಕಾಲುವೆ ಆಧುನೀಕರಣ ಕಾಮಗಾರಿ ಕಳಪೆಯಿಂದ ಕೂಡಿದೆ ಅಂತ ಆರೋಪಿಸಿ ಜಿಲ್ಲಾ ಜೆಡಿಎಸ್ ನಿರಂತರ ಪ್ರತಿಭಟನೆ ನಡೆಸುತ್ತಿದೆ. ದೇವದುರ್ಗದ ಕೊತ್ತದೊಡ್ಡಿಯಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಕೂಡಲೇ ಕಾಮಗಾರಿ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.

    ಜಲಾಶಯದಿಂದ 95 ಕಿಮೀ ವರೆಗಿನ ಕಾಮಗಾರಿಗೆ 956 ಕೋಟಿ ವೆಚ್ಚದಲ್ಲಿ ಆಧುನೀಕರಣ ಮಾಡಲಾಗುತ್ತಿದ್ದು, ಒಂದೇ ಕಂಪನಿಗೆ ಇಡೀ ಕಾಮಗಾರಿ ಗುತ್ತಿಗೆ ನೀಡಲಾಗಿದೆ. ಮಾಜಿ ಪ್ರಧಾನಿ ದೇವೇಗೌಡರ ಅವಧಿಯಲ್ಲಿ ಕಾಲುವೆ ನಿರ್ಮಾಣವಾಗಿತ್ತು, ಆದ್ರೆ ಈಗ ಆಧುನೀಕರಣ ಹೆಸರಿನಲ್ಲಿ ಕಳಪೆ ಕಾಮಗಾರಿ ನಡೆದಿದೆ ಅಂತ ಜೆಡಿಎಸ್ ಮುಖಂಡರು ಆರೋಪಿಸಿದ್ದಾರೆ.

    ಲಕ್ಷ್ಮಣ ಸವದಿಯವರನ್ನ ಜಿಲ್ಲಾ ಉಸ್ತುವಾರಿಯಾಗಿ ಮಾಡಿರುವುದು ನಮ್ಮ ದುರದೃಷ್ಟ. ಜಿಲ್ಲೆಗೆ ಕೇವಲ ಪರ್ಸೆಂಜೇಟ್‍ಗಾಗಿ ಬಂದು ಹೋಗ್ತಾರೆ. ನಾರಾಯಣಪುರ ಬಲದಂಡೆ ಕಾಲುವೆ ಆಧುನೀಕರಣ ಕಳಪೆಯಾಗುತ್ತಿದ್ದರೂ ಸರ್ಕಾರ ಸುಮ್ಮನೆ ಕುಳಿತಿದೆ ಅಂತ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಮಗಾರಿ ಬಗ್ಗೆ ತನಿಖೆಯಾಗಬೇಕು ಅಂತ ಒತ್ತಾಯಿಸಿದ್ದಾರೆ. ಜೆಡಿಎಸ್ ಜಿಲ್ಲಾಧ್ಯಕ್ಷ ವಿರೂಪಾಕ್ಷಿ, ಜೆಡಿಎಸ್ ಮುಖಂಡರಾದ ಕರೆಮ್ಮ ನೇತೃತ್ವದಲ್ಲಿ ಹೋರಾಟ ನಡೆದಿದಿದೆ.

  • ಮದ್ಯಗೋಷ್ಠಿ ತಾಣವಾಗುತ್ತಿವೆ ಎನ್‍ಆರ್‍ಬಿಸಿ ಸೇತುವೆಗಳು: ರೈತರ ಕೂಗು ಕೇಳದ ಸರ್ಕಾರ

    ಮದ್ಯಗೋಷ್ಠಿ ತಾಣವಾಗುತ್ತಿವೆ ಎನ್‍ಆರ್‍ಬಿಸಿ ಸೇತುವೆಗಳು: ರೈತರ ಕೂಗು ಕೇಳದ ಸರ್ಕಾರ

    ರಾಯಚೂರು: ಬಿರು ಬೇಸಿಗೆಯಲ್ಲಿ ಮೇಲಗಡೆ ತಂಪು, ಕೆಳಗಡೆ ತಂಪು, ಅಲ್ಲಲ್ಲಿ ನಿಂತ ನೀರು, ತಣ್ಣನೆ ಮರಳಲ್ಲಿ ಮುಂಜಾನೆಯಿಂದ ಸಂಜೆವರೆಗೂ ಮದ್ಯಪಾನ. ಇದು ರಾಯಚೂರಿನ ದೇವದುರ್ಗದ ನಾರಾಯಣಪುರ ಬಲದಂಡೆ ಕಾಲುವೆಯ ಸೇತುವೆಗಳ ಕೆಳಗೆ ಕಂಡು ಬರುವ ಸಾಮಾನ್ಯ ದೃಶ್ಯ. ಬಿಸಿಲನಾಡು ರಾಯಚೂರಿನಲ್ಲಿ ಬರಗಾಲದಿಂದ ಖಾಲಿ ಖಾಲಿಯಾಗಿರುವ ಎನ್‍ಆರ್‍ಬಿಸಿ ಕಾಲುವೆಗಳು ಈಗ ಮದ್ಯವ್ಯಸನಿಗಳ ಹಾಟ್ ಸ್ಪಾಟ್‍ಗಳಾಗುತ್ತಿವೆ.

    ಬಿರುಬಿಸಿಲಿನ ಝಳತಪ್ಪಿಸಿಕೊಂಡು ಮದ್ಯಪಾನಮಾಡಲು ವ್ಯಸನಿಗಳು ಕಾಲುವೆಯ ಸೇತುವೆಗಳನ್ನ ಬಳಸಿಕೊಳ್ಳುತ್ತಿದ್ದಾರೆ. ಒಂದೆಡೆ ಕಾಲುವೆಗೆ ನೀರು ಹರಿಸುವಂತೆ ರೈತರು ಹೋರಾಟಕ್ಕೆ ಕಿವಿಗೊಡದ ಸರ್ಕಾರದ ನಿಲುವು ಮದ್ಯಪಾನಿಗಳಿಗೆ ಅನುಕೂಲವಾಗಿದೆ. ನೀರಾವರಿ ಸಲಹಾ ಸಮಿತಿ ಕಾಲುವೆಗೆ ಸಮರ್ಪಕವಾಗಿ ನೀರು ಹರಿಸದ ಹಿನ್ನೆಲೆಯಲ್ಲಿ ಕಾಲುವೆಗಳು ಖಾಲಿ ಖಾಲಿಯಾಗಿವೆ. ಹೀಗಾಗಿ ದಾರಿಹೋಕರು, ಪುಂಡಪೋಕರಿಗಳು, ಸುತ್ತಮುತ್ತಲ ಗ್ರಾಮಗಳ ಮದ್ಯವ್ಯಸನಿಗಳಿಗೆ ಸೇತುವೆ ಕೆಳಗಿನ ಕಾಲುವೆ ಜಾಗ ಮದ್ಯಪಾನಕ್ಕೆ ಹೇಳಿಮಾಡಿಸಿದಂತಾಗಿದೆ. ಮದ್ಯಪಾನ ಮಾಡಿ ಬಾಟಲ್, ಪೌಚ್, ನೀರಿನ ಪ್ಲಾಸ್ಟಿಕ್ ಗ್ಲಾಸ್‍ಗಳನ್ನ ಕಾಲುವೆಯಲ್ಲೇ ಎಸೆದು ಹೋಗುತ್ತಿದ್ದಾರೆ.

    ನೀರಾವರಿ ಸಲಹಾ ಸಮಿತಿ ನಾರಾಯಣಪುರ ಬಲದಂಡೆ ಕಾಲುವೆಗೆ ಮಾರ್ಚ್ 26 ರಿಂದ 30 ರವರೆಗೆ ಐದು ದಿನಗಳ ಕಾಲ ನೀರು ಹರಿಸಲು ನಿರ್ಧರಿಸಿದೆ. ಆದ್ರೆ ಸುಮಾರು 50 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆ ಬೆಳೆದಿರುವ ರೈತರಿಗೆ ನೀರು ತಲುಪುವುದು ಅನುಮಾನವಾಗಿದೆ. ಇನ್ನೂ ಕೇವಲ 5 ದಿನ ನೀರು ಹರಿಸಿದರೆ 16, 17, 18 ನೇ ವಿತರಣಾ ಕಾಲುವೆಗೆ ಹನಿ ನೀರು ಸಹ ತಲುಪುವುದಿಲ್ಲ ಅಂತ ರೈತರು ಆರೋಪಿಸಿದ್ದಾರೆ.

    ಏಪ್ರಿಲ್ 10 ರವರೆಗೆ ಕಾಲುವೆಗೆ ನೀರು ಹರಿಸುವಂತೆ ರೈತರು ಹೋರಾಟ ನಡೆಸಿದ್ದಾರೆ. ಕಾಳು ಕಟ್ಟಿರುವ ಭತ್ತ, ಶೇಂಗಾ ,ಕಡಲೆ ಬೆಳೆಗಳು ಒಣಗಿಹೋಗುತ್ತಿದ್ದು, ಕಾಲುವೆಯ ಕೆಳಭಾಗದ ರೈತರು ಬೆಳೆಹಾನಿ ಆತಂಕದಲ್ಲಿದ್ದಾರೆ. ಆದ್ರೆ ಸರ್ಕಾರ ಮಾತ್ರ ಕಾಲುವೆಗೆ ನೀರು ಬಿಡುವ ಮನಸ್ಸು ಮಾಡುತ್ತಿಲ್ಲ. ಹೀಗಾಗಿ ಮದ್ಯ ವ್ಯಸನಿಗಳಿಗೆ ಸರ್ಕಾರವೇ ಜಾಗ ಹುಡುಕಿ ಕೊಟ್ಟಂತಾಗಿದೆ.

    ಒಟ್ನಲ್ಲಿ, ಪವಿತ್ರ ಕೃಷ್ಣೆ ಹರಿಯಬೇಕಾದ ಸ್ಥಳದಲ್ಲಿ ಮದ್ಯಗೋಷ್ಠಿಗಳು ನಡೆಯುತ್ತಿವೆ. ಬೆಳಿಗ್ಗೆಯಿಂದಲೇ ಠಿಕಾಣಿ ಹೂಡೋ ಕುಡುಕರು ಸಂಜೆ ವೇಳೆಗೆ ಮನೆಕಡೆ ತೆರಳುತ್ತಿದ್ದಾರೆ. ಕನಿಷ್ಟ ಈಗಲಾದ್ರೂ ಸರ್ಕಾರ ಎಚ್ಚೆತ್ತು ಕುಡುಕರ ತಾಣವಾಗುತ್ತಿರುವ ಕಾಲುವೆಗಳಿಗೆ ಸಮರ್ಪಕವಾಗಿ ನೀರು ಹರಿಸಬೇಕಿದೆ. ರೈತರ ಬೆಳೆಗಳನ್ನ ರಕ್ಷಿಸಬೇಕಿದೆ.