Tag: NRA

  • ಇನ್ನು ಮುಂದೆ ಕೇಂದ್ರದ ಹುದ್ದೆಗಳಿಗೆ ಒಂದೇ ಪರೀಕ್ಷೆ

    ಇನ್ನು ಮುಂದೆ ಕೇಂದ್ರದ ಹುದ್ದೆಗಳಿಗೆ ಒಂದೇ ಪರೀಕ್ಷೆ

    – ನಾನ್‌ ಗೆಜೆಟೆಡ್‌ ಹುದ್ದೆಗಳಿಗೆ ಏಕರೂಪದ ಸಿಇಟಿ
    – ಮೂರು ವರ್ಷಗಳವರೆಗೆ ಅಂಕಗಳಿಗೆ ಮಾನ್ಯತೆ
    – ದೇಶದ ವಿವಿಧ ಭಾಷೆಗಳಲ್ಲಿ ಪರೀಕ್ಷೆ

    ನವದೆಹಲಿ: ಇನ್ನು ಮುಂದೆ ಕೇಂದ್ರ ಸರ್ಕಾರದ ಹುದ್ದೆ ಪಡೆಯಲು ಹಲವು ಪರೀಕ್ಷೆಗಳನ್ನು ಬರೆಯಬೇಕಿಲ್ಲ. ಒಂದೇ ಪರೀಕ್ಷೆ ಬರೆಯುವ ಮೂಲಕ ವಿವಿಧ ಇಲಾಖೆಯ ಹುದ್ದೆಯನ್ನು ಪಡೆಯಬಹುದು.

    ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಕ್ಯಾಬಿನೆಟ್‌ ಸಭೆಯಲ್ಲಿ ರಾಷ್ಟ್ರೀಯ ನೇಮಕಾತಿ ಸಂಸ್ಥೆ (ಎನ್‌ಆರ್‌ಎ) ರಚನೆಗೆ ಅನುಮೋದನೆ ನೀಡಿದೆ. ಈ ವರ್ಷದ ಬಜೆಟ್‌ನಲ್ಲಿ ಎನ್‌ಆರ್‌ಎ ರಚಿಸಲಾಗುವುದು ಎಂದು ಸರ್ಕಾರ ತಿಳಿಸಿತ್ತು.

     

    ಕೇಂದ್ರ ಸರ್ಕಾರ ಇಲಾಖೆ ಮತ್ತು ಸಾರ್ವಜನಿಕ ವಲಯದಲ್ಲಿರುವ ಬ್ಯಾಂಕುಗಳ ನಾನ್‌ ಗೆಜೆಟೆಡ್‌ ಹುದ್ದೆಗಳನ್ನು ಬಯಸುವ ಮಂದಿಗೆ ಸುಲಭವಾಗಲು ಸರ್ಕಾರ ಎನ್‌ಆರ್‌ಎ ಸ್ಥಾಪನೆಗೆ ಮುಂದಾಗಿದೆ.

     

     

     

    ಯಾಕೆ ಈ ಪರೀಕ್ಷೆ?
    ಪ್ರಸ್ತುತ, ಸರ್ಕಾರಿ ಉದ್ಯೋಗಗಳನ್ನು ಬಯಸುವ ಅಭ್ಯರ್ಥಿಗಳು ವಿವಿಧ ಹುದ್ದೆಗಳಿಗೆ ಬಹು ನೇಮಕಾತಿ ಏಜೆನ್ಸಿಗಳು ನಡೆಸುವ ಪ್ರತ್ಯೇಕ ಪರೀಕ್ಷೆಗಳಿಗೆ ಹಾಜರಾಗಬೇಕಾಗುತ್ತದೆ. ಅಷ್ಟೇ ಅಲ್ಲದೇ ಅಭ್ಯರ್ಥಿಗಳು ಅನೇಕ ನೇಮಕಾತಿ ಏಜೆನ್ಸಿಗಳಿಗೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಮತ್ತು ವಿವಿಧ ಪರೀಕ್ಷೆಗಳಿಗೆ ಹಾಜರಾಗಲು ದೂರದ ಪ್ರಯಾಣ ಮಾಡಬೇಕಾಗುತ್ತದೆ. ಇದನ್ನು ತಪ್ಪಿಸಲು ಒಂದೇ ಸಿಇಟಿ ಪರೀಕ್ಷೆಯನ್ನು ರಾಷ್ಟ್ರೀಯ ನೇಮಕಾತಿ ಸಂಸ್ಥೆ ನಡೆಸಲಿದೆ. ಸಿಇಟಿ ಅಂಕ ಮೂರು ವರ್ಷಗಳವರೆಗೆ ಮಾನ್ಯವಾಗಿರುತ್ತದೆ, ಪ್ರಯತ್ನಗಳಿಗೆ ಯಾವುದೇ ನಿರ್ಬಂಧವಿಲ್ಲ ಎಂದು ಸರ್ಕಾರ ತಿಳಿಸಿದೆ.

     

    ಯಾವೆಲ್ಲ ಪರೀಕ್ಷೆ?
    ಎನ್‌ಆರ್‌ಎ ಮೂರು ಹಂತದ ಪದವೀಧರ, ಹೈಯರ್ ಸೆಕೆಂಡರಿ (12 ನೇ ಪಾಸ್) ಮತ್ತು ತಾಂತ್ರಿಕೇತರ ಹುದ್ದೆಗಳಿಗೆ ಮೆಟ್ರಿಕ್ಯುಲೇಟ್ (10 ನೇ ಪಾಸ್) ಅಭ್ಯರ್ಥಿಗಳಿಗೆ ತಲಾ ಪ್ರತ್ಯೇಕ ಸಿಇಟಿಯನ್ನು ನಡೆಸಿ ಅಂಕ ನೀಡುತ್ತದೆ.

    ಪ್ರಸ್ತುತ ನೇಮಕಾತಿಯನ್ನು ಸಿಬ್ಬಂದಿ ಆಯ್ಕೆ ಆಯೋಗ (ಎಸ್‌ಎಸ್‌ಸಿ), ರೈಲ್ವೆ ನೇಮಕಾತಿ ಮಂಡಳಿಗಳು (ಆರ್‌ಆರ್‌ಬಿಎಸ್‌) ಮತ್ತು ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್‌ ಸೆಲೆಕ್ಷನ್‌( ಐಬಿಪಿಎಸ್) ಮಾಡುತ್ತದೆ. ಈಗ ಇವುಗಳು ನಡೆಸುವ ಪರೀಕ್ಷೆಗಳನ್ನು ಎನ್‌ಆರ್‌ಎ ನಡೆಸಲಿದೆ.

    ಈ ಎಲ್ಲ ಪರೀಕ್ಷೆಗಳ ಸಂಬಂಧಿಸಿದ ಪಠ್ಯಗಳು ಒಂದೇ ಆಗಿರಲಿದೆ. ಸಿಇಟಿ ಪರೀಕ್ಷೆ ದೇಶದ ಹಲವು ಭಾಷೆಗಳಲ್ಲಿ ನಡೆಯಲಿದೆ. ಎನ್‌ಆರ್‌ಎ ಸ್ಥಾಪನೆಗೆ ಕೇಂದ್ರ ಸರ್ಕಾರ 1,517.57 ಕೋಟಿ ರೂ. ಹಣವನ್ನು ಮೀಸಲಿಟ್ಟಿದೆ.