Tag: Notebook Celebration

  • 16 ಎಸೆತಗಳಲ್ಲಿ 50 ರನ್ – ಕೊಹ್ಲಿಯ ‘ನೋಟ್ ಬುಕ್ ಸೆಲಬ್ರೇಷನ್’ ಹಿಂದಿದೆ ಒಂದು ಕಥೆ

    16 ಎಸೆತಗಳಲ್ಲಿ 50 ರನ್ – ಕೊಹ್ಲಿಯ ‘ನೋಟ್ ಬುಕ್ ಸೆಲಬ್ರೇಷನ್’ ಹಿಂದಿದೆ ಒಂದು ಕಥೆ

    ಹೈದರಾಬಾದ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನು ಔಟ್ ಮಾಡಲು ವೆಸ್ಟ್ ಇಂಡೀಸ್ ಬೌಲರ್ ಮಾಡಲು ಮಾಡಿದ ಪ್ರಯತ್ನಕ್ಕೆ ಬಾರಿ ದಂಡ ತೆತ್ತಿದ್ದು, ಆಕ್ರಮಣಕಾರಿ ಆಡಿದ ಕೊಹ್ಲಿ ಮೊದಲ ಟಿ20 ಪಂದ್ಯದಲ್ಲಿ ‘ನೋಟ್ ಬುಕ್ ಸೆಲಬ್ರೇಷನ್’ ಮೂಲಕ ತಿರುಗೇಟು ನೀಡಿದ್ದಾರೆ.

    ಪಂದ್ಯದ 16ನೇ ಓವರಿನಲ್ಲಿ ಘಟನೆ ನಡೆದಿದ್ದು, ಕೆಸ್ರಿಕ್ ವಿಲಿಯಮ್ಸ್ ಬೌಲಿಂಗ್‍ನ ಮೂರನೇ ಎಸೆತವನ್ನು ಸಿಕ್ಸರ್‍ ಗಟ್ಟಿದ ಕೊಹ್ಲಿ ತಮ್ಮ ಕೈ ಮೇಲೆ ಸಹಿ ಮಾಡುವ ರೀತಿ ಸನ್ನೆ ಮಾಡಿ ‘ನೋಟ್ ಬುಕ್ ಸೆಲಬ್ರೇಷನ್’ ನೊಂದಿಗೆ ಸಂಭ್ರಮಿಸಿದ್ದರು. 16ನೇ ಓವರ್ ಭಾರತದ ಪಾಲಿಗೆ ಟರ್ನಿಂಗ್ ಪಾಯಿಂಟ್ ಆಗಿದ್ದು ಈ ಓವರಿನಲ್ಲಿ ಕೊಹ್ಲಿ ಒಂದು ಸಿಕ್ಸರ್, ಒಂದು ಬೌಂಡರಿ ಹೊಡೆದರೆ ರಿಷಬ್ ಪಂತ್ ಸಿಕ್ಸ್ ಹೊಡೆದ ಪರಿಣಾಮ 23 ರನ್(1,4,6,1,6,ನೋಬಾಲ್ ಜೊತೆ 2,2) ಬಂದಿತ್ತು.

    ಪಂದ್ಯದಲ್ಲಿ 50 ಎಸೆತಗಳಲ್ಲಿ 94 ರನ್ (6 ಬೌಂಡರಿ, 6 ಸಿಕ್ಸರ್) ಗಳಿಸಿದ ಕೊಹ್ಲಿ ಸಿಕ್ಸರ್ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟು ಅಜೇಯರಾಗಿ ಉಳಿದರು. ಇದು ಕೊಹ್ಲಿ ಅವರ ಟಿ20 ಮಾದರಿಯ ಟಾಪ್ ಸ್ಕೋರ್ ಆಗಿದೆ. ಪಂದ್ಯದ ಬಳಿಕ ತಮ್ಮ ಆನ್‍ಫೀಲ್ಡ್ ಸೆಲಬ್ರೇಷನ್ ಕುರಿತು ನಿರೂಪಕರು ಪ್ರಶ್ನಿಸಿ, ನೀವು ವಿಶ್ವದ ಬೇರೆ ಬೇರೆ ಟೂರ್ನಿಗಳನ್ನು ಗಮನಿಸುತ್ತೀರಿ ಎಂದು ತಿಳಿಯಿತು. ನೋಟ್ ಬುಕ್ ಸೆಲೆಬ್ರೇಷನ್ ಕೆರೇಬಿಯನ್ ಕ್ರಿಕೆಟ್ ಲೀಗ್ ನಲ್ಲಿ ಹೆಚ್ಚು ಪ್ರಚಲಿತವಾಗಿತ್ತು ಎಂದಿದ್ದರು.

    ತಮ್ಮ ಸೆಲೆಬ್ರೇಷನ್ ಹಿಂದಿನ ಉದ್ದೇಶವನ್ನು ಬಿಚ್ಚಿಟ್ಟ ಕೊಹ್ಲಿ, ಇದು ಸಿಪಿಎಲ್ ನಲ್ಲಿ ನಡೆದ ಘಟನೆಯಲ್ಲ. ಇದು ನನಗೆ ಜಮೈಕಾದಲ್ಲಿ ಎದುರಾಗಿತ್ತು. ಅಂದು ನಾನು ಔಟ್ ಆಗಿದ್ದ ಸಂದರ್ಭದಲ್ಲಿ ಬೌಲರ್ ಇದೇ ರೀತಿ ಸಂಭ್ರಮಿಸಿದ್ದರು. ಆ ವೇಳೆ ನಮ್ಮ ನಡುವೆ ಮಾತಿನ ವಿನಿಮಯ ಕೂಡ ಆಗಿತ್ತು. ಆದರೆ ದಿನದ ಅಂತ್ಯಕ್ಕೆ ಬಂದಾಗ ಇಬ್ಬರ ನಡುವೆ ನಗುವಿನೊಂದಿಗೆ ಇದು ಅಂತ್ಯವಾಗಿದೆ. ನಾನು ಯಾವಾಗಲೂ ಸ್ಪರ್ಧಾತ್ಮಕ ಆಟಕ್ಕೆ ಪ್ರೇರಣೆ ನೀಡುತ್ತೇನೆ. ನಾವು ಏನು ಮಾಡಿದರು ಪರಸ್ಪರ ಗೌರವಿಸುತ್ತೇವೆ. ಹೈ-ಫೈವ್, ಕೈ ಕುಲುಕುವ ಮೂಲಕ ಎಲ್ಲವೂ ಅಂತ್ಯವಾಗುತ್ತದೆ ಎಂದರು.

    ಕೊಹ್ಲಿ ಅವರ ಸೆಲಬ್ರೇಷನ್ ಕುರಿತು ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ನಟ ಅಮಿತಾಬ್ ಬಚ್ಚನ್, ಕೊಹ್ಲಿ ಅವರ ನೋಟ್ ಬುಕ್ ಸೆಲಬ್ರೇಷನ್ ಫೋಟೋಗಳನ್ನು ಹಂಚಿಕೊಂಡಿದ್ದು, ತಮ್ಮ ಅಮರ್, ಅಕ್ಬರ್, ಅಂಥೋನಿ ಸಿನಿಮಾದ ಡೈಲಾಗ್ ಅನ್ನು ಬರೆದು ಟ್ವೀಟ್ ಮಾಡಿದ್ದಾರೆ. ಹಲವು ಅಭಿಮಾನಿಗಳು ಕೂಡ ವಿರಾಟ್ ಕೊಹ್ಲಿ ಅವರ ಸೆಲೆಬ್ರೇಷನ್ ಫೋಟೋಗಳನ್ನು ಹಂಚಿಕೊಂಡು ಪ್ರತಿಕ್ರಿಯೆ ನೀಡಿದ್ದು, ಕೊಹ್ಲಿಗೆ ಶುಭಾಶಯ ತಿಳಿಸಿದ್ದಾರೆ.

    ಕೊಹ್ಲಿ ಟಿ20 ಮಾದರಿಯಲ್ಲಿ 2544 ರನ್ ಗಳಿಸಿದ್ದು, ರೋಹಿತ್ ಶರ್ಮಾ 2547 ರನ್ ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಅಲ್ಲದೇ ನಿನ್ನೆಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ 35 ಎಸೆತಗಳಲ್ಲಿ 50 ರನ್ ಗಳಿಸಿದರೆ, 15 ಓವರಿನ ಬಳಿಕ ಆಡಿದ 16 ಎಸೆತಗಳಲ್ಲಿ 2 ಬೌಂಡರಿ, 5 ಸಿಕ್ಸರ್ ನೊಂದಿಗೆ 50 ರನ್ ಸಿಡಿಸಿದ್ದರು. ಅಲ್ಲದೇ ಟೀಂ ಇಂಡಿಯಾ ಗೆಲುವು ಪಡೆದ ಟಿ20 ಪಂದ್ಯಗಳ ಚೇಸಿಂಗ್ ನಲ್ಲಿ ಕೊಹ್ಲಿ 120.90 ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದಾರೆ.