Tag: note

  • ಕಳೆದ ವರ್ಷ ಒಂದೇ ಒಂದು 2 ಸಾವಿರ ರೂ. ನೋಟು ಮುದ್ರಣವಾಗಿಲ್ಲ

    ಕಳೆದ ವರ್ಷ ಒಂದೇ ಒಂದು 2 ಸಾವಿರ ರೂ. ನೋಟು ಮುದ್ರಣವಾಗಿಲ್ಲ

    – ಚಲಾವಣೆಯಲ್ಲಿರುವ ನೋಟಿನ ಪ್ರಮಾಣ ಇಳಿಕೆ
    – ವಾರ್ಷಿಕ ವರದಿಯಲ್ಲಿ ಆರ್‌ಬಿಐ ಮಾಹಿತಿ

    ನವದೆಹಲಿ: ಕಳೆದ ಹಣಕಾಸು ವರ್ಷದಲ್ಲಿ ಒಂದೇ ಒಂದು 2 ಸಾವಿರ ರೂಪಾಯಿ ಮುಖಬೆಲೆಯ ನೋಟನ್ನು ಮುದ್ರಿಸಿಲ್ಲ ಎಂದು ರಿಸರ್ವ್‌ ಬ್ಯಾಂಕ್‌ ಹೇಳಿದೆ.

    2019-20ರ ವಾರ್ಷಿಕ ವರದಿಯಲ್ಲಿ 2 ಸಾವಿರ ರೂ. ಮುಖಬೆಲೆಯ ನೋಟುಗಳು ಚಲಾವಣೆಯ ಪ್ರಮಾಣ ಇಳಿಕೆಯಾಗುತ್ತಿದೆ ಎಂದು ತಿಳಿಸಿದೆ.

    2018ರ ಮಾರ್ಚ್ ಅಂತ್ಯಕ್ಕೆ ದೇಶದಲ್ಲಿ 2 ಸಾವಿರ ರೂ. ಮುಖಬೆಲೆಯ 33,632 ಲಕ್ಷ ನೋಟುಗಳು ಚಲಾವಣೆಯಲ್ಲಿದ್ದರೆ 2019ರ ಮಾರ್ಚ್‌ ಅಂತ್ಯಕ್ಕೆ ಈ ಸಂಖ್ಯೆ 32,910 ಲಕ್ಷಕ್ಕೆ ಇಳಿಕೆಯಾಗಿತ್ತು. 2020ರ ಮಾರ್ಚ್‌ ಅಂತ್ಯಕ್ಕೆ ಇದು 27,398 ಲಕ್ಷಕ್ಕೆ ಇಳಿಕೆಯಾಗಿದೆ.

    2018ರ ಮಾರ್ಚ್‌ ಅಂತ್ಯಕ್ಕೆ ಚಲಾವಣೆಯಲ್ಲಿರುವ ನೋಟುಗಳ ಪೈಕಿ 2 ಸಾವಿರ ರೂ. ನೋಟುಗಳ ಪಾಲು ಶೇ. 3.3ರಷ್ಟಿತ್ತು. 2020ರ ಮಾರ್ಚ್‌ ಅಂತ್ಯಕ್ಕೆ ಈ ಪ್ರಮಾಣ ಶೇ.2.4ಕ್ಕೆ ಇಳಿದಿದೆ.

    ಮೌಲ್ಯದ ಆಧಾರದಲ್ಲಿ ನೋಡುವುದಾದರೆ 2018ರಲ್ಲಿ 2 ಸಾವಿರ ರೂ. ಮುಖಬೆಲೆಯ ನೋಟುಗಳ ಪಾಲು ಶೇ.37.3 ರಷ್ಟಿತ್ತು. 2019ರಲ್ಲಿ ಇದು ಶೇ.31.2ಕ್ಕೆ ಇಳಿಕೆಯಾದರೆ ಮಾರ್ಚ್‌ 2020ರಲ್ಲಿ ಇದು ಶೇ.22.6ಕ್ಕೆ ಕುಸಿದಿದೆ.

    ವರದಿಯಲ್ಲಿ 200 ಮತ್ತು 500 ರೂಪಾಯಿ ಮುಖಬೆಲೆಯ ನೋಟುಗಳ ಸಂಖ್ಯೆ ಏರುತ್ತಲೇ ಸಾಗಿದೆ ಎಂದು ಹೇಳಿದೆ. 2018-19ರಲ್ಲಿ 500 ರೂ. ಮುಖಬೆಲೆಯ 1,147 ಕೋಟಿ ನೋಟುಗಳನ್ನು ಮುದ್ರಿಸಿದ್ದರೆ 2019-20ರಲ್ಲಿ ಇದು 1,200 ಕೋಟಿಗೆ ಏರಿಕೆಯಾಗಿದೆ.

    10, 50, 200, 500 ರೂ. ಮುಖಬೆಲೆಯ ನಕಲಿ ನೋಟುಗಳ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಸಿದರೆ ಏರಿಕೆಯಾಗಿದೆ. 20, 100 ಮತ್ತು 2,000 ರೂಪಾಯಿ ನಕಲಿ ನೋಟುಗಳ ಸಂಖ್ಯೆಯಲ್ಲಿ ಸ್ವಲ್ಪ ಇಳಿಕೆಯಾಗಿದೆ.

     

    ಹಿಂದೆಯೇ ಹೇಳಿತ್ತು:
    ದೇಶದಲ್ಲಿನ ಕಪ್ಪುಹಣ ಮತ್ತು ಭಯೋತ್ಪಾದನೆಗೆ ಬ್ರೇಕ್ ಹಾಕುವ ಉದ್ದೇಶದಿಂದ, ನೋಟು ನಿಷೇಧ ನಿರ್ಧಾರದ ಸಮಯದಲ್ಲಿ ಚಲಾವಣೆಗೆ ತಂದಿದ್ದ 2 ಸಾವಿರ ರೂ. ಮುಖಬೆಲೆಯ ನೋಟುಗಳ ಮುದ್ರಣವನ್ನು ರಿಸರ್ವ್ ಬ್ಯಾಂಕ್ ಹಂತ ಹಂತವಾಗಿ ಕಡಿಮೆ ಮಾಡಲಿದೆ ಎಂದು ಹಣಕಾಸು ಸಚಿವಾಲಯ ಕಳೆದ ವರ್ಷದ ಜನವರಿಯಲ್ಲಿ ಮಾಹಿತಿ ನೀಡಿತ್ತು.

    ನವೆಂಬರ್ 8, 2016ರಲ್ಲಿ ನೋಟ್ ನಿಷೇಧ ಸಂದರ್ಭದಲ್ಲಿ ಆರ್‌ಬಿಐ 2 ಸಾವಿರ ರೂ.ನಷ್ಟು ದೊಡ್ಡ ಮೊತ್ತದ ನೋಟುಗಳನ್ನು ಹಣಕಾಸು ಕೊರತೆಯನ್ನು ಭರಿಸುವ ಉದ್ದೇಶದಿಂದ ಚಲಾವಣೆಗೆ ತಂದಿತ್ತು.

    ಈ ದೊಡ್ಡ ಮೊತ್ತದ ನೋಟು ಕಾಳಧನಿಕರಿಗೆ ಶತ್ರುವಾಗಿ ಪರಿಣಮಿಸುವ ಬದಲಾಗಿ ಸ್ನೇಹಿಯಾಗಿ ಮಾರ್ಪಾಡಾಗತೊಡಗಿವೆ. ಹೆಚ್ಚು ಮೌಲ್ಯ ಹೊಂದಿರುವ ಕಾರಣಕ್ಕೆ ಈ ಮುಖಬೆಲೆಯ ನೋಟ್‍ಗಳನ್ನು ಸುಲಭವಾಗಿ ಶೇಖರಿಸಿ ಇಡಬಹುದು ಮತ್ತು ಸಾಗಿಸಬಹುದು ಅಂತ ಕಾಳಧನಿಕರು ಉಪಾಯ ಮಾಡಿದ್ದಾರೆ. ಆದರಿಂದ ಈ ನೋಟುಗಳನ್ನು ಹೆಚ್ಚು ಶೇಖರಿಸಿಡುತ್ತಿದ್ದಾರೆ ಎಂಬ ಶಂಕೆ ಬಂದ ಹಿನ್ನೆಲೆಯಲ್ಲಿ ಆರ್‌ಬಿಐ ಹಂತಹಂತವಾಗಿ 2 ಸಾವಿರ ಮುಖಬೆಲೆಯ ನೋಟುಗಳ ಮುದ್ರಣವನ್ನು ನಿಲ್ಲಿಸುತ್ತಿದೆ.

    ಮಾರ್ಚ್ 2017ರ ಅಂತ್ಯದಲ್ಲಿ 328 ಕೋಟಿ ರೂ. 2 ಸಾವಿರ ಮುಖಬೆಲೆಯ ನೋಟುಗಳು ದೇಶದಲ್ಲಿ ಚಲಾವಣೆಯಾಗಿತ್ತು. ಬಳಿಕ ಮಾರ್ಚ್ 2018ರ ಅಂತ್ಯದಲ್ಲಿ ಈ ಸಂಖ್ಯೆ 336 ಕೋಟಿಗೆ ಏರಿಕೆಯಾಗಿತ್ತು. ಆರಂಭದಲ್ಲಿ ಶೇ.86ರಷ್ಟು 2 ಸಾವಿರ ನೋಟುಗಳು ಚಲಾವಣೆಯಲ್ಲಿದ್ದವು.

  • ರಸ್ತೆಯಲ್ಲಿ ಬಿದ್ದಿದ್ದ ನೋಟಿಗೆ ಸ್ಯಾನಿಟೈಸರ್ ಹಾಕಿ, ಬೆಂಕಿ ಹಚ್ಚಿದ್ರು

    ರಸ್ತೆಯಲ್ಲಿ ಬಿದ್ದಿದ್ದ ನೋಟಿಗೆ ಸ್ಯಾನಿಟೈಸರ್ ಹಾಕಿ, ಬೆಂಕಿ ಹಚ್ಚಿದ್ರು

    ಮೈಸೂರು: ಸಾಮಾನ್ಯವಾಗಿ ರಸ್ತೆಯಲ್ಲಿ ಹಣ ಬಿದ್ದಿದ್ದರೆ ಅದನ್ನು ಎತ್ತಿಕೊಂಡು ಹೋಗುತ್ತಾರೆ. ಆದರೆ ಈಗ ರಸ್ತೆಯಲ್ಲಿ ಹಣ ಬಿದ್ದಿದ್ದರೆ ಜನ ಭಯಭೀತರಾಗುತ್ತಿದ್ದಾರೆ. ನೋಟು ಮೂಲಕ ಕೊರೊನಾ ವೈರಸ್ ಹರಡಲಾಗುತ್ತಿದೆ ಎಂಬ ವದಂತಿ ಹಬ್ಬಿರುವ ಕಾರಣ ಜನ ರಸ್ತೆಯಲ್ಲಿ ಹಣ ಬಿದ್ದಿದ್ದರೆ ಅದನ್ನು ಕಂಡು ಹೆದರುತ್ತಿದ್ದಾರೆ.

    ಇದರಿಂದ ರಸ್ತೆಯಲ್ಲಿ ಬಿದ್ದಿದ್ದ ನೋಟಿಗೆ ಜನ ಬೆಂಕಿ ಇಟ್ಟಿದ್ದಾರೆ. ಮೈಸೂರಿನ ನಜರ್‍ಬಾದ್‍ನಲ್ಲಿ ಈ ಘಟನೆ ನಡೆದಿದ್ದು, ಮೈಲಾರಿ ಹೋಟೆಲ್ ಬಳಿ ಬಿದ್ದಿದ್ದ 100ರ ಹೊಸ ನೋಟು ನೋಡಿ ಆತಂಕಗೊಂಡ ಜನ, ತಕ್ಷಣ ಅದಕ್ಕೆ ಸ್ಯಾನಿಟೈಸರ್ ಹಾಕಿ ಬೆಂಕಿ ಹಚ್ಚಿದ್ದಾರೆ. ಇದನ್ನೂ ಓದಿ: ಇದ್ದಕ್ಕಿದ್ದಂತೆ ರಸ್ತೆ ಮೇಲೆ ನೋಟುಗಳ ಮಳೆ

    ಎರಡು ದಿನಗಳ ಹಿಂದೆಯೇ ಮೈಸೂರಿನ ಹೆಬ್ಬಾಳ್‍ನಲ್ಲೂ ಹೀಗೆ ಕಿಡಿಗೇಡಿಗಳು 50 ರೂಪಾಯಿ ನೋಟು ಬಿಸಾಕಿ ಹೋಗಿದ್ದರು. ಕರ್ನಾಟಕ ಮಾತ್ರವಲ್ಲದೇ ಮಧ್ಯಪ್ರದೇಶದ ಇಂಧೋರ್‍ನ ಖಾತಿರ್ಪುರ ಪ್ರದೇಶದ ಧರ್ಮಶಾಲಾದಲ್ಲಿ ವ್ಯಕ್ತಿಯೊಬ್ಬ ಸಂಶಯಾಸ್ಪದವಾಗಿ ರಸ್ತೆಯಲ್ಲಿ ನೋಟುಗಳ ಸುರಿಮಳೆಗೈದಿದ್ದ ಘಟನೆ ನಡೆದಿತ್ತು.

    ಮೊದಲೇ ಕೊರೊನಾ ವೈರಸ್ ಭೀತಿಯಿಂದ ತತ್ತರಿಸಿರುವ ಇಂಧೋರ್ ನಲ್ಲಿ ಈ ರೀತಿ ಘಟನೆ ನಡೆದಿರುವುದು ಆತಂಕವನ್ನು ಸೃಷ್ಟಿಸಿದೆ. ಅಪರಿಚಿತ ವ್ಯಕ್ತಿಯೋರ್ವ ರಸ್ತೆ ಮೇಲೆ 500, 200, 100, 50 ಹಾಗೂ 10 ರೂ. ಮುಖಬೆಲೆಯ ನೋಟುಗಳನ್ನು ಎಸೆದು ಹೋಗಿದ್ದನು. ಸಾವಿರಾರು ರೂ. ಹಣ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರೂ ಕೊರೊನಾ ಭೀತಿಯಿಂದ ಯಾರೊಬ್ಬರು ಅದನ್ನು ತೆಗೆದುಕೊಳ್ಳುವ ಸಹಾಸಕ್ಕೆ ಮುಂದಾಗಲಿಲ್ಲ.

  • ನೋಟುಗಳನ್ನ ಸೋಪಿನ ನೀರಿನಲ್ಲಿ ತೊಳೆದ ರೈತ

    ನೋಟುಗಳನ್ನ ಸೋಪಿನ ನೀರಿನಲ್ಲಿ ತೊಳೆದ ರೈತ

    ಮಂಡ್ಯ: ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೊನಾ ಇಷ್ಟು ದಿನ ಸಕ್ಕರೆ ನಾಡು ಮಂಡ್ಯದಿಂದ ದೂರವೇ ಉಳಿದಿತ್ತು. ಆದರೆ ಈಗ ದೆಹಲಿಯ ನಿಜಾಮುದ್ದೀನ್ ಸಭೆಗೆ ಹೋಗಿದ್ದ ಏಳು ಜನರಿಂದ ಮಂಡ್ಯದಲ್ಲೂ ಸಹ ಕೊರೊನಾ ವೈರಸ್ ಕಂಡು ಬಂದಿದೆ. ಈ ಭಯದಿಂದಲೇ ಜಿಲ್ಲೆಯಲ್ಲಿ ರೈತನೊಬ್ಬ ನೋಟುಗಳನ್ನು ಸೋಪಿನ ನೀರಿನಿಂದ ತೊಳೆದಿದ್ದಾನೆ.

    ಮಂಡ್ಯ ತಾಲೂಕಿನ ಮಾರಚಾಕನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ನೋಟಿನಿಂದ ಕೊರೊನಾ ಹರಡುತ್ತೆ ಎಂದು ನೋಟುಗಳನ್ನು ನೀರಿನಿಂದ ರೈತ ತೊಳೆದಿದ್ದಾನೆ. ರೈತ ತಾನು ಬೆಳೆದ ರೇಷ್ಮೆಯನ್ನು ಮಾರಾಟ ಮಾಡಿದ್ದನು. ಈ ವೇಳೆ ಮುಸ್ಲಿಂ ವ್ಯಾಪಾರಿ ರೇಷ್ಮೆ ತೆಗೆದುಕೊಂಡು ಹಣ ನೀಡಿದ್ದನು. ಆದರೆ ಮುಸ್ಲಿಂ ಕೊಟ್ಟ ನೋಟುಗಳನ್ನು ರೈತ ನೀರಿನಲ್ಲಿ ತೊಳೆದಿದ್ದಾನೆ.

    ಮುಸ್ಲಿಂ ವ್ಯಾಪಾರಿ ನೀಡಿದ ನೋಟು ಎಂದು ರೈತ 2 ಸಾವಿರ, 500, 100ರೂ. ಮುಖ ಬೆಲೆಯ ನೋಟುಗಳನ್ನು ಸೋಪಿನ ನೀರಿನಲ್ಲಿ ತೊಳೆಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ರೈತ ನೋಟು ತೊಳೆಯುವಾಗ ಸ್ಥಳದಲ್ಲಿದ್ದವರು ಅದನ್ನು ವಿಡಿಯೋ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದೀಗ ಆ ವಿಡಿಯೋ ಸಾಮಾಜೀಕ ಜಾಲ ತಾಣದಲ್ಲಿ ವೈರಲ್ ಆಗಿದೆ.

    ಮಂಡ್ಯ ಜಿಲ್ಲೆಯ ಮಳ್ಳವಳ್ಳಿ ಮೂಲದ 7 ಮಂದಿ ದೆಹಲಿಯ ನಿಜಾಮುದ್ದೀನ್ ಕಾರ್ಯಕ್ರಮಕ್ಕೆ ಹೋಗಿದ್ದರು. ಅವರಲ್ಲಿ ಮೂವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಅಲ್ಲದೇ ದೆಹಲಿಯಿಂದ ಬಂದಿದ್ದ 10 ಧರ್ಮಗುರುಗಳು ಸಹ ತಬ್ಲಿಘಿಗಳ ಜೊತೆ ಸಂಪರ್ಕದಲ್ಲಿದ್ದರು. ಈಗ ಮೂವರಿಗೆ ಸೋಂಕು ತಗುಲಿದ್ದು, ಇಬ್ಬರಿಗೆ ನೆಗೆಟಿವ್ ಬಂದಿದೆ. ಇಳಿದ ಇಬ್ಬರ ವರದಿ ಇನ್ನೂ ಬಂದಿಲ್ಲ.

  • 21 ದೇಶಗಳ ನೋಟಿನ ಯಥಾಪ್ರತಿ ಬಳಸಿಕೊಂಡು ಗಣೇಶಮೂರ್ತಿ ನಿರ್ಮಾಣ

    21 ದೇಶಗಳ ನೋಟಿನ ಯಥಾಪ್ರತಿ ಬಳಸಿಕೊಂಡು ಗಣೇಶಮೂರ್ತಿ ನಿರ್ಮಾಣ

    ಉಡುಪಿ: ಭಾರತ ಸೇರಿದಂತೆ ಸುಮಾರು 21 ದೇಶಗಳ ನೋಟಿನ ಯಥಾಪ್ರತಿಯನ್ನು ಬಳಸಿಕೊಂಡು ಉಡುಪಿಯಲ್ಲಿ ಗಣೇಶಮೂರ್ತಿಯನ್ನು ನಿರ್ಮಾಣ ಮಾಡಲಾಗಿದೆ.

    ಇಲ್ಲಿನ ಸ್ಯಾಂಡ್ ಆರ್ಟ್ ಕಲಾವಿದರು ರಚಿಸಿದ ನೋಟ್ ಗಣಪ ಎಲ್ಲರ ಆಕರ್ಷಣೆಗೆ ಪಾತ್ರನಾಗಿದ್ದಾನೆ. ಭಾರತವೂ ಸೇರಿದಂತೆ ಸುಮಾರು 21 ದೇಶಗಳ ನೋಟಿನ ಯಥಾಪ್ರತಿಯನ್ನು ಬಳಸಿಕೊಂಡು ಈ ಸುಂದರ ಗಣೇಶ ರೂಪು ತಳೆದಿದ್ದಾನೆ. ಭಾರತದ ನೋಟುಗಳನ್ನು ಹೆಚ್ಚಾಗಿ ಬಳಸಿದ್ದು, ಶ್ರೀಲಂಕಾ, ಬಾಂಗ್ಲಾ, ಅಫ್ಘಾನಿಸ್ತಾನ್, ಬೂತಾನ್, ಯುಎಇ, ಅಮೆರಿಕ, ಇಸ್ರೇಲ್ ರಾಷ್ಟ್ರಗಳ ನೋಟಿನ ಪ್ರತಿಗಳನ್ನು ಇಲ್ಲಿ ಕಾಣಬಹುದು.

    ಸುಮಾರು 12 ಅಡಿ ಎತ್ತರದ ಈ ಗಣೇಶ ನಗರದ ಸಾಯಿರಾಧಾ ಮೋಟಾರ್ಸ್‍ನಲ್ಲಿ ದರ್ಶನ ನೀಡಿದ್ದಾನೆ. ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಮತ್ತು ಪಂಚರತ್ನ ಸೇವಾ ಟ್ರಸ್ಟ್ ಇವರ ಜಂಟಿ ಆಯೋಜನೆಯಲ್ಲಿ, ಗಣೇಶೋತ್ಸವದ ಪ್ರಯುಕ್ತ ವಿಶಿಷ್ಟ ಗಣೇಶನನ್ನು ಕೂರಿಸಲಾಗಿದೆ. ಮಂಡ್ಯದಿಂದ ತರಿಸಲಾದ ಬೆಲ್ಲದಿಂದ ನಿರ್ಮಾಣವಾದ ಪರಿಸರ ಸ್ನೇಹಿ “ಬೆಲ್ಲದ ಗಣಪತಿ”ಯ ಪ್ರದರ್ಶನವನ್ನು ಚಿತ್ತರಂಜನ್ ಸರ್ಕಲ್ ನ ಪ್ರದರ್ಶನ ಮಂಟಪದಲ್ಲಿ ಏರ್ಪಡಿಸಿದೆ.

    ಗಣಪತಿ ತಯಾರಿಕೆಗೆಂದು ಮಂಡ್ಯದಿಂದ 240 ಕೆಜಿ ತೂಕದ ಬೆಲ್ಲದ ಗಟ್ಟಿಯನ್ನು ತರಿಸಲಾಗಿತ್ತು. ಈ ಬೆಲ್ಲದ ಗಣಪತಿಯನ್ನು ಕಲಾವಿದರಾದ ಲೋಕೇಶ್ ಚಿಟ್ಪಾಡಿ, ರವಿ ಹಿರೆಬೆಟ್ಟು, ವಾಸುದೇವ ಚಿಟ್ಪಾಡಿ ಅವರ ತಂಡ ನಾಜೂಕಾಗಿ, ಕಲಾತ್ಮಾಕವಾಗಿ ತಯಾರಿಸಿದೆ. ಸೋಮವಾರ ಬೆಳಗ್ಗೆಯಿಂದ ಸಾರ್ವಜನಿಕರ ವೀಕ್ಷಣೆಗೆ ಅನುವು ಮಾಡಿ ಕೊಡಲಾಗಿದೆ.

  • 2 ಸಾವಿರ ರೂ. ನೋಟಿಗಾಗಿ ಮೆಟ್ರೋ ಹಳಿಗೆ ಹಾರಿದ ಯುವತಿ

    2 ಸಾವಿರ ರೂ. ನೋಟಿಗಾಗಿ ಮೆಟ್ರೋ ಹಳಿಗೆ ಹಾರಿದ ಯುವತಿ

    ನವದೆಹಲಿ: ಕೈಯಿಂದ ಜಾರಿ ಮೆಟ್ರೋ ರೈಲಿನ ಹಳಿ ಮೇಲೆ ಬಿದ್ದ 2 ಸಾವಿರ ರೂ. ನೋಟಿಗಾಗಿ ಯುವತಿಯೊಬ್ಬಳು ರೈಲ್ವೆ ಹಳಿಗೆ ಹಾರಿರುವ ಘಟನೆ ದೆಹಲಿ ದ್ವಾರಕಾ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ.

    ಬೆಳಗ್ಗೆ 10:30ರ ಸುಮಾರಿಗೆ ರೈಲ್ವೆ ಫ್ಲಾಟ್ ಫಾರ್ಮ್ ಮೇಲೆ ರೈಲಿಗಾಗಿ ಯುವತಿ ಕಾದು ನಿಂತಿದ್ದಾಳೆ. ಈ ಸಮಯದಲ್ಲಿ ಆಕೆಯ ಕೈಯಲ್ಲಿದ್ದ 2 ಸಾವಿರ ರೂ. ನೋಟು ಹಾರಿ ರೈಲ್ವೆ ಹಳಿ ಮೇಲೆ ಬಿದ್ದಿದೆ. ಕೂಡಲೇ ಪಿಂಕ್ ನೋಟು ವಾಪಸ್ ತೆಗೆದುಕೊಳ್ಳಲು ಹಳಿಗೆ ಹಾರಿದ್ದಾಳೆ.

    ಹಳಿಗೆ ಹಾರುತ್ತಿದಂತೆ ರೈಲು ಕೂಡ ಫ್ಲಾಟ್‍ಫಾರಂಗೆ ಬಂದಿದೆ. ಇದನ್ನ ಗಮನಿಸಿದ ಆಕೆ ರೈಲ್ವೆ ಹಳಿ ಮಧ್ಯೆ ಮಲಗಿದ್ದಾಳೆ. ಘಟನೆಯನ್ನು ಕಂಡ ಸಾರ್ವಜನಿಕರು ಕ್ಷಣ ಕಾಲ ಬೆಚ್ಚಿ ಬಿದ್ದಿದ್ದಾರೆ.

    ಎಲ್ಲರೂ ಯುವತಿ ಸಾವನ್ನಪ್ಪಿದ್ದಾಳೆ ಎಂದು ತಿಳಿದಿದ್ದಾರೆ. ಕ್ಷಣ ಮಾತ್ರದಲ್ಲಿ ಎಚ್ಚೆತ್ತಾ ಮೆಟ್ರೋ ಸಿಬ್ಬಂದಿ ಅಕೆಯ ರಕ್ಷಿಸಲು ಮುಂದಾಗಿದ್ದಾರೆ. ಈ ವೇಳೆ ರೈಲಿನ ಕೆಳಗೆ ಸಿಲುಕಿದ್ದ ಯುವತಿ ಸುರಾಕ್ಷಿತವಾಗಿ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ. ಘಟನೆಯಲ್ಲಿ ಯುವತಿಗೆ ಸಣ್ಣ ಪುಟ್ಟ ಗಾಯಗಳಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾಳೆ.

    ಮೊದಲು ಯುವತಿ ಆಕಸ್ಮಾತ್ ಆಗಿ ಹಳಿಗೆ ಬಿದ್ದಿದ್ದಾಳೆ ಎಂದು ತಿಳಿದಿದ್ದ ಅಧಿಕಾರಿಗಳಿಗೆ ಯುವತಿ ವಿಚಾರಣೆ ವೇಳೆ ನೀಡಿದ ಕಾರಣ ಕೇಳಿ ದಂಗಾಗಿದ್ದಾರೆ. ಅಲ್ಲದೇ ಆಕೆಯ ಬಳಿ ತಪ್ಪೊಪ್ಪಿಗೆ ಹೇಳಿಕೆ ಬರೆಸಿಕೊಂಡು ಕಳುಹಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 10 ಲಕ್ಷ ಮೌಲ್ಯದ ನೋಟುಗಳಿಂದ ದೇವಿಗೆ ವಿಶೇಷ ಅಲಂಕಾರ

    10 ಲಕ್ಷ ಮೌಲ್ಯದ ನೋಟುಗಳಿಂದ ದೇವಿಗೆ ವಿಶೇಷ ಅಲಂಕಾರ

    ಮೈಸೂರು: ದೀಪಾವಳಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ನಾಡಿನೆಲ್ಲೆಡೆ ದೇಗುಲಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಗಿದ್ದು, ನಗರದ ಅಮೃತೇಶ್ವರ ದೇಗುಲದಲ್ಲಿ ಬರೋಬ್ಬರಿ ಹತ್ತು ಲಕ್ಷ ರೂಪಾಯಿಯ ವಿವಿಧ ಬಗೆಯ ನೋಟುಗಳಿಂದ ದೇವಿಗೆ ವಿಶೇಷವಾಗಿ ಅಲಂಕಾರ ಮಾಡಲಾಗಿದೆ.

    ದೀಪಾವಳಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ನಗರದ ಅಮೃತೇಶ್ವರಿ ದೇಗುಲದ ಶ್ರೀ ಬಾಲಾ ತ್ರಿಪುರ ಸುಂದರಿ ದೇವಿಗೆ ಒಂದು ರೂ.ನಿಂದ ಹಿಡಿದು ಎರಡು ಸಾವಿರ ರೂಪಾಯಿವರೆಗಿನ ನೋಟಿನ ಅಲಂಕಾರವನ್ನು ಮಾಡಲಾಗಿತ್ತು. ಸುಮಾರು 10 ಲಕ್ಷ ರೂ. ಮೌಲ್ಯದ 1, 5, 10, 20, 50, 100, 200, 500 ಹಾಗೂ 2,000 ಮುಖಬೆಲೆ ನೋಟುಗಳಿಂದ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಈ ಅಲಂಕಾರವನ್ನು ಭಕ್ತರು ಕಣ್ತುಂಬಿಕೊಂಡು ಪುನೀತರಾಗಿದ್ದಾರೆ.

    ದೀಪಾವಳಿಯ ದಿನ ಲಕ್ಷ್ಮೀ ದೇವಿಗೆ ವಿಶೇಷ ಅಲಂಕಾರ ಮಾಡುವುದು ಸರ್ವೇ ಸಾಮಾನ್ಯ. ಆದರೆ ಅಮೃತೇಶ್ವರ ದೇವಾಲಯದ ಸಿಬ್ಬಂದಿ ಶ್ರದ್ಧಾ-ಭಕ್ತಿಯಿಂದ ದೇವಿಗೆ ವಿಶಿಷ್ಟ ರೂಪದಲ್ಲಿ ನೋಟಿನ ಅಲಂಕಾರವನ್ನು ಮಾಡಿದ್ದಾರೆ. ಇವರ ಈ ಕಾರ್ಯಕ್ಕೆ ಭಕ್ತಾದಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

    ಇತ್ತೀಚೆಗೆ ಮಧ್ಯಪ್ರದೇಶದ ರತ್ಲಂ ನಗರದ ಮಹಾಲಕ್ಷ್ಮೀ ದೇವಾಲಯದ ದೇವಿಗೆ ನಗದು, ಚಿನ್ನಾಭರಣ ಮತ್ತು ವಜ್ರಾಭರಣ ಸೇರಿದಂತೆ ಒಟ್ಟು 100 ಕೋಟಿ ರೂ.ನಲ್ಲಿ ಅಲಂಕಾರ ಮಾಡಿದ್ದರು. ಮಹಾಲಕ್ಷ್ಮೀ ದೇಗುಲಕ್ಕೆ ಇದೇ ಮೊದಲ ಬಾರಿಗೆ ಅದ್ಧೂರಿಯಾಗಿ ಅಲಂಕಾರ ಮಾಡಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ನಿವಾಸಿ, ನಾನು ಹಲವು ವರ್ಷಗಳಿಂದ ಇಲ್ಲಿಯ ಆಚರಣೆಯನ್ನು ನೋಡಿಕೊಂಡು ಬಂದಿದ್ದೇನೆ. ಈ ಮೊದಲು 6 ರಿಂದ 7 ಲಕ್ಷ ರೂ. ಮಾತ್ರ ಬಳಸಿ ದೇಗುಲವನ್ನು ಅಲಂಕಾರ ಮಾಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ 100 ಕೋಟಿ ರೂ.ನಲ್ಲಿ ಆಲಯವನ್ನು ಅಲಂಕರಿಸಲಾಗಿದೆ ಎಂದು ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಂಡ್ಯದಲ್ಲಿ 5 ಲಕ್ಷ ರೂ. ನೋಟುಗಳಿಂದ ದೇವಿಗೆ ಸಿಂಗಾರ- ಇತ್ತ ಕೋಲಾರದಲ್ಲಿ ನೆರೆಸಂತ್ರಸ್ತರ ಕಷ್ಟ ನಿವಾರಣೆಗೆ ವಿಶೇಷ ಪೂಜೆ

    ಮಂಡ್ಯದಲ್ಲಿ 5 ಲಕ್ಷ ರೂ. ನೋಟುಗಳಿಂದ ದೇವಿಗೆ ಸಿಂಗಾರ- ಇತ್ತ ಕೋಲಾರದಲ್ಲಿ ನೆರೆಸಂತ್ರಸ್ತರ ಕಷ್ಟ ನಿವಾರಣೆಗೆ ವಿಶೇಷ ಪೂಜೆ

    ಮಂಡ್ಯ/ಕೋಲಾರ: ಶ್ರೀವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಇಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಶ್ರೀಚಾಮುಂಡೇಶ್ವರಿ ತಾಯಿ ದೇವಾಲಯವನ್ನು ವಿಶೇಷವಾಗಿ ನೋಟುಗಳಿಂದ ಸಿಂಗರಿಸಿ ಪೂಜೆ ನೆರವೇರಿಸಲಾಯಿತು. ಇತ್ತ ಕೋಲಾರದಲ್ಲಿ ನೆರೆ ಸಂತ್ರಸ್ತರ ಕಷ್ಟಗಳು ನಿವಾರಣೆಯಾಗಲೆಂದು ವಿಶೇಷ ಪೂಜೆ ನಡೆಸಲಾಯಿತು.

    ಅರ್ಚಕ ಲಕ್ಷ್ಮೀಶ್ ಅವರು, ಭಕ್ತರು ಸಿಂಗಾರಕ್ಕೆಂದು ನೀಡಲಾಗಿದ್ದ 5 ಲಕ್ಷ ರೂ.ಗಳನ್ನು ಬಗೆ ಬಗೆಯಾಗಿ ಅಲಂಕರಿಸಿ ವಿಶೇಷ ರೀತಿಯಲ್ಲಿ ದೇವಿಯನ್ನು ಆರಾಧಿಸಿದರು. 2,000, 500, 200, 100, 50, 20, 10 ಹಾಗೂ 5 ರೂ.ಗಳ ನೋಟುಗಳ ಸಿಂಗಾರ ಭಕ್ತರ ಮನಪುಳಕಗೊಳ್ಳುವಂತೆ ಮಾಡಿತು. ಈ ಅಪರೂಪದ ಚಿತ್ರಣವನ್ನು ಕಣ್ತುಂಬಿಕೊಂಡ ಭಕ್ತರು ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ತಮ್ಮ ಇಷ್ಟಾರ್ಥ ಈಡೇರಿಸುವಂತೆ ಬೇಡಿಕೊಂಡರು.

    ಇತ್ತ ಕೋಲಾರದಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಬೆಳಗ್ಗಿನಿಂದಲೇ ಹೆಂಗಳೆಯರು ಮನೆಗಳಲ್ಲಿ ವರ ಕೊಡೋ ಲಕ್ಷ್ಮಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಿ ಸಂಭ್ರಮಿಸುತ್ತಿದ್ದಾರೆ. ಕೆಲವರು ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆಗಳನ್ನು ಸಲ್ಲಿಸಿ ಲಕ್ಷ್ಮಿ ಕೃಪಕಟಾಕ್ಷೆಗೆ ಪಾತ್ರರಾಗುತ್ತಿದ್ದಾರೆ. ಹಬ್ಬದ ಪ್ರಯುಕ್ತ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕು ಪಿಚ್ಚಗುಂಟ್ಲಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಆದಿಪರಾಶಕ್ತಿಯ ದೇವಾಲಯದಲ್ಲಿ ವಿಶೇಷ ಪೂಜೆ ಮತ್ತು ಅಲಂಕಾರವನ್ನು ಹಮ್ಮಿಕೊಳ್ಳಲಾಗಿದೆ. ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬ- ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ

    ಕಳೆದ 21 ವರ್ಷಗಳಿಂದ ಈ ದೇವಾಲಯದಲ್ಲಿ ವರಮಹಾಲಕ್ಷ್ಮಿ ಹಬ್ಬಕ್ಕೆಂದು 108 ಬಗೆಯ ಸಿಹಿ ತಿಂಡಿಗಳನ್ನು ಮಾಡಿ ಲಕ್ಷ್ಮಿ ಪೂಜೆಯನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತಿದೆ. ಈ ವರ್ಷ ವಿಶೇಷವಾಗಿ ನೆರೆ ಸಂತ್ರಸ್ತರ ಕಷ್ಟಗಳು ನಿವಾರಣೆಯಾಗಲಿ ಎಂದು ವಿವಿಧ ಬಗೆಯ ಸಿಹಿ ಹಾಗೂ ಖಾರದ ನೈವೇಧ್ಯ ಸಿದ್ಧಪಡಿಸಿ ದೇವರ ಪೂಜೆ ಸಲ್ಲಿಸಲಾಗುತ್ತಿದೆ.

    ಹಬ್ಬದ ಪ್ರಯುಕ್ತ ಪ್ರತಿ ವರ್ಷದಂತೆ ದೇವರ ದರ್ಶನಕ್ಕೆ ಬರುವ ನೂರಾರು ಭಕ್ತಾಧಿಗಳಿಗೆ ದೇವಾಲಯದ ವತಿಯಿಂದ ವಿಶೇಷವಾಗಿ ಅನ್ನದಾನವನ್ನು ಹಮ್ಮಿಕೊಳ್ಳಲಾಗಿದೆ. ದೇವರಿಗೆ ಬೇಕಾದ ಸಿಹಿ ತಿಂಡಿಗಳನ್ನು ಮಾಡೋದ್ರಿಂದ ವರಮಹಾಲಕ್ಷ್ಮಿ ಜನರಿಗೆ ತಮ್ಮೆಲ್ಲ ಇಷ್ಟಾರ್ಥಗಳನ್ನು ಈಡೇರಿಸಲಿದೆ ಎನ್ನುವ ನಂಬಿಕೆ ಇಲ್ಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನೂತನ 100 ರೂಪಾಯಿ ನೋಟಿನ ವಿನ್ಯಾಸ ಬಿಡುಗಡೆಗೊಳಿಸಿದ ಆರ್ ಬಿಐ

    ನೂತನ 100 ರೂಪಾಯಿ ನೋಟಿನ ವಿನ್ಯಾಸ ಬಿಡುಗಡೆಗೊಳಿಸಿದ ಆರ್ ಬಿಐ

    ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ 100 ರೂ. ಮುಖಬೆಲೆಯ ನೂತನ ಹೊಸ ನೋಟುಗಳನ್ನು ಶೀಘ್ರದಲ್ಲೇ ಚಲಾವಣೆಗೆ ತರಲು ಯೋಜನೆ ರೂಪಿಸಿದ್ದು, ಹೊಸ ನೋಟಿನ ವಿನ್ಯಾಸವನ್ನು ತನ್ನ ವೆಬ್‍ಸೈಟ್ ನಲ್ಲಿ ಪ್ರಕಟಿಸಿದೆ.

    2016ರ ನವೆಂಬರ್ ನಲ್ಲಿ ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಣ ನಿರ್ಧಾರದಿಂದಾಗಿ, ಆರ್ ಬಿಐ ಮೊದಲನೇ ಬಾರಿಗೆ 2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತಂದಿತ್ತು. ಅಲ್ಲದೇ ಚಿಲ್ಲರೆ ಅಭಾವದ ಸಮಸ್ಯೆಯಿಂದಾಗಿ 500ರೂ. ಹಾಗೂ 200ರೂ. ಮುಖಬೆಲೆಯ ನೂತನ ವಿನ್ಯಾಸದ ನೋಟುಗಳನ್ನು ಮುದ್ರಿಸಿತ್ತು. ಅಲ್ಲದೇ ಇತ್ತೀಚೆಗೆ 50 ರೂ. ಹಾಗೂ 10 ರೂಪಾಯಿಯ ನೋಟುಗಳನ್ನು ಸಹ ಚಲಾವಣೆಗೆ ತಂದಿತ್ತು.

    ಇದೀಗ ನೂತನ ವಿನ್ಯಾಸದಲ್ಲಿ 100 ರೂಪಾಯಿಯನ್ನು ಚಲಾವಣೆಗೆ ತರಲು ನಿರ್ಧರಿಸಿದೆ. ನೂತನ 100 ರೂಪಾಯಿಯ ಹೊಸ ನೋಟು ಲ್ಯಾವೆಂಡರ್(ನೀಲಿ) ಬಣ್ಣ ಹೊಂದಿದ್ದು, 66 ಮಿ.ಮೀ. ಘಿ 142 ಮಿ.ಮೀ. ಅಳತೆಯಲ್ಲಿದೆ. ನೋಟಿನ ಹಿಂಭಾಗದಲ್ಲಿ ಗುಜರಾತ್ ನ ಐತಿಹಾಸಿಕ `ರಾಣಿ ಕಿ ವಾವ್’ನ ಚಿತ್ರವನ್ನು ಮುದ್ರಿಸಿದೆ.

    ಈಗಾಗಲೇ ಚಾಲ್ತಿಯಲ್ಲಿರುವ 100 ರೂ. ಮುಖಬೆಲೆಯ ನೋಟುಗಳು ಚಾಲ್ತಿಯಲ್ಲಿರುತ್ತವೆ. ಮುಂದಿನ ದಿನಗಳಲ್ಲಿ ಹೊಸ ವಿನ್ಯಾಸದ ನೋಟುಗಳ ಪ್ರಮಾಣವನ್ನು ಹೆಚ್ಚಿಸಲಾಗುವುದು ಎಂದು ಆರ್ ಬಿಐ ತಿಳಿಸಿದೆ.

  • ಲವ್ವರ್ ಗಾಗಿ ಬರೋಬ್ಬರಿ 35 ಲಕ್ಷ ನೋಟಿನ ಬೊಕ್ಕೆಯನ್ನೇ ಕೊಟ್ಟ

    ಲವ್ವರ್ ಗಾಗಿ ಬರೋಬ್ಬರಿ 35 ಲಕ್ಷ ನೋಟಿನ ಬೊಕ್ಕೆಯನ್ನೇ ಕೊಟ್ಟ

    ಬೀಜಿಂಗ್: ಸಾಮಾನ್ಯವಾಗಿ ಕೆಲವು ಕಡೆ ಮದುವೆ ಸಂದರ್ಭದಲ್ಲಿ ವಧು-ವರರಿಗೆ ನೋಟಿನ ಹೂ ಮಾಲೆಯನ್ನ ಹಾಕುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಪ್ರಿಯಕರ ತನ್ನ ಪ್ರಿಯತಮೆಗಾಗಿ ನೋಟುಗಳಿಂದಲೇ ಮಾಡಿದ್ದ ಹೂಗುಚ್ಛವನ್ನು ಉಡುಗೊರೆಯಾಗಿ ನೀಡಿದ್ದಾನೆ.

    ಈ ಘಟನೆ ಚೀನಾದಲ್ಲಿ ನಡೆದಿದ್ದು, ಪ್ರಿಯತಮೆ ನೋಟಿನಿಂದ ತಯಾರಾಗಿದ್ದ ಹೂಗುಚ್ಛವನ್ನು ಹಿಡಿದು ಹೋಟೆಲ್ ನಲ್ಲಿ ನಿಂತಿರುವ ಫೋಟೋವೊಂದು ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈಗ ಅದು ಎಲ್ಲೆಡೆ ವೈರಲ್ ಆಗಿದೆ. ಯುವಕ ಈ ಬೊಕ್ಕೆಯನ್ನು ಸಿದ್ಧ ಪಡಿಸಲು ಸುಮಾರು 330,000 ಯುವಾನ್(ಅಂದಾಜು 35.26 ಲಕ್ಷ ರೂ.)ಖರ್ಚು ಮಾಡಿದ್ದಾನೆ ಎಂದು ವರದಿಯಾಗಿದೆ.

    ಮೇ 16 ರಂದು ಯುವಕನ ಗೆಳತಿಯ ಹುಟ್ಟುಹಬ್ಬ ಇತ್ತು. ಆದ್ದರಿಂದ ಹುಟ್ಟುಹಬ್ಬಕ್ಕಾಗಿ ವಿಶೇಷವಾದ ಗಿಫ್ಟ್ ನೀಡಲು ಬಯಸಿದ್ದನು. ಆಗ ಆತನ ನೋಟಿನ ಪುಷ್ಪಗುಚ್ಛವನ್ನು ಉಡುಗೊರೆಯಾಗಿ ನೀಡಲು ಬಯಸಿದ್ದು, ಇದಕ್ಕಾಗಿ ಹೂವಿನ ಅಂಗಡಿಯಿಂದ ಏಳು ಉದ್ಯೋಗಿಗಳನ್ನು ಕರೆತಂದು ಸುಮಾರು 10 ಗಂಟೆಗಳ ಕಾಲ ಕುಳಿತು ನೋಟುಗಳನ್ನು ಪೋಣಿಸಿದ್ದ ಬೊಕ್ಕೆಯನ್ನು ಸಿದ್ಧಪಡಿಸಿದ್ದಾನೆ. ಇದಕ್ಕಾಗಿ ಯುವಕ ಸುಮಾರು 35 ಲಕ್ಷದ 70 ಸಾವಿರ ರೂ. ಮೌಲ್ಯದ ನೋಟುಗಳನ್ನು ಬಳಸಿದ್ದಾನೆ.

    ಈ ಫೋಟೋ ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಬಳಿಕ ಕೆಲವರು ಆತನಿಗೆ ಟೀಕೆ ಮಾಡಿದ್ದರು. ಮತ್ತೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಇದು ಕೆಲವು ದಿನಗಳ ನಂತರ ಅಧಿಕಾರಿಗಳಿಗೆ ಕಣ್ಣಿಗೆ ಬಿದ್ದಿದೆ. ಇದರಿಂದ ಯುವಕ ಪ್ರೀತಿಗಾಗಿ ಚೀನಾ ಕರೆನ್ಸಿಯನ್ನು ದುರುಪಯೋಗ ಪಡಿಸಿಕೊಂಡಿದ್ದಾನೆ. ಇದು ಕಾನೂನು ಪ್ರಕಾರ ಅಪರಾಧವಾಗಿದ್ದು, ಈಗ ಆತನ ವಿರುದ್ಧ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಲು ಮುಂದಾಗಿದ್ದಾರೆ.

  • ಟಗರು ಖರೀದಿಸಿ ಮಹಿಳೆಗೆ 2 ಸಾವಿರ ರೂ. ಮುಖಬೆಲೆಯ ನಕಲಿ ನೋಟು ನೀಡಿದ ಖದೀಮರು!

    ಟಗರು ಖರೀದಿಸಿ ಮಹಿಳೆಗೆ 2 ಸಾವಿರ ರೂ. ಮುಖಬೆಲೆಯ ನಕಲಿ ನೋಟು ನೀಡಿದ ಖದೀಮರು!

    ಕೊಪ್ಪಳ: ಮಹಿಳೆಯೊಬ್ಬರ ಕೈಯಿಂದ ಟಗರು ಖರೀದಿ ಮಾಡಿ ಖೋಟಾ ನೋಟು ನೀಡಿ ವಂಚಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ.

    ಶಹಪೂರ ಗ್ರಾಮದ ಯಲ್ಲಮ್ಮ ಅವರೇ ವಂಚನೆಗೊಳಗಾದ ಮಹಿಳೆ. ಇವರು ಕೊಪ್ಪಳ ತಾಲೂಕಿನ ಬೂದಗುಂಪ ಗ್ರಾಮದ ಸಂತೆಗೆ ಕಂಬಳಿ ಟಗರು ಮಾರಾಟ ಮಾಡಲು ತೆರಳಿದ್ದರು. ಈ ವೇಳೆ ಅಲ್ಲಿಗೆ ಬಂದ ಖದೀಮರು ಮಹಿಳೆಯ ಕೈಯಿಂದ ಎರಡು ಟಗರುಗಳನ್ನು ಖರೀದಿ ಮಾಡಿದ್ದಾರೆ.

    ಟಗರು ಖರೀದಿಸಿದ ಮಹಿಳೆಗೆ 2 ಸಾವಿರ ಮುಖ ಬೆಲೆಯ ಐದು ಖೋಟಾ ನೋಟು ನೀಡಿ ಅಲ್ಲಿಂದ ಬೈಕ್ ಏರಿ ಕಾಲ್ಕಿತ್ತಿದ್ದಾರೆ. ಖದೀಮರು ಅಲ್ಲಿಂದ ತೆರಳಿದ ಬಳಿಕ ಮಹಿಳೆಗೆ ತನ್ನ ಕೈಗೆ ಸಿಕ್ಕಿರುವುದು ನಕಲಿ ನೋಟು ಎಂಬುದು ಬಯಲಾಗಿದೆ.

    ಸದ್ಯ ಘಟನೆ ಸಂಬಂಧ ಯಲ್ಲಮ್ಮ ಮುನಿರಾಬಾದ್ ಠಾಣೆಗೆ ದೂರು ನೀಡಿದ್ದಾರೆ.