Tag: Note printing

  • ಭಾರತದ ನೋಟು ಚೀನಾದಲ್ಲಿ ಮುದ್ರಣ?

    ಭಾರತದ ನೋಟು ಚೀನಾದಲ್ಲಿ ಮುದ್ರಣ?

    ನವದೆಹಲಿ: ಚೀನಾದಲ್ಲಿ ಭಾರತ ಸೇರಿದಂತೆ ಜಗತ್ತಿನ ಅನೇಕ ರಾಷ್ಟ್ರಗಳ ಬೃಹತ್ ಮೊತ್ತದ ನೋಟುಗಳನ್ನು ಮುದ್ರಣವಾಗುತ್ತಿದೆ ಎಂದು ಚೀನಾದ ಮಾಧ್ಯಮವೊಂದು ವರದಿ ಮಾಡಿದೆ.

    ಭಾರತ, ಥೈಲ್ಯಾಂಡ್, ಬಾಂಗ್ಲಾದೇಶ, ಶ್ರೀಲಂಕಾ, ಮಲೇಷ್ಯಾ, ಬ್ರೆಜಿಲ್ ಮತ್ತು ಪೋಲೆಂಡ್ ದೇಶಗಳ ಬೃಹತ್ ಮೊತ್ತದ ಹಣವನ್ನು ‘ಚೀನಾ ಬ್ಯಾಂಕ್ ನೋಟ್ ಪ್ರಿಂಟಿಂಗ್ ಮತ್ತು ಮಿಂಟಿಂಗ್ ಕಾರ್ಪೋರೇಷನ್’ ಮುದ್ರಿಸುತ್ತಿದೆ ಎಂದು ದಿ ಸೌತ್ ಚೀನಾ ಮಾರ್ನಿಂಗ್ ತನಿಖಾ ವರದಿಯನ್ನು ಪ್ರಕಟಿಸಿದೆ.

    ಚೀನಾದ ಅನೇಕ ನೋಟು ಮುದ್ರಣಾಲಯದಲ್ಲಿ ಜಗತ್ತಿನ ವಿವಿಧ ದೇಶಗಳ ಬೃಹತ್ ಮೊತ್ತದ ನೋಟುಗಳು ಮುದ್ರಣವಾಗುತ್ತಿವೆ. ಚೀನಾ ಬ್ಯಾಂಕ್ ನೋಟ್ ಪ್ರಿಂಟಿಂಗ್ ಮತ್ತು ಮಿಂಟಿಂಗ್ ಕಾರ್ಪೋರೇಷನ್ ಉಲ್ಲೇಖದ ಪ್ರಕಾರ, ಈ ವರ್ಷ ಚೀನಾ ಸರ್ಕಾರವು ಬೃಹತ್ ಮೊತ್ತದ ಹಣವನ್ನು ಮುದ್ರಣ ಮಾಡಿದೆ ಎಂದು ವರದಿ ಮಾಡಿದೆ.

    2013ರಲ್ಲಿ ಬೆಲ್ಟ್ ಆ್ಯಂಡ್ ರೋಡ್ ಯೋಜನೆಯನ್ನು ಆರಂಭಿಸಿದ ಎರಡು ವರ್ಷಗಳಲ್ಲಿ ಭಾರತ, ಥೈಲ್ಯಾಂಡ್, ಬಾಂಗ್ಲಾದೇಶ, ಶ್ರೀಲಂಕಾ, ಮಲೇಶಿಯಾ, ಬ್ರೆಜಿಲ್ ಮತ್ತು ಪೋಲೆಂಡ್ ದೇಶಗಳ ಕರೆನ್ಸಿ ಉತ್ಪಾದನೆ ಯೋಜನೆಯ ಗುತ್ತಿಗೆಗಳನ್ನು ಯಶಸ್ವಿಯಾಗಿ ಪಡೆಯಲಾಗಿದೆ ಎಂದು ಚೈನಾ ಬ್ಯಾಂಕ್ ನೋಟ್ ಪ್ರಿಂಟಿಂಗ್ ಆ್ಯಂಡ್ ಮಿಂಟಿಂಗ್ ಕಾರ್ಪೊರೇಶನ್ ಅಧ್ಯಕ್ಷ ಲಿಯು ಗೀಶೆಂಗ್ ಅವರ ಲೇಖನವನ್ನು ವರದಿಯು ಉಲ್ಲೇಖೀಸಿದೆ.

    ಈ ಸುದ್ದಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮಾಜಿ ಸಚಿವ, ಕೇರಳ ಕಾಂಗ್ರೆಸ್ ಸಂಸದರಾಗಿರುವ ಶಶಿ ತರೂರ್ ಅವರು, ರಾಷ್ಟ್ರೀಯ ಭದ್ರತೆಗೆ ಧಕ್ಕೆ ಉಂಟು ಮಾಡುತ್ತಿರುವ ಈ ಸುದ್ದಿ ನಿಜವೇ? ಸ್ಪಷ್ಟನೆ ನೀಡಿ ಎಂದು ಕೇಂದ್ರ ಸಚಿವರಾದ ಪಿಯೂಶ್ ಗೋಯಲ್ ಮತ್ತು ಅರುಣ್ ಜೇಟ್ಲಿ ಅವರನ್ನು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.