Tag: note bank

  • ನಿರಾಶಾವಾದಿಗಳಿಂದ ಅಪಪ್ರಚಾರ, ಆರ್ಥಿಕತೆ ಕುಸಿತವಾಗಿಲ್ಲ: ಮೋದಿಯಿಂದ ಅಂಕಿಸಂಖ್ಯೆಯ ಭಾಷಣ

    ನಿರಾಶಾವಾದಿಗಳಿಂದ ಅಪಪ್ರಚಾರ, ಆರ್ಥಿಕತೆ ಕುಸಿತವಾಗಿಲ್ಲ: ಮೋದಿಯಿಂದ ಅಂಕಿಸಂಖ್ಯೆಯ ಭಾಷಣ

    ನವದೆಹಲಿ: ದೇಶದ ಆರ್ಥಿಕತೆ ಕುಸಿದಿಲ್ಲ. ಆದರೆ ನಿರಾಶಾವಾದಿಗಳು ಹಿಂಜರಿತವಾಗಿದೆ ಎನ್ನುವ ಸುದ್ದಿಯನ್ನು ಹರಡಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುವ ಮೂಲಕ ವಿರೋಧಿ ಪಕ್ಷಗಳ ಟೀಕೆಗೆ ಪ್ರತ್ಯುತ್ತರ ನೀಡಿದ್ದಾರೆ.

    ದೆಹಲಿಯ ವಿಜ್ಞಾನ ಭವನದಲ್ಲಿ ಇನ್ಸ್ ಟ್ಯೂಟ್ ಆಫ್ ಕಂಪನಿ ಸೆಕ್ರೆಟರೀಸ್ ಆಫ್ ಇಂಡಿಯಾದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ಅಂಕಿಸಂಖ್ಯೆಗಳಿಂದ ಕೂಡಿದ ಮಾಹಿತಿ ಇರುವ ಭಾಷಣವನ್ನು ಮಾಡುವ ಮೂಲಕ ತಿರುಗೇಟು ಕೊಟ್ಟಿದ್ದಾರೆ.

    500, 1ಸಾವಿರ ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ್ದರಿಂದ ದೇಶಕ್ಕೆ ಒಳ್ಳೆದಾಗುತ್ತಿದೆ. ನೋಟ್ ಬ್ಯಾನ್ ಬಳಿಕ ನಗದು ಚಲಾವಣೆ ಪ್ರಮಾಣ ಶೇ.12ರಿಂದ ಶೇ.9ಕ್ಕೆ ಕುಸಿದಿದೆ ಎಂದು ಹೇಳಿದರು.

    ದೇಶದ ಆರ್ಥಿಕ ಪ್ರಗತಿ (ಜಿಡಿಪಿ) ಮೊದಲ ತ್ರೈಮಾಸಿಕದಲ್ಲಿ ಮೂರು ವರ್ಷಗಳ ಕನಿಷ್ಠ ಮಟ್ಟವಾದ ಶೇ 5.7ಕ್ಕೆ ಕುಸಿತ ಕಂಡಿದ್ದನ್ನು ಒಪ್ಪಿಕೊಂಡ ಅವರು, ಯುಪಿಎ ಅವಧಿಯಲ್ಲಿ 8 ಬಾರಿ ಶೇ.5.7ಕ್ಕಿಂತ ಕಡಿಮೆ ಜಿಡಿಪಿ ಕುಸಿದಿತ್ತು ಎಂದು ಹೇಳಿದರು. ಆರಂಭದಲ್ಲಿ ಸಮಸ್ಯೆಯಾದರೂ ಭವಿಷ್ಯದಲ್ಲಿ ದೇಶಕ್ಕೆ ಲಾಭವಾಗಲಿದೆ ಎನ್ನುವ ದೃಷ್ಟಿಯನ್ನು ನೋಡಿಕೊಂಡೇ ನೋಟ್ ನಿಷೇಧ ಮಾಡಿ ಸರಕು ಮತ್ತು ಸೇವಾ ತೆರಿಗೆಯನ್ನು(ಜಿಎಸ್‍ಟಿ) ತಂದಿದ್ದೇವೆ. ನಮ್ಮ ಮೂರು ವರ್ಷದ ಅವಧಿಯಲ್ಲಿ ಜಿಡಿಪಿ ದರ ಶೇ.7.5 ಇತ್ತು ಎನ್ನುವುದನ್ನು ಎಲ್ಲರು ತಿಳಿದುಕೊಳ್ಳಬೇಕು. ಮುಂದಿನ ತ್ರೈಮಾಸಿಕದಲ್ಲಿ ಶೇ.7.7 ಜಿಡಿಪಿ ದರ ಬೆಳವಣಿಗೆಯಾಗುವ ನಿರೀಕ್ಷೆಯಲ್ಲಿದೆ ಎಂದು ಹೇಳಿದರು.

    ಹೊಟ್ಟೆ ತುಂಬಿರುವವರು ನನ್ನನ್ನು ದುರ್ಬಲ ಮಾಡಲು ನೋಡುತ್ತಿದ್ದಾರೆ. ದೇಶದ ಭವಿಷ್ಯಕ್ಕಾಗಿ ನಮ್ಮ ಕೆಲಸ ಕಠಿಣವಾಗಿರಬಹುದು. ಆದ್ರೆ, ಹೃದಯ ಮೃದು, ಸಂವೇದನಾಶೀಲವಾಗಿದೆ. ಕಪ್ಪುಹಣವನ್ನು ನಿಯಂತ್ರಿಸಲು ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ನೊಂದಣಿಯಾದ 3 ಲಕ್ಷ ಕಂಪೆನಿಗಳಲ್ಲಿ 2.1 ಲಕ್ಷಕ್ಕೂ ಅಧಿಕ ಕಂಪೆನಿಗಳು ನಕಲಿಯಾಗಿದೆ ಎನ್ನುವ ವಿಚಾರ ನೋಟ್ ಬ್ಯಾನ್ ಬಳಿಕ ತಿಳಿದು ಬಂದಿದೆ ಎಂದು ವಿವರಿಸಿದರು.

    ಎಫ್‍ಡಿಐನಲ್ಲಿ ದಾಖಲೆಯಾಗಿದ್ದು, 21 ಇಲಾಖೆಗಳಲ್ಲಿ 87 ಸುಧಾರಣೆಗಳನ್ನು ತಂದಿದ್ದೇವೆ. ಜಿಎಸ್‍ಟಿಯಲ್ಲಿ ಸಮಸ್ಯೆಯಾದರೆ ಅಗತ್ಯ ಬದಲಾವಣೆ ತರಲು ಸಿದ್ಧವಾಗಿದ್ದೇವೆ. ದೇಶದ ಆರ್ಥಿಕತೆಯ ಮೂಲ ಸದೃಢವಾಗಿದೆ. ಜನರು ಕಷ್ಟಪಟ್ಟು ದುಡಿದ ಹಣದ ಮಹತ್ವ ಸರ್ಕಾರಕ್ಕೆ ಗೊತ್ತಿದೆ. ನಮ್ಮ ಯೋಜನೆಗಳು ಬಡವರು ಮತ್ತು ಮಧ್ಯಮ ವರ್ಗದ ಜನರ ಉತ್ತಮ ಜೀವನವನ್ನು ಕೇಂದ್ರೀಕರಿಸಿವೆ. 2022ರಲ್ಲಿ ಹೊಸ ಭಾರತಕ್ಕೆ ಇಡೀ ವಿಶ್ವವೇ ಸಾಕ್ಷಿಯಾಗಲಿದೆ ಎಂದು ಹೇಳಿದರು.