ಮಹಿಳೆಯರು ಬಳಸುವ ಸೌಂದರ್ಯ ವರ್ಧಕಗಳಲ್ಲಿ ಲಿಪ್‌ಸ್ಟಿಕ್ (Lipstic) ಕೂಡ ಒಂದು. ಲಿಪ್‌ಸ್ಟಿಕ್ ಬಳಸುವುದರಿಂದ ಮಹಿಳೆಯರು ಬೋಲ್ಡ್ ಆಗಿ ಬಹಳ ಆಕರ್ಷಕರಾಗಿ ಕಾಣುತ್ತಾರೆ. ಆದರೆ ಇದೊಂದು ದೇಶದಲ್ಲಿ ಮಹಿಳೆಯರು ಕೆಂಪು ಬಣ್ಣದ ಲಿಪ್‌ಸ್ಟಿಕ್ ಬಳಸುವಂತಿಲ್ಲ. ಬಳಸಿದರೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಅರೆ ಇದ್ಯಾವ ದೇಶ ಎಂದು ಯೋಚನೆ ಮಾಡುತ್ತಿದ್ದೀರಾ? ಈ ರೀತಿಯ ವಿಚಿತ್ರ ಕಾನೂನು ಹೊರಡಿಸಿರುವುದು ಉತ್ತರ ಕೊರಿಯಾದಲ್ಲಿ. ಇಲ್ಲಿ ಮಹಿಳೆಯರು ಕೆಂಪು ಬಣ್ಣದ ಲಿಪ್‌ಸ್ಟಿಕ್ ಬಳಸಬಾರದು ಎಂದು ಅಲ್ಲಿನ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆದೇಶ ಹೊರಡಿಸಿದ್ದಾರೆ.
ಉತ್ತರ ಕೊರಿಯಾ (North Korea) ಅಲ್ಲಿನ ವಿಚಿತ್ರ ಕಾನೂನುಗಳಿಗೆ ಪ್ರಸಿದ್ಧ. ಅಲ್ಲಿನ ಕಾನೂನು ನೋಡಿದರೆ ಎಂಥವರಿಗೂ ಒಂದು ಕ್ಷಣ ತಲೆತಿರುಗುತ್ತದೆ. ಇದೂ ಒಂದು ಕಾನೂನಾ ಎಂದು ಭಾಸವಾಗುತ್ತದೆ. ಉಡುಗೆತೊಡುಗೆ, ಹೇರ್‌ಸ್ಟೈಲ್ ಹೀಗೇ ಪ್ರತಿಯೊಂದರ ಮೇಲೂ ಇಲ್ಲಿ ಕಾನೂನು ಹೇರಲಾಗುತ್ತದೆ. ಆದರೆ ಈಗ ಮಹಿಳೆಯರು ಹಾಕುವ ಲಿಪ್‌ಸ್ಟಿಕ್ ಮೇಲೂ ಕಿಮ್ ಜಾಂಗ್ ಉನ್ (Kim Jong Un) ಕಣ್ಣು ಬಿದ್ದಿದೆ. ಅದರಲ್ಲೂ ಕೆಂಪು ಬಣ್ಣದ ಲಿಪ್‌ಸ್ಟಿಕ್ ಹಾಕಬಾರದು ಎಂದು ಆದೇಶ ಹೊರಡಿಸಿರುವುದು ಅಚ್ಚರಿಯ ಸಂಗತಿ. ಹಾಗಾದರೆ ಇದರ ಹಿಂದಿರುವ ಕಾರಣವೇನು? ಕೆಂಪು ಬಣ್ಣದ ಲಿಪ್‌ಸ್ಟಿಕ್ ಹಾಕಿದರೆ ಏನಾಗುತ್ತದೆ? ಕಿಮ್ ಜಾಂಗ್ ಉನ್ ಹೊರಡಿಸಿರುವ ವಿಚಿತ್ರ ಕಾನೂನುಗಳೇನು ಎಂಬುದರ ಕುರಿತು ಇಲ್ಲಿ ವಿವರಿಸಲಾಗಿದೆ.

ಉತ್ತರ ಕೊರಿಯಾದ ಸರ್ಕಾರವು ರಾಜ್ಯದ ಮೌಲ್ಯಗಳೊಂದಿಗೆ ಹೊಂದಿಕೊಳ್ಳುವ ಸಂಪ್ರದಾಯವಾದಿ, ಸಾಧಾರಣ ಸೌಂದರ್ಯವನ್ನು ಉತ್ತೇಜಿಸುತ್ತದೆ. ಆದ್ದರಿಂದ ಮಹಿಳೆಯರು ಸರಳತೆ ಮತ್ತು ಏಕರೂಪತೆಗೆ ಹೊಂದಿಕೊಳ್ಳಬಹುದಾದ ಬೇಸಿಕ್ ಮೇಕ್‌ಅಪ್ ಅನ್ನು ಮಾಡಿಕೊಳ್ಳಲು ಇಲ್ಲಿನ ಆಡಳಿತ ಅನುಮತಿಸುತ್ತದೆ.
ಉತ್ತರ ಕೊರಿಯಾದಲ್ಲಿ ಕೆಂಪು ಲಿಪ್‌ಸ್ಟಿಕ್ ಮೇಲಿನ ನಿಷೇಧವು ಕೇವಲ ಸೌಂದರ್ಯ ನಿಯಂತ್ರಣವಾಗಿರದೇ, ಇದು ದೇಶದ ಸೈದ್ಧಾಂತಿಕ ಮತ್ತು ಸಾಂಸ್ಕೃತಿಕ ಹೋರಾಟಗಳೊಂದಿಗೆ ಆಳವಾಗಿ ಸಂಬಂಧ ಹೊಂದಿದೆ. ವಿಮೋಚನೆ ಮತ್ತು ಸ್ತ್ರೀಲಿಂಗ ಆಕರ್ಷಣೆಯೊಂದಿಗೆ ಹೆಚ್ಚಾಗಿ ಸಂಬಂಧಿಸಿರುವ ಕೆಂಪು ಲಿಪ್‌ಸ್ಟಿಕ್ ಉತ್ತರ ಕೊರಿಯಾದಲ್ಲಿ ಬಂಡವಾಳಶಾಹಿ ಅವನತಿ ಮತ್ತು ನೈತಿಕ ಅವನತಿಯನ್ನು ಪ್ರತಿನಿಧಿಸುತ್ತದೆ.

ಯಾರೂ ಕೂಡ ಉತ್ತರ ಕೊರಿಯಾದಲ್ಲಿ ಕೆಂಪು ಬಣ್ಣದ ಲಿಪ್‌ಸ್ಟಿಕ್ ಹಾಕುವಂತಿಲ್ಲ. ಮೇಕಪ್ ಕೂಡ ಬೇಕಾಬಿಟ್ಟಿ ಮಾಡುವಂತಿಲ್ಲ. ಇಷ್ಟ ಎಂದು ಡಾರ್ಕ್ ಮೇಕಪ್, ಕಣ್ಣು ಕುಕ್ಕುವಂತಹ ಮೇಕಪ್ ಮಾಡಿಕೊಳ್ಳಲು ಇಲ್ಲಿ ಅವಕಾಶವಿಲ್ಲ. ಸಿಂಪಲ್ ಹಾಗೂ ಲೈಟ್ ಕಲರ್ ಮೇಕಪ್ ಮಾತ್ರ ಮಾಡಬೇಕು. ಐಲೈನರ್, ಐಶ್ಯಾಡೋ ಸೇರಿದಂತೆ ಎಲ್ಲಾ ಮೇಕಪ್ ಸಿಂಪಲ್ ಹಾಗೂ ಲೈಟ್ ಕಲರ್ ಆಗಿರಬೇಕು. ಈ ನಿಯಮಗಳನ್ನು ಧಿಕ್ಕರಿಸುವವರಿಗೆ ಕಠಿಣ ದಂಡವನ್ನು ಸಹ ವಿಧಿಸಲಾಗುತ್ತದೆ.
ಇನ್ನು ಇಲ್ಲಿನ ನಿಯಮಗಳನ್ನು ಎಲ್ಲರೂ ಅನಸರಿಸಲೇಬೇಕು. ಇಲ್ಲಿನ ಪ್ರಜೆಗಳು ಇದನ್ನು ಅನುಸರಿಸುತ್ತಿದ್ದಾರೆಯೇ ಅಥವಾ ಇಲ್ಲವೋ ಎಂಬುದನ್ನು ಪತ್ತೆಹಚ್ಚಲು ಪೊಲೀಸ್ ಪಡೆಗಳು ಗಸ್ತು ತಿರುಗುತ್ತಿರುತ್ತದೆ. ನಿಯಮಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಘೋರ ಶಿಕ್ಷೆ ನೀಡಲಾಗುತ್ತದೆ.
ಇಲ್ಲಿರುವ ವಿಚಿತ್ರ ಕಾನೂನುಗಳ ಬಗ್ಗೆ ತಿಳಿದುಕೊಳ್ಳಿ:
*ವಿದೇಶಿ ಸಿನಿಮಾ, ಹಾಡುಗಳಿಗೆ ಅವಕಾಶವಿಲ್ಲ:
ಉತ್ತರಕೊರಿಯಾದಲ್ಲಿ ವಿದೇಶಿ ಸಿನಿಮಾಗಳು ಹಾಗೂ ಹಾಡುಗಳನ್ನು ಕೇಳಲು ಅವಕಾಶವಿಲ್ಲ. ಒಂದು ವೇಳೆ ಯಾರಾದರೂ ವಿದೇಶಿ ಸಿನಿಮಾಗಳು ಅಥವಾ ಹಾಡುಗಳು ಕೇಳಿದರೆ ಅವರನ್ನು ಸೀದಾ ಜೈಲಿಗೆ ಕಳುಹಿಸಲಾಗುತ್ತದೆ. ಈ ದೇಶದ ಸಿನಿಮಾ, ಹಾಡುಗಳನ್ನು ಬಿಟ್ಟು ಉಳಿದಂತಹ ಎಲ್ಲಾ ಸಿ.ಡಿ, ಟೇಪ್‌ಗಳನ್ನು ನಾಶಪಡಿಸುವಂತೆ ಕಿಮ್ ಜಾಂಗ್ ಉನ್ ಆದೇಶಿಸಿದ್ದಾರೆ. ಅದರಲ್ಲೂ ಅಶ್ಲೀಲ ವೀಡಿಯೋಗಳು, ಅಮೆರಿಕ ಸಿನಿಮಾಗಳನ್ನು ನೋಡಿದವರಿಗೆ ಮರಣದಂಡನೆ ವಿಧಿಸಲಾಗುತ್ತದೆ. ಉತ್ತರ ಕೊರಿಯಾದ ಟಿವಿಗಳಲ್ಲಿ ಕೇವಲ 3 ಚಾನಲ್‌ಗಳಿರುತ್ತದೆ. ಅದರಲ್ಲಿ ಪ್ರಸಾರವಾಗುವ ಎಲ್ಲಾ ವಿಷಯಗಳನ್ನು ಸರ್ಕಾರ ನಿಯಂತ್ರಿಸುತ್ತದೆ.

*ಅಂತಾರಾಷ್ಟ್ರೀಯ ಕರೆ ಘೋರ ಅಪರಾಧ:
ಉತ್ತರ ಕೊರಿಯಾದಲ್ಲಿ ಅಂತಾರಾಷ್ಟ್ರೀಯ ಕರೆಗಳನ್ನು ಮಾಡುವುದು ಘೋರ ಅಪರಾಧವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಇಲ್ಲಿ ಯಾವುದೇ ರೀತೀಯ ಅಂತಾರಾಷ್ಟ್ರೀಯ ಕರೆಗಳನ್ನು ಮಾಡಲು ಸಾಧ್ಯವಿಲ್ಲ. ನಿಯಮ ಮೀರಿ ಕರೆ ಮಾಡಿದರೆ ಅಂಥವರನ್ನು ಗಲ್ಲಿಗೇರಿಸಲಾಗುತ್ತದೆ. ವರದಿಗಳ ಪ್ರಕಾರ, 2007 ರಲ್ಲಿ ಉತ್ತರ ಕೊರಿಯಾದ ಕಾರ್ಖಾನೆಯ ಮುಖ್ಯಸ್ಥರೊಬ್ಬರನ್ನು 1.50 ಲಕ್ಷ ಜನರ ಮುಂದೆ ಫೈರಿಂಗ್ ಸ್ಕ್ವ್ಯಾಡ್ ಗಲ್ಲಿಗೇರಿಸಿತು. ಕಾರ್ಖಾನೆಯ ಮುಖ್ಯಸ್ಥ ನೆಲಮಾಳಿಗೆಯಲ್ಲಿ ಸ್ಥಾಪಿಸಿದ್ದ 13 ಫೋನ್‌ಗಳಿಂದ ಅಂತಾರಾಷ್ಟ್ರೀಯ ಕರೆಗಳನ್ನು ಮಾಡಿದ್ದಾರೆ ಎಂದು ಆರೋಪಿಸಿ ಈ ಗಲ್ಲಿಗೇರಿಸಲಾಗಿದೆ.

*ಸರ್ವಾಧಿಕಾರಿಗೆ ವಿಶ್ವಾಸದ್ರೋಹ ಬಗೆದರೆ ಮರಣದಂಡನೆ:
ಕಿಮ್ ಜಾಂಗ್ ಉನ್ ಅವರ ಸಭೆಯ ಸಂದರ್ಭದಲ್ಲಿ ನಿದ್ರಿಸುವುದು ಕೂಡ ನಾಯಕನಿಗೆ ವಿಶ್ವಾಸದ್ರೋಹ ಎಸಗಿದಂತೆ. ಕಿಮ್ ಜಾಂಗ್ ಸಭೆಯಲ್ಲಿ ಮಾತನಾಡುವ ಸಂದರ್ಭ ಯಾರಾದರೂ ನಿದ್ರಿಸಿದರೆ ಅವರಿಗೆ ಮರಣದಂಡನೆಯನ್ನು ವಿಧಿಸಲಾಗುತ್ತದೆ. 2015ರಲ್ಲಿ ಉತ್ತರ ಕೊರಿಯಾದ ರಕ್ಷಣಾ ಸಚಿವ ಹ್ಯೋನ್ ಯೋಂಗ್-ಚೋಲ್ ಅವರು ಕಿಮ್ ಜೊಂಗ್-ಉನ್ ಅವರ ಸಭೆಯಲ್ಲಿ ನಿದ್ರಿಸಿದ್ದಕ್ಕಾಗಿ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಅಲ್ಲದೇ ಇಲ್ಲಿನ ಪ್ರಜೆಗಳು ರಾಜನಿಗೆ ವಿಧೇಯರಾಗಿರಬೇಕು. ರಾಜನಿಗೆ ಅಥವಾ ಆತನ ಕುಟುಂಬಕ್ಕೆ ಅಪಮಾನವೆಸಗುವ ಕೆಲಸ ಮಾಡಿದರೆ ಅದನ್ನು ಧರ್ಮ ನಿಂದನೆಯೆಂದು ಪರಿಗಣಿಸಿ ಕಠಿಣ ಶಿಕ್ಷೆಯನ್ನು ವಿಧಿಸಲಾಗುತ್ತದೆ.

*ಅಪರಾಧವೆಸಗಿದರೆ ಮೂರು ತಲೆಮಾರಿಗೆ ಶಿಕ್ಷೆ:
ಉತ್ತರ ಕೊರಿಯಾದಲ್ಲಿ ಯಾರಾದರೂ ಅಪರಾಧ ಎಸಗಿದರೆ ಅವರ ಮೂರು ತಲೆಮಾರಿಗೆ ಶಿಕ್ಷೆಯನ್ನು ವಿಧಿಸಲಾಗುತ್ತದೆ. ಆದ್ದರಿಂದ ಇಲ್ಲಿ ಅಪರಾಧವೆಸಗುವವರು ಮೂರು ಬಾರಿ ಯೋಚಿಸುತ್ತಾರೆ. ಈ ರೀತಿಯಾದ ಶಿಕ್ಷೆಯಿಂದ ಅಪರಾಧ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ.

*ಸರ್ಕಾರದಿಂದ ಅನುಮೋದಿತ ಹೇರ್‌ಕಟ್:
ಎಲ್ಲಾ ಪುರುಷರು ಮತ್ತು ಮಹಿಳೆಯರಿಗಾಗಿ ಉತ್ತರ ಕೊರಿಯಾ ಸರ್ಕಾರ 28 ಹೇರ್‌ಕಟ್‌ಗಳನ್ನು ಅನುಮೋದಿಸಿದೆ. ಮಹಿಳೆಯರಿಗೆ 18 ವಿಧದ ಹೇರ್‌ಸ್ಟೈಲ್ ಮತ್ತು, ಪುರುಷರಿಗೆ 10 ರೀತಿಯ ಕೇಶ ವಿನ್ಯಾಸಗಳನ್ನು ಇದರಲ್ಲಿ ಅನುಮತಿಸಲಾಗಿದೆ. ಇದನ್ನು ಹೊರತುಪಡಿಸಿ ಇತರ ಕೇಶವಿನ್ಯಾಸವನ್ನು ಇಲ್ಲಿ ನಿಷೇಧಿಸಲಾಗಿದೆ. ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ 2013 ರಲ್ಲಿ ಈ ಕಾನೂನನ್ನು ಪರಿಚಯಿಸಿದರು. ಈ ಪಟ್ಟಿಯಲ್ಲಿ ಕಿಮ್ ಜಾಂಗ್ ಉನ್ ತನ್ನ ಕೇಶವಿನ್ಯಾಸವನ್ನು ಸೇರಿಸಲಿಲ್ಲ. ಏಕೆಂದರೆ ಅವರು ಅದನ್ನು ಇತರರಿಗಿಂತ ಭಿನ್ನವಾಗಿರಬೇಕೆಂದು ಬಯಸಿದರು ಮತ್ತು ತನ್ನಂತೆ ಯಾರೂ ಕೇಶ ವಿನ್ಯಾಸ ಮಾಡಬಾರದು ಎಂದು ಆದೇಶಿಸಿದರು. ವಿವಾಹಿತ ಮಹಿಳೆಯರು ಅವಿವಾಹಿತ ಮಹಿಳೆಯರಿಗಿಂತ ಕಡಿಮೆ ಕೇಶವಿನ್ಯಾಸ ಅಥವಾ ಹೇರ್‌ಕಟ್‌ಗಳನ್ನು ಮಾಡಬೇಕು ಎಂದು ಕಾನೂನು ಹೊರಡಿಸಲಾಗಿದೆ.

*ಬೈಬಲ್ ನಿಷೇಧ:
ಉತ್ತರ ಕೊರಿಯಾದಲ್ಲಿ, ಬೈಬಲ್ ಅನ್ನು ಪಾಶ್ಚಿಮಾತ್ಯ ಸಂಸ್ಕೃತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಉತ್ತರ ಕೊರಿಯಾದಲ್ಲಿ ಬೈಬಲ್ ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಏಕೆಂದರೆ ಅದು ಜನರನ್ನು ಪರಿವರ್ತಿಸುತ್ತದೆ ಎಂದು ಕಿಮ್ ಜಾಂಗ ಉನ್ ನಂಬಿದ್ದಾರೆ. ಈ ಹಿಂದೆ ಬೈಬಲ್ ಹಂಚುತ್ತಿದ್ದ ಒಬ್ಬ ಕ್ರೈಸ್ತ ಮಹಿಳೆಯನ್ನು ಬಂಧಿಸಿ ಗಲ್ಲಿಗೇರಿಸಲಾಗಿದೆ. 2014 ರಲ್ಲಿ ರೆಸ್ಟೋರೆಂಟ್‌ವೊಂದರ ಸ್ನಾನಗೃಹದಲ್ಲಿ ಬೈಬಲ್ ಅನ್ನು ಮರೆತು ಹೋಗಿದ್ದಕ್ಕಾಗಿ ಉತ್ತರ ಕೊರಿಯಾಗೆ ಪ್ರವಾಸಕ್ಕೆಂದು ಹೋಗಿದ್ದ ಅಮೆರಿಕದ ಪ್ರಜೆ ಜೆಫ್ರಿ ಫೌಲ್ ಅವರನ್ನು ಬಂಧಿಸಿ ಐದು ತಿಂಗಳ ಕಾಲ ಜೈಲಿನಲ್ಲಿರಿಸಲಾಯಿತು.

* ಲ್ಯಾಪ್‌ಟಾಪ್ ಅಥವಾ ಐಫೋನ್ ಬಳಕೆಯಿಲ್ಲ:
ಉತ್ತರ ಕೊರಿಯಾದಲ್ಲಿ ಲ್ಯಾಪ್‌ಟಾಪ್ ಅಥವಾ ಐಫೋನ್ ಮೊಬೈಲ್‌ಗಳನ್ನು ಬಳಸುವಂತಿಲ್ಲ. ಇದನ್ನು ಬಳಸಿದವರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ. ಇಲ್ಲಿನ ಸರ್ಕಾರ ಎಲ್ಲಾ ವಿಷಯಗಳನ್ನು ಮರೆಮಾಚುವುದರಿಂದ ಉತ್ತರ ಕೊರಿಯಾದ ಜನರು ಎಲೆಕ್ಟ್ರಾನಿಕ್ಸ್ ಬಗ್ಗೆ ಅಥವಾ ಇತರೆ ವಿಷಯಗಳ ಬಗ್ಗೆ ಕಡಿಮೆ ಜ್ಞಾನ ಹೊಂದಿರುತ್ತಾರೆ.

*ಇಂಟರ್ನೆಟ್ ನಿರ್ಬಂಧ:
ಉತ್ತರ ಕೊರಿಯಾದಲ್ಲಿ ‘ಕ್ವಾಂಗ್‍ಮಿಯಂಗ್’ ಹೆಸರಿನ ಏಕೈಕ ಇಂಟರ್ನೆಟ್ ಚಾಲಿತ ಪೋರ್ಟಲ್ ಇದೆ. ಇಲ್ಲಿ ಎಲ್ಲಾ ವಿದೇಶಿ ವೆಬ್‍ಸೈಟ್‍ಗಳನ್ನು ನಿರ್ಬಂಧಿಸಲಾಗಿದ್ದು, ಕೇವಲ 28 ವೆಬ್‍ಸೈಟ್‍ಗಳನ್ನು ಸರ್ಕಾರದ ಮೇಲ್ವಿಚಾರಣೆಯಲ್ಲಿ ಪ್ರವೇಶಿಸಬಹುದು. ಆದರೂ ಇದರ ಬಳಕೆ ದೇಶದ ಪ್ರತಿಯೊಬ್ಬ ಪ್ರಜೆಗೆ ಸಾಧ್ಯವಿಲ್ಲ. ರಾಜಕೀಯ ನಾಯಕರು ಮತ್ತು ಅವರ ಕುಟುಂಬಗಳು, ಗಣ್ಯ ಶಾಲೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಮತ್ತು ಮಿಲಿಟರಿಯ ಸೈಬರ್ ವಾರ್ಫೇರ್ ವಿಭಾಗ ಮಾತ್ರವೇ ಇಂಟರ್ನೆಟ್ ಬಳಕೆಗೆ ಅನುಮತಿಯಿದೆ. ಸಮಾನ್ಯ ಜನರು ತಮ್ಮ ಮೊಬೈಲ್‍ಗಳ ಮೂಲಕವೂ ಇಂಟರ್ನೆಟ್ ಪ್ರವೇಶಿಸಲು ಸಾಧ್ಯವಿಲ್ಲ.

*ನೀಲಿ ಬಣ್ಣದ ಜೀನ್ಸ್ ಬ್ಯಾನ್:
ಉತ್ತರ ಕೊರಿಯಾದಲ್ಲಿ ಜನರು ಜೀನ್ಸ್ ಧರಿಸುವುದನ್ನು ಕಾಣೋದೇ ವಿರಳ. ಏಕೆಂದರೆ ಅಲ್ಲಿ ನೀಲಿ ಬಣ್ಣದ ಜೀನ್ಸ್ ಅನ್ನು ನಿಷೇಧಿಸಲಾಗಿದೆ. ನೀಲಿ ಬಣ್ಣದ ಜೀನ್ಸ್ ತನ್ನ ದೇಶದ ಶತ್ರು ಅಮೆರಿಕದ ಪ್ರತೀಕ ಎಂದು ಭಾವಿಸಲಾಗುತ್ತದೆ. ಅಲ್ಲಿ ಕಪ್ಪು ಬಣ್ಣದ ಜೀನ್ಸ್ ಅನ್ನು ಧರಿಸಲು ಮಾತ್ರವೇ ಅವಕಾಶವಿದೆ. ಆದರೆ ಅದು ತನ್ನ ಬಣ್ಣ ಮಾಸದಂತೆ ನಿಭಾಯಿಸಲು ಸಾಧ್ಯವಿರುವವರು ಮಾತ್ರವೇ ಧರಿಸಬಹುದು.

*ದೇಶ ತೊರೆಯಲು ಅವಕಾಶವಿಲ್ಲ:
ಇಷ್ಟೊಂದು ಕಠಿಣ ಕಾನೂನುಗಳಿದ್ದರೂ ಉತ್ತರ ಕೊರಿಯನ್ನರು ಯಾಕೆ ಅವೆಲ್ಲದರಿಂದ ತಪ್ಪಿಸಿಕೊಂಡು ಹೊರಬರುವುದಿಲ್ಲ ಎಂದು ವಿದೇಶಿಗರು ಆಶ್ಚರ್ಯಪಡಬಹುದು. ಆದರೆ ಇದು ಅಲ್ಲಿನ ಜನರಿಗೆ ಸಾಧ್ಯವಾಗುವುದೇ ತೀರಾ ವಿರಳ. ಉತ್ತರ ಕೊರಿಯಾದ ನಾಗರಿಕರಿಗೆ ದೇಶವನ್ನು ತೊರೆಯಲು ಅನುಮತಿಸಲಾಗುವುದಿಲ್ಲ. ಅಧಿಕೃತ ದಾಖಲೆಗಳಿಲ್ಲದೆ ಯಾರಾದರೂ ಗಡಿ ದಾಟಲು ಪ್ರಯತ್ನಿಸಿದರೆ ಅವರನ್ನು ಗಡಿ ಕಾವಲುಗಾರರು ಗುಂಡಿಕ್ಕಿ ಕೊಲ್ಲುತ್ತಾರೆ. ಯಾರಾದರೂ ದೇಶದಿಂದ ಪಲಾಯನ ಮಾಡಲು ಪ್ರಯತ್ನಿಸಿದರೆ ಅವರಿಗೆ ಮರಣ ದಂಡನೆಯೇ ಮೊದಲ ಶಿಕ್ಷೆಯಾಗುತ್ತದೆ.

*ಪ್ರವಾಸಿಗರಿಗೆ ಕಠಿಣ ನಿಯಮಗಳು:
ದೇಶಕ್ಕೆ ಪ್ರವೇಶಿಸುವ ಯಾವುದೇ ಪ್ರವಾಸಿಗರನ್ನು ಪ್ರವಾಸದ ಉದ್ದಕ್ಕೂ ಉತ್ತರ ಕೊರಿಯಾ ಸರ್ಕಾರವು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತದೆ. ಪ್ರತಿಯೊಬ್ಬ ಪ್ರವಾಸಿಗರಿಗೆ ಪ್ರವಾಸದ ಉದ್ದಕ್ಕೂ ಮಾರ್ಗದರ್ಶಿಯನ್ನು ನಿಯೋಜಿಸಲಾಗಿದೆ. ಯಾರಾದರೂ ತಮ್ಮ ಗುಂಪನ್ನು ತೊರೆದರೆ ಅಥವಾ ಸ್ಥಳೀಯರೊಂದಿಗೆ ಮಾತನಾಡಲು ಪ್ರಯತ್ನಿಸಿದರೆ, ಅವರನ್ನು ಬಂಧಿಸಲಾಗುತ್ತದೆ. ಇದರೊಂದಿಗೆ, ಪ್ರವಾಸಿಗರನ್ನು ಕೆಲವು ಸ್ಥಳಗಳಿಗೆ ಮತ್ತು ಕೆಲವು ಮಾರ್ಗಗಳಲ್ಲಿ ಮಾತ್ರ ಕರೆದೊಯ್ಯಲಾಗುತ್ತದೆ.

*ಕಡ್ಡಾಯ ಮಿಲಿಟರಿ ಸೇವೆ:
ಉತ್ತರ ಕೊರಿಯಾದಲ್ಲಿ ಪುರುಷರು ಹಾಗೂ ಮಹಿಳೆಯರು ಮಿಲಿಟರಿ ಸೇವೆ ಸಲ್ಲಿಸುವುದು ಕಡ್ಡಾಯವಾಗಿದೆ. ಪುರುಷರು 10 ವರ್ಷ ಹಾಗೂ ಮಹಿಳೆಯರು 7 ವರ್ಷಗಳ ಕಡ್ಡಾಯ ಮಿಲಿಟರಿ ಸೇವೆ ಸಲ್ಲಿಸುವುದು ಇಲ್ಲಿನ ನಿಯಮವಾಗಿದೆ.

ಸುಮಾರು 2.6 ಕೋಟಿ ಜನಸಂಖ್ಯೆಯಿರೋ ಈ ರಾಷ್ಟ್ರದಲ್ಲಿ ಪ್ರಪಂಚಲ್ಲೇ ಬೇರೆಲ್ಲೂ ಇಲ್ಲದಂತಹ ವಿಚಿತ್ರ ಕಾನೂನುಗಳಿವೆ. ಮಾನವ ಹಕ್ಕುಗಳನ್ನು ನಿರ್ನಾಮ ಮಾಡಿರೋ ದೇಶದ ಜನತೆ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯ ಹಿಂದಿನಿಂದಲೂ ಕಳವಳ ವ್ಯಕ್ತಪಡಿಸಿದೆ.






























