Tag: north korea

  • FATF ಹೊಸ ಪಟ್ಟಿ ಬಿಡುಗಡೆ – ಉತ್ತರ ಕೊರಿಯಾ, ಇರಾನ್, ಮ್ಯಾನ್ಮಾರ್ ಮತ್ತೆ ಕಪ್ಪುಪಟ್ಟಿಗೆ

    FATF ಹೊಸ ಪಟ್ಟಿ ಬಿಡುಗಡೆ – ಉತ್ತರ ಕೊರಿಯಾ, ಇರಾನ್, ಮ್ಯಾನ್ಮಾರ್ ಮತ್ತೆ ಕಪ್ಪುಪಟ್ಟಿಗೆ

    – ನೇಪಾಳ ಸೇರಿ 18 ದೇಶಗಳು ಬೂದು ಪಟ್ಟಿಗೆ

    ನವದೆಹಲಿ: ಭಯೋತ್ಪಾದನೆಗೆ ಹಣಕಾಸು ನೆರವು ಮತ್ತು ಹಣ ವರ್ಗಾವಣೆಯನ್ನು ವಿಶ್ವಾದ್ಯಂತ ಮೇಲ್ವಿಚಾರಣೆ ಮಾಡುವ ಜಾಗತಿಕ ಸಂಸ್ಥೆ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (FATF) ತನ್ನ ಇತ್ತೀಚಿನ ಪರಿಶೀಲನಾ ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಉತ್ತರ ಕೊರಿಯಾ (North Korea), ಇರಾನ್ (Iran) ಮತ್ತು ಮ್ಯಾನ್ಮಾರ್‌ನ್ನು (Myanmar) ಮತ್ತೆ ʻಕಪ್ಪು ಪಟ್ಟಿಗೆʼ (Blacklist) ಸೇರಿಸಲಾಗಿದೆ. ನೇಪಾಳ (Nepal) ಸೇರಿದಂತೆ 18 ದೇಶಗಳನ್ನು ʻಬೂದು ಪಟ್ಟಿʼಯಲ್ಲಿಯೇ ಉಳಿಸಿಕೊಳ್ಳಲಾಗಿದೆ.

    ಕಪ್ಪು ಪಟ್ಟಿಯಲ್ಲಿರುವ ಮೂರು ದೇಶಗಳು ತಮ್ಮ ಹಣ ವರ್ಗಾವಣೆ ವಿರೋಧಿ ಮತ್ತು ಭಯೋತ್ಪಾದನಾ ನಿಗ್ರಹ ಹಣಕಾಸು ವ್ಯವಸ್ಥೆಗಳಲ್ಲಿ ಗಂಭೀರ ನ್ಯೂನತೆಗಳನ್ನು ಹೊಂದಿವೆ ಎಂದು FATF ಹೇಳಿದೆ. ಈ ದೇಶಗಳು ತಮ್ಮ ಬದ್ಧತೆಗಳನ್ನು ಪೂರೈಸುವಲ್ಲಿ ನಿರಂತರವಾಗಿ ವಿಫಲವಾಗಿವೆ. ಇದು ಅಂತರರಾಷ್ಟ್ರೀಯ ಹಣಕಾಸು ವ್ಯವಸ್ಥೆಗೆ ಅಪಾಯವನ್ನುಂಟುಮಾಡುತ್ತದೆ ಎಂದು ಎಚ್ಚರಿಸಿದೆ. ಇದನ್ನೂ ಓದಿ: ಪಾಕ್‌ ಪರಮಾಣು ಶಸ್ತ್ರಾಗಾರದ ಮೇಲೆ ಅಮೆರಿಕ ನಿಯಂತ್ರಣ ಹೊಂದಿತ್ತು – CIA ಮಾಜಿ ಅಧಿಕಾರಿ ಜಾನ್ ಕಿರಿಯಾಕೌ ಆರೋಪ

    ಅಕ್ಟೋಬರ್ 2022 ರಲ್ಲಿ ಮ್ಯಾನ್ಮಾರ್‌ನ್ನು ಕಪ್ಪುಪಟ್ಟಿಗೆ ಸೇರಿಸಲಾಗಿತ್ತು. ಇನ್ನೂ ಕ್ರಿಯಾ ಯೋಜನೆಯ ಅಂಶಗಳಲ್ಲಿ ಪ್ರಗತಿ ಸಾಧಿಸಿಲ್ಲ. ಅಕ್ಟೋಬರ್ 2025 ರೊಳಗೆ ಸುಧಾರಣೆಗಳನ್ನು ಮಾಡದಿದ್ದರೆ, ಹೆಚ್ಚು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ FATF ಎಚ್ಚರಿಸಿದೆ.

    2018 ರಲ್ಲಿ ಕೊನೆಗೊಂಡ ತನ್ನ ಕ್ರಿಯಾ ಯೋಜನೆಯನ್ನು ಇರಾನ್ ಇನ್ನೂ ಪೂರ್ಣಗೊಳಿಸಿಲ್ಲ. ಅಕ್ಟೋಬರ್ 2025 ರಲ್ಲಿ ಭಯೋತ್ಪಾದನೆಗೆ ಹಣಕಾಸು ಒದಗಿಸುವ ಬಗ್ಗೆ ವಿಶ್ವಸಂಸ್ಥೆಯ ಕಾನೂನನ್ನು ಅದು ಅನುಮೋದಿಸಿದೆ. ಆದರೂ ಹಲವಾರು ಪ್ರಮುಖ ನ್ಯೂನತೆಗಳು ಇನ್ನೂ ಉಳಿದಿವೆ ಎಂದು FATF ಹೇಳಿದೆ.

    ಉತ್ತರ ಕೊರಿಯಾದ ಅಕ್ರಮ ಶಸ್ತ್ರಾಸ್ತ್ರ ಯೋಜನೆ ಮತ್ತು ಹಣ ವರ್ಗಾವಣೆ ಅಂತರರಾಷ್ಟ್ರೀಯ ಭದ್ರತೆಗೆ ದೊಡ್ಡ ಬೆದರಿಕೆಯಾಗಿದೆ. ಡಿಪಿಆರ್‌ಕೆ ಜೊತೆಗಿನ ಹಣಕಾಸಿನ ವಹಿವಾಟುಗಳನ್ನು ಮಿತಿಗೊಳಿಸಲು, ಅದರ ಬ್ಯಾಂಕ್ ಶಾಖೆಗಳನ್ನು ಮುಚ್ಚಲು ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳ ಅಡಿಯಲ್ಲಿ ನಿರ್ಬಂಧಗಳನ್ನು ವಿಧಿಸಲು FATF ಎಲ್ಲಾ ದೇಶಗಳನ್ನು ಒತ್ತಾಯಿಸಿದೆ.

    ನೇಪಾಳ, ಅಲ್ಜೀರಿಯಾ, ಅಂಗೋಲಾ, ಬಲ್ಗೇರಿಯಾ, ಕ್ಯಾಮರೂನ್, ಕೋಟ್ ಡಿ’ಐವೊಯಿರ್, ಕಾಂಗೋ, ಕೀನ್ಯಾ, ಲಾವೋಸ್, ಮೊನಾಕೊ, ನಮೀಬಿಯಾ, ದಕ್ಷಿಣ ಸುಡಾನ್, ಸಿರಿಯಾ, ವೆನೆಜುವೆಲಾ ಮತ್ತು ವಿಯೆಟ್ನಾಂ ಸೇರಿದಂತೆ 18 ದೇಶಗಳ ಪ್ರಗತಿಯನ್ನು FATF ಪರಿಶೀಲಿಸಿದ್ದು, ಅವುಗಳನ್ನು ಬೂದು ಪಟ್ಟಿಯಲ್ಲಿಯೇ ಉಳಿಸಿದೆ. ಇದನ್ನೂ ಓದಿ: ಭಾರತದ ಬಳಿಕ ಪಾಕ್‌ಗೆ ನೀರಿನ‌ ಹರಿವು ತಡೆಯಲು ಪ್ಲ್ಯಾನ್‌ – ಅಣೆಕಟ್ಟು ನಿರ್ಮಿಸಲು ಮುಂದಾದ ಅಫ್ಘಾನ್

  • ಚೀನಾದಲ್ಲಿ ಕಿಮ್ ಸ್ಪರ್ಶಿಸಿದ ಜಾಗವೆಲ್ಲ ಕ್ಲೀನ್‌ – ಭಾರೀ ಚರ್ಚೆಗೆ ಗ್ರಾಸವಾದ ನಡೆ

    ಚೀನಾದಲ್ಲಿ ಕಿಮ್ ಸ್ಪರ್ಶಿಸಿದ ಜಾಗವೆಲ್ಲ ಕ್ಲೀನ್‌ – ಭಾರೀ ಚರ್ಚೆಗೆ ಗ್ರಾಸವಾದ ನಡೆ

    ಬೀಜಿಂಗ್‌: ಉತ್ತರ ಕೊರಿಯಾದ (North Korea) ನಾಯಕ ಕಿಮ್ ಜಾಂಗ್-ಉನ್ (Kim Jong Un) ಮತ್ತು ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ (Vladimir Putin) ಭೇಟಿ ಬಳಿಕ ಒಂದು ಅಸಹಜ ಬೆಳವಣಿಗೆಯೊಂದು ನಡೆದಿದೆ.

    ಬೀಜಿಂಗ್‌ನಲ್ಲಿ ಪುಟಿನ್ ಜೊತೆಗಿನ ದ್ವಿಪಕ್ಷೀಯ ಸಭೆಯ ಬಳಿಕ ಕಿಮ್ ಜಾಂಗ್-ಉನ್ ಅವರ ಭದ್ರತಾ ತಂಡ ಇಡೀ ಪ್ರದೇಶವನ್ನು ಸ್ವಚ್ಛಗೊಳಿಸಿದೆ. ಕಿಮ್ ಕುಡಿದ ಟೀ ಕಪ್, ಕುಳಿತ ಕುರ್ಚಿ, ಸ್ಪರ್ಶಿಸಿದ ಎಲ್ಲಾ ವಸ್ತುಗಳನ್ನು ಸ್ವಚ್ಛಗೊಳಿಸಿದೆ. ಇದನ್ನೂ ಓದಿ:  ದೀಪಾವಳಿಗೆ ದೇಶವಾಸಿಗಳಿಗೆ ಗಿಫ್ಟ್‌ – ಯಾವ ವಸ್ತುಗಳ ಬೆಲೆ ಇಳಿಕೆ? ಯಾವುದು ಏರಿಕೆ?

    ಯಾವ ಕಾರಣಕ್ಕೆ ಸಚ್ಛಗೊಳಿಸಲಾಗಿದೆ ಎನ್ನುವುದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಡಿಎನ್‌ಎ ಸಂಗ್ರಹಣೆಯನ್ನು ತಡೆಗಟ್ಟಲು ಮತ್ತು ಭದ್ರತೆಯನ್ನು ಖಚಿತಪಡಿಸಲು ಸ್ವಚ್ಛಗೊಳಿಸಿರಬಹುದು ಎನ್ನಲಾಗುತ್ತಿದೆ. ಈ ಮೂಲಕ ಮೂಲಕ ಗೂಢಾಚಾರಿ ಚಟುವಟಿಕೆಗಳನ್ನು ತಡೆಗಟ್ಟಲು ಸಾಧ್ಯವಾದ ಎಲ್ಲ ಕ್ರಮಗಳನ್ನು ತೆಗೆದುಕೊಂಡಿರುವ ಸಾಧ್ಯತೆಯಿದೆ. ಈ ಘಟನೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.  ಇದನ್ನೂ ಓದಿ: ಅಮೆರಿಕ ಒತ್ತಡದ ನಡುವೆ ಭಾರತಕ್ಕೆ ರಷ್ಯಾ ಗಿಫ್ಟ್‌; ಇನ್ನಷ್ಟು S-400 ವಾಯು ರಕ್ಷಣಾ ವ್ಯವಸ್ಥೆ ಪೂರೈಕೆಗೆ ನಿರ್ಧಾರ

    ಕಿಮ್‌ ಜಾಗ್‌ ಉನ್‌ ಮಾತ್ರವಲ್ಲ ಪುಟಿನ್‌ ಅವರು ವಿದೇಶ ಪ್ರವಾಸ ಕೈಗೊಂಡಾಗ ವರ ಅಂಗರಕ್ಷಕರು ಅವರ ಮೂತ್ರ ಮತ್ತು ಮಲವನ್ನು ಮುಚ್ಚಿದ ಚೀಲಗಳಲ್ಲಿ ಸಂಗ್ರಹಿಸಿ, ನಂತರ ಅವುಗಳನ್ನು ವಿಶೇಷ ಸೂಟ್‌ಕೇಸ್‌ಗಳಲ್ಲಿ ಮಾಸ್ಕೋಗೆ ತೆಗೆದುಕೊಂಡು ಹೋಗುತ್ತಾರೆ ಎಂದು ವರದಿಗಳು ಹೇಳುತ್ತವೆ. ರಷ್ಯಾದ ಅಧ್ಯಕ್ಷರ ಆರೋಗ್ಯದ ಬಗ್ಗೆ ವಿರೋಧಿಗಳು ಮತ್ತು ಗುಪ್ತಚರ ಮಾಹಿತಿಯನ್ನು ಸಂಗ್ರಹಿಸುವುದನ್ನು ತಡೆಯಲು 2017 ರಿಂದ ಈ ಪದ್ದತಿಯನ್ನು ಜಾರಿಗೊಳಿಸಲಾಗಿದೆ.

  • ವಿದೇಶಿ ಪ್ರವಾಸಿಗರಿಗೆ ಬಾಗಿಲು ತೆರೆದ ಉತ್ತರ ಕೊರಿಯಾ – ಹುಚ್ಚು ದೊರೆಯ ದೇಶಕ್ಕೆ ಟೂರಿಸ್ಟ್‌ ಹೋಗ್ತಾರಾ?

    ವಿದೇಶಿ ಪ್ರವಾಸಿಗರಿಗೆ ಬಾಗಿಲು ತೆರೆದ ಉತ್ತರ ಕೊರಿಯಾ – ಹುಚ್ಚು ದೊರೆಯ ದೇಶಕ್ಕೆ ಟೂರಿಸ್ಟ್‌ ಹೋಗ್ತಾರಾ?

    – ಘೋರ ಶಿಕ್ಷೆ, ವಿಚಿತ್ರ ಆಡಳಿತ ಶೈಲಿಯಿಂದಲೇ ಹೆಸರಾಗಿರೋ ದೇಶ

    ಕಿಮ್ ಜಾಂಗ್ ಉನ್ ಎಂಬ ಸರ್ವಾಧಿಕಾರಿ ಆಡಳಿತ ನಡೆಸುತ್ತಿರುವ ದೇಶ ಉತ್ತರ ಕೊರಿಯಾ (North Korea). ಈತನ ಕಠೋರ ನೀತಿಗಳು, ಆಡಳಿತ ಶೈಲಿಯಿಂದಲೇ ಕೊರಿಯಾ ಜಗತ್ತಿನಲ್ಲಿ ಕುಖ್ಯಾತಿ ಪಡೆದಿದೆ. ಕಿಮ್‌ನ ಕೆಲವೊಂದು ನೀತಿಗಳು ನಿಜಕ್ಕೂ ಬೆಚ್ಚಿಬೀಳಿಸುವಂತಿರುತ್ತವೆ. ಈ ದೇಶದಲ್ಲಿ ಕಿಮ್ ಆಡಿದ್ದೇ ವೇದ ವಾಕ್ಯ, ಆತ ಮಾಡಿದ್ದೇ ಕಾನೂನು. ಸರ್ವಾಧಿಕಾರಿ ಅಧ್ಯಕ್ಷನ ವಿರುದ್ಧ ಯಾರಾದರು ಮಾತನಾಡಿದರೆ, ಅವರ ಕತೆ ಮುಗೀತು ಎಂದೇ ಅರ್ಥ. ದೇಶದ ಆಡಳಿತ ವ್ಯವಸ್ಥೆಯಲ್ಲಿ ಕಿಮ್ ತೆಗೆದುಕೊಂಡ ಕೆಲವು ನಿರ್ಧಾರಗಳು ಅಚ್ಚರಿ ಮೂಡಿಸುವಂತಿರುತ್ತದೆ. ಅಂತಹ ಕುಖ್ಯಾತಿ ಹೊಂದಿರುವ ದೇಶ ಇಡೀ ಜಗತ್ತೇ ಗಮನಹರಿಸುವಂತಹ ಆದೇಶವೊಂದನ್ನು ಹೊರಡಿಸಿದೆ. ಸುದೀರ್ಘ 5 ವರ್ಷಗಳ ನಂತರ ಇದೇ ಮೊಟ್ಟ ಮೊದಲ ಬಾರಿಗೆ ವಿದೇಶಿ ಪ್ರವಾಸಿಗರಿಗೆ ಬಾಗಿಲು ತೆರೆದು ಆಹ್ವಾನ ನೀಡಿದೆ. ನಮ್ಮ ದೇಶದಲ್ಲಿ ಪ್ರವಾಸ ಮಾಡಿ ಎಂದು ಕರೆ ಕೊಟ್ಟಿದೆ. ಪ್ರವಾಸಕ್ಕೆ ಬರುವುದಕ್ಕೂ ಕಂಡಿಷನ್ಸ್ ಅಪ್ಲೈ ಎಂದು ವಿಶೇಷ ಸೂಚನೆ ಕೂಡ ಕೊಟ್ಟಿದೆ.

    ಅಷ್ಟಕ್ಕೂ ಈ ದೇಶ ವಿದೇಶಿ ಪ್ರವಾಸಿಗರಿಗೆ ಬಾಗಿಲು ಮುಚ್ಚಿದ್ಯಾಕೆ? ಈಗ ಪ್ರವಾಸಕ್ಕೆ ಆಹ್ವಾನಿಸುತ್ತಿರುವುದೇಕೆ? ಉತ್ತರ ಕೊರಿಯಾಗೆ ಹೋಗಲು ಇರುವ ಕಂಡಿಷನ್ಸ್ ಏನು? ಅಪಾಯಕಾರಿ, ವಿವಾದಾತ್ಮಕ ನಾಯಕನ ದೇಶದಲ್ಲಿ ಆಡಳಿತ ಹೇಗಿರುತ್ತೆ? ಕಠಿಣ ನಿರ್ಧಾರಗಳಿಗೆ ಹೆಸರಾಗಿರುವ ದೇಶಕ್ಕೆ ವಿದೇಶ ಪ್ರವಾಸಿಗರು ಹೋಗ್ತಾರಾ? ಹೀಗೆ ಹಲವು ಪ್ರಶ್ನೆಗಳು ಮೂಡುವುದು ಸಹಜ.

    ಮೊಟ್ಟ ಮೊದಲ ಬಾರಿಗೆ ವಿದೇಶಿ ಪ್ರವಾಸಿಗರಿಗೆ ಕಿಮ್ ಆಹ್ವಾನ
    ಉತ್ತರ ಕೊರಿಯಾದಲ್ಲಿ ಪ್ರವಾಸ ಮಾಡಿ ಎಂದು ವಿದೇಶಿ ಪ್ರವಾಸಿಗರಿಗೆ ಕಿಮ್ ಜಾಂಗ್ ಉನ್ (Kim Jong Un) ಇದೇ ಮೊದಲ ಬಾರಿಗೆ ಕರೆ ಕೊಟ್ಟಿದ್ದಾರೆ. ಪ್ರವಾಸೋದ್ಯಮ ಇಲ್ಲದೇ ದೇಶದ ಆರ್ಥಿಕ ಪರಿಸ್ಥಿತಿ ಕುಂಠಿತಗೊಂಡಿದೆ. ಇದರಿಂದ ಅಭಿವೃದ್ಧಿ ಕಾರ್ಯಗಳು ಸಾಧ್ಯವಾಗುತ್ತಿಲ್ಲ. ಜನಜೀವನ ಮಟ್ಟ ಸುಧಾರಿಸುವುದು ಕಷ್ಟ ಎನ್ನುವಂತಾಗಿದೆ. ಕುಸಿದಿರುವ ಆರ್ಥಿಕ ಪರಿಸ್ಥಿತಿಯನ್ನು ಪುನರುಜ್ಜೀವನಗೊಳಿಸಲು ಸರ್ವಾಧಿಕಾರಿ ದೇಶಕ್ಕೆ ಈಗ ವಿದೇಶಿ ಕರೆನ್ಸಿಯ ಅಗತ್ಯವಿದೆ. ಆ ಪ್ರಯತ್ನದಲ್ಲಿ ವಿದೇಶಿ ಪ್ರವಾಸಿಗರಿಗೆ ಪ್ರವಾಸ ಕೈಗೊಳ್ಳಲು ಆಹ್ವಾನ ನೀಡಲಾಗಿದೆ. ಈ ಕ್ರಮದಿಂದ ಪ್ರವಾಸೋದ್ಯಮ ಸುಧಾರಣೆ ಕಂಡು, ದೇಶದ ಆರ್ಥಿಕ ಪರಿಸ್ಥಿತಿಗೆ ಬೂಸ್ಟ್ ಸಿಗಲಿದೆ ಎಂಬ ಲೆಕ್ಕಾಚಾರ ಇದೆ.

    ಯಾವಾಗ ಲಾಕ್ ಆಗಿತ್ತು ಬಾಗಿಲು?
    ಕೊರೊನಾ ಸಾಂಕ್ರಾಮಿಕ ರೋಗ 2020ರ ಸಂದರ್ಭದಲ್ಲಿ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿತ್ತು. ಮಾರಕ ಸೋಂಕಿಗೆ ಲಕ್ಷಾಂತರ ಜನ ಬಲಿಯಾದರು. ಚೀನಾದಿಂದ ಹಬ್ಬಿದ ರಾಕ್ಷಸ ವೈರಸ್ ಅನ್ನು ತಡೆಗಟ್ಟಲು ಎಲ್ಲಾ ದೇಶಗಳು ಗಡಿಯಲ್ಲಿ ಬಾಗಿಲು ಬಂದ್ ಮಾಡಿಕೊಂಡವು. ವಿದೇಶ ಪ್ರವಾಸ, ಪ್ರಯಾಣಕ್ಕೆ ನಿರ್ಬಂಧ ಹೇರಲಾಯಿತು. ವಿಮಾನ, ದೊಡ್ಡ ದೊಡ್ಡ ಹಡಗುಗಳು ಕಾರ್ಯಾಚರಣೆ ಸ್ಥಗಿತಗೊಳಿಸಿದವು. ಕೋವಿಡ್ ಹರಡುವ ಭೀತಿಯಲ್ಲಿದ್ದ ನಾಯಕ ಕಿಮ್ ಜಾಂಗ್ ಉನ್ ಗಡಿಗಳನ್ನು ಮುಚ್ಚಿದ್ದರು. ವಿದೇಶಿ ಪ್ರವಾಸಿಗರನ್ನು ನಿಷೇಧಿಸಿದ್ದರು. ಕೋವಿಡ್ ಆರ್ಭಟ ತಣ್ಣಗಾದ ಬಳಿಕ ಎಲ್ಲಾ ದೇಶಗಳು ಎಂದಿನಂತೆ ಗಡಿ ಬಾಗಿಲುಗಳನ್ನು ತೆರೆದವು. ಪ್ರವಾಸೋದ್ಯಮಕ್ಕೆ ಅನುವು ಮಾಡಿಕೊಟ್ಟವು. ಆದರೆ, ಕೊರಿಯಾ ಮಾತ್ರ ವಿದೇಶಿ ಪ್ರವಾಸಿಗರಿಗೆ ನಿರ್ಬಂಧ ಮುಂದುವರಿಸಿದವು. ಸುದೀರ್ಘ 2025ರ ವರೆಗೂ ಅದು ಮುಂದುವರಿಯಿತು.

    ಪ್ರವಾಸಕ್ಕೆ ಈಗಿರುವ ಕಂಡಿಷನ್ಸ್ ಏನು?
    ದೇಶದಲ್ಲಿ ಪ್ರವಾಸ ಮಾಡಿ, ಆದರೆ ಕೆಲವು ಕಂಡಿಷನ್ಸ್ ಅಪ್ಲೈ ಎಂದು ಉತ್ತರ ಕೊರಿಯಾ ಪಾಶ್ಚಿಮಾತ್ಯ ಪ್ರವಾಸಿಗರಿಗೆ ಸೂಚನೆ ನೀಡಿದೆ. ಪ್ರತಿ ಪ್ರವಾಸಿಗರು ಸ್ಥಳೀಯ ಮಾರ್ಗದರ್ಶಕರನ್ನು ನೇಮಿಸಿಕೊಂಡು ಪ್ರವಾಸ ಮಾಡಬೇಕು. ಸೂಕ್ಷ್ಮ ಸ್ಥಳಗಳಲ್ಲಿ ಫೋಟೊ, ವೀಡಿಯೋ ಚಿತ್ರೀಕರಿಸಲು ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಪ್ರವಾಸೋದ್ಯಮ ಉತ್ತೇಜಿಸುವ ಪ್ರಯತ್ನ ಭಾಗವಾಗಿ, ಜೂನ್‌ನಲ್ಲಿ ಪೂರ್ವ ಕರಾವಳಿಯಲ್ಲಿ ಬೃಹತ್ ಪ್ರವಾಸೋದ್ಯಮ ತಾಣ ತೆರೆಯಲು ಯೋಜಿಸಿದೆ. ಪೂರ್ವ ಕರಾವಳಿ ಮತ್ತು ರಾಜಧಾನಿ ಪ್ಯೊಂಗ್ಯಾಂಗ್, ವಿದೇಶಿ ಪ್ರವಾಸಿಗರನ್ನು ಸುಲಭವಾಗಿ ಮೇಲ್ವಿಚಾರಣೆ ಮಾಡಲು ಸೂಕ್ತ ಸ್ಥಳಗಳಾಗಿವೆ. ಪ್ರವಾಸೋದ್ಯಮಕ್ಕೆ ಪೂರಕವಾದ ಮೂಲಸೌಕರ್ಯ ಇರುವುದು ಈ ಭಾಗದಲ್ಲೇ ಎಂದು ತಜ್ಞರು ಅಭಿಪಾಯಪಟ್ಟಿದ್ದಾರೆ.

    ಉತ್ತರ ಕೊರಿಯಾ ಪ್ರವಾಸಿಗರು ಯಾರು?
    ಅಸೋಸಿಯೇಷನ್ ಪ್ರೆಸ್ ಪ್ರಕಾರ, ಉತ್ತರ ಕೊರಿಯಾಗೆ 2024ರ ಫೆಬ್ರವರಿಯಲ್ಲಿ 100 ರಷ್ಯಾ ಪ್ರವಾಸಿಗರು ಪ್ರವಾಸ ಕೈಗೊಂಡಿದ್ದರು. ಕೋವಿಡ್ ನಂತರ ಅಲ್ಲಿಗೆ ಭೇಟಿ ಕೊಟ್ಟ ಮೊದಲ ವಿದೇಶಿ ಪ್ರಜೆಗಳು ಇವರೇ ಆದರು. ತಮ್ಮ ಅತಿದೊಡ್ಡ ವ್ಯಾಪಾರ ಪಾಲುದಾರ ಮತ್ತು ಮಿತ್ರ ಆಗಿರುವ ಚೀನಾದ ಪ್ರಜೆಗಳು ಬರುತ್ತಾರೆಂದು ಭಾವಿಸಿದ್ದ ಉತ್ತರ ಕೊರಿಯಾಗೆ ರಷ್ಯನ್ನರು ಬಂದಿದ್ದು ಅಚ್ಚರಿ ಮೂಡಿಸಿತ್ತು. 2024ರ ವರ್ಷದಲ್ಲಿ ಒಟ್ಟು 880 ರಷ್ಯಾದ ಪ್ರವಾಸಿಗರು ಉ.ಕೊರಿಯಾಗೆ ಭೇಟಿ ನೀಡಿದ್ದಾರೆ ಎಂದು ಅಧಿಕೃತ ರಷ್ಯಾದ ಡೇಟಾವನ್ನು ಉಲ್ಲೇಖಿಸಿ ದಕ್ಷಿಣ ಕೊರಿಯಾದ ಏಕೀಕರಣ ಸಚಿವಾಲಯ ತಿಳಿಸಿದೆ. ಕೊರಿಯಾ ಮತ್ತು ರಷ್ಯಾ ಪರಸ್ಪರ ಎಷ್ಟು ಸ್ನೇಹಪರವಾಗಿವೆ ಎಂಬುದನ್ನು ಇದು ತೋರಿಸುತ್ತದೆ. ಈ ಹಿನ್ನೆಲೆಯಲ್ಲಿಯೇ ಉಕ್ರೇನ್ ಮೇಲಿನ ಯುದ್ಧದಲ್ಲಿ ರಷ್ಯಾಗೆ ಕೊರಿಯಾ ಶಸ್ತ್ರಾಸ್ತ್ರ ಪೂರೈಸಿತು.

    ವಿಶೇಷವೆಂದರೆ, ಕೋವಿಡ್ ಸಾಂಕ್ರಾಮಿಕಕ್ಕೂ ಮುಂಚಿತವಾಗಿ ಉ.ಕೊರಿಯಾಗೆ ಭೇಟಿ ನೀಡಿದ್ದ ಪ್ರವಾಸಿಗರಲ್ಲಿ ಚೀನೀಯರೇ ಶೇ.90 ರಷ್ಟಿದ್ದರು. ಕಳೆದ ವರ್ಷದಲ್ಲಿ 3,00,000 ಚೀನೀ ಪ್ರವಾಸಿಗರು ಕೊರಿಯಾಗೆ ಭೇಟಿ ನೀಡಿದ್ದರು ಎಂದು ದಕ್ಷಿಣ ಕೊರಿಯಾದ ಗುಪ್ತಚರ ಸಂಸ್ಥೆ ನಡೆಸುತ್ತಿರುವ ಇನ್‌ಸ್ಟಿಟ್ಯೂ ಫಾರ್ ನ್ಯಾಷನಲ್ ಸೆಕ್ಯುರಿಟಿ ಸ್ಟ್ರಾಟಜಿ ತಜ್ಞ ಲೀ ಸಾಂಗ್‌ಕ್ಯೂನ್ ತಿಳಿಸಿದ್ದಾರೆ.

    ಕೊರಿಯಾ ಪ್ರವಾಸೋದ್ಯಮ ಇತಿಹಾಸವೇನು?
    ಶೀತಲ ಸಮರ ಸಂದರ್ಭದಲ್ಲಿ ಡೆಮಾಕ್ರಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯಾ (ಡಿಪಿಆರ್‌ಕೆ) ಸೋವಿತ್ ಒಕ್ಕೂಟದ ಭಾಗವಾಗಿತ್ತು. 1950 ರಿಂದ 80ರ ದಶಕದ ಅಂತ್ಯದ ವರೆಗೆ ಉ.ಕೊರಿಯಾಕ್ಕೆ ಹೆಚ್ಚಿನ ಪ್ರವಾಸಿಗರು ಸಮಾಜವಾದಿ ಬಣದ ಇತರೆ ದೇಶಗಳಿಂದ ಬರುತ್ತಿದ್ದರು. ಪಾಶ್ಚಿಮಾತ್ಯ ಸಮಾಜವಾದಿಗಳು ಕೊರಿಯಾಕ್ಕೆ ಭೇಟಿ ನೀಡುತ್ತಿದ್ದರು. ಗ್ರೇಟ್ ಬ್ರಿಟನ್‌ನ ಕಮ್ಯುನಿಸ್ಟ್ ಭಾಗವು ಟ್ರಾವೆಲ್ ಏಜೆನ್ಸಿಯನ್ನು ನಡೆಸುತ್ತಿತ್ತು. ಅದು ಜನರನ್ನು ಸಮಾಜವಾದಿ ದೇಶಗಳಿಗೆ ಕರೆದೊಯ್ಯುತ್ತಿತ್ತು. 1990ರ ದಶಕದಲ್ಲಿ ಯುಎಸ್‌ಎಸ್‌ಆರ್ ಪತನದ ನಂತರ, ಶೀತಲ ಸಮರ ಕೊನೆಗೊಂಡಿತು. ಸರ್ಕಾರಗಳು ಕುಸಿದವು. ಆಗ ಉ.ಕೊರಿಯಾದಲ್ಲಿ ಸಾಕಷ್ಟು ಬದಲಾವಣೆಯಾಯಿತು. 1990ರ ದಶಕದ ಮಧ್ಯಭಾಗದಲ್ಲಿ ಉ.ಕೊರಿಯಾದಲ್ಲಿ ಪಶ್ಚಿಮ ಪ್ರವಾಸೋದ್ಯಮ ಪ್ರಾರಂಭವಾಯಿತು. ಆಗ ಪಶ್ಚಿಮದಿಂದ ಡಾಲರ್ ವಹಿವಾಟು ಚೆನ್ನಾಗಿ ಆಗುತ್ತಿತ್ತು.

    ಕೊರಿಯಾಗೆ ಚೀನಾ ಏಕೆ ಮುಖ್ಯ?
    ಚೀನಾ ಮತ್ತು ಉ.ಕೊರಿಯಾ ನಡುವಿನ ಸಂಬಂಧ ವಿಶ್ವ ಯುದ್ಧ-2ರ ನಂತರ ಬಲಗೊಂಡಿತು. ಎರಡೂ ಕಮ್ಯುನಿಸ್ಟ್ ರಾಷ್ಟ್ರಗಳಾಗಿ ರೂಪುಗೊಂಡವು. ಅಲ್ಲಿಂದ ಕೊರಿಯಾ ಚೀನಾಗೆ ಒಳ್ಳೆಯ ಮಿತ್ರರಾಷ್ಟçವಾಯಿತು ಎನ್ನುತ್ತಾರೆ ವಿಶ್ಲೇಷಕರು. 2000 ಇಸವಿಯಿಂದಲೂ ಉ.ಕೊರಿಯಾಗೆ ಚೀನಾ ತನ್ನ ಕ್ಷಿಪಣಿ ಮತ್ತು ಪರಮಾಣು ಶಸ್ತ್ರಾಸ್ತ್ರ ನೀಡಿ ನೆರವಾಗುತ್ತಿದೆ. ಇತ್ತ ಅಮೆರಿಕ ಪೂರ್ವ ಏಷ್ಯಾದ ಮಿತ್ರರಾಷ್ಟçಗಳಾದ ಜಪಾನ್ ಮತ್ತು ದ.ಕೊರಿಯಾಗೆ ಶಸ್ತಾçಸ್ತç ಒದಗಿಸುತ್ತಿದೆ. ಚೀನಾ ಮತ್ತು ಉತ್ತರ ಕೊರಿಯಾ 1949 ರಲ್ಲಿ ಔಪಚಾರಿಕ ಸಂಬAಧಗಳನ್ನು ಸ್ಥಾಪಿಸಿದವು. ವಿಶ್ವ ಸಮರ-2 ರ ನಂತರದ ವರ್ಷಗಳಲ್ಲಿ ಹೊಸ ಕಮ್ಯುನಿಸ್ಟ್ ರಾಷ್ಟ್ರಗಳಾಗಿ ಹೊರಹೊಮ್ಮಿದವು. ಕೊರಿಯನ್ ಯುದ್ಧದಲ್ಲಿ (1950-53) ಚೀನಾ ಉತ್ತರ ಕೊರಿಯಾವನ್ನು ಬೆಂಬಲಿಸಿತು. ಎರಡು ದೇಶಗಳು 1961 ರಲ್ಲಿ ಪರಸ್ಪರ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದವು.

    2018 ರಲ್ಲಿ ಉತ್ತರ ಕೊರಿಯಾದೊಂದಿಗಿನ ಸಂಬಂಧವನ್ನು ಸರಿಪಡಿಸಲು ಚೀನಾದ ಪ್ರಯತ್ನದ ನಂತರ, ಕ್ಸಿ ಜಿನ್‌ಪಿಂಗ್ ಮತ್ತು ಕಿಮ್ ಇಬ್ಬರೂ ಅಣ್ವಸ್ತ್ರೀಕರಣದ ಬದ್ಧತೆಯನ್ನು ಪುನರುಚ್ಚರಿಸಿದರು. 2021 ರಲ್ಲಿ ಉಭಯ ದೇಶಗಳು ತಮ್ಮ 60 ವರ್ಷಗಳ ಪರಸ್ಪರ ರಕ್ಷಣಾ ಒಪ್ಪಂದವನ್ನು ಇನ್ನೂ 20 ವರ್ಷಗಳವರೆಗೆ ನವೀಕರಿಸಿದವು. ಆದಾಗ್ಯೂ, ಇತ್ತೀಚಿನ ವರ್ಷಗಳಲ್ಲಿ ಉತ್ತರ ಕೊರಿಯಾ, ರಷ್ಯಾದೊಂದಿಗೆ ಆಳವಾದ ಮಿಲಿಟರಿ ಸಂಬಂಧಗಳನ್ನು ಸ್ಥಾಪಿಸಿದೆ. ಉಕ್ರೇನ್ ವಿರುದ್ಧದ ಯುದ್ಧವನ್ನು ರೂಪಿಸಿದೆ. ಇದು ಚೀನಾದೊಂದಿಗಿನ ಸಂಬAಧವನ್ನು ಹದಗೆಡಿಸಿದೆ.

    ಕೊರಿಯಾದ ಕಠಿಣ ಕಾನೂನುಗಳು ಹೇಗಿರುತ್ತವೆ?
    * 2022ರ ಸಂದರ್ಭದಲ್ಲಿ ದಕ್ಷಿಣ ಕೊರಿಯಾದ ನಾಟಕಗಳನ್ನು ವೀಕ್ಷಿಸಿ, ಸ್ನೇಹಿತರೊಂದಿಗೆ ಅದನ್ನು ಹಂಚಿಕೊಂಡ ಕಾರಣಕ್ಕಾಗಿ ಉ.ಕೊರಿಯಾದ ಇಬ್ಬರು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಮರಣದಂಡನೆ ವಿಧಿಸಲಾಯಿತು. ದಕ್ಷಿಣ ಕೊರಿಯಾ ಸಿನಿಮಾ ವೀಕ್ಷಿಸುವುದನ್ನು ಉ.ಕೊರಿಯಾದಲ್ಲಿ ನಿಷೇಧಿಸಿದೆ.
    * 2024ರ ಸೆಪ್ಟೆಂಬರ್ ಸಂದರ್ಭದಲ್ಲಿ ಉತ್ತರ ಕೊರಿಯಾದಲ್ಲಿ ಸುರಿದ ಭಾರಿ ಮಳೆಯಿಂದ ಸೃಷ್ಟಿಯಾದ ಪ್ರವಾಹ ಪರಿಸ್ಥಿತಿ ನಿಭಾಯಿಸಲು ವಿಫಲರಾದರು ಎಂಬ ಕಾರಣಕ್ಕೆ 30 ಅಧಿಕಾರಿಗಳಿಗೆ ಮರಣದಂಡನೆ ವಿಧಿಸಲಾಯಿತು. ಪ್ರವಾಹದಿಂದಾಗಿ ದೇಶದ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದರು. ನಾಲ್ಕು ಸಾವಿರಕ್ಕೂ ಹೆಚ್ಚು ಮನೆಗಳು ಕೊಚ್ಚಿ ಹೋಗಿದ್ದವು.
    * ಉ.ಕೊರಿಯಾದ ಮಾಜಿ ನಾಯಕ ಕಿಮ್ ಜಾಂಗ್ ಇಲ್ ಅವರ 10ನೇ ಪುಣ್ಯಸ್ಮರಣೆ ಪ್ರಯುಕ್ತ (2021) ಮುಂದಿನ 10 ದಿನಗಳ ವರೆಗೆ ದೇಶದ ನಾಯಕರು ಶೋಕಿಸಬೇಕಾಗಿತ್ತು. ಈ ಸಮಯದಲ್ಲಿ ಯಾರಾದರೂ ಸಂತೋಷವಾಗಿದ್ದರೆ ಅಥವಾ ಮದ್ಯಪಾನ ಮಾಡುವುದು ಕಂಡುಬಂದರೆ ಅವರನ್ನು ನೇರವಾಗಿ ಮರಣದಂಡನೆಗೆ ಗುರಿಪಡಿಸಲಾಗುವುದು ಎಂದು ಕಿಮ್ ಜಾಂಗ್ ಉನ್ ಆದೇಶಿಸಿದ್ದರು.
    * ಕೊರಿಯಾ ಇತ್ತೀಚಿನ ವರ್ಷಗಳಲ್ಲಿ ಜನಸಂಖ್ಯೆಯಲ್ಲಿ ಭಾರಿ ಕುಸಿತ ಕಂಡಿದೆ. ಇದನ್ನು ಮನಗಂಡು ಕಿಮ್‌ ದೇಶದ ಜನತೆಗೆ ಒಂದು ಸಂದೇಶ ನೀಡಿದರು. 10 ಮಕ್ಕಳನ್ನು ಪಡೆಯುವಂತೆ ಹೆಣ್ಣುಮಕ್ಕಳಿಗೆ ಮನವಿ ಮಾಡಿಕೊಂಡರು. ದೇಶದಲ್ಲಿ ಜನಸಂಖ್ಯೆ ಕುಸಿತದ ಬಗ್ಗೆ ಆತಂಕ ವ್ಯಕ್ತಪಡಿಸಿ ಸರ್ವಾಧಿಕಾರಿ ಕಣ್ಣೀರಿಟ್ಟರು. ದೇಶದ ನಾಯಕ ಕಣ್ಣೀರಿಡುತ್ತಿರುವುದನ್ನು ನೋಡಿ ಪ್ರಜೆಗಳು ಸಹ ಕಣ್ಣೀರು ಹಾಕಿದರು. ಒಂದು ವೇಳೆ, ತಮ್ಮ ನಾಯಕ ಕಣ್ಣೀರು ಹಾಕುತ್ತಿರುವಾಗ, ತಾವು ಸುಮ್ಮನೆ ಕುಳಿತರೆ ಮರಣದಂಡನೆ ವಿಧಿಸಬಹುದು ಎಂಬ ಆತಂಕ ಎಲ್ಲರಲ್ಲಿತ್ತು ಎಂಬ ವಿಶ್ಲೇಷಣೆಗಳು ಬಂದಿವೆ.

    ಪ್ರವಾಸಕ್ಕೆ ಹೋಗ್ತಾರಾ ವಿದೇಶಿಗರು?
    ವಿಚಿತ್ರ ಆಡಳಿತ ಶೈಲಿ ಮತ್ತು ಕಾನೂನುಗಳಿಗೆ ಕುಖ್ಯಾತಿ ಪಡೆದಿರುವ ಉತ್ತರ ಕೊರಿಯಾಗೆ ಪಾಶ್ಚಾತ್ಯ ಪ್ರವಾಸಿಗರು ಪ್ರವಾಸ ಕೈಗೊಳ್ಳುತ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ. ಕೊರಿಯಾದಲ್ಲಿ ಇರುವುದು ಕಮ್ಯುನಿಸ್ಟ್‌ ಆಡಳಿತ ವ್ಯವಸ್ಥೆ. ಚೀನಾ ಮತ್ತು ರಷ್ಯಾದಲ್ಲೂ ಕಮ್ಯುನಿಸ್ಟ್‌ ಆಡಳಿತ ಇದೆ. ಹೀಗಾಗಿ, ಈ ಎರಡು ದೇಶಗಳ ನಾಗರಿಕರು ಕೊರಿಯಾಗೆ ಪ್ರವಾಸ ಕೈಗೊಳ್ಳುವವರಾಗಿದ್ದಾರೆ. ಆದರೆ, ಇತರೆ ದೇಶಗಳ ಜನರು ಕೊರಿಯಾಗೆ ಪ್ರವಾಸ ಹೋಗಲು ಹಿಂದೇಟು ಹಾಕುತ್ತಾರೆ. ಕಾರಣ, ಅಲ್ಲಿನ ಆಡಳಿತ ವ್ಯವಸ್ಥೆ. ಹುಚ್ಚು ದೊರೆಯ ನಿಯಮಗಳು ಹೊರಗಿನವರಲ್ಲಿ ಅಚ್ಚರಿ ಮೂಡಿಸುವಂತಿವೆ. ಬೇರೆಯವರು ಅಲ್ಲಿ ಹೋದರೆ ಕಥೆ ಏನು ಎಂಬಂಥ ಭಾವನೆ ಇರುತ್ತದೆ.

  • ದಕ್ಷಿಣ ಕೊರಿಯಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

    ದಕ್ಷಿಣ ಕೊರಿಯಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

    ಸಿಯೋಲ್: ಹಠಾತ್‌ ಬೆಳವಣಿಗೆಯಲ್ಲಿ ದಕ್ಷಿಣ ಕೊರಿಯಾದ (South Korea) ತುರ್ತು ಪರಿಸ್ಥಿತಿಯನ್ನು  ಘೋಷಣೆ ಮಾಡಲಾಗಿದೆ.

    ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯೆಲ್ (Yoon Suk Yeol) ಅವರು ಮಂಗಳವಾರ ರಾತ್ರಿ ದೂರದರ್ಶನ ಭಾಷಣದಲ್ಲಿ ತುರ್ತು ಮಿಲಿಟರಿ ಆಡಳಿತವನ್ನು (Martial Law) ಘೋಷಣೆ ಮಾಡುವುದಾಗಿ ಪ್ರಕಟಿಸಿದರು.

    ಉತ್ತರ ಕೊರಿಯಾದ (North Korea) ಕಮ್ಯುನಿಸ್ಟ್ ಪಡೆಗಳ ಬೆದರಿಕೆಗಳಿಂದ ದಕ್ಷಿಣ ಕೊರಿಯಾವನ್ನು ರಕ್ಷಿಸಲು ಮತ್ತು ಜನರ ಸ್ವಾತಂತ್ರ್ಯ ಮತ್ತು ಸಂತೋಷವನ್ನು ಲೂಟಿ ಮಾಡುವ ರಾಜ್ಯ ವಿರೋಧಿ ಅಂಶಗಳನ್ನು ನಿರ್ಮೂಲನೆ ಮಾಡಲು ತುರ್ತು ಸಮರ ಕಾನೂನನ್ನು ಘೋಷಿಸುತ್ತೇನೆ ಎಂದು ಯೂನ್ ಸುಕ್ ಯೆಲ್ ತಮ್ಮ ಭಾಷಣದಲ್ಲಿ ತಿಳಿಸಿದರು.

    ಜನರ ಜೀವನೋಪಾಯವನ್ನು ಪರಿಗಣಿಸದೆ, ವಿರೋಧ ಪಕ್ಷವು ಕೇವಲ ದೋಷಾರೋಪಣೆ ಮಾಡುತ್ತಿದೆ. ವಿಶೇಷ ತನಿಖೆಗಳು ಮತ್ತು ತಮ್ಮ ನಾಯಕನನ್ನು ನ್ಯಾಯದಿಂದ ರಕ್ಷಿಸುವ ಸಲುವಾಗಿ ಆಡಳಿತವನ್ನು ನಿಷ್ಕ್ರಿಯಗೊಳಿಸಿದೆ ಎಂದು ದೂರಿದರು.


    ದಕ್ಷಿಣ ಕೊರಿಯಾದಲ್ಲಿ 1980 ರ ನಂತರ ಮೊದಲ ಬಾರಿಗೆ ಮಿಲಿಟರಿ ಆಡಳಿತ ಜಾರಿಗೆ ಬಂದಿದೆ. ಮಿಲಿಟರಿ ಆಡಳಿತದ ಸಮಯದಲ್ಲಿ ಸಂಸತ್ತು ಮತ್ತು ರಾಜಕೀಯ ಪಕ್ಷಗಳ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಮಾಧ್ಯಮಗಳು ಮಿಲಿಟರಿ ನಿಯಂತ್ರಣದಲ್ಲಿರುತ್ತಾರೆ ಎಂದು ವರದಿಯಾಗಿದೆ.

  • Russia – Ukraine War | ರಷ್ಯಾ ಪರ 12,000 ಸೈನಿಕರನ್ನು ಕಳುಹಿಸಿದ ಉತ್ತರ ಕೊರಿಯಾ

    Russia – Ukraine War | ರಷ್ಯಾ ಪರ 12,000 ಸೈನಿಕರನ್ನು ಕಳುಹಿಸಿದ ಉತ್ತರ ಕೊರಿಯಾ

    ಸಿಯೋಲ್‌: ಉಕ್ರೇನ್ ವಿರುದ್ಧ ಹೋರಾಡಲು ರಷ್ಯಾದ (Russia) ಬೆಂಬಲಕ್ಕೆ ಉತ್ತರ ಕೊರಿಯಾ (North Korea) ಸಾವಿರಾರು ಸೈನಿಕರನ್ನು ಕಳುಹಿಸಲು ನಿರ್ಧರಿಸಿದೆ ಎಂದು ದಕ್ಷಿಣ ಕೊರಿಯಾದ ಮಾಧ್ಯಮಗಳು ವರದಿ ಮಾಡಿವೆ.

    ವಿಶೇಷ ಪಡೆಗಳು ಸೇರಿದಂತೆ, 12,000 ಸೈನಿಕರ ನಾಲ್ಕು ಬ್ರಿಗೇಡ್‌ಗಳನ್ನು ಕಳುಹಿಸಲು ಉತ್ತರ ಕೊರಿಯಾ ನಿರ್ಧರಿಸಿದೆ. ಈಗಾಗಲೇ ಈ ಪಡೆಗಳು ರಷ್ಯಾ ಕಡೆ ಪ್ರಯಾಣ ಬೆಳೆಸಿವೆ ಎಂದು ರಾಷ್ಟ್ರೀಯ ಗುಪ್ತಚರ ಸೇವೆ (ಎನ್ಐಎಸ್) ಮೂಲಗಳು ತಿಳಿಸಿವೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

    ಉಪಗ್ರಹ ಚಿತ್ರಗಳನ್ನು ಬಿಡುಗಡೆ ಮಾಡಿದ ಸಿಯೋಲ್‌ನ ಬೇಹುಗಾರಿಕಾ ಸಂಸ್ಥೆ, ಉತ್ತರ ಕೊರಿಯಾ ರಷ್ಯಾದ ವ್ಲಾಡಿವೋಸ್ಟಾಕ್‌ನಲ್ಲಿ 1,500 ವಿಶೇಷ ಪಡೆಗಳ ತುಕಡಿಯನ್ನು ನಿಯೋಜಿಸಿದೆ. ಶೀಘ್ರದಲ್ಲೇ ಹೆಚ್ಚಿನ ಪಡೆಗಳನ್ನು ಕಳುಹಿಸಲಿದೆ. ತನ್ನ ವಿಶೇಷ ಪಡೆಗಳನ್ನು ರಷ್ಯಾದ ನೌಕಾಪಡೆಯ ಹಡಗಿನ ಮೂಲಕ ರಷ್ಯಾಕ್ಕೆ ಕಳುಹಿಸಲಾಗಿದೆ. ಇದು ಉತ್ತರ ಕೊರಿಯಾದ ಮಿಲಿಟರಿ ಭಾಗವಹಿಸುವಿಕೆಯ ಪ್ರಾರಂಭವನ್ನು ದೃಢೀಕರಿಸಿದೆ ಎಂದು ತಿಳಿಸಿದೆ.

    ಈ ವಿಚಾರದ ಊಹಾಪೋಹಗಳ ನಡುವೆ ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರು ತುರ್ತು ಭದ್ರತಾ ಸಭೆಯನ್ನು ನಡೆಸಿದ್ದಾರೆ. ಸಭೆಯ ಬಳಿಕ ಉತ್ತರ ಕೊರಿಯಾದ ಸೈನಿಕರು ರಷ್ಯಾದಲ್ಲಿ ತರಬೇತಿ ಪಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋಗಳ ಸತ್ಯಾಸತ್ಯತೆ ಬಗ್ಗೆ ಸ್ಪಷ್ಟತೆ ಇಲ್ಲ ಎನ್ನಲಾಗಿದೆ.

    ರಷ್ಯಾ-ಉತ್ತರ ಕೊರಿಯಾ ನಡುವಿನ ಒಪ್ಪಂದ
    ಜೂನ್‌ನಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪ್ಯೊಂಗ್ಯಾಂಗ್‌ಗೆ ಭೇಟಿ ನೀಡಿದ್ದರು. ಈ ವೇಳೆ ಉಭಯ ದೇಶಗಳು ಪರಸ್ಪರ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದ್ದವು. ಈ ಒಪ್ಪಂದ ಶಸ್ತ್ರಾಸ್ತ್ರ ವರ್ಗಾವಣೆಗೆ ಉತ್ತೇಜನ ನೀಡಿತು. ಇದು ಎರಡೂ ದೇಶಗಳ ಮೇಲಿನ UN ನಿರ್ಬಂಧವನ್ನು ಉಲ್ಲಂಘಿಸುತ್ತದೆ.

  • ಪ್ರವಾಹ ತಡೆಯಲು ವಿಫಲ – ಉತ್ತರ ಕೊರಿಯಾದಲ್ಲಿ 30 ಅಧಿಕಾರಿಗಳಿಗೆ ಗಲ್ಲು ಶಿಕ್ಷೆ

    ಪ್ರವಾಹ ತಡೆಯಲು ವಿಫಲ – ಉತ್ತರ ಕೊರಿಯಾದಲ್ಲಿ 30 ಅಧಿಕಾರಿಗಳಿಗೆ ಗಲ್ಲು ಶಿಕ್ಷೆ

    ಪ್ಯೊಂಗ್ಯಾಂಗ್: ಪ್ರವಾಹದಲ್ಲಿ ಸಾವಿರಕ್ಕೂ ಹೆಚ್ಚು ಜನರ ಸಾವನ್ನು ತಡೆಗಟ್ಟುವಲ್ಲಿ ವಿಫಲರಾದ ಸುಮಾರು 30 ಸರ್ಕಾರಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿ ಉತ್ತರ ಕೊರಿಯಾದ (North Korea) ನಾಯಕ ಕಿಮ್‌ ಜಾಂಗ್‌ ಉನ್‌ (Kim Jong Un) ಆದೇಶ ಹೊರಡಿಸಿದ್ದಾರೆ ಎಂದು ದಕ್ಷಿಣ ಕೊರಿಯಾ ಸುದ್ದಿಸಂಸ್ಥೆಗಳು ವರದಿ ಮಾಡಿವೆ.

    ಚಗಾಂಗ್ ಪ್ರಾಂತ್ಯದಲ್ಲಿ ಸಂಭವಿಸಿದ ಭಾರೀ ಮಳೆ ಮತ್ತು ಭೂಕುಸಿತಗಳು ಹಲವಾರು ಸಾವು-ನೋವುಗಳಿಗೆ ಕಾರಣವಾಗಿತ್ತು. ನೂರಾರು ಸಂಖ್ಯೆಯಲ್ಲಿ ಜನರು ಮನೆ, ಆಸ್ತಿ ಕಳೆದುಕೊಂಡು ನಿರಾಶ್ರಿತರಾದರು.‌

    ಸ್ವೀಕಾರಾರ್ಹವಲ್ಲದ ಜೀವಹಾನಿಗೆ ಕಾರಣರಾದವರು ಕಠಿಣ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಉತ್ತರ ಕೊರಿಯಾದ ಅಧಿಕಾರಿಯನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿದೆ. ಕಳೆದ ತಿಂಗಳ ಕೊನೆಯಲ್ಲಿ ಪ್ರವಾಹ ಪೀಡಿತ ಪ್ರದೇಶದ 20 ರಿಂದ 30 ಅಧಿಕಾರಿಗಳನ್ನು ಏಕಕಾಲದಲ್ಲಿ ಗಲ್ಲಿಗೇರಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಉತ್ತರ ಕೊರಿಯಾ ದೇಶದೊಳಗಿನ ಬೆಳವಣಿಗೆಗಳನ್ನು ಗೌಪ್ಯವಾಗಿಡುತ್ತದೆ. ಹೀಗಾಗಿ, ಅಧಿಕಾರಿಗಳ ಗಲ್ಲಿಗೇರಿಸುವ ವಿವರಗಳನ್ನು ಖಚಿತಪಡಿಸಲು ಸಾಧ್ಯವಾಗಿಲ್ಲ. ಆದರೆ ಉತ್ತರ ಕೊರಿಯಾದ ಸೆಂಟ್ರಲ್ ನ್ಯೂಸ್ ಏಜೆನ್ಸಿ (ಕೆಸಿಎನ್‌ಎ) ಸುದ್ದಿಯನ್ನು ವರದಿ ಮಾಡಿದೆ.

    ಚೀನಾದ ಗಡಿಯ ಸಮೀಪವಿರುವ ಚಗಾಂಗ್ ಪ್ರಾಂತ್ಯವನ್ನು ಅಪ್ಪಳಿಸಿದ ವಿನಾಶಕಾರಿ ಪ್ರವಾಹದ ನಂತರ, ಅಧಿಕಾರಿಗಳನ್ನು ಕಟ್ಟುನಿಟ್ಟಾಗಿ ಶಿಕ್ಷಿಸಲು ಕಿಮ್ ಜಾಂಗ್ ಉನ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆಂದು ವರದಿಯಾಗಿದೆ.

    ಸಿನುಯಿಜುನಲ್ಲಿ ನಡೆದ ತುರ್ತು ಪೊಲಿಟಿಬ್ಯೂರೋ ಸಭೆಯಲ್ಲಿ ನಾಯಕ ಕಿಮ್ ಜಾಂಗ್ ಉನ್, ವಿಪತ್ತು ತಡೆಗಟ್ಟುವ ಜವಾಬ್ದಾರಿ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಇದರಿಂದ ಅಪಾರ ಸಾವು-ನೋವುಗಳಾಗಿವೆ ಕಾರಣರಾದವರನ್ನು ಕಟ್ಟುನಿಟ್ಟಾಗಿ ಶಿಕ್ಷಿಸಿ ಎಂದು ಆದೇಶ ಹೊರಡಿಸಿದ್ದಾರೆ.

  • ದ.ಕೊರಿಯಾ ಆಟಗಾರರ ಜೊತೆ ಸೆಲ್ಫಿ – ಕ್ರೀಡಾಪಟುಗಳ ವಿರುದ್ಧ ಕ್ರಮಕ್ಕೆ ಮುಂದಾದ ಉ.ಕೊರಿಯಾ

    ದ.ಕೊರಿಯಾ ಆಟಗಾರರ ಜೊತೆ ಸೆಲ್ಫಿ – ಕ್ರೀಡಾಪಟುಗಳ ವಿರುದ್ಧ ಕ್ರಮಕ್ಕೆ ಮುಂದಾದ ಉ.ಕೊರಿಯಾ

    ಸಿಯೋಲ್: ಪ್ಯಾರಿಸ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ದಕ್ಷಿಣ ಕೊರಿಯಾ ಆಟಗಾರರ ಜೊತೆ ಸೆಲ್ಫಿ ತೆಗೆದುಕೊಂಡಿದ್ದಕ್ಕೆ ತನ್ನ ಆಟಗಾರರ ವಿರುದ್ಧ ಉತ್ತರ ಕೊರಿಯಾ ಸರ್ಕಾರ ಕ್ರಮಕ್ಕೆ ಮುಂದಾಗಿದೆ.ಇದನ್ನೂ ಓದಿ: ಜಮ್ಮು ಕಾಶ್ಮೀರ ಚುನಾವಣೆ: ಇಂದು ಬೆಳಗ್ಗೆ ಬಿಡುಗಡೆ ಮಾಡಿದ್ದ ಮೊದಲ ಪಟ್ಟಿ ಹಿಂಪಡೆದ ಬಿಜೆಪಿ

    ಉತ್ತರ ಕೊರಿಯಾದ ಟೆಬಲ್ ಟೆನ್ನಿಸ್ ಆಟಗಾರರಾದ ಜಂಗ್-ಸಿಕ್ ಮತ್ತು ಕಿಮ್ ಕುಮ್ ಯಂಗ್ ಪದಕ ಗೆದ್ದ ಮೇಲೆ ತಮ್ಮ ಬದ್ದ ವೈರಿ ದೇಶವಾದ ದಕ್ಷಿಣ ಕೊರಿಯಾದ ಆಟಗಾರರ ಜೊತೆ ನಗುತ್ತಾ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಸೆಲ್ಫಿ ತೆಗೆದುಕೊಳ್ಳುವಾಗ ಚೀನಾದ ಆಟಗಾರರು ಜೊತೆಗಿದ್ದರು.

    ತನ್ನ ಬದ್ದ ವೈರಿ ದೇಶ ದಕ್ಷಿಣ ಕೊರಿಯಾದ ಆಟಗಾರರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟಿದ್ದಕ್ಕೆ ಉತ್ತರ ಕೋರಿಯಾದ ಸರ್ಕಾರ ತನ್ನ ದೇಶದ ಆಟಗಾರರ ಮೇಲೆ ಕ್ರಮಕ್ಕೆ ಮುಂದಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.ಇದನ್ನೂ ಓದಿ: ಕೀಬೋರ್ಡ್‌ನಲ್ಲಿ ಡಾಲರ್ ಬದಲು ರೂಪಿ ಚಿಹ್ನೆ ಯಾಕಿಲ್ಲ – ಓಲಾ ಸಿಇಒ ಪ್ರಶ್ನೆ

  • 24 ವರ್ಷಗಳ ನಂತರ ಉ.ಕೊರಿಯಾಗೆ ರಷ್ಯಾ ಅಧ್ಯಕ್ಷ ಭೇಟಿ – ನ್ಯಾಟೊ ಒಕ್ಕೂಟ ರಾಷ್ಟ್ರಗಳಲ್ಲಿ ನಡುಕ!

    24 ವರ್ಷಗಳ ನಂತರ ಉ.ಕೊರಿಯಾಗೆ ರಷ್ಯಾ ಅಧ್ಯಕ್ಷ ಭೇಟಿ – ನ್ಯಾಟೊ ಒಕ್ಕೂಟ ರಾಷ್ಟ್ರಗಳಲ್ಲಿ ನಡುಕ!

    – ಕಿಮ್‌ ಭೇಟಿಯಾಗಿದ್ಯಾಕೆ ಪುಟಿನ್?‌
    – ಉತ್ತರ ಕೊರಿಯಾ, ರಷ್ಯಾ ನಡುವೆ ಆದ ಒಪ್ಪಂದವೇನು?

    24 ವರ್ಷಗಳ ಬಳಿಕ ಉತ್ತರ ಕೊರಿಯಾಗೆ (North Korea) ಭೇಟಿ ನೀಡಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ (Vladimir Putin) ಇನ್ನಷ್ಟು ಬಲ ಭೀಮನಾಗಿ ವಾಪಸ್‌ ಆಗಿದ್ದಾರೆ. ಉಕ್ರೇನ್‌ (Ukraine) ಮೇಲೆ ಯುದ್ಧ ಸಾರಿದಾಗ, ಹತ್ತಾರು ದೇಶಗಳ ನ್ಯಾಟೊ ಒಕ್ಕೂಟವೇ ತಿರುಗಿಬಿದ್ದರೂ ಎದೆಗುಂದದೇ ರಷ್ಯಾ ಏಕಾಂಗಿ ಹೋರಾಟ ನಡೆಸಿತ್ತು. ಆಗ ರಷ್ಯಾ ಬೆಂಬಲಕ್ಕೆ ನಿಂತ ರಾಷ್ಟ್ರ ಉತ್ತರ ಕೊರಿಯಾ. ಉಕ್ರೇನ್‌ ಮೇಲಿನ ಯುದ್ಧಕ್ಕೆ ರಷ್ಯಾಗೆ ಅಗತ್ಯ ಶಸ್ತ್ರಾಸ್ತ್ರ ನೆರವು ನೀಡಿ ಹೆಗಲು ಕೊಟ್ಟಿತ್ತು. ಈಗ ತನ್ನ ಆಪದ್ಭಾಂಧವ ರಾಷ್ಟ್ರಕ್ಕೆ ಪುಟಿನ್‌ ಭೇಟಿ ಕೊಟ್ಟರು. ಕೊರಿಯಾ ನಾಯಕ ಕಿಮ್‌ ಜಾಂಗ್‌ ಉನ್‌ (Kim Jong Un) ಅಷ್ಟೇ ಖುಷಿಯಿಂದ ಬರಮಾಡಿಕೊಂಡರು. ಉಭಯ ದೇಶಗಳ ನಾಯಕರು ಪರಸ್ಪರ ಹ್ಯಾಂಡ್‌ಶೇಕ್‌ ಮಾಡಿದರು. ನೆನಪಿನ ಕಾಣಿಕೆಗಳ ವಿನಿಮಯವಾಯಿತು. ಸಶಸ್ತ್ರ ನೆರವು ಒಪ್ಪಂದಕ್ಕೆ ಸಹಿ ಹಾಕಿದರು. ದಶಕಗಳ ನಂತರ ರಷ್ಯಾ ಅಧ್ಯಕ್ಷನ ಆ ಒಂದು ಭೇಟಿ ಅಮೆರಿಕ ನೇತೃತ್ವದ ಪಾಶ್ಚಿಮಾತ್ಯ ರಾಷ್ಟ್ರಗಳ ನಿದ್ದೆಗೆಡಿಸಿದೆ.

    ರಷ್ಯಾವಾಗಲಿ ಅಥವಾ ಉಕ್ರೇನ್‌ ಆಗಲಿ ಹೊರಗಡೆಯಿಂದ ಸಶಸ್ತ್ರ ಆಕ್ರಮಣವನ್ನು ಎದುರಿಸಿದರೆ ಪರಸ್ಪರರು ತಕ್ಷಣದ ಮಿಲಿಟರಿ ನೆರವು ನೀಡುವ ಒಪ್ಪಂದಕ್ಕೆ ಪುಟಿನ್‌ ಮತ್ತು ಕಿಮ್‌ ಸಹಿ ಹಾಕಿದ್ದಾರೆ. ಜೊತೆಗೆ ಉತ್ತರ ಕೊರಿಯಾಗೆ ಸಶಸ್ತ್ರಗಳನ್ನು ನೀಡಲಾಗುವುದು ಎಂದು ರಷ್ಯಾ ಅಧ್ಯಕ್ಷರು ಒಪ್ಪಂದದಲ್ಲಿ ತಿಳಿಸಿದ್ದಾರೆ. ಉಭಯ ದೇಶಗಳು ಒಪ್ಪಂದವು ಅಮೆರಿಕಗೆ ಆತಂಕ ಮೂಡಿಸಿದೆ. ರಷ್ಯಾ-ಕೊರಿಯಾ ನಡುವಿನ ಈ ಒಪ್ಪಂದ ಈಗ ಏಕೆ ಮಹತ್ವದ್ದು? ಇದನ್ನೂ ಓದಿ: 24 ವರ್ಷಗಳ ಬಳಿಕ ಉತ್ತರ ಕೊರಿಯಾಗೆ ಪುಟಿನ್‌ ಭೇಟಿ – ರಷ್ಯಾ ಅಧ್ಯಕ್ಷನಿಗೆ ಭವ್ಯ ಸ್ವಾಗತ

    ರಷ್ಯಾ-ಉ.ಕೊರಿಯಾ ಸ್ನೇಹದ ಒಂದು ಹಿನ್ನೋಟ
    ಎರಡನೆಯ ಮಹಾಯುದ್ಧದ ನಂತರ, ಹಿಂದಿನ ಸೋವಿಯತ್ ಒಕ್ಕೂಟವು ಕೊರಿಯಾದಲ್ಲಿ ಕಮ್ಯುನಿಸ್ಟ್ ಆಡಳಿತವನ್ನು ಸ್ಥಾಪಿಸಲು ಬಯಸಿತು. ಕೊರಿಯನ್ ಯುದ್ಧದ ಸಮಯದಲ್ಲಿ ಉತ್ತರ ಕೊರಿಯಾದ ಸಂಸ್ಥಾಪಕ ಕಿಮ್ ಇಲ್ ಸುಂಗ್‌ಗೆ ಗಮನಾರ್ಹ ಮಿಲಿಟರಿ ಸಹಾಯವನ್ನು ನೀಡಿತು. ಯುದ್ಧಗಳು ಕೊನೆಗೊಂಡ ನಂತರ ಯುಎಸ್ಎಸ್ಆರ್, ಚೀನಾದೊಂದಿಗೆ ಕಮ್ಯುನಿಸ್ಟ್ ಉತ್ತರಕ್ಕೆ ಗಮನಾರ್ಹ ಮಿಲಿಟರಿ ಮತ್ತು ಇತರ ಸಹಾಯವನ್ನು ಒದಗಿಸಿತು. 1961 ರಲ್ಲಿ ಉಭಯ ರಾಷ್ಟ್ರಗಳು ತಮ್ಮ ಮೈತ್ರಿಯನ್ನು ಗಟ್ಟಿಗೊಳಿಸಿದವು. ರಷ್ಯಾ-ಉತ್ತರ ಕೊರಿಯಾ ಸ್ನೇಹ, ಸಹಕಾರ ಮತ್ತು ಪರಸ್ಪರ ಸಹಾಯದ ಒಪ್ಪಂದಕ್ಕೆ ಸಹಿ ಹಾಕಿದವು. ಇದು ಇತ್ತೀಚಿನ ಒಪ್ಪಂದದಂತೆ ಪರಸ್ಪರ ರಕ್ಷಣಾ ಒಪ್ಪಂದವನ್ನು ಹೊಂದಿದೆ. 1991 ರಲ್ಲಿ ಸೋವಿಯತ್ ಒಕ್ಕೂಟದ ವಿಸರ್ಜನೆಯ ನಂತರ, ಈ ಒಪ್ಪಂದವನ್ನು ರದ್ದುಗೊಳಿಸಲಾಯಿತು. ಪರಿಣಾಮವಾಗಿ ಸಂಬಂಧಗಳು ತಾತ್ಕಾಲಿಕವಾಗಿ ಹದಗೆಟ್ಟವು.

    ಹೀಗಿದ್ದರೂ, 2000 ರ ದಶಕದ ಆರಂಭದಿಂದಲೂ ಪುಟಿನ್ ಆಡಳಿತದ ರಷ್ಯಾವು ಕಿಮ್ ಸರ್ವಾಧಿಕಾರದ ಉತ್ತರ ಕೊರಿಯಾಕ್ಕೆ ಹತ್ತಿರವಾಗಿದೆ. 2022 ರಲ್ಲಿ ಉಕ್ರೇನ್‌ ಮೇಲಿನ ಯುದ್ಧದಿಂದಾಗಿ ಪಾಶ್ಚಿಮಾತ್ಯ ರಾಷ್ಟ್ರಗಳ ಆರ್ಥಿಕ ನಿರ್ಬಂಧಕ್ಕೆ ರಷ್ಯಾ ಗುರಿಯಾಯಿತು. ಆಗ ರಷ್ಯಾಗೆ ಬೆಂಬಲವಾಗಿ ನಿಂತಿದ್ದು ಉತ್ತರ ಕೊರಿಯಾ. ರಷ್ಯಾ ಮತ್ತು ಉತ್ತರ ಕೊರಿಯಾವು ಪಾಶ್ಚಿಮಾತ್ಯ ಉದಾರವಾದಿ ಕ್ರಮದ ವಿರುದ್ಧ ಒಟ್ಟಾಗಿ ಈಗಲೂ ನಿಂತಿವೆ. ಇದನ್ನೂ ಓದಿ: ಕುರಾನ್‌ಗೆ ಅಪಮಾನ – ಠಾಣೆಗೆ ನುಗ್ಗಿ ಆರೋಪಿಯನ್ನ ಗುಂಡಿಕ್ಕಿ ಕೊಂದ ಉದ್ರಿಕ್ತ ಗುಂಪು!

    ಈಗಿನ ಒಪ್ಪಂದ ಏನು?
    ರಷ್ಯಾ ಮತ್ತು ಉತ್ತರ ಕೊರಿಯಾ ನಡುವಿನ ಒಪ್ಪಂದವು ಪರಸ್ಪರ ಮಿಲಿಟರಿ ಬೆಂಬಲ ಮತ್ತು ತಾಂತ್ರಿಕ ನೆರವು ನೀಡುವುದು. ಪರಸ್ಪರ ರಕ್ಷಣಾ ನಿಬಂಧನೆಗಳು ಈ ಒಪ್ಪಂದದಲ್ಲಿ ನಿರ್ಣಾಯಕವಾಗಿದೆ. ಉದಾಹರಣೆಗೆ, ಉತ್ತರ ಕೊರಿಯಾ ಮೇಲೆ ಬೇರೊಂದು ರಾಷ್ಟ್ರ ಸಶಸ್ತ್ರ ಆಕ್ರಮಣ ನಡೆಸಿದರೆ ರಷ್ಯಾ ತಕ್ಷಣ ಕೊರಿಯಾಗೆ ಮಿಲಿಟರಿ ರಕ್ಷಣೆ ನೀಡುತ್ತದೆ. ಅದೇ ರೀತಿ, ರಷ್ಯಾ ಮೇಲೆ ಬೇರೊಂದು ರಾಷ್ಟ್ರ ಆಕ್ರಮಣ ಮಾಡಿದರೆ ಉತ್ತರ ಕೊರಿಯಾ ತಕ್ಷಣದ ಮಿಲಿಟರಿ ನೆರವು ನೀಡಬೇಕು. ಇದು ಉಭಯ ರಾಷ್ಟ್ರಗಳ ನಡುವೆ ಆಗಿರುವ ಪ್ರಮುಖ ಒಪ್ಪಂದ. ಇಬ್ಬರ ಈ ಒಪ್ಪಂದವು ಎರಡು ರಾಷ್ಟ್ರಗಳ ನಡುವಿನ 1961 ರ ಒಪ್ಪಂದವನ್ನು ಪ್ರತಿಧ್ವನಿಸುತ್ತದೆ ಎಂದು ಕೌನ್ಸಿಲ್ ಫಾರ್ ಫಾರಿನ್ ರಿಲೇಶನ್ಸ್‌ನಲ್ಲಿ ಕೊರಿಯಾ ಅಧ್ಯಯನಕಾರ ಫೆಲೋ ಸ್ಯೂ ಮಿ ಟೆರ್ರಿ ತಿಳಿಸಿದ್ದಾರೆ.

    ಜಪಾನ್‌-ದಕ್ಷಿಣ ಕೊರಿಯಾಗೆ ನಡುಕ
    ರಷ್ಯಾ ಮತ್ತು ಉತ್ತರ ಕೊರಿಯಾ ಮಿಲಿಟರಿ ಒಪ್ಪಂದದಿಂದ ದಕ್ಷಿಣ ಕೊರಿಯಾ ಮತ್ತು ಜಪಾನ್‌ಗೆ ನಡುಕ ಹುಟ್ಟಿದೆ. ಈ ಒಪ್ಪಂದವು ತಮಗೆ ನೇರ ಭದ್ರತಾ ಬೆದರಿಕೆ ಎಂದು ಎರಡೂ ರಾಷ್ಟ್ರಗಳು ಭಾವಿಸಿದಂತಿದೆ. ಉತ್ತರ ಕೊರಿಯಾದ ಪರಮಾಣು ಕಾರ್ಯಕ್ರಮ ಮತ್ತು ಮಿಲಿಟರಿ ಸಾಮರ್ಥ್ಯದ ಬಗ್ಗೆ ಎರಡೂ ದೇಶಗಳು ಬಹಳ ಹಿಂದಿನಿಂದಲೂ ಆತಂಕ ವ್ಯಕ್ತಪಡಿಸಿವೆ. ಹೀಗಾಗಿ ಜಪಾನ್‌ ಮತ್ತು ದಕ್ಷಿಣ ಕೊರಿಯಾ ರಾಷ್ಟ್ರಗಳು ತಮ್ಮ ರಕ್ಷಣಾ ವ್ಯವಸ್ಥೆ ಬಲಪಡಿಸುವ ಮತ್ತು ಭದ್ರತಾ ನೀತಿಗಳನ್ನು ಪರಾಮರ್ಶಿಸುವ ಕಡೆಗೆ ಮತ್ತೆ ಗಮನ ಕೇಂದ್ರೀಕರಿಸುವ ಸಾಧ್ಯತೆ ಇದೆ. ಜಪಾನ್ ಈಗಾಗಲೇ ತನ್ನ ದೀರ್ಘಕಾಲದ ಶಾಂತಿವಾದಿ ವಿದೇಶಾಂಗ ನೀತಿಯಿಂದ ದೂರ ಸರಿದಿದೆ. ತನ್ನ ಮಿಲಿಟರಿ ಶಕ್ತಿಯನ್ನು ನಿರ್ಮಿಸುವ ಪ್ರಕ್ರಿಯೆಯಲ್ಲಿದೆ. ಇತ್ತ ದಕ್ಷಿಣ ಕೊರಿಯಾ ತನ್ನ ರಾಷ್ಟ್ರೀಯ ಭದ್ರತಾ ಮಂಡಳಿಯ ತುರ್ತು ಸಭೆಯನ್ನು ಕರೆದಿದೆ. ಉಕ್ರೇನ್‌ಗೆ ಶಸ್ತ್ರಾಸ್ತ್ರಗಳನ್ನು ಕಳುಹಿಸುವ ವಿಚಾರವನ್ನು ಈಗ ಪರಿಗಣಿಸುವುದಾಗಿ ಹೇಳಿದೆ. ಇದು ಇಲ್ಲಿಯವರೆಗೆ ಅದನ್ನು ವಿರೋಧಿಸಿತ್ತು. ಇದನ್ನೂ ಓದಿ: ಸಮುದ್ರದ ಮಧ್ಯೆ ಚೀನಾ-ಫಿಲಿಪ್ಪೈನ್ಸ್ ಸೇನೆಗಳ ನಡುವೆ ಜಟಾಪಟಿ

    ರಷ್ಯಾ-ಉತ್ತರ ಕೊರಿಯಾ ಒಪ್ಪಂದವು ಇತರೆಡೆಗಳಲ್ಲಿ, ವಿಶೇಷವಾಗಿ ಇರಾನ್‌ನೊಂದಿಗೆ ಇದೇ ರೀತಿಯ ಪಾಲುದಾರಿಕೆಯನ್ನು ಪ್ರೋತ್ಸಾಹಿಸಬಹುದು. ಪಾಶ್ಚಿಮಾತ್ಯರಿಗೆ ಇವುಗಳು ದೊಡ್ಡ ಬೆದರಿಕೆ ನೀಡುವುದು ಗ್ಯಾರಂಟಿ. ಉತ್ತರ ಕೊರಿಯಾದ ಸಾಂಪ್ರದಾಯಿಕ ಮಿತ್ರ ಚೀನಾ. ಒಪ್ಪಂದವು ಏಷ್ಯಾದಲ್ಲಿ ಪಾಶ್ಚಿಮಾತ್ಯ ವಿರೋಧಿ ಭದ್ರಕೋಟೆಯನ್ನು ಬಲಪಡಿಸುತ್ತದೆ. ಆದರೆ, ಉತ್ತರ ಕೊರಿಯಾದೊಂದಿಗೆ ರಷ್ಯಾದ ಮಿಲಿಟರಿ ಸಹಯೋಗದ ಬಗ್ಗೆ ಚೀನಾ ಜಾಗರೂಕತೆಯಿಂದ ಇರಬೇಕಾಗುತ್ತದೆ. ಈ ಒಪ್ಪಂದವು ಉತ್ತರ ಕೊರಿಯಾದ ಪ್ಯೊಂಗ್ಯಾಂಗ್‌ ಮೇಲೆ ಚೀನಾದ ಭೌಗೋಳಿಕ ರಾಜಕೀಯ ಪ್ರಭಾವವನ್ನು ದುರ್ಬಲಗೊಳಿಸಬಹುದು.

    ನ್ಯಾಟೊ ಎದೆಯಲ್ಲಿ ಢವಢವ
    ದಕ್ಷಿಣ ಕೊರಿಯಾ ಮತ್ತು ಜಪಾನ್ ಈಗ ಯುನೈಟೆಡ್ ಸ್ಟೇಟ್ಸ್ ಜೊತೆಗಿನ ತಮ್ಮ ಮೈತ್ರಿಯನ್ನು ಮತ್ತಷ್ಟು ಗಟ್ಟಿಗೊಳಿಸಲಿವೆ. ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಈಗಾಗಲೇ ತನ್ನ ಮಿತ್ರರಾಷ್ಟ್ರಗಳಿಗೆ ಬದ್ಧವಾಗಿರುವುದಾಗಿ ಪುನರುಚ್ಚರಿಸಿದೆ. NATO ಮುಖ್ಯಸ್ಥ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಕೂಡ, ರಷ್ಯಾ-ಉತ್ತರ ಕೊರಿಯಾ ಒಪ್ಪಂದದ ಬಗ್ಗೆ ಆಳವಾದ ಕಳವಳ ವ್ಯಕ್ತಪಡಿಸಿದ್ದಾರೆ. ‘ಈ ಒಪ್ಪಂದ ಜಾಗತಿಕ ಭದ್ರತೆಗೆ ಅಪಾಯಕಾರಿ ಮತ್ತು ಹೆಚ್ಚಿದ ಪರಮಾಣು ಬಳಕೆಯ ಸಾಧ್ಯತೆಯನ್ನು ಎತ್ತಿ ತೋರುತ್ತಿದೆ. ನಾವು ಹಿಂದೆಂದೂ ನೋಡಿರದ ರೀತಿಯಲ್ಲಿ ಸರ್ವಾಧಿಕಾರಿ ಶಕ್ತಿಗಳು ಹೆಚ್ಚೆಚ್ಚು ಪಡೆಗಳನ್ನು ಸೇರುತ್ತಿವೆ. ಪರಸ್ಪರ ಬೆಂಬಲಿಸುತ್ತಿವೆ’ ಎಂದಿದ್ದಾರೆ. ಇದನ್ನೂ ಓದಿ: ಹಜ್ ಯಾತ್ರೆಗೆ ತೆರಳಿದ್ದ ಬೆಂಗ್ಳೂರಿನ ಇಬ್ಬರು ಸಾವು – ಕರ್ನಾಟಕದ 10,000ಕ್ಕೂ ಹೆಚ್ಚು ಮಂದಿ ಸೇಫ್‌!

    ರಷ್ಯಾ-ಉಕ್ರೇನ್‌ ಯುದ್ಧದ ಮೆಲುಕು
    ಉತ್ತರ ಕೊರಿಯಾ ಜೊತೆಗಿನ ರಷ್ಯಾ ಒಪ್ಪಂದಕ್ಕೆ ಉಕ್ರೇನ್‌ ಮೇಲಿನ ಯುದ್ಧವೂ ಒಂದು ಕಾರಣ. ರಷ್ಯಾ ಮತ್ತು ಉಕ್ರೇನ್ ನಡುವಿನ ಪ್ರಸ್ತುತ ಬಿಕ್ಕಟ್ಟಿಗೆ ಮುಖ್ಯ ಕಾರಣ ನ್ಯಾಟೊ (ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ). ಇದು ಯುಎಸ್, ಯುಕೆ, ಫ್ರಾನ್ಸ್ ಮತ್ತು ಜರ್ಮನಿ ಸೇರಿದಂತೆ 30 ದೇಶಗಳ ಗುಂಪುಗಳನ್ನು ಒಳಗೊಂಡ ಸಂಸ್ಥೆಯಾಗಿದೆ. ಉಕ್ರೇನ್ ನ್ಯಾಟೊ ಸಂಸ್ಥೆಗೆ ಸೇರಲು ಬಯಸಿತ್ತು. NATO ಕೂಡ ಉಕ್ರೇನ್ ಅನ್ನು ತನ್ನ ಸದಸ್ಯರನ್ನಾಗಿ ಮಾಡಿಕೊಳ್ಳುವ ಬಗ್ಗೆ ಮುಕ್ತವಾಗಿತ್ತು. ಆದರೆ ಉಕ್ರೇನ್‌ ನಿರ್ಧಾರಕ್ಕೆ ರಷ್ಯಾ ವಿರೋಧ ವ್ಯಕ್ತಪಡಿಸಿತ್ತು. ನ್ಯಾಟೊ ಸೇರಿದಂತೆ ಯಾವುದೇ ಅಂತರರಾಷ್ಟ್ರೀಯ ಒಕ್ಕೂಟಕ್ಕೆ ಉಕ್ರೇನ್‌ ಸೇರಬಾರದು ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಎಚ್ಚರಿಸಿದ್ದರು. ಆದರೆ ಅವರ ಮಾತನ್ನು ಉಕ್ರೇನ್‌ ಕೇಳದೇ ನ್ಯಾಟೊ ಸೇರಲು ಮುಂದಾಯಿತು. ಇದರ ಪರಿಣಾಮದಿಂದ ರಷ್ಯಾ ಯುದ್ಧವನ್ನು ಎದುರಿಸಬೇಕಾಯಿತು.

    ಉಕ್ರೇನ್‌ ನ್ಯಾಟೊ ಸೇರಲು ಪುಟಿನ್‌ ವಿರೋಧ ಯಾಕೆ?
    ಉಕ್ರೇನ್ NATOದಲ್ಲಿ ತನ್ನ ಸದಸ್ಯ ಸ್ಥಾನ ಪಡೆಯಲು ರಷ್ಯಾ ಬಯಸುವುದಿಲ್ಲ. ಏಕೆಂದರೆ NATO ಸದಸ್ಯ ರಾಷ್ಟ್ರವು ಯಾವುದೇ ಬಾಹ್ಯ ದಾಳಿಯ ಸಂದರ್ಭದಲ್ಲಿ ಎಲ್ಲಾ ಸದಸ್ಯರ ಸಾಮೂಹಿಕ ಬೆಂಬಲಕ್ಕೆ ಅರ್ಹವಾಗಿರುತ್ತದೆ. ಹೀಗಾಗಿ ಉಕ್ರೇನ್ ಅನ್ನು NATOದಲ್ಲಿ ಸದಸ್ಯನಾಗಲು ರಷ್ಯಾ ಒಪ್ಪುತ್ತಿಲ್ಲ. ಉಕ್ರೇನ್‌ ನ್ಯಾಟೊ ಸೇರಿದರೆ ಅದರ ಒಕ್ಕೂಟ ರಾಷ್ಟ್ರಗಳ ಸೇನೆಯು, ಉಕ್ರೇನ್‌ನ ಗಡಿಯಲ್ಲಿ ಪಡೆಗಳನ್ನು ನಿಯೋಜಿಸುತ್ತವೆ. ಉಕ್ರೇನ್‌ ಮತ್ತು ರಷ್ಯಾ ಗಡಿಗೆ ನ್ಯಾಟೊ ಒಕ್ಕೂಟ ರಾಷ್ಟ್ರಗಳ ಸೇನೆ ನಿಯೋಜನೆ ಸಾಧ್ಯವಾಗಬಾರದು ಎಂಬುದು ಪುಟಿನ್‌ ನಿಲುವು. ಹೀಗಾಗಿ ಉಕ್ರೇನ್‌ ಮೇಲೆ ಯುದ್ಧ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮೆಕ್ಕಾದಲ್ಲಿ ಮೃತಪಟ್ಟ 645 ಹಜ್ ಯಾತ್ರಿಕರ ಪೈಕಿ 68 ಮಂದಿ ಭಾರತೀಯರು!

  • 24 ವರ್ಷಗಳ ಬಳಿಕ ಉತ್ತರ ಕೊರಿಯಾಗೆ ಪುಟಿನ್‌ ಭೇಟಿ – ರಷ್ಯಾ ಅಧ್ಯಕ್ಷನಿಗೆ ಭವ್ಯ ಸ್ವಾಗತ

    24 ವರ್ಷಗಳ ಬಳಿಕ ಉತ್ತರ ಕೊರಿಯಾಗೆ ಪುಟಿನ್‌ ಭೇಟಿ – ರಷ್ಯಾ ಅಧ್ಯಕ್ಷನಿಗೆ ಭವ್ಯ ಸ್ವಾಗತ

    ಸಿಯೋಲ್: 24 ವರ್ಷಗಳ ಬಳಿಕ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ (Vladimir Putin) ಅವರು ಉತ್ತರ ಕೊರಿಯಾಗೆ ಭೇಟಿ ನೀಡಿದ್ದಾರೆ. ರಾಜಧಾನಿ ಪ್ಯೊಂಗ್ಯಾಂಗ್ ಕಿಮ್‌ ಇಲ್‌ ಸುಂಗ್‌ ಸ್ಕ್ವೇರ್‌ನಲ್ಲಿ ಉತ್ತರ ಕೊರಿಯಾ (North Korea) ನಾಯಕ ಕಿಮ್‌ ಜಾಂಗ್‌ ಉನ್ (Kim Jong Un) ಬುಧವಾರ ಪುಟಿನ್‌ಗೆ ಭವ್ಯ ಸ್ವಾಗತ ಕೋರಲಾಯಿತು.

    ಕಿಮ್ ಮತ್ತು ಪುಟಿನ್ ಕುಮ್ಸುಸನ್ ಅರಮನೆಯಲ್ಲಿ ಶೃಂಗಸಭೆಯ ಮಾತುಕತೆ ನಡೆಸಿದರು. ಉಭಯ ರಾಷ್ಟ್ರಗಳ ಸಂಬಂಧ ಮತ್ತಷ್ಟು ಬಲಪಡಿಸುವ ಪ್ರತಿಜ್ಞೆ ಮಾಡಿದರು. ಇದನ್ನೂ ಓದಿ: ಮೆಕ್ಕಾದಲ್ಲಿ ಮಿತಿಮೀರಿದ ತಾಪಮಾನ – 550ಕ್ಕೂ ಹೆಚ್ಚು ಹಜ್‌ ಯಾತ್ರಿಕರ ಸಾವು!

    ಉಕ್ರೇನ್‌ ಮೇಲಿನ ಯುದ್ಧದ ಸಂದರ್ಭದಲ್ಲಿ ರಷ್ಯಾದ ನಿಲುವಿಗೆ ಸ್ಥಿರ ಮತ್ತು ಅಚಲ ಬೆಂಬಲವನ್ನು ನಾವು ಹೆಚ್ಚು ಪ್ರಶಂಸಿಸುತ್ತೇವೆ ಎಂದು ಕಿಮ್‌ ಅವರಿಗೆ ಪುಟಿನ್‌ ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಯುನೈಟೆಡ್ ಸ್ಟೇಟ್ಸ್ ಮತ್ತು ಅದರ ಮಿತ್ರರಾಷ್ಟ್ರಗಳ ಪ್ರಾಬಲ್ಯದ, ಸಾಮ್ರಾಜ್ಯಶಾಹಿ ನೀತಿಯ ವಿರುದ್ಧ ಮಾಸ್ಕೋ ಹೋರಾಡುತ್ತಿದೆ ಎಂದು ಪುಟಿನ್‌ ಸ್ಪಷ್ಟಪಡಿಸಿದ್ದಾರೆ.

    ಪುಟಿನ್ ಬುಧವಾರ ಮುಂಜಾನೆ ಪ್ಯೊಂಗ್ಯಾಂಗ್‌ನ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಕಿಮ್ ಅವರನ್ನು ಅಪ್ಪಿಕೊಂಡು ಸ್ವಾಗತಿಸಿದರು. ನಂತರ ಪ್ಯೊಂಗ್ಯಾಂಗ್‌ನಲ್ಲಿರುವ ರಾಜ್ಯ ಅತಿಥಿ ಗೃಹಕ್ಕೆ ಇಬ್ಬರೂ ನಾಯಕರು ತೆರಳಿದರು. ಪುಟಿನ್‌ ಈ ಭೇಟಿಯು ಉಭಯ ದೇಶಗಳ ದಶಕಗಳ ಸಂಬಂಧಗಳನ್ನು ಮರುರೂಪಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಇದು ನಿನ್ನ ಭಾರತವಲ್ಲ- ಅಭಿಮಾನಿ ಮೇಲೆ ಹಲ್ಲೆಗೆ ಮುಂದಾದ ಪಾಕ್ ವೇಗಿ

  • ಬಲೂನ್‌ಗಳಿಗೆ ಕಸ ಕಟ್ಟಿ ದಕ್ಷಿಣ ಕೊರಿಯಾಗೆ ರವಾನಿಸಿದ ಉತ್ತರ ಕೊರಿಯಾ!

    ಬಲೂನ್‌ಗಳಿಗೆ ಕಸ ಕಟ್ಟಿ ದಕ್ಷಿಣ ಕೊರಿಯಾಗೆ ರವಾನಿಸಿದ ಉತ್ತರ ಕೊರಿಯಾ!

    ಸಿಯೋಲ್: ಉತ್ತರ ಕೊರಿಯಾ (North Korea) ತನ್ನ ಕ್ಷಿಪಣಿ ಪರೀಕ್ಷೆಗಳಿಂದ ಆಗಾಗ್ಗೆ ಸುದ್ದಿಯಲ್ಲಿರುತ್ತದೆ. ಆದರೆ ಈ ಬಾರಿ ದಕ್ಷಿಣ ಕೊರಿಯಾಕ್ಕೆ ಕಿರುಕುಳ ನೀಡುವ ಉದ್ದೇಶದಿಂದ ಉತ್ತರ ಕೊರಿಯಾ ಹೊಲಸು ಹರಡಲು ಆರಂಭಿಸಿದೆ.

    ದಕ್ಷಿಣ ಕೊರಿಯಾದ‌ (South Korea) 8 ಪ್ರಾಂತ್ಯಗಳಲ್ಲಿ ಸುಮಾರು 260 ಬಲೂನ್‌ಗಳು ಪತ್ತೆಯಾಗಿವೆ. ರಾಜಧಾನಿ ಸಿಯೋಲ್ ಮತ್ತು ದೇಶದ ಆಗ್ನೇಯ ಪ್ರಾಂತ್ಯದ ಜಿಯೊಂಗ್‌ಸಾಂಗ್‌ನಲ್ಲಿಯೂ ಬಲೂನ್‌ಗಳು ಬಿದ್ದಿವೆ. ಈ ಬಲೂನ್‌ಗಳು ಸಂಪೂರ್ಣವಾಗಿ ಕೊಳಕಿನಿಂದ ತುಂಬಿವೆ. ಆದ್ದರಿಂದ ದಕ್ಷಿಣ ಕೊರಿಯಾದ ಅಧಿಕಾರಿಗಳು ಮನೆಯೊಳಗೆ ಇರುವಂತೆ ಜನರಿಗೆ ಸಲಹೆ ನೀಡಿದ್ದಾರೆ. ಅಲ್ಲದೇ ಬಲೂನ್‌ಗಳ ಹತ್ತಿರ ಹೋಗಬೇಡಿ ಹಾಗೂ ಅವುಗಳನ್ನು ಮುಟ್ಟಬೇಡಿ ಎಂಬುದಾಗಿ ಸೂಚನೆ ನೀಡಿದ್ದಾರೆ.

    ಸೇನೆಯಿಂದ ಎಚ್ಚರಿಕೆ: ಬಲೂನ್‌ಗಳೊಂದಿಗೆ (Balloon) ಬಂದಿರುವ ಕಸದಲ್ಲಿ ಪ್ಲಾಸ್ಟಿಕ್ ಬಾಟ್ಲಿಗಳು, ಹಾಳಾದ ಶೂಗಳ ಭಾಗಗಳು ಮತ್ತು ಮಣ್ಣು ಸೇರಿವೆ ಎಂದು ದಕ್ಷಿಣ ಕೊರಿಯಾದ ಮಿಲಿಟರಿಯ ಜಂಟಿ ಮುಖ್ಯಸ್ಥರು ತಿಳಿಸಿದ್ದಾರೆ. ಸೇನೆಯು ಪ್ರಸ್ತುತ ಈ ಬಲೂನ್‌ಗಳ ಬಗ್ಗೆ ತನಿಖೆ ನಡೆಸುತ್ತಿದೆ. ಉತ್ತರ ಕೊರಿಯಾದ ಈ ಕ್ರಮದಿಂದ ಅಂತಾರಾಷ್ಟ್ರೀಯ ಕಾನೂನುಗಳ ಉಲ್ಲಂಘನೆಯಾಗಿದೆ. ಇದೊಂದು ಬೆದರಿಕೆಯಾಗಿದ್ದು, ಇಂತಹ ಅಮಾನವೀಯ ಕ್ರಮಗಳನ್ನು ಕೂಡಲೇ ನಿಲ್ಲಿಸುವಂತೆ ದಕ್ಷಿಣ ಕೊರಿಯಾದ ಸೇನೆಯು ಉತ್ತರ ಕೊರಿಯಾಕ್ಕೆ ಎಚ್ಚರಿಕೆ ನೀಡಿದೆ.

    ವೀಡಿಯೋ, ಫೋಟೋಗಳು ವೈರಲ್:‌ ಬಲೂನ್‌ಗಳನ್ನು ಕಂಡ ದಕ್ಷಿಣ ಕೊರಿಯಾದ ಜನರು ಅದರ ವೀಡಿಯೋ ಹಾಗೂ ಫೋಟೋಗಳನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಸ್ಥಳೀಯ ಜನರ ಪ್ರಕಾರ, ಬಲೂನ್‌ಗಳನ್ನು ಊದಿ ನಂತ್ರ ದಾರದಿಂದ ಏನೋ ಕಟ್ಟಲಾಗಿತ್ತು.  ಅದರಲ್ಲಿ ಟಾಯ್ಲೆಟ್ ಪೇಪರ್, ಬ್ಯಾಟರಿ, ಕಸ ಮತ್ತಿತರ ವಸ್ತುಗಳು ಪತ್ತೆಯಾಗಿವೆ. ಇಂತಹ ವಸ್ತುಗಳು ಕಂಡುಬಂದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವಂತೆ ನಾಗರಿಕರಿಗೆ ತಿಳಿಸಲಾಗಿದೆ.