Tag: North India

  • ಉತ್ತರ ಭಾರತದ ವಿದ್ಯಾರ್ಥಿಗಳೊಂದಿಗೆ ನಮಗೆ ತಾರತಮ್ಯ ಮಾಡಿದ್ದಾರೆ – ತಮಿಳುನಾಡು ವಿದ್ಯಾರ್ಥಿಗಳು

    ಉತ್ತರ ಭಾರತದ ವಿದ್ಯಾರ್ಥಿಗಳೊಂದಿಗೆ ನಮಗೆ ತಾರತಮ್ಯ ಮಾಡಿದ್ದಾರೆ – ತಮಿಳುನಾಡು ವಿದ್ಯಾರ್ಥಿಗಳು

    ಚೆನ್ನೈ: ಉಕ್ರೇನ್‌ನಿಂದ ಭಾರತಕ್ಕೆ ಮರಳಿರುವ ತಮಿಳುನಾಡು ವಿದ್ಯಾರ್ಥಿಗಳ ಗುಂಪೊಂದು ಸ್ಥಳಾಂತರಕ್ಕೆ ನೇಮಿಸಿದ್ದ ಅಧಿಕಾರಿಗಳು ನಮ್ಮನ್ನು ಉತ್ತರ ಭಾರತದ ವಿದ್ಯಾರ್ಥಿಗಳೊಂದಿಗೆ ತಾರತಮ್ಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

    ಅಧಿಕಾರಿಗಳು ಉತ್ತರ ಭಾರತದ ವಿದ್ಯಾರ್ಥಿಗಳ ಮೇಲೆ ಹೆಚ್ಚು ಒಲವು ತೋರಿದ್ದಾರೆ. ಸ್ಥಳಾಂತರದ ಸಂದರ್ಭದಲ್ಲಿ ನಮ್ಮನ್ನು ಕಡೆಗಣಿಸಿದ್ದಾರೆ ಎಂದು ಕೆಲವು ದಕ್ಷಿಣ ಭಾರತ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಅಧಿಕಾರಿಗಳು ಉತ್ತರ ಭಾರತದ ವಿದ್ಯಾರ್ಥಿಗಳ ಪರವಾಗಿದ್ದು, ನಮ್ಮ ಹೆಸರನ್ನು ಸ್ಥಳಾಂತರದ ಪಟ್ಟಿಯಿಂದ ಅಳಿಸಿದ್ದಾರೆ. ಹಾಗೂ ಕೇರಳದ ವಿದ್ಯಾರ್ಥಿಗಳಿಗಾಗಿ ಏರ್ಪಾಡು ಮಾಡಲಾಗಿದ್ದ ವಿಮಾನವನ್ನೂ ರದ್ದು ಮಾಡಿ, ಬದಲಾಯಿಸಿದ್ದಾರೆ ಎಂದು ಕೆಲವು ವಿದ್ಯಾರ್ಥಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನ 202 ಶಾಲೆ, 34 ಆಸ್ಪತ್ರೆಯನ್ನು ಧ್ವಂಸಗೊಳಿಸಿದ ರಷ್ಯಾ ಸೇನೆ

    ತಮಿಳು ಮೂಲದ ವಿದ್ಯಾರ್ಥಿಯೊಬ್ಬ ನಾವು ವಿಮಾನಕ್ಕಾಗಿ 24-48 ಗಂಟೆಗಳ ಕಾಲ ಕಾದಿದ್ದೇವೆ. ಆದರೂ ಅಂದು ಬೆಳಗ್ಗೆ ಬಂದಿದ್ದ ಉತ್ತರ ಭಾರತದ ವಿದ್ಯಾರ್ಥಿಗಳಿಗೆ ಅಧಿಕಾರಿಗಳು ಮೊದಲ ಆದ್ಯತೆ ನೀಡಿದ್ದಾರೆ. ನಮ್ಮ ಹೆಸರನ್ನು ಅಳಿಸಿ ಆ ವಿದ್ಯಾರ್ಥಿಗಳ ಹೆಸರನ್ನು ನಮೂದಿಸಿದ್ದಾರೆ ಎಂದು ತಿಳಿಸಿದ್ದಾರೆ.

    ಇನ್ನೊಬ್ಬ ವಿದ್ಯಾರ್ಥಿ ನಮ್ಮನ್ನು ಸ್ಥಳಾಂತರಿಸುವ ಸಂದರ್ಭದಲ್ಲಿ ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದಿದ್ದರು. ನಾವು ಮಾರ್ಚ್ 1 ರಂದು ಗಡಿ ತಲುಪಿದ್ದೆವು. ಮಾರ್ಚ್ 2 ರಂದು ವಿಮಾನವನ್ನು ನಿಗದಿಪಡಿಸಬೇಕಿತ್ತು. ಆದರೆ ಅದು ಆಗಿರಲಿಲ್ಲ ಎಂದರು. ಇದನ್ನೂ ಓದಿ: ಮನ್ ಕಿ ಬಾತ್ ನಾರಿ ಶಕ್ತಿ ಸಂಭ್ರಮದ ವೀಡಿಯೋ ಶೇರ್ ಮಾಡಿದ ಮೋದಿ

    ಪೋಲೆಂಡ್‌ನಲ್ಲಿ ಕೇರಳದ 15 ವಿದ್ಯಾರ್ಥಿಗಳಿಗಾಗಿ ಒಂದು ವಿಮಾನ ನಿಗದಿಪಡಿಸಲಾಗಿತ್ತು. ಆದರೆ ಅವರು ಕೇರಳದ ವಿದ್ಯಾರ್ಥಿಗಳಿಗೆ ತಿಳಿಸದೇ ಆ ವಿಮಾನವನ್ನು ರದ್ದುಗೊಳಿಸಿದ್ದರು. ಬದಲಿಗೆ ಉತ್ತರ ಭಾರತದ ವಿದ್ಯಾರ್ಥಿಗಳನ್ನು ಆ ವಿಮಾನದಲ್ಲಿ ಕೂರಿಸಿದ್ದರು. ಇದರಿಂದ ಕೇರಳ ಮೂಲದ ವಿದ್ಯಾರ್ಥಿಗಳೂ ಆಕ್ರೋಶಗೊಂಡಿದ್ದರು ಎಂದಿದ್ದಾರೆ.

  • ಸುಳ್ಳು ವದಂತಿ ನಂಬಿ ಮಂಗ್ಳೂರು ರೈಲ್ವೇ ನಿಲ್ದಾಣಕ್ಕೆ ಬಂದ ಕಾರ್ಮಿಕರು

    ಸುಳ್ಳು ವದಂತಿ ನಂಬಿ ಮಂಗ್ಳೂರು ರೈಲ್ವೇ ನಿಲ್ದಾಣಕ್ಕೆ ಬಂದ ಕಾರ್ಮಿಕರು

    – ನಾವ್ ಊರಿಗೆ ಹೋಗ್ಬೇಕು: ವಲಸಿಗರಿಂದ ಪ್ರತಿಭಟನೆ

    ಮಂಗಳೂರು: ಮಂಗಳೂರಿನಿಂದ ಉತ್ತರ ಭಾರತ ರಾಜ್ಯಗಳಿಗೆ ರೈಲಿನ ವ್ಯವಸ್ಥೆ ಮಾಡಲಾಗಿದೆ ಅಂತ ವದಂತಿ ಹಬ್ಬಿ ಸಾವಿರಾರು ವಲಸೆ ಕಾರ್ಮಿಕರು ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣ ಬಳಿ ಗುಂಪು ಸೇರಿ, ಪ್ರತಿಭಟನೆ ನಡೆಸಿ ಆತಂಕ ಸೃಷ್ಟಿಸಿದ ಘಟನೆ ನಡೆಯಿತು.

    ಉತ್ತರ ಭಾರತದ ವಲಸೆ ಕಾರ್ಮಿಕರು ರೈಲು ಮೂಲಕ ತಮ್ಮನ್ನು ಊರಿಗೆ ಕಳುಹಿಸುತ್ತಾರೆ ಎಂಬ ವದಂತಿ ನಂಬಿ ಬೆಳಗ್ಗೆನಿಂದಲೇ ರೈಲು ನಿಲ್ದಾಣದಲ್ಲಿ ಸೇರಿದ್ದರು. ಆದರೆ ರೈಲೇ ಸಿಬ್ಬಂದಿ ಯಾವುದೇ ರೈಲ್ವೇ ವ್ಯವಸ್ಥೆ ಮಾಡಿಲ್ಲ ಎಂದು ಹೇಳಿ ಸೇರಿದ ವಲಸೆ ಕಾರ್ಮಿಕರನ್ನು ಅಲ್ಲಿಂದ ತೆರಳುವಂತೆ ಸೂಚಿಸಿದ್ದರು. ಆದರೆ ವಲಸೆ ಕಾರ್ಮಿಕರು ಮಾತ್ರ ಪಟ್ಟು ಬಿಡದೇ ರೈಲು ವ್ಯವಸ್ಥೆ ಕಲ್ಪಿಸುವಂತೆ ಪೋಸ್ಟರ್ ಹಿಡಿದು ಪ್ರತಿಭಟನೆ ನಡೆಸಿದರು.

    ಈ ವೇಳೆ ಸ್ಥಳದಿಂದ ಹೋಗುವಂತೆ ಪೊಲೀಸರು ಮನವೊಲಿಕೆಗೆ ಪ್ರಯತ್ನಪಟ್ಟರೂ ಕಾರ್ಮಿಕರು ಪೊಲೀಸರ ಮಾತನ್ನು ಕೇಳದೆ, ಉಪವಾಸವಿದ್ದರೂ ಪರವಾಗಿಲ್ಲ ನಾವು ಜಾಗ ಬಿಟ್ಟು ಕದಲಲ್ಲ ಎಂದು ಪಟ್ಟು ಹಿಡಿದು ಪ್ರತಿಭಟನೆ ಮುಂದುವರಿಸಿದರು. ಈ ವೇಳೆ ಪೊಲೀಸರ ಜೊತೆ ವಾಗ್ವಾದ ನಡೆಸಿ ಕೈ ಕೈ ಮಿಲಾಯಿಸುವ ಹಂತ ತಲುಪಿ ಕೆಲ ಹೊತ್ತು ಆತಂಕ ಸೃಷ್ಟಿಯಾಯಿತು.

    ನಂತರ ಸ್ಥಳಕ್ಕೆ ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್ ಭೇಟಿ ನೀಡಿ, ಮೂರು ದಿನದೊಳಗೆ ರೈಲಿನ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ಇದಕ್ಕೆ ಒಪ್ಪಿದ ಉತ್ತರ ಭಾರತದ ವಲಸೆ ಕಾರ್ಮಿಕರು ಪ್ರತಿಭಟನೆ ಹಿಂದಕ್ಕೆ ತೆಗೆದುಕೊಂಡರು. ನಂತರ ಜಿಲ್ಲಾಡಳಿತದ ವತಿಯಿಂದ ಕಾರ್ಮಿಕರು ಬಂದ ಸ್ಥಳಕ್ಕೆ ಮರಳಲು ಸ್ಥಳೀಯ ಬಸ್ಸಿನ ವ್ಯವಸ್ಥೆ ಮಾಡಿಕೊಡಲಾಯಿತು.

  • ಶಿಮ್ಲಾ, ಮಸ್ಸೂರಿಯನ್ನು ಮೀರಿಸುತ್ತಿದೆ ದೆಹಲಿ ಚಳಿ – ಮೈ ಕೊರೆಯುವ ಚಳಿಗೆ ಕಾರಣ ಏನು ಗೊತ್ತಾ?

    ಶಿಮ್ಲಾ, ಮಸ್ಸೂರಿಯನ್ನು ಮೀರಿಸುತ್ತಿದೆ ದೆಹಲಿ ಚಳಿ – ಮೈ ಕೊರೆಯುವ ಚಳಿಗೆ ಕಾರಣ ಏನು ಗೊತ್ತಾ?

    ನವದೆಹಲಿ: ದೆಹಲಿ ಅತಿಯಾದ ಬಿಸಿಲು ಮತ್ತು ದಟ್ಟ ವಾಯು ಮಾಲಿನ್ಯಕ್ಕೆ ಕುಖ್ಯಾತಿ ಪಡೆದುಕೊಂಡಿತ್ತು. ಆದರೆ ಈ ಬಾರಿ ರಣ ಬಿಸಿಲನ್ನು ಮೀರಿಸುವ ರೀತಿಯಲ್ಲಿ ಮೈ ಕೊರತೆಯುವ ಚಳಿ ಆರಂಭವಾಗಿದೆ. ಪ್ರತಿವರ್ಷ ಬಿಸಿಲಿನ ತಾಪ ತಾಳಲಾರದೆ ದೆಹಲಿಯ ಜನರು ಶಿಮ್ಲಾ, ಮನಾಲಿ, ಮಸ್ಸೂರಿಯಂತಹ ಪ್ರಖ್ಯಾತ ಗಿರಿಧಾಮಗಳಿಗೆ ಹೋಗಿ ರಿಲ್ಯಾಕ್ಸ್ ಮಾಡಿ ಬರುತ್ತಿದ್ದರು. ಆದರೆ ಈ ಬಾರಿ ದೆಹಲಿಯ ಕೆಲವು ಪ್ರದೇಶಗಳಲ್ಲಿ ಗಿರಿಧಾಮಗಳನ್ನೇ ಮೀರಿಸುವ ಕನಿಷ್ಠ ತಾಪಮಾನ ದಾಖಲಾಗಿದೆ.

    119 ವರ್ಷಗಳ ಬಳಿಕ ದೆಹಲಿ ಮತ್ತು ದೆಹಲಿಯ ಸುತ್ತಲಿನ ಪ್ರದೇಶದ ಕಠಿಣ ಡಿಸೆಂಬರ್ ಅನ್ನು ಎದುರಿಸುತ್ತಿದೆ. ದೆಹಲಿಯಲ್ಲಿ ಡಿಸೆಂಬರ್ 14ರ ಬಳಿಕ ದಿನದಿಂದ ದಿನಕ್ಕೆ ಕನಿಷ್ಠ ತಾಪಮಾನ ದಾಖಲಾಗುತ್ತಿದ್ದು, ತೀವ್ರ ಚಳಿಗೆ ಜನರು ಕಂಗೆಟ್ಟು ಹೋಗಿದ್ದಾರೆ. ಈಗ ಚಳಿಯಿಂದ ರಕ್ಷಿಸಿಕೊಳ್ಳಲು ದೆಹಲಿಯಿಂದ ಹೊರಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

    ಕಳೆದ ಎರಡು ದಿನಗಳಿಂದ ಪ್ರಖ್ಯಾತ ಗಿರಿಧಾಮ ಉತ್ತರಾಖಂಡದ ಮುಸ್ಸೂರಿಯಲ್ಲಿ, ಹಗಲು ಮತ್ತು ರಾತ್ರಿ ಸಮಯದಲ್ಲಿ ಗರಿಷ್ಠ ತಾಪಮಾನವು 14 ಡಿಗ್ರಿ ಸೆಲ್ಸಿಯಸ್‍ಗಿಂತ ಹೆಚ್ಚಾಗಿದೆ. ಈ ಎರಡೂ ದಿನಗಳಲ್ಲಿ, ರಾಜಧಾನಿ ದೆಹಲಿಯಲ್ಲಿ ಮಸ್ಸೂರಿಗಿಂತ ಕಡಿಮೆ ಉಷ್ಣಾಂಶ ದಾಖಲಾಗಿದೆ. ಭಾರತೀಯ ಹವಾಮಾನ ಕೇಂದ್ರಗಳು ಕಡಿಮೆ ತಾಪಮಾನದ ಶಿಖರಗಳನ್ನು ನೋಂದಾಯಿಸಿದ್ದು ಶನಿವಾರ ಮತ್ತು ಭಾನುವಾರ ದೆಹಲಿಯ ಬಹುತೇಕ ಎಲ್ಲಾ ತಾಪಮಾನವು 14 ಡಿಗ್ರಿ ಸೆಲ್ಸಿಯಸ್‍ಗಿಂತ ಕಡಿಮೆಯಾಗಿದೆ. ಇದನ್ನು ಓದಿ: ದೆಹಲಿಯಲ್ಲಿ ವಿಪರೀತ ಚಳಿ – ಪ್ರಯಾಣಿಕರ ಮನಗೆದ್ದಿತು ಆಟೋ ಚಾಲಕನ ಸಿಂಪಲ್ ಐಡಿಯಾ

    ಭಾನುವಾರ ಹಗಲು ದೆಹಲಿಯ ಜಾಫರ್ಪುರ್ ನಲ್ಲಿ 11.6 ಡಿಗ್ರಿ ಸೆಲ್ಸಿಯಸ್, ಮುಂಗೇಶ್ಪುರ 11.9 ಡಿಗ್ರಿ ಸೆಲ್ಸಿಯಸ್ , ಪಾಲಂ 13.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ. ಶನಿವಾರ ರಾತ್ರಿ 2 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದೆ. ಭಾನುವಾರ ಕನಿಷ್ಠ 2.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ. ಶಿಮ್ಲಾ ಮತ್ತು ಮಸ್ಸೂರಿ ಗಿರಿಧಾಮಗಳಿಗೆ ಹೋಲಿಸಿಕೊಂಡರೆ ದೆಹಲಿ ಅತ್ಯಂತ ತಂಪಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಕಾರಣ ಏನು?
    ದೆಹಲಿಯಲ್ಲಿ ತೀವ್ರ ಚಳಿಗೆ ಹಲವು ಕಾರಣಗಳಿವೆ ಪ್ರಮುಖವಾಗಿ ಕಳೆದ ಹದಿನೈದು ದಿನಗಳಿಂದ ಉತ್ತರದ ಬಯಲು ಪ್ರದೇಶಗಳು ಬೆಳಗ್ಗೆ ಹೊತ್ತು ಮಂಜಿನ ಹೊದಿಕೆ ಹೊದ್ದಿವೆ. ಉತ್ತರ ಭಾರತದ ಬಹುತೇಕ ರಾಜ್ಯಗಳು ಮತ್ತು ಪೂರ್ವ ಪಾಕಿಸ್ತಾನ ತೀವ್ರ ಮಂಜಿನಿಂದ ಕೂಡಿದ್ದು ಮೋಡದ ಹೊದಿಕೆ ಹೊದ್ದಂತೆ ಭಾಸವಾಗಿದೆ. ಹೀಗೆ ನಿರ್ಮಾಣವಾಗಿರುವ ದಟ್ಟ ಮಂಜು ಸೂರ್ಯನ ಬೆಳಕು ಭೂಮಿಗೆ ತಾಗದಂತೆ ಮಾಡಿದೆ. ಈ ಮಂಜು ಅಥವಾ ಮೋಡದ ಹೊದಿಕೆ ಸಾಮಾನ್ಯವಾಗಿ ನೆಲದಿಂದ ಕೆಲವೇ ನೂರು ಮೀಟರ್ ಎತ್ತರದಲ್ಲಿದ್ದು ತೀವ್ರ ಚಳಿಗೆ ಕಾರಣ ಎನ್ನಲಾಗಿದೆ. 1,600-2,000 ಮೀಟರ್ ಎತ್ತರದಲ್ಲಿರುವ ಗಿರಿಧಾಮಗಳಲ್ಲಿ ಈ ರೀತಿ ಮೋಡಗಳು ಆವರಿಸುವುದು ತುಂಬಾ ಕಡಿಮೆ. ಇದಲ್ಲದೆ ಕಳೆದ ಕೆಲವು ದಿನಗಳಿಂದ ಗಿರಿಧಾಮಗಳಲ್ಲಿ ಮಳೆಯಾಗಿಲ್ಲ. ಇದರ ಅರ್ಥ ಶಿಮ್ಲಾ ಅಥವಾ ಮಸ್ಸೂರಿಯಲ್ಲಿ ಬೆಳಿಗ್ಗೆ ಮಂಜು ಇದ್ದರೂ, ಸೂರ್ಯನ ಬೆಳಕು ಭೂಮಿಯನ್ನು ತಲುಪುತ್ತಿದೆ. ಹೀಗಾಗಿ ಶಿಮ್ಲಾ ಮತ್ತು ಮಸ್ಸೂರಿ ತೀವ್ರ ಚಳಿ ಇಲ್ಲ ಎಂದು ಐಎಮ್‍ಡಿಯ ಪ್ರಾದೇಶಿಕ ಹವಾಮಾನ ಮುನ್ಸೂಚನೆ ಕೇಂದ್ರದ ಮುಖ್ಯಸ್ಥ ಕುಲದೀಪ್ ಶ್ರೀವಾಸ್ತವ ಹೇಳಿದ್ದಾರೆ. ವಾರಾಂತ್ಯದಲ್ಲಿ ಶಿಮ್ಲಾ ಮತ್ತು ಮಸ್ಸೂರಿ ಎರಡರಲ್ಲೂ ದಿನದ ತಾಪಮಾನವು ಸಾಮಾನ್ಯಕ್ಕಿಂತ ಮೂರರಿಂದ ನಾಲ್ಕು ಡಿಗ್ರಿಗಳಷ್ಟಿದೆ. ಇದನ್ನು ಓದಿ: ದೆಹಲಿಯಲ್ಲಿ ದಟ್ಟ ಮಂಜು – ಹೆದ್ದಾರಿ ಕಾಣದೆ ಕಾಲುವೆಗೆ ಬಿತ್ತು ಕಾರು

    ಉತ್ತರ ಭಾರತದ ಪ್ರದೇಶಗಳಲ್ಲಿ ಸದ್ಯ ಪೂರ್ವದ ಶೀತಗಾಳಿ ಬೀಸುತ್ತಿದ್ದು ದೆಹಲಿ ಸೇರಿ ಹಲವಡೆ ದಟ್ಟ ಮಂಜು ಕವಿದುಕೊಳ್ಳಲು ಮತ್ತೊಂದು ಕಾರಣ ಎನ್ನಲಾಗಿದೆ. ಇದೇ ವೇಳೆ ಹಿಮಾಲಯ ಭಾಗದಲ್ಲಿ ನಿರಂತರ ಹಿಮಪಾತ ಆಗುತ್ತಿದ್ದು, ಈಶಾನ್ಯ ಮಾರುತಗಳ ಉತ್ತರದ ಕಡೆ ಬೀಸುತ್ತಿದೆ. ಈ ಎರಡರ ಪರಿಣಾಮದಿಂದ ದೆಹಲಿಯಲ್ಲಿ ದಟ್ಟ ಮಂಜು ಮತ್ತು ತೀವ್ರ ಕೊರತೆಯುವ ಚಳಿಗೆ ಕಾರಣ ಎಂದು ಹವಾಮಾನ ಇಲಾಖೆ ಹೇಳಿದೆ. ಸೋಮವಾರ ಬಳಿಕ ಈ ಮಾರುತಗಳು ದಿಕ್ಕು ಬದಲಿಸುವ ಸಾಧ್ಯ ಇದ್ದು ದೆಹಲಿಯಲ್ಲಿ ತಾಪಮಾನ ಗರಿಷ್ಠಕ್ಕೆ ಏರುವ ಸಾಧ್ಯತೆ ಇದೆ ಎನ್ನಲಾಗಿದೆ.

  • ಉತ್ತರ ಭಾರತದಲ್ಲಿ ವಿದ್ಯಾಪೀಠದ ಕನಸು ನನಸಾಗುವ ವೇಳೆಗೆ ಕೃಷ್ಣೈಕ್ಯ

    ಉತ್ತರ ಭಾರತದಲ್ಲಿ ವಿದ್ಯಾಪೀಠದ ಕನಸು ನನಸಾಗುವ ವೇಳೆಗೆ ಕೃಷ್ಣೈಕ್ಯ

    ನವದೆಹಲಿ: ಬೆಂಗಳೂರಿನ ವಿದ್ಯಾಪೀಠ ಮಠದಲ್ಲಿ ಅಂತ್ಯಕ್ರಿಯೆ ಆಗಬೇಕು ಎನ್ನುವುದು ಪೇಜಾವರ ಶ್ರೀಗಳ ಕೊನೆಯ ಆಶಯವಾಗಿತ್ತು. ಅದರಂತೆ ಉತ್ತರ ಭಾರತದಲ್ಲೂ ಒಂದು ವಿದ್ಯಾಪೀಠ ಆರಂಭಿಸಬೇಕು ಎನ್ನುವುದು ಅವರ ಮತ್ತೊಂದು ಕನಸಾಗಿತ್ತು.

    ಶ್ರೀಗಳ ಕನಸಿನಂತೆ ದೆಹಲಿಯ ವಸಂತ್ ಕುಂಜ್‍ನಲ್ಲಿರುವ ಶ್ರೀಕೃಷ್ಣ ಮಠದಲ್ಲಿ ವಿದ್ಯಾಪೀಠ ಆರಂಭವಾಗುತ್ತಿದೆ. ಆದರೆ ಅದನ್ನು ನೋಡಲು ಶ್ರೀಗಳಿಲ್ಲ ಎನ್ನುವುದು ಬೇಸರದ ಸಂಗತಿ. ಇದನ್ನೂ ಓದಿ: ವಿಶ್ವಸಂತ ಪೇಜಾವರ ಶ್ರೀಗಳು ಕೃಷ್ಣೈಕ್ಯ – ಬೆಂಗಳೂರಿನ ವಿದ್ಯಾಪೀಠದಲ್ಲಿ ವೃಂದಾವನಸ್ಥ

    ಕಳೆದ ಮೂರು ತಿಂಗಳಿಂದ ಇಲ್ಲಿರುವ ಮಠದಲ್ಲಿ ವಿದ್ಯಾಪೀಠ ಆರಂಭಿಸುವ ಪ್ರಕ್ರಿಯೆಗಳು ಆರಂಭವಾಗಿದೆ. ಕನ್ನಡ, ಸಂಸ್ಕೃತ ಮತ್ತು ಹಿಂದಿಯಲ್ಲಿ ಇಲ್ಲಿ ವೇದ ಉಪನಿಷತ್ತು, ಪುರಾಣಗಳನ್ನು ಭೋಧಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ದಕ್ಷಿಣ ಭಾರತಕ್ಕಾಗಿ ಬೆಂಗಳೂರಿನಲ್ಲಿ ವಿದ್ಯಾಪೀಠ ನಿರ್ಮಿಸಿದ್ದು ವೇದ ಉಪನಿಷತ್ತು ಕಲಿಯುವ ಮಕ್ಕಳಿಗೆ ಅನುಕೂಲವಾಗಿದೆ. ಅದರಂತೆ ಉತ್ತರ ಭಾರತದ ಮಕ್ಕಳಿಗೂ ಅನುಕೂಲವಾಗುವಂತೆ ದೆಹಲಿಯಲ್ಲಿ ವಿದ್ಯಾಪೀಠ ಆರಂಭಿಸಬೇಕೆಂದು ಮಠದ ಸಿಬ್ಬಂದಿ ಬಳಿ ಶ್ರೀಗಳು ಹೇಳಿಕೊಂಡಿದ್ದರಂತೆ.

    ಶ್ರೀಗಳ ಕನಸಿನಂತೆ ದೆಹಲಿಯ ಶ್ರೀಕೃಷ್ಣ ಮಠದಲ್ಲಿ ವಿದ್ಯಾಪೀಠ ಆರಂಭವಾಗುತ್ತಿದ್ದು, ಆರಂಭಿಕವಾಗಿ ಅಯೋಧ್ಯೆಯಿಂದ ಆರು ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದಾರೆ. ಡಿಸೆಂಬರ್ 5 ಕ್ಕೆ ಮಠಕ್ಕೆ ಬಂದಿದ್ದ ಶ್ರೀಗಳು ಸಭೆ ನಡೆಸಿ ಎಲ್ಲ ಕೆಲಸಗಳನ್ನು ನೋಡಿಕೊಂಡು ಹೋಗಿದ್ದರು. ಆದರೆ ವಿದ್ಯಾಪೀಠ ಪೂರ್ಣ ಆಗುವ ಮೊದಲು ಶ್ರೀಗಳು ನಿಧನವಾಗಿದ್ದು ಮಠದ ಭಕ್ತರಲ್ಲಿ ಬೇಸರ ತಂದಿದೆ.

  • ಪೌರತ್ವ ಕಿಚ್ಚಿನಲ್ಲಿ ಉತ್ತರ ಭಾರತ ಧಗಧಗ- ಹಿಂಸೆಗೆ ತಿರುಗಿದ ಪ್ರತಿಭಟನೆ

    ಪೌರತ್ವ ಕಿಚ್ಚಿನಲ್ಲಿ ಉತ್ತರ ಭಾರತ ಧಗಧಗ- ಹಿಂಸೆಗೆ ತಿರುಗಿದ ಪ್ರತಿಭಟನೆ

    – ಬಿಜ್ನೋರ್, ಕಾನ್ಪುರ, ಸಂಬಲ್‍ನಲ್ಲಿ ಆರು ಮಂದಿ ಬಲಿ

    ನವದೆಹಲಿ: ಉತ್ತರ ಭಾರತ ಪೌರತ್ವ ಕಾಯ್ದೆ ವಿರೋಧಿ ಕಿಚ್ಚಿನಲ್ಲಿ ಬೇಯುತ್ತಿದೆ. ಪೊಲೀಸರು ಎಷ್ಟೇ ಪ್ರಯತ್ನ ಪಟ್ಟರೂ ಹಿಂಸಾಚಾರ ತಹಬದಿಗೆ ಬರುತ್ತಿಲ್ಲ.

    ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ನಗರದಿಂದ ನಗರಕ್ಕೆ ಕಾಳ್ಗಿಚ್ಚಿನಂತೆ ಹರಡುತ್ತಿದೆ. ಸಿಎಂ ಯೋಗಿ ಆದಿತ್ಯನಾಥ್ ಅವರ ತವರು ಗೋರಖ್‍ಪುರ್, ಬುಲಂದ್ ಶಹರ್, ಫಿರೋಜಾಬಾದ್, ಭೈರುಚ್, ಕಾನ್ಪುರ್, ಮೀರಟ್, ಹಾಪುರ್ ಧಗಧಗಿಸಿವೆ. ಫಿರೋಜಾಬಾದ್‍ನಲ್ಲಿ ಗೋಲಿಬಾರ್ ನಡೆದು ಒಬ್ಬರು ಬಲಿ ಆಗಿದ್ದಾರೆ. ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆಗಳು ನಡೆದಿವೆ.

    ಪೊಲೀಸರ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಿದರೆ, ಪ್ರತಿಯಾಗಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ, ಅಶ್ರುವಾಯು ಸಿಡಿಸಿ, ಲಾಠಿ ಚಾರ್ಜ್ ಮಾಡಿದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಲೇ ಇಲ್ಲ. ಗೋರಖ್‍ಪುರದಲ್ಲಿ ಪ್ರತಿಭಟನಾಕಾರರನ್ನು ಸಿಕ್ಕಸಿಕ್ಕಂಗೆ ಲಾಠಿ ಚಾರ್ಜ್ ಮಾಡಿದ್ದಾರೆ. ಎಲ್ಲಾ ಕಡೆ ಪೊಲೀಸ್ ವಾಹನಗಳು ಮತ್ತು ರಸ್ತೆ ಬದಿ ನಿಲ್ಲಿಸಲಾಗಿದ್ದ ವಾಹನಗಳು ಧಗಧಗಿಸಿವೆ.

    ಉತ್ತರ ಪ್ರದೇಶದಾದ್ಯಂತ ಇಂಟರ್‍ನೆಟ್ ಸೇವೆ ಬಂದ್ ಮಾಡಲಾಗಿದೆ. ಕಾನ್ಪುರದಲ್ಲಿ ಗುಂಡೇಟು ತಗಲಿರುವ 8 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಆದರೂ ಪ್ರತಿಭಟನೆ, ಹಿಂಸೆ ಮಾತ್ರ ವಿಪರೀತ ವೇಗದಲ್ಲಿ ಹರಡುತ್ತಿದೆ. ಆದರೆ ಈಶಾನ್ಯದಲ್ಲಿ ಪ್ರತಿಭಟನೆಗಳು ನಿಯಂತ್ರಣಕ್ಕೆ ಬರುತ್ತಿವೆ. ಹೀಗಾಗಿ ಅಸ್ಸಾಂನಲ್ಲಿ ಇಂಟರ್‍ನೆಟ್ ಸೇವೆ ಮತ್ತೆ ಆರಂಭಿಸಲಾಗಿದೆ.

    ಶುಕ್ರವಾರ ಸಂಜೆಯವರೆಗೂ ಶಾಂತವಾಗಿದ್ದ ನವದೆಹಲಿ ಕತ್ತಲಾಗ್ತಾ ಇದ್ದಂತೆ ಧಗಧಗಿಸಿದೆ. ದರಿಯಾಗಂಜ್‍ನಲ್ಲಿ ಪ್ರತಿಭಟನೆ ಹಿಂಸಾರೂಪ ತಾಳಿಗೆ. ಉದ್ರಿಕ್ತರು ಕಲ್ಲು ತೂರಾಟ ನಡೆಸಿ, ಹತ್ತಾರು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಶ್ರಮಿಸುತ್ತಿದ್ದಾರೆ. ಜಲಫಿರಂಗಿ ಪ್ರಯೋಗಿಸಿ ಪ್ರತಿಭಟನಾಕಾರರನ್ನು ಚದುರಿಸುವ ಯತ್ನ ಮಾಡಿದ್ದಾರೆ. ಮಧ್ಯಾಹ್ನದಿಂದ ಜಂತರ್‍ಮಂತರ್‍ಗೆ ರ್ಯಾಲಿ ನಡೆಸಸಲು ಜಾಮಾ ಮಸೀದಿಯಲ್ಲಿ ಸಾವಿರಾರು ಮಂದಿ ಕಾದು ನಿಂತಿದ್ದರು. ಸಂಜೆ ಆದ ಕೂಡಲೇ ಪೊಲೀಸರ ಭದ್ರತೆ ಬೇಧಿಸಿ ರ್ಯಾಲಿ ಹೊರಟರು. ಆದರೆ ದರಿಯಾಗಂಜ್ ಬಳಿ ಬರುತ್ತಿದ್ದಂತೆ ಹಿಂಸೆ ಭುಗಿಲೆದ್ದಿತ್ತು.

    ಇದಕ್ಕೂ ಮುನ್ನ, ಜಾಮಾ ಮಸೀದಿಯ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಸೇರಿ ಹಲವರನ್ನು ಪೊಲೀಸರು ಬಂಧಿಸಿದರು. ಆದರೆ ನಾಟಕೀಯ ಬೆಳವಣಿಗೆಯಲ್ಲಿ ಚಂದ್ರಶೇಖರ್ ಆಜಾದ್ ಪೊಲೀಸರಿಂದ ತಪ್ಪಿಸಿಕೊಂಡು ಮತ್ತೆ ಪ್ರತಿಭಟನಾಕಾರರನ್ನು ಸೇರಿಕೊಂಡರು. ಅತ್ತ ಗೃಹ ಸಚಿವ ಅಮಿತ್ ಶಾ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಶರ್ಮಿಷ್ಠಾ ಮುಖರ್ಜಿ ಸೇರಿ ಹಲವರನ್ನು ಪೊಲೀಸರು ಬಂಧಿಸಿದರು.

  • ದೆಹಲಿ, ಜಮ್ಮು ಕಾಶ್ಮೀರದಲ್ಲಿ ಭೂಕಂಪ

    ದೆಹಲಿ, ಜಮ್ಮು ಕಾಶ್ಮೀರದಲ್ಲಿ ಭೂಕಂಪ

    ನವದೆಹಲಿ: ದೆಹಲಿ, ಪಂಜಾಬ್, ಜಮ್ಮುಕಾಶ್ಮೀರ ಸೇರಿದಂತೆ ಉತ್ತರ ಭಾರತದ ಹಲವೆಡೆ 6.1 ತೀವ್ರತೆಯ ಭೂಕಂಪ ಸಂಭವಿಸಿದೆ.

    ಸಂಜೆ 4:30ರ ಆಸುಪಾಸಿನಲ್ಲಿ ಭಾರತ ಪಾಕಿಸ್ತಾನದ ಗಡಿ ಭಾಗದಲ್ಲಿ ಭೂಕಂಪ ಸಂಭವಿಸಿದ್ದು, ಜನರ ಭಯದಿಂದ ಮನೆ, ಕಚೇರಿಯಿಂದ ಹೊರ ಬಂದಿದ್ದಾರೆ. ಪಾಕಿಸ್ತಾನದ ರಾವಲ್ಪಿಂಡಿಯಿಂದ 80 ಕಿ.ಮೀ ದೂರದಲ್ಲಿ ಭೂಕಂಪದ ಕೇಂದ್ರ ಬಿಂದು ಪತ್ತೆಯಾಗಿದೆ.

    ಇಸ್ಲಾಮಾಬಾದ್, ರಾವಲ್ಪಿಂಡಿ, ಸಿಯಾಲ್‍ಕೋಟ್, ಮುಲ್ತಾನ್ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಕಂಪನದ ಅನುಭವವಾಗಿದೆ.

  • ದೇಶದಲ್ಲಿ ವಿಫುಲ ಉದ್ಯೋಗಾವಕಾಶ ಇದ್ದರೂ ಆಕಾಂಕ್ಷಿಗಳಲ್ಲಿ ಕೌಶಲ್ಯದ ಕೊರತೆಯಿದೆ: ಕೇಂದ್ರ ಸಚಿವ

    ದೇಶದಲ್ಲಿ ವಿಫುಲ ಉದ್ಯೋಗಾವಕಾಶ ಇದ್ದರೂ ಆಕಾಂಕ್ಷಿಗಳಲ್ಲಿ ಕೌಶಲ್ಯದ ಕೊರತೆಯಿದೆ: ಕೇಂದ್ರ ಸಚಿವ

    ಲಕ್ನೋ: ದೇಶದಲ್ಲಿ ವಿಫುಲ ಉದ್ಯೋಗಾವಕಾಶಗಳಿವೆ. ಆದರೆ ಆಕಾಂಕ್ಷಿಗಳಲ್ಲಿ ಕೌಶಲ್ಯ ಮತ್ತು ಸಾಮರ್ಥ್ಯದ ಕೊರತೆ ಕಾಣುತ್ತಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಕೆ. ಗಂಗ್ವಾರ್ ಹೇಳಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಸರ್ಕಾರ 100 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಬರೇಲಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಕೇಂದ್ರ ಸಚಿವರು, ದೇಶದಲ್ಲಿ ಆರ್ಥಿಕ ಹಿಂಜರಿತದ ಭಯವಿದ್ದರೂ ನಿರುದ್ಯೋಗದ ಸಮಸ್ಯೆಯಿಲ್ಲ. ದೇಶದ ವಿವಿಧ ವಿಭಾಗಗಳಲ್ಲಿ ಅನೇಕ ಉದ್ಯೋಗಾವಕಾಶಗಳಿವೆ. ಆದರೆ ಆಕಾಂಕ್ಷಿಗಳ ಕೌಶಲ್ಯದ ಕೊರತೆಯಿಂದಾಗಿ ಉದ್ಯೋಗಗಳು ದೊರಕುತ್ತಿಲ್ಲ ಎಂದು ತಿಳಿಸಿದ್ದಾರೆ.

    ನಾನು ಕಾರ್ಮಿಕ ಸಚಿವಾಲಯದ ಜವಾಬ್ದಾರಿ ಹೊಂದಿದ್ದೇನೆ. ಇಲ್ಲಿನ ಪರಿಸ್ಥಿತಿಯನ್ನು ಪ್ರತಿದಿನವೂ ವಿಚಾರಿಸುತ್ತೇನೆ. ನನಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ದೇಶದಲ್ಲಿ ಉದ್ಯೋಗದ ಕೊರತೆಯಿಲ್ಲ. ಒಂದು ಉದ್ದೇಶಕ್ಕಾಗಿ ಉದ್ಯೋಗ ವಿನಿಮಯ ಮಾಡುತ್ತೇವೆ ಹಾಗೂ ಪ್ರತ್ಯೇಕ ವ್ಯವಸ್ಥೆಯನ್ನು ಸಹ ಅಭಿವೃದ್ಧಿಪಡಿಸಿದ್ದೇವೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.

    ಕೇಂದ್ರ ಸಚಿವ ಸಂತೋಷ್ ಗಂಗ್ವಾರ್ ಅವರ ಹೇಳಿಕೆ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿದೆ. ಉತ್ತರ ಪ್ರದೇಶದ ಪೂರ್ವ ಕಾಂಗ್ರೆಸ್ ಉಸ್ತುವಾರಿ ಪ್ರಿಯಾಂಕ ಗಾಂಧಿ, ಮಂತ್ರಿಗಳೇ ನಿಮ್ಮದೇ ಸರ್ಕಾರ ಕಳೆದ 5 ವರ್ಷಗಳಿಂದ ಅಧಿಕಾರದಲ್ಲಿದ್ದರೂ ಉದ್ಯೋಗಗಳನ್ನು ಸೃಷ್ಟಿಸಿಲ್ಲ. ಸರ್ಕಾರದ ನೀತಿಗಳಿಂದ ಆರ್ಥಿಕ ಬೆಳವಣಿಗೆ ಮಂದಗತಿಯಲ್ಲಿ ಸಾಗುತ್ತಿದ್ದು, ಇದ್ದ ಉದ್ಯೋಗಗಳೂ ಕಣ್ಮರೆಯಾಗುತ್ತಿವೆ. ಸರ್ಕಾರ ಏನಾದರೂ ಉತ್ತಮವಾದದ್ದು ಮಾಡುತ್ತದೆ ಎಂದು ಯುವಜನತೆ ಭರವಸೆಯಿಂದ ಕಾಯುತ್ತಿದ್ದಾರೆ. ಉತ್ತರ ಭಾರತೀಯರನ್ನು ಹೀಯಾಳಿಸಿ ನೀವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಟ್ವಿಟ್ ಮಾಡಿ ಕಿಡಿಕಾರಿದ್ದಾರೆ.

  • ಉತ್ತರ ಭಾರತದ ಎಂಟು ರಾಜ್ಯಗಳಲ್ಲಿ ಬಿಸಿ ಬಿರುಗಾಳಿ ಸಹಿತ ಮಳೆ – 41 ಸಾವು

    ಉತ್ತರ ಭಾರತದ ಎಂಟು ರಾಜ್ಯಗಳಲ್ಲಿ ಬಿಸಿ ಬಿರುಗಾಳಿ ಸಹಿತ ಮಳೆ – 41 ಸಾವು

    ನವದೆಹಲಿ: ಮಂಗಳವಾರ ಉತ್ತರ ಭಾರತದ ಎಂಟು ರಾಜ್ಯಗಳಲ್ಲಿ ಹವಾಮಾನ ಬದಲಾಗಿದ್ದು, ಬಿರುಗಾಳಿಗೆ 41 ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಜಾರ್ಖಂಡ್, ಹಿಮಾಚಲ ಪ್ರದೇಶ, ಹರಿಯಾಣ ಮತ್ತು ನವದೆಹಲಿಯಲ್ಲಿ ಬಿರುಗಾಳಿ ಜೊತೆ ಮಳೆರಾಯ ಅಬ್ಬರಿಸಿದ್ದಾನೆ. ಬುಧವಾರ ಮತ್ತು ಗುರುವಾರ ಸಹ ಇದೇ ರೀತಿ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಮಾಧ್ಯಮಗಳ ಜೊತೆ ಮಾತನಾಡಿರುವ ಭಾರತೀಯ ಹವಾಮಾನ ವಿಭಾಗದ ನಿರ್ದೇಶಕ ಕೆ.ಜೆ.ರಮೇಶ್, ಕಳೆದ ಮೂರ್ನಾಲ್ಕು ದಿನಗಳಿಂದ ಪಾಕಿಸ್ತಾನದಿಂದ ಭಾರತದ ಪಶ್ಚಿಮ ಭಾಗ ಮಾರ್ಗವಾಗಿ ಬಿಸಿ ಗಾಳಿ ಬೀಸುತ್ತಿದೆ. ಇದು ಭಾರತದ ಮಧ್ಯಭಾಗದಿಂದ ಪಶ್ಚಿಮ ಬಂಗಾಳದ ಉತ್ತರ ಭಾಗದವರೆಗೂ ಬಿಸಿ ಗಾಳಿ ಬೀಸುವ ಸಾಧ್ಯತೆಗಳಿವೆ. ಗುಡುಗು, ಸಿಡಿಲು ಸಹಿತ ಬುಧವಾರ ಮತ್ತು ಗುರುವಾರ ಮಳೆ ಆಗಲಿದೆ. ಬಿಸಿಗಾಳಿ ಜೊತೆಯಲ್ಲಿಯೇ ಮಳೆ ಆಗಲಿದೆ ಎಂದು ತಿಳಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಕೂಡಲೇ ರಕ್ಷಣಾ ಕಾರ್ಯಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ ಅಡಿಯಲ್ಲಿ ಮೃತರ ಕುಟುಂಬಸ್ಥರಿಗೆ 2 ಲಕ್ಷ ರೂ. ಮತ್ತು ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರವನ್ನು ನೀಡಬೇಕೆಂದು ಆದೇಶಿಸಿದ್ದಾರೆ.

    ರಾಜಸ್ಥಾನ 11, ಮಧ್ಯ ಪ್ರದೇಶ 16, ರಾಜಸ್ಥಾನ 7, ಪಂಜಾಬ್ 2, ಹರಿಯಾಣ 01 ಮತ್ತು ಜಾರ್ಖಂಡ್, ಮಹಾರಾಷ್ಟ್ರ, ಉತ್ತರ ಪ್ರದೇಶ, ಹಿಮಾಚಲದಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.