Tag: No Bill

  • ಬೆಂಗಳೂರಿನಲ್ಲೊಂದು ನೋ ಬಿಲ್ ಹೋಟೆಲ್ – ಹೊಟ್ಟೆತುಂಬಾ ತಿನ್ನಿ, ಇಷ್ಟ ಆದರೆ ಹುಂಡಿಗೆ ಹಣ ಹಾಕಿ

    ಬೆಂಗಳೂರಿನಲ್ಲೊಂದು ನೋ ಬಿಲ್ ಹೋಟೆಲ್ – ಹೊಟ್ಟೆತುಂಬಾ ತಿನ್ನಿ, ಇಷ್ಟ ಆದರೆ ಹುಂಡಿಗೆ ಹಣ ಹಾಕಿ

    ಬೆಂಗಳೂರು: ಇಂದಿನ ದುಬಾರಿ ದುನಿಯಾದಲ್ಲಿ ದುಡ್ಡಿಲ್ಲದೆ ಊಟ ಸಿಗುವುದಿಲ್ಲ. ಅದರಲ್ಲೂ ಹೋಟೆಲ್ (Hotel) ಊಟದ ದರ ದುಬಾರಿಯಾಗಿದೆ. ಇದರ ನಡುವೆ ಬೆಂಗಳೂರಿನಲ್ಲಿ (Bengaluru) ನೋ ಬಿಲ್ (No Bill) ಹೋಟೆಲ್‌ವೊಂದು ಆರಂಭವಾಗಿದೆ.

    ಬೆಂಗಳೂರಿನಲ್ಲಿ ಸಾವಿರಾರು ಮಂದಿ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಾರೆ. ಅನ್ನದಾನ ಶ್ರೇಷ್ಠದಾನ ಎನ್ನುವಂತೆ ಅನೇಕ ಜನ ನಾನಾ ರೀತಿಯಲ್ಲಿ ಹೊಟ್ಟೆ ತುಂಬಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಬೆಂಗಳೂರಿನ ನಾಗರಬಾವಿಯಲ್ಲಿ (Nagar Bavi) ವಿಶಿಷ್ಟ ಹೋಟೆಲ್‌ವೊಂದನ್ನು ತೆರೆಯಲಾಗಿದ್ದು, ಇಲ್ಲಿ ಹೊಟ್ಟೆತುಂಬಾ ಊಟ ಮಾಡಿದರೂ ಬಿಲ್ ಪಾವತಿಸುವ ಅಗತ್ಯವಿಲ್ಲ.‌ ಇದನ್ನೂ ಓದಿ: ಹೆಂಡತಿ ಹೆಸರಿನಲ್ಲಿ ಬಿಜೆಪಿ ರಾಜಕಾರಣ ಮಾಡಲ್ಲ: ಕಟೀಲ್

    ನಾಗರಬಾವಿಯ 11ನೇ ಬ್ಲಾಕ್, ಎರಡನೇ ಹಂತದಲ್ಲಿರುವ ‘ನಮ್ಮನೆ ಊಟ’ ಪಕ್ಕದಲ್ಲಿ ‘ಅನ್ನಪೂರ್ಣೇಶ್ವರಿ ಹೋಟೆಲ್’ (Annapoorneshwari Hotel) ತೆರೆಯಲಾಗಿದ್ದು, ನಮಗೆ ಊಟ ತೃಪ್ತಿಯಾಗಿದ್ದರೆ ಅಲ್ಲಿರುವ ಹುಂಡಿಯಲ್ಲಿ ನಮ್ಮ ಕೈಯಲ್ಲಿ ಸಾಧ್ಯವಾದಷ್ಟು ಹಣವನ್ನು ಹಾಕಬಹುದಾಗಿದೆ. ಹಣ ಹಾಕಲೇಬೇಕೆಂಬ ಷರತ್ತಿಲ್ಲ. ಈ ಹೋಟೆಲ್ ಅನ್ನು ಬಿಗ್ ಬಾಸ್ (Bigg Boss) ಖ್ಯಾತಿಯ ಜಿಮ್ ರವಿ (Gym Ravi) ಉದ್ಘಾಟನೆ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ಎಲ್ಲಾ ಸೆಲೆಬ್ರಿಟಿಗಳನ್ನು ಈ ಹೋಟೆಲ್‌ಗೆ ಕರೆಯುತ್ತೇವೆ ಎಂದರು. ಇದನ್ನೂ ಓದಿ: ‘ಆಸ್ಕರ್’ ಪ್ರಶಸ್ತಿಗಾಗಿ 80 ಕೋಟಿ ಖರ್ಚು ಮಾಡಿದ ರಾಜಮೌಳಿ : ತೆಲುಗು ನಿರ್ದೇಶಕ ಕಿಡಿಕಿಡಿ

    ಡಿ.ಹೆಚ್.ಕಿರಣ್ ಗೌಡ (D.H.Kiran Gowda) ಹಾಗೂ ಸ್ನೇಹಿತರ ತಂಡ ಸೇರಿಕೊಂಡು ಈ ಹೋಟೆಲನ್ನು ಆರಂಭಿಸಿದ್ದಾರೆ. ಎಷ್ಟು ಬೇಕಾದರೂ ಊಟ ಮಾಡಿ, ತೃಪ್ತಿಯಾದರೆ ಹುಂಡಿಗೆ ಹಣ ಹಾಕಬಹುದು ಎಂಬ ಸಿಂಗಾಪುರದ (Singapore) ರೆಸ್ಟೋರೆಂಟ್‌ನಿಂದ ಸ್ಪೂರ್ತಿಯನ್ನು ಪಡೆದು ಈ ಹೋಟೆಲನ್ನು ತೆರೆಯಲಾಗಿದೆ.

    ಇಲ್ಲಿ ಪ್ರತಿನಿತ್ಯ ನಾಟಿ ಸ್ಟೈಲ್ ಮುದ್ದೆ, ವೆಜ್ ಊಟವನ್ನು ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಉಣಬಡಿಸಲಾಗುತ್ತದೆ. ನಾಟಿ ಸ್ಟೈಲ್ ಮುದ್ದೆ, ಚಪಾತಿ, ಪಲ್ಯ, ಸಾರು, ಅನ್ನ, ಸ್ವೀಟ್ ಈ ಹೋಟೆಲಿನ ಮೆನು. ಊಟದ ನಂತರ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಪ್ರತಿದಿನ ನೂರಾರು ಕೂಲಿ ಕಾರ್ಮಿಕರು, ಬಡವರು ಊಟ ಮಾಡುತ್ತಿದ್ದಾರೆ. ಈ ರೀತಿಯ ಹೋಟೆಲ್‌ಗಳನ್ನು ನಾನಾ ಕಡೆ ತೆರೆಯುವ ಪ್ಲಾನ್ ಇದೆ ಎಂದು ಹೋಟೆಲ್ ಮಾಲಿಕ ಕಿರಣ್ ಗೌಡ ತಿಳಿಸಿದ್ದಾರೆ. ಇವರ ಈ ಉತ್ತಮ ಕಾರ್ಯಕ್ಕೆ ಅನೇಕ ಜನ ಸ್ವಯಂಪ್ರೇರಿತರಾಗಿ ಸಹಾಯ ಹಸ್ತ ಚಾಚುತ್ತಿದ್ದಾರೆ. ಇದನ್ನೂ ಓದಿ: Exclusive- ವೀಕೆಂಡ್ ವಿತ್ ರಮೇಶ್ 5 : ಮೊದಲ ಅತಿಥಿ ರಿಷಬ್ ಶೆಟ್ಟಿ ಅಲ್ಲ, ಖ್ಯಾತ ಡಾನ್ಸರ್