Tag: NMRC

  • ಇನ್ಮುಂದೆ ಮೆಟ್ರೋ ಬೋಗಿಗಳಲ್ಲೂ ಪಾರ್ಟಿ ಮಾಡಬಹುದು

    ಇನ್ಮುಂದೆ ಮೆಟ್ರೋ ಬೋಗಿಗಳಲ್ಲೂ ಪಾರ್ಟಿ ಮಾಡಬಹುದು

    ನವದೆಹಲಿ: ದೊಡ್ಡ ಹೋಟೆಲ್‍ಗಳು, ರೆಸ್ಟೋರೆಂಟ್‍ಗಳಲ್ಲಿ ಪಾರ್ಟಿ ಮಾಡಿ ಬೋರ್ ಆಗಿದ್ರೆ,  ಇನ್ಮುಂದೆ ನೀವೂ ಮೆಟ್ರೋ ರೈಲು ಬೋಗಿಗಳಲ್ಲೂ ಶುಭ ಸಮಾರಂಭಗಳು, ಸಣ್ಣಪುಟ್ಟ ಪಾರ್ಟಿಗಳನ್ನು ಮಾಡಬಹುದು. ಅಚ್ಚರಿ ಎನಿಸಿದರೂ ಇಂತಹದೊಂದು ವಿನೂತನ ಪ್ರಯತ್ನಕ್ಕೆ ನೊಯ್ಡಾ ಮೆಟ್ರೋ ರೈಲು ನಿಗಮ ಮುಂದಾಗಿದೆ.

    ನೊಯ್ಡಾ ಮೆಟ್ರೋ ರೈಲು ನಿಗಮ (ಎನ್‌ಎಂಆರ್‌ಸಿ) ಬರ್ತ್ ಡೇ ಪಾರ್ಟಿ, ಪ್ರೀ ವೆಡ್ಡಿಂಗ್ ಪಾರ್ಟಿ ಇತರೆ ಚಿಕ್ಕಪುಟ್ಟ ಶುಭ ಕಾರ್ಯಕ್ರಮಗಳನ್ನು ರೈಲು ಬೋಗಿಯಲ್ಲಿ ಆಯೋಜಿಸಲು ಮುಂದಾಗಿದೆ. ಗಂಟೆಗಳ ಲೆಕ್ಕದಲ್ಲಿ ಸಾರ್ವಜನಿಕರಿಗೆ ಬಾಡಿಗೆ ಕೊಡಲು ಎನ್‌ಎಂಆರ್‌ಸಿ ನಿರ್ಧರಿಸಿದೆ.

    ಹೊಸ ಆದಾಯದ ಮೂಲ ಹುಡುಕಲು ಪ್ರಯತ್ನಿಸಿರುವ ಎನ್‌ಎಂಆರ್‌ಸಿ ಪ್ರತಿ ಗಂಟೆಗೆ 5 ರಿಂದ 10 ಸಾವಿರಕ್ಕೆ ಮೆಟ್ರೋ ಬೋಗಿಗಳನ್ನು ಬಾಡಿಗೆ ನೀಡಲು ನಿರ್ಧರಿಸಿದೆ. ಸಂಚಾರಿ ಮೆಟ್ರೋ ಅಥವಾ ನಿಗದಿತ ಸ್ಥಳದಲ್ಲಿ ನಿಂತ ಮೆಟ್ರೋ ಬೋಗಿಗಳನ್ನು ಬಾಡಿಗೆ ನೀಡಲು ಸಿದ್ಧವಾಗಿದ್ದು ಪಾರ್ಟಿಯಲ್ಲಿ ಗರಿಷ್ಠ 50 ಮಂದಿಗೆ ಮಾತ್ರ ಭಾಗವಹಿಸಲು ಷರತ್ತು ವಿಧಿಸಿದೆ.

    ನಿಗದಿತ ಸ್ಥಳದಲ್ಲಿ ನಿಂತ ಮೆಟ್ರೋದಲ್ಲಿ ಪಾರ್ಟಿ ಮಾಡಲು 5,000, ಸಂಚಾರಿ ಮೆಟ್ರೋ ಬೋಗಿ ಬಳಕೆಗೆ 8,000, ಅಲಂಕೃತ ಸಂಚಾರಿ ಮೆಟ್ರೋಗಾಗಿ 10,000 ಹಾಗೂ ಅಲಂಕೃತ ಸಂಚಾರ ರಹಿತ ಮೆಟ್ರೋ ಬೋಗಿಗಾಗಿ 7,000 ಬಾಡಿಗೆ ನಿಗದಿ ಮಾಡಿದೆ. ಮೆಟ್ರೋ ಬೋಗಿ ಬಾಡಿಗೆ ಪಡೆಯಲು ಇಚ್ಛಿಸುವವರು 15 ದಿನಗಳ ಮೊದಲು ಕಾರ್ಯಕ್ರಮದ ವಿವರಗಳೊಂದಿಗೆ ಬುಕ್ ಮಾಡಬೇಕಿದೆ.

    ಸಂಚಾರಿ ಮೆಟ್ರೋ ಬೋಗಿಗಾಗಿ ಯಾವುದೇ ಸಮಯವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದ್ದು, ಸ್ಥಿರ ಮೆಟ್ರೋ ಬೋಗಿಗಾಗಿ ರಾತ್ರಿ 11 ರಿಂದ 2 ಗಂಟೆಯ ನಡುವೆ ಬುಕ್ಕಿಂಗ್ ಮಾಡಿಕೊಳ್ಳಬಹುದು. ಮೆಟ್ರೋ ಬೋಗಿ ಕಾಯ್ದಿರಿಸಲು 20,000 ರೂಪಾಯಿ ಮುಂಗಡ ಹಣ ಪಾವತಿಸಬೇಕಿದ್ದು ಕಾರ್ಯಕ್ರಮದ ಬಳಿಕ ಎನ್‌ಎಂಆರ್‌ಸಿ ವಾಪಸ್ ನೀಡಲಿದೆ.