Tag: Nivar Cyclone

  • ತಮಿಳುನಾಡಲ್ಲಿ ಆರ್ಭಟಿಸಿ ತಣ್ಣಗಾದ ನಿವಾರ್ – ರಾಜ್ಯದ ಹಲವೆಡೆ ಸಾಧಾರಣ ಮಳೆ ಸಂಭವ

    ತಮಿಳುನಾಡಲ್ಲಿ ಆರ್ಭಟಿಸಿ ತಣ್ಣಗಾದ ನಿವಾರ್ – ರಾಜ್ಯದ ಹಲವೆಡೆ ಸಾಧಾರಣ ಮಳೆ ಸಂಭವ

    ಬೆಂಗಳೂರು: ಬಂಗಾಳಕೊಳ್ಳಿಯಲ್ಲಿ ಸೃಷ್ಟಿಯಾದ ನಿವಾರ್ ಚಂಡಮಾರುತದ ಹೊಡೆತಕ್ಕೆ ತಮಿಳುನಾಡು ತಲ್ಲಣಗೊಂಡಿದೆ. ನಿನ್ನೆ ತಡರಾತ್ರಿ ಪುದುಚೇರಿ ಬಳಿ ತೀರ ದಾಟಿದ ನಿವಾರ್, ಇಂದು ತಣ್ಣಗಾಗಿದೆ. ಅದರೂ ಇನ್ನೆರಡು ದಿನ ಸೈಕ್ಲೋನ್ ಎಫೆಕ್ಟ್ ಕಾಡಲಿದೆ.

    ಇಂದು ಸಹ ರಾಜ್ಯ ರಾಜಧಾನಿಯಲ್ಲಿ ಮಳೆಯಾಗುವ ಸಾಧ್ಯತೆ ಇದೆ. ನಿನ್ನೆ ಇಡೀ ದಿನ ಜಿಟಿ ಜಿಟಿ ಮಳೆಗೆ ಬೆಂಗಳೂರು ಜನ ಹೈರಾಣಾಗಿದ್ದರು. ಇಂದು ಸಹ ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ. ಸಂಜೆ ವೇಳೆಗೆ ಕೊಂಚ ಬಿರುಸಿನ ಮಳೆಯಾಗಬಹುದು.

    ನಿವಾರ್ ಚಂಡಮಾರುತದಿಂದಾಗಿ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆಯಾಗಲಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ ಸೇರಿದಂತೆ ಹಲವೆಡೆ ಇಂದು ಸಹ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಸಿಲಿಕಾನ್ ಸಿಟಿಯಲ್ಲೂ ಮಳೆಯ ಅಬ್ಬರ ಮುಂದುವರಿಯಲಿದೆ. ನಾಳೆಯೂ ಸೈಕ್ಲೋನ್ ಎಫೆಕ್ಟ್ ಇರಲಿದ್ದು, ಹವಾಮಾನ ಇಲಾಖೆ ನಾಳೆಯವರೆಗೆ ಆರೆಂಜ್ ಅಲರ್ಟ್ ಘೋಷಿಸಿದೆ.

  • ನಿವಾರ್ ಅಬ್ಬರ- ಕೋಲಾರದಲ್ಲಿ ಭಾರೀ ಮಳೆ, ಹಲವು ಮನೆಗಳ ಗೋಡೆ ಕುಸಿತ

    ನಿವಾರ್ ಅಬ್ಬರ- ಕೋಲಾರದಲ್ಲಿ ಭಾರೀ ಮಳೆ, ಹಲವು ಮನೆಗಳ ಗೋಡೆ ಕುಸಿತ

    – ಗೋಡೆ ಕುಸಿದು ವ್ಯಕ್ತಿ ಕಾಲು ಮುರಿತ

    ಕೋಲಾರ: ಚೆನ್ನೈ ನಿವಾರ್ ಚಂಡ ಮಾರುತದ ಅಬ್ಬರ ಮುಂದುವರೆದಿದ್ದು, ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದೆ. ಪರಿಣಾಮ ಮನೆಯ ಗೋಡೆ ಕುಸಿದಿದ್ದು, ವ್ಯಕ್ತಿಯ ಕಾಲು ಮುರಿದಿದೆ.

    ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ ಪ್ರತ್ಯೇಕ ಪ್ರಕರಣದಲ್ಲಿ ನಾಲ್ಕು ಮನೆ ಗೋಡೆ ಕುಸಿತವಾಗಿವೆ. ಪೆದ್ದೂರು ಗ್ರಾಮದ ಸೂರ್ಯ ನಾರಾಯಣ ಅವರ ಕಾಲು ಮುರಿದಿದೆ. ಮಲಗಿದ್ದಾಗ ಗೋಡೆ ಕುಸಿದ್ದರಿಂದ ಕಾಲು ಮುರಿದಿದೆ. ಮುಷ್ಟೂರಲ್ಲಿ ನಾಗಮಣಿ, ವಿಜಿಯಮ್ಮ ಅವರ 2 ಮನೆಯ ಗೋಡೆ ಕುಸಿತವಾಗಿದೆ. ಅಬ್ಬೆಹಳ್ಳಿಯ ಭಾಗ್ಯಮ್ಮ ಅವರ ಮನೆಯ ಗೋಡೆ ಸಹ ಕುಸಿತವಾಗಿದೆ.

    ಜಿಲ್ಲೆಯ ಹಲವೆಡೆ ಬೆಳೆಗಳು ನಾಶವಾಗಿದ್ದು, ಮುಳಬಾಗಿಲು ತಾಲೂಕಿನ ಗುಮ್ಮಕಲ್ಲು, ಹೆಡಹಳ್ಳಿ ಬಳಿ ರೈತರ ಬೆಳೆಗಳು ನಾಶವಾಹಿವೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂಗಲಿ ಪೊಲೀಸ್ ಠಾಣಾ ವ್ಯಪ್ತಿಯಲ್ಲಿ ಘಟನೆ ನಡೆದಿದೆ.

    ಬಂಗಾಳಕೊಲ್ಲಿಯಲ್ಲಿ ವಾಯು ಭಾರ ಕುಸಿತ ಹಿನ್ನೆಲೆ ಜಿಲ್ಲೆಯಾದ್ಯಂತ ರಾತ್ರಿಯಿಡಿ ಮಳೆ ಸುರಿದಿದ್ದು, ರಾತ್ರಿ 9 ಗಂಟೆಯಿಂದ ನಿರಂತರವಾಗಿ ಮಳೆ ಸುರಿದಿದೆ. ನಾಳೆ ಸಹ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಕೋಲಾರ ಜಿಲ್ಲಾ ಕೃಷಿ ಹವಾಮಾನ ಘಟಕ ಮುನ್ಸೂಚನೆ ನೀಡಿದೆ. ಜಿಲ್ಲೆಯ ತಾಲೂಕುವಾರು ಮಳೆಯ ಪ್ರಮಾಣ ನೀಡಿ ಎಚ್ಚರಿಕೆ ನೀಡಿದೆ. ವಿಪರೀತ ಮಳೆಗೆ ಜನ ಮನೆಯಿಂದ ಹೊರ ಬರುತ್ತಿಲ್ಲ.

    ತಾಲೂಕುವಾರು ಮಳೆ ಪ್ರಮಾಣ
    ಮುಳಬಾಗಿಲಿನಲ್ಲಿ ಅತೀ ಹೆಚ್ಚು 137.2 ಮಿ.ಮೀ, ಬಂಗಾರಪೇಟೆ 133.4 ಮಿ.ಮಿ., ಕೋಲಾರ 123.1 ಮಿ.ಮೀ, ಶ್ರೀನಿವಾಸಪುರ 119.8 ಮಿ.ಮೀ ಹಾಗೂ ಮಾಲೂರಿನಲ್ಲಿ 95 ಮಿ.ಮೀ ಮಳೆಯಾಗಿದೆ.

    ಭಾರೀ ಮಳೆಯಾಗುತ್ತಿರುವುದರಿಂದ ಎಚ್ಚೆತ್ತ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇಂದು ಪತ್ರದ ಮೂಲಕ ಅಧಿಕಾರಿಗಳಿಗೆ ಸೂಚನೆ ನೀಡಿರುವ ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಮುಂದಿನ 3 ದಿನಗಳ ಕಾಲ ಹೆಚ್ಚು ಮಳೆಯಾಗುವ ಸಾಧ್ಯತೆ ಇದ್ದು, ಸಾರ್ವಜನಿಕ ಆಸ್ತಿ-ಪಾಸ್ತಿ, ಜೀವ ಹಾನಿಗಳಾಗದಂತೆ ತಾಲೂಕು ಮಟ್ಟದ ತಹಶೀಲ್ದಾರ್‍ಗಳಿಗೆ ಸೂಚನೆ ನೀಡಿದ್ದಾರೆ. ಈಗಾಗಲೇ ಜಿಲ್ಲಾಮಟ್ಟದಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದ್ದು, ತುರ್ತು ಸಂದರ್ಭದಲ್ಲಿ 1077 ಹಾಗೂ 08152-243506 ಗೆ ಕರೆ ಮಾಡಿ ತಿಳಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 24*7 ಕಂಟ್ರೋಲ್ ರೂಂಗೆ ಚಾಲನೆ ನೀಡಿ, ಪ್ರತಿ ದಿನ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸುವಂತೆ ತಹಶಿಲ್ದಾರರಿಗೆ ಡಿಸಿ ಸತ್ಯಭಾಮ ಸೂಚನೆ ನೀಡಿದ್ದಾರೆ. ಅಲ್ಲದೆ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಲಭ್ಯವಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

  • ತಡರಾತ್ರಿ ತಮಿಳುನಾಡಿಗೆ ನಿವಾರ್ ಸೈಕ್ಲೋನ್ ಎಂಟ್ರಿ – ಬೆಂಗ್ಳೂರಲ್ಲಿ ಗಾಳಿ ಸಹಿತ ತುಂತುರು ಮಳೆ

    ತಡರಾತ್ರಿ ತಮಿಳುನಾಡಿಗೆ ನಿವಾರ್ ಸೈಕ್ಲೋನ್ ಎಂಟ್ರಿ – ಬೆಂಗ್ಳೂರಲ್ಲಿ ಗಾಳಿ ಸಹಿತ ತುಂತುರು ಮಳೆ

    ಚೆನ್ನೈ/ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ನಿವಾರ್ ಸೈಕ್ಲೋನ್ ಆರ್ಭಟ ಆರಂಭವಾಗಿದ್ದು, ತಮಿಳುನಾಡಿಗೆ ತಡರಾತ್ರಿ ಎಂಟ್ರಿ ಕೊಟ್ಟಿದೆ. ಇದೀಗ ಬೆಂಗಳೂರಿನಲ್ಲಿಯೂ ಗಾಳಿ ಸಹಿತ ತುಂತುರು ಮಳೆ ಆರಂಭವಾಗಿದೆ.

    ಮಾಮಲ್ಲಾಪುರಂ ಮತ್ತು ಕಾರೈಕಲ್ ಸಮುದ್ರ ತೀರಕ್ಕೆ ಎಂಟ್ರಿ ಕೊಟ್ಟ ಸೈಕ್ಲೋನ್, ಗಂಟೆಗೆ 120 ಕಿಲೋ ಮೀಟರ್ ವೇಗದಲ್ಲಿ ಅಪ್ಪಳಿಸಿದೆ. ಚಂಡಿ ಅಬ್ಬರಕ್ಕೆ ತಮಿಳುನಾಡು, ಪುದುಚೇರಿ ತತ್ತರಿಸಿ ಹೋಗಿದೆ.

    ನಿನ್ನೆ ರಾತ್ರಿ 11.30ರ ಸುಮಾರಿಗೆ ಪುದುಚೇರಿಗೆ ಅಪ್ಪಳಿಸಿದ ನಿವಾರ್, ಇಂದು ನಸುಕಿನ ಜಾವ 2.30ರ ಸುಮಾರಿಗೆ ತಮಿಳುನಾಡಿಗೆ ಎಂಟ್ರಿ ಕೊಟ್ಟಿದೆ. ನಸುಕಿನ ಜಾವ 3ರ ಬಳಿಕ ಚಂಡಮಾರುತದ ತೀವ್ರತೆ ಸ್ವಲ್ಪ ತಗ್ಗಿದೆ.

    ಈ ಮಾರುತ ಮುಂದಿನ 3 ಗಂಟೆಗಳಲ್ಲಿ ಗಂಟೆಗೆ 60-65 ಕಿ.ಮೀ ವೇಗ ಪಡೆಯಲಿದೆ. ಗಾಳಿಯ ವೇಗ ಗಂಟೆಗೆ 145 ಕಿಲೋ ಮೀಟರ್ ಎಂದು ಅಂದಾಜಿಸಲಾಗಿತ್ತು. ಆದರೆ ಗಂಟೆಗೆ 110-120 ಕಿ.ಮೀ ವೇಗದಲ್ಲಿ ದ ಸೈಕ್ಲೋನ್ ಅಪ್ಪಳಿಸಿದೆ. ಸೈಕ್ಲೋನ್ ಪ್ರಭಾಗ ತಗ್ಗಿದರೂ ತಮಿಳುನಾಡಿನಲ್ಲಿ ಮಳೆ ಮುಂದುವರಿದಿದೆ.

  • ನಿವಾರ್ ಸೈಕ್ಲೋನ್ – ಸಿಲಿಕಾನ್ ಸಿಟಿಗೆ ಮತ್ತೆ ವರುಣಾಘಾತ?

    ನಿವಾರ್ ಸೈಕ್ಲೋನ್ – ಸಿಲಿಕಾನ್ ಸಿಟಿಗೆ ಮತ್ತೆ ವರುಣಾಘಾತ?

    – ಮುಂದಿನ ಮೂರು ದಿನ ಮಳೆ ಸಂಭವ

    ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ನಿವಾರ್ ಸೈಕ್ಲೋನ್ ಇನ್ನೆರಡು ದಿನಗಳಲ್ಲಿಯೇ ಅಪ್ಪಳಿಸಲಿದ್ದು, ಬೆಂಗಳೂರಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ಸೈಕ್ಲೋನ್ ಪರಿಣಾಮ ನವೆಂಬರ್ 25 ರಿಂದ 27ರವರೆಗೆ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯಾಗಲಿದೆ.

    ಬಂಗಾಲ ಉಪಸಾಗರ ನೈಋತ್ಯ ಭಾಗದಲ್ಲಿ ವಾಯುಭಾರ ಕುಸಿತವಾಗಿದ್ದು, ಮುಂದಿನ 24 ಗಂಟೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ನ.25 ರಂದು ತಮಿಳುನಾಡು ಹಾಗೂ ಪಾಂಡಿಚೇರಿ ಕರಾವಳಿಯಲ್ಲಿ ದಾಟಿ ಕಾರೈಕಲ್, ಮಾಮಲಪುರಂ ಹತ್ತಿರ ಸೈಕ್ಲೋನ್ ಕ್ರಾಸ್ ಆಗುತ್ತೆ. ಇದರ ಪ್ರಭಾವದಿಂದಾಗಿ ಕರಾವಳಿಯ ಕೆಲ ಭಾಗದಲ್ಲಿ ನ.25, 26, 27 ರಂದು ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಉತ್ತರ ಒಳನಾಡಿನಲ್ಲಿ ನ. 23ರಂದು ಒಣ ಹವೆ ಇರಲಿದ್ದು, ನ. 24 ರಿಂದ 27 ರವರೆಗೆ ಕೆಲವೆಡೆ ಮಳೆಯಾಗುವ ಸಾಧ್ಯತೆಯಿದೆ.

    ದಕ್ಷಿಣ ಒಳನಾಡಿನಲ್ಲಿ ನ.24 ರಂದು ಕೆಲವು ಕಡೆ ಮಳೆಯಾಗುವ ಸಾಧ್ಯತೆಗಳಿದ್ದು, ನ.25 ರಿಂದ 27 ರವರೆಗೆ ಬಹುತೇಕ ಎಲ್ಲ ಸ್ಥಳಗಳಲ್ಲಿ ಮಳೆಯಾಗಲಿದೆ. ಕೋಲಾರ, ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಕೆಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹಾಗಾಗಿ ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಹವಮಾನ ಇಲಾಖೆ ತಜ್ಞ ಸಿ.ಎಸ್. ಪಾಟೀಲ್ ಮಾಹಿತಿ ನೀಡಿದ್ದಾರೆ.