Tag: Nitish Rana

  • IPL 2023: ರಾಜಪಕ್ಸ ಫಿಫ್ಟಿ, ಅರ್ಷ್‌ದೀಪ್‌ ಬೆಂಕಿ ಬೌಲಿಂಗ್‌ – ಮಳೆ ನಡುವೆಯೂ ಪಂಜಾಬ್‌ಗೆ 7 ರನ್‌ ರೋಚಕ ಜಯ

    IPL 2023: ರಾಜಪಕ್ಸ ಫಿಫ್ಟಿ, ಅರ್ಷ್‌ದೀಪ್‌ ಬೆಂಕಿ ಬೌಲಿಂಗ್‌ – ಮಳೆ ನಡುವೆಯೂ ಪಂಜಾಬ್‌ಗೆ 7 ರನ್‌ ರೋಚಕ ಜಯ

    ಮೊಹಾಲಿ: ಭಾನುಕ ರಾಜಪಕ್ಷ ಭರ್ಜರಿ ಬ್ಯಾಟಿಂಗ್‌ ಹಾಗೂ ಅರ್ಷ್‌ದೀಪ್‌ ಸಿಂಗ್‌ ಬೆಂಕಿ ಬೌಲಿಂಗ್‌ ದಾಳಿಯ ಪರಿಣಾಮ ಮಳೆಯ ನಡುವೆಯೂ ಪಂಜಾಬ್‌ ಕಿಂಗ್ಸ್‌ (Punjab Kings), ಕೆಕೆಆರ್‌ (KKR) ವಿರುದ್ಧ 7 ರನ್‍ಗಳ ರೋಚಕ ಜಯ ಸಾಧಿಸಿದೆ.

    ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಸುಧಾರಣೆಯಿಂದ ಗೆಲುವಿನ ನಿರೀಕ್ಷೆಯಲ್ಲಿದ್ದ ಕೆಕೆಆರ್‌ಗೆ ಕೊನೆಯ 24 ಎಸೆತಗಳಲ್ಲಿ 55 ರನ್‌ ಗಳ ಅಗತ್ಯವಿತ್ತು. ಆದರೆ ಮಳೆ ಅಡ್ಡಿಯಾದ್ದರಿಂದ ಡಕ್ವರ್ಥ್ ಲೂಯಿಸ್‌ ನಿಯಮ (DLS Method) ಅನ್ವಯಿಸಲಾಯಿತು. ಈ ನಿಯಮದಂತೆ ಪಂಜಾಬ್‌ 7 ರನ್‌ಗಳ ರೋಚಕ ಜಯ ಸಾಧಿಸಿತು.

    ಶನಿವಾರ ಮೊಹಾಲಿಯ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ನಡೆದ 2023ರ ಐಪಿಎಲ್‌ನ (IPL 2023) 2ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ ಭರ್ಜರಿ 191 ರನ್‌ ಕಲೆಹಾಕಿತ್ತು. 192 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಕೋಲ್ಕತ್ತಾ ನೈಟ್‌ರೈಡರ್ಸ್‌ ಮಳೆಯ ಕಾರಣ ನಿಗದಿತ 16 ಓವರ್‌ಗಳಲ್ಲಿ 146 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

    ಚೇಸಿಂಗ್‌ ಆರಂಭಿಸಿದ ಕೋಲ್ಕತ್ತಾ ನೈಟ್‌ರೈಡರ್ಸ್‌ ಭರ್ಜರಿ ಆರಂಭದಲ್ಲೇ ಪ್ರಮುಖ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಅಗ್ರಕ್ರಮಾಂಕದ ಬ್ಯಾಟರ್‌ಗಳು ಪಂಜಾಬ್ ‌ಬೌಲರ್‌ಗಳ ದಾಳಿಗೆ ತತ್ತರಿಸಿದರು. ಇದನ್ನೂ ಓದಿ: ಬಣ್ಣದ ಉಡುಗೆಯಲ್ಲಿ ಮಿರಿಮಿರಿ ಮಿಂಚಿದ ರಶ್ಮಿಕಾ, ತಮನ್ನಾ – ಇಲ್ಲಿದೆ ಕಣ್ಮನ ಸೆಳೆಯುವ Photos

    ಆರಂಭಿಕರಾಗಿ ಕಣಕ್ಕಿಳಿದ ಮಂದೀಪ್‌ ಸಿಂಗ್‌ 4 ಎಸೆತಗಳಲ್ಲಿ ಕೇವಲ 2 ರನ್‌ ಗಳಿಸಿದರೆ, ರಹಮಾನುಲ್ಲಾ ಗುರ್ಬಾಜ್ 16 ಎಸೆತಗಳಲ್ಲಿ 22 ರನ್‌ (3 ಬೌಂಡರಿ, 1 ಸಿಕ್ಸರ್‌) ಬಾರಿಸಿ ಪೆವಿಲಿಯನ್‌ ಸೇರಿದರು. ತಾಳ್ಮೆಯ ಆಟವಾಡಿದ ನಾಯಕ ನಿತೀಶ್‌ ರಾಣಾ (Nitish Rana) 17 ಎಸೆತಗಳಲ್ಲಿ 3 ಬೌಂಡರಿ 1 ಸಿಕ್ಸರ್‌ನೊಂದಿಗೆ 24 ರನ್‌ ಗಳಿಸಿದರು. ರಿಂಕು ಸಿಂಗ್‌, ಅನುಕುಲ್‌ ರಾಯ್‌ ತಲಾ 4 ರನ್‌ ಗಳಿಸಿದರು. ಉಳಿದಂತೆ ಯಾವೊಬ್ಬ ಆಟಗಾರರು ಸ್ಥಿರವಾಗಿ ನಿಲ್ಲದ ಕಾರಣ ಕೆಕೆಆರ್‌ ತಂಡ ಮೊದಲ ಪಂದ್ಯದಲ್ಲೇ ಸೋಲನ್ನು ಎದುರಿಸಬೇಕಾಯಿತು.

    ಮಧ್ಯಮ ಕ್ರಮಾಂಕದಲ್ಲಿ ಒಂದಾದ ವೆಂಕಟೇಶ್‌ ಅಯ್ಯರ್ (Venkatesh Iyer) ಹಾಗೂ ಆಂಡ್ರೆ ರಸೆಲ್ (Andre Russell) ಸ್ಫೋಟಕ ಬ್ಯಾಟಿಂಗ್‌ ನಡೆಸುವ ಮೂಲಕ ತಂಡಕ್ಕೆ ನೆರವಾದರು. ಇದರಿಂದ ಕೆಕೆಆರ್‌ಗೆ ಮತ್ತೆ ಗೆಲುವಿನ ಆಸೆ ಚಿಗುರಿತ್ತು. ಆದರೆ, ಸ್ಯಾಮ್‌ ಕರ್ರನ್‌, ಅರ್ಷ್‌ದೀಪ್‌ ಸಿಂಗ್‌ ಇವರಿಬ್ಬರ ಆಟಕ್ಕೆ ಬ್ರೇಕ್‌ ಹಾಕಿ ಪೆವಿಲಿಯನ್‌ಗೆ ದಾರಿ ತೋರಿಸಿದರು. ವೆಂಕಟೇಶ್‌ ಅಯ್ಯರ್‌ 28 ಎಸೆತಗಳಲ್ಲಿ 1 ಸಿಕ್ಸರ್‌, 3 ಬೌಂಡರಿ ಸಹಿತ 34 ರನ್‌ ಗಳಿಸಿದರೆ, ರಸೆಲ್‌ 19 ಎಸೆತಗಳಲ್ಲಿ 2 ಸಿಕ್ಸರ್‌, 3 ಬೌಂಡರಿಯೊಂದಿಗೆ 35 ರನ್‌ ಚಚ್ಚಿ ಔಟಾದರು. ಕೊನೆಯಲ್ಲಿ ಶಾರ್ದೂಲ್‌ ಠಾಕೂರ್‌ 3 ಎಸೆತಗಳಲ್ಲಿ 8 ರನ್‌ ಹಾಗೂ ಸುನೀಲ್‌ ನರೇನ್‌ 2 ಎಸೆತಗಳಲ್ಲಿ 7 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದರು. ಈ ವೇಳೆ ಮಳೆ ಅಬ್ಬರಿಸಿದ್ದರಿಂದ ಡಕ್ವರ್ಥ್‌ ಲೂಯಿಸ್‌ ನಿಯಮ ಅನ್ವಯಿಸಲಾಯಿತು. ಇದರಿಂದ ಗೆಲುವಿನ ನಿರೀಕ್ಷೆಯಲ್ಲಿದ್ದ ಕೆಕೆಆರ್‌ಗೆ ನಿರಾಸೆಯುಂಟಾಯಿತು.

    ಪಂಜಾಬ್‌ ಕಿಂಗ್ಸ್‌ ಪರ ಅರ್ಷ್‌ದೀಪ್‌ ಸಿಂಗ್‌ 3 ವಿಕೆಟ್‌ ಪಡೆದರೆ, ಸ್ಯಾಮ್‌ ಕರ್ರನ್‌, ನಾಥನ್ ಎಲ್ಲಿಸ್, ಸಿಕಂದರ್‌ ರಾಜಾ ಹಾಗೂ ರಾಹುಲ್‌ ಚಹಾರ್‌ ತಲಾ ಒಂದೊಂದು ವಿಕೆಟ್‌ ಪಡೆದರು. ಇದನ್ನೂ ಓದಿ: ಕೊನೆಯಲ್ಲಿ ಸಿಕ್ಸರ್‌, ಬೌಂಡರಿ – ಚೆನ್ನೈಗೆ ಗುನ್ನ ಕೊಟ್ಟ ಗುಜರಾತ್‌; ಹಾಲಿ ಚಾಂಪಿಯನ್ಸ್‌ಗೆ ರೋಚಕ ಜಯ

    ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ಭಾನುಕ ರಾಜಪಕ್ಸ (Bhanuka Rajapaksa ಮತ್ತು ನಾಯಕ ಶಿಖರ್ ಧವನ್ ಭರ್ಜರಿ ಬ್ಯಾಟಿಂಗ್‌ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 191 ರನ್‌ ಕಲೆಹಾಕಿತು.

    ಭಾನುಕ ರಾಜಪಕ್ಸ ಕೇವಲ 32 ಎಸೆತಗಳಲ್ಲಿ 50 ರನ್ (5 ಬೌಂಡರಿ, 2 ಸಿಕ್ಸರ್‌) ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನೂ ನಾಯಕ ಶಿಖರ್ ಧವನ್ 29 ಎಸೆತಗಳಲ್ಲಿ 6 ಬೌಂಡರಿ ಸಮೇತ 40 ರನ್ ಗಳಿಸಿ ಔಟಾದರು. ನಂತರ ಬಂದ ಜಿತೇಶ್ ಶರ್ಮಾ 11 ಎಸೆತಗಳಲ್ಲಿ 21 ರನ್‌ಗಳ (1 ಬೌಂಡರಿ, 2 ಸಿಕ್ಸರ್‌) ಕೊಡುಗೆ ನೀಡಿದರು. ಇದೇ ವೇಳೆ ಜಿಂಬಾಬ್ವೆ ಆಲ್‌ರೌಂಡರ್ ಸಿಕಂದರ್ ರಾಜ 13 ಎಸೆತಗಳಲ್ಲಿ 16 ರನ್ ಗಳಿಸಿದರು.

    ಕೊನೆಯಲ್ಲಿ ಐಪಿಎಲ್‌ನ ದುಬಾರಿ ಆಟಗಾರ ಸ್ಯಾಮ್ ಕರ್ರನ್ (Sam Curran) 17 ಎಸೆತಗಳಲ್ಲಿ 2 ಸಿಕ್ಸರ್ ಸಮೇತ 26 ರನ್ ಬಾರಿಸಿದರೆ, ಶಾರೂಖ್ ಖಾನ್ 11 ರನ್ ಗಳಿಸಿ ತಂಡದ ಮೊತ್ತ 190ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

    ಬೌಲಿಂಗ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಟಿಮ್ ಸೌಥಿ 4 ಓವರ್‌ಗಳಲ್ಲಿ 54 ರನ್ ನೀಡಿ 2 ವಿಕೆಟ್ ಪಡೆದರೆ, ವರುಣ್ ಚಕ್ರವರ್ತಿ 4 ಓವರ್‌ಗಳಲ್ಲಿ 26 ರನ್ ನೀಡಿ 1 ವಿಕೆಟ್ ಪಡೆದರು. ಇನ್ನೂ ಉಮೇಶ್ ಯಾದವ್ 4 ಓವರ್‌ಗಳಲ್ಲಿ 27 ರನ್ ನೀಡಿ 1 ವಿಕೆಟ್ ಪಡೆದರೆ, ಸುನಿಲ್ ನರೈನ್ 4 ಓವರ್‌ಗಳಲ್ಲಿ 40 ರನ್ ನೀಡಿ 1 ವಿಕೆಟ್ ಕಿತ್ತರು.

  • ಕೆಕೆಆರ್ ಆಟಗಾರ ನಿತೀಶ್ ರಾಣಾಗೆ ಕೊರೊನಾ ಸೋಂಕು ದೃಢ

    ಕೆಕೆಆರ್ ಆಟಗಾರ ನಿತೀಶ್ ರಾಣಾಗೆ ಕೊರೊನಾ ಸೋಂಕು ದೃಢ

    – ಗೋವಾದಲ್ಲಿ ರಜಾದಿನ ಕಳೆದು ತಂಡ ಸೇರಿದ್ದ ರಾಣಾ

    ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಎಂಟು ದಿನ ಮುನ್ನ ಕೋಲ್ಕತ್ತಾ ತಂಡದ ಆಟಗಾರ ನಿತೀಶ್ ರಾಣಾ ಕೊರೊನಾ ಸೋಂಕಿತರಾಗಿದ್ದಾರೆ. ಎರಡು ದಿನದ ಹಿಂದೆಯೇ ಕೋವಿಡ್ ದೃಢವಾಗಿದ್ದು, ಆದ್ರೆ ಇದುವರೆಗೂ ಬಿಸಿಸಿಐ ಮತ್ತು ಕೆಕೆಆರ್ ಈ ಮಾಹಿತಿಯನ್ನ ಅಧಿಕೃತವಾಗಿಸಿಲ್ಲ.

    ಸದ್ಯ ಮುಂಬೈನ ಹೋಟೆಲ್ ನಲ್ಲಿ ನಿತೀಶ್ ರಾಣಾ ಕ್ವಾರಂಟೈನ್ ನಲ್ಲಿದ್ದಾರೆ ಎಂದು ವರದಿಯಾಗಿದೆ. ವೈದ್ಯರ ತಂಡವೊಂದು ನಿತೀಶ್ ಆರೋಗ್ಯದ ಕಾಳಜಿ ತೆಗೆದುಕೊಂಡಿದೆ. 14ನೇ ಆವೃತ್ತಿಯ ಐಪಿಎಲ್ ಏಪ್ರಿಲ್ 9ರಿಂದ ಆರಂಭವಾಗಲಿದ್ದು, ಮೇ 30ರಂದು ಫೈನಲ್ ಮ್ಯಾಚ್ ನಡೆಯಲಿದೆ. ಮೊದಲ ಪಂದ್ಯವನ್ನ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಆಡಲಿವೆ. ಏಪ್ರಿಲ್ 11ರಂದು ಕೆಕೆಆರ್ ಮೊದಲ ಪಂದ್ಯವನ್ನ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ.

    254 ರನ್: ಕಳೆದ ಸೀಸನ್ ನಲ್ಲಿ ಕೆಕೆಆರ ಪರ ಆಡಿದ್ದ ನಿತೀಶ್ ರಾಣಾ, 14 ಪಂದ್ಯಗಳಲ್ಲಿ 254 ರನ್ ಕಲೆ ಹಾಕಿದ್ದರು. ಐಪಿಎಲ್ ನಲ್ಲಿ ಇದುವರೆಗೂ 60 ಪಂದ್ಯಗಳನ್ನಾಡಿರುವ ರಾಣಾ, 1,437 ರನ್ ಪೇರಿಸಿದ್ದಾರೆ. ಸರಾಸರಿ 28.17 ಮತ್ತು ಸ್ಟ್ರೈಕ್ ರೇಟ್ 135.56 ಇದೆ.

    ವಿಜಯ್ ಹಜಾರೆ ಟ್ರೋಫಿಯಲ್ಲಿ ಟಾಪ್ 5 ಸ್ಕೋರರ್: ನಿತೀಶ್ ರಾಣಾ ವಿಜಯ್ ಹಜಾರೆ ಟ್ರೋಫಿಯಲ್ಲಿ 5ನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ದೆಹಲಿಯ ಪರವಾಗಿ ಆಡಿದ್ದ ರಾಣಾ, ಏಳು ಪಂದ್ಯಗಳಲ್ಲಿ 66.33ರ ಸರಾಸರಿಯಲ್ಲಿ 398 ರನ್ ಕಲೆ ಹಾಕಿದ್ದಾರೆ. ಒಂದು ಶತಕ, ಎರಡು ಅರ್ಧ ಶತಕ ದಾಖಲಿಸಿದ್ದಾರೆ. ಸ್ಟ್ರೈಕ್ ರೇಟ್ 97.78 ಇದೆ.

  • ಪಂದ್ಯದಲ್ಲಿ ನಿಂದಿಸಿದ ರಾಣಾಗೆ ಸ್ಪೆಷಲ್ ಗಿಫ್ಟ್ ಕೊಟ್ಟ ಕೊಹ್ಲಿ!

    ಪಂದ್ಯದಲ್ಲಿ ನಿಂದಿಸಿದ ರಾಣಾಗೆ ಸ್ಪೆಷಲ್ ಗಿಫ್ಟ್ ಕೊಟ್ಟ ಕೊಹ್ಲಿ!

    ಕೋಲ್ಕತ್ತಾ: ಆರ್‌ಸಿಬಿ ಹಾಗೂ ಕೆಕೆಆರ್ ಪಂದ್ಯದ ವೇಳೆ ಉತ್ತಮ ಪ್ರದರ್ಶನ ನೀಡಿದ್ದ ನಿತೀಶ್ ರಾಣಾ ಅವರಿಗೆ ಕ್ಯಾಪ್ಟನ್ ಕೊಹ್ಲಿ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ. ಇದೀಗ ರಾಣಾ ಆ ಉಡುಗೊರೆಯ ಫೋಟೋವನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

    ರಾಣಾ ಒಂದೇ ಓವರಿನಲ್ಲಿ ಎಬಿಡಿ ವಿಲಿಯರ್ಸ್ ಹಾಗೂ ವಿರಾಟ್ ಕೊಹ್ಲಿ ಅವರನ್ನು ಔಟ್ ಮಾಡಿದ್ದರು. ಯುವ ಆಟಗಾರ ನಿತೀಶ್ ರಾಣಾ ಅವರ ಅತ್ಯುತ್ತಮ ಪ್ರದರ್ಶನ ನೋಡಿ ಖುಷಿಯಾದ ಕೊಹ್ಲಿ ಪಂದ್ಯದ ನಂತರ ಅವರಿಗೆ ತಮ್ಮ ಬ್ಯಾಟ್ ಗಿಫ್ಟ್ ಆಗಿ ನೀಡಿದ್ದಾರೆ.

    ರಾಣಾ ಒಂದು ಓವರ್ ಎಸೆದು 11 ರನ್ ನೀಡಿ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್ ವಿಕೆಟ್ ಪಡೆದಿದ್ದರು. 2 ವಿಕೆಟ್ ಕಳೆದು ಕೊಂಡು 127 ರನ್ ಗಳಿಸಿದ್ದ ಆರ್‌ಸಿಬಿ ಹಠಾತ್ ಎರಡು ವಿಕೆಟ್ ಕಳೆದುಕೊಂಡ ಪರಿಣಾಮ 14.3 ಓವರ್ ಗಳಲ್ಲಿ 127 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

    ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ತನ್ನ ಬೌಲಿಂಗ್ ನಲ್ಲಿ ಔಟ್ ಆದ ಕೊಹ್ಲಿಯನ್ನು ರಾಣಾ ನಿಂದಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಒಬ್ಬ ಕಿರಿಯ ಆಟಗಾರ ಭಾರತ ತಂಡದ ನಾಯಕನನ್ನು ನಿಂದಿಸಿದ್ದಕ್ಕೆ ಟೀಕೆ ವ್ಯಕ್ತವಾಗಿತ್ತು.

    ಕ್ರಿಕೆಟ್ ಪ್ರೇಮಿಗಳು ನಿಂದಿಸಿದ ವಿಚಾರವನ್ನು ಇಟ್ಟುಕೊಂಡು ಟೀಕೆ ಮಾಡುತ್ತಿದ್ದರೆ ಪಂದ್ಯ ಮುಗಿದ ಬಳಿಕ ಕೊಹ್ಲಿ ರಾಣಾ ಅವರನ್ನು ಪ್ರೋತ್ಸಾಹಿಸಿ ತಮ್ಮ ಬ್ಯಾಟ್ ಉಡುಗೊರೆಯಾಗಿ ನೀಡಿದ್ದರು. ಅಷ್ಟೇ ಅಲ್ಲದೇ ನಿಮ್ಮ ಮುಂದಿನ ಭವಿಷ್ಯ ಚೆನ್ನಾಗಿರಲಿ ಎಂದು ಶುಭ ಹಾರೈಸಿದ್ದಾರೆ.

    ಸದ್ಯ ರಾಣಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಕೊಹ್ಲಿ ನೀಡಿದ ಬ್ಯಾಟ್‍ನ ಫೋಟೋವನ್ನು ಹಾಕಿ ಅದಕ್ಕೆ “ಕ್ರಿಕೆಟ್ ದಿಗ್ಗಜರು ಹೊಗಳಿದ್ದಾರೆ. ಇದರಿಂದ ಇನ್ನಷ್ಟು ಹೆಚ್ಚು ಪರಿಶ್ರಮಪಟ್ಟು ಆಡಲು ಮನಸ್ಸಾಗುತ್ತದೆ. ಧನ್ಯವಾದಗಳು ವಿರಾಟ್ ಅಣ್ಣ” ಎಂದು ರಾಣಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

  • ಔಟಾದ ಕೊಹ್ಲಿಯನ್ನು ನಿಂದಿಸಿದ ಬೌಲರ್ ರಾಣಾ – ವಿಡಿಯೋ ವೈರಲ್

    ಔಟಾದ ಕೊಹ್ಲಿಯನ್ನು ನಿಂದಿಸಿದ ಬೌಲರ್ ರಾಣಾ – ವಿಡಿಯೋ ವೈರಲ್

    ಕೊಲ್ಕತ್ತಾ: ಭಾನುವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ಪಂದ್ಯದಲ್ಲಿ ತನ್ನ ಬೌಲಿಂಗ್ ನಲ್ಲಿ ಔಟ್ ಆದ ಕೊಹ್ಲಿಯನ್ನು ರಾಣಾ ನಿಂದಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಒಬ್ಬ ಕಿರಿಯ ಆಟಗಾರ ಭಾರತ ತಂಡದ ನಾಯಕನನ್ನು ನಿಂದಿಸಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗಿದೆ. ರಾಣಾ ಒಂದು ಓವರ್ ಎಸೆದು 11 ರನ್ ನೀಡಿ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್ ವಿಕೆಟ್ ಪಡೆದಿದ್ದರು.

    2 ವಿಕೆಟ್ ಕಳೆದು ಕೊಂಡು 127 ರನ್ ಗಳಿಸಿದ್ದ ಆರ್‌ಸಿಬಿ ಹಠಾತ್ ಎರಡು ವಿಕೆಟ್ ಕಳೆದುಕೊಂಡ ಪರಿಣಾಮ 14.3 ಓವರ್ ಗಳಲ್ಲಿ 127 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

    ಮೊದಲ ಪಂದ್ಯದಲ್ಲೇ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ಕೋಲ್ಕತ್ತಾ ನೈಟ್ ರೈಡರ್ಸ್ ಗೆ ಶರಣಾಗಿದ್ದು, 4 ವಿಕೆಟ್ ಗಳಿಂದ ಗೆಲ್ಲುವ ಮೂಲಕ ಕೆಕೆಆರ್ ಶುಭಾರಂಭ ಮಾಡಿದೆ. 177 ರನ್ ಗಳ ಸವಾಲನ್ನು ಪಡೆದ ಕೋಲ್ಕತ್ತಾ 18.5 ಓವರ್ ಗಳಲ್ಲಿ 177 ರನ್ ಹೊಡೆಯುವ ಮೂಲಕ ಜಯದ ಖಾತೆ ತೆರೆದಿದೆ.

    ಆರ್‌ಸಿಬಿ ಗುರಿ ಬೆನ್ನತ್ತಿದ ಕೆಕೆಆರ್ ಆರಂಭಿಕ ಆಘಾತ ಕ್ರಿಸ್ ಲಿನ್ (5) ಪಡೆದ ಬಳಿಕವೂ ಸುನೀಲ್ ನರೇನ್ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಉತ್ತಮ ಆರಂಭ ಪಡೆಯಿತು. ಕೇವಲ 17 ಎಸೆತಗಳಲ್ಲಿ 5 ಸಿಕ್ಸರ್ 4 ಬೌಂಡರಿಗಳಿಂದ ಅರ್ಧ ಶತಕ ಹೊಡೆದು ಔಟಾದರು. ಈ ವೇಳೆ ಉಮೇಶ್ ಯಾದವ್ ಮಿಂಚಿನ ದಾಳಿ ನಡೆಸಿ ನರೇನ್ (50), ರಾಬಿನ್ ಉತ್ತಪ್ಪ (13) ವಿಕೆಟ್ ಪಡೆದು ಕೆಕೆಆರ್ ವೇಗಕ್ಕೆ ಕಡಿವಾಣ ಹಾಕಿದರು.

    ಬಳಿಕ ಕ್ರೀಸಿಗಿಳಿದ ನಾಯಕ ದಿನೇಶ್ ಕಾರ್ತಿಕ್ ಹಾಗೂ ನಿತೀಶ್ ರಾಣಾ ನಿಧಾನಗತಿಯ ಬ್ಯಾಟಿಂಗ್ ನಡೆಸಿ ತಂಡಕ್ಕೆ ಚೇತರಿಕೆ ನೀಡಿದರು. ಈ ವೇಳೆ ತಲಾ ಎರಡು ಬೌಂಡರಿ, ಸಿಕ್ಸರ್ ಸಿಡಿಸಿದ್ದ ರಾಣಾ ವಾಷಿಂಗ್ಟನ್ ಸುಂದರ್ ಗೆ ವಿಕೆಟ್ ಒಪ್ಪಿಸಿದರು. ವಿಕೆಟ್ ಉರುಳುತ್ತಿದ್ದರೂ ದಿನೇಶ್ ಕಾರ್ತಿಕ್ ಔಟಾಗದೇ 35 ರನ್(29 ಎಸೆತ, 4 ಬೌಂಡರಿ) ಸಿಡಿಸಿ ತಂಡಕ್ಕೆ ಜಯವನ್ನು ತಂದುಕೊಟ್ಟರು.

    ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ನಿಗದಿತ 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತ್ತು. ಆರ್‌ಸಿಬಿ ಪರ ಬ್ಯಾಟಿಂಗ್ ಆರಂಭಿಸಿದ ಕ್ವಿಂಟನ್ ಡಿ ಕಾಕ್ 4 ರನ್ ಗಳಿಸಿ ಪೆವಿಲಿಯನ್ ಸೇರಿದರು. ಬಳಿಕ ಬಳಿಕ ಕ್ರೀಸಿಗಿಳಿದ ನಾಯಕ ಕೊಹ್ಲಿ, ಆರಂಭಿಕ ಆಟಗಾರ ಬ್ರೆಂಡನ್ ಮೆಕಲಮ್ ಜೊತೆ ಸೇರಿ ಬಿರುಸಿನ ಬ್ಯಾಟಿಂಗ್ ಮಾಡಿದರು. ಈ ವೇಳೆ 27 ಎಸೆತಗಳಲ್ಲಿ 43 ರನ್ ಗಳಿಸಿದ್ದ ಮೆಕಲಮ್ ಸುನೀಲ್ ನರೈನ್ ಬೌಲಿಂಗ್ ನಲ್ಲಿ ಬೌಲ್ಡ್ ಆದರು. ಎರಡನೇ ವಿಕೆಟ್ ಗೆ ಕೊಹ್ಲಿ, ಮೆಕಲಮ್ ಜೋಡಿ 41 ರನ್ ಜೊತೆಯಾಟ ನೀಡಿತ್ತು.

    ಬಳಿಕ ಸ್ಫೋಟಕ ಆಟಗಾರ ಎಬಿಡಿ 22 ಎಸೆತಗಳಲ್ಲಿ 5 ಸಿಕ್ಸರ್, 1 ಬೌಂಡರಿ ನೆರವಿನಿಂದ 44 ರನ್ ಸಿಡಿಸಿ 3ನೇ ವಿಕೆಟ್ ಗೆ 64 ರನ್ ಸೇರಿಸಿದರು. ಈ ವೇಳೆ 15ನೇ ಓವರ್‍ನ ಎಸೆದ ನಿತೀಶ್ ರಾಣಾ ಬೌಲಿಂಗ್ ನಲ್ಲಿ ಕ್ಯಾಚ್ ನೀಡಿ ಔಟಾದರು. ನಿಧಾನಗತಿಯ ಬ್ಯಾಟಿಂಗ್ ಮಾಡುತ್ತಿದ್ದ ಕೊಹ್ಲಿ 33 ಎಸೆತಗಳಲ್ಲಿ 31 ರನ್ ಗಳಿಸಿದ್ದ ವೇಳೆ ಇದೇ ಓವರ್ ನಲ್ಲಿ ಬೌಲ್ಡ್ ಆಗುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಬಳಿಕ ಸರ್ಫರಾಜ್ ಖಾನ್ (6) ಬಂದಷ್ಟೇ ವೇಗದಲ್ಲಿ ಔಟಾದರು. ಇನ್ನಿಂಗ್ಸ್ ಕೊನೆಯಲ್ಲಿ ಮಂದೀಪ್ ಸಿಂಗ್ ಬಿರುಸಿನ ಆಟವಾಡಿ ಕೇವಲ 18 ಎಸೆತಗಳಲ್ಲಿ 2 ಸಿಕ್ಸರ್, 4 ಬೌಂಡರಿ ನೆರವಿನಿಂದ 37 ರನ್ ಸಿಡಿಸಿ ತಂಡದ ಸ್ಪರ್ಧಾತ್ಮಕ ಮೊತ್ತ ಗಳಿಸಲು ನೆರವಾದರು.

    ರೈಡರ್ಸ್ ಪರ ವಿನಯ್ ಕುಮಾರ್, ನಿತೀಶ್ ರಾಣಾ, 2 ಪಡೆದರೆ. ಜಾನ್ಸನ್ ಚಾವ್ಲಾ, ಸುನೀಲ್ ನರೇನ್ ತಲಾ ಒಂದು ವಿಕೆಟ್ ಪಡೆದರು.

    https://twitter.com/VinayTr85616518/status/983006469254721536