Tag: Niti Ayog

  • ಮೋದಿ ನೇತೃತ್ವದ ನೀತಿ ಆಯೋಗದ ಸಭೆಗೆ ಸಿದ್ದರಾಮಯ್ಯ ಗೈರು

    ಮೋದಿ ನೇತೃತ್ವದ ನೀತಿ ಆಯೋಗದ ಸಭೆಗೆ ಸಿದ್ದರಾಮಯ್ಯ ಗೈರು

    ನವದೆಹಲಿ: ದೆಹಲಿಯಲ್ಲಿ (Delhi) ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದಲ್ಲಿ ನಡೆಯುತ್ತಿದ್ದ ನೀತಿ ಆಯೋಗದ ಸಭೆಗೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಗೈರಾಗಿದ್ದು, ಇಂತಹ ಮಹತ್ವದ ಸಭೆಗೆ ಬರದಿರಲು ಕಾರಣವೇನು ಎನ್ನುವ ಪ್ರಶ್ನೆ ಎಲ್ಲರಲ್ಲಿ ಮೂಡಿದೆ.

    ದೆಹಲಿಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ವಿಕಸಿತ ಭಾರತಕ್ಕಾಗಿ ವಿಕಸಿತ ರಾಜ್ಯ ಹೆಸರಿನಲ್ಲಿ (Viksit Rajya for Viksit Bharat 2047) ಹತ್ತನೇ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಆರ್ಥಿಕ ಬೆಳವಣಿಗೆ, ಸಾಮಾಜಿಕ ಕಲ್ಯಾಣ, ಮೂಲಸೌಕರ್ಯ ಅಭಿವೃದ್ಧಿ, ಮತ್ತು ಸುಸ್ಥಿರತೆಯಂತಹ ಕ್ಷೇತ್ರಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ.ಇದನ್ನೂ ಓದಿ: ಪ್ರೀತಿಸಿದವನೊಂದಿಗೆ ಮನೆಬಿಟ್ಟು ಹೋದ ಮಗಳು – ಮನನೊಂದು ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಶಂಕೆ

    ಜೊತೆಗೆ ರಾಷ್ಟ್ರೀಯ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮತ್ತು ಸ್ಥಳೀಯ ಅಗತ್ಯತೆಗಳಿಗೆ ತಕ್ಕಂತೆ ನೀತಿಗಳನ್ನು ರೂಪಿಸಲು ಈ ಸಭೆ ವೇದಿಕೆಯಾಗಿದ್ದು, ಸಾಮಾನ್ಯವಾಗಿ ಎಲ್ಲಾ ಸಿಎಂಗಳು ರಾಜ್ಯದ ಅಭಿವೃದ್ಧಿ ವಿಚಾರಗಳಲ್ಲಿ ತಮ್ಮ ವಾದವನ್ನು ಪ್ರಧಾನಿ ಮುಂದೆ ಮಂಡಿಸುತ್ತಾರೆ.

    ಈ ಸಭೆಗೆ ಬಹುತೇಕ ರಾಜ್ಯಗಳ ಮುಖ್ಯಮಂತ್ರಿಗಳು ಆಗಮಿಸಿದ್ದರು. ಈ ಪೈಕಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಹಿಮಾಚಲ ಪ್ರದೇಶ ಸಿಎಂ ಸುಖವಿಂದ್ರ ಸಿಂಗ್ ಸುಖು, ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್, ಜಮ್ಮು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಸೇರಿ ಹಲವು ಇತರೆ ಪಕ್ಷಗಳ ಸಿಎಂಗಳು ಭಾಗಿಯಾಗಿದ್ದರು. ಆದ್ರೆ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಗೈರಾಗಿದ್ದರು.ಇದನ್ನೂ ಓದಿ: `ಯುವನಿಧಿ’ ಗ್ಯಾರಂಟಿ ಹಣದಿಂದ ಲ್ಯಾಪ್‌ಟಾಪ್‌ ಖರೀದಿಸಿದ ವಿದ್ಯಾರ್ಥಿನಿ ಇಶಾ ಆಸಿಫ್‌

  • ನೀತಿ ಆಯೋಗದ ಮಾಜಿ ಉದ್ಯೋಗಿ ಲಂಡನ್‌ನಲ್ಲಿ ಅಪಘಾತಕ್ಕೆ ಬಲಿ

    ನೀತಿ ಆಯೋಗದ ಮಾಜಿ ಉದ್ಯೋಗಿ ಲಂಡನ್‌ನಲ್ಲಿ ಅಪಘಾತಕ್ಕೆ ಬಲಿ

    ಲಂಡನ್: ಲಂಡನ್‌ನಲ್ಲಿ (London) ಪಿಎಚ್‌.ಡಿ ವ್ಯಾಸಂಗ ಮಾಡುತ್ತಿರುವ ನೀತಿ ಆಯೋಗದ (NITI Ayog) ಮಾಜಿ ಉದ್ಯೋಗಿ ಅಪಘಾತದಲ್ಲಿ ದಾರುಣ ಸಾವಿಗೀಡಾಗಿರುವ ಘಟನೆ ನಡೆದಿದೆ.

    ಭಾರತೀಯ ವಿದ್ಯಾರ್ಥಿನಿ ಚೀಸ್ತಾ ಕೊಚ್ಚರ್ (33) ಕಳೆದ ವಾರ ಲಂಡನ್‌ನ ತನ್ನ ಮನೆ ಕಡೆಗೆ ಸೈಕ್ಲಿಂಗ್‌ ಮಾಡುತ್ತಿದ್ದಾಗ ಟ್ರಕ್‌ಗೆ ಸಿಲುಕಿ ಮೃತಪಟ್ಟಿದ್ದಾಳೆ. NITI ಆಯೋಗದೊಂದಿಗೆ ಈ ಹಿಂದೆ ಕೆಲಸ ಮಾಡಿದ್ದ ಚೀಸ್ತಾ ಕೊಚ್ಚರ್, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಪಿಎಚ್‌.ಡಿ ವ್ಯಾಸಂಗ ಮಾಡುತ್ತಿದ್ದರು. ಇದನ್ನೂ ಓದಿ: ಅನಾಗರಿಕ ಭಯೋತ್ಪಾದಕ ಕೃತ್ಯ: ಉಗ್ರರ ದಾಳಿಗೆ ಪುಟಿನ್‌ ಆಕ್ರೋಶ

    NITI ಆಯೋಗದ ಮಾಜಿ ಸಿಇಒ ಅಮಿತಾಭ್ ಕಾಂತ್, ಚೀಸ್ತಾ ಅವರ ಸಾವಿನ ಸುದ್ದಿಯನ್ನು ಆನ್‌ಲೈನ್ ಪೋಸ್ಟ್‌ನಲ್ಲಿ ಹಂಚಿಕೊಂಡು ವಿಷಾದ ವ್ಯಕ್ತಪಡಿಸಿದ್ದಾರೆ.

    ಚೀಸ್ತಾ ಕೊಚಾರ್ ನನ್ನೊಂದಿಗೆ NITI ಆಯೋಗದಲ್ಲಿ ಲೈಫ್ ಕಾರ್ಯಕ್ರಮದಲ್ಲಿ ಕೆಲಸ ಮಾಡಿದ್ದರು. ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನಲ್ಲಿ Ph.D ವ್ಯಾಸಾಂಗಕ್ಕೆ ಹೋಗಿದ್ದರು. ಲಂಡನ್‌ನಲ್ಲಿ ಸೈಕ್ಲಿಂಗ್ ಮಾಡುವಾಗ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಧೈರ್ಯಶಾಲಿ ಹೆಣ್ಣು, ಸದಾ ಜೀವನೋತ್ಸಾಹದಿಂದ ಇರುತ್ತಿದ್ದರು. ತುಂಬ ಬೇಗ ಇಹಲೋಕ ತ್ಯಜಿಸಿಬಿಟ್ಟರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಮಿತಾಭ್ ‌ಪೋಸ್ಟ್‌ ಹಾಕಿದ್ದಾರೆ. ಇದನ್ನೂ ಓದಿ: ರಷ್ಯಾದಲ್ಲಿ ಭೀಕರ ಭಯೋತ್ಪಾದಕ ದಾಳಿ ಪ್ರಕರಣ – 11 ಮಂದಿ ಬಂಧನ

    ಮಾರ್ಚ್ 19 ರಂದು ಚೀಸ್ತಾ ಕೊಚ್ಚರ್ ಅವರಿಗೆ ಕಸದ ಲಾರಿ ಡಿಕ್ಕಿ ಹೊಡೆದಿತ್ತು. ಅಪಘಾತ ಸಂಭವಿಸಿದಾಗ ಆಕೆಯ ಪತಿ ಪ್ರಶಾಂತ್ ಕೂಡ ಮುಂದೆ ಸಾಗುತ್ತಿದ್ದರು. ಅವರು ರಕ್ಷಣೆಗೆ ಧಾವಿಸುಷ್ಟರಲ್ಲೇ ಚೀಸ್ತಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

  • ಪೆಟ್ರೋಲ್, ಡೀಸೆಲ್ ಕಾರುಗಳನ್ನು ನಿಷೇಧಿಸಲ್ಲ – ನಿತಿನ್ ಗಡ್ಕರಿ

    ಪೆಟ್ರೋಲ್, ಡೀಸೆಲ್ ಕಾರುಗಳನ್ನು ನಿಷೇಧಿಸಲ್ಲ – ನಿತಿನ್ ಗಡ್ಕರಿ

    ನವದೆಹಲಿ: ಪೆಟ್ರೋಲ್ ಹಾಗೂ ಡೀಸೆಲ್ ಕಾರ್ ಗಳನ್ನು ನಿಷೇಧಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಸ್ಪಷ್ಟಪಡಿಸಿದ್ದಾರೆ.

    59ನೇ ವಾರ್ಷಿಕ ಭಾರತೀಯ ವಾಹನ ತಯಾರಿಕಾ ಕಂಪನಿಗಳ ಒಕ್ಕೂಟ (ಎಸ್‍ಐಎಎಂ) ಸಮಾವೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳ ನಿಷೇಧದ ಕುರಿತು ಸ್ಪಷ್ಟಪಡಿಸಿದ ಅವರು, ಭಾರತದ ವಾಹನ ಉದ್ಯಮವು ದೇಶದ ರಫ್ತು ಮತ್ತು ಉದ್ಯೋಗಕ್ಕೆ ನೀಡುತ್ತಿರುವ ಕೊಡುಗೆ ಅಪಾರ, ಈ ಬಗ್ಗೆ ಸರ್ಕಾರಕ್ಕೆ ತಿಳಿದಿದೆ. ರಫ್ತು ಹೆಚ್ಚಿರುವುದಕ್ಕೆ ವಾಹನ ಉದ್ಯಮವೇ ಸಾಕ್ಷಿ ಎಂದು ಗಡ್ಕರಿ ಅಭಿಪ್ರಾಯ ಪಟ್ಟರು.

    ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಕಾರ್ ಗಳನ್ನು ನಿಷೇಧಿಸುವ ಕುರಿತ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಆಟೋಮೊಬೈಲ್ ವಲಯ ಸಾಕಷ್ಟು ಉದ್ಯೋಗ ಒದಗಿಸುತ್ತಿದ್ದು, ಮಾತ್ರವಲ್ಲದೆ ರಫ್ತು ಹೆಚ್ಚಿದೆ. ಆದರೆ, ಇದರಿಂದ ಸರ್ಕಾರ ಕೆಲ ಸಮಸ್ಯೆಗಳನ್ನು ಎದುರಿಸುತ್ತಿದೆ. ಮೊದಲನೇಯದು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವ ವೆಚ್ಚ, ಎರಡನೇಯದು ಮಾಲಿನ್ಯ, ಮೂರನೇಯದು ರಸ್ತೆ ಸುರಕ್ಷತೆ ಎಂದು ತಿಳಿಸಿದರು.

    ದೇಶದಲ್ಲಿ ಆಟೋಮೊಬೈಲ್ ಉದ್ಯಮ 4.50 ಲಕ್ಷ ಕೋಟಿ ರೂ. ಮೌಲ್ಯದ್ದಾಗಿದೆ. ಇದರ ಜೊತೆಗೆ ಮಾಲಿನ್ಯವು ದೇಶಕ್ಕೆ ಒಂದು ಪ್ರಮುಖ ವಿಷಯವಾಗಿ ಉಳಿದಿರುವುದರಿಂದ ಶುದ್ಧ ಇಂಧನ ಮೂಲಗಳತ್ತ ಮುಖ ಮಾಡಬೇಕಿದೆ. ಮಾಲಿನ್ಯದ ಸಮಸ್ಯೆಗೆ ವಾಹನಗಳನ್ನು ಮಾತ್ರ ದೂಷಿಸುವುದು ನ್ಯಾಯವಲ್ಲ. ಆದರೆ, ಅವರೂ ಸಹ ಕೆಲವು ಜವಾಬ್ದಾರಿಗಳನ್ನು ಹಂಚಿಕೊಳ್ಳಬೇಕಾಗುತ್ತದೆ. ದೆಹಲಿ ವಿಶ್ವದ ಅತಿ ಹೆಚ್ಚು ವಾಯು ಮಾಲಿನ್ಯ ಹೊಂದಿದ ನಗರಗಳಲ್ಲಿ ಒಂದು. ಅಲ್ಲದೆ, 2018ರಲ್ಲಿ ಹೆಚ್ಚು ಮಾಲಿನ್ಯ ಹೊಂದಿದ ನಗರಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಈ ಸಮಸ್ಯೆಗಳನ್ನು ನಿಭಾಯಿಸಲು ಸರ್ಕಾರ 50 ಸಾವಿರ ಕೋಟಿ ರೂ.ಗಳ ಯೋಜನೆಯನ್ನು ರೂಪಿಸಿದೆ. ಈ ನಿಟ್ಟಿನಲ್ಲಿ ಈಗಾಗಲೇ ಶೇ.29ರಷ್ಟು ಮಾಲಿನ್ಯವನ್ನು ನಿಯಂತ್ರಿಸಲಾಗಿದೆ. ಮಾಲಿನ್ಯವನ್ನು ಕಡಿಮೆ ಮಾಡುವುದು ರಾಷ್ಟ್ರೀಯ ಹಿತಾಸಕ್ತಿಯಾಗಿದೆ ಎಂದು ಗಡ್ಕರಿ ತಿಳಿಸಿದರು.

    ಈ ಹಿಂದೆ ನಡೆದ ನೀತಿ ಆಯೋಗದ ಸಭೆಯಲ್ಲಿ 2025ರ ವೇಳೆಗೆ ಎಲ್ಲ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳನ್ನು ಎಲೆಕ್ಟ್ರಿಕ್ ಎಂಜಿನ್ ಆಗಿ ಪರಿವರ್ತಿಸಲಾಗುವುದು ಎದು ನಿರ್ಧರಿಸಲಾಗಿತ್ತು.

    ನೀತಿ ಆಯೋಗದ `ಥಿಂಕ್ ಟ್ಯಾಂಕ್’ ಸಭೆಯಲ್ಲಿ ಈ ನಿರ್ಧಾರದ ಕುರಿತು ಎಲೆಕ್ಟ್ರಿಕ್ ವಾಹನಗಳ ಉತ್ಪಾದಕರು ಹಾಗೂ ಸ್ಟಾರ್ಟ್ ಅಪ್ ತಯಾರಿಕರೊಂದಿಗೆ ಚರ್ಚಿಸಲಾಗಿತ್ತು. ಮಾಲಿನ್ಯ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳದಿದ್ದರೆ, ನ್ಯಾಯಾಲಯ ಈ ಕುರಿತು ಕ್ರಮ ಕೈಗೊಳ್ಳುತ್ತದೆ ಎಂದು ಕಂಪನಿಗಳಿಗೆ ನೀತಿ ಆಯೋಗದ ಸಭೆಯಲ್ಲಿ ಎಚ್ಚರಿಕೆ ನೀಡಲಾಗಿತ್ತು.

    ಇದಕ್ಕೆ ಹಲವು ಆಟೋಮೊಬೈಲ್ ಕಂಪನಿಗಳು ಆಕ್ಷೇಪ ವ್ಯಕ್ತಪಡಿಸಿ, ಈ ಕುರಿತು ಸೂಕ್ತ ನೀತಿ ಮತ್ತು ಮಾರ್ಗದರ್ಶನವಿಲ್ಲದೆ ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸಲು ಸಾಧ್ಯವಿಲ್ಲ. ನೀತಿಗಳನ್ನು ಸ್ಪಷ್ಟವಾಗಿಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದವು. ಇದಕ್ಕೆ ಪ್ರತಿಯಾಗಿ, ಹೆಚ್ಚು ವಾಯು ಮಾಲಿನ್ಯ ಹೊಂದಿದ 15ರ ಪೈಕಿ 14 ನಗರಗಳು ಭಾರತದಲ್ಲಿವೆ. ಸರ್ಕಾರ ಮತ್ತು ಕಂಪನಿಗಳು ಈ ಕುರಿತು ಕ್ರಮ ಕೈಗೊಳ್ಳದಿದ್ದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಲಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಎಚ್ಚರಿಸಿದ್ದರು.

    2023ರ ವೇಳೆಗೆ ತ್ರಿಚಕ್ರ ವಾಹನಗಳನ್ನು ಸಂಪೂರ್ಣವಾಗಿ ಎಲೆಕ್ಟ್ರಿಕ್‍ಗೆ ಪರಿವರ್ತಿಸಬೇಕು, 2025ರ ವೇಳೆಗೆ 150 ಸಿಸಿಗಿಂತ ಕಡಿಮೆ ಎಂಜಿನ್ ಸಾಮಥ್ರ್ಯ ಹೊಂದಿರುವ ದ್ವಿಚಕ್ರ ವಾಹನಗಳನ್ನು ಎಲೆಕ್ಟ್ರಿಕ್‍ಗೆ ಪರಿವರ್ತಿಸಲು ನೀತಿ ಆಯೋಗ ಯೋಜನೆ ರೂಪಿಸಿದೆ.

  • ನೀರು ನಿರ್ವಹಣೆ – 5ಕ್ಕೆ ಜಾರಿದ ಕರ್ನಾಟಕ, ಗುಜರಾತ್‍ಗೆ ಮೊದಲ ಸ್ಥಾನ

    ನೀರು ನಿರ್ವಹಣೆ – 5ಕ್ಕೆ ಜಾರಿದ ಕರ್ನಾಟಕ, ಗುಜರಾತ್‍ಗೆ ಮೊದಲ ಸ್ಥಾನ

    ನವದೆಹಲಿ: 2017-18ನೇ ಸಾಲಿನ ಸಂಯೋಜಿತ ನೀರು ನಿರ್ವಹಣೆ ಸೂಚ್ಯಂಕ(ಸಿಡಬ್ಲ್ಯೂಎಂಐ 2.0) ವರದಿ ಬಿಡುಗಡೆಯಾಗಿದ್ದು, ಗುಜರಾತ್ ಪ್ರಥಮ ಸ್ಥಾನ ಪಡೆದರೆ, ಕರ್ನಾಟಕ 5ನೇ ಸ್ಥಾನ ಪಡೆದಿದೆ.

    ವರದಿಯನ್ನು ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಬಿಡುಗಡೆ ಮಾಡಿದ್ದು, ಶೇ.80ರಷ್ಟು ರಾಜ್ಯಗಳಲ್ಲಿ ನೀರಿನ ನಿರ್ವಹಣೆ ಕುರಿತು ಅಧ್ಯಯನ ನಡೆಸಿ ಈ ವರದಿ ತಯಾರಿಸಲಾಗಿದೆ. ಕಳೆದ ಮೂರು ವರ್ಷಗಳಿಂದ ನೀರಿನ ನಿರ್ವಹಣೆಯಲ್ಲಿ ಬೆಳವಣಿಗೆ ಕಂಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

    ಕಳೆದ ಬಾರಿಯೂ ಗುಜರಾತ್ ಮೊದಲ ಸ್ಥಾನದಲ್ಲಿತ್ತು. ಈ ಬಾರಿ ಸಹ ಗುಜರಾತ್ ಮೊದಲ ಸ್ಥಾನ ಪಡೆದಿದ್ದು, ಆಂಧ್ರ ಪ್ರದೇಶ ದ್ವಿತೀಯ, ಮಧ್ಯ ಪ್ರದೇಶ ತೃತೀಯ, ಗೋವಾ ನಾಲ್ಕು, ಕರ್ನಾಟಕ ಐದು ಹಾಗೂ ತಮಿಳುನಾಡು ಆರನೇ ಸ್ಥಾನ ಪಡೆದಿವೆ. ಕಳೆದ ಬಾರಿ ಕರ್ನಾಟಕ 4ನೇ ಸ್ಥಾನ ಪಡೆದಿತ್ತು.

    ಈಶಾನ್ಯ ಹಾಗೂ ಹಿಮಾಲಯನ್ ರಾಜ್ಯಗಳ ಪೈಕಿ ಹಿಮಾಚಲ ಪ್ರದೇಶ ಪ್ರಥಮ ಸ್ಥಾನ ಪಡೆದಿದ್ದರೆ, ಉತ್ತರಾಖಂಡ್, ತ್ರಿಪುರ ಮತ್ತು ಅಸ್ಸಾಂ ನಂತರದ ಸ್ಥಾನಗಳಲ್ಲಿವೆ. ಕೇಂದ್ರಾಡಳಿತ ಪ್ರದೇಶಗಳು ಈ ಬಾರಿ ಮೊದಲ ಬಾರಿಗೆ ಅಂಕಿ ಅಂಶಗಳನ್ನು ಸಲ್ಲಿಸಿದ್ದು, ಈ ಪಟ್ಟಿಯಲ್ಲಿ ಪುದುಚೇರಿ ಮೊದಲ ಸ್ಥಾನ ಪಡೆದಿದೆ.

    ಸಾಮಾನ್ಯ ರಾಜ್ಯಗಳ ಪೈಕಿ ಹರ್ಯಾಣ ಹಾಗೂ ಈಶಾನ್ಯ ಮತ್ತು ಹಿಮಾಲಯನ್ ರಾಜ್ಯಗಳ ಪೈಕಿ ಉತ್ತರಾಖಂಡ್ ಪ್ರಥಮ ಸ್ಥಾನ ಪಡೆದಿವೆ. ಕಳೆದ ಮೂರು ವರ್ಷಗಳಲ್ಲಿ ಸರಾಸರಿ ಶೇ.80 ರಷ್ಟು ರಾಜ್ಯಗಳು ನೀರು ನಿರ್ವಹಣೆ ಕುರಿತ ಅಂಕಿ ಅಂಶಗಳನ್ನು ಸಲ್ಲಿಸಿದ್ದು, ಬೆಳವಣಿಗೆ ಕಾಣುತ್ತಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

    ನೀರಿನ ವೈಜ್ಞಾನಿಕ ನಿರ್ವಹಣೆಯು ಭಾರತದ ಬೆಳವಣಿಗೆ ಮತ್ತು ಪರಿಸರ ವ್ಯವಸ್ಥೆಯ ಸುಸ್ಥಿರತೆಗೆ ಪ್ರಮುಖವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

    ನೀರಿನ ನಿರ್ವಹಣೆ ಕುರಿತು ರಾಜ್ಯಗಳ ನಡುವೆ ಸಹಕಾರ ಮನೋಭವನೆ ಹಾಗೂ ವೈಜ್ಞಾನಿಕವಾಗಿ ನೀರು ನಿರ್ವಹಿಸುವಲ್ಲಿ ರಾಜ್ಯಗಳ ನಡುವೆ ಸ್ಪರ್ಧಾತ್ಮಕತೆ ಹುಟ್ಟುಹಾಕುವ ದೃಷ್ಟಿಯಿಂದ 2018ರಲ್ಲಿ ಮೊದಲ ಬಾರಿಗೆ ನೀತಿ ಆಯೋಗ ಸಲಹೆಯಂತೆ ನೀರು ನಿರ್ವಹಣಾ ಸೂಚ್ಯಂಕ ಬಿಡುಗಡೆಯಾಗುತ್ತಿದೆ. ನೀರಿನ ನಿರ್ವಹಣೆ ಹಾಗೂ ಜೀವನ ಚಕ್ರದಲ್ಲಿ ನೀರಿನ ಬಳಕೆಯ ವಿವಿಧ ಆಯಾಮಗಳನ್ನು ಅಳೆಯುವ ಪ್ಯಾನ್ ಇಂಡಿಯಾದ ಭಗವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

  • 2025ರ ಒಳಗಡೆ 150 ಸಿಸಿ ಕೆಳಗಿನ ಬೈಕ್‍ಗಳನ್ನು ಎಲೆಕ್ಟ್ರಿಕ್‍ಗೆ ಪರಿವರ್ತಿಸಿ – ನೀತಿ ಆಯೋಗ ಸೂಚನೆ

    2025ರ ಒಳಗಡೆ 150 ಸಿಸಿ ಕೆಳಗಿನ ಬೈಕ್‍ಗಳನ್ನು ಎಲೆಕ್ಟ್ರಿಕ್‍ಗೆ ಪರಿವರ್ತಿಸಿ – ನೀತಿ ಆಯೋಗ ಸೂಚನೆ

    ನವದೆಹಲಿ: 2025ರ ವೇಳೆಗೆ ಎಲ್ಲ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳನ್ನು ಎಲೆಕ್ಟ್ರಿಕ್ ಎಂಜಿನ್ ಆಗಿ ಪರಿವರ್ತಿಸುವ ಕುರಿತು ಎರಡು ವಾರಗಳಲ್ಲಿ ತಮ್ಮ ನಿರ್ಧಾರ ತಿಳಿಸುವಂತೆ ವಾಹನ ತಯಾರಿಕಾ ಕಂಪನಿಗಳಿಗೆ ನೀತಿ ಆಯೋಗದ ಸಭೆಯಲ್ಲಿ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಶುಕ್ರವಾರ ನಡೆದ ನೀತಿ ಆಯೋಗದ ‘ಥಿಂಕ್ ಟ್ಯಾಂಕ್’ ಸಭೆಯಲ್ಲಿ ಈ ನಿರ್ಧಾರದ ಕುರಿತು ಎಲೆಕ್ಟ್ರಿಕ್ ವಾಹನಗಳ ಉತ್ಪಾದಕರು ಹಾಗೂ ಸ್ಟಾರ್ಟ್ ಅಪ್ ತಯಾರಿಕರೊಂದಿಗೆ ಚರ್ಚಿಸಲಾಗಿದೆ. ಮಾಲಿನ್ಯ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳದಿದ್ದರೆ, ನ್ಯಾಯಾಲಯ ಈ ಕುರಿತು ಕ್ರಮ ಕೈಗೊಳ್ಳುತ್ತದೆ ಎಂದು ಕಂಪನಿಗಳಿಗೆ ನೀತಿ ಆಯೋಗದ ಸಭೆಯಲ್ಲಿ ಎಚ್ಚರಿಕೆ ನೀಡಲಾಗಿದೆ.

    ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಹಾಗೂ ಸಿಇಓ ಅಮಿತಾಬ್ ಕಾಂತ್ ಅವರ ನೇತೃತ್ವದಲ್ಲಿ ನಡೆದ ನೀತಿ ಆಯೋಗದ ‘ಥಿಂಕ್ ಟ್ಯಾಂಕ್’ ಸಭೆಯಲ್ಲಿ ಬಜಾಜ್ ಆಟೋ ಎಂಡಿ ರಾಜೀವ್ ಬಜಾಜ್, ಟಿವಿಎಸ್ ಮೋಟರ್ಸ್ ಕಂ. ಅಧ್ಯಕ್ಷ ವೇಣು ಶ್ರೀನಿವಾಸನ್, ಹೋಂಡಾ ಮೋಟರ್‍ಸೈಕಲ್ ಆಂಡ್ ಸ್ಕೂಟರ್ ಇಂಡಿಯಾದ ಅಧ್ಯಕ್ಷ ಮತ್ತು ಸಿಇಓ ಮಿನೋರು ಕಟೊ ಹಾಗೂ ಪ್ರಧಾನ ನಿರ್ದೇಶಕ ವಿಷ್ಣು ಮಾಥೂರ್ ಹಾಗೂ ಆಟೊಮೋಟಿವ್ ಕಾಂಪೋನೆಂಟ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಪ್ರಧಾನ ನಿರ್ದೇಶಕ ವಿನೀ ಮೆಹ್ತಾ ಸೇರಿದಂತೆ ಪ್ರಮುಖ ದ್ವಿಚಕ್ರ ವಾಹನ ಉತ್ಪಾದಕ ಸಂಸ್ಥೆಗಳ ಅಧಿಕಾರಿಗಳು ಭಾಗವಹಿಸಿದ್ದರು.

    ಈ ಕುರಿತು ಸೂಕ್ತ ನೀತಿ ಮತ್ತು ಮಾರ್ಗದರ್ಶನವಿಲ್ಲದೆ ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸಲು ಸಾಧ್ಯವಿಲ್ಲ. ನೀತಿಗಳನ್ನು ಸ್ಪಷ್ಟವಾಗಿಡಲು ಸಾಧ್ಯವಿಲ್ಲ. ಹೆಚ್ಚು ವಾಯು ಮಾಲಿನ್ಯ ಹೊಂದಿದ 15ರ ಪೈಕಿ 14 ನಗರಗಳು ಭಾರತದಲ್ಲಿವೆ. ಸರ್ಕಾರ ಮತ್ತು ಕಂಪನಿಗಳು ಈ ಕುರಿತು ಕ್ರಮ ಕೈಗೊಳ್ಳದಿದ್ದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಲಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಎಚ್ಚರಿಸಿದ್ದಾರೆ.

    2023ರ ವೇಳೆಗೆ ತ್ರಿಚಕ್ರ ವಾಹನಗಳನ್ನು ಸಂಪೂರ್ಣವಾಗಿ ಎಲೆಕ್ಟ್ರಿಕ್‍ಗೆ ಪರಿವರ್ತಿಸಬೇಕು, 2025ರ ವೇಳೆಗೆ 150 ಸಿಸಿಗಿಂತ ಕಡಿಮೆ ಎಂಜಿನ್ ಸಾಮಥ್ರ್ಯ ಹೊಂದಿರುವ ದ್ವಿಚಕ್ರ ವಾಹನಗಳನ್ನು ಎಲೆಕ್ಟ್ರಿಕ್‍ಗೆ ಪರಿವರ್ತಿಸಲು ನೀತಿ ಆಯೋಗ ಯೋಜನೆ ರೂಪಿಸಿದೆ.

    ಸಭೆ ನಂತರ ಅಮಿತಾಬ್ ಕಾಂತ್ ಈ ಕುರಿತು ಟ್ವೀಟ್ ಮಾಡಿದ್ದು, ಎಲೆಕ್ಟ್ರಿಕ್ ವಾಹನಗಳ ಕ್ರಾಂತಿ ಮಾಡಲು ನೀತಿ ಆಯೋಗದ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ಜಾಗತಿಕವಾಗಿ ಎಲೆಕ್ಟ್ರಿಕ್ ವಾಹನಗಳ ಚಾಲಕನಾಗಲು ಭಾರತ ತುದಿಗಾಲಲ್ಲಿ ನಿಂತಿದೆ. ಎಲೆಕ್ಟ್ರಿಕ್ ವಾಹನಗಳು ಚಲನಶೀಲತೆ ಭವಿಷ್ಯ ಎಂದು ಎಲ್ಲರೂ ಒಪ್ಪಿಕೊಂಡಿದ್ದು, ಮೋರ್ಥ್ ಹಾಗೂ ಡಿಎಚ್‍ಐನ ಕಾರ್ಯದರ್ಶಿ ರಾಜೀವ್ ಕುಮಾರ್ ಅವರು ಸಭೆಯ ನೇತೃತ್ವ ವಹಿಸಿದ್ದರು ಎಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

    ಭಾರತ ಈಗಾಗಲೇ ಎಲೆಕ್ಟ್ರಾನಿಕ್ಸ್ ಕ್ರಾಂತಿ ಮತ್ತು ಸೆಮಿ ಕಂಡಕ್ಟರ್ ಕ್ರಾಂತಿಯನ್ನು ತಪ್ಪಿಸಿಕೊಂಡಿದ್ದು, ವಿದ್ಯುತ್ ವಾಹನಗಳ ಕ್ರಾಂತಿಯನ್ನು ತಪ್ಪಿಸಿಕೊಳ್ಳಬಾರದು. ಈಗಿರುವ ಕಂಪನಿಗಳು ಈ ಕುರಿತು ನಿರ್ಧರಿಸದಿದ್ದರೆ ಇತರೆ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುತ್ತವೆ. ಈ ಕುರಿತು ಈಗಾಗಲೇ ಚೀನಾದಲ್ಲಿ ನಡೆದಿದೆ. ಆದರೆ, ಇದನ್ನು ಉದ್ಯಮಗಳ ಮೇಲೆ ಹೇರಲು ಸರ್ಕಾರ ಇಚ್ಛಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮೂಲಗಳ ಪ್ರಕಾರ ಸಾಂಪ್ರದಾಯಿಕ ಉತ್ಪಾದಕರಾದ ಬಜಾಜ್ ಆಟೋ, ಹೀರೋ ಮೋಟೊಕಾರ್ಪ್, ಎಚ್‍ಎಂಎಸ್‍ಐ ಹಾಗೂ ಟಿವಿಎಸ್ ಕಂಪನಿಗಳು ಈ ಕುರಿತು ವಿರೋಧ ವ್ಯಕ್ತಪಡಿಸಿದ್ದು, ಕೈನಿಟಿಕ್ ಗ್ರೀನ್ ಎನರ್ಜಿ ಮತ್ತು ಪವರ್ ಸೆಲ್ಯೂಶನ್ಸ್ ಮತ್ತು ಟಾರ್ಕ್ ಮೋಟರ್ಸ್ ಸೇರಿದಂತೆ ಇತರ ಕಂಪನಿಗಳು ಶೀಘ್ರದಲ್ಲೇ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಪ್ರಾರಂಭಿಸಲಾಗುವುದು ಎಂದು ತಿಳಿಸಿವೆ.

    ವಾಯು ಮಲಿನ್ಯದ ಸಮಸ್ಯೆಯಿಂದಾಗಿ 2023ರೊಳಗೆ ಎಲೆಕ್ಟ್ರಿಕ್ ವಾಹನಗಳಿಗೆ ಪರಿವರ್ತಿಸಲು ಬಯಸುತ್ತೇವೆ ಎಂದು ರೀವೋಲ್ಟ್ ಇಂಟಲಿಕಾರ್ಪ್ ಸ್ಥಾಪಕ ರಾಹುಲ್ ಶರ್ಮಾ ತಿಳಿಸಿದ್ದಾರೆ.

    ಬಜಾಜ್ ಮತ್ತು ಟಿವಿಎಸ್ ಕಂಪನಿಗಳು ಕಳೆದ ತಿಂಗಳು ಈ ಕುರಿತು ಪ್ರತಿಕ್ರಿಯಿಸಿವೆ. ಪ್ರಸ್ತುತ ಪೆಟ್ರೋಲ್, ಗ್ಯಾಸ್ ವಾಹನಗಳನ್ನು ನಿಷೇಧಿಸಿ, 2025ರ ವೇಳೆಗೆ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳನ್ನಾಗಿ ಪರಿವರ್ತಿಸುವುದು ಅವಾಸ್ತವಿಕವಾಗಿದೆ. ಈ ರೀತಿಯ ಕ್ರಮ ಕೈಗೊಳ್ಳಲು ಇದು ಸೂಕ್ತ ಸಮಯವಲ್ಲ. ಇದರಿಂದ ದೇಶದಲ್ಲಿ ವಾಹನ ಉತ್ಪಾದನೆ ಹಳಿ ತಪ್ಪಲಿದೆ ಎಂದು ವಾದಿಸಿವೆ.

    ಸರ್ಕಾರದ ದಿಢೀರ್ ನಿರ್ಧಾರದಿಂದ ಕಂಪನಿಗಳು ಬಿಎಸ್(ಭಾರತ್ ಸ್ಟೇಜ್) 3ಯಿಂದ ಬಿಎಸ್-4ಗೆ ಎಂಜಿನ್‍ಗಳನ್ನು ಅಪ್‍ಗ್ರೇಡ್ ಮಾಡುತ್ತಿವೆ. ಇದೇ ಸಮಯದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುವುದು ಹೇಗೆ ಸಾಧ್ಯ? ದರಿಂದ ಉದ್ಯಮದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸುವ ಕುರಿತು ಹೆಚ್ಚು ಜಾಗರೂಕತೆ ಮತ್ತು ವಾಸ್ತವಿಕ ಮಾರ್ಗಸೂಚಿಗಳನ್ನು ತಯಾರಿಸಬೇಕಿದೆ ಎಂದು ಹೀರೋ ಮೋಟೊಕಾರ್ಪ್ ಸರ್ಕಾರದ ನಿರ್ಧಾರದ ಕುರಿತು ಪ್ರತಿಕ್ರಿಯಿಸಿದೆ.

    ವಾಹನ ಉದ್ಯಮ ಸಂಸ್ಥೆಗಳಾದ ಎಸ್‍ಐಎಎಂ ಮತ್ತು ಎಸಿಎಂಎಗಳೂ ಸಹ ಈ ಕುರಿತು ಸರ್ಕಾರಕ್ಕೆ ಸಲಹೆ ನೀಡಿದ್ದು, ಎಲೆಕ್ಟ್ರಿಕ್ ವಾಹನಗಳ ತಯಾರಿಕೆಗೆ ಸೂಕ್ತ ಮರ್ಗಸೂಚಿಗಳು ಹಾಗೂ ಪ್ರಾಯೋಗಿಕ ಸಮಯಾವಕಾಶ ನೀಡುವಂತೆ ತಿಳಿಸಿವೆ.

    ಉದ್ಯಮ ಸಂಸ್ಥೆ ಸಿಐಐ ಸಹ ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸುವ ಕುರಿತು ಗುರಿ ಮತ್ತು ಸಮಯದ ಗಡುವನ್ನು ಅಂತಿಮಗೊಳಿಸುವ ಮೊದಲು ಸರ್ಕಾರ ಸೂಕ್ತ ಸಮಾಲೋಚನೆ ನಡೆಸಬೇಕು ಎಂದು ತಿಳಿಸಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಮೋದಿ ನೇತೃತ್ವದ ‘ಒಂದೇ ದೇಶ, ಒಂದೇ ಚುನಾವಣೆ’ ಸಭೆಗೆ 5 ಪಕ್ಷಗಳ ನಾಯಕರು ಗೈರು

    ಮೋದಿ ನೇತೃತ್ವದ ‘ಒಂದೇ ದೇಶ, ಒಂದೇ ಚುನಾವಣೆ’ ಸಭೆಗೆ 5 ಪಕ್ಷಗಳ ನಾಯಕರು ಗೈರು

    – ಭಾಗಿಯಾಗದ ಮೂರು ಪಕ್ಷಗಳ ಪ್ರಮುಖ ನಾಯಕರು

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ‘ಒಂದೇ ದೇಶ, ಒಂದೇ ಚುನಾವಣೆ’ ಹಾಗೂ ‘ನೀತಿ ಆಯೋಗದ’ ಕುರಿತ ಸರ್ವ ಪಕ್ಷಗಳ ಸಭೆಗೆ ಕಾಂಗ್ರೆಸ್, ಮಮತಾ ಬ್ಯಾನರ್ಜಿ, ಮಾಯಾವತಿ ಹಾಗೂ ಇತರ 5 ಪಕ್ಷಗಳ ನಾಯಕರು ಗೈರಾಗಿದ್ದಾರೆ.

    ‘ಒಂದೇ ದೇಶ, ಒಂದೇ ಚುನಾವಣೆ’ ಹಾಗೂ ಮಹತ್ವಾಕಾಂಕ್ಷಿ ಜಿಲ್ಲೆಗಳ ಅಭಿವೃದ್ಧಿ ಕುರಿತು ನಡೆಯುತ್ತಿರುವ ‘ನೀತಿ ಆಯೋಗ’ದ ಸಭೆಗಳಿಗೆ ವಿರೋಧ ಪಕ್ಷದ ನಾಯಕರು ಸೇರಿದಂತೆ ವಿವಿಧ ಐದು ಪಕ್ಷಗಳ ನಾಯಕರು ಗೈರಾಗುವ ಮೂಲಕ ನಿರ್ಲಕ್ಷ್ಯ ವಹಿಸಿದ್ದಾರೆ.

    ಕಾಂಗ್ರೆಸ್ ಸಭೆಯಲ್ಲಿ ಭಾಗವಹಿಸಲು ನಿರಾಕರಿಸಿದ್ದು, ಮಮತಾ ಬ್ಯಾನರ್ಜಿ ಚಲನಶೀಲತೆ ಇಲ್ಲದ ಪಕ್ಷ ಎಂದು ಟೀಕಿಸಿದ್ದಾರೆ. ಮಾಯಾವತಿ ಅವರು ಸರ್ಕಾರದ ಕುರಿತು ಅಪಹಾಸ್ಯ ಮಾಡಿದ್ದಾರೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಡಿಎಂಕೆ ಮುಖಂಡ ಎಂ.ಕೆ.ಸ್ಟಾಲಿನ್ ಅವರೂ ಸಹ ಸಭೆಗೆ ಹಾಜರಾಗಿಲ್ಲ. ಇನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮಾಜಿ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ತಮ್ಮ ಪಕ್ಷದ ಮುಖಂಡರನ್ನು ಕಳುಹಿಸಿದ್ದಾರೆ.

    ಇಂದು ಸಭೆಯ ಕುರಿತಾಗಿ ನಡೆದ 10 ಪ್ರಮುಖ ಬೆಳವಣಿಗೆಗಳು

    1. ಹಣ ಹಾಗೂ ಸಮಯವನ್ನು ಉಳಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ‘ಒಂದೇ ದೇಶ ಒಂದೇ ಚುನಾವಣೆ’ ಕುರಿತು ಸರ್ವ ಪಕ್ಷಗಳ ಅಭಿಪ್ರಾಯಗಳನ್ನು ತಿಳಿಸಲು ಸಭೆ ಕರೆಯಲಾಗಿತ್ತು. ಆದರೆ, ವಿರೋಧ ಪಕ್ಷಗಳು ಗೈರಾಗುವ ಮೂಲಕ ನಿರಾಸಕ್ತಿ ವಹಿಸಿದ್ದು, ಈ ನಿರ್ಧಾರ ಫೆಡರಲ್ ತತ್ವಗಳಿಗೆ ವಿರುದ್ಧವಾಗಿವೆ ಎಂದು ತಿಳಿಸಿವೆ.

    2. ‘ಒಂದೇ ದೇಶ ಒಂದೇ ಚುನಾವಣೆ’ ಚಿಂತನೆ ಕುರಿತು ಸಂವಿಧಾನ ತಿದ್ದುಪಡಿಗೆ ರಾಜ್ಯಸಭೆ ಹಾಗೂ ಲೋಕಸಭೆ ಎರಡರಲ್ಲೂ ಸಹ ಮೂರನೇ ಎರಡಷ್ಟು ಬಹುಮತ ಸಾಬೀತು ಪಡಿಸಬೇಕು. ಹೀಗಾಗಿ ಸರ್ವ ಪಕ್ಷಗಳ ಮನವೊಲಿಸಲು ಬಿಜೆಪಿ ಈ ಸಭೆ ಕರೆದಿದೆ.

    3. ಈ ಕುರಿತು ಬಿಎಸ್‍ಪಿಯ ಮಾಯಾವತಿ ಅವರು ಪ್ರತಿಕ್ರಿಯಿಸಿ, ಬ್ಯಾಲೆಟ್ ಪೇಪರ್ ಬಳಕೆಯನ್ನು ಬಿಟ್ಟು ವಿದ್ಯುನ್ಮಾನ ಮತ ಯಂತ್ರಗಳನ್ನೇ ಬಳಸುತ್ತಿರುವುದು ಮೊಂಡುತನವಾಗಿದ್ದು, ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ಹಾಕುವ ಬೆದರಿಕೆಯಾಗಿದೆ ಎಂದು ಹೇಳಿದ್ದಾರೆ.

    4. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಮಂಗಳವಾರ ಪತ್ರ ಬರೆದು, ‘ಒಂದೇ ದೇಶ ಒಂದೇ ಚುನಾವಣೆ’ ಕುರಿತು ಪ್ರತಿಕ್ರಿಯಿಸಲು ಒಂದೇ ಸಭೆ ಸಾಕಾಗುವುದಿಲ್ಲ ಎಂದು ವಾದಿಸಿ, ಈ ಕುರಿತು ಸರ್ಕಾರ ಶ್ವೇತಪತ್ರ ಪತ್ರ ಹೊರಡಿಸಿ, ತಜ್ಞರನ್ನು ಸಂಪರ್ಕಿಸಿ, ಪ್ರತಿಕ್ರಿಸುವಂತೆ ಪತ್ರದಲ್ಲಿ ತಿಳಿಸಿದ್ದಾರೆ.

    5. ಮಮತಾ ಬ್ಯಾನರ್ಜಿ ನೀತಿ ಆಯೋಗದ ಸಭೆಗೂ ತಗಾದೆ ಎತ್ತಿದ್ದು, ನೀತಿ ಆಯೋಗದ ಪ್ರಸ್ತಾವನೆ ಮಹತ್ವಾಕಾಂಕ್ಷೆಯ ಜಿಲ್ಲೆಗಳ ಅಭಿವೃದ್ಧಿಯಂತಹ ಯೋಜನೆಗಳನ್ನು ತೃಣಮೂಲ ಕಾಂಗ್ರೆಸ್ ವಿರೋಧಿಸುತ್ತದೆ. ಇದು ರಾಜ್ಯದ ಎಲ್ಲ ಜಿಲ್ಲೆಗಳ ಸಮತೋಲನ ಹಾಗೂ ಏಕರೂಪತೆಯ ಅಭಿವೃದ್ಧಿ ಸಾಧಿಸುವ ಉದ್ದೇಶಗಳಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.

    6. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ನಿಯೋಜಿತ ಪ್ರತಿನಿಧಿಗಳನ್ನಾಗಿ ಎಎಪಿಯಿಂದ ರಾಘವ್ ಚಂಧ, ಟಿಡಿಪಿಯಿಂದ ಜಯದೇವ್ ಗಲ್ಲ ಅವರನ್ನು ಕಳುಹಿಸಿದ್ದಾರೆ.

    7. ಸಭೆಯಿಂದ ರಾಜ್ಯಕ್ಕೆ ಏನೂ ಸಹಾಯವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್, ತಮ್ಮ ಮಗ ಹಾಗೂ ಪಕ್ಷದ ಮುಖ್ಯಸ್ಥ ಕೆ.ಟಿ.ರಾಮ ರಾವ್ ಅವರನ್ನು ಕಳುಹಿಸಿದ್ದಾರೆ.

    8. ಚರ್ಚೆ ಮಾಡಲು ಏನಿದೆ? ನಾವು ಕೇಂದ್ರ ಸರ್ಕಾರದೊಂದಿಗೆ ಸಾಂವಿಧಾನಿಕ ಸಂಪರ್ಕವನ್ನು ಮಾತ್ರ ಹೊಂದಿದ್ದೇವೆ. ಈಗಲೂ ನಾನು ಫೆಡರಲ್ ಫ್ರಂಟ್‍ನ್ನು ಬೆಂಬಲಿಸುತ್ತೇನೆ. ಕೇಂದ್ರದೊಂದಿಗೆ ಮಾತನಾಡಿ ಏನೂ ಪ್ರಯೋಜನವಿಲ್ಲ. ಈವರೆಗೆ ಕೇಂದ್ರದಿಂದ ಒಂದು ರೂಪಾಯಿನೂ ಪಡೆದಿಲ್ಲ. ಮೋದಿ ಅವರು ಫ್ಯಾಸಿಸ್ಟ್ ಸರ್ಕಾರ ನಡೆಸುತ್ತಿದ್ದಾರೆ ಎಂದು ಈಗಾಗಲೇ ಹೇಳಿದ್ದೇನೆ ಚಂದ್ರಶೇಖರ್ ರಾವ್ ತಿಳಿಸಿದ್ದಾರೆ.

    9. ಏಕಕಾಲಿಕ ಚುನಾವಣೆ ಮಾತ್ರವಲ್ಲದೆ, ಸಭೆಯಲ್ಲಿ ನೀತಿ ಆಯೋಗದ ಪ್ರಸ್ತಾವನೆ ಕುರಿತೂ ಸಹ ಚರ್ಚಿಸಿಲಾಗುತ್ತಿದೆ. ಮಹತ್ವಾಕಾಂಕ್ಷಿಯ ಜಿಲ್ಲೆಗಳು ಎಂಬ ಯೋಜನೆ ಕುರಿತು ಚರ್ಚೆ ನಡೆಯಲಿದ್ದು, 28 ರಾಜ್ಯಗಳ 117 ಜಿಲ್ಲೆಗಳ ಸಾಮಾಜಿಕ-ಆರ್ಥಿಕ ಚಟುವಟಿಕೆಗಳು ಚುರುಕು ಪಡೆಯಲಿವೆ.

    10. ಸಭೆಯಲ್ಲಿ ಈ ವರ್ಷ ಆಚರಿಸಲಾಗುವ ಮಹತ್ಮಾ ಗಾಂಧಿ ಅವರ 150ನೇ ಜನ್ಮ ದಿನಾಚರಣೆ ಹಾಗೂ 2022ಕ್ಕೆ ಆಚರಿಸಲಾಗುತ್ತಿರುವ ಸ್ವಾತಂತ್ರ್ಯ ದಿನಾಚರಣೆಯ 75ನೇ ವರ್ಷಾಚರಣೆಯ ಕುರಿತು ಚರ್ಚಿಸಲಾಗುತ್ತಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ನೀತಿ ಆಯೋಗದ ಮೊದಲ ಸಭೆಗೆ ಮೂವರು ಮುಖ್ಯಮಂತ್ರಿಗಳು ಗೈರು

    ನೀತಿ ಆಯೋಗದ ಮೊದಲ ಸಭೆಗೆ ಮೂವರು ಮುಖ್ಯಮಂತ್ರಿಗಳು ಗೈರು

    ನವದೆಹಲಿ: ಕೇಂದ್ರದಲ್ಲಿ ಹೊಸ ಸರ್ಕಾರ ರಚನೆಯಾದ ನಂತರ ಮೊದಲ ಬಾರಿಗೆ ನಡೆಯುತ್ತಿರುವ ನೀತಿ ಆಯೋಗದ ಸಭೆಗೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಗೈರಾಗಿದ್ದಾರೆ.

    ನೀತಿ ಆಯೋಗದ ಐದನೇ ಆಡಳಿತ ಮಂಡಳಿ ಸಭೆ ಶನಿವಾರ ನಡೆದಿದ್ದು, ಸಭೆಗೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್(ಕೆಸಿಆರ್) ಅವರು ಸಭೆಗೆ ಗೈರಾಗಿದ್ದಾರೆ. ಈ ಮೂಲಕ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜನಯಗಳಿಸಿ ಅಧಿಕಾರದ ಗದ್ದುಗೆಯನ್ನೇರಿದ ಎನ್‍ಡಿಎ ಸರ್ಕಾರದ ಮೊದಲ ನೀತಿ ಆಯೋಗದ ಸಭೆಯನ್ನು ಮೂವರು ಮುಖ್ಯಮಂತ್ರಿಗಳು ತಿರಸ್ಕರಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರಪತಿ ಭವನದಲ್ಲಿ ನೀತಿ ಆಯೋಗದ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ದೇಶದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ರಾಷ್ಟ್ರದ ಪ್ರಮುಖ ನಾಯಕರು, ಅಧಿಕಾರಿಗಳು, ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್‍ಗಳು ಭಾಗವಹಿಸಿದ್ದರು.

    ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಹವಾಮಾನದ ವೈಪರಿತ್ಯದಿಂದಾಗಿ ಸಭೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ವರದಿಯಾಗಿದೆ. ಅಮರಿಂದರ್ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ನೀತಿ ಆಯೋಗದ ಸಭೆಯಲ್ಲಿ ಚರ್ಚಿಸಲಾದ ವಿಷಯಗಳ ಕುರಿತು ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿರುವ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಕರೆದಿದ್ದ ಸಭೆಗೂ ಗೈರಾಗಿದ್ದಾರೆ.

    ಕಾಲೇಶ್ವರಂ ನೀರಾವರಿ ಯೋಜನೆಗೆ ಚಾಲನೆ ನೀಡುತ್ತಿರುವ ಹಿನ್ನೆಲೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ (ಕೆಸಿಆರ್) ಅವರು ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ ಎಂದು ಟಿಆರ್‍ಎಸ್ ನಾಯಕ ಹಾಗೂ ಮಾಜಿ ಸಂಸದ ಬಿ.ವಿನೋದ್ ಕುಮಾರ್ ಮಾಹಿತಿ ನೀಡಿದ್ದಾರೆ.

    ಈ ಕುರಿತು ಅಧಿಕಾರಿಗಳು ಪ್ರತಿಕ್ರಿಯಿಸಿ ಗುರುವಾರದ ನಂತರ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸುವ ಕುರಿತು ಕೆಸಿಆರ್ ಖಚಿತಪಡಿಸಿದ್ದರು. ಇದಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ರೈತಬಂಧು ಯೋಜನೆ ಕುರಿತು ನೀತಿ ಆಯೋಗದ ಸಭೆಯಲ್ಲಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಗಮನ ಸೆಳೆಯಲು ತಯಾರಾಗಿದ್ದರು. ಈ ಯೋಜನೆ ವಿವಿಧ ರಾಜ್ಯಗಳಿಗೆ ಮಾದರಿಯಾಗಲಿದೆ ಎಂದು ಸಹ ಹೇಳಿದ್ದರು. ಆದರೆ, ದಿಢೀರನೆ ನೀತಿ ಆಯೋಗದ ಸಭೆಯನ್ನು ಕೆಸಿಆರ್ ತಿರಸ್ಕರಿಸಲು ಕಾರಣ ಏನೆಂಬುದು ತಿಳಿದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕಾಲೇಶ್ವರಂ ನೀರಾವರಿ ಯೋಜನೆ ಉದ್ಘಾಟನೆಗೆ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲು ಪ್ರಧಾನಿಗಳ ಭೇಟಿಗೆ ಅನುಮತಿ ಕೋರಿದ್ದರು. ಆದರೆ, ಪ್ರಧಾನಿ ಕಾರ್ಯಾಲಯದಿಂದ ಅನುಮತಿ ದೊರೆಯದ ಹಿನ್ನೆಲೆ ಕೆಸಿಆರ್ ಅವರು ಅಸಮಾಧಾನಗೊಂಡು ನೀತಿ ಆಯೋಗದ ಸಭೆಗೆ ಗೈರಾಗುತ್ತಿದ್ದಾರೆ ಎಂದು ವರದಿಯಾಗಿದೆ.

    ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯೊಂದಿಗೆ ತಮ್ಮ ಅಸಮಾಧಾನವನ್ನು ಮುಂದುವರಿಸಿದ್ದು, ನೀತಿ ಆಯೋಗದ ಸಭೆಯಿಂದ ಏನೂ ಫಲಪ್ರದವಿಲ್ಲ. ರಾಜ್ಯದ ಯೋಜನೆಗಳಿಗೆ ಹಣ ನೀಡುವ ಅಧಿಕಾರ ನೀತಿ ಆಯೋಗಕ್ಕಿಲ್ಲ ಎಂದು ದೂರಿದ್ದಾರೆ.