Tag: nithyananda

  • ನಿತ್ಯನಿಗಾಗಿ ಶೋಧ ಕಾರ್ಯ ಪ್ರಾರಂಭಿಸಿದ ಪೊಲೀಸರು

    ಗಾಂಧಿನಗರ: ಯುವತಿಯರಿಗೆ ಚಿತ್ರ ಹಿಂಸೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದನಿಗಾಗಿ ಗುಜರಾತ್ ಪೊಲೀಸರು ಶೋಧ ಕಾರ್ಯ ಪ್ರಾರಂಭಿಸಿದ್ದಾರೆ.

    ಬೆಂಗಳೂರಿನ ದಂಪತಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ನಿತ್ಯಾನಂದನಿಗಾಗಿ ಶೋಧ ಕಾರ್ಯ ಪ್ರಾರಂಭಿಸಿದ್ದು, ನಿತ್ಯಾನಂದನ ಆಶ್ರಮದ ಅಹಮದಾಬಾದ್ ಶಾಖೆಯಲ್ಲಿದ್ದ ಹೆಣ್ಣುಮಕ್ಕಳನ್ನು ಹಿಂಸಿಸುತ್ತಿದ್ದ ಎಂದು ದಂಪತಿ ದೂರು ನೀಡಿದ್ದಾರೆ. ಇದನ್ನೂ ಓದಿ: ಸ್ವ ಇಚ್ಛೆಯಿಂದ ಸನ್ಯಾಸತ್ವ ಸ್ವೀಕರಿಸಿದ್ದೇನೆ, ಇದು ನನ್ನ ಬದುಕು – ತಂದೆಗೆ ಮಗಳ ಖಡಕ್ ಉತ್ತರ

    ಅಹ್ಮದಾಬಾದ್ ಜಿಲ್ಲೆಯ ಹಿರಾಪುರ ಗ್ರಾಮದಲ್ಲಿರುವ ಶಾಲೆಯೊಂದರ ಆವರಣದಲ್ಲಿ ನಿತ್ಯಾನಂದನ ಆಶ್ರಮವಿದೆ. ಅಲ್ಲದೆ ಬೆಂಗಳೂರಿನ ಬಿಡದಿಯಲ್ಲಿ ಧ್ಯಾನಪೀಠಂ ಎಂಬ ಹೆಸರಿನ ವಿಶಾಲವಾದ ಆಶ್ರಮವನ್ನು ಸಹ ನಡೆಸುತ್ತಿದ್ದಾರೆ. 5 ವರ್ಷಗಳ ಅವಧಿಯಲ್ಲಿ ಶಿಷ್ಯೆ ಮೇಲೆಯೇ ಅತ್ಯಾಚಾರ ಎಸಗಿರುವ ಎಂಬ ಪ್ರಕರಣದಲ್ಲಿ ಆರೋಪಿಯಾಗಿರುವ ನಿತ್ಯಾನಂದ ಒಂದು ವರ್ಷದಿಂದಲೂ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿಲ್ಲ.

    ಸೆಪ್ಟೆಂಬರ್ 2018ರಲ್ಲಿ ನಿತ್ಯಾನಂದನ ಪಾಸ್‍ಪೋರ್ಟ್ ಅವಧಿ ಮುಗಿದ ಕಾರಣ ಅವರು ಅಕ್ರಮವಾಗಿ ದೇಶವನ್ನು ತೊರೆದಿರಬಹುದು ಎಂದು ಗುಜರಾತ್ ಪೊಲೀಸರು ಶಂಕಿಸಿದ್ದಾರೆ. ಸ್ವಯಂ ಘೋಷಿತ ದೇವ ಮಾನವನ ವಿರುದ್ಧ ಕ್ರಿಮಿನಲ್ ಪ್ರಕರಣದ ವಿಚಾರಣೆ ನಡೆಯುತ್ತಿರುವುದರಿಂದ ಪಾಸ್‍ಪೋರ್ಟ್ ನವೀಕರಿಸುವ ಕುರಿತ ಅರ್ಜಿಯನ್ನು ತಿರಸ್ಕರಿಸಲಾಗಿದೆ. ಇದನ್ನೂ ಓದಿ: ಪಾಸ್‍ಪೋರ್ಟ್ ನವೀಕರಿಸದಿದ್ದರೂ ನಿತ್ಯಾನಂದ ಈಕ್ವೇಡಾರ್‌ಗೆ ಪರಾರಿ?

    ಪ್ರಕರಣದ ವಿಚಾರಣೆಗಾಗಿ ಡಿಸೆಂಬರ್ 9ರಂದು ನಿತ್ಯಾನಂದ ನ್ಯಾಯಾಲಯಕ್ಕೆ ಹಾಜರಾಗಬೇಕಿದೆ. ಕೋರ್ಟ್‍ನ ವಿಚಾರಣೆಯಿಂದ ಈಗಾಗಲೇ ನಿತ್ಯಾನಂದ ಹಲವು ಬಾರಿ ತಪ್ಪಿಸಿಕೊಂಡಿದ್ದು, ಇದೀಗ ಮತ್ತೆ ವಿವಾದ ಎದ್ದಿರುವುದರಿಂದಾಗಿ ಎಂದಿನಂತೆ ಈ ಬಾರಿಯೂ ಸಹ ವಿಚಾರಣೆಗೆ ಹಾಜರಾಗುವುದಿಲ್ಲ ಎಂದು ಪೊಲೀಸರು ಶಂಕಿಸಿದ್ದಾರೆ.

    ಈತ ತನ್ನ ಅನುಯಾಯಿಗಳಿಂದ ದೇಣಿಗೆ ಸಂಗ್ರಹಿಸಲು ಹಾಗೂ ಗುಜರಾತ್‍ನ ಅಹಮದಾಬಾದ್‍ನಲ್ಲಿ ಆಶ್ರಮ ನಡೆಸಲು ಮಕ್ಕಳನ್ನು ಅಪಹರಿಸಿ ಬಂಧಿಸಿದ್ದಾನೆ ಎಂಬ ಆರೋಪದ ಮೇಲೆ ನವೆಂಬರ್ 19ರಂದು ನಿತ್ಯಾನಂದನ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಅಪಹರಣ, ಹಲ್ಲೆ, ಅಕ್ರಮ ಬಂಧನ ಆರೋಪದ ಮೇಲೆ ಈತನ ಇಬ್ಬರು ಶಿಷ್ಯೆಯರಾದ ಪ್ರಾಣಪ್ರಿಯ, ಪ್ರಿಯತತ್ವ ಅವರನ್ನು ಒಂದೇ ದಿನ ಬಂಧಿಸಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದ್ದು, ನಿತ್ಯಾನಂದನ ಆಶ್ರಮಕ್ಕೆ ಶಾಲೆಯ ಜಾಗವನ್ನು ಹೇಗೆ ಬಳಸಿಕೊಳ್ಳಲಾಯಿತು ಎಂಬುದರ ಕುರಿತು ಸಹ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಸ್ವ ಇಚ್ಛೆಯಿಂದ ಸನ್ಯಾಸತ್ವ ಸ್ವೀಕರಿಸಿದ್ದೇನೆ, ಇದು ನನ್ನ ಬದುಕು – ತಂದೆಗೆ ಮಗಳ ಖಡಕ್ ಉತ್ತರ

    ಸ್ವ ಇಚ್ಛೆಯಿಂದ ಸನ್ಯಾಸತ್ವ ಸ್ವೀಕರಿಸಿದ್ದೇನೆ, ಇದು ನನ್ನ ಬದುಕು – ತಂದೆಗೆ ಮಗಳ ಖಡಕ್ ಉತ್ತರ

    – ನಿತ್ಯಾನಂದನ ಆಶ್ರಮದಲ್ಲಿ ಯುವತಿ ನಾಪತ್ತೆ ಕೇಸ್
    – ಫೇಸ್‍ಬುಕ್ ಲೈವಿನಲ್ಲಿ ತಂದೆಯ ಆರೋಪಕ್ಕೆ ಮಗಳಿಂದ ಪ್ರತಿಕ್ರಿಯೆ

    ಬೆಂಗಳೂರು: ನಿತ್ಯಾನಂದನ ಆಶ್ರಮದಲ್ಲಿದ್ದ ಯುವತಿ ನಾಪತ್ತೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಸ್ವತಃ ಯುವತಿಯೇ ಫೇಸ್ಬುಕ್ ನಲ್ಲಿ ಲೈವ್ ವಿಡಿಯೋ ಮಾಡುವ ಮೂಲಕ ಎಲ್ಲ ವಿಚಾರಗಳನ್ನು ಸ್ಪಷ್ಟಪಡಿಸಿದ್ದಾಳೆ.

    ಅಪಹರಣಗೊಂಡಿದ್ದಾಳೆ ಎಂಬ ಆರೋಪ ಕೇಳಿಬಂದ ಯುವತಿ ಫೇಸ್ಪುಕ್ ನಲ್ಲಿ ಪ್ರತ್ಯಕ್ಷವಾಗಿ ತಂದೆಯ ವಿರುದ್ಧವೇ ಕಿಡಿಕಾರಿದ್ದಾಳೆ. ಲೈವ್ ವಿಡಿಯೋ ಮೂಲಕ ತಮ್ಮನ್ನು ಯಾರೂ ಅಪಹರಿಸಿಲ್ಲ. ಆದರೆ ಸುಖಾಸುಮ್ಮನೆ ನಮ್ಮ ಗುರುಗಳಾದ ನಿತ್ಯಾನಂದ ಸ್ವಾಮೀಜಿ ಮೇಲೆ ಆರೋಪಿಸಿದ್ದಾರೆ. ಅಲ್ಲದೆ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಇದು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಾಗಿದೆ. ಆದರೆ ಸ್ವಾಮೀಜಿ ನಮಗೆ ತಂದೆ ಸಮಾನರು, ಈ ರೀತಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾಳೆ. ವಿಡಿಯೋದಲ್ಲಿ ತನ್ನ ಹೆಸರನ್ನು ಮಾ ನಿತ್ಯ ತತ್ವಪ್ರಿಯ ಆನಂದ ಎಂದು ಹೇಳಿಕೊಂಡಿದ್ದಾಳೆ.

    ನನ್ನನ್ನು ಯಾರೂ ಅಪಹರಿಸಿಲ್ಲ. ನನ್ನ ವೈಯಕ್ತಿಕ ಕಾರಣ, ಕುಟುಂಬದಲ್ಲಿ ವೈಮನಸ್ಸು ಇರುವುದರಿಂದ ಹೆತ್ತವರ ಜೊತೆ ಇರಲಾರದೆ ಆಶ್ರಮದಲ್ಲಿದ್ದೇನೆ. ನಾನು ಸ್ವ ಇಚ್ಛೆಯಿಂದ ಸನ್ಯಾಸತ್ವ ಸ್ವೀಕರಿಸಿದ್ದೇನೆ. ಇದು ನನ್ನ ಬದುಕು, ನಾನು ಇಚ್ಛೆ ಪಟ್ಟು ಈ ಬದುಕನ್ನು ಬದುಕುತ್ತಿದ್ದೇನೆ ಎಂದು ತಿಳಿಸಿದ್ದಾಳೆ.

    ಸ್ವಾಮೀಜಿಯ ಮೇಲೆ ವೈಯಕ್ತಿಕ ಕಾರಣಗಳಿಂದ ವ್ಯರ್ಥ ಆರೋಪ ಮಾಡುತ್ತಿದ್ದಾರೆ. ಅಲ್ಲದೆ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಅವರು ಆರೋಪಿಸಿರುವುದು ಸುಳ್ಳು, ದೂರಿನಲ್ಲಿ ಉಲ್ಲೇಖಿಸಿರುವುದು ಸಹ ಸುಳ್ಳು. ನಮ್ಮನ್ನು ಸ್ವಾಮೀಜಿ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ನಾನು ಹಾಗೂ ನನ್ನ ಸಹೋದರಿ ಜೊತೆಗೆ ಇದ್ದೇವೆ. ಹೆತ್ತವರು ಖಾವಿ ಬಿಟ್ಟು ಬನ್ನಿ ಅಂತಿದ್ದಾರೆ. ಆದರೆ ನಾವು ಇದಕ್ಕೆ ತಯಾರಿಲ್ಲ ಎಂದು ಹೇಳಿದ್ದಾಳೆ.

    ಪೊಲೀಸರು, ಮಾಧ್ಯಮದವರು ಎಲ್ಲರೂ ನಮಗೆ ಚಿತ್ರ ಹಿಂಸೆ ನೀಡುತ್ತಿದ್ದಾರೆ. ಸುಖಾಸುಮ್ಮನೆ ಆಶ್ರಮದಲ್ಲಿರುವವರನ್ನು ಬಂಧಿಸುತ್ತಿದ್ದಾರೆ. ಇದು ಕುಟುಂಬದ ಸಮಸ್ಯೆ, ಇದಕ್ಕೂ ಆಶ್ರಮಕ್ಕೂ ಸಂಬಂಧವಿಲ್ಲ. ನನಗೆ ಖಾವಿ ಬಿಟ್ಟು ಬದುಕು ಇಲ್ಲ. ನಿತ್ಯಾನಂದ ಸ್ವಾಮೀಜಿ ನಮ್ಮನ್ನು ಮಕ್ಕಳಂತೆ ನೋಡಿಕೊಳ್ಳುತ್ತಾರೆ. ನೈಜ ಪರಿಸ್ಥಿತಿ ಬಗ್ಗೆ ಎಷ್ಟೇ ಹೇಳಿದದರೂ ಪೊಲೀಸರು ಕೇಳುತ್ತಿಲ್ಲ ಎಂದು ಹೇಳಿದ್ದಾಳೆ.

    ಏನಿದು ಪ್ರಕರಣ?
    ನಿತ್ಯಾನಂದನ ಬಿಡದಿ ಆಶ್ರಮದಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಜನಾರ್ದನ ಶರ್ಮಾ ತನ್ನ ಮಕ್ಕಳನ್ನು ನಿತ್ಯಾನಂದನ ಆಶ್ರಮಕ್ಕೆ ಬಿಟ್ಟಿದ್ದರು. ನಿತ್ಯಾನಂದನ ಮಾತಿಗೆ ಮರುಳಾಗಿ ತನ್ನ ನಾಲ್ವರು ಮಕ್ಕಳನ್ನು ಆಶ್ರಮದಲ್ಲಿ ಇಟ್ಟಿದ್ದರು. ಆಶ್ರಮದಲ್ಲಿನ ಅಕ್ರಮಗಳ ಬಗ್ಗೆ ತಿಳಿದು ಶರ್ಮಾ ಆಶ್ರಮದ ಕೆಲಸ ಬಿಟ್ಟು ಹೊರಗೆ ಬಂದಿದ್ದರು.

    ಬಟ್ಟು ಬರುವ ವೇಳೆ ನಾಲ್ವರು ಮಕ್ಕಳ ಪೈಕಿ 18 ವರ್ಷದ ಯುವತಿ ನಾಪತ್ತೆಯಾಗಿದ್ದಾಳೆ ಎಂದು ಶರ್ಮಾ ಆರೋಪಿಸಿದ್ದರು. ಇವಳನ್ನು ಅಪಹರಿಸಿ, ನಮಗೆ ತಿಳಿಯದಂತೆ ಬಿಡದಿಯ ನಿತ್ಯಾನಂದ ಆಶ್ರಮದಿಂದ ಅಹಮದಾಬಾದ್ ಆಶ್ರಮಕ್ಕೆ ನನ್ನ ಮಕ್ಕಳನ್ನು ಕಳುಹಿಸಲಾಗಿದೆ ಎಂದು ಜನಾರ್ದನ ಶರ್ಮಾ ಆರೋಪಿಸಿದ್ದರು. ಅಲ್ಲದೆ ಮಕ್ಕಳನ್ನು ಹುಡುಕಿಕೊಡುವಂತೆ ಯುವತಿಯ ತಂದೆ ನಿತ್ಯಾನಂದನ ವಿರುದ್ಧ ಗುಜರಾತ್ ನಲ್ಲಿ ದೂರು ದಾಖಲಿಸಿದ್ದಾರೆ.

  • ರಾಸಲೀಲೆ ಪ್ರಕರಣದಲ್ಲಿ ನಿತ್ಯಾನಂದ ಸ್ವಾಮಿಗೆ ಸಂಕಷ್ಟ

    ರಾಸಲೀಲೆ ಪ್ರಕರಣದಲ್ಲಿ ನಿತ್ಯಾನಂದ ಸ್ವಾಮಿಗೆ ಸಂಕಷ್ಟ

    ಬೆಂಗಳೂರು: ಬಿಡದಿ ಧ್ಯಾನಪೀಠ ಮಠದ ನಿತ್ಯಾನಂದ ಸ್ವಾಮಿಗೆ 7 ವರ್ಷ ಹಿಂದಿನ ರಾಸಲೀಲೆ ಪ್ರಕರಣದಲ್ಲಿ ಸಂಕಷ್ಟ ಎದುರಾಗಿದೆ.

    2010ರಲ್ಲಿ ತಮಿಳು ನಟಿಯೊಂದಿಗೆ ರಾಸಲೀಲೆಯಲ್ಲಿ ತೊಡಗಿರುವುದು ನಿತ್ಯಾನಂದ ಸ್ವಾಮಿಯೇ ಎಂಬುದು ಇದೀಗ ಖಚಿತವಾಗಿದೆ. ಸ್ವಾಮಿ ನಿತ್ಯಾನಂದ ಅವರೇ ರಾಸಲೀಲೆ ಸಿಡಿಯಲ್ಲಿರೋದು ಅನ್ನೋ ವಿಚಾರವನ್ನು ದೆಹಲಿಯ ವಿಧಿವಿಜ್ಞಾನ ಪ್ರಯೋಗಾಲಯ(ಎಫ್‍ಎಸ್‍ಎಲ್) ವರದಿ ದೃಢಪಡಿಸಿದೆ. ಈಗ ಇದೇ ಎಫ್‍ಎಸ್‍ಎಲ್ ವರದಿ ನ್ಯಾಯಾಲಯದಲ್ಲಿ ಪ್ರಮುಖ ಸಾಕ್ಷಿಯಾಗಲಿದೆ.

    2010ರಲ್ಲಿ ಅಂದಿನ ಸಿಐಡಿ ಡಿವೈಎಸ್‍ಪಿ ಚರಣ್ ರೆಡ್ಡಿ ಈ ವರದಿ ಸಲ್ಲಿಕೆ ಮಾಡಿದ್ದರು. ಸಿಐಡಿ ಸಿಡಿಯಲ್ಲಿರುವುದು ನಿತ್ಯಾನಂದ ಎಂದು ಖಚಿತ ಪಡಿಸಿಕೊಳ್ಳಲು ಸಿಡಿಯನ್ನ ದೆಹಲಿಯ ಎಫ್‍ಎಸ್‍ಎಲ್‍ಗೆ ಕಳುಹಿಸಲಾಗಿತ್ತು. ಆ ಸಂದರ್ಭದಲ್ಲಿ ಸಿಡಿಯಲ್ಲಿರುವುದು ನಾನಲ್ಲ ಅಂತ ನಿತ್ಯಾನಂದ ಸ್ವಾಮಿ ವಾದ ಮಂಡಿಸಿದ್ದರು. ಆದರೆ ಇದೀಗ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದಿದ್ದು, ಸಿಡಿಯಲ್ಲಿರುವುದು ನಿತ್ಯಾನಂದ ಅವರೇ ಎಂದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಈ ಪ್ರಕರಣಕ್ಕೆ ಪ್ರಮುಖ ಸಾಕ್ಷಿ ಸಿಕ್ಕಿದಂತಾಗಿದೆ.

    ಇದರಿಂದಾಗಿ ಪ್ರಕರಣದಲ್ಲಿ ನಿತ್ಯಾನಂದಗೆ ಶಿಕ್ಷೆಯಾಗುವ ಸಾಧ್ಯತೆ ಹೆಚ್ಚಿದ್ದು, ಇದೀಗ ಸ್ವಾಮೀಜಿ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.

    ವಿಶ್ವಾದಾದ್ಯಂತ ಸ್ವಾಮಿ ನಿತ್ಯಾನಂದ ಅವರಿಗೆ ಲಕ್ಷಾಂತರ ಮಂದಿ ಭಕ್ತಾದಿಗಳಿದ್ದು, 2010ರಲ್ಲಿ ಸ್ವಾಮೀಜಿ ತಮಿಳು ನಟಿಯೊಂದಿಗೆ ರಾಸಲೀಲೆಯಲ್ಲಿ ತೊಡಗಿದ್ದಾರೆಂಬ ಸುದ್ದಿ ವಿಶ್ವದಾದ್ಯಂತ ಭಾರೀ ಸಂಚಲನವನ್ನೇ ಸೃಷ್ಟಿಸಿತ್ತು. ಆ ಬಳಿಕ ಸುಪ್ರೀಂ ಕೋರ್ಟ್ ನಿತ್ಯಾನಂದ ಅವರ ಪುರುಷತ್ವ ಪರೀಕ್ಷೆ ನಡೆಸಲು ಆದೇಶ ನೀಡಿತ್ತು.