Tag: nithish kumar

  • 6ನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಿತೀಶ್ ಕುಮಾರ್

    6ನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಿತೀಶ್ ಕುಮಾರ್

    ಪಾಟ್ನಾ: ಬಿಹಾರದಲ್ಲಿ ಮತ್ತೆ ಮಹಾಮೈತ್ರಿ ಶುರುವಾಗಿದೆ. ಬುಧವಾರದಂದು ಆರ್‍ಜೆಡಿ ಸಖ್ಯ ತೊರೆದಿದ್ದ ಜೆಡಿಯು ಮುಖಂಡ ನಿತೀಶ್ ಕುಮಾರ್ ಇವತ್ತು ಬಿಜೆಪಿ ಜೊತೆ ಕೈಜೋಡಿಸಿ, 6ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

    ನಿತೀಶ್ ಜೊತೆಗೆ, ಬಿಜೆಪಿಯ ಸುಶೀಲ್ ಕುಮಾರ್ ಮೋದಿ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬಿಹಾರ ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿ ಉಭಯ ಮುಖಂಡರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಶನಿವಾರದಂದು ನಿತೀಶ್ ಕುಮಾರ್ ವಿಶ್ವಾಸ ಮತ ಗಳಿಸಿದ ನಂತರ ಇತರೆ ಸಚಿವರು ಪ್ರಮಾವಚನ ಸ್ವೀಕರಿಸಲಿದ್ದಾರೆ.

    ಇಡೀ ಬೆಳವಣಿಗೆಗಳ ಬಗ್ಗೆ ರಾಹುಲ್ ಗಾಂಧಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಜೊತೆ ಕೈ ಜೋಡಿಸುವ ಮೂಲಕ ನಿತೀಶ್ ಕುಮಾರ್ ತಮಗೆ ವಿಶ್ವಾಸದ್ರೋಹ ಮಾಡಿದ್ದಾರೆ ಅಂತ ಟೀಕಿಸಿದ್ದಾರೆ. ಅಧಿಕಾರಕ್ಕಾಗಿ ಜನ ಏನು ಬೇಕಾದ್ರೂ ಮಾಡ್ತಾರೆ. 3-4 ತಿಂಗಳಿನಿಂದ ಈ ಬಗ್ಗೆ ಚರ್ಚೆ ನಡೆಯುತ್ತಿದೆ ಎಂಬುದು ನಮಗೆ ಗೊತ್ತಿತ್ತು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

    ಭ್ರಷ್ಟಾಚಾರದ ಆರೋಪ ಹೊತ್ರೂ ತೇಜಸ್ವಿ ಯಾದವ್ ಖುರ್ಚಿ ಬಿಡದ ಕಾರಣಕ್ಕೆ ನೊಂದು ನಿತೀಶ್‍ಕುಮಾರ್ ಬುಧವಾರ ಸಂಜೆ ಮಹಾಘಟಬಂಧನ್ ಮುರಿದುಕೊಂಡಿದ್ರು. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದ್ದರು.

    ಇದೇ ಅದ್ಬುತ ಕ್ಷಣಕ್ಕೆ ಕಾಯುತ್ತಿದ್ದ ಮೋದಿ, ನಿತೀಶ್ ರಾಜೀನಾಮೆ ನೀಡಿದ ಬೆನ್ನಲ್ಲೇ ಟ್ಚಿಟ್ಟರ್‍ನಲ್ಲೇ ಶಹಬ್ಬಾಸ್‍ಗಿರಿ ಕೊಟ್ಟು ಬೆನ್ನು ತಟ್ಟಿದ್ರು. ಆಗಲೇ ಚಿಗುರಿತ್ತು ಬಿಜೆಪಿ ಜೊತೆಗಿನ ಮರುಮೈತ್ರಿ. ಬುಧವಾರ ಸಂಜೆ ನಂತರ ಆದ ಮಹತ್ವದ ಬೆಳವಣಿಗೆಯಲ್ಲಿ ಬಿಜೆಪಿ ಹಾಗೂ ಜೆಡಿಯು ಮುಖಂಡರು ಮಹತ್ವದ ಸಭೆ ನಡೆಸಿ, ಮೈತ್ರಿ ಸರ್ಕಾರ ರಚನೆಗೆ ನಿರ್ಧಾರ ಮಾಡಿದ್ರು. ಜೆಡಿಯು ಹಾಗೂ ಬಿಜೆಪಿ ನಾಯಕರು ರಾತ್ರಿಯೇ ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿ ಅವರನ್ನು ಭೇಟಿ ಮಾಡಿ 132 ಶಾಸಕರ ಪಟ್ಟಿಯನ್ನೂ ಕೊಟ್ಟಿದ್ದರು.

    ಜೆಡಿಯು-ಬಿಜೆಪಿ ಸಮ್ಮಿಶ್ರ ಸರ್ಕಾರ ರಚನೆ ಮಾಡ್ತಿದ್ರೆ ಆರ್‍ಜೆಡಿ ಏನೂ ಸುಮ್ಮನೇ ಕೂರಲಿಲ್ಲ. ಲಾಲೂ ಪುತ್ರ ತೇಜಸ್ವಿ ಯಾದವ್ ರಾಜಭವನದ ಮುಂದೆ ತಮ್ಮ ಬೆಂಬಲಿಗರ ಜೊತೆ ರಾತ್ರಿಯಿಡೀ ಭಾರೀ ಪ್ರತಿಭಟನೆ ಮಾಡಿದ್ರು. ಐವರು ಶಾಸಕರೊಂದಿಗೆ ರಾಜ್ಯಪಾಲರನ್ನು ಭೇಟಿಯಾಗಿ ಚರ್ಚಿಸಿದ್ರು. ಬಳಿಕ ಪ್ರತಿಕ್ರಿಯಿಸಿದ ಅವರು, ಇದು ಪ್ರಜಾಪ್ರಭುತ್ವದ ಕಗ್ಗೊಲೆ ಅಂದ್ರು.

    ಬಿಹಾರ ವಿಧಾನಸಭೆಯ 243 ಸ್ಥಾನಗಳಲ್ಲಿ ಬಹುಮತಕ್ಕೆ 122 ಸ್ಥಾನಗಳ ಅಗತ್ಯವಿದೆ. ಜೆಡಿಯು 71 ಸ್ಥಾನಗಳ ಜೊತೆ ಬಿಜೆಪಿಯ 53 ಶಾಸಕರು ಕೈ ಜೋಡಿಸಿದ್ರೆ ಸರ್ಕಾರ ರಚನೆಗೆ ಯಾವುದೇ ತೊಂದರೆಯಿಲ್ಲ. ಹೀಗಾಗಿ ಬಿಜೆಪಿ ಬಾಹ್ಯ ಬೆಂಬಲ ನೀಡಿ ಸರ್ಕಾರ ರಚನೆಗೆ ಜೈ ಎಂದಿದೆ.

    ಲಾಲೂ ಹಾಗೂ ನಿತೀಶ್ ನಡುವೆ ಹೇಗೆ ಮನಸ್ತಾಪ ಶುರುವಾಯ್ತು. ಬಿಹಾರ ರಾಜಕೀಯದ ಗುದ್ದಾಟ ಸಾಗಿದ ಹಾದಿ ಹೇಗಿತ್ತು.

    * ಜುಲೈ 12, 2017-ಭ್ರಷ್ಟಚಾರ ಆರೋಪ ಮುಕ್ತವಾಗಿ ಬಂದ್ರೆ ತೇಜಸ್ವಿ ಯಾದವ್ ಅಧಿಕಾರದಲ್ಲಿ ಮುಂದುವರಿಕೆ-ನಿತೀಶ್ ಸ್ಪಷ್ಟನೆ.
    * ಜುಲೈ 14, 2017-ರಾಜೀನಾಮೆ ನೀಡೋ ಮಾತೇ ಇಲ್ಲ-ಲಾಲೂ ಹಾಗೂ ತೇಜಸ್ವಿ ಯಾದವ್ ಸ್ಪಷ್ಟನೆ.
    * ಜುಲೈ 15, 2017-`ವಿಶ್ವ ಯುವ ಕುಶಾಲ್ ದಿವಸ್’ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಿಂದ ತೇಜಸ್ವಿ ಹೆಸರು ಕಿತ್ತಾಕಿದ ನಿತೀಶ್.
    * ಜುಲೈ 22, 2017-ಬಿಹಾರ ಮೈತ್ರಿ ರಾಜಕೀಯ ಸರಿ ಮಾಡಲು ರಾಹುಲ್ ಗಾಂಧಿ ಯತ್ನ, ಆದರೆ ವಿಫಲ.
    * ಜುಲೈ 26, 2017-ಯಾವುದೇ ಕಾರಣಕ್ಕೂ ತೇಜಸ್ವಿ ರಾಜೀನಾಮೆ ನೀಡಲ್ಲ-ಲಾಲೂ ಸ್ಪಷ್ಟ ಸಂದೇಶ ರವಾನೆ.
    * ಜುಲೈ 26, 2017-ಸಂಜೆ 5 ಗಂಟೆ – ಮಹಾಘಟ್‍ಬಂಧನ್ ಅಂತ್ಯ, ಸಿಎಂ ಸ್ಥಾನಕ್ಕೆ ನಿತೀಶ್‍ಕುಮಾರ್ ರಾಜೀನಾಮೆ.
    * ಜುಲೈ 27, 2017- ಜೆಡಿಯು-ಬಿಜೆಪಿ ಸಮ್ಮಿಶ್ರ ಸರ್ಕಾರ ರಚನೆ.

  • ಗ್ಯಾಂಗ್‍ರೇಪ್ ಎಸಗಿ, ಅಪ್ರಾಪ್ತೆಯ ಗುಪ್ತಾಂಗವನ್ನು ಗಂಭೀರ ಗಾಯಗೊಳಿಸಿ ಚಲಿಸುತ್ತಿರುವ ರೈಲಿನಿಂದ ಎಸೆದ್ರು!

    ಗ್ಯಾಂಗ್‍ರೇಪ್ ಎಸಗಿ, ಅಪ್ರಾಪ್ತೆಯ ಗುಪ್ತಾಂಗವನ್ನು ಗಂಭೀರ ಗಾಯಗೊಳಿಸಿ ಚಲಿಸುತ್ತಿರುವ ರೈಲಿನಿಂದ ಎಸೆದ್ರು!

    ಪಾಟ್ನಾ: ಚಲಿಸುತ್ತಿರುವ ರೈಲಿನಲ್ಲೇ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಆಕೆಯ ಗುಪ್ತಾಂಗವನ್ನು ಗಂಭೀರ ಗಾಯಗೊಳಿಸಿ ಬಳಿಕ ರೈಲಿನಿಂದ ಎಸೆದ ಅಮಾನವೀಯ ಘಟನೆಯೊಂದು ಬಿಹಾರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಸಂತ್ರಸ್ತೆ 10 ತರಗತಿ ಓದುತ್ತಿದ್ದು, ಭಾನುವಾರ ಚಿಕಿತ್ಸೆಗಾಗಿ ರಾಜ್ಯ ರಾಜಧಾನಿಯ ಆಸ್ಪತ್ರೆಗೆ ಬಂದ ವೇಳೆ ಘಟನೆ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ. ಸದ್ಯ ಬಾಲಕಿ ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾಳೆ.

    ನಡೆದಿದ್ದೇನು?: ಲಖಿಸರಾಯಿ ಜಿಲ್ಲೆಯಲ್ಲಿ ಶುಕ್ರವಾರ ಮುಂಜಾನೆ ಬಹಿರ್ದೆಸೆಗೆಂದು ಹೊರಬಂದಿದ್ದ ವೇಳೆ ಸಂತೋಷ್ ಯಾದವ್ ಹಾಗೂ ಮೃತ್ಯುಂಜಯ್ ಯಾದವ್ ಎಂಬ ಇಬ್ಬರು ಕಾಮುಕರು ಅತ್ಯಾಚಾರವೆಸಗಿದ್ದಾರೆ. ಬಳಿಕ 6 ಮಂದಿ ಕಾಮುಕರು ಅತ್ಯಾಚಾರವೆಸಗಲು ಮುಂದಾದ್ರು. ಅಲ್ಲದೇ ರೈಲಿನೊಳಗೆ ಕರೆದುಕೊಂಡು ಹೋಗಿ ಮತ್ತೆ ಅತ್ಯಾಚಾರವೆಸಗಿದ್ದಾರೆ. ಅಲ್ಲದೇ ಗುಪ್ತಾಂಗವನ್ನು ಗಂಭೀರ ಗಾಯಗೊಳಿಸಿದ್ದಾರೆ. ಕೊಲೆ ಮಾಡಿ ರೈಲಿನಿಂದ ಬಿಸಾಕುವುದಾಗಿ ಮಾತನಾಡುತ್ತಿದ್ದಿದ್ದು ಕೇಳಿಸಿತ್ತು. ಆದ್ರೆ ನನಗೆ ಪ್ರಜ್ಞೆ ಬಂದಾಗ ಆಸ್ಪತ್ರೆಯಲ್ಲಿದ್ದೆ ಅಂತಾ ಸಂತ್ರಸ್ತೆ ತಿಳಿಸಿದ್ದಾಳೆ.

    ಕಾಮುಕರು ಬಾಲಕಿಯ ಮೇಲೆ ಅತ್ಯಾಚಾರವೆಸಗಿ, ಗಂಭೀರ ಗಾಯಗೊಳಿಸಿ ಕಿವುಲ್ ಜಂಕ್ಷನ್ ಬಳಿ ರೈಲಿನಿಂದ ಆಕೆಯನ್ನು ಎಸೆದಿದ್ದರು. ಅರೆಪ್ರಜ್ಞಾವಸ್ಥೆಯಲ್ಲಿದ್ದ ಬಾಲಕಿಯನ್ನು ಕಂಡ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಆಕೆಯ ಪೋಷಕರು ಹಾಗೂ ಸಂಬಂಧಿಕರಿಗೆ ವಿಚಾರ ತಲುಪಿಸಿದ್ದಾರೆ. ತದನಂತರ ಬಾಲಕಿಯ ಪೋಷಕರು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಿದ್ದಾರೆ.

    ಬಾಲಕಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಯಿಂದ ಪಾಟ್ನಾ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗೆ ದಾಖಲಿಸಲೆಂದು ಕರೆದುಕೊಂಡು ಹೋಗಲಾಗಿತ್ತು. ಆದ್ರೆ ಅಲ್ಲಿ ಆಕೆಗೆ ಬೆಡ್ ವ್ಯವಸ್ಥೆ ಸಿಗದೆ ಕೆಲವು ಗಂಟೆಗಳ ಕಾಲ ನೆಲದ ಮೇಲೆಯೇ ಬಾಲಕಿ ನರಳಾಟ ಅನುಭವಿಸಿದ್ದಳು.

    ಸದ್ಯ ಬಾಲಕಿಯ ಗುಪ್ತಾಂಗಕ್ಕೆ 2 ಡಜನ್ ನಷ್ಟು ಸ್ಟಿಚ್ ಹಾಕಿದ್ದಾರೆ. ಎರಡೂ ಪಾದಗಳಿಗೂ ಗಂಭೀರ ಗಾಯಗಳಾಗಿವೆ. ಅಲ್ಲದೇ ಸೊಂಟ, ದೇಹದ ಎಲುಬುಗಳಿಗೂ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಅಂತಾ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

    ಪ್ರಕರಣ ಸಂಬಂಧಿಸಿದಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಘಟನೆಗೆ ಸಂಬಂಧಿಸಿದಂತೆ ಶೀಘ್ರವೇ ಎಲ್ಲಾ ಆರೋಪಿಗಳನ್ನು ಬಂಧಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಅಂತಾ ಮೂಲಗಳು ತಿಳಿಸಿವೆ. ಆದ್ರೆ ಸ್ಥಳೀಯ ಪೊಲೀಸರು ಪ್ರೇಮ ಸಂಬಂಧ ಕಲ್ಪಿಸಿ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

    ಪ್ರಕರಣದ ಗಂಭೀರತೆ ಮತ್ತು ಮಾಧ್ಯಮದಲ್ಲಿ ಹೆಚ್ಚು ಸುದ್ದಿಯಾದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಓರ್ವ ಆರೋಪಿ ಜುವೆಲಿನ್ ಎಂಬಾತನನ್ನು ಬಂಧಿಸಿದ್ದಾರೆ.