Tag: Nishikant Dubey

  • ಈಗಾಗಲೇ ಕಾರ್ಯಾಂಗವನ್ನು ಅತಿಕ್ರಮಿಸಿರುವ ಆರೋಪ ನಮ್ಮ ಮೇಲಿದೆ: ಸುಪ್ರೀಂ ಕೋರ್ಟ್‌

    ಈಗಾಗಲೇ ಕಾರ್ಯಾಂಗವನ್ನು ಅತಿಕ್ರಮಿಸಿರುವ ಆರೋಪ ನಮ್ಮ ಮೇಲಿದೆ: ಸುಪ್ರೀಂ ಕೋರ್ಟ್‌

    ನವದೆಹಲಿ: ಈಗಾಗಲೇ ಕಾರ್ಯಾಂಗವನ್ನು ಅತಿಕ್ರಮಿಸಿರುವ ಆರೋಪ ನಮ್ಮ ಮೇಲಿದೆ ಎಂದು ಸುಪ್ರೀಂ ಕೋರ್ಟ್‌ (Supreme Court) ಹೇಳಿದ ಪ್ರಸಂಗ ಇಂದು ನಡೆಯಿತು.

    ವಕೀಲ ವಿಷ್ಣು ಶಂಕರ್‌ ಜೈನ್‌ (Vishnu Shankar Jain) ಅವರು ಪಶ್ಚಿಮ ಬಂಗಾಳದಲ್ಲಿ (West Bengal) ರಾಷ್ಟ್ರಪತಿ ಆಡಳಿತಕ್ಕೆ ಹೇರಲು ಆದೇಶಿಸಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದರು.

    ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಆಗಸ್ಟೀನ್ ಜಾರ್ಜ್ ಅವರ ದ್ವಿಸದಸ್ಯ ಪೀಠ ಈ ಅರ್ಜಿಯ ವಿಚಾರಣೆ ನಡೆಸಿತು. ಈ ವೇಳೆ ನ್ಯಾ. ಗವಾಯಿ ಅವರು, ರಾಷ್ಟ್ರಪತಿ ಆಳ್ವಿಕೆ ಹೇರಲು ರಾಷ್ಟ್ರಪತಿಗಳಿಗೆ ಆದೇಶ ಹೊರಡಿಸಬೇಕೆಂದು ನೀವು ಬಯಸುತ್ತೀರಾ? ಎಂದು ಅರ್ಜಿದಾರರನ್ನು ಪ್ರಶ್ನಿಸಿದರು. ಅಷ್ಟೇ ಅಲ್ಲದೇ ಈಗಾಗಲೇ ಕಾರ್ಯಾಂಗವನ್ನು ಅತಿಕ್ರಮಿಸಿರುವ ಆರೋಪ ನಮ್ಮ ಮೇಲಿದೆ ಎಂದು ಸೂಚ್ಯವಾಗಿ ಹೇಳಿದರು. ಇದನ್ನೂ ಓದಿ: ರಾಷ್ಟ್ರಪತಿಗಳಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ,ಕೋರ್ಟ್‌ಗಳು ಸೂಪರ್ ಪಾರ್ಲಿಮೆಂಟ್‌ ಆಗಬಾರದು: ಧನಕರ್‌ ಅಸಮಾಧಾನ

    ನ್ಯಾ. ಗವಾಯಿ ಅವರ ಈ ಅಭಿಪ್ರಾಯ ಬಹಳ ಮಹತ್ವ ಪಡೆದುಕೊಂಡಿದೆ. ಮುಂದಿನ ತಿಂಗಳು ನ್ಯಾ. ಗವಾಯಿ ಅವರು ಮುಖ್ಯ ನ್ಯಾಯಮೂರ್ತಿಗಳಾಗಿ ಅಧಿಕಾರ ಸ್ವೀಕರಿಸಲಿದ್ದು ವಕ್ಫ್‌ ಕಾಯ್ದೆಗೆ ಸಂಬಂಧಿಸಿದ ಅರ್ಜಿಗಳನ್ನು ವಿಚಾರಣೆ ನಡೆಸುವ ಸಾಧ್ಯತೆಯಿದೆ.

    ವಕೀಲ ವಿಷ್ಣು ಶಂಕರ್‌ ಜೈನ್‌ ಅವರು ಕಳೆದ ವಾರ ಸುಪ್ರೀಂ ಕೋರ್ಟ್‌ ವಕ್ಫ್‌ ಅರ್ಜಿ ವಿಚಾರಣೆ ನಡೆಸಿದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿಂದೆ ವಕ್ಫ್‌ ಕುರಿತದಾಗಿ ಹಿಂದೂಗಳು ಸಲ್ಲಿಸಿದಾಗ ಹೈಕೋರ್ಟ್‌ಗೆ ಹೋಗಿ ಎಂದಿತ್ತು. ಆದರೆ ಈಗ ಸುಪ್ರೀಂ ಕೋರ್ಟ್‌ ವಕ್ಫ್‌ ಕುರಿತಾದ ಅರ್ಜಿಗಳನ್ನು ವಿಚಾರಣೆ ನಡೆಸಿದ್ದಕ್ಕೆ ಮಾನದಂಡ ಏನು ಎಂದು ಪ್ರಶ್ನಿಸಿದ್ದರು. ಇದನ್ನೂ ಓದಿ: Waqf Act| ಹಿಂದೂಗಳು ಸಲ್ಲಿಸಿದಾಗ ಹೈಕೋರ್ಟ್‌ಗೆ ಹೋಗಿ ಎಂದಿತ್ತು – ಸುಪ್ರೀಂ ವಿಚಾರಣೆಗೆ ಮಾನದಂಡ ಏನು?- ವಕೀಲ ವಿಷ್ಣು ಶಂಕರ್‌ ಜೈನ್‌

    ಬಿಜೆಪಿ ಸಂಸದ ನಿಶಿಕಾಂತ್‌ ದುಬೆ (Nishikant Dubey) ಅವರು ಸುಪ್ರೀಂ ಕೋರ್ಟ್‌ ಕಾನೂನುಗಳನ್ನು ಮಾಡುವುದಾದರೆ ಸಂಸತ್ತು ಮತ್ತು ರಾಜ್ಯಗಳಲ್ಲಿರುವ ವಿಧಾನಸಭೆಯನ್ನು ಮುಚ್ಚುವುದು  ಒಳ್ಳೆಯದು ಎಂದು ಆಕ್ರೋಶ ಹೊರಹಾಕಿದ್ದರು. ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರನ್ನು ಟೀಕಿಸಿ ದೇಶದಲ್ಲಿನ ಅಂತರ್ಯುದ್ಧಕ್ಕೆ ಸಿಜೆಐ ಅವರೇ ಕಾರಣ ಎಂದು ನೇರವಾಗಿ ದೂರಿದ್ದರು. ಇದನ್ನೂ ಓದಿ: ಸುಪ್ರೀಂ ಕೋರ್ಟ್‌ ಕಾನೂನು ಮಾಡಿದ್ರೆ ಸಂಸತ್ತು ಭವನವನ್ನು ಮುಚ್ಚಬೇಕು: ಬಿಜೆಪಿ ಎಂಪಿ ನಿಶಿಕಾಂತ್‌ ದುಬೆ

  • ನಿಶಿಕಾಂತ್ ದುಬೆ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ನಮ್ಮ ಅನುಮೋದನೆ ಅಗತ್ಯವಿಲ್ಲ – ಸುಪ್ರೀಂ

    ನಿಶಿಕಾಂತ್ ದುಬೆ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ನಮ್ಮ ಅನುಮೋದನೆ ಅಗತ್ಯವಿಲ್ಲ – ಸುಪ್ರೀಂ

    ನವದೆಹಲಿ: ಸುಪ್ರೀಂ ಕೋರ್ಟ್‌ನ (Supreme Court) ಇತ್ತೀಚಿನ ಆದೇಶದ ವಿರುದ್ಧ ವಿವಾದಾತ್ಮಾಕ ಹೇಳಿಕೆ ನೀಡಿದ್ದ ಬಿಜೆಪಿ ಸಂಸದ ನಿಶಿಕಾಂತ್ ದುಬೆ (Nishikant Dubey) ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ಸಿದ್ಧತೆಗಳು ನಡೆಯುತ್ತಿವೆ. ನಿಶಿಕಾಂತ್ ದುಬೆ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ಸುಪ್ರೀಂ ಕೋರ್ಟ್‌ನ ಅನುಮೋದನೆ ಕೋರಿ ಅರ್ಜಿ ಸಲ್ಲಿಕೆಯಾಗಿದ್ದು, ಇದಕ್ಕಾಗಿ ನಮ್ಮ ಅನುಮೋದನೆ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

    ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರ ಪೀಠದ ಮುಂದೆ ವಕೀಲ ಅನಸ್ ತನ್ವೀರ್ ಈ ಅರ್ಜಿಯ ಬಗ್ಗೆ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಪೀಠವು, ನೀವು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿ, ಈ ಅರ್ಜಿ ಸಲ್ಲಿಸಲು ನಮ್ಮ ಅನುಮೋದನೆ ಅಗತ್ಯವಿಲ್ಲ ಎಂದು ಹೇಳಿತು. ಆದರೆ ಈ ವಿಷಯದಲ್ಲಿ ಅರ್ಜಿದಾರರು ಅಟಾರ್ನಿ ಜನರಲ್ ಅವರಿಂದ ಅನುಮೋದನೆ ಪಡೆಯಬೇಕಾಗಿದೆ ಎಂದು ತಿಳಿಸಿದೆ.ಇದನ್ನೂ ಓದಿ: ಸುಪ್ರೀಂ ಕೋರ್ಟ್‌ ಕಾನೂನು ಮಾಡಿದ್ರೆ ಸಂಸತ್ತು ಭವನವನ್ನು ಮುಚ್ಚಬೇಕು: ಬಿಜೆಪಿ ಎಂಪಿ ನಿಶಿಕಾಂತ್‌ ದುಬೆ

    ಸುಪ್ರೀಂ ಕೋರ್ಟ್‌ನ ಹೇಳಿಕೆಯ ನಂತರ, ಅನಸ್ ತನ್ವೀರ್ ಅವರು ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಅವರ ಅನುಮೋದನೆ ಕೋರಿ ಪತ್ರ ಬರೆದಿದ್ದಾರೆ. ದುಬೆ ಸುಪ್ರೀಂ ಕೋರ್ಟ್‌ನ ಘನತೆಯನ್ನು ಕುಗ್ಗಿಸಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಬಿಜೆಪಿ ಸಂಸದ ನಿಶಿಕಾಂತ್ ದುಬೆ ಶನಿವಾರ (ಏ.19) ಸುಪ್ರೀಂ ಕೋರ್ಟ್ ವಿರುದ್ಧ ಹೇಳಿಕೆ ನೀಡಿದ್ದರು. ಸುಪ್ರೀಂ ಕೋರ್ಟ್ ಕಾನೂನು ಮಾಡಿದರೆ ಸಂಸತ್ತು ಮತ್ತು ವಿಧಾನಸಭೆಗಳನ್ನು ಮುಚ್ಚಬೇಕು ಎಂದು ದುಬೆ ಹೇಳಿದ್ದರು. ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರನ್ನು ಟೀಕಿಸಿದ ಬಿಜೆಪಿ ಅವರು, ದೇಶದಲ್ಲಿನ ಅಂತರ್ಯುದ್ಧಕ್ಕೆ ಸಿಜೆಐ ಅವರೇ ಕಾರಣ ಎಂದು ಹೇಳಿದರು. ಈ ಹೇಳಿಕೆಯಿಂದ ಬಿಜೆಪಿ ಅಂತರ ಕಾಯ್ದುಕೊಂಡಿದೆ.ಇದನ್ನೂ ಓದಿ: ನನ್ನ ಶತ್ರುಗಳು ಅಂದ್ರೆ ಅದು ನನ್ನ ಚಿಕ್ಕಮ್ಮ, ರಾಕೇಶ್ ಮಲ್ಲಿ – ಪೊಲೀಸರ ಮುಂದೆ ರಿಕ್ಕಿ ರೈ ಸ್ಫೋಟಕ ಹೇಳಿಕೆ

  • ಸುಪ್ರೀಂ ಕೋರ್ಟ್‌ ಕಾನೂನು ಮಾಡಿದ್ರೆ ಸಂಸತ್ತು ಭವನವನ್ನು ಮುಚ್ಚಬೇಕು: ಬಿಜೆಪಿ ಎಂಪಿ ನಿಶಿಕಾಂತ್‌ ದುಬೆ

    ಸುಪ್ರೀಂ ಕೋರ್ಟ್‌ ಕಾನೂನು ಮಾಡಿದ್ರೆ ಸಂಸತ್ತು ಭವನವನ್ನು ಮುಚ್ಚಬೇಕು: ಬಿಜೆಪಿ ಎಂಪಿ ನಿಶಿಕಾಂತ್‌ ದುಬೆ

    ನವದೆಹಲಿ: ಸುಪ್ರೀಂ ಕೋರ್ಟ್ (Supreme Court) ಕಾನೂನು ಮಾಡಿದರೆ ಸಂಸತ್ತು ಭವನವನ್ನು ಮುಚ್ಚಬೇಕು ಎಂದು ಬಿಜೆಪಿ (BJP) ಸಂಸದ ನಿಶಿಕಾಂತ್‌ ದುಬೆ (Nishikant Dubey) ಹೇಳಿದ್ದಾರೆ.

    ಬೆಳಗ್ಗೆ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ಪೋಸ್ಟ್‌ ಮಾಡಿದ ಬಳಿಕ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿದ ಅವರು, ಅಯೋಧ್ಯೆ ರಾಮ ಮಂದಿರ (Ayodhya Ram Mandir) ಆಗಬಹುದು, ಜ್ಞಾನವಾಪಿ ಮಸೀದಿಯಾಗಬಹುದು, ಮಥುರಾ ಕೃಷ್ಣ ದೇವಸ್ಥಾನದ ವಿಚಾರ ಬಂದಾಗ ಸುಪ್ರೀಂ ಕೋರ್ಟ್‌ ಕಾಗದ ಎಲ್ಲಿದೆ ಎಂದು ಕೇಳುತ್ತದೆ. ಮೊಘಲರ ವಿಷಯ ಬಂದಾಗ ಯಾವುದನ್ನು ಕೇಳುವುದಿಲ್ಲ ಎಂದು ಹೇಳಿದರು.

    ಸುಪ್ರೀಂ ಕೋರ್ಟ್ ಈಗ ತನ್ನ ಮಿತಿಗಳನ್ನು ಮೀರುತ್ತಿದೆ. ಪ್ರತಿಯೊಂದಕ್ಕೂ ಸುಪ್ರೀಂ ಕೋರ್ಟ್‌ಗೆ ಹೋಗಬೇಕಾದರೆ ಸಂಸತ್ತು ಮತ್ತು ರಾಜ್ಯ ವಿಧಾನಸಭೆಯನ್ನು ಮುಚ್ಚಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

     

    ರಾಷ್ಟ್ರಪತಿಗಳು ಭಾರತದ ಮುಖ್ಯ ನ್ಯಾಯಾಧೀಶರನ್ನು ನೇಮಿಸುತ್ತಾರೆ. ಸಂಸತ್ತು ಈ ದೇಶದ ಕಾನೂನನ್ನು ರೂಪಿಸುತ್ತದೆ. ನೀವು ಆ ಸಂಸತ್ತನ್ನು ನಿರ್ದೇಶಿಸುತ್ತೀರಾ? ನೀವು ಹೊಸ ಕಾನೂನನ್ನು ಹೇಗೆ ಮಾಡಿದ್ದೀರಿ? ಯಾವ ಕಾನೂನಿನಲ್ಲಿ ರಾಷ್ಟ್ರಪತಿಗಳು ಮೂರು ತಿಂಗಳೊಳಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಬರೆಯಲಾಗಿದೆ? ಇದರರ್ಥ ನೀವು ಈ ದೇಶವನ್ನು ಅರಾಜಕತೆಯತ್ತ ಕೊಂಡೊಯ್ಯಲು ಬಯಸುತ್ತೀರಿ. ಮುಂದಿನ ಸಂಸತ್ತು ಅಧಿವೇಶನದಲ್ಲಿ ಇದರ ಬಗ್ಗೆ ವಿವರವಾದ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.‌

    ಸಲಿಂಗಕಾಮವನ್ನು ದೊಡ್ಡ ಅಪರಾಧವೆಂದು ಪರಿಗಣಿಸುವ 377ನೇ ವಿಧಿ ಇದೆ. ಟ್ರಂಪ್ ಆಡಳಿತವು ಈ ಜಗತ್ತಿನಲ್ಲಿ ಕೇವಲ ಎರಡು ಲಿಂಗಗಳಿವೆ. ಗಂಡು ಅಥವಾ ಹೆಣ್ಣು ಎಂದು ಹೇಳಿದೆ. ಅದು ಹಿಂದೂ, ಮುಸ್ಲಿಂ, ಬೌದ್ಧ, ಜೈನ ಅಥವಾ ಸಿಖ್ ಆಗಿರಲಿ, ಎಲ್ಲರೂ ಸಲಿಂಗಕಾಮ ಅಪರಾಧ ಎಂದು ನಂಬುತ್ತಾರೆ. ಒಂದು ದಿನ ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ರದ್ದುಗೊಳಿಸುತ್ತದೆ. ಸಂಸತ್ತು ಎಲ್ಲಾ ಕಾನೂನುಗಳನ್ನು ಮಾಡುವ ಹಕ್ಕನ್ನು ಹೊಂದಿದೆ ಮತ್ತು 368ನೇ ವಿಧಿ ಸುಪ್ರೀಂ ಕೋರ್ಟ್ ಕಾನೂನನ್ನು ವ್ಯಾಖ್ಯಾನಿಸುವ ಹಕ್ಕನ್ನು ಹೊಂದಿರುವುದಾಗಿ ತಿಳಿಸಿದರು. ಇದನ್ನೂ ಓದಿ: Waqf Act| ಹಿಂದೂಗಳು ಸಲ್ಲಿಸಿದಾಗ ಹೈಕೋರ್ಟ್‌ಗೆ ಹೋಗಿ ಎಂದಿತ್ತು – ಸುಪ್ರೀಂ ವಿಚಾರಣೆಗೆ ಮಾನದಂಡ ಏನು?- ವಕೀಲ ವಿಷ್ಣು ಶಂಕರ್‌ ಜೈನ್‌

     

    ಎರಡು ದಿನದ ಹಿಂದೆ ಉಪರಾಷ್ಟ್ರಪತಿ ಜಗದೀಪ್ ಧನಕರ್ (Vice President Jagdeep Dhankhar) ಕೋರ್ಟ್‌ಗಳು ಸೂಪರ್ ಪಾರ್ಲಿಮೆಂಟ್‌ ಆಗಬಾರದು. ಈಗ ಕಾರ್ಯಾಂಗ ಮತ್ತು ಶಾಸಕಾಂಗದ ಜಾಗದಲ್ಲಿ ನ್ಯಾಯಾಂಗದ ಪ್ರವೇಶವಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಧನಕರ್ ಅವರು ಸುಪ್ರೀಂ ಕಾರ್ಯ ವೈಖರಿಯನ್ನು ಟೀಕಿಸಿದ ಬಳಿಕ ಈಗ ನಿಶಿಕಾಂತ್‌ ದುಬೆ ಸುಪ್ರೀಂ ಕೋರ್ಟ್‌ ಕಾರ್ಯವೈಖರಿಯನ್ನು ಪ್ರಶ್ನಿಸಿದ್ದಾರೆ.  ಇದನ್ನೂ ಓದಿ: ಜಡ್ಜ್ ಮನೆಯಲ್ಲಿ ಪತ್ತೆಯಾದ ಕಂತೆ ಕಂತೆ ಹಣದ ಬಗ್ಗೆ ಎಫ್‌ಐಆರ್ ಆಗಿಲ್ಲ ಯಾಕೆ: ಧನಕರ್ ಪ್ರಶ್ನೆ

    ಏನಿದು ಕೇಸ್‌?
    ಶಾಸನಸಭೆ ಅಂಗೀಕರಿಸಿದ ಮಸೂದೆಗಳಿಗೆ ಅಂಕಿತ ಹಾಕುವ ವಿಚಾರವಾಗಿ ರಾಷ್ಟ್ರಪತಿ ಹಾಗೂ ರಾಜ್ಯಪಾಲರ ಅಧಿಕಾರಕ್ಕೆ ಸುಪ್ರೀಂ ಕೋರ್ಟ್‌ (Suprme Court) ಡೆಡ್‌ಲೈನ್‌ ವಿಧಿಸಿ ತೀರ್ಪು ಪ್ರಕಟಿಸಿತ್ತು. ಪರಿಶೀಲನೆಗಾಗಿ ರಾಜ್ಯಪಾಲರಿಂದ ಬಂದ ಮಸೂದೆಗಳ ವಿಚಾರವಾಗಿ ಮೂರು ತಿಂಗಳ ಅವಧಿಯಲ್ಲಿ ತೀರ್ಮಾನ ಕೈಗೊಳ್ಳಬೇಕು ಎಂದು ರಾಷ್ಟ್ರಪತಿಯವರಿಗೆ ಸುಪ್ರೀಂ ಕೋರ್ಟ್‌ ಕಾಲಮಿತಿ ನಿಗದಿ ಮಾಡಿ ಏಪ್ರಿಲ್‌ 8 ರಂದು ಆದೇಶ ಪ್ರಕಟಿಸಿತ್ತು.

    ರಾಜ್ಯಪಾಲರು ರಾಷ್ಟ್ರಪತಿಯವರ ಪರಿಶೀಲನೆಗಾಗಿ ಯಾವ ದಿನಾಂಕಕ್ಕೆ ಮಸೂದೆಯನ್ನು ಕಳುಹಿಸಲಾಗಿತ್ತೋ, ಆ ದಿನಾಂಕದಿಂದ ಅನ್ವಯವಾಗುವಂತೆ ಮೂರು ತಿಂಗಳ ಅವಧಿಯಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಕೋರ್ಟ್‌ ರಾಷ್ಟ್ರಪತಿಯವರಿಗೆ ಹೇಳಿರುವುದು ಇದೇ ಮೊದಲು. ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಮಹಾದೇವನ್ ಅವರನ್ನೊಳಗೊಂಡ ಪೀಠವು ತಮಿಳುನಾಡು ರಾಜ್ಯ ಸರ್ಕಾರ vs ರಾಜ್ಯಪಾಲ ರವಿ ವಿರುದ್ಧದ ಪ್ರಕರಣದ ವಿಚಾರಣೆ ನಡೆಸಿ ಈ ಮಹತ್ವದ ತೀರ್ಪು ಪ್ರಕಟಿಸಿತ್ತು.

  • ಜುಕರ್‌ಬರ್ಗ್‌ ಹೇಳಿಕೆಗೆ ಕ್ಷಮೆ ಕೇಳಿದ ಮೆಟಾ – ಈ ವಿಚಾರ ಇಲ್ಲಿಗೆ ಮುಕ್ತಾಯ: ನಿಶಿಕಾಂತ್‌ ದುಬೆ

    ಜುಕರ್‌ಬರ್ಗ್‌ ಹೇಳಿಕೆಗೆ ಕ್ಷಮೆ ಕೇಳಿದ ಮೆಟಾ – ಈ ವಿಚಾರ ಇಲ್ಲಿಗೆ ಮುಕ್ತಾಯ: ನಿಶಿಕಾಂತ್‌ ದುಬೆ

    ನವದೆಹಲಿ: ಫೇಸ್‌ಬುಕ್‌ (Facebook) ಕಂಪನಿಯ ಮಾತೃಸಂಸ್ಥೆ ಮೆಟಾ (Meta) ಕ್ಷಮೆಯಾಚನೆ ಮಾಡಿದ ಬೆನ್ನಲ್ಲೇ ಈ ವಿಚಾರವನ್ನು ಇಲ್ಲಿಗೆ ಮುಗಿಸುತ್ತೇವೆ ಎಂದು ಬಿಜೆಪಿ ಸಂಸದ ಮತ್ತು ಮಾಹಿತಿ ತಂತ್ರಜ್ಞಾನ ಸಂಸದೀಯ ಸಮಿತಿ ಅಧ್ಯಕ್ಷ ನಿಶಿಕಾಂತ್ ದುಬೆ (Nishikant Dubey) ಹೇಳಿದ್ದಾರೆ.

    ಪಾಡ್‌ಕಾಸ್ಟ್ ಒಂದರಲ್ಲಿ ಮಾತನಾಡಿದ್ದ ಮೆಟಾ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌ (Mark Zuckerberg) ಅವರು ಕೋವಿಡ್ ಸಾಂಕ್ರಾಮಿಕದ ಬಳಿಕ ಭಾರತ ಸೇರಿದಂತೆ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಸರ್ಕಾರಗಳು 2024ರ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಳ್ಳಲಿದೆ ಎಂದು ಹೇಳಿದ್ದರು.

    ಈ ಹೇಳಿಕೆಗೆ ಭಾರತದಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದ್ದಂತೆ ಮೆಟಾ ಇಂಡಿಯಾದ ಉಪಾಧ್ಯಕ್ಷ ಶಿವನಾಥ್ ಥುರ್ಕಲ್‌ ಅವರು ಮಾಹಿತಿ ತಂತ್ರಜ್ಞಾನ ಖಾತೆಯ ಸಚಿವ ಅಶ್ವಿನಿ ವೈಷ್ಣವ್‌ (Ashwini Vaishnav) ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿ ಉದ್ದೇಶಪೂರ್ವಕವಲ್ಲದ ಈ ತಪ್ಪಿಗಾಗಿ ಕ್ಷಮೆಯಾಚಿಸುತ್ತೇವೆ ಎಂದು ಹೇಳಿದ್ದಾರೆ.

    2024 ರ ಚುನಾವಣೆಯಲ್ಲಿ ಅನೇಕ ಅಧಿಕಾರದಲ್ಲಿರುವ ಪಕ್ಷಗಳು ಮರು ಆಯ್ಕೆಯಾಗಲಿಲ್ಲ ಎಂಬ ಮಾರ್ಕ್ ಜುಕರ್‌ಬರ್ಗ್‌ ಅವರ ಅಭಿಪ್ರಾಯವು ಹಲವಾರು ದೇಶಗಳಿಗೆ ನಿಜವಾಗಿದೆ. ಆದರೆ ಈ ಹೇಳಿಕೆ ಭಾರತಕ್ಕೆ ಅಲ್ಲ. ಈ ಅಜಾಗರೂಕ ತಪ್ಪಿಗೆ ನಾವು ಕ್ಷಮೆಯಾಚಿಸುತ್ತೇವೆ ಎಂದು ಹೇಳಿದ್ದಾರೆ.

    ಈ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ ನಿಶಿಕಾಂತ್‌ ದುಬೆ, ಕೊನೆಗೂ ಮೆಟಾ ಇಂಡಿಯಾದ ಅಧಿಕಾರಿಗಳು ತಮ್ಮ ತಪ್ಪಿಗೆ ಕ್ಷಮೆಯಾಚಿಸಿದ್ದಾರೆ. ಇದು ಭಾರತದ ಸಾಮಾನ್ಯ ನಾಗರಿಕರ ಗೆಲುವು. ಗೌರವಾನ್ವಿತ ಪ್ರಧಾನಿ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿಯನ್ನಾಗಿ ಮಾಡುವ ಮೂಲಕ ಜನರು ದೇಶದ ಬಲಿಷ್ಠ ನಾಯಕತ್ವವನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಈಗ ನಮ್ಮ ಸಮಿತಿಯ ಜವಾಬ್ದಾರಿ ಈ ವಿಷಯದ ಮೇಲೆ ಕೊನೆಗೊಳ್ಳುತ್ತದೆ. ಭವಿಷ್ಯದಲ್ಲಿ ನಾವು ಇತರ ವಿಷಯಗಳ ಬಗ್ಗೆ ಈ ಸಾಮಾಜಿಕ ವೇದಿಕೆಗಳನ್ನು ಕರೆಯುತ್ತೇವೆ ಎಂದು ಪೋಸ್ಟ್‌ ಮಾಡಿದ್ದಾರೆ.

    ಜುಕರ್‌ಬರ್ಗ್‌ ತಪ್ಪು ಮಾಹಿತಿ ನೀಡಿದ್ದಾರೆ. ಈ ತಪ್ಪಿಗಾಗಿ ಆ ಸಂಸ್ಥೆ ಭಾರತೀಯ ಸಂಸತ್ತಿನಲ್ಲಿ ಮತ್ತು ಸಾರ್ವಜನಿಕರಲ್ಲಿ ಕ್ಷಮೆಯಾಚಿಸಬೇಕು. ಮೆಟಾಗೆ ಸಮನ್ಸ್‌ ಜಾರಿ ಮಾಡಲಾಗುವುದು ಎಂದು ಮಂಗಳವಾರ ನಿಶಿಕಾಂತ್ ದುಬೆ ತಿಳಿಸಿದ್ದರು.

     

  • ವಕ್ಫ್‌ ತಿದ್ದುಪಡಿ ಮಸೂದೆ ವಿರುದ್ಧ ಬಂತು 1.25 ಕೋಟಿ ಪ್ರತಿಕ್ರಿಯೆ

    ವಕ್ಫ್‌ ತಿದ್ದುಪಡಿ ಮಸೂದೆ ವಿರುದ್ಧ ಬಂತು 1.25 ಕೋಟಿ ಪ್ರತಿಕ್ರಿಯೆ

    – ಇ-ಮೇಲ್ ಅಭಿಯಾನದ ಹಿಂದೆ ಪಾಕ್-ಚೀನಾ ಷಡ್ಯಂತ್ರದ ಅನುಮಾನ ವ್ಯಕ್ತಪಡಿಸಿದ ಬಿಜೆಪಿ ಸಂಸದ ನಿಶಿಕಾಂತ್ ದುಬೆ

    ನವದೆಹಲಿ: ವಕ್ಫ್‌ (ತಿದ್ದುಪಡಿ) ಮಸೂದೆಯ ಬಗ್ಗೆ ತನಿಖೆ ನಡೆಸುತ್ತಿರುವ ಸಂಸದೀಯ ಸಮಿತಿಯು ಸುಮಾರು 1.25 ಕೋಟಿ ಪ್ರತಿಕ್ರಿಯೆಯನ್ನು ಪಡೆಯುತ್ತಿರುವ ಬಗ್ಗೆ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಕಳವಳ ವ್ಯಕ್ತಪಡಿಸಿದ್ದಾರೆ. ಇದರ ಹಿಂದೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಮತ್ತು ಚೀನಾದ ಪಾತ್ರವಿದೆ ಇರಬಹುದು. ಈ ಪ್ರತಿಕ್ರಿಯೆಗಳ ಮೂಲದ ಬಗ್ಗೆ ತನಿಖೆ ನಡೆಸಬೇಕೇಂದು ಒತ್ತಾಯಿಸಿದ್ದಾರೆ.

    ಈ ಕುರಿತು ನಿಶಿಕಾಂತ್ ದುಬೆ, ವಕ್ಫ್ ಮಸೂದೆ ತನಿಖಾ ಸಮಿತಿ ಅಧ್ಯಕ್ಷೆ ಜಗದಾಂಬಿಕಾ ಪಾಲ್ ಅವರಿಗೆ ಪತ್ರ ಬರೆದಿದ್ದಾರೆ. ಮಸೂದೆ ವಿರೋಧಿಸಿ ಬರುತ್ತಿರುವ ಪ್ರತಿಕ್ರಿಯೆಗಳ ಹಿಂದೆ ತೀವ್ರಗಾಮಿ ಸಂಘಟನೆಗಳು, ಝಾಕಿರ್ ನಾಯ್ಕ್‌ನಂತಹ ವ್ಯಕ್ತಿಗಳ ಕೈವಾಡ ಇರಬಹುದು. ಐಎಸ್‌ಐ ಮತ್ತು ಚೀನಾದಂತಹ ವಿದೇಶಿ ಶಕ್ತಿಗಳ ಸಂಭಾವ್ಯ ಪಾತ್ರವನ್ನು ತಳ್ಳಿ ಹಾಕುವಂತಿಲ್ಲ. ಹೀಗಾಗಿ ಈ ಬಗ್ಗೆ ತನಿಖೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

    ನಿಶಿಕಾಂತ್ ದುಬೆ ಸಂಸದೀಯ ಸಮಿತಿಯ ಸದಸ್ಯರೂ ಆಗಿದ್ದು, ಈ ಪ್ರತಿಕ್ರಿಯೆ ಸಲ್ಲಿಕೆಗಳ ಭೌಗೋಳಿಕ ಮೂಲದ ಬಗ್ಗೆ ತಕ್ಷಣ ಗಮನ ಹರಿಸಬೇಕು ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ. ಭಾರತವೊಂದರಿಂದಲೇ ಇಷ್ಟು ದೊಡ್ಡ ಪ್ರಮಾಣದ ಪ್ರತಿಕ್ರಿಯೆ ಪಡೆಯುವುದು ಅಸಾಧ್ಯ. ಭಾರತವು ಪ್ರಬಲ ಸಂಸದೀಯ ವ್ಯವಸ್ಥೆಯನ್ನು ಹೊಂದಿರುವ ದೇಶವಾಗಿದ್ದು, ವಿದೇಶಿ ಹಸ್ತಕ್ಷೇಪದ ಮೂಲಕ ಅದರ ಮೇಲೆ ಪ್ರಭಾವ ಬೀರುವ ಯಾವುದೇ ಪ್ರಯತ್ನವು ರಾಷ್ಟ್ರೀಯ ಸಾರ್ವಭೌಮತೆಗೆ ನೇರ ಬೆದರಿಕೆಯಾಗಿದೆ ಎಂದು ಅವರು ಒತ್ತಿ ಹೇಳಿದ್ದಾರೆ.

    ವಕ್ಫ್ ತಿದ್ದುಪಡಿ ಮಸೂದೆಯನ್ನು ಮುಸ್ಲಿಂ ಗುಂಪುಗಳು ತೀವ್ರವಾಗಿ ವಿರೋಧಿಸುತ್ತಿವೆ. ವಕ್ಫ್ ತಿದ್ದುಪಡಿ ವಿಧೇಯಕದ ಮೂಲಕ ಅವರ ಧಾರ್ಮಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡುವ ಯತ್ನ ನಡೆಯುತ್ತಿದೆ ಎನ್ನುತ್ತಾರೆ. ವಿರೋಧ ಪಕ್ಷಗಳು ಕೂಡ ಈ ಮಸೂದೆಯನ್ನು ವಿರೋಧಿಸಿದ್ದವು, ನಂತರ ಸರ್ಕಾರವು ವಕ್ಫ್ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ ಕಳುಹಿಸಲು ನಿರ್ಧರಿಸಿತು. ಜಂಟಿ ಸಂಸದೀಯ ಸಮಿತಿಯು ವಕ್ಫ್ ತಿದ್ದುಪಡಿ ಮಸೂದೆಗೆ ಒಮ್ಮತ ಮೂಡಿಸಲು ಜನರ ಪ್ರತಿಕ್ರಿಯೆಯನ್ನು ಕೋರಿತ್ತು ಮತ್ತು ಅದಕ್ಕಾಗಿ ಜಾಹೀರಾತು ನೀಡಿತ್ತು. ಸಮಿತಿಯು ಕೋಟಿಗಟ್ಟಲೆ ಶಿಫಾರಸುಗಳನ್ನು ಸ್ವೀಕರಿಸುತ್ತದೆ ಎಂದು ಯಾರೂ ಯೋಚಿಸಿರಲಿಲ್ಲ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಇತ್ತೀಚೆಗೆ ಹೇಳಿದ್ದರು.

  • ಅಡಿಕೆ ನಿಷೇಧ ಕುರಿತು ಬಿಜೆಪಿ ಸಂಸದರ ಹೇಳಿಕೆಗೆ ಖಂಡನೆ

    ಅಡಿಕೆ ನಿಷೇಧ ಕುರಿತು ಬಿಜೆಪಿ ಸಂಸದರ ಹೇಳಿಕೆಗೆ ಖಂಡನೆ

    ಶಿವಮೊಗ್ಗ: ಜಾರ್ಖಂಡ್‌ನ  ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಅಡಿಕೆ ನಿಷೇಧದ ಕುರಿತು ನೀಡಿರುವ ಹೇಳಿಕೆಗೆ ಜಿಲ್ಲಾ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ರಮೇಶ್ ಹೆಗ್ಡೆ ಕಿಡಿಕಾರಿದ್ದಾರೆ.

    ಶಿವಮೊಗ್ಗದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಶಿಕಾಂತ್ ಅಡಿಕೆ ಕ್ಯಾನ್ಸರ್‌ಕಾರಕ, ನಿಷೇಧಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿಗೆ ಮನವಿ ಸಲ್ಲಿಸಿದ್ದರು ಇದು ಖಂಡನೀಯ. ಮೋದಿ ಅವರು ಅಧಿಕಾರಕ್ಕೆ ಬರುವ ಮೊದಲು ಅಡಿಕೆಗೆ ಅಂಟಿರುವ ಕಳಂಕವನ್ನು ತೊಡೆದು ಹಾಕುವ ಕುರಿತು ಭರವಸೆ ನೀಡಿದ್ದರು. ಆದರೆ ಇದೀಗ ಅದೇ ಸರ್ಕಾರದ ಸಂಸದರು ಅಡಿಕೆಯ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಹವಾಮಾನ ವೈಪರೀತ್ಯ ಅಡಿಕೆ ಬೆಳೆಗಾರರು ಕಂಗಾಲು

    ಮೋದಿ ಅವರು, ಅಡಿಕೆ ಬೆಳೆಗಾರರ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಸುಪ್ರೀಂ ಕೋರ್ಟ್‍ನಲ್ಲಿ ಅಡಿಕೆ ನಿಷೇಧ ಕುರಿತು ವಿಚಾರಣೆ ನಡೆಯುತ್ತಿದೆ. ಆದರೆ ನ್ಯಾಯಾಲಯಕ್ಕೆ ಇದುವರೆಗೆ ಯಾವುದೇ ಅಫಿಡವಿಟ್ ಸಲ್ಲಿಸಿಲ್ಲ. ಇದು ಅಡಕೆ ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ ಎಂದರು. ಇದನ್ನೂ ಓದಿ: ದೇವಸ್ಥಾನದ ಪ್ರಸಾದ ಸೇವಿಸಿ 30 ಮಂದಿ ಅಸ್ವಸ್ಥ

  • ಅಡಕೆ ನಿಷೇಧಿಸಿ- ಮೋದಿಗೆ ಬಿಜೆಪಿ ಸಂಸದನಿಂದ ಪತ್ರ

    ಅಡಕೆ ನಿಷೇಧಿಸಿ- ಮೋದಿಗೆ ಬಿಜೆಪಿ ಸಂಸದನಿಂದ ಪತ್ರ

    – ಧಾರ್ಮಿಕ ವಿಧಿವಿಧಾನಕಷ್ಟೇ ಅಡಕೆ ಬಳಸಲಿ

    ನವದೆಹಲಿ: ಅಡಕೆ ಸೇವನೆಯಿಂದ ಮಾರಕ ಕ್ಯಾನ್ಸರ್ ನಂಥ ರೋಗಗಳು ಉಂಟಾಗುತ್ತಿದೆ. ಹೀಗಾಗಿ ಜನರು ಅಡಕೆ ಸೇವಿಸದಂತೆ ನಿಷೇಧಿಸಬೇಕು ಎಂದು ಒತ್ತಾಯಿಸಿ ಜಾರ್ಖಂಡ್ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಪ್ರಧಾನ ಮಂತ್ರಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

    ಜಾರ್ಖಂಡ್‍ನ ಸಂಸದನಾಗಿ ನನ್ನ ವೈಯಕ್ತಿಕ ಅನುಭವದಲ್ಲಿ ಹೇಳುತ್ತಿದ್ದೇನೆ. ಪಾನ್ ಮಸಾಲದ ಪ್ರಮುಖ ಭಾಗವಾದ ಅಡಕೆ ಸೇವಿಸುವ ಮೂಲಕ ಕ್ಯಾನ್ಸರ್ ಸೇರಿದತೆ ಮಾರಕ ಕಾಯಿಲೆಗಳಿಗೆ ಜನರು ತುತ್ತಾಗಿ ತೊಂದರೆ ಅನುಭವಿಸುವುದನ್ನು ಸ್ವತ ನಾನೇ ನೋಡಿದ್ದೇನೆ. ಹೀಗಾಗಿ ಮಾನವರು ಬಳಕೆಗೆ ಅಡಕೆ ನಿಷೇಧಿಸಬೇಕೆಂದು ನಾನು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡುತ್ತೇನೆ ಎಂದಿದ್ದಾರೆ.

    ಅಡಕೆ ಸೇವನೆಯಿಂದ ಸ್ತಮಾ ರೋಗ ಉಲ್ಬಣವಾಗುತ್ತದೆ. ಹೃದಯದ ರಕ್ತನಾಳ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅಲ್ಲದೆ ಉಸಿರಾಟದ ಏರಿಳಿತದಂಥ ಸಮಸ್ಯೆಗಳು ಉಂಟಾಗುತ್ತದೆ. ಇದೇ ಕಾರಣಗಳಿಗಾಗಿಯೇ 2018ರಲ್ಲಿ ಮಹಾರಾಷ್ಟ್ರ ಸರ್ಕಾರ ಅಡಕೆ ಮಾರಾಟ ಮತ್ತು ಬಳಕೆಯ ನಿಷೇಧಿಸಿತ್ತು. ಇದನ್ನೂ ಓದಿ: ಕಮಲಾ ನೆಹರು ಆಸ್ಪತ್ರೆಯಲ್ಲಿ ಬೆಂಕಿ ಅವಘಡ – ನಾಲ್ವರು ಮಕ್ಕಳ ದಾರುಣ ಸಾವು

    ಮಾನವರ ಬಳಕೆಗೆ ಅಡಕೆ ನಿಷೇಧಿಸಬೇಕು. ಆದರೆ ಧಾರ್ಮಿಕ ವಿಧಿವಿಧಾನಗಳಿಗೆ ಬಳಸಲು ಅನುಮತಿ ಮುಂದುವರೆಸಬೇಕು ಎಂದು ದುಬೆ ತಮ್ಮ ಪತ್ರದಲ್ಲಿ ಮನವಿ ಮಾಡಿದ್ದಾರೆ.

  • ಬಿಜೆಪಿ ಸಂಸದನ ಪಾದಪೂಜೆ ನೆರವೇರಿಸಿ ಅದೇ ಗಲೀಜು ನೀರು ಕುಡಿದ ಕಾರ್ಯಕರ್ತ

    ಬಿಜೆಪಿ ಸಂಸದನ ಪಾದಪೂಜೆ ನೆರವೇರಿಸಿ ಅದೇ ಗಲೀಜು ನೀರು ಕುಡಿದ ಕಾರ್ಯಕರ್ತ

    ರಾಂಚಿ: ಕಾರ್ಯಕರ್ತರೊಬ್ಬರ ಬಿಜೆಪಿ ಸಂಸದರೊಬ್ಬರ ಪಾದ ಪೂಜೆ ಮಾಡಿ, ಕೊನೆಗೆ ಅದೇ ಗಲೀಜು ನೀರು ಕುಡಿದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

    ಜಾರ್ಖಂಡ್ ರಾಜ್ಯದ ಗೊಡ್ಡಾ ಲೋಕಸಭಾ ಕ್ಷೇತ್ರದ ಸಂಸದ ನಿಶಿಕಾಂತ್ ದುಬೆ ಪಾದಪೂಜೆ ಮಾಡಿಸಿಕೊಂಡ ಸಂಸದರು. ಸಾರ್ವಜನಿಕ ಸಮಾರಂಭದಲ್ಲಿ ಪಾದ ಪೂಜೆ ಮಾಡಿಸಿಕೊಂಡು ಟ್ವಿಟ್ಟರ್ ಮತ್ತು ಫೇಸ್‍ಬುಕ್ ನಲ್ಲಿ ಸಂತಸವನ್ನು ಹಂಚಿಕೊಂಡಿದ್ದಾರೆ.

    ಗುಡ್ಡಾ ಜಿಲ್ಲೆಯ ಕಲಾಲಿ ಗ್ರಾಮದ ಸೇತುವೆಯ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಸಂಸದ ನಿಶಿಕಾಂತ್ ದುಬೆ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು. ಈ ವೇಳೆ ಸಮಾರಂಭದಲ್ಲಿ ಮಾತನಾಡುತ್ತಿದ್ದ ಬಿಜೆಪಿ ಕಾರ್ಯಕರ್ತನೋರ್ವ, ಸಂಸದರು ಸೇತುವೆ ಶಿಲಾನ್ಯಾಸ ನೆರವೇರಿಸಿದ್ದಾರೆ. ಈ ಸೇತುವೆ ನಿರ್ಮಾಣದಿಂದ ನಮಗೆ ಅನುಕೂಲವಾಗಿದೆ. ಹಾಗಾಗಿ ನನಗೆ ಇಂದು ಸಂಸದರ ಪಾದಪೂಜೆ ಮಾಡಬೇಕು ಅಂತಾ ಅನಿಸುತ್ತಿದೆ ಅಂತಾ ಹೇಳಿದರು.

    ತಮ್ಮ ಭಾಷಣ ಮುಗಿಸಿದ ಕಾರ್ಯಕರ್ತ ತಾವು ಹೇಳಿದಂತೆ ತುಂಬಿದ ಸಮಾರಂಭದಲ್ಲಿಯೇ ಸಂಸದ ಪಾದ ಪೂಜೆಗೆ ಮುಂದಾದರು. ಆದ್ರೆ ಸಂಸದರು ಮಾತ್ರ ಪಾದ ಪೂಜೆಗೆ ಯಾವುದೇ ವಿರೋಧ ವ್ಯಕ್ತಪಡಿಸದೇ ಖುಷಿಯಾಗಿ ಕಾಲುಗಳನ್ನು ತೊಳೆಸಿಕೊಂಡಿದ್ದಾರೆ. ಕಾರ್ಯಕರ್ತ ಇಷ್ಟಕ್ಕೆ ಸುಮ್ಮನಾಗದ ಪಾದಪೂಜೆ ಮಾಡಿದ ನೀರನ್ನು ಅಮೃತ ಅಂತಾ ಸೇವನೆ ಮಾಡಿದ್ದಾರೆ.

    ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ಸಂಸದರ ನಡೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಕಾರ್ಯಕರ್ತ ಪಾದಪೂಜೆಗೆ ಮುಂದಾದ್ರೆ ಸಚಿವರು ತಡೆಯುವ ಪ್ರಯತ್ನ ಮಾಡಬಹುದಿತ್ತು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv