Tag: nishanth shetty

  • ಕಂಬಳ ಋತುವಿನಲ್ಲಿ ಮಾಂಸಾಹಾರವಿಲ್ಲ, ಕುಚ್ಚಿಲು ಅಕ್ಕಿ ಗಂಜಿ ಚಟ್ನಿ- ನಿಶಾಂತ್ ಶೆಟ್ಟಿಯ ಲೈಫ್ ಸ್ಟೋರಿ

    ಕಂಬಳ ಋತುವಿನಲ್ಲಿ ಮಾಂಸಾಹಾರವಿಲ್ಲ, ಕುಚ್ಚಿಲು ಅಕ್ಕಿ ಗಂಜಿ ಚಟ್ನಿ- ನಿಶಾಂತ್ ಶೆಟ್ಟಿಯ ಲೈಫ್ ಸ್ಟೋರಿ

    – ಶ್ರೀನಿವಾಸ ಗೌಡರ ದಾಖಲೆ ಮುರಿದ ನಿಶಾಂತ್ ಶೆಟ್ಟಿ
    – ವರ್ಷಕ್ಕೆ 2 ಯಜಮಾನರ ಜೊತೆ ಒಪ್ಪಂದ

    ಉಡುಪಿ: ಕರಾವಳಿಯ ಜಾನಪದ ಕ್ರೀಡೆ ಕಂಬಳ ವಿಶ್ವಮಟ್ಟದಲ್ಲಿ ಹೆಸರು ಮಾಡುತ್ತಿದೆ. ಕಂಬಳ ಕೋಣದ ಓಟಗಾರರು ಒಬ್ಬರಿಗಿಂತ ಒಬ್ಬರು ದಾಖಲೆಗಳನ್ನು ಮಾಡುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಅಶ್ವತ್ಥಪುರ ಶ್ರೀನಿವಾಸ ಗೌಡ ಉಸೇನ್ ಬೋಲ್ಟ್ ಗಿಂತ ಚೆನ್ನಾಗಿ ಓಡಿದರೆ, ಉಡುಪಿ ಬಜಗೋಳಿಯ ನಿಶಾಂತ್ ಶೆಟ್ಟಿ ಗೌಡರ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ.

    ಕಟ್ಟುಮಸ್ತಾದ ದೇಹ. ಆದರೆ ಒಂದು ದಿನವೂ ಜಿಮ್ಮಿಗೆ ಹೋದವರಲ್ಲ. ಗದ್ದೆ, ಹಟ್ಟಿ, ತೆಂಗಿನ ತೋಟದಲ್ಲಿ ಕೆಲಸ, ಅಮ್ಮ ರುಚಿರುಚಿಯಾದ ತಿಂಡಿ ಮಾಡಿದರೂ ನಿಶಾಂತ್ ಅವರು ತಿನ್ನುವುದು ಕುಚ್ಚಿಲು ಅಕ್ಕಿ ಗಂಜಿ. ಅದಕ್ಕೆ ಉಪ್ಪಿನಕಾಯಿ ಮತ್ತು ಚಟ್ನಿ. ಗಂಜಿ ಊಟ ಮಾಡಿದರೆ ಮತ್ತೆ ಅಡಿಕೆ ತೋಟದಲ್ಲಿ ಕೆಲಸ ಮಾಡಲು ಹೊರಡುತ್ತಾರೆ. ಇದನ್ನೂ ಓದಿ:  ಶ್ರೀನಿವಾಸ ಗೌಡ್ರನ್ನು ಮೀರಿಸಿದ ಮತ್ತೋರ್ವ ಕಂಬಳ ಓಟಗಾರ- ಉಡುಪಿಯಲ್ಲಿ ನಿಶಾಂತ್ ಶೆಟ್ಟಿ ಸಾಧನೆ

    ಕಾರ್ಕಳದ ಬಜಗೋಳಿಯ ಜೋಗಿಬೆಟ್ಟು ಎಂಬಲ್ಲಿ ನಿಶಾಂತ್ ಶೆಟ್ಟಿ ಅವರ ಮನೆಯಿದೆ. ಮನೆಯ ಸುತ್ತಲೂ ತೋಟ ಇದೆ. ತೋಟದಲ್ಲಿ ಕೆಲಸ ಮಾಡುತ್ತಾ ಹಟ್ಟಿಯಲ್ಲಿ ದನಗಳ ಜೊತೆ ಇರುವ ನಿಶಾಂತ್ ಶೆಟ್ಟಿ ಅವರು ರಾತ್ರಿ ಬೆಳಗಾಗುವುದರ ಒಳಗೆ ಕಂಬಳ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಈಗಿನ್ನೂ ಇಪ್ಪತ್ತೆಂಟು ವಯಸ್ಸಿನ ನಿಶಾಂತ್ ಶೆಟ್ಟಿ ಕಂಬಳ ಕೋಣಗಳನ್ನು ಓಡಿಸಲು ಆರಂಭಿಸಿ ಕೇವಲ ಆರು ವರ್ಷ ಆಗಿದೆ. ಆರು ವರ್ಷದಲ್ಲೇ ನಿಶಾಂತ್ ಶೆಟ್ಟಿ ಐವತ್ತಕ್ಕಿಂತಲೂ ಹೆಚ್ಚು ಮೆಡಲ್‍ಗಳನ್ನು ಬಾಚಿದ್ದಾರೆ. ಇದನ್ನೂ ಓದಿ: ಶ್ರೀನಿವಾಸ ಗೌಡರಿಗೆ ಖಾಲಿ ಕವರ್ ನೀಡಿ ಪೋಸ್‍ಕೊಟ್ಟ ಸಿಟಿ ರವಿ, ಹೆಬ್ಬಾರ್

    ದಕ್ಷಿಣ ಕನ್ನಡ ಜಿಲ್ಲೆಯ ಅಶ್ವತ್ಥಪುರ ಶ್ರೀನಿವಾಸ ಗೌಡ ಅವರು ಸದ್ಯ ಕಂಬಳ ಕ್ಷೇತ್ರದ ಸವ್ಯಸಾಚಿ. ಉಸೇನ್ ಬೋಲ್ಟ್ ಗಿಂತಲೂ ಒಂದು ಕೈ ಹೆಚ್ಚು ಮೀರಿ ಶ್ರೀನಿವಾಸ್ ಗೌಡ ದಾಖಲೆಗಳನ್ನು ಮಾಡಿದ್ದಾರೆ. ಶ್ರೀನಿವಾಸಗೌಡ ಕಿನ್ನಿಗೋಳಿಯ ಐಕಳದಲ್ಲಿ ಮಾಡಿದ ದಾಖಲೆಯನ್ನು ಉಡುಪಿಯ ನಿಶಾಂತ್ ಶೆಟ್ಟಿ ಒಂದು ವಾರದಲ್ಲಿ ಅಳಿಸಿ ಹಾಕಿದ್ದಾರೆ. ವೇಣೂರಿನಲ್ಲಿ ನಡೆದ ಸೂರ್ಯ ಚಂದ್ರ ಕಂಬಳದಲ್ಲಿ ಅತಿ ಹೆಚ್ಚು ವೇಗದಲ್ಲಿ ಓಡಿ ದಾಖಲೆಯನ್ನು ನಿರ್ಮಿಸಿದ್ದಾರೆ.

    ನಿಶಾಂತ್ ಶೆಟ್ಟಿ ಕೃಷಿ ಮೂಲದಿಂದ ಬಂದವರು. ಎರಡು ಸಾವಿರ ಹದಿನಾರರ ಕಂಬಳ ಅಕಾಡೆಮಿ ನಡೆಸಿದ ತರಬೇತಿಯಲ್ಲಿ ಹತ್ತು ದಿವಸಗಳ ಓಟದ ತರಬೇತಿಯನ್ನು ಪಡೆದಿದ್ದಾರೆ. ಕೋಣಕ್ಕೆ ಆಹಾರ ಕೊಡುವುದು ಕೋಣಕ್ಕೆ ಹಗ್ಗ ಕಟ್ಟುವುದು, ನೇಗಿಲು ಬಿಗಿಯುವುದು, ಓಡಿಸುವುದು ಎಣ್ಣೆ ಹಚ್ಚುವುದು ಕೋಣಗಳ ಸಂಪೂರ್ಣ ಆರೈಕೆ ನಿಶಾಂತ್ ಶೆಟ್ಟಿ ಅವರಿಗೆ ಗೊತ್ತಿದೆ.

    ನಿಶಾಂತ್ ಶೆಟ್ಟಿ ಅವರಿಗೆ ದೊಡ್ಡ ಗೆಳೆಯರ ಬಳಗವೇ ಇದೆ. ಚಿಕ್ಕಂದಿನಿಂದ ಕಂಡವರು ನಿಶಾಂತ್ ಶೆಟ್ಟಿ ಕಂಬಳದ ಕೋಣಗಳನ್ನು ಓಡಿಸಲು ಹುಟ್ಟಿದವರು ಎಂಬ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ. ಇದನ್ನೂ ಓದಿ: ಕಂಬಳ ಹೀರೋಗೆ ಸಖತ್ ಡಿಮ್ಯಾಂಡ್- ಒಲಂಪಿಕ್ಸ್‌ಗೆ ಇಳಿಯೋ ಮುನ್ನವೇ ಶೂ ಕಂಪನಿಗಳಿಂದ ಕರೆ

    ಪ್ರಕೃತಿ ಕಂಬಳದ ಗದ್ದೆಯಲ್ಲಿ ಚಾಕಚಕ್ಯತೆ ಕೇವಲ ಓಡಿಸುವುದು ಮಾತ್ರ ಅಲ್ಲ. ಕೋಣಗಳನ್ನು ಓಡುವಂತೆ ಮಾಡುವ ಚಾಕಚಕ್ಯತೆಯೂ ಬೇಕು. ಈ ಎರಡೂ ನಿಶಾಂತ್ ಶೆಟ್ಟಿ ಅವರಲ್ಲಿದೆ. ಶ್ರೀನಿವಾಸ ಗೌಡ ಅವರು ಅದು ಮನೆತನದ ಎಂಟರಿಂದ ಹತ್ತು ಕೋಣಗಳನ್ನು ಓಡಿಸಿದರೆ ನಿಶಾಂತ್ ಕೇವಲ ಎರಡು ಜೊತೆ ಕೋಣಗಳನ್ನು ಓಡಿಸುತ್ತಾರೆ.

    ಪ್ರತಿ ವರ್ಷ ಎರಡು ಯಜಮಾನರ ಕೋಣಗಳನ್ನು ಓಡಿಸುವ ನಿಶಾಂತ್ ಮುಂದಿನ ವರ್ಷ ಮತ್ತೆ ಬೇರೆ ಕೋಣಗಳತ್ತ ಮುಖ ಮಾಡುತ್ತಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ನೂರ ಐವತ್ತು ಜೊತೆ ಕೋಣಗಳು ಕಂಬಳ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತವೆ. ಹದಿನೈದಕ್ಕಿಂತಲೂ ಹೆಚ್ಚು ಕೋಣದ ಯಜಮಾನರು ನಿಶಾಂತ್ ಶೆಟ್ಟಿ ಅವರಿಗೆ ಬೇಡಿಕೆಯನ್ನು ಇಡುತ್ತಾರೆ. ಆದರೆ ನಿಶಾಂತ್ ಶೆಟ್ಟಿ ಇಬ್ಬರ ನಾಲ್ಕು ಜೊತೆ ಕೋಣವನ್ನು ಮಾತ್ರ ಓಡಿಸುತ್ತಾರೆ.

    ಮಾಂಸಾಹಾರ ಸೇವನೆಯಿಲ್ಲ:
    ಕಾರ್ಕಳ ತಾಲೂಕು ಬಜಗೋಳಿಯ ಜೋಗಿ ಬೆಟ್ಟುವಿನ ನಿಶಾಂತ್ ಶೆಟ್ಟಿ ಅವರು ಜಾತಿಯಲ್ಲಿ ಬಂಟರು. ಶೇಕಡಾ ನೂರು ಬಂಟರು ನಾನ್ವೆಜ್ ಪ್ರಿಯರು ಎಂದರೆ ತಪ್ಪಲ್ಲ. ಆದರೆ ನಿಶಾಂತ್ ಶೆಟ್ಟಿ ಕಂಬಳಕ್ಕೋಸ್ಕರ ನಾನ್ವೆಜ್ ತ್ಯಾಗ ಮಾಡಿದ್ದಾರೆ. ತರಕಾರಿಯಲ್ಲಿರುವ ಶಕ್ತಿ ನಾನ್ವೆಜ್‍ನಲ್ಲಿ ಇಲ್ಲ ಎನ್ನುವುದು ಅವರ ಅನುಭವವಾಗಿದೆ.

    ಬೆಳಗಿನ ಗಂಜಿ ಊಟ ಮಧ್ಯಾಹ್ನದ ಊಟ ರಾತ್ರಿಯ ಊಟ ಎಲ್ಲವನ್ನೂ ತರಕಾರಿಯ ಜೊತೆಯೇ ಮಾಡುತ್ತಾರೆ. ಮೀನು ಮತ್ತು ಕೋಳಿಯಲ್ಲಿ ಕೊಬ್ಬು ಮತ್ತು ಜಿಡ್ಡು ಇರೋದರಿಂದ ಚಾಕಚಕ್ಯತೆಯಿಂದ ಓಡಾಡಲು ಸಾಧ್ಯವಿಲ್ಲ ಮತ್ತು ಚುರುಕುತನ ಹೊಂದಲು ಸಾಧ್ಯವಿಲ್ಲ ಎನ್ನುವುದು ನಿಶಾಂತ್ ಶೆಟ್ಟಿ ಅವರ ಲೆಕ್ಕಾಚಾರವಾಗಿದೆ.

    ದೊಡ್ಡ ಅಭಿಮಾನಿ:
    ನಿಶಾಂತ್ ಶೆಟ್ಟಿ ಅವರ ತಂದೆ ಕೂಡ ಕಂಬಳದ ದೊಡ್ಡ ಅಭಿಮಾನಿಯಾಗಿದ್ದಾರೆ. ಹಾಗಂತ ಅವರು ಕ್ರೀಡೆಯ ಕಂಬಳದಲ್ಲಿ ಓಟವನ್ನು ಮಾಡಿಲ್ಲ. ಗದ್ದೆಗಳಲ್ಲಿ ತಮ್ಮ ಕೃಷಿ ಚಟುವಟಿಕೆಯ ಸಂದರ್ಭದಲ್ಲಿ ಕೋಣಗಳನ್ನು ಓಡಿಸುತ್ತಿದ್ದರು. ಕಳೆದ ಐದಾರು ವರ್ಷಗಳಿಂದ ನಿಶಾಂತ್ ಶೆಟ್ಟಿ ಕಂಬಳ ಕ್ಷೇತ್ರದಲ್ಲಿ ಮಾಡುತ್ತಿರುವ ಸಾಧನೆ ಕಂಡು ಅವರ ತಂದೆ ಹಿಗ್ಗಿ ಹೋಗಿದ್ದಾರೆ. ಮಗನ ಓಟ ಮತ್ತು ಆತನಿಗೆ ಕಂಬಳ ಕ್ಷೇತ್ರದಲ್ಲಿ ಸಿಕ್ಕಿರುವ ಹೆಸರು ಕಂಡು ಬಹಳ ಖುಷಿಪಟ್ಟಿದ್ದಾರೆ.

    ನಿಶಾಂತ್ ಶೆಟ್ಟಿ ಅವರ ತಾಯಿ ತಾರಾ ಮನೆಯನ್ನು ನೋಡುವ ಜೊತೆ ಮಗನ ಕಂಬಳ ಕ್ಷೇತ್ರಕ್ಕೂ ಬೆನ್ನೆಲುಬಾಗಿ ನಿಂತಿದ್ದಾರೆ. ಹೊತ್ತು ಹೊತ್ತಿಗೆ ಯಾವುದೇ ಆರೋಗ್ಯಕ್ಕೆ ಸಮಸ್ಯೆ ಆಗುವಂತಹ ಆಹಾರವನ್ನು ಅವರು ಕೊಡುವುದಿಲ್ಲ.

    ಕಂಬಳ ಸೀಸನ್‍ನಲ್ಲಿ ಕಂಬಳ ಬಿಟ್ಟರೆ ನಿಶಾಂತ್ ಶೆಟ್ಟಿ ಸಂಪೂರ್ಣವಾಗಿ ಕೃಷಿಯಲ್ಲಿ ತೊಡಗಿಕೊಳ್ಳುತ್ತಾರೆ. ಕಂಬಳ ಕ್ಷೇತ್ರದಲ್ಲಿ ಹೆಸರು ಗಳಿಸಿದರೂ ನಿಶಾಂತ್ ಶೆಟ್ಟಿ ಅವರ ಜೀವನೋಪಾಯಕ್ಕೆ ಅರಸಿದ್ದು ಕೃಷಿ. ಅಡಕೆ ತೋಟ, ಭತ್ತದ ಬೇಸಾಯ ಇವರ ಪ್ರಮುಖ ಬೆಳೆಗಳು. ಹಸು ಸಾಕಣೆ ಮತ್ತು ಎಮ್ಮೆ ಸಾಕಣೆಯನ್ನು ಕೂಡ ಅವರು ಹವ್ಯಾಸವನ್ನಾಗಿ ಮಾಡಿಕೊಂಡಿದ್ದಾರೆ.

  • ಶ್ರೀನಿವಾಸ ಗೌಡ್ರನ್ನು ಮೀರಿಸಿದ ಮತ್ತೋರ್ವ ಕಂಬಳ ಓಟಗಾರ- ಉಡುಪಿಯಲ್ಲಿ ನಿಶಾಂತ್ ಶೆಟ್ಟಿ ಸಾಧನೆ

    ಶ್ರೀನಿವಾಸ ಗೌಡ್ರನ್ನು ಮೀರಿಸಿದ ಮತ್ತೋರ್ವ ಕಂಬಳ ಓಟಗಾರ- ಉಡುಪಿಯಲ್ಲಿ ನಿಶಾಂತ್ ಶೆಟ್ಟಿ ಸಾಧನೆ

    ಉಡುಪಿ: ಕರಾವಳಿಯ ಜಾನಪದ ಕ್ರೀಡೆ ಕಂಬಳದಲ್ಲಿ ದಾಖಲೆಯ ಮೇಲೆ ದಾಖಲೆಗಳು ನಡೆಯುತ್ತಲೇ ಇದೆ. ದಕ್ಷಿಣ ಕನ್ನಡ ಜಿಲ್ಲೆಯ ಅಶ್ವಥಪುರ ನಿವಾಸಿ ಶ್ರೀನಿವಾಸ ಗೌಡರನ್ನು ಈಗಾಗಲೇ ಕಂಬಳದ ಉಸೇನ್ ಬೋಲ್ಟ್ ಗೆ ಹೋಲಿಸಲಾಗಿದೆ. ಇದೀಗ ನಿಶಾಂತ್ ಶೆಟ್ಟಿ ಎಂಬವರು ಇವರನ್ನೂ ಮೀರಿಸಿದ್ದಾರೆ.

    ಹೌದು. ಕಿನ್ನಿಗೋಳಿಯ ಐಕಳದಲ್ಲಿ ನಡೆದ ಕಂಬಳದಲ್ಲಿ ಶ್ರೀನಿವಾಸ್ ಗೌಡ ಕಂಬಳದ ದಾಖಲೆ ಬರೆದಿದ್ದರು. ಆದರೆ ಇದೀಗ ಶ್ರೀನಿವಾಸಗೌಡರ ದಾಖಲೆಯನ್ನು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬಜಗೊಳಿ ನಿಶಾಂತ್ ಶೆಟ್ಟಿ ಮುರಿದಿದ್ದಾರೆ.

    142.5 ಮೀಟರ್ ಕಂಬಳ ಗದ್ದೆಯನ್ನು ಕ್ರಮಿಸಲು ಶ್ರೀನಿವಾಸ ಗೌಡ 13.62 ಸೆಕೆಂಡ್ ತೆಗೆದುಕೊಂಡಿದ್ದರು. ಶ್ರೀನಿವಾಸಗೌಡ ಮಾಡಿದ ದಾಖಲೆಯನ್ನು ಒಂದೇ ವಾರದಲ್ಲಿ ನಿಶಾಂತ್ ಶೆಟ್ಟಿ ಮುರಿದಿದ್ದಾರೆ. ವೇಣೂರಿನಲ್ಲಿ ನಡೆದ ಕಂಬಳದಲ್ಲಿ ನಿಶಾಂತ್ ಶೆಟ್ಟಿ 143 ಮೀಟರನ್ನು 13.61 ಸೆಂಕೆಡಲ್ಲಿ ಓಡಿದ್ದಾರೆ. ಇದನ್ನೂ ಓದಿ: ಕರಾವಳಿಯ ಕಂಬಳ ಓಟಗಾರ ದೇಶಾದ್ಯಂತ ಟ್ರೆಂಡಿಂಗ್- ಕೇಂದ್ರವನ್ನೂ ತಲುಪಿದ ಸಾಧನೆ

    ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ನಿಶಾಂತ್ ಶೆಟ್ಟಿ, ಇದರಲ್ಲಿ ನಮ್ಮ ಸಾಧನೆ ಏನೂ ಇಲ್ಲ. ಕೋಣಗಳು ಓಡಿದಾಗ ನಾವು ಬೆನ್ನತ್ತಿ ಓಡುತ್ತೇವೆ. ಶ್ರೀನಿವಾಸಗೌಡರ ಸಾಧನೆಯ ಮುಂದೆ ನಮ್ಮದೇನೂ ಇಲ್ಲ. ಅವರು 150ಕ್ಕಿಂತಲೂ ಹೆಚ್ಚು ಮೆಡಲ್ ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಕೆಲವು ದಿನ ಕೆಲವು ಕೋಣಗಳು ಚೆನ್ನಾಗಿ ಓಡುತ್ತವೆ. ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ತಕ್ಕಿಂತಲೂ ಹೆಚ್ಚು ಉತ್ತಮ ಓಟಗಾರರು ಇದ್ದೇವೆ. ಕಂಬಳದ ಓಟಗಾರರಿಗೆ ಕರ್ನಾಟಕ ಸರ್ಕಾರ ವಿಮಾ ಸೌಲಭ್ಯವನ್ನು ಕೊಡಬೇಕು ಎಂದು ಮಾಧ್ಯಮಗಳ ಮೂಲಕ ನಿಶಾಂತ್ ಶೆಟ್ಟಿ ಒತ್ತಾಯಿಸಿದರು. ಇದನ್ನೂ ಓದಿ: ಕಂಬಳ ಹೀರೋಗೆ ಸಖತ್ ಡಿಮ್ಯಾಂಡ್- ಒಲಂಪಿಕ್ಸ್‌ಗೆ ಇಳಿಯೋ ಮುನ್ನವೇ ಶೂ ಕಂಪನಿಗಳಿಂದ ಕರೆ

    ಶ್ರೀನಿವಾಸ ಗೌಡ ಅವರು ಫೆಬ್ರವರಿ 1ರಂದು ಮಂಗಳೂರು ಸಮೀಪದ ಐಕಳದಲ್ಲಿ ನಡೆದ ಕಂಬಳ ಕ್ರೀಡೆಯಲ್ಲಿ 142.50 ಮೀಟರ್ ದೂರವನ್ನು ಕೇವಲ 13.62 ಸೆಕೆಂಡಲ್ಲಿ ಕ್ರಮಿಸಿದ್ದರು. ಇದು ಕಂಬಳ ಕ್ರೀಡೆಯಲ್ಲಿ ಇದೂವರೆಗಿನ ಅತ್ಯಂತ ವೇಗದ ದಾಖಲೆಯೆಂದು ಪರಿಗಣಿಸಲಾಗಿದೆ. ಶ್ರೀನಿವಾಸ್ ಗೌಡ ಅವರು ಗುರಿ ತಲುಪಲು ತೆಗೆದುಕೊಂಡ ಸಮಯವನ್ನು 100 ಮೀ. ಓಟದೊಂದಿಗೆ ತಾಳೆ ಹಾಕಿದರೆ 9.55 ಸೆಕೆಂಡ್‍ನಲ್ಲಿ ಓಟ ಪೂರ್ಣಗೊಳಿಸಿ ಬೋಲ್ಟ್ ದಾಖಲೆಯನ್ನು ಉಡಾಯಿಸಿದ್ದರು. ಇದನ್ನೂ ಓದಿ: ಶ್ರೀನಿವಾಸ ಗೌಡರಿಗೆ ಖಾಲಿ ಕವರ್ ನೀಡಿ ಪೋಸ್‍ಕೊಟ್ಟ ಸಿಟಿ ರವಿ, ಹೆಬ್ಬಾರ್