Tag: Nisar Ahmed

  • ನಾನು ಹೊರಗೆ ಒರಟ, ಆದ್ರೆ ಒಳಗೆ ಮೃದು: ಸಿಎಂ

    ನಾನು ಹೊರಗೆ ಒರಟ, ಆದ್ರೆ ಒಳಗೆ ಮೃದು: ಸಿಎಂ

    – ವೇದಿಕೆಯಲ್ಲಿದ್ದ ಪ್ರತಾಪ್ ಸಿಂಹಗೂ ತಮಾಷೆ ಮಾಡಿದ್ರು ಸಿದ್ದರಾಮಯ್ಯ

    ಮೈಸೂರು: ರಾಜಕೀಯ ವಿಚಾರ ಹಾಗೂ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಹೊರಗೆ ಒರಟ, ಒಳಗೆ ಮೃದು. ಆದರೆ ಕವಿ ನಿಸಾರ್ ಅಹಮದ್ ಅವರು ಹೊರಗೂ ಮೃದು ಒಳಗೂ ಮೃದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

    ದಸರಾ ಹಬ್ಬ ತುಂಬಾ ವೈಶಿಷ್ಟ್ಯತೆಯಿಂದ ಕೂಡಿದ್ದು, ಹಲವು ವಿಚಾರಗಳನ್ನು ಅಡಗಿಸಿಕೊಂಡಿದೆ. ದಸರಾ ವಿಶ್ವವಿಖ್ಯಾತಿ ಪಡೆದಿರುವುದು ನಮ್ಮ ದೇಶದ ಸಂಸ್ಕೃತಿಗೆ ಹಿಡಿದ ಕನ್ನಡಿ. ದಸರಾ ನೋಡಲು ದೇಶ ವಿದೇಶದಿಂದ ಪ್ರವಾಸಿಗರು ಬಂದು ಜಂಬೂಸವಾರಿಯನ್ನ ಕಣ್ತುಂಬಿಕೊಂಡು ಹಾಡಿ ಹೊಗಳುತ್ತಾರೆ ಅಂತ ಹೇಳಿದ್ರು.

    ನಾನೂ ಕೂಡ ಮೈಸೂರಿನವನು. ಚಿಕ್ಕವನಿದ್ದಾಗ ನನ್ನ ತಂದೆ ಹೆಗಲ ಮೇಲೆ ಕೂರಿಸಿಕೊಂಡು ನನಗೆ ದಸರಾ ತೋರಿಸಿದ್ದರು. ತಾಯಿಯ ಮಹಿಮೆ ಎಂತಹದು ಎಂದರೆ ಅಂದು ದಸರಾ ವೀಕ್ಷಣೆ ಮಾಡಿದ್ದೆ. ಆದರೆ ಈಗ ನಾನೇ ದಸರಾ ನಡೆಸಿದ್ದೇನೆ. ಅಲ್ಲದೇ ತಾಯಿ ಚಾಮುಂಡಿ ಕೃಪೆಯಿಂದ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ. ಇದು ಸಂತಸದ ವಿಚಾರ ಎಂದರು.

    ಮುಂದಿನ ದಸರಾ ನಮ್ದೆ: ದಸರಾ ಕಾರ್ಯಕ್ರಮದಲ್ಲಿ ಮುಂದಿನ ದಸರಾ ಆಚರಣೆ ಬಗ್ಗೆ ವಿಚಾರ ಪ್ರಸ್ತಾಪ ನಡೆಯಿತು. ಈ ಐದು ವರ್ಷ ನಾನೇ ದಸರಾ ನಡೆಸಿದ್ದು, ಮುಂದಿನ ಐದು ವರ್ಷ ದಸರಾ ಉತ್ಸವವನ್ನು ನಾನೇ ನಡೆಸುತ್ತೇನೆ. ಹಿರಿಯ ನಾಯಕರಾದ ಜಿ.ಟಿ.ದೇವೇಗೌಡರೂ ಸಹ ನನಗೆ ವಿಶ್ ಮಾಡಿದ್ದಾರೆ. ಮುಂದಿನ ಐದು ವರ್ಷ ನಾನೇ ಉತ್ಸವ ಆಚರಣೆ ನಡೆಸುವಂತೆ ನೀನೂ ಕೂಡ ವಿಶ್ ಮಾಡಿಬಿಡು ಎಂದು ವೇದಿಕೆಯಲ್ಲಿದ್ದ ಸಂಸದ ಪ್ರತಾಪ್ ಸಿಂಹಗೆ ತಮಾಷೆ ಮಾಡಿದರು.

  • ಹಜ್‍ನಲ್ಲಿ ಮುಸ್ಲಿಮರು, ಕುಂಭ ಮೇಳದಲ್ಲಿ ಹಿಂದುಗಳು, ನಾಡಹಬ್ಬಕ್ಕೆ ಎಲ್ಲರೂ ಬರ್ತಾರೆ: ನಿಸಾರ್ ಅಹಮದ್

    ಹಜ್‍ನಲ್ಲಿ ಮುಸ್ಲಿಮರು, ಕುಂಭ ಮೇಳದಲ್ಲಿ ಹಿಂದುಗಳು, ನಾಡಹಬ್ಬಕ್ಕೆ ಎಲ್ಲರೂ ಬರ್ತಾರೆ: ನಿಸಾರ್ ಅಹಮದ್

    ಮೈಸೂರು: ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಕಾರ್ಯಕ್ರಮಗಳಿಗೆ ಚಾಮುಂಡಿ ಬೆಟ್ಟದಲ್ಲಿ ನಿತ್ಯೋತ್ಸವ ಕವಿ ಪ್ರೊ. ಕೆ.ಎಸ್. ನಿಸಾರ್ ಅಹಮದ್ ಅವರು ಇಂದು ಅಧಿಕೃತವಾಗಿ ಚಾಲನೆ ನೀಡಿದರು.

    ಸುಮಾರು 400 ವರ್ಷಗಳ ಇತಿಹಾಸ ಹೊಂದಿರುವ ಹಬ್ಬ ಗತಕಾಲದ ವೈಭವ. ಜಾತಿ ಧರ್ಮದ ಮಿತಿಗಳಿಲ್ಲದೆ ದಸರಾ ಹಬ್ಬವನ್ನ ಆಚರಣೆ ಮಾಡಲಾಗುತ್ತದೆ. ಹಜ್ ನಲ್ಲಿ ಮುಸ್ಲಿಮರು, ಕುಂಭ ಮೇಳದಲ್ಲಿ ಹಿಂದುಗಳು. ಆದರೆ ಮೈಸೂರು ದಸರಾದಲ್ಲಿ ಮಾತ್ರ ಧರ್ಮಗಳ ಮೀತಿಯೇ ಇಲ್ಲದೆ ಎಲ್ಲರೂ ತಾಯಿ ಚಾಮುಂಡಿ ದೇವಿ ಆಶೀರ್ವಾದ ಪಡೆದು ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಇದೇ ಮೈಸೂರು ದಸರಾ ವೈಶಿಷ್ಟ ಎಂದು ನಿಸಾರ್ ಅಹಮದ್ ಹೇಳಿದರು.

    ನಾಡಹಬ್ಬದ ಉದ್ಘಾಟನೆಗೆ ನನ್ನನ್ನು ಆಹ್ವಾನ ಮಾಡಿದಾಗ ನನಗೆ ದಸರಾಗೆ ಚಾಲನೆ ನೀಡುವ ಅರ್ಹತೆ ಇದೆಯಾ ಅಂತ ಭಯ ಶುರುವಾಗಿತ್ತು. ಕಾರಣ ಈಡೀ ವಿಶ್ವವೇ ಒಂಭತ್ತು ದಿನಗಳ ಕಾಲ ದಸರಾ ವೀಕ್ಷಣೆ ಮಾಡುತ್ತದೆ. ಇಂತಹ ಹಬ್ಬವನ್ನು ಉದ್ಘಾಟನೆ ಮಾಡುವುದು ಸುಲಭದ ಮಾತಲ್ಲ. ನನಗೆ ಪದ್ಮಶ್ರೀ, ನಾಡೋಜ ಪ್ರಶಸ್ತಿ ಗೌರವ ಸಿಕ್ಕಿರಬಹುದು. ಆದರೆ ದಸರಾ ಚಾಲನೆ ಮಾಡುವ ಭಾಗ್ಯ ಸಿಕ್ಕಿರುವುದು ದೊಡ್ಡದು ಎಂದು ಸಂತೋಷ ವ್ಯಕ್ತಪಡಿಸಿದರು.

    ಅರಮನೆಯ ಸಿಂಹಾಸನ ಜೋಡಣೆ ಕಾರ್ಯ ಮುಕ್ತಾಯವಾಗಿದ್ದು, ಅರಮನೆಯಲ್ಲಿ ಖಾಸಗಿ ದರ್ಬಾರ್ ಕಾರ್ಯ ಶುರುವಾಗಿದೆ. ರಾಜಮನೆತನದ ಸಂಪ್ರದಾಯದಂತೆ ಇಂದು ಬೆಳಗ್ಗೆಯಿಂದಲೇ ಪೂಜಾ ಕೈಂಕರ್ಯಗಳು ಪ್ರಾರಂಭವಾಗಿವೆ.

    ರಾಜ ಯದುವೀರ್ ಒಡೆಯರ್‍ಗೆ ಈಗಾಗಲೇ ಕಂಕಣಧಾರಣೆ ನಡೆದಿದ್ದು ಬೆಳಗ್ಗೆ 11 ಗಂಟೆಗೆ ರಾಜರ ಪಟ್ಟದ ಕಾರ್ಯಕ್ಕೆ ಆನೆ, ಕುದುರೆ, ಹಸು ಆರಮನೆ ಪ್ರವೇಶಿಸುತ್ತವೆ. ಬಳಿಕ ರಾಜ ಯದುವೀರ್ ಒಡೆಯರ್‍ಗೆ ಸಿಂಹಾಸನಾರೋಹಣ ಕಾರ್ಯಕ್ರಮ ನಡೆಯಲಿದೆ.