Tag: Nirmohi akhara

  • ಅಯೋಧ್ಯೆ ವಿವಾದಿತ ಜಾಗಕ್ಕೆ ಹಕ್ಕು ಪ್ರತಿಪಾದಿಸಿದ ನಿರ್ಮೋಹಿ ಅಖಾಡ

    ಅಯೋಧ್ಯೆ ವಿವಾದಿತ ಜಾಗಕ್ಕೆ ಹಕ್ಕು ಪ್ರತಿಪಾದಿಸಿದ ನಿರ್ಮೋಹಿ ಅಖಾಡ

    ನವದೆಹಲಿ: ಅಯೋಧ್ಯೆಯ ವಿವಾದಿತ ಪ್ರದೇಶದ ಮೇಲೆ ಸಂಪೂರ್ಣ ಹಕ್ಕನ್ನು ಪ್ರತಿಪಾದಿಸಿರುವ ನಿರ್ಮೋಹಿ ಅಖಾಡ ವಿವಾದಿತ ಸ್ಥಳಕ್ಕೆ ಸಂಬಂಧ ಸುಪ್ರೀಂಕೋರ್ಟ್ ಗೆ ಮಹತ್ವದ ಮಾಹಿತಿ ನೀಡಿದೆ.

    1934 ರಲ್ಲಿ ಮುಸ್ಲಿಮರು ಬಾಬ್ರಿ ಮಸೀದಿಯ ಜಾಗದಲ್ಲಿ ಪ್ರತಿದಿನ 5 ಬಾರಿ ನಮಾಜ್ ಮಾಡುವುದನ್ನು ಬಿಟ್ಟಿದ್ದರು. 1949ರ ಡಿಸೆಂಬರ್ ವೇಳೆಗೆ ಶುಕ್ರವಾರದ ಪ್ರಾರ್ಥನೆಯನ್ನೂ ಬಿಟ್ಟು, ಆ ಜಾಗ ಪರಿತ್ಯಕ್ತವಾಗಿತ್ತು ಎಂದು ತಿಳಿಸಿದೆ.

    ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರಿದ್ದ ಸಾಂವಿಧಾನಿಕ ಪೀಠಕ್ಕೆ ಮಾಹಿತಿ ಸಲ್ಲಿಸಿರುವ ನಿರ್ಮೋಹಿ ಅಖಾಡ, ವಿವಾದಿತ ಪ್ರದೇಶದ ಮೇಲೆ ತನ್ನ ಹಕ್ಕನ್ನು 1934ರಲ್ಲೇ ಪ್ರತಿಪಾದಿಸಿದ್ದಾಗಿಯೂ, ಆ ನಂತರ 1961ರಲ್ಲಿ ಸುನ್ನಿ ವಕ್ಫ್ ಬೋರ್ಡ್ ಆ ಜಾಗದ ಮೇಲೆ ಹಕ್ಕು ಮಂಡಿಸಿತ್ತು. 1949ರ ಡಿಸೆಂಬರ್ 22-23 ರಂದು ರಾತ್ರಿ ಮಸೀದಿಯಲ್ಲಿ ರಾಮನ ವಿಗ್ರಹಗಳನ್ನು ಸ್ಥಾಪಿಸಲಾಯಿತು ಎಂದು ಹೇಳಿದೆ.

    ಯಾವ ಜಾಗದಲ್ಲಿ ನಿತ್ಯ ಪ್ರಾರ್ಥನೆ ನಡೆಯುವುದಿಲ್ಲವೋ ಅದನ್ನು ಮಸೀದಿ ಎಂದು ಪರಿಗಣಿಸಲು ಸಾಧ್ಯವಿಲ್ಲ. ಅಲ್ಲಿ ನಮಾಜ್ ನಡೆಯುತ್ತಿರಲಿಲ್ಲ ಅಂತಲೂ ನಿರ್ಮೋಹಿ ಅಖಾಡಾದ ಪರ ವಕೀಲ ಸುಶೀಲ್ ಜೈನ್ ವಾದಿಸಿದ್ದಾರೆ. ಈ ಮಧ್ಯೆ, ಅಯೋಧ್ಯೆ ವಿಚಾರಣೆಯ ನೇರ ಪ್ರಸಾರ ಅಥವಾ ಧ್ವನಿ ಪ್ರಸಾರಕ್ಕೆ ಅವಕಾಶ ಇಲ್ಲ ಅಂತ ಸುಪ್ರೀಂಕೋರ್ಟ್ ಹೇಳಿದೆ.

  • ಅಯೋಧ್ಯೆ ಸಂಧಾನ: ಯಾರು ಏನು ಹೇಳಿದ್ರು?

    ಅಯೋಧ್ಯೆ ಸಂಧಾನ: ಯಾರು ಏನು ಹೇಳಿದ್ರು?

    -ಅಯೋಧ್ಯೆಯಲ್ಲಿ ರಾಮ ಮಂದಿರವೇ ಆಗ್ಬೇಕು: ಉಮಾ ಭಾರತಿ

    ನವದೆಹಲಿ: ಅಯೋಧ್ಯೆ ವಿವಾದವನ್ನು ಸಂಧಾನದ ಮೂಲಕವೇ ಬಗೆಹರಿಸಿಕೊಳ್ಳಿ ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ನಾಯಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣ ಆಗಬೇಕೆ ಹೊರತು ಬೇರೆ ಧಾರ್ಮಿಕ ಕೇಂದ್ರಗಳು ಆಗಬಾರದು ಎಂದು ಕೇಂದ್ರ ಸಚಿವೆ ಉಮಾ ಭಾರತಿ ಹೇಳಿದ್ದಾರೆ.

    ನಾವು ನ್ಯಾಯಾಲಯವನ್ನು ಗೌರವಿಸುತ್ತೇವೆ. ಇದರ ಜೊತೆಗೆ ನಾವು ರಾಮನ ಭಕ್ತರೂ ಹೌದು. ವೆಟಿಕನ್ ಸಿಟಿಯಲ್ಲಿ ಮಸೀದಿ ನಿರ್ಮಾಣ ಆಗಲ್ಲ. ಮಕ್ಕಾ-ಮದೀನಾದಲ್ಲಿ ದೇವಾಲಯ ನಿರ್ಮಿಸಲು ಅವಕಾಶವಿಲ್ಲ. ಅದರಂತೆಯೇ ರಾಮಜನ್ಮಭೂಮಿಯಲ್ಲಿ ಬೇರೆ ಧಾರ್ಮಿಕ ಕೇಂದ್ರ ನಿರ್ಮಿಸಲು ಸಾಧ್ಯವಿಲ್ಲ ಎಂದು ಉಮಾ ಭಾರತಿ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

    ಇದೊಂದು ಭೂಮಿ ವಿವಾದವಾಗಿದ್ದು, ಎರಡೂ ಪಾರ್ಟಿಗಳು ಸಂಧಾನ ಮಾಡಿಕೊಂಡರೆ ನ್ಯಾಯಾಲಯ ಸಮ್ಮತಿ ಸೂಚಿಸುತ್ತದೆ. ಅದರಂತೆ ನ್ಯಾಯಾಲಯ ಸಹ ಕೆಲಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಒಳ್ಳೆಯದು ಆಗಲಿದ್ದು, ಎಲ್ಲರೂ ಸೇರಿ ರಾಮಮಂದಿರವನ್ನು ನಿರ್ಮಾಣ ಮಾಡೋಣ ಎಂದು ಅವರು ಹೇಳಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ನಾವು ನ್ಯಾಯಾಲಯದ ಆದೇಶವನ್ನು ಪ್ರಶ್ನೆ ಮಾಡಲ್ಲ. ಈ ಮೊದಲು ನಡೆದ ಸಂಧಾನಗಳು ಫಲಪ್ರದವಾಗಿರಲಿಲ್ಲ. ಭಗವಾನ್ ರಾಮನ ಮಂದಿರ ನಿರ್ಮಾಣಕ್ಕೆ ವಿಳಂಬ ಮಾಡಬಾರದು ಎಂಬುದು ಭಕ್ತರ ವಾದವಾಗಿದೆ ಎಂದರು.

    ಆಲ್ ಇಂಡಿಯಾ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯ ಮತ್ತು ಬಾಬರಿ ಮಸೀದಿ ಆ್ಯಕ್ಷನ್ ಕಮೀಟಿಯ ಸಂಯೋಜಕ ಜಫರಾಯಬ್ ಜಿಲಾನಿ, ಸಂಧಾನದ ಮೂಲಕ ಬಗೆಹರಿಸಿಕೊಳ್ಳಬಹುದು ಎಂಬ ವಾದ ನಮ್ಮದಾಗಿತ್ತು. ನಮ್ಮ ಅಭಿಪ್ರಾಯಗಳನ್ನು ನಾವು ಸಂಧಾನದ ಕಮಿಟಿ ಮುಂದೆಯೇ ಹೇಳುತ್ತೇವೆ. ಹಾಗಾಗಿ ಹೆಚ್ಚು ಮಾತನಾಡಲಾರೆ ಎಂದು ತಿಳಿಸಿದ್ದಾರೆ.

    ಹಿಂದೂ ಮಹಾಸಭಾದ ಮುಖಂಡ ಸ್ವಾಮಿ ಚಕ್ರಪಾಣಿ ಮಾತನಾಡಿ, ಸುಪ್ರೀಂ ಆದೇಶವನ್ನು ಸ್ವಾಗತಿಸುತ್ತೇವೆ. ನಾವು ಸಕಾರಾತ್ಮಕ ಯೋಚನೆಗಳನ್ನು ಹೊಂದಿದ್ದು, ನ್ಯಾಯಾಲಯ ನೇಮಿಸಿದ ಕಮಿಟಿಯಲ್ಲಿ ರವಿಶಂಕರ್ ಗೂರೂಜಿಗಳ ಹೆಸರನ್ನು ನಿರ್ದೇಶನ ಮಾಡಿದ್ದಕ್ಕೆ ಖುಷಿಯಾಗಿದೆ. ಹಿಂದೂ ಮತ್ತು ಮುಸ್ಲಿಮರು ಜೊತೆಯಾಗಿ ಕೆಲಸ ಮಾಡುತ್ತೇವೆ ಎಂಬ ವಿಶ್ವಾಸ ನನಗಿದೆ ಎಂದರು.

    ನಿರ್ಮೋಹಿ ಅಖಾರದ ಮಹಾಂತ ಸೀತಾರಾಮ ದಾಸ್ ಪ್ರತಿಕ್ರಿಯಿಸಿ, ಈ ನಿರ್ಣಯದ ಮೇಲೆ ಯಾವುದೇ ರಾಜಕೀಯ ಪ್ರಭಾವ ಬೀರದರಲಿ ಎಂದು ನ್ಯಾಯಾಲಯ ನಿರ್ದೇಶನ ಮಾಡಿರುವ ಸಮಿತಿಯಲ್ಲಿ ಸಾಂವಿಧಾನಿಕ ಸದಸ್ಯರ ನೇಮಕವಾಗಲಿ ಎಂಬ ಆಶಯ ನಮ್ಮದಿತ್ತು. ಆದರೆ ನ್ಯಾಯಾಲಯ ಶ್ರೀ ರವಿಶಂಕರ್ ಗೂರೂಜಿ ಅವರನ್ನು ನೇಮಿಸಿದ್ದರಿಂದ ಕೆಲವು ತೊಡಕಗಳು ಉಂಟಾಗುವ ಸಾಧ್ಯತೆಗಳಿವೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv