Tag: Nirmalandashri

  • ಹೆಲಿಕಾಪ್ಟರ್ ನಲ್ಲಿ ತುರ್ತಾಗಿ ತುಮಕೂರಿನತ್ತ ಸಿಎಂ – ರಾಜ್ಯಾದ್ಯಂತ ಪೊಲೀಸ್ ಹೈ ಅಲರ್ಟ್

    ಹೆಲಿಕಾಪ್ಟರ್ ನಲ್ಲಿ ತುರ್ತಾಗಿ ತುಮಕೂರಿನತ್ತ ಸಿಎಂ – ರಾಜ್ಯಾದ್ಯಂತ ಪೊಲೀಸ್ ಹೈ ಅಲರ್ಟ್

    ತುಮಕೂರು: ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಏರುಪೇರಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹೆಲಿಕಾಪ್ಟರ್ ನಲ್ಲಿ ತುರ್ತಾಗಿ ತುಮಕೂರಿನತ್ತ ತೆರಳಿದ್ದಾರೆ. ಇತ್ತ ಮುಂಜಾಗೃತ ಕ್ರಮವಾಗಿ ರಾಜ್ಯಾದ್ಯಂತ ಪೊಲೀಸ್ ಹೈ ಅಲರ್ಟ್ ಮಾಡಲಾಗಿದೆ.

    ಇಂದು ಸಿಎಂ ಕುಮಾರಸ್ವಾಮಿ ಹಿರೇಕೆರೂರು ಕಾರ್ಯಕ್ರಮಕ್ಕೆ ಹೋಗಬೇಕಿತ್ತು. ಆದರೆ ಶ್ರೀಗಳ ಆರೋಗ್ಯ ಏರುಪೇರಿನ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ರದ್ದು ಮಾಡಿ ಶ್ರೀಗಳ ದರ್ಶನಕ್ಕಾಗಿ ಹೆಲಿಕಾಪ್ಟರ್ ಮೂಲಕ ತುಮಕೂರಿನ ಸಿದ್ದಗಂಗಾ ಮಠಕ್ಕೆ ಹೊರಟಿದ್ದಾರೆ. ಶ್ರೀಗಳ ಆರೋಗ್ಯದಲ್ಲಿ ಏರುಪೇರು ಸುದ್ದಿ ತಿಳಿದ ಕೂಡಲೇ ಸಿಎಂ ಕುಮಾರಸ್ವಾಮಿ ಅವರು ಮಠದ ಕಿರಿಯ ಸ್ವಾಮೀಜಿಯೊಂದಿಗೆ ಮಾತುಕತೆ ನಡೆಸಿದ್ದು, ಶ್ರೀಗಳ ಆರೋಗ್ಯ ಯಥಾಸ್ಥಿತಿ ಇದೆ. ಸದ್ಯಕ್ಕೆ ಆಂತಕಪಡುವ ಅಗತ್ಯವಿಲ್ಲ ಎಂದು ಕಿರಿಯ ಸ್ವಾಮೀಜಿಗಳು ಮಾಹಿತಿ ನೀಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


    ಅಷ್ಟೇ ಅಲ್ಲದೇ ಶ್ರೀಗಳ ಆರೋಗ್ಯ ವಿಚಾರಕ್ಕಾಗಿ ಸಿದ್ದಗಂಗಾ ಮಠದೊಂದಿಗೆ ದೂರವಾಣಿ ಮೂಲಕ ನಿರಂತರ ಸಂಪರ್ಕದಲ್ಲಿದ್ದು, ಪ್ರತಿ ಗಂಟೆಗೊಮ್ಮೆ ಮಠದಿಂದ ಮಾಹಿತಿ ಪಡೆಯುತ್ತಿದ್ದಾರೆ. ಇತ್ತ ಸಿದ್ದಗಂಗಾ ಶ್ರೀಗಳ ಆರೋಗ್ಯ ಗಂಭೀರವಾದ ಹಿನ್ನೆಲೆಯಲ್ಲಿ ಆದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದಶ್ರೀ ತುಮಕೂರಿಗೆ ಹೊರಟಿದ್ದಾರೆ. ಇಂದು ಬೆಂಗಳೂರಿನ ವಿಜಯನಗರ ಶಾಖಾ ಮಠದಲ್ಲಿ ಹುಣ್ಣಿಮೆ ಹಿನ್ನೆಲೆಯಲ್ಲಿ ಪೂಜೆಗೆ ಭಾಗಿಯಾಗಿದ್ದರು. ಆದರೆ ಶಿವಕುಮಾರ ಸ್ವಾಮೀಜಿಯವರ ಆರೋಗ್ಯ ವಿಚಾರಿಸಲು ತುಮಕೂರಿಗೆ ತೆರಳುತ್ತಿದ್ದಾರೆ.

    ಪೊಲೀಸ್ ಭದ್ರತೆ:
    ತುಮಕೂರು, ಬೆಂಗಳೂರು, ರಾಮನಗರ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಸೇರಿದಂತೆ ಸುತ್ತಮುತ್ತಾ ಬಿಗಿ ಪೊಲೀಸ್ ಭದ್ರತೆಯನ್ನು ನಿಯೋಜನೆ ಮಾಡಲಾಗಿದೆ. ಭದ್ರತೆಗೆ ಕೇಂದ್ರ ವಲಯದ 8 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

    ಸದ್ಯಕ್ಕೆ ಸಿದ್ದಗಂಗಾ ಮಠಕ್ಕೆ ಕೇಂದ್ರ ವಲಯದ ಪೊಲೀಸರು ತೆರಳುತ್ತಿದ್ದು, ತುಮಕೂರು ಸಂಪರ್ಕ ಕಲ್ಪಿಸುವ ರಸ್ತೆ ಮಾರ್ಗದಲ್ಲೂ ಬದಲಾವಣೆ ಮಾಡಲಾಗಿದೆ. ದಾಬಸ್‍ಪೇಟೆ, ಶಿರಾ ಕುಣಿಗಲ್ ಹೀಗೆ ಸಿದ್ದಗಂಗಾ ಮಠಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಾರ್ಗದಲ್ಲಿ ಬದಲಾವಣೆ ಮಾಡಿದೆ. ಸದ್ಯಕ್ಕೆ ಮುಂಜಾಗ್ರತಾ ಕ್ರಮವಾಗಿ ಕೇಂದ್ರ ವಲಯದ ಪೊಲೀಸರು ಎಲ್ಲಾ ಸಿಎಆರ್ ಮತ್ತು ಕೆಎಸ್‍ಆರ್ ಪಿಗೂ ಮಾಹಿತಿ ಕೊಟ್ಟಿದ್ದಾರೆ.

    ಇತ್ತ ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ಬರುವ ವಾಹನಗಳ ರಸ್ತೆಯನ್ನ ಬದಲಾವಣೆ ಮಾಡಲಾಗಿದ್ದು, ಚಿತ್ರದುರ್ಗ, ದಾವಣಗೆರೆಯಿಂದ ಶಿರಾ ಮೂಲಕ ಬರುವ ವಾಹನಗಳ ಮಾರ್ಗ ಬದಲಾವಣೆ ಮಾಡಿದೆ. ಕೇಂದ್ರ ವಲಯದ ಎಲ್ಲಾ ಪೊಲೀಸ್ ಸಿಬ್ಬಂದಿ ಆಯಾ ಠಾಣೆಗೆ ಬರುವಂತೆ ಸೂಚನೆ ನೀಡಲಾಗಿದೆ. ನಂತರದಲ್ಲಿ ಬೆಳವಣಿಗೆ ಸಾಧ್ಯತೆ ಇದೆ. ಸದ್ಯಕ್ಕೆ ಕೇಂದ್ರ ವಲಯ ಐಜಿ ದಯಾನಂದ ಅವರಿಂದ ಮಠದ ಆವರಣದ ಪರಿಶೀಲನೆ ನಡೆಯುತ್ತಿದೆ.

    ಮಠದ ಆವರಣದಲ್ಲೇ ಸಂಸ್ಕೃತ ಕಾಲೇಜಿನ 2ನೇ ಮಹಡಿಯಲ್ಲಿ ಪೊಲೀಸ್ ಕಂಟ್ರೋಲ್ ಗೆ ವ್ಯವಸ್ಥೆ ಮಾಡಲಾಗಿದ್ದು, ಕಂಟ್ರೋಲ್ ರೂಮ್‍ಗೆ ಐಜಿಪಿ ದಯಾನಂದ್, ಎಸ್‍ಪಿ ಕೋನವಂಶಿ ಕೃಷ್ಣ, ಎಎಸ್‍ಪಿ ಡಾ.ಶೋಭರಾಣ ಮತ್ತು ಡಿವೈಎಸ್ಪಿ ತಿಪ್ಪೇಸ್ವಾಮಿ ತೆರಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv