- ಹೊಸ ಜಾತಿ ಸೇರ್ಪಡೆ ಮಾಡಿರುವುದು ಸರಿ ಇಲ್ಲ: ನಂಜಾವಧೂತ ಶ್ರೀ
- ಅಗತ್ಯವಿದ್ರೆ ಮಾತ್ರ ಉಪಜಾತಿ ಬರೆಸಿ: ನಿಶ್ಚಲಾನಂದ ಶ್ರೀ
ಬೆಂಗಳೂರು: ತರಾತುರಿ ಜಾತಿಗಣತಿ (Caste Census) ಹಾಗೂ ಜಾತಿಗಳ ಜೊತೆ ಕ್ರಿಶ್ಚಿಯನ್ ದರ್ಮ ಸೇರಿಸುವುದು ಬೇಡ ಎಂದು ನಿರ್ಮಲಾನಂದನಾಥ ಸ್ವಾಮೀಜಿ (Nirmalanandanatha Swamiji) ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಒಕ್ಕಲಿಗ ಸಮುದಾಯದ ಸಭೆ (Vokkaliga) ಬಳಿಕ ಅವರು ಮಾತನಾಡಿದರು. ಈ ವೇಳೆ, ಸಮೀಕ್ಷೆ ಮುಂದೂಡಬೇಕು, ಕಾಲಮಿತಿ ಹೆಚ್ಚು ಮಾಡಿ ಸಮೀಕ್ಷೆ ನಡೆಸಬೇಕು. ನಾವು ಕೂಡ ಸಮೀಕ್ಷೆ ಸ್ವಾಗತಿಸುತ್ತೇವೆ, ಕೆಲ ನ್ಯೂನತೆ ಸರಿಪಡಿಸಬೇಕು. ಕ್ರಿಶ್ಚಿಯನ್, ಜೈನ ಈ ರೀತಿ ಧರ್ಮಗಳ ಜಾತಿಗಳಿಗೆ ಸೇರಿಸುವುದು ಸರಿ ಇಲ್ಲ ಎಂದು ಅವರು ಎಚ್ಚರಿಕೆ ಕೊಟ್ಟರು. ಇದನ್ನೂ ಓದಿ: ಒಕ್ಕಲಿಗ ಸಭೆಯಲ್ಲಿ ಹೆಚ್‌ಡಿಕೆ-ಡಿಕೆಶಿ ಮುಖಾಮುಖಿ
15 ದಿನಗಳ ಕಾಲ ಸಮೀಕ್ಷೆ ಮಾಡಲು ಹೊರಟಿದ್ದಾರೆ. ಅದರಲ್ಲಿ, 9 ದಿನಗಳು ನವರಾತ್ರಿ, ಎಲ್ಲರೂ ಶ್ರದ್ಧೆಯಿಂದ ಆಚರಣೆ ಮಾಡ್ತಾರೆ. ಹೀಗಾಗಿ ಸಮೀಕ್ಷೆಯಿಂದ ಯಾವ ಮಟ್ಟಕ್ಕೆ ಪೂರ್ಣ ಆಗುತ್ತೆ. ರಜೆಯ ಕಾರಣ ಎಲ್ಲರೂ ಅವರವರ ಊರಿಗೆ ಹೋಗ್ತಾರೆ. ಸಮೀಕ್ಷೆಯ ಸದ್ದುದ್ದೇಶ ಅರ್ಥಪೂರ್ಣ ಆಗಬೇಕು. ಎಲ್ಲರೂ ಒಕ್ಕಲಿಗ ಎಂದು ಬರೆಸಬೇಕು. ಕೋಡ್ ಎ 1545 ಎಂದು ಬರೆಸಬೇಕು. ಜಾತಿಗಣತಿ ಮುಂದೂಡಿ ಅನ್ನೋದು ನಮ್ಮ ನಿರ್ಣಯ, ಸರ್ಕಾರ ಸ್ಪಂದಿಸುವ ಭರವಸೆ ಇದೆ ಎಂದರು.

ಇದೇ ವೇಳೆ ಧರ್ಮ ಸೇರಿಸುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಶ್ರೀಗಳು, ಕ್ರಿಶ್ಚಿಯನ್ ಒಕ್ಕಲಿಗ, ಕ್ರಿಶ್ಚಿಯನ್ ಲಿಂಗಾಯತ, ಕ್ರಿಶ್ಚಿಯನ್ ಕುರುಬ ಸರಿ ಇಲ್ಲ. ಇದು ಮುಂದೆ ಮುಸ್ಲಿಂ ಒಕ್ಕಲಿಗ, ಮುಸ್ಲಿಂ ಲಿಂಗಾಯತ ಅಂದ್ರೆ ಹೇಗೆ? ಮುಸ್ಲಿಂ ಹಿಂದೂ ಅಂತಾ ಮಾಡಿದ್ರೆ.? ಇದನ್ನ ಸಹಿಸಲು ಆಗಲ್ಲ.
ಇನ್ನು ಸಭೆ ಬಳಿಕ ಮಾತನಾಡಿದ ನಂಜಾವಧೂತ ಸ್ವಾಮೀಜಿ (Nanjavadhutha Swamiji), ಈ ಹಿಂದೆ ಮರುಸಮೀಕ್ಷೆಗೆ ಒತ್ತಾಯಿಸಿದ್ದೆವು. ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿ ಹೊಸ ಗಣತಿ ಮಾಡ್ತಿದ್ದಾರೆ. ಅದಕ್ಕೆ ನಮ್ಮವರ ತಕಾರರು ಇಲ್ಲ. ಆದ್ರೆ ಧರ್ಮದ ಹೆಸರು ತಳುಕು ಹಾಕುವುದು, ಹೊಸ ಜಾತಿ ಹಾಕಿ ಗೊಂದಲ ಸೃಷ್ಟಿ ಮಾಡ್ತಿದ್ದಾರೆ. ಯಾವುದೇ ಪ್ರಕ್ರಿಯೆ ನಡೆಯದೇ ಹೊಸ ಜಾತಿ ಸೇರ್ಪಡೆ ಮಾಡಿರುವುದು ಸರಿ ಇಲ್ಲ ಎಂದು ಕಿಡಿಕಾರಿದರು.
ಕೃಷಿ ಚಟುವಟಿಕೆಗಳು, ಸಾಲು ಸಾಲು ಹಬ್ಬ, ಪಿತೃಪಕ್ಷ ಎಲ್ಲರೂ ಒಂದೇ ದಿನ ಆಚರಣೆ ಮಾಡಲ್ಲ. 9 ದಿನಗಳ ನವರಾತ್ರಿ ಇರುತ್ತೆ, ಸ್ವಾಮೀಜಿಗಳು ಪೂಜೆಯಲ್ಲಿ ಇರ್ತಾರೆ. ಆಯೋಗದ್ದು ಅವಸರದ ನಿರ್ಧಾರ ತೆಗೆದುಕೊಳ್ಳುತ್ತಿದೆ. ಹಿಂದುಳಿದ ವರ್ಗಗಳ ಆಯೋಗದ ನಿರ್ಧಾರ ಏಕಪಕ್ಷೀಯ. ತರಾತುರಿಯಲ್ಲಿ ಜಾತಿಗಣತಿಗೆ ಮುಂದಾಗಿದೆ. ಏಳೂವರೆ ಕೋಟಿ ಜನರ ಸಮೀಕ್ಷೆಯನ್ನ 15 ದಿನದಲ್ಲಿ ಹೇಗೆ ಪೂರ್ಣಗೊಳಿಸ್ತೀರಾ? ಸರ್ಕಾರ ಮಧ್ಯಪ್ರವೇಶ ಮಾಡಬೇಕು. ಸಮೀಕ್ಷೆಯನ್ನ ಮುಂದೂಡಬೇಕು. ನಮಗೆ ಭಯ ಇಲ್ಲ, ಆದರೆ ಕಾಲಾವಕಾಶ ಕೊಡಿ ಎಂದರು.
ಸಭೆ ಬಳಿಕ ನಿಶ್ಚಲಾನಂದ ಸ್ವಾಮೀಜಿಗಳು (Nischalananda Sri) ಮಾತನಾಡಿ, ಜಾತಿಗಣತಿಯನ್ನ ಸ್ವಾಗತಿಸುತ್ತೇವೆ. ಆದರೆ ಕೃಷಿ, ದಸರಾ ಕೆಲಸ ಇದೆ, ತರಾತುರಿಯಲ್ಲಿ ಜಾತಿಗಣತಿ ಮಾಡಬಾರದು. ಕನಿಷ್ಠ 60 ದಿನ ಮುಂದೂಡುವಂತೆ ಸರ್ಕಾರಕ್ಕೆ ಮನವಿ ಮಾಡಿ ನಿರ್ಣಯ ಕೈಗೊಂಡಿದ್ದೇವೆ. ಅಲ್ಲದೇ ಒಕ್ಕಲಿಗ ಮೊದಲು ಬರೆಸಬೇಕು, ಅಗತ್ಯ ಇದ್ರೆ ಉಪಜಾತಿ ಬರೆಸಬೇಕು ಅಂತಾ ನಿರ್ಣಯ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಜಾತಿ ಗಣತಿಯಲ್ಲಿ ಸಾಕಷ್ಟು ದೋಷಗಳಿವೆ, ಸಮೀಕ್ಷೆ ಮುಂದೂಡಬೇಕು: ವಚನಾನಂದ ಸ್ವಾಮೀಜಿ




















