Tag: nirmala seetharaman

  • ಯಲಹಂಕ ಕೋವಿಡ್ ಆಸ್ಪತ್ರೆಗೆ ನಿರ್ಮಲಾ ಸೀತಾರಾಮನ್ ಭೇಟಿ

    ಯಲಹಂಕ ಕೋವಿಡ್ ಆಸ್ಪತ್ರೆಗೆ ನಿರ್ಮಲಾ ಸೀತಾರಾಮನ್ ಭೇಟಿ

    ಬೆಂಗಳೂರು: ಬೋಯಿಂಗ್ ಸಂಸ್ಥೆಯು, ‘ಸೆಲ್ಕೋ’, ‘ಡಾಕ್ಟರ್ಸ್ ಫಾರ್ ಯು’ ಸಹಯೋಗದೊಂದಿಗೆ ಯಲಹಂಕದಲ್ಲಿ ನಿರ್ಮಿಸಿರುವ 100 ಹಾಸಿಗೆಗಳ ಅತ್ಯಾಧುನಿಕ ಕೋವಿಡ್-ಕೇರ್ ಸ್ಪೆಷಾಲಿಟಿ ಆಸ್ಪತ್ರೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಭೇಟಿ ನೀಡಿದರು.

    ಯಲಹಂಕದಲ್ಲಿ ಬೋಯಿಂಗ್ ಸಂಸ್ಥೆಯು ಕೋವಿಡ್ ಕೇರ್ ಆಸ್ಪತ್ರೆ ನಿರ್ಮಿಸುತ್ತಿರುವ ವಿಷಯವನ್ನು ರಾಜ್ಯಕ್ಕೆ ಮೊದಲಿಗೆ ತಿಳಿಸಿದವರೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್. ಮೇ 7ರಂದು ಈ ವಿಷಯವನ್ನು ಟ್ವೀಟ್ ಮಾಡಿದ್ದ ವಿತ್ತ ಸಚಿವರಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಧನ್ಯವಾದ ಹೇಳಿದ್ದರು.

    ಬೋಯಿಂಗ್ ಸಂಸ್ಥೆಯು ‘ಸೆಲ್ಕೋ’ ಮತ್ತು ‘ಡಾಕ್ಟರ್ಸ್ ಫಾರ್ ಯು’ ಸಹಯೋಗದೊಂದಿಗೆ ಅತಿ ಕಡಿಮೆ ಅವಧಿಯಲ್ಲಿ ಕೋವಿಡ್-ಕೇರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಿರುವ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದರು. ಕಾರ್ಪೋರೇಟ್ ಕಂಪನಿಗಳು ತಮ್ಮ ಸಮುದಾಯಿಕ ಜವಾಬ್ದಾರಿ ಕಾರ್ಯಕ್ರಮದ ಭಾಗವಾಗಿ ಕೋವಿಡ್ ಅಲೆ ನಿಯಂತ್ರಣ, ಚಿಕಿತ್ಸೆಯಲ್ಲಿ ಭಾಗಿಯಾಗಿರುವುದು ಶ್ಲಾಘನೀಯ ಎಂದರು.

    ಕರ್ನಾಟಕ ವಿದ್ಯುತ್ ನಿಗಮ ಆಸ್ಪತ್ರೆ ನಿರ್ಮಾಣಕ್ಕೆ ಅರ್ಧ ಎಕರೆ ಜಾಗ ಅಗತ್ಯ ಜಾಗ ಒದಗಿಸಿದೆ. ಡಾಕ್ಟರ್ಸ್ ಫಾರ್ ಯು ಸರ್ಕಾರೇತರ ಸಂಸ್ಥೆಯು ಆಸ್ಪತ್ರೆ ನಿರ್ವಹಣೆ ಮತ್ತು ಆರೋಗ್ಯ ಸೇವೆ ಒದಗಿಸುವ ಜವಾಬ್ದಾರಿ ವಹಿಸಿಕೊಂಡಿದೆ. ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಇರುವ ಆಸ್ಪತ್ರೆಯನ್ನು ಕೇವಲ 20 ದಿನದೊಳಗೆ ಪೂರ್ಣಗೊಳಿಸಿರುವುದು ವಿಶೇಷ.

    ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣಾ ಉಪಸ್ಥಿತರಿದ್ದರು.

     

  • ಕೇಂದ್ರದಿಂದ ಪಿಎಫ್ ಹಣ – 20 ಲಕ್ಷ ಕೋಟಿ ರೂ. ಹಂಚಿಕೆ ಹೇಗೆ?

    ಕೇಂದ್ರದಿಂದ ಪಿಎಫ್ ಹಣ – 20 ಲಕ್ಷ ಕೋಟಿ ರೂ. ಹಂಚಿಕೆ ಹೇಗೆ?

    ನವದೆಹಲಿ: 15 ಸಾವಿರ ರೂ.ಕ್ಕಿಂತ ಕಡಿಮೆ ವೇತನ ಪಡೆಯುವ ಉದ್ಯೋಗಿಗಳ ಸಂಬಳದಲ್ಲಿ ಕಡಿತವಾಗ್ತಿದ್ದ ಪಿಎಫ್ ಮತ್ತು ಇಪಿಎಫ್ ಮೊತ್ತವನ್ನು ಸರ್ಕಾರ ಮೂರು ತಿಂಗಳು ಪಾವತಿಸಲಿದೆ. 72 ಲಕ್ಷ ಉದ್ಯೋಗಿಗಳಿಗೆ ಈ ಯೋಜನೆಯ ಲಾಭ ಸಿಗಲಿದೆ ಎಂಧು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

    ಕೋವಿಡ್ 19 ನಿಂದಾಗಿ ದೇಶದ ಆರ್ಥಿಕತೆಯನ್ನು ಮೇಲಕ್ಕೆ ಎತ್ತಲು ಪ್ರಧಾನಿ ನರೇಂದ್ರಮೋದಿ ಮಂಗಳವಾರ 20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್ ಪ್ರಕಟಿಸಿದ್ದರು. ಇಂದು ಈ ಪ್ಯಾಕೇಜಿಗೆ ಸಂಬಂಧಿಸಿದಂತೆ ನಿರ್ಮಲಾ ಸೀತಾರಾಮನ್ ಮತ್ತು ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್ ಠಾಕೂರ್ ಸುದ್ದಿಗೋಷ್ಠಿ ನಡೆಸಿ ಯಾವುದಕ್ಕೆ ಹಣವನ್ನು ಹೇಗೆ ಹಂಚಿಕೆ ಮಾಡಲಾಗುತ್ತದೆ ಎಂಬ ವಿವರವನ್ನು ಪ್ರಕಟಿಸಿದರು.

    ಸ್ವಾವಲಂಬಿ ಭಾರತಕ್ಕೆ ಮತ್ತು ಮೇಕ್ ಇನ್ ಇಂಡಿಯಾ ಉತ್ತೇಜಿಸಲು 200ಕೋಟಿ ರೂ ಕಡಿಮೆ ಸರ್ಕಾರಿ ಖರೀದಿಗಳಿಗೆ ಜಾಗತಿಕ ಟೆಂಡರ್ ಕರೆಯುವುದಕ್ಕೆ ನಿಷೇಧ. ಮುಂದಿನ 45 ದಿನದೊಳಗೆ ಸರ್ಕಾರಿ ಕಚೇರಿಗಳು, ಸಂಸ್ಥೆಗಳಿಂದ ಎಂಎಸ್ ಎಂ ಇ ಗಳಿಗೆ ಬಾಕಿ ಇರುವ ಮೊತ್ತ ಪಾವತಿಸಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

    ಸುದ್ದಿಗೋಷ್ಠಿಯ ಮುಖ್ಯಾಂಶಗಳು
    – ಇಪಿಎಫ್ ಮತ್ತು ಪಿಎಫ್‍ಗಾಗಿ ಸರ್ಕಾರದಿಂದ 2500 ಕೋಟಿ ರೂ. ಹಣ ಮೀಸಲು. ಉದ್ಯೋಗಿಗಳ ಸಂಬಳದಲ್ಲಿ ಇಪಿಎಫ್ ಕಡಿತವನ್ನು ಶೇ.12ರಿಂದ ಶೇ.10ಕ್ಕೆ ಇಳಿಕೆ. ಪಿಎಸ್‍ಯುನಲ್ಲಿ ಶೇ.12ರಷ್ಟು ಇಪಿಎಫ್ ಕಡಿತವಾಗಲಿದೆ.

    – ಸಣ್ಣ ಮತ್ತು ಲಘು ಕೈಗಾರಿಕೆಗಳಿಗೆ 3 ಲಕ್ಷ ಕೋಟಿ: ಸಣ್ಣ, ಅತಿ ಸಣ್ಣ ಉದ್ಯಮ ಹೊಸ ವ್ಯವಹಾರಗಳಿಗೆ – ಅಡಮಾನ ರಹಿತ 3 ಲಕ್ಷ ಕೋಟಿ ಸಾಲದ ಮಹತ್ವದ ಘೋಷಣೆ.
    – ಕೋವಿಡ್-19 ನಿಂದ ಬಹುತೇಕ ಮಧ್ಯಮ ಮತ್ತು ಸಣ್ಣ ಉದ್ಯಮಗಳ ಹೊಣೆಗಾರಿಕೆ ಹೆಚ್ಚಾಗುತ್ತಿದೆ. ಕಚ್ಚಾ ವಸ್ತುಗಳು ಖರೀದಿ ಮತ್ತು ವ್ಯವಹಾರಗಳನ್ನು ಪುನಃ ಆರಂಭಿಸಲು ಉತ್ತೇಜನ ನೀಡುವ ಅವಶ್ಯಕತೆ ಇದೆ.

    – ವ್ಯವಹಾರ/ಎಂಎಸ್‍ಎಂಇ ಗಳಿಗೆ ಬ್ಯಾಂಕ್ ಮತ್ತು ಎನ್‍ಬಿಎಫ್‍ಸಿಗಳಿಂದ ಅವರ ಔಟ್ ಸ್ಟ್ಯಾಂಡಿಂಗ್ (29.02.2020) ಕ್ರೆಡಿಟ್ ನ ಶೇ.20ರಷ್ಟು ಸಾಲ ಸೌಲಭ್ಯ. ಸಾಲ ಪಡೆಯುವ ವ್ಯವಹಾರದ ಟರ್ನ್ ಓವರ್ 25 ಕೋಟಿಯಿಂದ 100 ಕೋಟಿ ರೂ. ಒಳಗಿರಬೇಕು. ಸಾಲದ ಅವಧಿ 4 ವರ್ಷ ಇರಲಿದ್ದು, ಮೊದಲ 12 ತಿಂಗಳ ಅಸಲು ಪಾವತಿ ಮೇಲೆ ನಿಷೇಧ

    – ಬ್ಯಾಂಕ್ ಮತ್ತು ಎನ್‍ಬಿಎಫ್‍ಸಿ ಅಸಲು ಮತ್ತು ಬಡ್ಡಿಯ ಮೇಲೆ ಶೇ.100ರಷ್ಟು ಗ್ಯಾರೆಂಟಿ. ಅಕ್ಟೋಬರ್ 31, 2020ರಿಂದ ಈ ಯೋಜನೆ ಆರಂಭವಾಗಲಿದೆ. ಈ ಯೋಜನೆಯಿಂದ 45 ಲಕ್ಷ ಘಟಕಗಳಿಗೆ ಪ್ರೋತ್ಸಾಹ.

    – ಜಾಗತಿಕ ಟೆಂಡರ್ ಇಲ್ಲ: ಸ್ಥಳೀಯ ಮತ್ತು ಸಣ್ಣ ಹಾಗೂ ಲಘು ಕಂಪನಿಗಳು ಜಾಗತಿಕ ಮಾರುಕಟ್ಟೆಯ ಪೈಪೋಟಿಯಿಂದ ನಷ್ಟಕ್ಕೆ ಒಳಗಾಗಿದ್ದವು. ಹಾಗಾಗಿ ಜಾಗತಿಕ ಟೆಂಡರ್ ನಿಷೇಧಿಸಲಾಗಿದೆ. ಈ ಯೋಜನೆ ಸಂಪೂರ್ಣ ಆತ್ಮನಿರ್ಭರ ಭಾರತ ಅಭಿಯಾನದಡಿಯಲ್ಲಿ ಬರಲಿದೆ. ಜಾಗತಿಕ ಟೆಂಡರ್ ನಿಷೇಧ ಸಣ್ಣ ಹಾಗೂ ಲಘು ಉದ್ಯಮಗಳ ಚೇತರಿಕೆಗೆ ಕಾರಣವಾಗಲಿದೆ.

    – 30 ಸಾವಿರ ಕೋಟಿ ಅನುದಾನದಲ್ಲಿ ಸ್ಪೆಷಲ್ ಲಿಕ್ವಿಡಿಟಿ ಸ್ಕೀಮ್ ಆರಂಭಿಸಲಾಗುವುದು. ಭಾಗಶಃ ಕ್ರೆಡಿಟ್ ಗ್ಯಾರೆಂಟಿ ಸ್ಕೀಮ್ 2.0 ಮೂಲಕ 45 ಸಾವಿರ ಕೋಟಿ ಬಂಡವಾಳ ಹೂಡಿಕೆ. ವಿದ್ಯುತ್ ಪ್ರಸರಣ ಕಂಪನಿಗಳಿಗಾಗಿ 90 ಸಾವಿರ ಕೋಟಿ ರೂ. ಅನುದಾನದ ಘೋಷಣೆ. ಸರ್ಕಾರಿ ಗುತ್ತಿಗೆಗಳ ಎಲ್ಲ ಅವಧಿಯನ್ನು ಆರು ತಿಂಗಳಿಗೆ ವಿಸ್ತರಣೆಯ ಮಹತ್ವದ ಘೋಷಣೆಯನ್ನು ಮಾಡಿದೆ.

  • ಹುಬ್ಬಳ್ಳಿಯಲ್ಲಿ ನಿರ್ಮಲಾ ಸೀತಾರಾಮನ್‍ಗೆ ತಟ್ಟಿತು ಪ್ರತಿಭಟನೆ ಬಿಸಿ

    ಹುಬ್ಬಳ್ಳಿಯಲ್ಲಿ ನಿರ್ಮಲಾ ಸೀತಾರಾಮನ್‍ಗೆ ತಟ್ಟಿತು ಪ್ರತಿಭಟನೆ ಬಿಸಿ

    ಧಾರವಾಡ(ಹುಬ್ಬಳ್ಳಿ): ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಪ್ರತಿಭಟನೆಯ ಬಿಸಿ ತಟ್ಟಿದೆ.

    ಹುಬ್ಬಳ್ಳಿ ವಿಮಾನ ನಿಲ್ದಾಣದ ಎದುರು ಮಾಜಿ ಸಚಿವ ಆರ್ ವಿ ದೇಶಪಾಂಡೆ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕೇಂದ್ರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಪ್ರತಿಭಟನಾನಿರತ ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡರು.

    ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಆರ್.ವಿ.ದೇಶಪಾಂಡೆ, ಕೇಂದ್ರ ಸರ್ಕಾರ 1,200 ಕೋಟಿ ರೂ. ಬಿಡುಗಡೆ ಮಾಡಿದೆ ಅನ್ನೋ ಮಾಹಿತಿ ಕೇಳಿದ್ದೇನೆ. ಕನಿಷ್ಠ ಪಕ್ಷ 5 ಸಾವಿರ ಕೋಟಿ ಬಿಡುಗಡೆ ಮಾಡಬೇಕು. ಈ ಹಿಂದೆ ನಮ್ಮ ಸರ್ಕಾರವಿದ್ದಾಗ ಇಷ್ಟೊಂದು ಪ್ರಮಾಣದಲ್ಲಿ ನೆರೆ ಬರದಿದ್ದರೂ, 16 ಸಾವಿರ ಕೋಟಿ ಬಿಡುಗಡೆ ಮಾಡಿತ್ತು. ಇಂದು ರಾಜ್ಯದ ಬಹುತೇಕ ಜಿಲ್ಲೆಗಳು ಅನಾವೃಷ್ಠಿಗೀಡಾಗಿವೆ. ಸರ್ಕಾರ ನೀಡಿದ ಹಣ ಸಂತ್ರಸ್ತರಿಗೆ ತಲುಪಿಲ್ಲ. ಜನ ಬೀದಿಪಾಲಾಗುತ್ತಿದ್ದು, ಇಷ್ಟೊಂದು ಮಟ್ಟದಲ್ಲಿ ಕಷ್ಟದಲ್ಲಿದ್ದಾಗ ರಾಜ್ಯ ಸರ್ಕಾರ ಇನ್ನೂ ಕ್ರಿಯಾಶೀಲರಾಗಬೇಕಿತ್ತು ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

    ಧಾರವಾಡದ ಡಾ. ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಆಯೋಜನೆಗೊಂಡಿರುವ ರಾಷ್ಟ್ರೀಯ ತೆರಿಗೆ ಸಲಹೆಗಾರ ದಿನಾಚರಣೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ರಾಜ್ಯ ಸಚಿವ ಜಗದೀಶ್ ಶೆಟ್ಟರ್, ಸಂಸದ ಶಿವಕುಮಾರ ಉದಾಸಿ, ಶಾಸಕ ಅರವಿಂದ ಬೆಲ್ಲದ ಉಪಸ್ಥಿತಿತರಿದ್ದರು.

  • ಶುಕ್ರವಾರ ನಿರ್ಮಲಾ ನೀಡಿದ ಟಾನಿಕ್‍ಗೆ 793 ಅಂಕ ಜಿಗಿದ ಸೆನ್ಸೆಕ್ಸ್

    ಶುಕ್ರವಾರ ನಿರ್ಮಲಾ ನೀಡಿದ ಟಾನಿಕ್‍ಗೆ 793 ಅಂಕ ಜಿಗಿದ ಸೆನ್ಸೆಕ್ಸ್

    ಮುಂಬೈ: ಆರ್ಥಿಕತೆಯನ್ನು ಮೇಲಕ್ಕೆ ಎತ್ತಲು ಶುಕ್ರವಾರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ನೀಡಿದ ‘ಟಾನಿಕ್’ನಿಂದ ಮುಂಬೈ ಷೇರು ಮಾರುಕಟ್ಟೆಯ ಸೂಚ್ಯಂಕ ಇಂದು ಒಂದೇ ದಿನದಲ್ಲಿ 793 ಅಂಕಗಳನ್ನು ಜಿಗಿಯುವ ಮೂಲಕ ಹೂಡಿಕೆದಾರರ ಮೊಗದಲ್ಲಿ ಸಂತಸ ಮೂಡಿಸಿದೆ.

    ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ನಿರ್ಮಲಾ ಸೀತಾರಾಮನ್ ವಿದೇಶಿ ಹೂಡಿಕೆದಾರರ ಮೇಲೆ ಹೇರಿದ್ದ ಹೆಚ್ಚುವರಿ ಶುಲ್ಕವನ್ನು ಹಿಂದಕ್ಕೆ ಪಡೆಯುತ್ತಿರುವಾಗಿ ಘೋಷಿಸಿದ್ದರು. ಈ ಮಧ್ಯೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಬಗ್ಗೆ ನನಗೆ ಗೌರವವಿದೆ. ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಿರುವ ಅವರ ಕ್ರಮ ನಿಜಕ್ಕೂ ಶ್ಲಾಘನಿಯ. ಈ ಕಾರಣಕ್ಕೆ ಅವರು ದೊಡ್ಡ ನಾಯಕ. ಮಾತುಕತೆ ಮುಂದುವರಿಯುತ್ತದೆ ಎಂದು ಟ್ವೀಟ್ ಮಾಡಿ ಚೀನಾ ಜೊತೆಗಿನ ವ್ಯಾಪಾರ ಸಮರ ಮುಕ್ತಾಯಗೊಳಿಸುವ ಬಗ್ಗೆ ಸುಳಿವು ನೀಡಿದ್ದು ಸಹ ಸೆನ್ಸೆಕ್ಸ್ ಮೇಲಕ್ಕೆ ಹೋಗಲು ಸಹಕಾರಿ ಆಯಿತು.

    ಮಧ್ಯಾಹ್ನ ಮೂರು ಗಂಟೆಯ ವೇಳೆಗೆ 37,428 ಅಂಕಗಳಲ್ಲಿ ವಹಿವಾಟು ನಡೆಸುತ್ತಿದ್ದರೆ ನಿಫ್ಟಿ 200 ಅಂಕ ಏರಿಕೆಯಾಗಿ 11,040 ಅಂಕಗಳಲ್ಲಿ ವಹಿವಾಟು ನಡೆಸುತಿತ್ತು. ಅಂತಿಮವಾಗಿ ಸೆನ್ಸೆಕ್ಸ್ 37,494 ಅಂಕಗಳಲ್ಲಿ ಕೊನೆಯಾದರೆ ನಿಫ್ಟಿ ದಿನದಲ್ಲಿ 228 ಅಂಕ ಏರಿ 11,057 ಅಂಕಗಳಲ್ಲಿ ಕೊನೆಗೊಂಡಿತು.

    ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿಯಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್ ಗಳಿಗೆ 70 ಸಾವಿರ ಕೋಟಿ ಪ್ಯಾಕೆಜ್ ಬಿಡುಗಡೆಯಾಗಲಿದೆ ಎಂದು ಘೋಷಿಸಿದ ಬಳಿಕ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಬ್ಯಾಂಕ್, ಅಲಹಾಬಾದ್ ಬ್ಯಾಂಕಿನ ಷೇರುಗಳು ಜಿಗಿದಿದೆ.

    ಈ ಬಗ್ಗೆ ಐಡಿಬಿಐ ಕ್ಯಾಪಿಟಲ್ ಸಂಸೋಧನಾ ವಿಭಾಗದ ಮುಖ್ಯಸ್ಥ ಎಕೆ ಪ್ರಭಾಕರ್ ಪ್ರತಿಕ್ರಿಯಿಸಿ, ಸರಿಯಾದ ಸಮಯದಲ್ಲಿ ಸರ್ಕಾರ ತನ್ನ ನಿರ್ಧಾರವನ್ನು ಪ್ರಕಟಿಸಿದ ಕಾರಣ ಸೆನ್ಸೆಕ್ಸ್ ಮತ್ತು ನಿಫ್ಟಿ ಏರಿಕೆ ಕಂಡಿದೆ. ಇದೇ ರೀತಿ ಮುಂದುವರಿದಿದರೆ ಸೆನ್ಸೆಕ್ಸ್ ಮತ್ತು ನಿಫ್ಟಿ ಏರಿಕೆ ಕಂಡು ಡಿಸೆಂಬರ್ ವೇಳೆಗೆ ದಾಖಲೆ ನಿರ್ಮಿಸಬಹುದು ಎಂದು ಅಂದಾಜಿಸಿದ್ದಾರೆ.

    ಭಾರತದ ಹೊರತು ಪಡಿಸಿ ಹಾಂಕಾಂಗ್, ಕೊರಿಯಾ, ಶಾಂಘೈ, ಜಪಾನ್ ಮಾರುಕಟ್ಟೆ ಬೆಳಗ್ಗಿಗಿಂತ ಮತ್ತಷ್ಟು ಕುಸಿತಕಂಡಿದೆ. ವಿಶ್ವದ ತೈಲ ಬೆಂಚ್ ಮಾರ್ಕ್ ಬ್ರೆಂಟ್ ಕಚ್ಚಾ ತೈಲ ದರ ಒಂದು ಬ್ಯಾರೆಲ್‍ಗೆ 58.22 ಡಾಲರ್(ಅಂದಾಜು 4,100 ರೂ.) ಬೆಲೆಯಲ್ಲಿ ಮಾರಾಟವಾಗುತಿತ್ತು.

    ಭಾರತದ ಆರ್ಥಿಕತೆ ಕುಸಿಯುತ್ತಿದ್ದು ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎನ್ನುವ ಭಾರೀ ಟೀಕೆ ಬರುತ್ತಿರುವ ಹಿನ್ನೆಲೆಯಲ್ಲಿ ಇಂದು ಸಂಜೆ ಸುದ್ದಿಗೋಷ್ಠಿ ನಡೆಸಿ ಸರ್ಕಾರ ಕೈಗೊಂಡ ಕ್ರಮಗಳನ್ನು ತಿಳಿಸಿದ್ದರು.

    ಜಾಗತಿಕ ಆರ್ಥಿಕತೆ ಕುಸಿಯುತ್ತಿರುವ ವಿಚಾರ ಎಲ್ಲರಿಗೆ ತಿಳಿದಿದೆ. ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಸಮರದಿಂದಾಗಿ ಜಾಗತಿಕ ಮಟ್ಟದಲ್ಲಿ ಆರ್ಥಿಕತೆ ಸಮಸ್ಯೆಯಾಗಿದೆ. ಇದರಿಂದಾಗಿ ಭಾರತಕ್ಕೂ ಸಮಸ್ಯೆಯಾಗಿದ್ದು, ಆರ್ಥಿಕ ಪ್ರಗತಿ ಮೇಲೆ ಪರಿಣಾಮ ಬೀರಿದೆ. ಆದರೆ ಭಾರತ ಜಿಡಿಪಿಯಲ್ಲಿ ಅಮೆರಿಕ ಮತ್ತು ಚೀನಾಕ್ಕಿಂತ ಮುಂದಿದೆ. ಆರ್ಥಿಕತೆಯಲ್ಲಿ ಏರಿಳಿತ ನಡೆಯುತ್ತಲೇ ಇರುತ್ತದೆ. ಕುಸಿಯುತ್ತಿದೆ ಎನ್ನುವ ಕಾರಣಕ್ಕೆ ನಾವು ಸಮಸ್ಯೆಯಲ್ಲಿ ಸಿಲುಕಿದ್ದೇವೆ ಎಂದು ವದಂತಿ ಹಬ್ಬಿಸುವ ಅಗತ್ಯವಿಲ್ಲ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದರು.

    ವಿಶ್ವದ ಇತರೆ ದೇಶಗಳಿಗೆ ಹೋಲಿಸಿದರೆ ಭಾರತದ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ದರ ಉತ್ತಮವಾಗಿದೆ. ಜಾಗತಿಕ ಆರ್ಥಿಕ ಹಿಂಜರಿತದ ನಡುವೆಯೂ ಭಾರತದ ಆರ್ಥಿಕ ಪ್ರಗತಿ ಗಣನೀಯವಾಗಿ ಏರಿಕೆಯಲ್ಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು.

  • ಒಂದು ದೇಶ, ಒಂದು ಕಾರ್ಡ್ ಬಗ್ಗೆ ಬಜೆಟ್‍ನಲ್ಲಿ ಪ್ರಸ್ತಾಪ

    ಒಂದು ದೇಶ, ಒಂದು ಕಾರ್ಡ್ ಬಗ್ಗೆ ಬಜೆಟ್‍ನಲ್ಲಿ ಪ್ರಸ್ತಾಪ

    ನವದೆಹಲಿ: ಇಂದು ಕೇಂದ್ರ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. ತಮ್ಮ ಬಜೆಟ್‍ನಲ್ಲಿ ಒಂದು ದೇಶ, ಒಂದು ಕಾರ್ಡ್ ವ್ಯವಸ್ಥೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ.

    ರಾಷ್ಟ್ರೀಯ ಸಾಮಾನ್ಯ ಚಲನಶೀಲತೆ ಕಾರ್ಡ್ (ಎನ್‍ಸಿಎಂಸಿ) ಮಾನದಂಡಗಳ ಆಧಾರದ ಮೇಲೆ ಭಾರತದ ಮೊದಲ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಪಾವತಿ ವ್ಯವಸ್ಥೆಯನ್ನು ಮಾರ್ಚ್, 2019ರಲ್ಲಿ ಪ್ರಧಾನ ಮಂತ್ರಿ ಉದ್ಘಾಟಿಸಿದ್ದರು. ಎನ್‍ಸಿಎಂಸಿ ದೇಶೀಯವಾಗಿ ಅಭಿವೃದ್ಧಿಗೊಂಡಿದ್ದು, ಹಲವು ಸೇವೆಗಳನ್ನು ಗ್ರಾಹಕರು ಈ ಒಂದೇ ಕಾರ್ಡ್‍ನಿಂದ ಪಡೆಯಬಹುದಾಗಿದೆ.

    ಕಾರ್ಡ್ ಒಂದು ಉಪಯೋಗ ಹಲವು ಎನ್ನುವುದೇ ಈ ಕಾರ್ಡ್‍ನ ವಿಶೇಷತೆಯಾಗಿದ್ದು, ಸಾರಿಗೆ, ಮೆಟ್ರೊ ಸೇವೆ, ಟೋಲ್ ಸುಂಕ, ಪಾರ್ಕಿಂಗ್ ಶುಲ್ಕ ಪಾವತಿ, ರೀಟೇಲ್ ಶಾಪಿಂಗ್, ದೇಶದ ಎಲ್ಲಾ ಕಡೆಯೂ ಹಣ ಪಡೆಯುವ ಅವಕಾಶ ಸೇರಿದಂತೆ ಬಹುತೇಕ ಎಲ್ಲಾ ಸೇವೆಗಳಿಗೆ ಈ ಕಾರ್ಡ್ ಉಪಯೋಗಿಸಬಹುದು. ಅಲ್ಲದೆ ಈ ಎನ್‍ಸಿಎಂಸಿ ರುಪೇ ಕಾರ್ಡ್ ಮೂಲಕ ಕಾರ್ಯ ನಿರ್ವಹಿಸುತ್ತದೆ. ಹಾಗೆಯೇ ಇದನ್ನು ಬಳಕೆದಾರರು ಮೆಟ್ರೋ, ಬಸ್ ಪ್ರಯಾಣ, ಟೋಲ್ ತೆರಿಗೆ, ಪಾರ್ಕಿಂಗ್, ಎಟಿಎಂನಿಂದ ಹಣ ತೆಗೆಯಲು ಸಹ ಉಪಯೋಗಿಸಬಹುದಾಗಿದೆ.

    ಈ ಎನ್‍ಸಿಎಂಸಿ ಕಾರ್ಡ್ ರುಪೇ ಕಾರ್ಡ್ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಪ್ರಯಾಣ ಸಂಬಂಧಿ ಸಮಸ್ಯೆಗಳನ್ನು ಈ ಕಾರ್ಡ್‍ನಿಂದ ದೂರವಾಗುತ್ತದೆ. ಮೆಟ್ರೊ, ಬಸ್, ರೈಲಿನಲ್ಲಿ ಪ್ರಯಾಣ ಮಾಡುವಾಗ ಅಥವಾ ಟೋಲ್‍ಗಳಲ್ಲಿ ಸುಂಕ ಕಟ್ಟುವಾಗ, ವಾಹನ ಪಾರ್ಕಿಂಗ್ ಮಾಡುವಾಗ ಚಿಲ್ಲರೆಯ ಸಮಸ್ಯೆ ಸಾಮಾನ್ಯವಾಗಿ ಎದುರಾಗುತ್ತದೆ. ಈ ಸಮಸ್ಯೆಗೆ ಪರಿಹಾರ ಎನ್ನುವಂತೆ ಆಟೋಮ್ಯಾಟಿಕ್ ಶುಲ್ಕ ಸಂಗ್ರಹ ವ್ಯವಸ್ಥೆಯನ್ನು ರೂಪಿಸಲಾಗಿದೆ. ಈ ಎನ್‍ಸಿಎಂಸಿ ಕಾರ್ಡ್‍ನಿಂದ ಜನರಿಗೆ ಬಹಳ ಅನುಕೂಲವಾಗಲಿದೆ ಎಂದು ಪ್ರಧಾನಿ ತಿಳಿಸಿದ್ದರು.

    ನಾನಾ ಸಂಸ್ಥೆಗಳು ಕಾರ್ಡ್ ವಿತರಿಸುತ್ತಿದ್ದ ಕಾರಣಕ್ಕೆ ಅವುಗಳು ಸೇವೆ ನಿರ್ದಿಷ್ಟ ನಗರಗಳಲ್ಲಿ ಮಾತ್ರ ಪಡೆಯಲು ಅವಕಾಶ ಇತ್ತು. ಇದು ಬಳಕೆದಾರರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿತ್ತು. ಆದರೆ, ಈ ಬಂದಿರುವ ಎನ್‍ಸಿಎಂಸಿ ಬಳಸಿ ದೇಶದ ಎಲ್ಲೆಡೆ ಸೇವೆಯನ್ನು ಪಡೆಯಬಹುದಾಗಿದೆ ಎಂದು ಮೋದಿ ಹೇಳಿದ್ದರು.

    ಈ ಒಂದು ದೇಶ ಒಂದು ಕಾರ್ಡ್ ತಂತ್ರಜ್ಞಾನವು ಕೇವಲ ಆಯ್ದ ದೇಶಗಳಲ್ಲಿ ಮಾತ್ರ ಇದೆ. ಈಗ ಭಾರತವು ಈಗ ಕೂಡ ಈ ಪಟ್ಟಿಗೆ ಸೇರಿದೆ. ವಿದೇಶ ತಂತ್ರಜ್ಞಾನವನ್ನು ಹೆಚ್ಚಿನ ಕಾಲದವರೆಗೆ ಉಪಯೋಗಿಸದೆ ಮೇಕ್ ಇನ್ ಇಂಡಿಯಾ ಮೂಲಕ ಈ ಕಾರ್ಡ್ ರೂಪುಗೊಂಡಿದೆ. ಬ್ಯಾಂಕ್‍ಗಳು, ವಿವಿಧ ಸಚಿವಾಲಯಗಳು ಹಾಗೂ ಸಕಾರಿ ಇಲಾಖೆಗಳ ಜೊತೆ ಚರ್ಚೆ ನಡೆಸಿ ಹಾಗೂ ಹಲವು ಪ್ರಕ್ರಿಯೆಗಳು ಮುಗಿದ ಬಳಿಕ ಈ ನೂತನ ಕಾರ್ಡ್ ಕಾರ್ಯರೂಪಕ್ಕೆ ಬಂದಿದೆ. ಅಂದರೆ ರುಪೇ ಕಾರ್ಡ್ ಅನ್ನು ಮೊಬಿಲಿಟಿ ಕಾರ್ಡ್ ಜೊತೆ ವಿಲೀನ ಮಾಡಲಾಗಿದೆ.

    ಎನ್‍ಸಿಎಂಸಿಯಲ್ಲಿ ಯಾವೆಲ್ಲ ಸೇವೆ ಲಭ್ಯ?
    1. ರುಪೇ ಡೆಬಿಟ್/ಕ್ರೆಡಿಟ್ ಕಾರ್ಡ್ ರೀತಿಯೇ ಈ ಎನ್‍ಸಿಎಂಸಿ ಇರುತ್ತದೆ. ಎಸ್‍ಬಿಐ, ಪಿಎನ್‍ಬಿ ಸೇರಿದಂತೆ 25 ಬ್ಯಾಂಕ್‍ಗಳಲ್ಲಿ ಈ ಕಾರ್ಡ್ ಲಭ್ಯವಿದೆ.
    2. ಇದರಿಂದ ಮೆಟ್ರೊ, ಬಸ್, ಸಬರ್ಬನ್ ರೈಲ್ವೆ, ಸ್ಮಾರ್ಟ್ ಸಿಟಿ ಮತ್ತು ರೀಟೇಲ್ ಶಾಪಿಂಗ್ ಮತ್ತಿತರ ಸೇವೆಗಳನ್ನು ಪಡೆಯಬಹುದಾಗಿದೆ.

    3. ಟೇಲ್ ಗೇಟ್‍ಗಳಲ್ಲಿ ಮತ್ತು ವಾಹನ ಪಾರ್ಕಿಂಗ್ ಸ್ಥಳಗಳಲ್ಲಿ ಶುಲ್ಕ ಕಟ್ಟಲು ಈ ಕಾರ್ಡ್ ಉಪಯುಕ್ತ.
    4. ಇದರಿಂದ ಬಿಲ್ ಪೇಮೆಂಟ್ ಕೂಡ ಮಾಡಬಹುದು. ಅಲ್ಲದೆ ಇದರಲ್ಲಿ ಕ್ಯಾಶ್‍ಬ್ಯಾಕ್ ಆಫರ್ ಗಳೂ ಲಭ್ಯವಿದ್ದು, ಸಾವಿರಕ್ಕೂ ಅಧಿಕ ಸೇವೆಗಳ ಆನಂದಿಸಬಹುದು.
    5. ಅಷ್ಟೇ ಅಲ್ಲದೆ ಈ ಕಾರ್ಡ್ ಬಳಕೆದಾರರು ಎಟಿಎಂಗಳಲ್ಲಿ ಶೇ.5ರಷ್ಟು ಕ್ಯಾಶ್‍ಬ್ಯಾಕ್ ಪಡೆಯಬಹುದು. ವಿದೇಶಕ್ಕೆ ತೆರಳಿದಾಗ ಮರ್ಚೆಂಟ್‍ಗಳ ಔಟ್‍ಲೆಟ್‍ಗಳಲ್ಲಿ ಶೇ.10ರಷ್ಟು ಕ್ಯಾಶ್‍ಬ್ಯಾಕ್ ಈ ಕಾರ್ಡ್ ಹಿಂದಿದವರಿಗೆ ಸಿಗುತ್ತದೆ.

  • ಸೂಟ್‍ಕೇಸ್ ಸಂಸ್ಕೃತಿಗೆ ಬ್ರೇಕ್ – ಕೆಂಪು ಬಣ್ಣದ ಬಟ್ಟೆಯಲ್ಲಿ ಬಜೆಟ್ ಪ್ರತಿ

    ಸೂಟ್‍ಕೇಸ್ ಸಂಸ್ಕೃತಿಗೆ ಬ್ರೇಕ್ – ಕೆಂಪು ಬಣ್ಣದ ಬಟ್ಟೆಯಲ್ಲಿ ಬಜೆಟ್ ಪ್ರತಿ

    ನವದೆಹಲಿ: ಹಣಕಾಸು ಸಚಿವರು ಇಲ್ಲಿಯವರೆಗೆ ಬಜೆಟ್ ಪ್ರತಿಯನ್ನು ಸೂಟ್‍ಕೇಸ್‍ನಲ್ಲಿ ಹೊತ್ತುಕೊಂಡು ಸಂಸತ್ ಪ್ರವೇಶಿಸುತ್ತಿದ್ದರು. ಆದರೆ ನಿರ್ಮಲಾ ಸೀತಾರಾಮನ್ ಅವರು ಈ ಸಂಪ್ರದಾಯಕ್ಕೆ ಬ್ರೇಕ್ ಹಾಕಿ ಕೆಂಪು ಬಣ್ಣದ ಬಟ್ಟೆಯಲ್ಲಿ ಬಜೆಟ್ ಪ್ರತಿಗಳನ್ನು ಇರಿಸಿಕೊಂಡು ಸಂಸತ್ ಪ್ರವೇಶಿಸಿದ್ದಾರೆ.

    ಹಣಕಾಸು ಸಚಿವಾಯಕ್ಕೆ ಆಗಮಿಸಿದ ಸಚಿವೆ ಬಜೆಟ್ ದಾಖಲೆಗಳನ್ನು ಬ್ರೀಫ್‍ಕೇಸ್ ಬದಲು ಕೆಂಪು ಬಣ್ಣದ ಬಟ್ಟೆಯಲ್ಲಿ ಬಜೆಟ್ ಪ್ರತಿ ಹಿಡಿದು ಫೋಟೋಗೆ ಪೋಸ್ ಕೊಟ್ಟಿರುವುದು ವಿಶೇಷವಾಗಿತ್ತು. ಈ ವೇಳೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಹಾಗೂ ಹಣಕಾಸು ಸಚಿವಾಲಯದ ಇತರೇ ಅಧಿಕಾರಿಗಳು ಸಚಿವೆಗೆ ಸಾಥ್ ನೀಡಿದ್ದಾರೆ.

    ನಿರ್ಮಲಾ ಸೀತಾರಾಮನ್ ಭಾರತದ ಪೂರ್ಣ ಅವಧಿಯ ಮೊದಲ ಮಹಿಳಾ ಹಣಕಾಸು ಮಂತ್ರಿಯಾಗಿದ್ದಾರೆ. ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡನೆಯಾಗಲಿದೆ. ಈ ಬಾರಿ ಕೇಂದ್ರ ಸರ್ಕಾರ ಬಜೆಟ್ ಖರ್ಚನ್ನು ಹೆಚ್ಚಿಸಿ, ತೆರಿಗೆ ವ್ಯವಹಾರಗಳ ಬಗ್ಗೆ ಪ್ರಮುಖ್ಯತೆ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

    ಕೆಂಪುಬಟ್ಟೆಯಲ್ಲಿ ಬಜೆಟ್ ಗೆ ಸಂಬಂಧಪಟ್ಟ ದಾಖಲೆಗಳನ್ನು ಇಟ್ಟು ಆ ಬಟ್ಟೆಯನ್ನು ನಾಲ್ಕು ಮಡಿಕೆ ಮಾಡಿ ರಿಬ್ಬನ್‍ನಿಂದ ಕಟ್ಟಲಾಗಿದೆ. ಅದರ ಮೇಲೆ ರಾಷ್ಟ್ರಲಾಂಛನವಾದ ನಾಲ್ಕು ಮುಖದ ಸಿಂಹದ ಚಿತ್ರವಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಹ್ಮಣಿಯನ್ ಅವರು, ಬಟ್ಟೆಯಲ್ಲಿ ಕಟ್ಟುವುದು ನಮ್ಮ ದೇಶದ ಸಂಪ್ರದಾಯ. ಪಾಶ್ಚಾತ್ಯ ಸಂಸ್ಕೃತಿಯಿಂದ ಹೊರಬರಲು ಈ ಬಾರಿ ಬ್ರೀಫ್‍ಕೇಸ್ ಕೈಬಿಡಲಾಗಿದೆ ಎಂದು ತಿಳಿಸಿದ್ದಾರೆ.

    ಸಂಸತ್ ಪ್ರವೇಶಿಸುವ ಮುನ್ನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಸಚಿವೆ ಭೇಟಿಯಾಗಿದ್ದರು. ಬಜೆಟ್ ಮಂಡಿಸಿದ ಬಳಿಕ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ ನಡೆಸಲಿದ್ದು, ಅನುರಾಗ್ ಠಾಕೂರ್, ಹಣಕಾಸು ಸಚಿವಾಲಯದ ಕಾರ್ಯದರ್ಶಿಗಳು ಮತ್ತು ಆರ್ಥಿಕ ಸಲಹೆಗಾರ ಕೆ.ವಿ ಸುಬ್ರಮಣಿಯನ್ ಅವರು ಭಾಗಿಯಾಗಲಿದ್ದಾರೆ.

  • ಇಂದು 2ನೇ ಅವಧಿಯ ಮೋದಿ ಸರ್ಕಾರದ ಮೊದಲ ಬಜೆಟ್- ಲೋಕಸಭೆಯಲ್ಲಿ ನಿರ್ಮಲಾ ಲೆಕ್ಕ

    ಇಂದು 2ನೇ ಅವಧಿಯ ಮೋದಿ ಸರ್ಕಾರದ ಮೊದಲ ಬಜೆಟ್- ಲೋಕಸಭೆಯಲ್ಲಿ ನಿರ್ಮಲಾ ಲೆಕ್ಕ

    – ಬಜೆಟ್ ನಿರೀಕ್ಷೆಗಳೇನು..?

    ನವದೆಹಲಿ: ಲೋಕಸಭೆ ಸಮರದ ಬಳಿಕ ದೇಶ ಮತ್ತೊಂದು ಬಜೆಟ್ ಗೆ ಸಾಕ್ಷಿ ಆಗಲಿದೆ. ಇಂದು ಪ್ರಧಾನಿ ನರೇಂದ್ರ ಮೋದಿ 2.0 ಸರ್ಕಾರದ ಮೊದಲ ಬಜೆಟ್ ಮಂಡನೆ ಆಗಲಿದೆ. ಮೊದಲ ಬಾರಿಗೆ ಹಣಕಾಸು ಸಚಿವೆಯಾಗಿ ನಿರ್ಮಲಾ ಸೀತರಾಮನ್ ಬಜೆಟ್ ಮಂಡಿಸುತ್ತಿದ್ದಾರೆ. ಇಡೀ ದೇಶದ ಜನರು ಆಸೆಗಣ್ಣುಗಳಲ್ಲಿ ಬಜೆಟ್ ನಲ್ಲಿ ಏನಿರಬಹುದು ಎಂದು ನಿರೀಕ್ಷೆ ಮಾಡುತ್ತಿದ್ದಾರೆ.

    ಒಂದು ಕಡೆ ಐತಿಹಾಸಿಕ ಉದ್ಯೋಗ ನಷ್ಟವಾಗಿದೆ, ಕೃಷಿ ವಲಯ ಪಾತಾಳಕ್ಕೆ ಸಿಲುಕಿದೆ. ಬೆಳೆ ಹಾನಿ, ಬೆಂಬಲ ಬೆಲೆ ಇಲ್ಲದೆ ರೈತ ರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮತ್ತೊಂದು ಕಡೆ ಬ್ಯಾಂಕಿಂಗ್ ವ್ಯವಸ್ಥೆಯಲ್ಲೂ ಆರ್ಥಿಕ ಹಿನ್ನಡೆ ಆಗಿದೆ. ಹೀಗೆ ಸಾಲು ಸಾಲು ಸವಾಲುಗಳ ನಡುವೆ ಇಂದು ನಿರ್ಮಲಾ ಸೀತರಾಮನ್ ಬಜೆಟ್ ಮಂಡಿಸುತ್ತಿದ್ದಾರೆ.

    ಕಳೆದ ಫೆಬ್ರವರಿ 1 ರಂದು ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿ ಅವರ ಅನುಪಸ್ಥಿತಿಯಲ್ಲಿ ರೈಲ್ವೆ ಸಚಿವರಾಗಿದ್ದ ಪಿಯೂಷ್ ಗೊಯೇಲ್ ಬಜೆಟ್ ಮಂಡಿಸಿದ್ದರು. ಚುನಾವಣೆ ಹಿನ್ನೆಲೆಯಲ್ಲಿ ಪೂರ್ಣ ಪ್ರಮಾಣದ ಬಜೆಟ್ ಆಗದೆ ಕೇವಲ ಲೇಖಾನುದಾನ ಪಡೆಯಲಾಗಿತ್ತು. ಈಗ ಮೋದಿ ನೇತೃತ್ವದ ಸರ್ಕಾರ ವಾಪಸ್ ಬಂದಿದ್ದ ಇಂದು ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಆಗಲಿದೆ.

    ಚುನಾವಣಾ ಪೂರ್ವ ಬಜೆಟ್ ನಲ್ಲಿ ರೈತರನ್ನು ಟಾರ್ಗೆಟ್ ಮಾಡಲಾಗಿತ್ತು. ರೈತರ ಖಾತೆಗೆ 6 ಸಾವಿರ ಹಣ ಸೇರಿದಂತೆ ನೌಕರರ ವರ್ಗಕ್ಕೆ 5 ಲಕ್ಷಕ್ಕೆ ಆದಾಯ ಮಿತಿ ಹೆಚ್ಚಳ ಮಾಡುವ ಘೋಷಣೆ ಮಾಡಲಾಗಿತ್ತು. ಚುನಾವಣೆಯ ಹೊಸ್ತಿಲಲ್ಲಿ ಈ ಮೂಲಕ ಜನಪ್ರೀಯತೆ ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಗಿತ್ತು. ಈಗ ಚುನಾವಣೆಯಲ್ಲಿ ಭರ್ಜರಿಯಾಗಿ ಜಯಗಳಿಸಿದ್ದು ರಾಷ್ಟ್ರೀಯತೆ ಸೇನೆ ಭದ್ರತೆ, ಯುವಕರು ಮಹಿಳೆಯರ ಮೇಲೆ ಹೆಚ್ಚು ಕೇಂದ್ರಿಕರಿಸಲಾಗಿತ್ತು. ಹಾಗಾಗಿ ಈ ಬಜೆಟ್ ನಲ್ಲಿ ಏನಿರಬಹುದು ಅನ್ನೊ ನೀರಿಕ್ಷೆ ಹೆಚ್ಚುವಂತೆ ಮಾಡಿದೆ. ಇದನ್ನೂ ಓದಿ: ಕನ್ನಡಿಗರ ಬೇಡಿಕೆಗಳೇನು?

    ಇಂದಿನ ಬಜೆಟ್‍ನಲ್ಲಿ ಏನಿರಬಹುದು..?
    ರಕ್ಷಣೆ
    * ರಕ್ಷಣಾ ಇಲಾಖೆ ಸಚಿವರಾಗಿದ್ದ ಅನುಭವದ ಹಿನ್ನೆಲೆಯಲ್ಲಿ ಸೇನಾ ವಲಯದಲ್ಲಿ ಮಹತ್ವದ ಯೋಜನೆಗಳಿಗೆ ನಿರ್ಮಲಾ ಸೀತಾರಾಮನ್ ಒಪ್ಪಿಗೆ ನೀಡಬಹುದು
    * ಮತ್ತಷ್ಟು ಯುದ್ಧ ವಿಮಾನಗಳು, ಸೇನಾ ಸಾಮಾಗ್ರಿಗಳ ಖರೀದಿಗೆ ಹಣ ಮೀಸಲಿಡಬಹುದು

    ಕಾರ್ಪೊರೇಟ್
    * ಆರ್ಥಿಕ ಕ್ರಾಂತಿ ಭರವಸೆ ನೀಡಿರುವ ಮೋದಿ ಸರ್ಕಾರ ಈ ಬಾರಿ ಉದ್ಯೋಗ ಸೃಷ್ಠಿಗೆ ಹೆಚ್ಚಿನ ಆದ್ಯತೆ ನೀಡಬಹುದು
    * ಕಾರ್ಪೊರೇಟ್ ತೆರಿಗೆ ದರವನ್ನು ಶೇ.30 ರಿಂದ ಶೇ. 25 ಇಳಿಸುವ ಮೂಲಕ ಹೆಚ್ಚು ಕೈಗಾರಿಕೆಗೆ ಪ್ರೋತ್ಸಾಹ ನೀಡುವುದು ಈ ಮೂಲಕ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬಹುದು
    * ಪರ್ಯಾಯ ತೆರಿಗೆಯನ್ನು ಕನಿಷ್ಠ ಶೇ.18.5 ರಿಂದ ಶೇ.15 ಕ್ಕೆ ಕಡಿತಗೊಳಿಸುವುದು
    * ತೆರಿಗೆ ವಿನಾಯಿತಿಗಳನ್ನು ಹೆಚ್ಚಿಸಿ, ವ್ಯಕ್ತಿಗಳಿಗೆ ವಿನಾಯಿತಿ ನೀಡುವುದು

    ಕೃಷಿ
    * ಕೃಷಿ ವಲಯದಲ್ಲಿ ಬಂಡವಾಳವನ್ನು ಪ್ರೋತ್ಸಾಹಿಸಲು ಸಾಲವನ್ನು ಖಾತರಿಪಡಿಸಲು ನಿಧಿಯನ್ನು ಸ್ಥಾಪಿಸುವುದು
    * ಬರಗಾಲ ಸೂಕ್ಷ್ಮತೆ ಅರಿತು ಅಣೆಕಟ್ಟುಗಳು ಮತ್ತು ಕಾಲುವೆಗಳು, ಸೂಕ್ಷ್ಮ ನೀರಾವರಿ ವ್ಯವಸ್ಥೆಗಳಿಗೆ ಹೆಚ್ಚಿನ ಅನುದಾನ ನೀಡುವುದು
    * ನದಿ ಜೋಡಣೆ ಯೋಜನೆ ಪ್ರಸ್ತಾಪ ಆಗಬಹುದು
    * ಬೆಳೆಗಳ ಹಾನಿ ತಪ್ಪಿಸಲು ಶೀತಲ ಶೇಖರಣಾ ಘಟಕಗಳ ನಿರ್ಮಾಣಕ್ಕೆ ಸಹಾಯಧನ
    * ಕಿಸಾಮ್ ಸಮ್ಮಾನ್ ಯೋಜನೆ ವಿಸ್ತರಣೆ
    * ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ತುರ್ತು ಸಾಲದ ವ್ಯವಸ್ಥೆ, ಮಧ್ಯವರ್ತಿಗಳ ಹಾವಳಿ ತಪ್ಪಿಸುವುದು
    * ರಸ ಗೊಬ್ಬರ ಹಂಚಿಕೆ ವ್ಯವಸ್ಥೆಯಲ್ಲಿ ಡಿಜಿಟಲೀಕರಣ
    * 60 ವರ್ಷ ಮೆಲ್ಪಟ್ಟ ರೈತರು, ಸಣ್ಣ ವ್ಯಾಪಾರಿಗಳಿಗೆ ಪಿಂಚಣಿ ವ್ಯವಸ್ಥೆ
    * ಶೂನ್ಯ ಬಡ್ಡಿದರದಲ್ಲಿ ರೈತರಿಗೆ ಸಾಲ ಯೋಜನೆ

    ಮೂಲಭೂತ ಸೌಕರ್ಯ ವಲಯ
    * ಬಜೆಟ್ ನಲ್ಲಿ ರಸ್ತೆಗಳ ಅಭಿವೃದ್ಧಿಗೆ ಶೇ.10 ರಿಂದ ಶೇ. 15ರಷ್ಟು ಬಂಡವಾಳ ಹೆಚ್ಚಳ
    * ಪಶ್ಚಿಮ ಮತ್ತು ಪೂರ್ವ ಭಾರತವನ್ನು ಸಂಪರ್ಕಿಸುವ ಭಾರತ್ಮಾಲಾ ಯೋಜನೆ ಸೇರಿದಂತೆ ಪ್ರಮುಖ ರಸ್ತೆ ಯೋಜನೆಗಳಿಗೆ ಹೆಚ್ಚಿನ ಅನುದಾನ
    * ಬಜೆಟ್ ನಲ್ಲಿ ಶೇ.10 ರಷ್ಟು ರೈಲ್ವೇ ಹೂಡಿಕೆಗಳನ್ನು ಹೆಚ್ಚಳ

    ಬ್ಯಾಂಕಿಂಗ್ ಮತ್ತು ತಂತ್ರಜ್ಞಾನ
    * ಡಿಜಿಟಲ್ ವ್ಯವಹಾರಗಳಿಗೆ ಹೆಚ್ಚಿನ ಪ್ರೋತ್ಸಾಹವನ್ನು ಒದಗಿಸುವುದು
    * ಡಿಜಿಟಲ್ ಪಾವತಿ ಮೂಲಸೌಕರ್ಯವನ್ನು ಬೆಂಬಲಿಸಿ ಮೊಬೈಲ್ ಫೋನ್, ಎಕ್ಸೈಸ್ ಡ್ಯುಟಿ, ಟ್ಯಾಬ್ಲೆಟ್, ಕಂಪ್ಯೂಟರ್ ಗಳ ಸುಂಕ ಕಡಿಮೆಗೊಳಿಸುವುದು
    * ಟೆಲಿಕಾಂ ಸೇವೆಗಳ ಈಗಿರುವ ಶೇ.18 ಜಿಎಸ್‍ಟಿ ದರವನ್ನು ಶೇ.12ಕ್ಕೆ ಕಡಿತಗೊಳಿಸುವುದು

    ರಿಯಲ್ ಎಸ್ಟೇಟ್
    * ವಸತಿ ಸೇರಿದಂತೆ ಎಲ್ಲಾ ರಿಯಲ್ ಎಸ್ಟೇಟ್ ಯೋಜನೆಗಳ ವಿಳಂಬವನ್ನು ತಪ್ಪಿಸಲು ಏಕಮುಖ ಕ್ಲಿಯರೆನ್ಸ್ ಒದಗಿಸುವುದು
    * ಹಣಕಾಸು, ಯೋಜನಾ ವೆಚ್ಚವನ್ನು ತಗ್ಗಿಸಲು ರಿಯಲ್ ಎಸ್ಟೇಟ್ ಗೆ ಮೂಲ ಸೌಕರ್ಯ ನೀಡಿ, ಕಡಿಮೆ ವೆಚ್ಚಕ್ಕೆ ಮನೆಗಳು ದೊರೆಯುವಂತೆ ಮಾಡುವುದು
    * ಪ್ರಸ್ತುತ 12 ಪ್ರತಿ ಶತದಿಂದ ನಿರ್ಮಾಣ ಹಂತದಲ್ಲಿರುವ ಯೋಜನೆಗಳಿಗೆ ಜಿಎಸ್ ಟಿ ದರವನ್ನು ಕಡಿಮೆ ಮಾಡುವುದು
    * ಮನೆ ಖರೀದಿಗೆ ಶೇ.12 ಜಿಎಸ್ಟಿಗೆ ದರವನ್ನು ಕಡಿಮೆ ಮಾಡಿ; ಸ್ಟಾಂಪ್ ಡ್ಯುಟಿ ಕಡಿತಗೊಳಿಸುವುದು

    ವೈದ್ಯಕೀಯ
    * 75 ನೂತನ ಏಮ್ಸ್ ಆಸ್ಪತ್ರೆಗಳ ನಿರ್ಮಾಣ
    * ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯಗಳ ಹೆಚ್ಚಳಕ್ಕೆ ಆದ್ಯತೆ

  • ಭಾರತದಲ್ಲಿ ಬಡತನ ಇನ್ನೂ ಇರಲು ಕಾಂಗ್ರೆಸ್ ಕಾರಣ : ರಕ್ಷಣಾ ಸಚಿವೆ ಕಿಡಿ

    ಭಾರತದಲ್ಲಿ ಬಡತನ ಇನ್ನೂ ಇರಲು ಕಾಂಗ್ರೆಸ್ ಕಾರಣ : ರಕ್ಷಣಾ ಸಚಿವೆ ಕಿಡಿ

    – ಗರೀಬಿ ಹಠಾವೋ ಆರಂಭಿಸಿದ್ದು ಇಂದಿರಾ ಗಾಂಧಿ
    – ಈಗಲೂ ಕಾಂಗ್ರೆಸ್ಸಿನ ಜನಪ್ರಿಯ ಕಾರ್ಯಕ್ರಮ

    ಉಡುಪಿ: ಗರೀಬಿ ಹಠಾವೋ ಕಾಂಗ್ರೆಸ್ಸಿನ ಜನಪ್ರಿಯ ಕಾರ್ಯಕ್ರಮವಾಗಿದ್ದು ಇಂದಿರಾ ಗಾಂಧಿ 1971ರಲ್ಲಿ ಅಭಿಯಾನವನ್ನು ಆರಂಭಿಸಿದರು. ಇನ್ನೂ ಅದೇ ಘೋಷಣೆಯನ್ನು ರಾಹುಲ್ ಹೇಳುತ್ತಿದ್ದು, ಬಡತನ ಭಾರತದಲ್ಲಿ ಇನ್ನೂ ಇರಲು ಯಾರು ಕಾರಣ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಶ್ನೆ ಮಾಡಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ಪ್ರಚಾರಕ್ಕೆ ತುಂಬಾ ಕೆಲಸ ಮಾಡುತ್ತೇವೆ. ಪ್ರಿಯಾಂಕಾ ಗಾಂಧಿ ಏನೇ ಆರೋಪ ಮಾಡಲಿ. ಬಿಜೆಪಿ ಟಿ ಶರ್ಟ್, ಆಪ್ ಮೂಲಕ ಮಾರಾಟವಾಗುತ್ತದೆ. ಇದರಲ್ಲಿ ತಪ್ಪೇನಿದೆ? ಇಂತಹದ್ದು ಇನ್ನೂ ಸಾಕಷ್ಟು ಮಾಡುತ್ತೇವೆ ಎಂದು ಪ್ರಿಯಾಂಕ ಗಾಂಧಿಗೆ ಟಾಂಗ್ ಕೊಟ್ಟರು. ಅಲ್ಲದೆ ಲೋಕಸಭಾ ಚುನಾವಣೆಯಲ್ಲಿ ಜಯ ಪಡೆದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ದೇಶದ ಕಡು ಬಡವರ ಕುಟುಂಬಕ್ಕೆ ವಾರ್ಷಿಕ 72 ಸಾವಿರ ರೂ. ಆದಾಯ ನೀಡಲಾಗುತ್ತದೆ ಎಂದ ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿದ ರಕ್ಷಣಾ ಸಚಿವೆ, ಗರೀಬಿ ಹಠಾವೋ ಆರಂಭಿಸಿದ್ದು ಇಂದಿರಾ ಗಾಂಧಿ, ಅದನ್ನ ರಾಹುಲ್ ಕೂಡ ಹೇಳಿಕೊಂಡು ಬರುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಇದನ್ನು ಓದಿ:ದೇಶದ 20% ರಷ್ಟು ಬಡವರಿಗೆ ವಾರ್ಷಿಕ 72 ಸಾವಿರ ರೂ.: ರಾಹುಲ್ ಗಾಂಧಿ

    ನಾವು ಐದು ವರ್ಷ ಭ್ರಷ್ಟಾಚಾರ ರಹಿತ ಕೆಲಸ ಮಾಡಿದ್ದೇವೆ. ಮೋದಿ ವಿರುದ್ಧ ಮಹಾಘಟಬಂಧನ್ ಸ್ಥಾಪನೆಯಾಗಿದೆ. ಎನ್‍ಡಿಎ ಜೊತೆ ಘಟಬಂಧನ್ ಹೋಲಿಕೆ ಮಾಡಬೇಡಿ. ನಮ್ಮ ಪ್ರಧಾನಿ ಮೋದಿಗೆ ಸರಿಸಾಟಿ ಯಾರಿದ್ದಾರೆ? ಚೋರ್ ಚೋರ್ ಕರೆಯಲು ನಿಮ್ಮಲ್ಲಿ ಏನಿದೆ ಸಾಕ್ಷಿ? ಜಾಮೀನಿನ ಮೇಲೆ ಹೊರಗಿರುವ ರಾಹುಲ್ ಗಾಂಧಿಗೆ ಮಾತನಾಡುವ ನೈತಿಕತೆ ಇದೆಯೇ ಎಂದು ಆಕ್ರೋಶ ಹೊರಹಾಕಿದರು.

    ರಾಹುಲ್‍ಗೆ ಸ್ಮೃತಿ ಭಯ ಶುರುವಾಗಿದೆ, ಅಮೇಥಿ ಕ್ಷೇತ್ರ ಹಿಂದೆಂದು ಕಾಣದ ಅಭಿವೃದ್ಧಿ ಕಂಡಿದೆ. 2014 ರಲ್ಲಿ ಸ್ಮೃತಿ ಇರಾನಿ ಸೋತರೂ ಅಮೇಥಿ ಜೊತೆ ನಿಂತಿದ್ದರು. ಇರಾನಿ ಅಮೇಥಿಯಲ್ಲಿ ಜನರ ನಿರಂತರ ಸಂಪರ್ಕದಲ್ಲಿದ್ದಾರೆ. ರಾಹುಲ್ ಗಾಂಧಿಗೆ ಈ ಬಗ್ಗೆ ಭಯ ಆವರಿಸಿದೆ. ರಾಹುಲ್ ಗೆ ಸೋಲಿನ ಭೀತಿ ಎದುರಾಗಿದೆ. ರಾಹುಲ್ ಗಾಂಧಿ ಬೇರೆ ಕ್ಷೇತ್ರಕ್ಕೆ ಪಲಾಯನ ಮಾಡುತ್ತಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಕುಟುಕಿದರು.

    ಶೋಭಾ ಕರಂದ್ಲಾಜೆಯನ್ನು ಗೆಲ್ಲಿಸಲು ವಿಜಯ ಸಂಕಲ್ಪಯಾತ್ರೆಗೆ ಬಂದಿದ್ದೇನೆ. ಮೋದಿ ಸರ್ಕಾರದ ಯೋಜನೆಗಳನ್ನು ಶೋಭಾ ಕರಂದ್ಲಾಜೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ತಂದಿದ್ದಾರೆ. ಹೀಗಾಗಿ ಅವರ ಪುನರ್ ಆಯ್ಕೆಗೆ ಸಾಕಷ್ಟು ಕಾರಣಗಳಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ರಾಷ್ಟ್ರೀಯ ಹೆದ್ದಾರಿಗಳು, ಸಖಿ ಸೆಂಟರ್, ಕೌಶಲ್ಯಾಭಿವೃದ್ಧಿ ಕೇಂದ್ರ ಉಡುಪಿಯಲ್ಲಿ ಸ್ಥಾಪನೆಯಾಗಿದೆ. ಏಳು ಮೀನುಗಾರರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಸಭೆಗಳಾಗಿದೆ. ಪ್ರಕರಣ ಕಡೆಗಣಿಸುವ ಮಾತೇ ಇಲ್ಲ. ನೌಕಾಪಡೆ, ಏರ್ ಫೋರ್ಸ್ ಜೊತೆ ಚರ್ಚೆ ಮಾಡಿದ್ದೇನೆ. ಬೆಂಗಳೂರು ಏರ್ ಶೋ ಪ್ರಕರಣ ಕೂಡ ಚರ್ಚೆಯಾಗಿದೆ. ನಾವು ನಮ್ಮ ಕರ್ತವ್ಯದಲ್ಲಿ ಲೋಪ ಎಸಗಿಲ್ಲ. ಚುನಾವಣಾ ಸಂದರ್ಭದಲ್ಲಿ ನಾನು ನೀತಿಸಂಹಿತೆ ಉಲ್ಲಂಘಿಸಲ್ಲ, ಏನೇನು ಮಾಡಿದ್ದೇವೆ ಎಲ್ಲವೂ ಹೇಳಲ್ಲ ಎಂದು ಹೇಳಿದರು.

    ಈ ಪತ್ರಿಕಾಗೋಷ್ಠಿಯಲ್ಲಿ ಶೋಭಾ ಕರಂದ್ಲಾಜೆ, ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ರಘುಪತಿ ಭಟ್, ಕುಮಾರಸ್ವಾಮಿ, ಲಾಲಾಜಿ ಮೆಂಡನ್ ಮತ್ತಿತರರು ಉಪಸ್ಥಿತರಿದ್ದರು.

  • ಮೀನುಗಾರರ ನಾಪತ್ತೆಗೆ ನೌಕಾಸೇನೆಯೇ ಕಾರಣ – ಪ್ರಮೋದ್ ಮಧ್ವರಾಜ್ ಗಂಭೀರ ಆರೋಪ

    ಮೀನುಗಾರರ ನಾಪತ್ತೆಗೆ ನೌಕಾಸೇನೆಯೇ ಕಾರಣ – ಪ್ರಮೋದ್ ಮಧ್ವರಾಜ್ ಗಂಭೀರ ಆರೋಪ

    – ಕೇಂದ್ರ ರಕ್ಷಣಾ ಇಲಾಖೆ ಬಗ್ಗೆ ಪ್ರಮೋದ್ ಸಂಶಯ

    ಉಡುಪಿ: ನೌಕಾ ಸೇನೆ ಹಿಟ್ ಆಂಡ್ ರನ್ ಮಾಡಿದೆ. ಮೀನುಗಾರರ ನಾಪತ್ತೆಗೆ ನೌಕಾಸೇನೆಯೇ ಕಾರಣ ಎಂದು ಉಡುಪಿ- ಚಿಕ್ಕಮಗಳೂರು ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಗಂಭೀರ ಆರೋಪ ಮಾಡಿದ್ದಾರೆ.

    ನಗರದಲ್ಲಿ ಏಳು ಮಂದಿ ಮೀನುಗಾರರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಮೀನುಗಾರರ ನಾಪತ್ತೆಗೆ ನೌಕಾಸೇನೆಯೇ ಕಾರಣವಾಗಿದೆ. ಇದಕ್ಕೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಉತ್ತರಿಸಬೇಕು. ಶೋಭಾ ನಾಮಪತ್ರ ಸಲ್ಲಿಸುವಾಗ ನಿರ್ಮಲಾ ಸೀತಾರಾಮನ್ ಬರುತ್ತಾರಂತೆ. ಅಂದು ಮೀನುಗಾರರು ಕಾಣೆಯಾದ ಪ್ರಕರಣ ಏನಾಯ್ತು ಎಂದು ರಕ್ಷಣಾ ಸಚಿವರೇ ಉತ್ತರಿಸಬೇಕು ಅಂದ್ರು.

    ನೊಂದ ಮನೆಯವರ ನೋವಿಗೆ ಯಾರು ಉತ್ತರಿಸುತ್ತಾರೆ. ಮೀನುಗಾರರು ಬದುಕಿದ್ದಾರೆಯೋ ಇಲ್ಲವೇ ಗೊತ್ತಿಲ್ಲ. ನಾಪತ್ತೆ ಹಿಂದೆ ನೌಕಾಸೇನೆಯವರ ಕೈವಾಡ ಇದೆ ಅನ್ನೋ ಸಂಶಯ ಇದೆ. ನೌಕಾಸೇನೆಯ ಶಿಪ್ ಬೋಟ್ ಗೆ ಅಪಘಾತ ಮಾಡಿದ ಸಂಶಯ ಇದೆ. ನೌಕಾಸೇನೆ ಸಮುದ್ರದಲ್ಲಿ ಹುಡುಕುವ ನಾಟಕ ಮಾಡಿದೆ. ಚುನಾವಣೆಯವರೆಗೆ ಈ ಸತ್ಯ ಮರೆಮಾಚುವ ಪ್ರಯತ್ನ ಇದು ಎಂದು ಆರೋಪಗಳ ಸುರಿಮಳೆಗೈದ್ರು.

    ಮೀನುಗಾರ ಸಮುದಾಯಕ್ಕೆ ಕೇಂದ್ರ ಸರ್ಕಾರ ಏನೂ ಮಾಡಿಲ್ಲ. ಮೀನುಗಾರರ ನಾಪತ್ತೆಗೆ ಕೇಂದ್ರ ಸರ್ಕಾರ ಮತ್ತು ನಿರ್ಮಲಾ ಸೀತಾರಾನ್ ವೈಫಲ್ಯವೇ ಇದಕ್ಕೆ ನೇರ ಕಾರಣವಾಗಿದ್ದು, ರಕ್ಷಣಾ ಸಚಿವರೇ ಉತ್ತರಿಸಿ ಎಂದು ಪ್ರಮೋದ್ ಇದೇ ವೇಳೆ ಆಗ್ರಹಿಸಿದ್ದಾರೆ.

  • ಸೇನೆಯ ರಕ್ಷಣಾ ನಿಧಿಗೆ  1 ಕೋಟಿ ರೂ. ದೇಣಿಗೆ ನೀಡಿದ ಮೈಸೂರಿನ ವೈದ್ಯ

    ಸೇನೆಯ ರಕ್ಷಣಾ ನಿಧಿಗೆ 1 ಕೋಟಿ ರೂ. ದೇಣಿಗೆ ನೀಡಿದ ಮೈಸೂರಿನ ವೈದ್ಯ

    ಮೈಸೂರು: ಭಾರತೀಯ ಸೇನೆಯ ರಕ್ಷಣಾ ನಿಧಿಗೆ ಮೈಸೂರಿನ ವೈದ್ಯರೊಬ್ಬರು ಬರೋಬ್ಬರಿ 1 ಕೋಟಿ ರೂ. ಹಣವನ್ನು ದೇಣಿಗೆ ನೀಡುವ ಮೂಲಕ ಯೋಧರ ಕುಟುಂಬಕ್ಕೆ ಸಹಾಯ ಮಾಡಿದ್ದಾರೆ.

    ಜಿಲ್ಲೆಯ ಗೋಕುಲಂ ಬಡಾವಣೆಯಲ್ಲಿರುವ ಆದಿತ್ಯಾ ಅಧಿಕಾರಿ ಆಸ್ಪತ್ರೆ ಮುಖ್ಯಸ್ಥ ಡಾ. ಚಂದ್ರಶೇಖರ್ ಅವರು ಯೋಧರಿಗಾಗಿ ಸಹಾಯಧನವನ್ನು ನೀಡಿದ್ದಾರೆ. ಚಂದ್ರಶೇಖರ್ ಅವರು ಬರೋಬ್ಬರಿ 1 ಕೋಟಿ ರೂ. ಹಣವನ್ನು ದೇಣಿಗೆ ರೂಪದಲ್ಲಿ ಭಾರತೀಯ ಸೇನೆಯ ರಕ್ಷಣಾ ನಿಧಿಗೆ ನೀಡಿದ್ದಾರೆ.

    ಬುಧವಾರ ಖಾಸಗಿ ಹೋಟೆಲ್‍ನಲ್ಲಿ ನಡೆದ ಪ್ರಬುದ್ಧರಗೋಷ್ಠಿ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್‍ರವರಿಗೆ ದೇಣಿಗೆ ಹಣದ ಚೆಕ್ ಅನ್ನು ಡಾ.ಚಂದ್ರಶೇಖರ್ ಅವರು ಹಸ್ತಾಂತರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv