Tag: nirbhaya

  • ತಕ್ಷಣಕ್ಕೆ ನಿರ್ಭಯಾ ರೇಪಿಸ್ಟ್‌ಗಳಿಗೆ ಗಲ್ಲು ಶಿಕ್ಷೆ ಆಗಲ್ಲ – ಹೊಸ ಪೀಠ ರಚನೆ

    ತಕ್ಷಣಕ್ಕೆ ನಿರ್ಭಯಾ ರೇಪಿಸ್ಟ್‌ಗಳಿಗೆ ಗಲ್ಲು ಶಿಕ್ಷೆ ಆಗಲ್ಲ – ಹೊಸ ಪೀಠ ರಚನೆ

    ನವದೆಹಲಿ: 8 ವರ್ಷದ ಹಿಂದೆ ದೇಶಾದ್ಯಂತ ಕಿಚ್ಚು ಹೊತ್ತಿಸಿದ್ದ ನಿರ್ಭಯ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಗಳಿಗೆ ತಕ್ಷಣಕ್ಕೆ ಗಲ್ಲು ಶಿಕ್ಷೆ ಆಗೋ ಸಾಧ್ಯತೆ ತೀರಾ ಕಡಿಮೆ. ನಿರ್ಭಯ ತೀರ್ಪು ಪ್ರಶ್ನಿಸಿ ದೋಷಿ ಅಕ್ಷಯ್ ಠಾಕೂರ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆಯಾಗಿದೆ.

    ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್‍ಎ ಬೊಬ್ಡೆ, ವಿಚಾರಣೆಯ ಪೀಠದಿಂದ ದಿಢೀರ್ ಹಿಂದೆ ಸರಿದಿದ್ದೇ ಇದಕ್ಕೆ ಕಾರಣ. ವೈಯಕ್ತಿಕ ಕಾರಣಗಳಿಂದಾಗಿ ಈ ಅರ್ಜಿಯ ವಿಚಾರಣೆಯಿಂದ ತಾವು ಹಿಂದೆ ಸರಿಯುತ್ತಿದ್ದು, ಬುಧವಾರ ಬೆಳಗ್ಗೆ 10.30ಕ್ಕೆ ಹೊಸ ಪೀಠ ವಿಚಾರಣೆ ನಡೆಸಲಿದೆ ಎಂದು ಬೊಬ್ಡೆ ತಿಳಿಸಿದರು.

    ಈ ಹಿಂದೆ ಜಸ್ಟೀಸ್ ಬೊಬ್ಡೆ ಅವರ ಅಣ್ಣನ ಮಗ ಅರ್ಜುನ್ ಬೊಬ್ಡೆ ನಿರ್ಭಯ ತಾಯಿ ಪರವಾಗಿ ವಾದ ಮಂಡನೆ ಮಾಡಿದರು. ಹೀಗಾಗಿ ವಿಚಾರಣೆ ಪಾರದರ್ಶಕವಾಗಿ ನಡೆಯಲಿ ಎನ್ನುವ ಉದ್ದೇಶದಿಂದ ಸಿಜೆ ಬೊಬ್ಡೆ ಈ ನಿರ್ಧಾರಕ್ಕೆ ಬಂದಿದ್ದಾರೆ. ವಿಚಾರಣೆ ಹಿನ್ನೆಲೆಯಲ್ಲಿ ಕೋರ್ಟ್‍ಗೆ ಬಂದಿದ್ದ ನಿರ್ಭಯ ತಾಯಿ ನಿರಾಸೆಯಿಂದ ಹಿಂತಿರುಗಿದ್ರು. ಮಂಗಳವಾರ ನ್ಯಾಯಮೂರ್ತಿಗಳಾದ ಆರ್ ಭಾನುಮತಿ, ಅಶೋಕ್ ಭೂಷಣ್ ಮತ್ತು ಎಎಸ್ ಬೋಪಣ್ಣ ಅವರ ಪೀಠದಲ್ಲಿ ವಿಚಾರಣೆ ನಡೆಯಲಿದೆ.

  • ನಿರ್ಭಯಾ ಅತ್ಯಾಚಾರ ಪ್ರಕರಣ – ಇಂದು ಸುಪ್ರೀಂಕೋರ್ಟ್‌ನಿಂದ ಮಹತ್ವದ ಆದೇಶ

    ನಿರ್ಭಯಾ ಅತ್ಯಾಚಾರ ಪ್ರಕರಣ – ಇಂದು ಸುಪ್ರೀಂಕೋರ್ಟ್‌ನಿಂದ ಮಹತ್ವದ ಆದೇಶ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯನ್ನು ಬೆಚ್ಚಿ ಬಿಳಿಸಿದ್ದ ನಿರ್ಭಯಾ ಅತ್ಯಾಚಾರ ಪ್ರಕರಣ ಸಂಬಂಧ ಇಂದು ಸುಪ್ರೀಂಕೋರ್ಟ್ ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದೆ.

    ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿ ಅಕ್ಷಯ್ ಠಾಕೂರ್ ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸಲಿದೆ. ಮುಖ್ಯ ನ್ಯಾ.ಎಸ್.ಎ ಬೊಬ್ಡೆ ನೇತೃತ್ವದ ತ್ರಿಸದಸ್ಯ ಪೀಠ ಮಧ್ಯಾಹ್ನ ಎರಡು ಗಂಟೆಗೆ ವಿಚಾರಣೆ ನಡೆಸಲಿದ್ದು, ತೀರ್ಪು ಪರಿಶೀಲಿಸುವ ಬಗ್ಗೆ ತಿರ್ಮಾನ ತೆಗೆದುಕೊಳ್ಳಲಿದೆ.

    ದಿಶಾ ಅತ್ಯಾಚಾರಿಗಳು ಎನ್‍ಕೌಂಟರ್ ಆದ ಬಳಿಕ ನಿರ್ಭಯಾ ಅತ್ಯಾಚಾರಿಗಳಿಗೆ ಶೀಘ್ರ ಗಲ್ಲು ಶಿಕ್ಷೆ ವಿಧಿಸಬೇಕು ಎನ್ನುವ ಒತ್ತಡಗಳು ಕೇಳಿ ಬಂದಿತ್ತು. ಇದರ ಬೆನ್ನೆಲೆ ತಿಹಾರ್ ಜೈಲಿನ ಸಿಬ್ಬಂದಿ ಕೂಡ ಗಲ್ಲು ಶಿಕ್ಷೆಗೆ ತಯಾರಿ ಮಾಡಿಕೊಳ್ಳುತ್ತಿದ್ದರು. ಈ ತಯಾರಿ ಬೆನ್ನೆಲೆ ಅಪರಾಧಿ ಅಕ್ಷಯ್ ಠಾಕೂರ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದ.

    ವೇದ, ಪುರಾಣ, ಉಪನಿಷತ್‍ಗಳಲ್ಲಿ ಉಲ್ಲೇಖಿಸಿರುವಂತೆ ಮನುಷ್ಯನ ಆಯಸ್ಸು ಸತ್ಯಯುಗ ಮತ್ತು ತೇತ್ರಾಯುಗದಲ್ಲಿ ಜನರು ಸಾವಿರ ವರ್ಷ, ದ್ವಾಪರ ಯುಗದಲ್ಲಿ ನೂರು ಹಾಗೂ ಕಲಿಯುಗದಲ್ಲಿ 50-60 ವರ್ಷ ಬದುಕುತ್ತಿದ್ದರು. ಆದರೆ ದೆಹಲಿಯಲ್ಲಿರುವ ನಾವು ಮಾಲಿನ್ಯ, ಕಲುಷಿತ ನೀರು, ಗ್ಯಾಸ್ ಚೇಂಬರ್ ನಂತಹ ಗಾಳಿ ಸೇವನೆಯಿಂದ ಆಯಸ್ಸು ಕ್ಷೀಣಿಸುತ್ತಿದೆ. ಹೀಗಾಗಿ ನಮ್ಮಗೆ ಏಕೆ ಗಲ್ಲು ಶಿಕ್ಷೆ ಎಂದು ಠಾಕೂರ್ ಪ್ರಶ್ನಿಸಿದ್ದನು. ಅಲ್ಲದೇ ಬಡವ ಅಥವಾ ಅಸಹಾಯಕನನ್ನು ಶಿಕ್ಷಿಸುವ ಮುನ್ನ ಯೋಚಿಸಿ ಎಂದು ಗಾಂಧಿ ಅಂಬೇಡ್ಕರ್ ಹೇಳಿದ್ದಾರೆ. ಹೀಗಾಗಿ ಹಿಂದೆ ನೀಡಿದ್ದ ತೀರ್ಪು ಪರಿಶೀಲಿಸಬೇಕು ಎಂದು ಸುಪ್ರೀಂಕೋರ್ಟ್ ಗೆ ಮನವಿ ಮಾಡಿದ್ದಾನೆ.

    ಈ ಹಿಂದೆ ಸುಪ್ರೀಂಕೋರ್ಟ್ ಎತ್ತಿ ಹಿಡಿದಿದ್ದ ಗಲ್ಲು ಶಿಕ್ಷೆ ಆದೇಶವನ್ನು ಪುನರ್ ಪರಿಶೀಲನೆ ಮಾಡುವಂತೆ ಹಿಂದೆ ಪ್ರಕರಣ ಬಾಕಿ ಮೂವರು ಅಪರಾಧಿಗಳಾದ ಮುಖೇಶ್, ಪವನ್ ಕುಮಾರ್ ಗುಪ್ತಾ ಮತ್ತು ವಿನಯ್ ಶರ್ಮಾ ಸಲ್ಲಿಸಿದ್ದ ಪುನರ್ ಪರಿಶೀಲನೆ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿತ್ತು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಈಗಾಗಲೇ ಕ್ಷಮದಾನ ಅರ್ಜಿ ತಿರಸ್ಕರಿಸಿದ ಹಿನ್ನೆಲೆ ಅಕ್ಷಯ್ ಠಾಕೂರ್ ಸಲ್ಲಿಸಿರುವ ಕಡೆಯ ಅರ್ಜಿ ಈಗ ಮಹತ್ವ ಪಡೆದುಕೊಂಡಿದೆ.

    ಅಕ್ಷಯ್ ಠಾಕೂರ್ ಸುಪ್ರೀಂಕೋರ್ಟ್ ಅರ್ಜಿ ಸಲ್ಲಿಸುತ್ತಿದ್ದಂತೆ ಇತ್ತ ಸಂತ್ರಸ್ಥೆಯ ತಾಯಿ ಆಶಾದೇವಿ ಸುಪ್ರೀಂಕೋರ್ಟ್‌ನ ಮೆನ್ಶನ್ ಮಾಡಿದ್ರೆ, ಪಟಿಯಾಲ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಶೀಘ್ರದಲ್ಲಿ ಗಲ್ಲು ಶಿಕ್ಷೆಗೆ ಒಳಪಡಿಸಿ ಎಂದು ಅವರು ಮನವಿ ಮಾಡಿದ್ದಾರೆ. ಆದರೆ ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ಬಾಕಿ ಇದ್ದ ಹಿನ್ನೆಲೆ ಡಿಸೆಂಬರ್ 18ಕ್ಕೆ ವಿಚಾರಣೆ ನಡೆಸುವುದಾಗಿ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಸತೀಶ್ ಕುಮಾರ್ ಅರೋರಾ ಹೇಳಿದ್ದಾರೆ. ಅಲ್ಲದೇ ಅರ್ಜಿದಾರರ ಕಾನೂನು ಹೋರಾಟದ ಅವಕಾಶಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.

    ಹೀಗಾಗಿ ಇಂದು ಸವೋಚ್ಛ ನ್ಯಾಯಾಲಯ ತೆಗೆದುಕೊಳ್ಳುವ ನಿರ್ಧಾರ ಮೇಲೆ ಎಲ್ಲವೂ ಅವಲಂಬಿತವಾಗಿದ್ದು ಅಕ್ಷಯ್ ಠಾಕೂರ್ ಅರ್ಜಿಯನ್ನು ಪರಿಗಣಿಸುತ್ತಾ ಅಥವಾ ತಿರಸ್ಕರಿಸುತ್ತಾ ಎನ್ನುವುದು ಮಧ್ಯಾಹ್ನ ಗೊತ್ತಾಗಲಿದೆ.

  • ಅತ್ಯಾಚಾರಿಗಳಿಗೆ ಕ್ಷಮೆ ಇಲ್ಲ, ಕ್ಷಮಾದಾನದ ಅರ್ಜಿ ಸ್ವೀಕರಿಸಲ್ಲ -ರಾಷ್ಟ್ರಪತಿ ಕೋವಿಂದ್

    ಅತ್ಯಾಚಾರಿಗಳಿಗೆ ಕ್ಷಮೆ ಇಲ್ಲ, ಕ್ಷಮಾದಾನದ ಅರ್ಜಿ ಸ್ವೀಕರಿಸಲ್ಲ -ರಾಷ್ಟ್ರಪತಿ ಕೋವಿಂದ್

    – ನಿರ್ಭಯಾ ಅತ್ಯಾಚಾರಿಗಳಿಗೆ ನೇಣು ಫಿಕ್ಸ್?

    ಗಾಂಧಿನಗರ: ಹೈದರಾಬಾದ್ ದಿಶಾ ಪ್ರಕರಣದ ಆರೋಪಿಗಳನ್ನು ಪೊಲೀಸರು ಎನ್‍ಕೌಂಟರ್ ಮಾಡಿದ ಬೆನ್ನಲ್ಲೇ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ಮಕ್ಕಳನ್ನು ಅತ್ಯಾಚಾರ ಮಾಡಿದ ಆರೋಪಿಗಳ ಕ್ಷಮಾದಾನ ಮನವಿಯನ್ನು ಸ್ವೀಕಾರ ಮಾಡುವುದಿಲ್ಲ ಎಂದು ಹೇಳಿದ್ದಾರೆ.

    ರಾಜಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, ಮಕ್ಕಳನ್ನು ಅತ್ಯಾಚಾರ ಮಾಡಿ ಪೊಕ್ಸೊ ಕಾಯ್ದೆ ಅಡಿಯಲ್ಲಿ ಬಂಧನವಾಗಿರುವ ಆರೋಪಿಗಳ ಕ್ಷಮಾದಾನದ ಪತ್ರವನ್ನು ನಾವು ಸ್ವೀಕಾರ ಮಾಡುವುದಿಲ್ಲ ಎಂದು ಹೇಳಿದ್ದಾರೆ.

    ನಮ್ಮ ದೇಶದಲ್ಲಿ ಮಹಿಳೆಯ ಸುರಕ್ಷತೆ ಗಂಭೀರವಾದ ಸಮಸ್ಯೆಯಾಗಿದೆ. ಮಕ್ಕಳನ್ನು ಆತ್ಯಾಚಾರ ಮಾಡಿ ಪೊಕ್ಸೊ ಕಾಯ್ದೆ ಅಡಿಯಲ್ಲಿರುವ ಆರೋಪಿಗಳಿಗೆ ಕ್ಷಮಾದಾನದ ಅರ್ಜಿ ಸಲ್ಲಿಸುವ ಹಕ್ಕನ್ನು ನೀಡಬಾರದು. ಸಂಸತ್ತು ಆ ಅರ್ಜಿಯನ್ನು ಪರಿಶೀಲನೆ ಮಾಡಬೇಕು ಎಂದು ರಾಮನಾಥ್ ಕೋವಿಂದ್ ಅವರು ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ. ಇದನ್ನು ಓದಿ: 2008 ವಾರಂಗಲ್ ಎನ್‌ಕೌಂಟರ್‌ನಂತೆ ದಿಶಾ ‘ಹತ್ಯಾಚಾರಿ’ಗಳ ಹುಟ್ಟಡಗಿಸಿದ ವಿ.ಸಿ ಸಜ್ಜನರ್

    ಕ್ಷಮಾದಾನ ಪತ್ರ ಎಂದರೇನು?
    ಶಿಕ್ಷೆಗೊಳಗಾದ ಅತ್ಯಾಚಾರಿಗಳಿಗೆ ಸುಪ್ರೀಂ ಕೋರ್ಟ್ ಗಲ್ಲು ಶಿಕ್ಷಿ ವಿಧಿಸಿದರೆ ಆರೋಪಿಗಳು ಕ್ಷಮಾದಾನ ಕೋರಿ ರಾಷ್ಟ್ರಪತಿಗಳಿಗೆ ಅರ್ಜಿ ಬರೆಯುವ ಅವಕಾಶವಿದೆ. ಈ ಅರ್ಜಿ ಪರಿಶೀಲನೆ ನಡೆಸಿದ ಬಳಿಕ ರಾಷ್ಟ್ರಪತಿಗಳು ನೀಡುವ ತೀರ್ಪು ಅಂತಿಮವಾಗುತಿತ್ತು. ಆದರೆ ಈಗ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇದಕ್ಕೆ ಅಂತ್ಯವಾಡಿದ್ದು, ಮಕ್ಕಳನ್ನು ಆತ್ಯಾಚಾರ ಮಾಡಿದ ಆರೋಪಿಗಳ ಕ್ಷಮಾದಾನದ ಅರ್ಜಿ ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಪೊಕ್ಸೊ ಕಾಯ್ದೆ ಅಡಿಯಲ್ಲಿ ಬರುವ ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ನೀಡುವ ತೀರ್ಪು ಅಂತಿಮವಾಗಲಿದೆ.

    ನಿರ್ಭಯಾ ಅತ್ಯಾಚಾರಿಗಳಿಗೆ ನೇಣು ಫಿಕ್ಸ್?
    2012 ಡಿಸೆಂಬರ್ 16 ರಂದು ದೆಹಲಿಯಲ್ಲಿ ನಡೆದ ನಿರ್ಭಯಾ ಅತ್ಯಾಚಾರದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದೆ. ಈ ನಡುವೆ ರಾಜ್ಯಪಾಲರಿಗೆ ಆರೋಪಿಗಳು ಕ್ಷಮಾದಾನದ ಅರ್ಜಿ ಸಲ್ಲಿಸಿದ್ದು, ಅದನ್ನು ರಾಜ್ಯಪಾಲರು ತಿರಸ್ಕಾರ ಮಾಡಿದ್ದಾರೆ. ಹೀಗಿರುವಾಗ ಪ್ರಕರಣದ ದೋಷಿಗಳು ಕ್ಷಮಾದಾನ ನೀಡುವಂತೆ ಕೋರಿ ಕೇಂದ್ರ ಗೃಹ ಸಚಿವಾಲಯಕ್ಕೆ ಕ್ಷಮಾದಾನದ ಅರ್ಜಿ ಸಲ್ಲಿಸಿದ್ದರು. ಆದರೆ ಇಂದು ಗೃಹ ಸಚಿವಾಲಯವೂ ಈ ಅರ್ಜಿಯನ್ನು ತಿರಸ್ಕರಿಸಿದೆ. ನಿರ್ಭಯ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಆಗುತ್ತಾ ಇಲ್ಲವೋ ಎನ್ನುವುದು ಕೆಲ ದಿನಗಳಲ್ಲಿ ರಾಷ್ಟ್ರಪತಿಗಳು ಇತ್ಯರ್ಥಪಡಿಸಲಿದ್ದಾರೆ. ಇದನ್ನು ಓದಿ: ಕಳೆದ 7 ವರ್ಷಗಳಿಂದ ಪ್ರತಿದಿನವೂ ಸಾಯುತ್ತಿದ್ದೇವೆ: ನಿರ್ಭಯಾ ತಾಯಿ

  • ಕಳೆದ 7 ವರ್ಷಗಳಿಂದ ಪ್ರತಿದಿನವೂ ಸಾಯುತ್ತಿದ್ದೇವೆ: ನಿರ್ಭಯಾ ತಾಯಿ

    ಕಳೆದ 7 ವರ್ಷಗಳಿಂದ ಪ್ರತಿದಿನವೂ ಸಾಯುತ್ತಿದ್ದೇವೆ: ನಿರ್ಭಯಾ ತಾಯಿ

    ನವದೆಹಲಿ: ಪಶುವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ಎನ್‍ಕೌಂಟರ್ ಕುರಿತು ಪ್ರತಿಕ್ರಿಯೆ ನೀಡಿರುವ ನಿರ್ಭಯಾರ ತಾಯಿ ಆಶಾ ದೇವಿ ಸಂತಸ ವ್ಯಕ್ತಪಡಿಸಿದ್ದು, ಪೊಲೀಸರ ಕಾರ್ಯಕ್ಕೆ ಧನ್ಯವಾದ ತಿಳಿಸಿದ್ದಾರೆ.

    ಆರೋಪಿಗಳ ಎನ್‍ಕೌಂಟರ್ ಕುರಿತಂತೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಆಶಾ ದೇವಿ ಅವರು, ಆರೋಪಿಗಳಿಗೆ ನೀಡಿರುವ ಶಿಕ್ಷೆ ನನಗೆ ಸಂತಸ ತಂದಿದೆ. ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಬೇಕಿದೆ. ಪ್ರಕರಣದಲ್ಲಿ ಪೊಲೀಸರ ವಿರುದ್ಧ ಯಾವುದೇ ಕ್ರಮಕೈಗೊಳ್ಳದಂತೆ ಬೇಡಿಕೆ ಇಡುತ್ತೇನೆ ಎಂದರು.

    ಕಳೆದ 7 ವರ್ಷಗಳಿಂದ ನಾನು ನ್ಯಾಯಕ್ಕಾಗಿ ಹೋರಾಟ ನಡೆಸಿದ್ದು, ಪ್ರತಿದಿನವೂ ಸಾಯುತ್ತಿದ್ದೇವೆ. ನಾನು ಸರ್ಕಾರ ಹಾಗೂ ನ್ಯಾಯಾಲಯಕ್ಕೆ ಮನವಿ ಮಾಡುತ್ತಿದ್ದು, ಶೀಘ್ರವೇ ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜಾರಿಯಾಗಬೇಕು ಎಂದು ಆಗ್ರಹಿಸಿದ್ದಾರೆ.

    2012ರ ಡಿಸೆಂಬರ್ ನಲ್ಲಿ ನಡೆದ ಈ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಅತ್ಯಾಚಾರಿಗಳ ವಿರುದ್ಧ ಸಾರ್ವಜನಿಕರು ಹೋರಾಟ, ಪ್ರತಿಭಟನೆಗಳನ್ನು ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ, ಅತ್ಯಾಚಾರಿಗಳ ವಿರುದ್ಧ ಕಠಿಣ ಕಾನೂನು ಜಾರಿಗೆ ತನ್ನಿ ಎಂಬ ಕೂಗು ಕೇಳಿಬಂದಿತ್ತು. ಇದನ್ನು ಓದಿ: ಶೀಘ್ರದಲ್ಲೇ ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ

    ಇಂದು ಹೈದರಾಬಾದ್-ಬೆಂಗಳೂರು ಹೈವೇ 44ರಲ್ಲಿ ಪೊಲೀಸರು ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಿದ್ದಾರೆ. ಕಾಮುಕರು ಪಶುವೈದ್ಯೆಯನ್ನು ಬೆಂಕಿ ಹಚ್ಚಿ ಸುಟ್ಟ ಸ್ಥಳದಲ್ಲೇ ಪೊಲೀಸರು ಅತ್ಯಾಚಾರಿಗಳ ಮೇಲೆ ಫೈರಿಂಗ್ ಮಾಡಿ ಹತ್ಯೆ ಮಾಡಿದ್ದಾರೆ. ಪಶುವೈದ್ಯೆಯನ್ನು ಸುಟ್ಟ ಘಟನಾ ಸ್ಥಳ ಮಹಜರು ವೇಳೆ ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಈ ವೇಳೆ ಪೊಲೀಸರು ನಾಲ್ವರು ಅತ್ಯಾಚಾರಿಗಳ ಮೇಲೆ ಎನ್‍ಕೌಂಟರ್ ಮಾಡಿದ್ದಾರೆ. ಕರ್ನಾಟಕದ ಹುಬ್ಬಳ್ಳಿ ಮೂಲದ ವಿಶ್ವನಾಥ್ ಸಜ್ಜನರ್ ನೇತೃತ್ವದಲ್ಲಿ ಈ ಎನ್‍ಕೌಂಟರ್ ನಡೆದಿದೆ. ಇದನ್ನು ಓದಿ: ದೇಶಕ್ಕಾಗಿ ಒಳ್ಳೆಯ ನಿರ್ಧಾರ- ವಿಶ್ವನಾಥ್ ಕೆಲಸಕ್ಕೆ ಸಹೋದರ ಶ್ಲಾಘನೆ

  • ರಾಹುಲ್ ಗಾಂಧಿ ಸಹಾಯವನ್ನು ಇದೂವರೆಗೂ ಹೇಳಿಲ್ಲ ಯಾಕೆ ಅನ್ನೋದನ್ನು ವಿವರಿಸಿದ್ರು ನಿರ್ಭಯಾ ತಂದೆ

    ರಾಹುಲ್ ಗಾಂಧಿ ಸಹಾಯವನ್ನು ಇದೂವರೆಗೂ ಹೇಳಿಲ್ಲ ಯಾಕೆ ಅನ್ನೋದನ್ನು ವಿವರಿಸಿದ್ರು ನಿರ್ಭಯಾ ತಂದೆ

    ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಅವರ ಸಹಾಯ ಕುರಿತು ಗ್ಯಾಂಗ್ ರೇಪ್ ಗೆ ಒಳಗಾಗಿ ಮೃತಪಟ್ಟ ನಿರ್ಭಯಾ ತಂದೆ ಬಿಚ್ಚಿಟ್ಟಿದ್ದಾರೆ.

    ನನ್ನ ಮಗಳು ಅತ್ಯಾಚಾರಕ್ಕೊಳಗಾಗಿ ಮೃತಪಟ್ಟ ಬಳಿಕ ರಾಹುಲ್ ಕುಟುಂಬವು ಸಹಾಯ ಹಾಗೂ ಬೆಂಬಲ ನೀಡಿತ್ತು. ಆದರೆ ನಾವು ಸಹಾಯ ಮಾಡಿರುವ ವಿಚಾರವನ್ನು ಯಾವುದೇ ಕಾರಣಕ್ಕೂ ಬಹಿರಂಗ ಮಾಡಬಾರದು ಎಂದು ಅವರು ನಮಗೆ ಕಟ್ಟುನಿಟ್ಟಾಗಿ ತಿಳಿಸಿದ್ದರು ಎಂದು ಬದ್ರಿನಾಥ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ನನ್ನ ಮಗಳು ಅತ್ಯಚಾರಕ್ಕೊಳಗಾಗಿದ್ದಾಗ ನಮ್ಮ ಕುಟುಬವು ಆಘಾತಕ್ಕೊಳಗಾಗಿತ್ತು. ನನ್ನ ಮಗ ಆಗ 12 ನೇ ತರಗತಿ ಓದುತ್ತಿದ್ದನು. ಆಗ ರಾಹುಲ್ ಗಾಂಧಿಯವರು ನನ್ನ ಮಗನ ಜೊತೆ ಫೋನಿನಲ್ಲಿ ಮಾತನಾಡಿ ನನ್ನ ಮಗನನ್ನು ಪ್ರೇರೆಪಿಸಿದ್ದರು. ಅವರು ನನ್ನ ಮಗನಿಗೆ ಏನಾದರೂ ಸಾಧಿಸ ಬೇಕು ಎಂದು ತಿಳಿಸಿದಾಗ, ನನ್ನ ಮಗ ಸೇನೆಗೆ ಸೇರುವ ವಿಚಾರವನ್ನು ತಿಳಿಸಿದ್ದ. ಈ ವೇಳೆ ಅವರು ಶಾಲೆ ಮುಗಿದ ಬಳಿಕ ಪೈಲೆಟ್ ತರಬೇತಿ ಪಡೆಯಲು ಹಣ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು ಎಂದು ಹೇಳಿದರು.

    ಡಿಸೆಂಬರ್ 16ರ ರಾತ್ರಿ ನಮ್ಮ ಮಗಳು ಅತ್ಯಾಚಾರ ಘಟನೆ ಬಳಿಕ ರಾಹುಲ್ ಗಾಂಧಿಯವರು ನಮ್ಮನ್ನು ನೋಡಿಕೊಂಡರು. ನಿರ್ಭಯಾ ಘಟನೆಯು ನಮಗೆ ಶಾಶ್ವತವಾಗಿ ಮಾಸದ ಗಾಯವಾಗಿದ್ದು, ಅಂತಹ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ನಮಗೆ ದೇವರಂತೆ ಸಹಾಯ ಮಾಡಿದ್ದರು. ನನ್ನ ಮಗ ಈಗ ಪೈಲೆಟ್ ಆಗಿದ್ದಾನೆ. ಕೆಲ ದಿನಗಳ ಹಿಂದೆ ತರಬೇತಿ ಮುಗಿಸಿ ಈಗ ಇಂಡಿಗೋ ವಿಮಾನದಲ್ಲಿ ಪೈಲೆಟ್ ಆಗಿ ಆಯ್ಕೆ ಆಗಿದ್ದಾನೆ. ರಾಹುಲ್ ಗಾಂಧಿ ಆರ್ಥಿಕ ಸಹಾಯ ನೀಡದೇ ಇದ್ದಿದ್ದರೆ ನಮ್ಮ ಮಗನನ್ನು ಪೈಲೆಟ್ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದರು.

  • ನಿರ್ಭಯಾ ಪ್ರಕರಣದ ಬಾಲಾಪರಾಧಿ ಈಗ ಎಲ್ಲಿದ್ದಾನೆ, ಏನು ಮಾಡ್ತಿದ್ದಾನೆ? ಈ ಸುದ್ದಿ ಓದಿ

    ನಿರ್ಭಯಾ ಪ್ರಕರಣದ ಬಾಲಾಪರಾಧಿ ಈಗ ಎಲ್ಲಿದ್ದಾನೆ, ಏನು ಮಾಡ್ತಿದ್ದಾನೆ? ಈ ಸುದ್ದಿ ಓದಿ

    ನವದೆಹಲಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ 2012ರ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಸುಪ್ರೀಂ ಕೋರ್ಟ್ ಶುಕ್ರವಾರದಂದು ತೀರ್ಪು ಪ್ರಕಟಿಸಿದೆ. ಆದ್ರೆ ದೇಶದಾದ್ಯಂತ ಆಕ್ರೋಶ ಭುಗಿಲೇಳಲು ಕಾರಣವಾಗಿದ್ದ ಈ ಪ್ರಕರಣದಲ್ಲಿ ಮತ್ತೊಬ್ಬ ಬಾಲಾಪರಾಧಿ ಭಾಗಿಯಾಗಿದ್ದ. ಯುವತಿಯ ಕರುಳನ್ನೇ ಕಿತ್ತುಹಾಕಿದ್ದ ಎಂದು ಈತನ ಮೇಲೆ ಆರೋಪವಿತ್ತು. ಮೂರು ವರ್ಷಗಳ ಕಾಲ ಬಾಲಮಂದಿರದಲ್ಲಿ ಕಳೆದ ಈಗ ನಂತರ ಡಿಸೆಂಬರ್ 2015ರಲ್ಲಿ ಬಿಡುಗಡೆಯಾಗಿದ್ದು ಈಗ ಈತನನ್ನು ಸರ್ಕಾರೇತರ ಸಂಸ್ಥೆಯೊಂದು ನೋಡಿಕೊಳ್ಳುತ್ತಿದೆ.

    ಆಗ ಬಾಲಾಪರಾಧಿಯಾಗಿದ್ದವನಿಗೆ ಈಗ 23 ವರ್ಷ ವಯಸ್ಸು. ಸಣ್ಣ ಹೋಟೆಲ್‍ವೊಂದರಲ್ಲಿ ಆತ ಈಗ ಅಡುಗೆ ಮಾಡುವ ಕೆಲಸಕ್ಕೆ ಸೇರಿದ್ದಾನೆಂದು ಎನ್‍ಜಿಓದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೆಹಲಿಯಲ್ಲಿ ಬಾಲಾಪರಾಧಿಗಳ ವೀಕ್ಷಣಾಲಯದಲ್ಲಿದ್ದಾಗ ಈತ ಅಡುಗೆ ಮಾಡುವುದನ್ನು ಕಲಿತಿದ್ದ ಎನ್ನಲಾಗಿದೆ.

    ಇದನ್ನೂ ಓದಿ: ನಿರ್ಭಯಾ ಗ್ಯಾಂಗ್‍ರೇಪ್: ಅಪರಾಧಿಗಳಿಗೆ ಗಲ್ಲು ಕಾಯಂ

    ಆತ ಈಗ ಹೊಸ ಜೀವನ ನಡೆಸುತ್ತಿದ್ದಾನೆ. ಆತನ ಹೆಸರೂ ಕೂಡ ಈಗ ಬದಲಾಗಿದೆ ಎಂದು ಎನ್‍ಜಿಓ ಅಧಿಕಾರಿ ಹೇಳಿದ್ದಾರೆ.

    ಇಡೀ ದೇಶವನ್ನೇ ಸ್ತಬ್ಧವಾಗಿಸಿ, ಯುವಕ ಯುವತಿಯರು ರಸ್ತೆಗಿಳಿದು ಪ್ರತಿಭಟನೆ ಮಾಡುವಂತೆ ಮಾಡಿದ್ದ ಈ ಪ್ರಕರಣದಲ್ಲಿ ಅತ್ಯಂತ ಕ್ರೂರವಾಗಿ ವರ್ತಸಿದವನು ಎಂದೇ ಆರೋಪಿಸಲಾಗಿದ್ದ ಬಾಲಾಪರಾಧಿಗೆ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಅಂದ್ರೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಯಾವುದೇ ಮಾಹಿತಿ ಇಲ್ಲವಂತೆ.

    ಆತ ಹೊಸ ಜೀವನ ಪ್ರಾರಂಭಿಸಬೇಕು ಎನ್ನುವ ಸಲುವಾಗಿ, ಜನರು ಆತನನ್ನು ಪತ್ತೆ ಹಚ್ಚಬಾರದೆಂದು ನಾವು ರಾಷ್ಟ್ರರಾಜಧಾನಿಯಿಂದ ಆತನನ್ನು ದೂರ ಕಳಿಸಬೇಕಾಯ್ತು. ಆತನೀಗ ದಕ್ಷಿಣ ಕರಾವಳಿಯಲ್ಲಿ ಎಲ್ಲೋ ಅಡುಗೆ ಕೆಲಸ ಮಾಡಿಕೊಂಡಿದ್ದಾನೆ. ಆತನಿಗೆ ಕೆಲಸ ಕೊಟ್ಟಿರುವ ಮಾಲೀಕನಿಗೂ ಅವನ ನಿಜವಾದ ಹೆಸರು ಹಾಗೂ ಪೂರ್ವಾಪರಗಳ ಬಗ್ಗೆ ಗೊತ್ತಿಲ್ಲ. ಆತನನ್ನು ಯಾರೂ ಪತ್ತೆ ಹಚ್ಚಬಾರದು ಎಂಬ ಕಾರಣಕ್ಕೆ ನಾವು ಆತನನ್ನ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕಳಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

    ಬಾಲಾಪರಾಧಿಗಳ ನ್ಯಾಯ ಮಂಡಳಿಯು ಈತನ ವಿಚಾರಣೆ ನಡೆಸುವ ಸಂದರ್ಭದಲ್ಲಿ ಹಾಜರಿದ್ದ ಎನ್‍ಜಿಓದ ಅಧಿಕಾರಿ ಮಾಧ್ಯಮಗಳನ್ನ ದೂರಿದ್ದಾರೆ. ಯಾವುದೇ ಆಧಾರವಿಲ್ಲದೆ ಈ ಅಪ್ರಾಪ್ತನನ್ನು ಮೃಗದಂತೆ ಚಿತ್ರಿಸಿದ್ರು ಎಂದು ಆರೋಪ ಮಾಡಿದ್ದಾರೆ.

    ಈ ಬಾಲಾಪರಾಧಿಯು ಪ್ರಕರಣದಲ್ಲಿ ಭಾಗಿಯಾಗಿದ್ದು ನಿಜ. ಆದ್ರೆ ಇಡೀ ಪ್ರಕರಣದಲ್ಲಿ ಈತನಿಂದಲೇ ಹೆಚ್ಚಿನ ಹಾನಿಯಾಗಿದ್ದು, ಈತನೇ ಕ್ರೂರವಾಗಿ ವರ್ತಿಸಿದ್ದು ಎಂಬುದಕ್ಕೆ ಯಾವುದೇ ಸಾಕ್ಷಿ ಆಧಾರಗಳಿಲ್ಲ ಎಂದು 2013ರಲ್ಲಿ ಬಾಲಾಪರಾಧಿಗಳ ನ್ಯಾಯ ಮಂಡಳಿ ಹೇಳಿತ್ತು ಎಂದು ವರದಿಯಾಗಿದೆ.

    ಬಾಲಾಪರಾಧಿಗಳ ನ್ಯಾಯ ಮಂಡಳಿ ಅಥವಾ ಕೋರ್ಟ್‍ಗಳ ಆಹ್ವಾನದ ಮೇಲೆ ಬಾಲಾಪರಾಧಿಗಳ ಕೌನ್ಸೆಲಿಂಗ್ ಮಡುವ ಹೆಚ್‍ಎಕ್ಯೂ ಸೆಂಟರ್ ಆಫ್ ಚೈಲ್ಡ್ ರೈಟ್ಸ್ ನ ಇನಾಕ್ಷಿ ಗಂಗೂಲಿ ಈ ಬಗ್ಗೆ ಹೇಳಿಕೆ ನೀಡಿದ್ದು, ಈ ಪ್ರಕರಣದ ತನಿಖಾಧಿಕಾರಿಗಳೂ ಕೂಡ ಅಪರಾಧಿಯು ಅತ್ಯಂತ ಕ್ರೂರಿ ಎಂದು ತೋರಿಸಲು ಯಾವುದೇ ಸಾಕ್ಷಿಯಿಲ್ಲ ಎಂದು ದಾಖಲಿಸಿರುವುದಾಗಿ ತಿಳಿಸಿದ್ದಾರೆ.

    2013ರಲ್ಲಿ ಜೈಲಿನ ಸೆಲ್‍ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ ಅಪರಾಧಿ ರಾಮ್ ಸಿಂಗ್ ಬಳಿ ಈ ಬಾಲಾಪರಾಧಿ ಸ್ವಲ್ಪ ಕಾಲ ಕೆಲಸ ಮಾಡಿದ್ದ. ರಾಮ್ ಸಿಂಗ್ ಆತನಿಗೆ 8 ಸಾವಿರ ರೂ. ಹಣ ಕೊಡಬೇಕಿತ್ತು. ಹಣ ಕೊಡುವಂತೆ ಬಾಲಾಪರಾಧಿ ಪದೇ ಪದೇ ಕೇಳುತ್ತಲೇ ಇದ್ದ. ಯುವತಿ ಮೇಲೆ ಗ್ಯಾಂಗ್ ರೇಪ್ ನಡೆದ ರಾತ್ರಿ ಆತ ಹಣವನ್ನು ಪಡೆಯಲು ಹೋಗಿದ್ದರಿಂದ ಈ ಕೃತ್ಯದ ಭಾಗವಾದ ಎಂದು ಎನ್‍ಜಿಓ ಅಧಿಕಾರಿ ಹೇಳಿದ್ದಾರೆ.

    ಅತ್ಯಂತ ಬಡ ಕುಟುಂಬದವನಾದ ಈತ ಸಣ್ಣವನಿರುವಾಗಲೇ ಉತ್ತರಪ್ರದೇಶದ ತನ್ನ ಗ್ರಾಮವನ್ನು ಬಿಟ್ಟು ದೆಹಲಿಗೆ ಓಡಿಬಂದಿದ್ದ ಎಂದು ವರದಿಯಾಗಿದೆ.

    ಕಾಯ್ದೆಗೆ ತಿದ್ದುಪಡಿ: ಈ ಪ್ರಕರಣದ ಬಳಿಕ ದೇಶದೆಲ್ಲೆಡೆ ಪ್ರತಿಭಟನೆಗಳು ನಡೆದು ಬಾಲಾಪರಾಧಿಯನ್ನು ಅಪರಾಧಿಯನ್ನಾಗಿಸಬೇಕೆಂಬ ಕೂಗು ಎದ್ದಿತ್ತು. ಇದಾದ ಬಳಿಕ ಕೇಂದ್ರ ಸರ್ಕಾರ ಬಾಲಾಪರಾಧ ಕಾಯ್ದೆಗೆ ತಿದ್ದುಪಡಿ ತಂದಿದ್ದು ಹದಿನಾರರಿಂದ ಹದಿನೆಂಟು ವರ್ಷದ ಮಧ್ಯೆ ಇರುವವರು ಕ್ರೂರ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಂಡರೆ ಅವರನ್ನು ವಯಸ್ಕರು ಎಂದೇ ಈಗ ಪರಿಗಣಿಸಲಾಗುತ್ತದೆ.

  • ನಿರ್ಭಯಾ ಗ್ಯಾಂಗ್‍ರೇಪ್: ಅಪರಾಧಿಗಳಿಗೆ ಗಲ್ಲು ಕಾಯಂ

    ನಿರ್ಭಯಾ ಗ್ಯಾಂಗ್‍ರೇಪ್: ಅಪರಾಧಿಗಳಿಗೆ ಗಲ್ಲು ಕಾಯಂ

    ನವದೆಹಲಿ: ದೇಶದೆಲ್ಲೆಡೆ ತೀವ್ರ ಚರ್ಚೆ ಮತ್ತು ಭಾರೀ ಪ್ರತಿಭಟನೆಗೆ ಕಾರಣವಾಗಿದ್ದ ದೆಹಲಿಯ ನಿರ್ಭಯಾ ಗ್ಯಾಂಗ್‍ರೇಪ್ ಮತ್ತು ಕೊಲೆ ಪ್ರಕರಣದ ನಾಲ್ಕು ಮಂದಿ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಕಾಯಂ ಆಗಿದೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.

    2013ರಲ್ಲಿ ದೆಹಲಿಯ ವಿಚಾರಣಾಧೀನ ನ್ಯಾಯಾಲಯ ಗಲ್ಲುಶಿಕ್ಷೆ ನೀಡಿ ಆದೇಶ ನೀಡಿತ್ತು. 2014ರಲ್ಲಿ ದೆಹಲಿ ಹೈಕೋರ್ಟ್ ಕೇಳ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿತ್ತು. ಆದರೆ ಆರೋಪಿಗಳಾದ ಅಕ್ಷಯ್ ಠಾಕೂರ್, ವಿನಯ್ ಶರ್ಮಾ, ಪವನ್ ಗುಪ್ತಾ ಹಾಗೂ ಮುಕೇಶ್ ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.

    ಇಂದು ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ಅಶೋಕ್ ಭೂಷಣ್ ಹಾಗೂ ಆರ್ ಭಾನುಮತಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಗಲ್ಲು ಕಾಯಂಗೊಳಿಸಿ ಐತಿಹಾಸಿಕ ತೀರ್ಪು ಪ್ರಕಟಿಸಿದೆ.

    ಏನಿದು ಪ್ರಕರಣ?
    2012ರ ಡಿಸೆಂಬರ್ 16ರಂದು ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ತನ್ನ ಸ್ನೇಹಿತನ ಜೊತೆ ಸಿನಿಮಾ ನೋಡಿ ಬರುತ್ತಿದ್ದಾಗ ಡ್ರಾಪ್ ನೆಪದಲ್ಲಿ ಕಾಮುಕರು ಬಸ್ ನಲ್ಲಿ ಹತ್ತಿಸಿದ್ದರು. ಬಳಿಕ ಬಸ್‍ನಲ್ಲೇ ಸಾಮೂಹಿಕ ಅತ್ಯಾಚಾರ ನಡೆಸಿ, ಗುಪ್ತಾಂಗಕ್ಕೆ ರಾಡ್‍ನಿಂದ ಚುಚ್ಚಿದ್ದರು. ತೀವ್ರ ಅಸ್ವಸ್ಥಗೊಂಡ ಯುವತಿಯನ್ನು ಬಸ್‍ನಿಂದ ಕೆಳಗೆ ಎಸೆದಿದ್ದರು. ಆಕೆಯ ಜೊತೆಗಿದ್ದ ಸ್ನೇಹಿತನನ್ನೂ ಬಸ್‍ನಿಂದ ಕೆಳಗೆ ಎಸೆದು ಆರೋಪಿಗಳು ಪರಾರಿಯಾಗಿದ್ದರು. ದೆಹಲಿಯ ಆಸ್ಪತ್ರೆಯ ಬಳಿಕ ಹೆಚ್ಚಿನ ಚಿಕಿತ್ಸೆಗೆ ನಿರ್ಭಯಾಳನ್ನು ಸಿಂಗಾಪುರಕ್ಕೆ ಕಳುಹಿಸಿಕೊಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಡಿಸೆಂಬರ್ 29 ರಂದು ನಿರ್ಭಯಾ ಸಾವನ್ನಪ್ಪಿದ್ದಳು.

    ಅತ್ಯಾಚಾರ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ರಾಮ್ ಸಿಂಗ್ 2013ರಲ್ಲಿ ತಿಹಾರ್ ಜೈಲಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರೆ, ವಿನಯ್ ಶರ್ಮಾ 2016ರ ಆಗಸ್ಟ್ ನಲ್ಲಿ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದ. ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನ ಇನ್ನೊಬ್ಬ ಮೂರು ವರ್ಷಗಳ ಕಾಲ ಬಾಲಮಂದಿರದಲ್ಲಿ ಕಳೆದ ನಂತರ ಡಿಸೆಂಬರ್ 2015ರಲ್ಲಿ ಬಿಡುಗಡೆಯಾಗಿದ್ದ.

    ಈ ಪ್ರಕರಣದ ಬಳಿಕ ಕೇಂದ್ರ ಸರ್ಕಾರ ಬಾಲಾಪರಾಧ ಕಾಯ್ದೆಗೆ ತಿದ್ದುಪಡಿ ತಂದಿದ್ದು ಹದಿನಾರರಿಂದ ಹದಿನೆಂಟು ವರ್ಷದ ಮಧ್ಯೆ ಇರುವವರು ಕ್ರೂರ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಂಡರೆ ಅವರನ್ನು ವಯಸ್ಕರು ಎಂದೇ ಪರಿಗಣಿಸಲಾಗುತ್ತದೆ.