Tag: nipah virus

  • ಸಹಾಯಕ್ಕೆ ಸಹಾಯ ತತ್ವದ ಮೂಲಕ ಮಾನವೀಯತೆ ಮೆರೆದ ಲಿನಿ ನರ್ಸ್ ಪತಿ!

    ಸಹಾಯಕ್ಕೆ ಸಹಾಯ ತತ್ವದ ಮೂಲಕ ಮಾನವೀಯತೆ ಮೆರೆದ ಲಿನಿ ನರ್ಸ್ ಪತಿ!

    ತಿರುವನಂತಪುರಂ: ಒಬ್ಬರಿಂದ ಸಹಾಯ ಪಡೆದ ಮೇಲೆ, ಮತ್ತೊಬ್ಬರಿಗೆ ಸಹಾಯ ಮಾಡಬೇಕು ಎನ್ನುವುದು ಮಾನವೀಯತೆ ತತ್ವ. ಈ ತತ್ವವನ್ನು ಕೇರಳದಲ್ಲಿ ಇತ್ತೀಚೆಗೆ ನಿಪಾ ವೈರಸ್ ಸೋಂಕು ತಗುಲಿ ಮೃತಪಟ್ಟಿದ್ದ ಪತಿ ಪಾಲಿಸಿ ಮಾನವೀಯತೆ ಮೆರೆದಿದ್ದಾರೆ.

    ಕೇರಳದ ನರ್ಸ್ ಲಿನಿ ನಿಪಾ ವೈರಸ್ ದಾಳಿಗೆ ತುತ್ತಾಗಿ ಮೃತಪಟ್ಟಿದ್ದರು. ಹೀಗಾಗಿ ಅವರ ಕುಟುಂಬಕ್ಕೆ 20 ಲಕ್ಷ ರೂ. ಹಾಗೂ ಪತಿಗೆ ಉದ್ಯೋಗ ನೀಡುವ ಭರವಸೆಯನ್ನು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೀಡಿದ್ದರು.

    ಸರ್ಕಾರ ತನ್ನ ಭರವಸೆ ಪ್ರಕಾರ ನರ್ಸ್ ಲಿನಿ ಪತಿ ಸಂಜೇಶ್‍ಗೆ ರಾಜ್ಯ ಆರೋಗ್ಯ ಇಲಾಖೆ ಕ್ಲರ್ಕ್ (ಗುಮಾಸ್ತ) ಕೆಲಸವನ್ನು ನೀಡಲಾಗಿದೆ. ಸೇವೆಗೆ ಸೇರಿದ ಸಂಜೇಶ್ ಅವರು ತಮ್ಮ ಮೊದಲ ತಿಂಗಳ ವೇತನವನ್ನು ಕೇರಳ ರಾಜ್ಯದ ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ದಾನ ಮಾಡಿದ್ದಾರೆ.

    ಯಾರು ಲಿನಿ ನರ್ಸ್?
    ಇತ್ತೀಚೆಗೆ ಭಾರೀ ಪ್ರಮಾಣದಲ್ಲಿ ಜಾಗತೀಕ ಮಟ್ಟದಲ್ಲಿ ಆತಂಕ ಹುಟ್ಟಿಸಿದ್ದ ನಿಪಾ ವೈರಸ್ ಗೆ ಕೇರಳದ ನರ್ಸ್ ಲಿನಿ ಬಲಿಯಾಗಿದ್ದರು. ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ 31 ವರ್ಷ ಲಿನಿ, ತನ್ನ ಸಾವು ಖಚಿತವಾದ ಹಿನ್ನೆಲೆಯಲ್ಲಿ ಪತಿಗೆ ಭಾವನಾತ್ಮಕ ಪತ್ರ ಬರೆದಿದ್ದರು. ಈ ವಿಚಾರ ತಿಳಿದು ಕೂಡಲೇ ಬಹರೈನ್ ನಲ್ಲಿ ಉದ್ಯೋಗದಲ್ಲಿದ್ದ ಪತಿ ಸಜೀಶ್ ಊರಿಗೆ ವಾಪಸ್ಸಾಗಿದ್ದರು. ಅಲ್ಲದೇ ಕೇವಲ 2 ನಿಮಿಷವಷ್ಟೇ ಪತ್ನಿ ಮುಖ ನೋಡಿದ್ದರು.

    ಲಿನಿ ಡೆತ್ ನೋಟ್:
    ತನ್ನ ಸಾವು ಖಚಿತವಾದ ಲಿನಿ ತನ್ನ ಪತಿ ಸಜೀಶ್ ಗೆ ಪತ್ರವೊಂದನ್ನು ಬರೆದಿದ್ದಾರೆ. ಅದರಲ್ಲಿ ಇಬ್ಬರು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ತಿಳಿಸಿದ್ದರು. ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೇ ಸಜೀಶ್ ಅವರಿಗೂ ಈ ಪತ್ರ ತಲುಪಿತ್ತು. ಲಿನಿ ಅವರು ಸರ್ಕಾರಿ ಕೆಲಸಕ್ಕಾಗಿ ಪ್ರಯತ್ನಿಸುತ್ತಿದ್ದರು. 5 ಹಾಗೂ 2 ವರ್ಷದ ಮಕ್ಕಳ ಜೊತೆಯೂ ಕಾಲ ಕಳೆಯುತ್ತಿದ್ದರು. ಸದ್ಯ ಈ ಇಬ್ಬರೂ ಮಕ್ಕಳು ಇನ್ನೂ ತಾಯಿಯ ಬರುವಿಕೆಗೆ ಕಾದು ಕುಳಿತಿದ್ದು, ಮಕ್ಕಳ ಮುಖವನ್ನು ನೋಡಿದಾಗ ಕರುಳು ಚುರುಕ್ ಅನ್ನುತ್ತದೆ.

    ಕೇರಳದಲ್ಲಿ ನಿಲ್ಲದ ಮಳೆ:
    ದೇವರನಾಡಲ್ಲಿ ಮಳೆ ಆರ್ಭಟ ಹೆಚ್ಚಾಗುತ್ತಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕ್ಯಾಂಪ್‍ಗಳನ್ನು ನಿರ್ಮಿಸಿ ಸಂತ್ರಸ್ತರಿಗೆ ಆಶ್ರಯ ಹಾಗೂ ಆಹಾರ ವ್ಯವಸ್ಥೆ ಮಾಡಲಾಗಿದೆ. ಭಾರೀ ಮಳೆಯಿಂದಾಗಿ ಒಟ್ಟು 8 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

    ಬುಧವಾರ ಕಾಂಗ್ರೆಸ್ ಹಿರಿಯ ಮುಖಂಡ ವಿ.ಎಂ.ಸುಧೇರನ್ ನಿವಾಸವು ಸಂಪೂರ್ಣ ಜಲಾವೃತವಾಗಿತ್ತು. ಅವರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಿಪಾ ವೈರಸ್ ಭೀತಿಗೆ ಬಿಬಿಎಂಪಿಯಿಂದ `ವರಹಾ’ ಆಪರೇಷನ್!

    ನಿಪಾ ವೈರಸ್ ಭೀತಿಗೆ ಬಿಬಿಎಂಪಿಯಿಂದ `ವರಹಾ’ ಆಪರೇಷನ್!

    ಬೆಂಗಳೂರು: ಕೇರಳದಲ್ಲಿ ಹತ್ತಾರು ಮಂದಿಯನ್ನ ಬಲಿ ಪಡೆದಿರುವ ನಿಪಾ ವೈರಸ್ ಭೀತಿ ಇದೀಗ ಬೆಂಗಳೂರಿನಲ್ಲೂ ಶುರುವಾಗಿದೆ. ಹಂದಿಗಳಿಂದಲೂ ವೈರಸ್ ಹರಡುತ್ತೆ ಎನ್ನುವ ಕಾರಣಕ್ಕೆ ಆಪರೇಷನ್ ವರಹಾ ಕಾರ್ಯಾಚರಣೆಗೆ ಬಿಬಿಎಂಪಿ ಚಾಲನೆ ನೀಡಿದ್ದು, ಸಿಬ್ಬಂದಿ ಹಂದಿ ಹಿಡಿಯೋದ್ರಲ್ಲಿ ಬ್ಯುಸಿಯಾಗಿದ್ದಾರೆ.

    ಬೆಂಗಳೂರು ನಗರದಿಂದ 5 ಕಿಲೋ ಮೀಟರ್ ಹೊರಗೆ ಮಾತ್ರ ಹಂದಿ ಸಾಕಾಣಿಕೆಗೆ ಅವಕಾಶವಿದೆ. ಆದರೆ, ನಗರದಲ್ಲೇ ಎಗ್ಗಿಲ್ಲದೆ ಅಕ್ರಮವಾಗಿ ಹಂದಿ ಸಾಕಾಣಿಕೆ ಮಾಡಲಾಗುತ್ತಿದೆ. ಹಂದಿ ಕಾಟಕ್ಕೆ ಬೇಸತ್ತ ನಾಗರಿಕರು ಬಿಬಿಎಂಪಿಗೆ ದೂರು ನೀಡುತ್ತಿದ್ದಾರೆ. ಹಾಗೇ ಹಂದಿಯಿಂದ ನಿಪಾ ವೈರಸ್ ಹರಡುವ ಭೀತಿಯಿಂದ ಬಿಬಿಎಂಪಿ ಹಂದಿ ಹಿಡಿಯುವ ಕಾರ್ಯಾಚರಣೆ ಕೈಗೊಂಡಿದೆ.

    ನಗರದ ಪ್ರಮುಖ ಸ್ಥಳಗಳು ಸೇರಿದಂತೆ ಈ ತನಕ 50ಕ್ಕೂ ಹೆಚ್ಚು ಹಂದಿಗಳನ್ನು ಟೆಂಡರ್ ಪಡೆದವರು ಹಿಡಿದು ಸಾಗಿಸಿದ್ದಾರೆ. ಇನ್ನು ಟೆಂಡರ್‍ದಾರರಿಗೆ ಹಣ ನೀಡುವ ಬದಲು ಹಂದಿ ಮಾರಾಟ ಮಾಡಲು ಪಾಲಿಕೆ ಅವಕಾಶ ನೀಡಿದೆ. ಇಂದು ಸಹ ಬಿಬಿಎಂಪಿ ಯಲಹಂಕ, ಬ್ಯಾಟರಾಯನಪುರ, ಮಹಾದೇವ ಪುರ ಭಾಗಗಳಲ್ಲಿ ವರಹ ಕಾರ್ಯಚಾರಣೆ ನಡೆಸಿತ್ತು.

    ಆಪರೇಷನ್ ವರಾಹ ಇನ್ನೂ 10 ರಿಂದ 15 ದಿನಗಳ ಕಾಲ ನಡೆಯಲಿದ್ದು, ಇದರಿಂದ ಜನಸಾಮಾನ್ಯರಿಗೆ ಅನುಕೂಲವಾಗುತ್ತೆ ಅಂತ ಬಿಬಿಎಂಪಿ ಹೇಳುತ್ತಿದೆ.

  • ನಿಪಾ ವೈರಸ್ ಬಾವಲಿಗಳಿಂದ ಬರಲ್ಲ -ವರದಿಯಲ್ಲಿ ಸಾಬೀತು

    ನಿಪಾ ವೈರಸ್ ಬಾವಲಿಗಳಿಂದ ಬರಲ್ಲ -ವರದಿಯಲ್ಲಿ ಸಾಬೀತು

    ಭೋಪಾಲ್: ಇಂದು ಕೇರಳದಲ್ಲಿ ಹರಡುತ್ತಿರುವ ನಿಪಾ ವೈರಸ್ ಗೆ ದೇಶದ ಜನರು ಆತಂಕಗೊಂಡಿದ್ದಾರೆ. ನಿಪಾ ವೈರಸ್ ಬಾವಲಿಗಳಿಂದ ಬರುತ್ತೆ ಅಂತಾ ಹೇಳಲಾಗುತ್ತಿತ್ತು. ಆದ್ರೆ ಮಧ್ಯ ಪ್ರದೇಶ ರಾಜ್ಯದ ಭೋಪಾಲ ನಗರದ ‘ಹೈ ಸೆಕ್ಯೂರಿಟಿ ಅನಿಮಲ್ ಡಿಸೀಸ್ ಲ್ಯಾಬೊರೆಟರಿ’ ನಿಪಾ ವೈರಸ್ ಬಾವಲಿಗಳಿಂದ ಬರಲ್ಲ ಎಂದು ಸ್ಪಷ್ಟಪಡಿಸಿದೆ.

    ಕೇರಳದಿಂದ ಒಟ್ಟು ಸ್ಯಾಂಪಲ್ ರೂಪದಲ್ಲಿ 21 ಬಾವಲಿ ಮತ್ತು ಹಂದಿಗಳನ್ನು ಭೋಪಾಲ್ ನ ಲ್ಯಾಬೊರೇಟರಿಗೆ ಕಳುಹಿಸಿಕೊಡಲಾಗಿತ್ತು. ಈ ಸ್ಯಾಂಪಲ್‍ಗಳ ವರದಿ ಶುಕ್ರವಾರ ಬಂದಿದ್ದು, ಎಲ್ಲ ಪ್ರಾಣಿಗಳಲ್ಲಿ ನಿಪಾ ವೈರಸ್ ಲಕ್ಷಣಗಳು ಕಂಡು ಬಂದಿಲ್ಲ. ಈ ಹಿಂದೆ ಕೇಂದ್ರ ಪ್ರಾಣಿ-ಪಶು ಇಲಾಖೆಯ ಕಮಿಷನರ್ ಎಸ್‍ಪಿ ಸುರೇಶ್, ನಿಪಾ ವೈರಸ್ ನಿಂದ ಸಾವನ್ನಪ್ಪಿದವರ ಕುಟುಂಬಗಳ ಸುತ್ತಲಿನ ಪ್ರಾಣಿಗಳನ್ನು ಪರೀಕ್ಷೆಗೆ ಒಳಪಡಿಸಿದ್ರು. ಆದ್ರೆ ಅಲ್ಲಿಯ ಪ್ರಾಣಿಗಳಲ್ಲಿ ನಿಪಾ ವೈರಸ್ ಲಕ್ಷಣಗಳು ಕಂಡು ಬಂದಿರಲಿಲ್ಲ ಅಂತಾ ತಿಳಿಸಿದ್ರು.

    ನಿಪಾ ವೈರಸ್ ದಾಳಿಗೆ ತುತ್ತಾಗಿರುವ ಕೇರಳದ ಪೆರಂಬರಾ ಗ್ರಾಮದಿಂದ ಕೆಲ ಪ್ರಾಣಿಗಳನ್ನು ಸ್ಯಾಂಪಲ್ ರೂಪದಲ್ಲಿ ತೆಗೆದುಕೊಂಡು ಭೋಪಾಲ್‍ನ ಲ್ಯಾಬೋರೆಟರಿಗೆ ಕಳುಹಿಸಲಾಗಿತ್ತು.

    ಭೋಪಾಲ್ ಲ್ಯಾಬೊರೇಟರಿ ವರದಿಯ ಪ್ರಕಾರ, ನಿಪಾ ವೈರಸ್ ಬಾವಲಿಗಳಿಂದ ಬಂದಿಲ್ಲ ಅಂತಾ ಹೇಳಲಾಗಿತ್ತು. ಸದ್ಯ ಈ ಗೊಂದಲ ಇನ್ನು ಮುಂದುವರೆದಿದ್ದು, ಮತ್ತಷ್ಟು ನಿಪಾ ವೈರಸ್ ಪೀಡಿತ ಗ್ರಾಮಗಳಿಂದ ಪ್ರಾಣಿಗಳ ರಕ್ತವನ್ನು ಪಡೆದು ಪರೀಕ್ಷೆ ನಡೆಸಲಾಗುವುದು ಎಂದು ಲ್ಯಾಬೊರೆಟರಿ ಮೂಲಗಳು ತಿಳಿಸಿವೆ.

  • ನಿಪಾ ವೈರಸ್ ಗೆ ಅಲರ್ಟ್- ಆರೋಗ್ಯ ಇಲಾಖೆಯಿಂದ ಎಚ್ಚರಿಕೆಯ ಸಂದೇಶ

    ನಿಪಾ ವೈರಸ್ ಗೆ ಅಲರ್ಟ್- ಆರೋಗ್ಯ ಇಲಾಖೆಯಿಂದ ಎಚ್ಚರಿಕೆಯ ಸಂದೇಶ

    ಬೆಂಗಳೂರು: ನಿಪಾ ವೈರಸ್ ವಿಚಾರವಾಗಿ ಕರ್ನಾಟಕದಲ್ಲಿ ಅಲರ್ಟ್ ಘೋಷಿಸಲಾಗಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜನರಿಗೆ ಎಚ್ಚರಿಕೆ ಸಂದೇಶ ನೀಡಿದೆ.

    ಬಾವಲಿ ಹೆಚ್ಚಿರುವ ಪ್ರದೇಶದಲ್ಲಿ ತಯಾರಿಸುವ ನೀರಾ ಅಥವಾ ಸೇಂದಿ ಕುಡಿಯದಂತೆ ಎಚ್ಚರಿಸಿದೆ. ಅಲ್ಲದೆ ಬಾವಲಿಗಳಿರುವ ಬಾವಿ ನೀರನ್ನು ಉಪಯೋಗಿಸದಂತೆ ಸೂಚಿಸಿದ್ದು, ಹಣ್ಣು ಮತ್ತು ಒಣ ಖರ್ಜೂರ ತಿನ್ನುವಾಗ ಸಂಪೂರ್ಣ ಶುದ್ಧೀಕರಿಸಿ ತಿನ್ನುವಂತೆ ಟಿಪ್ಸ್ ನೀಡಿದೆ.

    ಅನಾರೋಗ್ಯದಿಂದರುವ ಹಂದಿ, ಇತರ ಪ್ರಾಣಿಗಳ ಜೊತೆ ಹೆಚ್ಚು ಕಾಲ ಇರದಂತೆ ಸೂಚಿಸಿದೆ. ಅಲ್ಲದೆ ಜನರಿಗಾಗಿ ಸಹಾಯ ವಾಣಿ ತೆರೆದಿದೆ. 104ಗೆ ಕರೆ ಮಾಡಿ ನಿಪಾ ವೈರಸ್ ಕುರಿತು ಮಾಹಿತಿ ಪಡೆಯಬಹುದಾಗಿದೆ.

    ನಿಪಾ ವೈರಸ್ ಎಂದರೇನು?
    1998ರಲ್ಲಿ ಮಲೇಷ್ಯಾದ ಕಾಂಪುಂಗ್ ಸುಂಗಾತ್ ನಿಪಾ ವಲಯದಲ್ಲಿ ಕಾಣಿಸಿಕೊಂಡ ಮಾರಕ ಜ್ವರಕ್ಕೆ ಕಾರಣವಾದ ವೈರಸನ್ನು ನಿಪಾ ವೈರಸ್ ಎಂದು ಕರೆಯುತ್ತಾರೆ. ನಿಪಾ ವೈರಸ್ ಬಾವಲಿಗಳ ಮೂಲಕ ಹರಡುತ್ತದೆ. ಈ ಕ್ಷಣದವರೆಗೆ ಈ ರೋಗಕ್ಕೆ ಔಷಧಿ ಕಂಡುಹಿಡಿದಿಲ್ಲ. ಹೀಗಾಗಿ ನಿಪಾ ವೈರಸ್ ಮಾರಣಾಂತಿಕ ಎಂದೇ ಕುಖ್ಯಾತಿ ಪಡೆದಿದೆ. ಈ ವೈರಸ್ ಪತ್ತೆಯಾದರೆ ಶೇ.74ರಷ್ಟು ಸಾವು ಖಚಿತ ಎನ್ನಲಾಗಿದೆ.

    ವೈರಸ್ ಹೇಗೆ ಹರಡುತ್ತದೆ?
    ಸೋಂಕಿರುವ ಬಾವಲಿ ಕಚ್ಚಿದ ಹಣ್ಣನ್ನು ತಿನ್ನೋದ್ರಿಂದ ಹರಡುತ್ತೆ.
    ಸಾಂಕ್ರಾಮಿಕ ಕಾಯಿಲೆಯಾದ್ರಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತೆ.
    ಹೀಗಾಗಿ ಬಾವಲಿಗಳು ಕಚ್ಚಿದ ಸಾಧ್ಯತೆಯಿರುವ ಹಣ್ಣುಗಳನ್ನು ತಿನ್ನಲೇಬೇಡಿ.

    ನಿಪಾ ವೈರಸ್ ಲಕ್ಷಣಗಳೇನು?
    – ಜ್ವರ, ತಲೆ ನೋವು, ವಾಂತಿ, ತಲೆ ಸುತ್ತುವಿಕೆ
    – ಕೆಲವರಲ್ಲಿ ಅಪಸ್ಮಾರದ ಲಕ್ಷಣಗಳು ಕಾಣಿಸುತ್ತವೆ
    – ಈ ಲಕ್ಷಣಗಳು ಸಾಮಾನ್ಯವಾಗಿ 10ರಿಂದ 12 ದಿನ ಕಾಣಿಸುತ್ತದೆ
    – ಬಳಿಕ ಪ್ರಜ್ಞಾಹೀನರಾಗುತ್ತಾರೆ
    – ನಂತರ ಈ ಜ್ವರ ತೀವ್ರವಾಗಿ ಮೆದುಳಿಗೆ ವ್ಯಾಪಿಸುತ್ತದೆ
    – ಕೆಲವು ಬಾರಿ ಸೂಕ್ತ ಚಿಕಿತ್ಸೆ ಲಭಿಸದಿದ್ದರೆ ಸಾವು ಸಂಭವಿಸಬಹುದು

  • ನಿಪಾ ವೈರಸ್ ನಿಯಂತ್ರಣಕ್ಕೆ ಆಸ್ಟ್ರೇಲಿಯಾದ ಸಹಾಯ ಕೋರಿದ ಭಾರತ

    ನಿಪಾ ವೈರಸ್ ನಿಯಂತ್ರಣಕ್ಕೆ ಆಸ್ಟ್ರೇಲಿಯಾದ ಸಹಾಯ ಕೋರಿದ ಭಾರತ

    ನವದೆಹಲಿ: ನಿಪಾ ವೈರಸ್ ಜ್ವರಕ್ಕೆ 16 ಮಂದಿ ಸಾವನ್ನಪ್ಪಿದ ಬೆನ್ನಲ್ಲೇ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಅರ್) ಆಸ್ಟ್ರೇಲಿಯಾ ಸರ್ಕಾರದ ನೆರವನ್ನು ಕೋರಿದೆ.

    ಆಸ್ಟ್ರೇಲಿಯಾ ಕ್ವೀನ್ಸ್ ಲ್ಯಾಂಡ್ ಸಂಶೋಧಕರು ನಿಪಾ ವೈರಾಣು ನಿಯಂತ್ರಣಕ್ಕೆ ಆ್ಯಂಟಿಬಾಡಿ ಒಂದನ್ನು ಸಂಶೋಧನೆ ಮಾಡಿದ್ದು, ಇದನ್ನು ಮನುಷ್ಯರ ಮೇಲೆ ಪ್ರಯೋಗ ಮಾಡಿಲ್ಲ.

    ಭಾರತದಲ್ಲಿ ಮನುಷ್ಯರಲ್ಲಿ ಕಂಡುಬಂದಿರುವ ನಿಪಾ ವೈರಾಣುವನ್ನು ಈ ಆ್ಯಂಟಿಬಾಡಿ ನಿಯಂತ್ರಿಸುವುದೇ ಎಂದು ಪರೀಕ್ಷಿಸಲು ಮೋನೋಕ್ಲೋನಲ್ ಆ್ಯಂಟಿಬಾಡಿಯನ್ನು ನೀಡುವಂತೆ ಮನವಿ ಮಾಡಿದ್ದೇವೆ ಎಂದು ಐಸಿಎಂಅರ್ ಮುಖ್ಯಸ್ಥ ಡಾ. ಬಲರಾಮ್ ಭಾರ್ಗವ ತಿಳಿಸಿದ್ದಾರೆ.

    ಆಸ್ಟ್ರೇಲಿಯಾದಲ್ಲಿ ಕೃತಕ ವಾತಾವರಣದಲ್ಲಿ ಟೆಸ್ಟ್ ಟ್ಯೂಬ್ ಗಳಲ್ಲಿ ಪರೀಕ್ಷೆ ನಡೆಸಲಾಗಿದೆ. ಮನುಷ್ಯರ ಮೇಲೆ ಪ್ರಯೋಗ ಮಾಡಿಲ್ಲ ಎಂದು ಅವರು ತಿಳಿಸಿದರು.

    ಆ್ಯಂಟಿಬಾಡಿಯನ್ನು ಭಾರತದೊಂದಿಗೆ ಹಂಚಿಕೊಳ್ಳಲು ಆಸ್ಟ್ರೇಲಿಯ ಒಪ್ಪಿದೆ. ವೈರಾಣುವಿನಿಂದ ಆಗಿರುವ ಸೋಂಕಿನ ಪ್ರಮಾಣ ಹೆಚ್ಚಿದ್ದು ಎಷ್ಟರ ಮಟ್ಟಿಗೆ ಆ್ಯಂಟಿಬಾಡಿ ಮನುಷ್ಯರ ಮೇಲೆ ಕೆಲಸ ಮಾಡುತ್ತದೆ ಎಂದು ಈಗಲೇ ಹೇಳಲು ಬರುವುದಿಲ್ಲ ಎಂದು ತಿಳಿಸಿದರು.ಇದನ್ನೂ ಓದಿ:ಬಾವಲಿ ಜ್ವರಕ್ಕೆ ಕರ್ನಾಟಕದಲ್ಲೂ ಹೈಅಲರ್ಟ್ – ಈ ಮಾಹಿತಿ ನಿಮಗೆ ಗೊತ್ತಿರಲಿ..!

    ಕೊಯಿಕ್ಕೋಡುವಿನಲ್ಲಿ 9, ಮಲಪ್ಪುರಂ ನಲ್ಲಿ 3 ಇಬ್ಬರು ಸೇರಿ ಒಟ್ಟು 12 ಮಂದಿ ನಿಪಾ ವೈರಸ್‍ನಿಂದಾಗಿ ಸಾವನ್ನಪ್ಪಿದ್ದಾರೆ. 160 ಸ್ಯಾಂಪಲ್ ಗಳನ್ನು ವೈರಾಲಜಿ ಇನ್ಸ್ಟಿಟ್ಯೂಟ್ ಗೆ ಕಳುಹಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

    ನಿರ್ಧಿಷ್ಟ ಲಕ್ಷಣಗಳು ಕಂಡು ಬಂದಿರುವ 18 ಜನರು ಕೊಯಿಕ್ಕೋಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿಪಾ ವೈರಸ್ ಸೋಂಕಿನಿಂದ ಬಳಲುತ್ತಿರುವ ಮಲಪ್ಪುರಂ ನ 22 ಮಂದಿಯನ್ನು ಕೊಯಿಕ್ಕೋಡು ಆಸ್ಪತ್ರೆಯ ತೀವ್ರ ನಿಘಾ ಘಟಕದಲ್ಲಿ ಇರಿಸಲಾಗಿದೆ. 95 ಕುಟುಂಬಗಳ ಮೇಲೆ ವಿಶೇಷ ಕಣ್ಗಾವಲು ಇರಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

  • ಗಮನಿಸಿ, ಶಿವಮೊಗ್ಗ ಜಿಲ್ಲೆಯ ಯುವಕನಿಗೆ ನಿಪಾ ಸೋಂಕು ಇಲ್ಲ

    ಗಮನಿಸಿ, ಶಿವಮೊಗ್ಗ ಜಿಲ್ಲೆಯ ಯುವಕನಿಗೆ ನಿಪಾ ಸೋಂಕು ಇಲ್ಲ

    ಶಿವಮೊಗ್ಗ: ಜಿಲ್ಲೆಯ ಸಾಗರದ ತಾಲೂಕಿನ ಯುವಕನ ರಕ್ತದ ಮಾದರಿಯಲ್ಲಿ ನಿಪಾ ವೈರಸ್ ಸೋಂಕು ಪತ್ತೆಯಾಗಿಲ್ಲ ಎಂದು ಡಿಹೆಚ್‍ಒ ಡಾ. ವೆಂಕಟೇಶ್ ಹೇಳಿದ್ದಾರೆ.

    ನಿಪಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಪುಣೆಯ ಲ್ಯಾಬ್ ನಿಂದ ರಕ್ತದ ಮಾದರಿಯ ಪರೀಕ್ಷೆಯ ಫಲಿತಾಂಶ ಬಂದಿದ್ದು, ಅದರಲ್ಲಿ ನೆಗೆಟಿವ್ ಬಂದ ಕಾರಣ ಜಿಲ್ಲೆಯಲ್ಲಿ ಯಾರು ಭಯ ಪಡುವ ಅಗತ್ಯವಿಲ್ಲ ಎಂದು ಡಿಹೆಚ್‍ಒ ಡಾ. ವೆಂಕಟೇಶ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.  ಇದನ್ನು ಓದಿ: ಮಲೆನಾಡಿಗೂ ಕಾಲಿಟ್ಟಿತೇ ನಿಪಾ ಸೋಂಕು?

    ಕೇರಳದ ಕಾಸರಗೋಡಿನಲ್ಲಿ ಕೆಲಸ ಮಾಡುತ್ತಿದ್ದ ಶಿರವಂತೆಯ ಮಿಥುನ್ ನಿಪಾ ವೈರಸ್ ಹಾವಳಿ ಜೋರಾಗಿದ್ದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಮರಳಿದ್ದರು. ಈ ವೇಳೆ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ಹೆಚ್ಚಿನ ಚಿಕಿತ್ಸೆಗೆ ಅವರನ್ನು ಸಾಗರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೇರಳದಲ್ಲಿ ಈ ಸೋಂಕಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿಂದ ಆಗಮಿಸಿದ್ದ ಮಿಥುನ್‍ಗೂ ನಿಫಾ ಸೊಂಕು ತಗುಲಿದೆ ಎನ್ನುವ ಶಂಕೆ ಉಂಟಾಗಿತ್ತು.

  • ಮಂಗಳೂರಲ್ಲಿ ನಿಪಾ ವೈರಸ್ ಜ್ವರ ಪತ್ತೆ ಆಗಿಲ್ಲ: ಜಿಲ್ಲಾಧಿಕಾರಿ ಸ್ಪಷ್ಟನೆ

    ಮಂಗಳೂರಲ್ಲಿ ನಿಪಾ ವೈರಸ್ ಜ್ವರ ಪತ್ತೆ ಆಗಿಲ್ಲ: ಜಿಲ್ಲಾಧಿಕಾರಿ ಸ್ಪಷ್ಟನೆ

    ಮಂಗಳೂರು: ನಿಪಾ ವೈರಸ್ ಶಂಕಿತರಿಬ್ಬರ ತಪಾಸಣೆ ನಡೆಸಲಾಗಿದ್ದು ನಿಪಾ ಜ್ವರದ ಲಕ್ಷಣಗಳು ಕಂಡುಬಂದಿಲ್ಲ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸ್ಪಷ್ಟಪಡಿಸಿದ್ದಾರೆ.

    ಮಂಗಳೂರಿನ ಇಬ್ಬರಲ್ಲಿ ಶಂಕಿತ ನಿಪಾ ಪ್ರಕರಣ ಪತ್ತೆಯಾಗಿತ್ತು. ಮಣಿಪಾಲದಲ್ಲಿ ಸೋಂಕು ಶಂಕಿತರಿಬ್ಬರ ತಪಾಸಣೆ ನಡೆಸಲಾಗಿದೆ. ಯಾವುದೇ ನಿಪಾ ಜ್ವರದ ಲಕ್ಷಣಗಳು ಕಂಡುಬಂದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಜನರು ಭಯ ಪಡಬೇಕಾಗಿಲ್ಲ ಎಂದು ತಿಳಿಸಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಗೆ ನಿಪಾ ಜ್ವರ ಬರುವ ಸಾಧ್ಯತೆ ಕಡಿಮೆ. ಪ್ರಾಣಿಗಳು, ಪಕ್ಷಿಗಳು ಕಚ್ಚಿರುವ ಹಣ್ಣುಗಳನ್ನ ತಿನ್ನಬೇಡಿ. ನಿಪಾ ಸೋಂಕು ಗಾಳಿಯಲ್ಲಿ ಹರಡುವುದಿಲ್ಲ. ಸೋಂಕಿತ ವ್ಯಕ್ತಿಗಳ ಸಂಪರ್ಕದಿಂದ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಧ್ಯತೆ ಹೆಚ್ಚಿದೆ ಎಚ್ಚರವಿರಲಿ. ನೆರವಿಗಾಗಿ 104 ಸಂಖ್ಯೆಗೆ ಕರೆ ಮಾಡಿ ಎಂದು ಆರೋಗ್ಯ ಇಲಾಖೆ ಪ್ರಕಟಿಸಿದೆ. ಇದನ್ನೂ ಓದಿ:ಬಾವಲಿ ಜ್ವರಕ್ಕೆ ಕರ್ನಾಟಕದಲ್ಲೂ ಹೈಅಲರ್ಟ್ – ಈ ಮಾಹಿತಿ ನಿಮಗೆ ಗೊತ್ತಿರಲಿ..!

    ಕರ್ನಾಟಕದ ಪಕ್ಕದ ರಾಜ್ಯ ಕೇರಳದಲ್ಲಿ ಬಾವಲಿಗಳ ಮೂಲಕ ನಿಪಾ ವೈರಸ್ ಜ್ವರಕ್ಕೆ 16 ಮಂದಿ ಸಾವನ್ನಪ್ಪಿದ ಬೆನ್ನಲ್ಲೇ ರಾಜ್ಯದಲ್ಲಿ ಫುಲ್ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಕರ್ನಾಟಕದಲ್ಲೂ ನಿಪಾ ಭಯ ಕಾಡತೊಡಗಿದ್ದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ರಾಜ್ಯಾದ್ಯಂತ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗೆ ಸುತ್ತೋಲೆ ರವಾನೆಯಾಗಿದೆ. ಜ್ವರ, ವಾಂತಿ, ಸುಸ್ತು ಇಂತಹ ಲಕ್ಷಣ ಕಾಣಿಸಿಕೊಂಡ ರೋಗಿಗಳ ರಕ್ತ ಪರೀಕ್ಷೆಯ ಬಗ್ಗೆ ವಿಶೇಷ ಎಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆಯ ಆದೇಶ ಹೊರಡಿಸಿದೆ.

  • ಅಸೌಖ್ಯದಲ್ಲಿದ್ರೂ ನೋವನ್ನು ಲೆಕ್ಕಿಸದೇ ಕೆಲಸ ಮಾಡ್ತಿದ್ಳು: ನಿಪಾ ವೈರಸ್‍ಗೆ ಬಲಿಯಾದ ನರ್ಸ್ ಪತಿ ಕಣ್ಣೀರು

    ಅಸೌಖ್ಯದಲ್ಲಿದ್ರೂ ನೋವನ್ನು ಲೆಕ್ಕಿಸದೇ ಕೆಲಸ ಮಾಡ್ತಿದ್ಳು: ನಿಪಾ ವೈರಸ್‍ಗೆ ಬಲಿಯಾದ ನರ್ಸ್ ಪತಿ ಕಣ್ಣೀರು

    ಕೋಝಿಕೋಡ್: ನರ್ಸಿಂಗ್ ಎಂಬುದು ಒಂದು ಕಷ್ಟದ ಕೆಲಸ. ಹೀಗಾಗಿ ನನ್ನ ಪತ್ನಿಯ ಬಗ್ಗೆ ನನಗೆ ಹೆಮ್ಮೆಯಾಗುತ್ತದೆ ಅಂತ ಕೇರಳದಲ್ಲಿ ಇತ್ತೀಚೆಗೆ ನಿಪಾ ವೈರಸ್ ಗೆ ಬಲಿಯಾದ ಲಿನಿ ಪತಿ ಸಜೀಶ್ ಹೇಳಿದ್ದಾರೆ.

    ನನ್ನ ಪತ್ನಿ ಎಷ್ಟು ನಿಯತ್ತಿನಿಂದ ಕೆಲಸ ಮಾಡುತ್ತಿದ್ದಳು ಅಂದ್ರೆ ಆಕೆಗೆ ಹುಷಾರಿಲ್ಲ ಅಂದ್ರೂ ರಜೆ ಹಾಕದೇ ಕಷ್ಟಪಟ್ಟಾದರೂ ತನ್ನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಿದ್ದಳು ಅಂತ 36 ವರ್ಷದ ಸಜೀಶ್ ತಿಳಿಸಿದ್ದಾರೆ.

    ಏನಿದು ಪ್ರಕರಣ?:
    ಬಾವಲಿಗಳ ಮೂಲಕ ಹರಡುವ ನಿಪಾ ವೈರಸ್ ಗೆ ಕೇರಳದ ಲಿನಿ ಬಲಿಯಾಗಿದ್ದರು. ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ 31 ವರ್ಷ ಲಿನಿ, ತನ್ನ ಸಾವು ಖಚಿತವಾದ ಹಿನ್ನೆಲೆಯಲ್ಲಿ ಪತಿಗೆ ಭಾವನಾತ್ಮಕ ಪತ್ರ ಬರೆದಿದ್ದರು. ಈ ವಿಚಾರ ತಿಳಿದು ಕೂಡಲೇ ಬಹರೈನ್ ನಲ್ಲಿ ಉದ್ಯೋಗದಲ್ಲಿದ್ದ ಪತಿ ಸಜೀಶ್ ಊರಿಗೆ ವಾಪಸ್ಸಾಗಿದ್ದರು. ಅಲ್ಲದೇ ಕೇವಲ 2 ನಿಮಿಷವಷ್ಟೇ ಪತ್ನಿ ಮುಖ ನೋಡಿದ್ದರು. ಭಾನುವಾರ ಸಂಜೆ ಲಿನಿ ಮೃತಪಟ್ಟಿದ್ದರು.

    `ಭಾನುವಾರ ಬೆಳಗ್ಗೆ ನಾನು ಪತ್ನಿಯನ್ನು ನೋಡಲೆಂದು ಆಸ್ಪತ್ರೆಗೆ ತೆರಳಿದ್ದೆ. ಆದ್ರೆ ಈ ವೇಳೆ ಅವಳ ಮುಖಕ್ಕೆ ಆಕ್ಸಿಜನ್ ಮಾಸ್ಕ್ ಹಾಕಲಾಗಿತ್ತು. ಹೀಗಾಗಿ ನನಗೆ ಅವಳೊಂದಿಗೆ ಮಾತನಾಡಲು ಅವಕಾಶ ಸಿಕ್ಕಿಲ್ಲ. ಕೇವಲ 2 ನಿಮಿಷವಷ್ಟೇ ಅವಳನ್ನು ನೋಡಿ, ಅವಳ ಮೇಲೆ ನನ್ನ ಕೈಯಿಟ್ಟೆ. ಆಗ ಅವಳಿಗೆ ಪ್ರಜ್ಞೆಯಿತ್ತು ‘ಅಂತ ಅವರು ವಿವರಿಸಿದ್ರು.

    ಬಿಡುವಿಲ್ಲದೇ ತಾನು ಅಸೌಖ್ಯದಿಂದ ಇದ್ದರೂ ಲೆಕ್ಕಿಸದೇ ಕೆಲಸ ಮಾಡುತ್ತಿದ್ದಳು. ಹೀಗಾಗಿ ನನಗೆ ಅವಳ ಬಗ್ಗೆ ಗೌರವ ಹಾಗೂ ಹೆಮ್ಮೆಯಿದೆ ಎಂದು ನೆನಪು ಮಾಡಿಕೊಂಡು ದುಃಖಿತರಾದ್ರು. ಇದನ್ನೂ ಓದಿ: ನಾನು ಸಾಯ್ತೀನಿ, ಮಕ್ಕಳನ್ನು ಚೆನ್ನಾಗಿ ನೋಡ್ಕೊಳ್ಳಿ- ಪತಿಗೆ ನಿಪಾ ವೈರಸ್‍ಗೆ ಬಲಿಯಾದ ಕೇರಳ ನರ್ಸ್ ಪತ್ರ

    ಸಾವಿಗೂ ಮೊದಲು ಅಂದ್ರೆ ಬುಧವಾರ ಫೋನ್ ಕರೆಯಲ್ಲಿ ಮಾತನಾಡಿದಾಗ, ನನಗೆ ಜ್ವರ ಬರೋ ಹಾಗೆ ಇದೆ ಅಂತ ಹೇಳಿದ್ದಳು. ಆಗ ನಾನು ರಜೆ ಮಾಡಿ ರೆಸ್ಟ್ ಮಾಡು ಅಂತ ಹೇಳಿದ್ದೆ. ಆದ್ರೆ ಆಸ್ಪತ್ರೆಯಲ್ಲಿ ತುಂಬಾ ರೋಗಿಗಳಿದ್ದಾರೆ. ಹೀಗಾಗಿ ರಜೆ ತಗೊಳಲ್ಲ ಅಂತ ಹೇಳಿದಳು. ಅಲ್ಲದೇ ಕೆಲಸಕ್ಕೆಂದು ಆಸ್ಪತ್ರೆಗೆ ತೆರಳಿದ್ದಳು ಅಂದ್ರು. ಇದನ್ನೂ ಓದಿ: ನಿಪಾ ವೈರಸ್ ಗೆ ಬಲಿಯಾದ ನರ್ಸ್ ಕುಟುಂಬಕ್ಕೆ 20 ಲಕ್ಷ ರೂ.: ಪತಿಗೆ ಸರ್ಕಾರಿ ಉದ್ಯೋಗ ಘೋಷಿಸಿದ ಕೇರಳ

    ಡೆತ್ ನೋಟ್:
    ತನ್ನ ಸಾವು ಖಚಿತವಾದ ಲಿನಿ ತನ್ನ ಪತಿ ಸಜೀಶ್ ಗೆ ಪತ್ರವೊಂದನ್ನು ಬರೆದಿದ್ದಾರೆ. ಅದರಲ್ಲಿ ಇಬ್ಬರು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ತಿಳಿಸಿದ್ದರು. ಈ ಪತ್ರ ಕೂಡಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೇ ಸಜೀಶ್ ಅವರಿಗೂ ಈ ಪತ್ರ ತಲುಪಿತ್ತು. ಲಿನಿ ಅವರು ಸರ್ಕಾರಿ ಕೆಲಸಕ್ಕಾಗಿ ಪ್ರಯತ್ನಿಸುತ್ತಿದ್ದರು. ಅಲ್ಲದೇ ಇತ್ತ 5 ಹಾಗೂ 2 ವರ್ಷದ ಮಕ್ಕಳ ಜೊತೆಯೂ ಕಾಲ ಕಳೆಯುತ್ತಿದ್ದರು. ಸದ್ಯ ಈ ಇಬ್ಬರೂ ಮಕ್ಕಳು ಇನ್ನೂ ತಾಯಿಯ ಬರುವಿಕೆಗೆ ಕಾದು ಕುಳಿತಿದ್ದು, ಮಕ್ಕಳ ಮುಖವನ್ನು ನೋಡಿದಾಗ ಕರುಳು ಚುರುಕ್ ಅನ್ನುತ್ತದೆ. ಇದನ್ನೂ ಓದಿ: ಬಾವಲಿ ಜ್ವರಕ್ಕೆ ಕರ್ನಾಟಕದಲ್ಲೂ ಹೈಅಲರ್ಟ್ – ಈ ಮಾಹಿತಿ ನಿಮಗೆ ಗೊತ್ತಿರಲಿ..!

    ಇದರಲ್ಲಿ ದೊಡ್ಡ ಮಗ ತನ್ನ ತಾಯಿಗೆ ಕರೆ ಮಾಡು ಮಾತಾಡಬೇಕು ಅಂತ ಹಠ ಹಿಡಿಯುತ್ತಿದ್ದರೆ, ಸಣ್ಣವ ಇನ್ನೂ ಚಿಕ್ಕವನಾಗಿದ್ದಿದ್ದರಿಂದ ಮಾತನಾಡುತ್ತಿಲ್ಲ. ಆದ್ರೆ ಈ ಇಬ್ಬರೂ ಅಮ್ಮ ಹೊರಗಡೆ ಹೋಗಿದ್ದಾಳೆ, ಇನ್ನೇನೋ ಬರುತ್ತಾಳೆ ಅನ್ನೋ ನಿರೀಕ್ಷೆಯಲ್ಲಿದ್ದಾರೆ ಅಂತ ಲಿನಿ ಸೋದರ ಸಂಬಂಧಿಯೊಬ್ಬರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.

    ಸದ್ಯ ಲಿನಿ ಪತಿಗೆ ಸರ್ಕಾರಿ ಕೆಲಸ ಹಾಗೂ 20 ಲಕ್ಷ ಪರಿಹಾರವನ್ನು ಕೊಡುವುದಾಗಿ ಕೇರಳ ಸರ್ಕಾರ ಘೋಷಿಸಿದೆ. ಹೀಗಾಗಿ ಸಜೀಶ್ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

  • ಗದಗ ಜಿಲ್ಲೆಗೂ ಕಾಲಿಟ್ಟಿದೆ ನಿಪಾ ವೈರಸ್!

    ಗದಗ ಜಿಲ್ಲೆಗೂ ಕಾಲಿಟ್ಟಿದೆ ನಿಪಾ ವೈರಸ್!

    ಗದಗ: ಮಾರಣಾಂತಿಕ ಮಹಾಮಾರಿ ಶಂಕಿತ ನಿಪಾ ವೈರಸ್ ಗದಗ ಜಿಲ್ಲೆಗೂ ಕಾಲಿಟ್ಟಿದೆ ಎನ್ನಲಾಗುತ್ತಿದ್ದು, ಇದೀಗ ಜಿಲ್ಲೆಯ ಜನರಲ್ಲಿ ಮತ್ತಷ್ಟು ಆತಂಕ ಮನೆ ಮಾಡಿದೆ.

    ಜಿಲ್ಲೆಯ ರೋಣ ತಾಲೂಕಿನ ವ್ಯಕ್ತಿಯೊಬ್ಬರಿಗೆ ನಿಪಾ ವೈರಸ್ ಇದೆ ಎಂದು ಶಂಕಿಸಲಾಗಿದೆ. ಸೋಂಕಿತ ವ್ಯಕ್ತಿಗೆ ಗದಗ ಜಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ವಿಶೇಷ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಈ ವ್ಯಕ್ತಿ ಕೆಲ ತಿಂಗಳ ಕಾಲ ಕೇರಳದ ಕ್ಯಾಲಿಕಟ್ ಸಮೀಪದಲ್ಲಿ ಕೆಲಸದಲ್ಲಿದ್ದರು.

    ಇತ್ತೀಚೆಗೆ ಗದಗ ಜಿಲ್ಲೆಯ ತವರೂರಿಗೆ ಮರಳಿದಾಗ ಕಳೆದ ಒಂದೆರಡು ವಾರಗಳಿಂದ ಜ್ವರ, ತಲೆನೋವು, ವಾಂತಿ, ಕೆಮ್ಮು, ಸುಸ್ತು ಹೀಗೆ ನಿಪಾ ವೈರಸ್ ನ ಲಕ್ಷಣಗಳು ಗೋಚರವಾಗಿವೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಅವರನ್ನು ಗದಗ ಜಿಮ್ಸ್ ವೈದ್ಯರು ತಪಾಸಣೆಗೊಳಪಡಿಸಿದ್ದಾರೆ.

    ಈ ಹಿನ್ನಲೆಯಲ್ಲಿ ಅವರ ರಕ್ತದ ಮಾದರಿಯನ್ನು ಸಂಗ್ರಹಿಸಿ ಪುಣೆಯ ಎನ್‍ಐವಿ ಲ್ಯಾಬ್ ಗೆ ರಕ್ತ ಪರೀಕ್ಷೆಗಾಗಿ ರವಾನಿಸಿದ್ದಾರೆ. 48 ಗಂಟೆಗಳಲ್ಲಿ ಪ್ರಯೋಗಾಲಯದ ವರದಿ ಬರಲಿದ್ದು, ಆನಂತರ ಹೆಚ್ಚಿನ ಚಿಕಿತ್ಸೆ ನೀಡುವುದಾಗಿ ಜಿಮ್ಸ್ ಆಡಳಿತ ವೈದ್ಯಾಧಿಕಾರಿ ಎ.ಬಿ ಪಾಟೀಲ್ ಹೇಳಿದ್ದಾರೆ.

  • ನಿಪಾ ವೈರಸ್‍ಗಿಂತಲೂ ಡೇಂಜರ್ ಅಂತೆ ನಿಪಾ ತಡೆಗಟ್ಟೋ ಟ್ಯಾಬ್ಲೆಟ್!

    ನಿಪಾ ವೈರಸ್‍ಗಿಂತಲೂ ಡೇಂಜರ್ ಅಂತೆ ನಿಪಾ ತಡೆಗಟ್ಟೋ ಟ್ಯಾಬ್ಲೆಟ್!

    ಬೆಂಗಳೂರು: ಕೇರಳದಲ್ಲಿ 12 ಜನರ ಸಾವಿಗೆ ಕಾರಣವಾದ ನಿಪಾ ವೈರಾಣು ತಡೆಗಟ್ಟುವ ಮಾತ್ರೆಗಳು ಕೊನೆಗೂ ಮಲೇಷ್ಯಾದಿಂದ ಕೇರಳವನ್ನು ತಲುಪಿದೆ. ರಿಬಾ ವೈರಿನ್ ಎಂಬ ಈ ಟ್ಯಾಬ್ಲೆಟ್ ಓವರ್ ಡೋಸ್ ಆದರೆ ರೋಗಿಗೆ ತೀರಾ ಅಪಾಯಕಾರಿ ಎಂದು ವೈದ್ಯರು ಮುನ್ನೆಚ್ಚರಿಕೆ ನೀಡಿದ್ದಾರೆ. ಟ್ಯಾಬ್ಲೆಟ್ ಕೈಗೆ ಸಿಕ್ತು ಅಂತಾ ಈ ಟ್ಯಾಬ್ಲೆಟನ್ನು ಬೇಕಾಬಿಟ್ಟಿ ಸೇವಿಸುವಂತಿಲ್ಲ. ಕಾರಣ ಇದು ಓವರ್ ಡೋಸ್ ಆದ್ರೆ ಕಿಡ್ನಿಗಳು ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ತಜ್ಞ ವೈದ್ಯರು ಮುನ್ನೆಚ್ಚರಿಕೆ ನೀಡಿದ್ದಾರೆ.

    ಮೊದಲ ಹಂತದಲ್ಲಿ ಬುಧವಾರ 2 ಸಾವಿರ ಟ್ಯಾಬ್ಲೆಟ್ ಕೇರಳದ ಕೋಯಿಕ್ಕೋಡ್ ಮೆಡಿಕಲ್ ಕಾಲೇಜಿಗೆ ತಲುಪಿದೆ. ಇಂದು ಮತ್ತೆ 8 ಸಾವಿರ ಟ್ಯಾಬ್ಲೆಟ್ ತಲುಪಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಈಗಾಗಲೇ ಬಂದಿರುವ ಟ್ಯಾಬ್ಲೆಟ್ ಗಳ ಪ್ರಾಯೋಗಿಕ ಪರೀಕ್ಷೆ ಮಾಡಿದ ಬಳಿಕವಷ್ಟೇ ರೋಗಿಗಳಿಗೆ ನೀಡಲು ನಿರ್ಧರಿಸಲಾಗಿದೆ. ದೆಹಲಿಯ ಏಮ್ಸ್ ವೈದ್ಯರ ನಿರ್ದೇಶನದಂತೆ ಟ್ಯಾಬ್ಲೆಟ್ ವಿತರಣೆ ಆರಂಭವಾಗಲಿದೆ. ನಿಪಾ ವೈರಾಣುವನ್ನು ಹತೋಟಿಗೆ ತರಲು ರಿಬಾವೈರಿನ್ ಗೆ ಮಾತ್ರ ಸಾಧ್ಯ. ಹೀಗಾಗಿ ನಾವು ಮಲೇಷ್ಯಾದಿಂದ ಟ್ಯಾಬ್ಲೆಟ್ ತರಿಸಿದ್ದೇವೆ ಎಂದು ಕೇರಳದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಹೇಳಿದ್ದಾರೆ. ಇದನ್ನೂ ಓದಿ: ಬಾವಲಿ ಜ್ವರಕ್ಕೆ ಕರ್ನಾಟಕದಲ್ಲೂ ಹೈಅಲರ್ಟ್ – ಈ ಮಾಹಿತಿ ನಿಮಗೆ ಗೊತ್ತಿರಲಿ..!

    ಈ ನಡುವೆ ಕೇರಳದಲ್ಲಿ ನಿಪಾ ವೈರಾಣು ನಿಯಂತ್ರಣದಲ್ಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಕೇರಳದಲ್ಲಿ ನಿಪಾ ವೈರಾಣು ಒಂದೇ ಕಡೆ ಕಾಣಿಸಿದೆ. ಇಲ್ಲಿ ವೈರಾಣು ನಿಯಂತ್ರಣದಲ್ಲಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ನಿರ್ದೇಶಕರಾದ ಪ್ರೀತಿ ಸುಧನ್ ಹೇಳಿದ್ದಾರೆ. ನಿಪಾ ವೈರಸ್ ಕಾಣಿಸಿದ ಪ್ರದೇಶದಲ್ಲಿದ್ದ 60 ಜನರಿಂದ ಸ್ಯಾಂಪಲ್ ಸಂಗ್ರಹಿಸಿ ಪುಣೆಯ ವೈರಾಲಜಿ ಸಂಶೋಧನಾ ಸಂಸ್ಥೆಗೆ ಕಳಿಸಿದ್ದೇವೆ ಎಂದು ಹೇಳಿದ್ದಾರೆ. ಈಗಾಗಲೇ ಆಸ್ಪತ್ರೆಗೆ ದಾಖಲಾಗಿದ್ದವರಲ್ಲಿ 9 ಜನರನ್ನು ಡಿಸ್ಚಾರ್ಜ್ ಮಾಡಲಾಗಿದೆ. ರೋಗ ಹರಡದಂತೆ ಹಾಗೂ ರೋಗಿಗಳ ಚಿಕಿತ್ಸೆಗಾಗಿ ಕೇರಳ ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸಾಧ್ಯವಾದಷ್ಟು ಕೇರಳದ ಕೋಯಿಕ್ಕೋಡ್, ಮಲಪ್ಪುರಂ, ವಯನಾಡ್, ಕಣ್ಣೂರು ಜಿಲ್ಲೆಗಳಿಗೆ ಸಂಚರಿಸುವಾಗ ಎಚ್ಚರಿಕೆಯಿಂದಿರಿ ಎಂದು ಸರ್ಕಾರ ನಿರ್ಬಂಧ ವಿಧಿಸಿದೆ. ಇದನ್ನೂ ಓದಿ: ನಿಪಾ ವೈರಸ್ ಗೆ ಬಲಿಯಾದ ನರ್ಸ್ ಕುಟುಂಬಕ್ಕೆ 20 ಲಕ್ಷ ರೂ.: ಪತಿಗೆ ಸರ್ಕಾರಿ ಉದ್ಯೋಗ ಘೋಷಿಸಿದ ಕೇರಳ

    ಇದನ್ನೂ ಓದಿ: ‘ಬಾವಲಿ ಜ್ವರ’ಕ್ಕೆ ಕೇರಳದಲ್ಲಿ 10 ಸಾವು – ರೋಗ ಲಕ್ಷಣ ಏನು, ತಡೆಗಟ್ಟೋದು ಹೇಗೆ?