Tag: Ninasam Satish

  • ಚಿರಂಜೀವಿ ಸರ್ಜಾ ಹಾಗೂ ನಾನು ಅಣ್ಣ ತಮ್ಮಿಂದರಂತೆ ಇದ್ವಿ –  ನೀನಾಸಂ ಸತೀಶ್

    ಚಿರಂಜೀವಿ ಸರ್ಜಾ ಹಾಗೂ ನಾನು ಅಣ್ಣ ತಮ್ಮಿಂದರಂತೆ ಇದ್ವಿ – ನೀನಾಸಂ ಸತೀಶ್

    ಬೆಂಗಳೂರು: ಚಿರಂಜೀವಿ ಸರ್ಜಾ ಹಾಗೂ ನಾನು ಅಣ್ಣ ತಮ್ಮಿಂದರಂತೆ ಇದ್ದೆವು. ನಾವು ಊರು, ಮನೆ, ಮಠ ಬಿಟ್ಟು ಬಂದಾಗ ನಮಗೆ ಆಶ್ರಯ ನೀಡಿದ್ದೇ ಸಿನಿಮಾ ಕುಟುಂಬ. ಎಲ್ಲ ಸಿನಿಮಾಗಳಿಗೂ ಒಬ್ಬರಿಗೊಬ್ಬರು ವಿಶ್ ಮಾಡಿಕೊಳ್ಳುತ್ತಿದ್ದೆವು ಎಂದು ನಟ ನೀನಾಸಂ ಸತೀಶ್ ತಮ್ಮ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

    https://www.youtube.com/watch?v=CBAYIvDRUk8

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸಿನಿಮಾ ರಂಗದಲ್ಲಿ ಅಣ್ಣ ತಮ್ಮಂದಿರಂತೆ ಇದ್ದೆವು. ಕೂತು ಹರಟೆ ಹೊಡೆಯುತ್ತಿದ್ದೆವು. ನಾವು ಊರು ಬಿಟ್ಟು ಬಂದಾಗ ನಮಗೆ ಆಶ್ರಯ ನೀಡಿ ಜೀವನ ರೂಪಿಸಿಕೊಳ್ಳಲು ಸಹಾಯ ಮಾಡಿದವರು. ನಂತರ ನಮ್ಮ ಕುಟುಂಬ ಎನ್ನುವಂತೆ ಸಂಬಂಧ ಹೊಂದಿದ್ದೆವು. ಇಷ್ಟು ಸಣ್ಣ ವಯಸ್ಸಿನಲ್ಲಿ ಹೀಗಾಗಿದ್ದು ತುಂಬಾ ಆಘಾತವನ್ನುಂಟು ಮಾಡಿದೆ ಎಂದು ತಿಳಿಸಿದ್ದಾರೆ.

    ಚಿರಂಜೀವಿ ಅವರಿಗೆ ಸಿನಿಮಾದಲ್ಲಿ ಸಾಧನೆ ಮಾಡಬೇಕೆಂಬ ಕನಸಿತ್ತು. ಈ ಕುರಿತು ನಾನೂ ಸೇರಿದಂತೆ ಸಮಾನ ವಯಸ್ಕರು ಸೇರಿ ಚರ್ಚೆ ನಡೆಸುತ್ತಿದ್ದೆವು. ಅಲ್ಲದೆ ಚೈತನ್ಯ ನಾನು, ಧೃವ, ಯೋಗಿ ಸೇರಿ ಸಿನಿಮಾ ಮಾಡಲು ಚರ್ಚೆ ನಡೆಸಿದ್ದೆವು. ಇತ್ತೀಚೆಗೆ ರಾತ್ರಿಯಿಂದ ಬೆಳಗ್ಗೆ 5 ಗಂಟೆ ವರೆಗೂ ಚರ್ಚೆ ಮಾಡಿದ್ದೆವು. ಹೀಗೆ ಬಹುತೇಕ ಸಂದರ್ಭಗಳಲ್ಲಿ ಭೇಟಿಯಾಗುತ್ತಿದ್ದೆವು. ಹರಟೆ ಹೊಡೆಯುತ್ತಿದ್ದೆವು ಎಂದು ನೆನೆದಿದ್ದಾರೆ.

    ಪ್ರತಿ ಸಿನಿಮಾ ಬಂದಾಗ ಅವನಿಗೆ ನಾನು ಶುಭಾಶಯ ತಿಳಿಸುತ್ತಿದ್ದೆ, ನನ್ನ ಸಿನಿಮಾ ಬಂದಾಗ ಅವನು ಶುಭಾಶಯ ತಿಳಿಸುತ್ತಿದ್ದ. ಹೀಗೆ ಅಣ್ಣ ತಮ್ಮಂದಿರಂತೆ ಇದ್ದೆವು, ಈಗ ಈ ಸುದ್ದಿ ಕೇಳಿ ಹೊಟ್ಟೆ ಉರಿಯುತ್ತಿದೆ ಎಂದು ನಿನಾಸಂ ಸತೀಶ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

  • ರೆಬೆಲ್‍ಸ್ಟಾರ್ ಬರ್ತ್‍ಡೇಗೆ ಡಿಫರೆಂಟಾಗಿ ವಿಶ್ ಮಾಡಿದ್ರು ನೀನಾಸಂ ಸತೀಶ್!

    ರೆಬೆಲ್‍ಸ್ಟಾರ್ ಬರ್ತ್‍ಡೇಗೆ ಡಿಫರೆಂಟಾಗಿ ವಿಶ್ ಮಾಡಿದ್ರು ನೀನಾಸಂ ಸತೀಶ್!

    – ಕಲಿಯುಗದ ಕರ್ಣನ ನೆನಪಲ್ಲೊಂದು ಚೆಂದದ ಹಾಡು

    ಭೌತಿಕವಾಗಿ ಮರೆಯಾದರೂ ಪ್ರತಿಯೊಬ್ಬರ ಮನಸ್ಸುಗಳಲ್ಲಿಯೂ ಅಜರಾಮರವಾಗಿರುವವರು ರೆಬೆಲ್ ಸ್ಟಾರ್ ಅಂಬರೀಶ್. ಹುಸಿಮುನಿಸು, ಒಂದಷ್ಟು ಬೈಗುಳಗಳ ಮೂಲಕವೇ ಪ್ರಾಂಜಲ ಪ್ರೀತಿಯನ್ನು ಎಲ್ಲರತ್ತಲೂ ದಾಟಿಸುತ್ತಿದ್ದ, ಎದುರು ಯಾರೇ ನಿಂತರೂ ಬೆಚ್ಚಗಿನ ಸ್ನೇಹವನ್ನು ಮನಸಾರೆ ಪ್ರವಹಿಸುತ್ತಿದ್ದ ಅಂಬರೀಶ್‍ರ ಬಗ್ಗೆ ಒಂದೇ ಗುಕ್ಕಿನಲ್ಲಿ ವಿವರಿಸೋದು ಕಷ್ಟ. ಎಷ್ಟೇ ಮಾತಾಡಿದರೂ, ಬರೆದರೂ ಅದರ ನಿಲುಕಿಗೆ ಸಿಗದ ಅಸಂಗತ ವ್ಯಕ್ತಿತ್ವ ಹೊಂದಿದ್ದ ಅಂಬರೀಶ್ ಹುಟ್ಟಿದ ದಿನವಿಂದು. ಈ ಸಂದರ್ಭದಲ್ಲಿ ಬಹುತೇಕರು ತಂತಮ್ಮದ್ದೇ ಆದ ರೀತಿಯಲ್ಲಿ ವಿಶ್ ಮಾಡುತ್ತಿದ್ದಾರೆ. ಅಂಬರೀಶ್‍ರನ್ನು ಸ್ಮರಿಸುತ್ತಿದ್ದಾರೆ. ಇದೇ ಹೊತ್ತಿನಲ್ಲಿ ನಟ ನೀನಾಸಂ ಸತೀಶ್ ಡಿಫರೆಂಟಾಗಿಯೇ ತಮ್ಮ ಆರಾಧ್ಯ ನಟನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

    ಹಾಗೆ ನೀನಾಸಂ ಸತೀಶ್ ಅಂಬರೀಶ್ ಅವರಿಗೆ ಶುಭ ಕೋರಿರೋದು ಹಾಡಿನ ಮೂಲಕ ಎಂಬುದು ನಿಜವಾದ ವಿಶೇಷ. ಸತೀಶ್ ಯಾವ ಥರದ ಪಾತ್ರಗಳಿಗಾದರೂ ಎಲ್ಲರೂ ಮೆಚ್ಚುವಂತೆ ಜೀವ ತುಂಬ ಬಲ್ಲ ನಟ ಎಂಬುದು ಗೊತ್ತೇ ಇದೆ. ಆದರೆ ಅವರೊಳಗೊಬ್ಬ ಪ್ರತಿಭಾವಂತ ಗಾಯಕನೂ ಇದ್ದಾರೆಂಬ ವಿಚಾರವನ್ನು ಅಂಬಿ ಮೇಲಿನ ಅಭಿಮಾನವೇ ಜಾಹೀರು ಮಾಡಿದೆ. ಯಾಕೆಂದರೆ, ಎ2 ಮ್ಯೂಸಿಕ್ ಹೊರ ತಂದಿರೋ ಅಂಬರೀಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರುವ ಈ ಹಾಡನ್ನು ಖುದ್ದು ನೀನಾಸಂ ಸತೀಶ್ ಹಾಡಿದ್ದಾರೆ.

    ಅಂಬರೀಶ್ ಮಂಡ್ಯದ ಗಂಡು ಎಂಬ ಬಿರುದನ್ನೂ ಪ್ರೀತಿಯಿಂದಲೇ ತನ್ನದಾಗಿಸಿಕೊಂಡಿದ್ದವರು. ಮಂಡ್ಯ ಅಂದರೆ ಅಂಬಿ ಎಂಬಂತೆ ಬ್ರ್ಯಾಂಡ್ ಆಗಿದ್ದ ಅವರಿಗೆ ಪಕ್ಕಾ ಮಂಡ್ಯ ಶೈಲಿಯ ಕನ್ನಡದಲ್ಲಿಯೇ ಈ ಹಾಡನ್ನು ರಚಿಸಿ ಅರ್ಪಿಸಲಾಗಿದೆ. ಈಗಾಗಲೇ ನಿರ್ದೇಶಕರಾಗಿ ಮಾತ್ರವಲ್ಲದೆ ಗೀತ ಸಾಹಿತಿಯಾಗಿಯೂ ಗುರುತಿಸಿಕೊಂಡಿರುವ ಭರ್ಜರಿ ಚೇತನ್ ಈ ಹಾಡನ್ನು ಬರೆದಿದ್ದಾರೆ. `ಮಂಡ್ಯದ ಗಂಡು ಕಲ ಕನ್ನಡದ ಆಸ್ತಿ ಕಲ, ದೋಸ್ತಿಗೆ ಬ್ರ್ಯಾಂಡು ಕಲಾ ನಮ್ ಜಲೀಲ’ ಅಂತ ಶುರುವಾಗೋ ಈ ಹಾಡಿನ ಪ್ರತೀ ಪದಗಳಲ್ಲಿಯೇ ಅಂಬರೀಶ್ ವ್ಯಕ್ತಿತ್ವ ಮತ್ತು ಅವರ ಮೇಲಿರೋ ಕರುನಾಡಿನ ಅಭಿಮಾನವನ್ನೇ ಎರಕ ಹೊಯ್ದಂತಿದೆ.

    ಸಂತೋಷ್ ವೆಂಕಿ ಸಂಗೀತದಲ್ಲಿ ಮೂಡಿ ಬಂದಿರೋ ಈ ಹಾಡನ್ನು ನೀನಾಸಂ ಸತೀಶ್ ಪಳಗಿದ ಗಾಯಕನಂತೆಯೇ ಚೆಂದಗೆ ಹಾಡಿದ್ದಾರೆ. ಆರಂಭ ಕಾಲದಿಂದಲೂ ಅಂಬರೀಶ್ ಅವರನ್ನು ಆರಾಧಿಸುತ್ತಾ, ಅವರ ಸಿನಿಮಾಗಳನ್ನು ಸರದಿಯಲ್ಲಿ ನಿಂತು ಟಿಕೆಟು ಖರೀದಿಸಿ ನೋಡುತ್ತಾ ಬೆಳೆದು ಬಂದವರು ನೀನಾಸಂ ಸತೀಶ್. ಈ ಕಾರಣದಿಂದಲೇ ಹಾಡಿನ ಮೂಲಕ ತನ್ನ ನೆಚ್ಚಿನ ನಟನಿಗೆ ಅರ್ಥಪೂರ್ಣವಾಗಿ ಹುಟ್ಟುಹಬ್ಬದ ಶುಭಾಶಯ ಕೋರುವ ಸದವಕಾಶ ಅವರನ್ನು ಅರಸಿ ಬಂದಿದೆ. ಈ ಹಾಡು ಘಂಟೆ ಕಳೆಯೋದರೊಳಗೆ ಟ್ರೆಂಡ್ ಸೆಟ್ ಮಾಡಲಾರಂಭಿಸಿದೆ. ಹೆಚ್ಚೆಚ್ಚು ವೀಕ್ಷಣೆ ಪಡೆದುಕೊಳ್ಳುತ್ತಾ ಮುನ್ನುಗ್ಗುತ್ತಿದೆ.

    ವಿಕ್ರಮ ಸಾಫಲ್ಯ ನಿರ್ಮಾಣ ಮಾಡಿರುವ ಈ ಹಾಡು ಎ2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್‍ನಿಂದ ಹೊರ ಬಂದಿದೆ. ಇದು ನಿಜಕ್ಕೂ ಅರ್ಥಪೂರ್ಣವಾದ ಸಾಲುಗಳನ್ನೊಳಗೊಂಡಿರೋ ಹಾಡು. ಅಂಬರೀಶ್ ಅವರ ಟ್ರೇಡ್‍ಮಾರ್ಕಿನಂತಹ ಹಲವಾರು ಸಂಗತಿಗಳನ್ನು ಸೇರಿಸಿ ಹೊಸೆದಿರೋ ಈ ಸಾಹಿತ್ಯಕ್ಕೆ, ನೀನಾಸಂ ಸತೀಶ್ ಹಾಡಿದ ರೀತಿಗೆ ಅಂಬಿ ಅಭಿಮಾನಿಗಳು ಫಿದಾ ಆಗುತ್ತಿದ್ದಾರೆ. ಸದ್ಯ ಲಾಕ್‍ಡೌನ್ ಮುಗಿದು ಮತ್ತೆ ಚಿತ್ರೀಕರಣ ಶುರುವಾಗೋ ಆಶಾವಾದ ಮೊಳೆತುಕೊಂಡಿರುವ ಈ ಘಳಿಗೆಯಲ್ಲಿ ಸತೀಶ್ ಮುಂಬರೋ ಚಿತ್ರಗಳಿಗಾಗಿ ಅಣಿಗೊಳ್ಳುತ್ತಿದ್ದಾರೆ. ಅದರ ನಡುವೆಯೂ ಅಂಬಿ ಮೇಲಿನ ಅಭಿಮಾನದಿಂದ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಪ್ರೀತಿಯಿಂದಲೇ ಹಾಡಾಗಿದ್ದಾರೆ.

  • ಇವನು ಫ್ಯಾಮಿಲಿ ಎಂಟರ್‌ಟೈನರ್ ಬ್ರಹ್ಮಚಾರಿ!

    ಇವನು ಫ್ಯಾಮಿಲಿ ಎಂಟರ್‌ಟೈನರ್ ಬ್ರಹ್ಮಚಾರಿ!

    ದಯ್ ಮೆಹ್ತಾ ನಿರ್ಮಾಣ ಮಾಡಿರುವ ಬ್ರಹ್ಮಚಾರಿ ಚಿತ್ರ ಈ ವಾರವೇ ರಾಜ್ಯಾದ್ಯಂತ ತೆರೆಗಾಣುತ್ತಿದೆ. ನೀನಾಸಂ ಸತೀಶ್ ನಟಿಸಿರೋ ಈ ಚಿತ್ರ ಈಗಾಗಲೇ ಟ್ರೇಲರ್, ಹಾಡುಗಳ ಮೂಲಕ ಬಹು ನಿರೀಕ್ಷಿತ ಚಿತ್ರವಾಗಿ ಹೊರ ಹೊಮ್ಮಿದೆ. ಫಸ್ಟ್ ನೈಟ್ ಟೀಸರ್ ನಿಂದ ಶುರುವಾಗಿ ಟ್ರೇಲರ್ ತನಕ ಬ್ರಹ್ಮಚಾರಿ ಪ್ರೇಕ್ಷಕರನ್ನು ಮರುಳು ಮಾಡಿಕೊಂಡು ಬಂದು ಇದೀಗ ಬಿಡುಗಡೆಯ ಹಂತ ತಲುಪಿಕೊಂಡಿದ್ದಾನೆ. ವಿಶೇಷವೆಂದರೆ, ಸಂಪೂರ್ಣ ಮನೋರಂಜನೆಯನ್ನೇ ಉದ್ದೇಶವಾಗಿಸಿಕೊಂಡಿರೋ ಈ ಸಿನಿಮಾ ಪಕ್ಕಾ ಫ್ಯಾಮಿಲಿ ಎಂಟರ್ ಟೈನ್ಮೆಂಟ್ ಪ್ಯಾಕೇಜಿನಂತೆ ಮೂಡಿ ಬಂದಿದೆಯಂತೆ. ಈ ಕಾರಣದಿಂದಲೇ ಚಿತ್ರತಂಡ ಕುಟುಂಬ ಸಮೇತರಾಗಿ ಬಂದು ನೋಡುವಂತೆ ಪ್ರೇಕ್ಷಕರಿಗೆ ಆಹ್ವಾನ ನೀಡುತ್ತಾ ಬಂದಿದೆ.

    ಈ ಹಿಂದೆ ಬಾಂಬೆ ಮಿಠಾಯಿ ಮತ್ತು ಡಬಲ್ ಇಂಜಿನ್ ಎಂಬ ಹಾಸ್ಯ ಪ್ರಧಾನ ಚಿತ್ರಗಳನ್ನು ನಿರ್ದೇಶನ ಮಾಡಿ ಗೆದ್ದಿದ್ದವರು ಚಂದ್ರ ಮೋಹನ್. ಈ ಥರದ ಸಿನಿಮಾಗಳನ್ನು ರೂಪಿಸೋದು, ಇಡೀ ಸಿನಿಮಾದಲ್ಲಿ ಪ್ರತೀ ಹಂತದಲ್ಲಿಯೂ ಪ್ರೇಕ್ಷಕರನ್ನು ನಗಿಸೋದೆಲ್ಲ ಅಷ್ಟು ಸಲೀಸಿನ ಸಂಗತಿಯಲ್ಲ. ಆದರೆ ಚಂದ್ರಮೋಹನ್ ಅದನ್ನು ಕರಗತ ಮಾಡಿಕೊಂಡಿದ್ದಾರೆ. ಈ ಕಾರಣದಿಂದಲೇ ಎರಡು ಸರಣಿ ಗೆಲುವುಗಳನ್ನು ತನ್ನದಾಗಿಸಿಕೊಂಡು, ಇದೀಗ ಬ್ರಹ್ಮಚಾರಿ ಮೂಲಕ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಿಂದಿದ್ದಾರೆ. ಈಗಾಗಲೇ ಈ ಸಿನಿಮಾ ಸೃಷ್ಟಿಸಿರುವ ಕ್ರೇಜ್ ಮತ್ತು ಅದರ ವಿಶಿಷ್ಟ ಕಂಟೆಂಟಿನ ವಿಚಾರಗಳೆಲ್ಲವೂ ಬ್ರಹ್ಮಚಾರಿಗೆ ಪ್ರೇಕ್ಷಕರೆಲ್ಲ ಬೇಷರತ್ತಾಗಿ ಫಿದಾ ಆಗುವಂಥಾ ಲಕ್ಷಣಗಳನ್ನೇ ಧ್ವನಿಸುವಂತಿವೆ.

    ಗುಪ್ತ ಸಮಸ್ಯೆಗಳನ್ನು ಒಳಗೇ ಇಟ್ಟುಕೊಂಡು, ಕನಿಷ್ಟ ಅದಕ್ಕೊಂದು ಚಿಕಿತ್ಸೆ ಪಡೆಯಲೂ ಮುಜುಗರ ಪಡುವ, ಹೇಗೋ ಅದು ಬಟಾಬಯಲಾದ ನಂತರ ಮಾನಸಿಕ ಹಿಂಸೆ ಅನುಭವಿಸುವಂಥಾ ಅದೆಷ್ಟೋ ಜನರಿದ್ದಾರೆ. ಅಂಥಾದ್ದೊಂದು ಗುಪ್ತ ಸಮಸ್ಯೆಯಿಂದ ಬಳಲೋ ನಾಯಕನ ಪಡಿಪಾಟಲುಗಳನ್ನು ಎಲ್ಲಿಯೂ ವಲ್ಗರ್ ಅನ್ನಿಸದಂತೆ, ಸಭ್ಯತೆಯ ಗೆರೆ ದಾಟದಂತೆ, ಪ್ರತೀ ಫ್ರೇಮಿನಲ್ಲಿಯೂ ನಗಿಸುವಂತೆ ಕಟ್ಟಿ ಕೊಡುವಲ್ಲಿ ಚಂದ್ರ ಮೋಹನ್ ಗೆದ್ದಿದ್ದಾರಂತೆ. ಚಿತ್ರತಂಡದಲ್ಲಿಯೂ ಆ ಬಗೆಗಿನ ಗಾಢವಾದ ವಿಶ್ವಾಸವಿದೆ. ಈಗಾಗಲೇ ಹೊರ ಬಂದಿರುವ ಟೀಸರ್ ಮತ್ತು ಟ್ರೇಲರ್ ಗಳಲ್ಲಿ ಅದರ ಕುರುಹುಗಳಿವೆ.

    ಉದಯ್ ಮೆಹ್ತಾ ನಿರ್ಮಾಣದ ಚಿತ್ರಗಳೆಂದ ಮೇಲೆ ಅಲ್ಲಿ ಅದ್ಧೂರಿತನದ ಹಾಜರಿ ಇದ್ದೇ ಇರುತ್ತದೆಂಬ ನಂಬಿಕೆ ಪ್ರೇಕ್ಷಕರಲ್ಲಿದೆ. ಬ್ರಹ್ಮಚಾರಿಯನ್ನೂ ಕೂಡಾ ಅವರು ಅಷ್ಟೇ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಹಾಡುಗಳಲ್ಲಿಯೇ ಅದಕ್ಕೆ ಸಾಕ್ಷಿಗಳು ಸಿಗುವಂತಿವೆ. ಟ್ರೇಲರ್ ಮತ್ತು ಟೀಸರ್ ಗಳಲ್ಲಿ ಕಚಗುಳಿ ಇಡುವಂತಾ ಸನ್ನಿವೇಶ, ಡೈಲಾಗುಗಳಿಂದಲೇ ಬ್ರಹ್ಮಚಾರಿ ಲಕಲಕಿಸಿದ್ದಾನೆ. ಹಾಗಂತ ಇದನ್ನೇನು ಡಬಲ್ ಮೀನಿಂಗ್‍ಗಳಿಂದ ತುಂಬಿರೋ ಸಿನಿಮಾ ಅಂದುಕೊಳ್ಳಬೇಕಿಲ್ಲ. ಇದು ಕುಟುಂಬ ಸಮೇತರಾಗಿ ನೋಡಿ ಎಂಜಾಯ್ ಮಾಡುವಂಥಾ ಚಿತ್ರ. ಒಂದೇ ಒಂದು ಮುಜುಗರದ ಸನ್ನಿವೇಶಗಳೂ ಈ ಸಿನಿಮಾದಲ್ಲಿಲ್ಲವಂತೆ. ಅಂತೂ ನೀನಾಸಂ ಸತೀಶ್ ಬ್ರಹ್ಮಚಾರಿಯಾಗಿ ತಮ್ಮ ಗೆಲುವಿನ ಸರಣಿಯನ್ನು ಮುಂದುವರೆಸೋದರಲ್ಲಿ ಯಾವ ಸಂದೇಹವೂ ಇಲ್ಲ.

  • ಹೆಬ್ಬುಲಿಯನ್ನು ಕೊಂದ ಕಥೆ ಹೇಳುತ್ತಲೇ ಬೆವರಾಡಿಸುತ್ತೆ ಚಂಬಲ್!

    ಹೆಬ್ಬುಲಿಯನ್ನು ಕೊಂದ ಕಥೆ ಹೇಳುತ್ತಲೇ ಬೆವರಾಡಿಸುತ್ತೆ ಚಂಬಲ್!

    ಬೆಂಗಳೂರು: ಐಎಎಸ್ ಅಧಿಕಾರಿ ಡಿಕೆ ರವಿ ಸಾವು ಕೊಲೆಯಲ್ಲ ಆತ್ಮಹತ್ಯೆ ಅಂತ ಸರ್ಕಾರಿ ಫರ್ಮಾನು ಹೊರ ಬಿದ್ದು ವರ್ಷಗಳೇ ಕಳೆದಿವೆ. ಆದರೂ ಈ ನೆಲದ ಜನಸಾಮಾನ್ಯರು, ರವಿಯವರನ್ನು ಹತ್ತಿರದಿಂದ ಬಲ್ಲವರು ಮಾತ್ರ ಅದೊಂದು ಆತ್ಮಹತ್ಯೆ ಅನ್ನೋದನ್ನು ಈ ಕ್ಷಣಕ್ಕೂ ಒಪ್ಪಿಕೊಂಡಿಲ್ಲ. ಹೀಗೆ ಜನಸಾಮಾನ್ಯರ ಗುಮಾನಿಗಳಿಗೆ ತಕ್ಕುದಾಗಿಯೇ ಅದ್ಭುತವಾದೊಂದು ಕಥಾನಕ ಹೊಂದಿರೋ ಜೇಕಬ್ ವರ್ಗೀಸ್ ನಿರ್ದೇಶನದ ಚಂಬಲ್ ತೆರೆ ಕಂಡಿದೆ. ಈ ಮೂಲಕವೇ ಸಿನಿಮಾದಾಚೆಗಿನ ಸತ್ಯವೊಂದಕ್ಕೆ ಸೀಮಿತ ಚೌಕಟ್ಟಿನಲ್ಲಿಯೇ ಕನ್ನಡಿ ಹಿಡಿಯೋ ಪರಿಣಾಮಕಾರಿ ಪ್ರಯತ್ನಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ.

    ಆತ ಯಾವ ಊರಿಗೇ ಅಧಿಕಾರಿಯಾಗಿ ಹೋದರೂ ಜನರ ನಡುವೆಯೇ ಬೆರೆತು, ಜನರ ಒಳಿತನ್ನೇ ಉಸಿರಾಡೋ ಅಪರೂಪದ ಅಧಿಕಾರಿ. ಅವರ ಪ್ರಾಮಾಣಿಕತೆಗೆ ಆಯಾ ಭಾಗದ ಸಾಮಾನ್ಯ ಜನರೂ ಬೆರಗಾಗುತ್ತಾರೆ. ಭ್ರಷ್ಟಾಚಾರವನ್ನ ಬುಡ ಸಮೇತ ಕಿತ್ತು ಹಾಕಿ ಜನಸಾಮಾನ್ಯರ ಜೀವನವನ್ನ ಹಸನಾಗಬೇಕೆನ್ನೋದು ಆತನ ಗುರಿ. ಆದರೆ ಅಧಿಕಾರಸ್ಥರು, ಅವರ ಚೇಲಾಗಳು ಈ ಅಧಿಕಾರಿಯ ವಿರುದ್ಧವೇ ಗುರಾಣಿಯ ಗುರಿಯಿಡುತ್ತಾರೆ. ಅದರ ಫಲವಾಗಿ ಪದೇ ಪದೇ ವರ್ಗಾವಣೆಯ ಅಸ್ತ್ರವೂ ಈ ಅಧಿಕಾರಿಯ ಮೇಲೆ ಪ್ರಯೋಗವಾಗುತ್ತಿರುತ್ತೆ.

    ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಈ ಅಧಿಕಾರಿ ಎಲ್ಲಿಗೇ ಹೋದರೂ, ಯಾವ ಇಲಾಖೆಗೇ ವರ್ಗಾವಣೆ ಆದರೂ ಜನಪರತೆಯನ್ನೇ ಉಸಿರಾಡುತ್ತಾನೆ. ಕಡೆಗೂ ಒಂದಿನ ಈತ ರೇಡು ಮಾಡಿದ ದಾಖಲೆಗಳನ್ನು ಕದಿಯಲು ನಡೆಯೋ ಅಧಿಕಾರಸ್ಥರ ಸಾಹಸ, ಅದಕ್ಕೆ ಸಾಥ್ ನೀಡೋ ಕಿರಾತಕರು… ಅಲ್ಲೊಂದು ಭೀಕರ ಕೊಲೆ ಮತ್ತು ಅದನ್ನು ಆತ್ಮಹತ್ಯೆ ಅಂತ ನಿರೂಪಿಸೋ ಸರ್ಕಸ್ಸು…

    ಇದು ಡಿಕೆ ರವಿ ಸಾವಿನ ಸುತ್ತಲಿನ ಕಥೆ ಅನ್ನೋದಕ್ಕೆ ಇದಕ್ಕಿಂತಲೂ ಯಾವ ಪುರಾವೆಯೂ ಬೇಕಿಲ್ಲ. ಜೇಕಬ್ ವರ್ಗೀಸ್ ರವಿ ಸಾವಿನ ಸುತ್ತಲಿನ ಇಂಚಿಂಚು ಮಾಹಿತಿಯನ್ನು ಕಲೆ ಹಾಕಿ ಈ ಕಥೆ ಸಿದ್ಧಪಡಿಸಿದ್ದಾರೆ. ಯಾವ ಅಬ್ಬರವೂ ಇಲ್ಲದೆ ತಣ್ಣಗೆ ನಿರೂಪಿಸಿದ್ದಾರೆ. ನೀನಾಸಂ ಸತೀಶ್ ಅಂತೂ ಡಿ.ಕೆ.ರವಿಯವರನ್ನೇ ಆವಾಹಿಸಿಕೊಂಡು ನಟಿಸಿದ್ದಾರೆ. ಸೋನು ಗೌಡ ಸೇರಿದಂತೆ ಎಲ್ಲ ಪಾತ್ರಗಳೂ ಕಾಡುವಂತೆ ಮೂಡಿ ಬಂದಿವೆ. ಕಡೆಯ ಕೆಲ ಸೀನುಗಳಲ್ಲಂತೂ ಅವರು ನಟನಾಗಿ ವಿಜೃಂಭಿಸಿದ್ದಾರೆ.

    ಒಟ್ಟಾರೆಯಾಗಿ ಒಂದು ಕಹಿ ಸತ್ಯವನ್ನ ಜೇಕಬ್ ಈ ಸಿನಿಮಾ ಮೂಲಕ ಜಾಹೀರು ಮಾಡಿದ್ದಾರೆ. ಈ ಮೂಲಕ ಸಿನಿಮಾ ಮಾಧ್ಯಮದ ಶಕ್ತಿ ಏನೆಂಬುದನ್ನೂ ಜಾಹೀರು ಮಾಡಿದ್ದಾರೆ. ಈ ಕಾರಣದಿಂದಲೇ ಈ ಸಿನಿಮಾ ಜನರಿಗಿಷ್ಟವಾಗೋದರಲ್ಲಿ ಯಾವ ಅನುಮಾನವೂ ಇಲ್ಲ.

    ರೇಟಿಂಗ್: 4/5 

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಂಬಲ್: ಸೋನುಗೆ ಇದೆಂಥಾ ಅನ್ಯಾಯ?!

    ಚಂಬಲ್: ಸೋನುಗೆ ಇದೆಂಥಾ ಅನ್ಯಾಯ?!

    ಬೆಂಗಳೂರು: ಚಂಬಲ್ ಚಿತ್ರದಲ್ಲಿ ನೀನಾಸಂ ಸತೀಶ್ ಜೊತೆ ಸೋನು ಗೌಡ ನಾಯಕಿಯಾಗಿ ನಟಿಸಿರೋದು ಗೊತ್ತೇ ಇದೆ. ತನಗೆ ಸಿಗೋ ಪಾತ್ರಗಳೆಲ್ಲ ಸವಾಲಿನವುಗಳೇ ಆಗಿರಲಿ ಅನ್ನೋ ಮನಸ್ಥಿತಿ ಹೊಂದಿರುವ ಸೋನು ಚಂಬಲ್ ಬಗ್ಗೆ, ತಮ್ಮ ಪಾತ್ರದ ಬಗ್ಗೆ ಮತ್ತು ನಿರ್ದೇಶಕರ ಬಗ್ಗೆ ಒಂದಷ್ಟು ವಿಚಾರಗಳನ್ನ ಹಂಚಿಕೊಂಡಿದ್ದಾರೆ.

    ನಿರ್ದೇಶಕ ಜೇಕಬ್ ವರ್ಗೀಸ್ ಸಿನಿಮಾ ಅಂದ ಮೇಲೆ ವಿಶೇಷವಾಗಿಯೇ ಇರುತ್ತೆ. ಆ ನಂಬಿಕೆ ಹೊಂದಿರೋ ಸೋನುಗೆ ಅವರ ಕಡೆಯಿಂದಲೇ ನಟಿಸೋ ಆಫರ್ ಬಂದಾಗ ಥ್ರಿಲ್ ಆಗಿತ್ತಂತೆ. ಆದರೆ ಕಥೆ ಕೇಳಿದರೂ ಕೂಡಾ ಒಂದಷ್ಟು ವಿಚಾರಗಳ ಜೊತೆಗೆ ಇದು ಯಾವ ಬಗೆಯ ಸಿನಿಮಾ ಅನ್ನೋದೇ ಅರ್ಥ ಆಗಿರಲಿಲ್ಲವಂತೆ.

    ಸೋನು ಗೌಡಗೆ ಚಂಬಲ್ ಚಿತ್ರದ ಅಂತರಾಳ ಅರ್ಥವಾದದ್ದು ಚಿತ್ರೀಕರಣದ ಹಂತದಲ್ಲಿಯೇ. ಈ ಚಿತ್ರದಲ್ಲಿ ಅವರು ಸರಳ ಸಹಜ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕರು ಮೇಕಪ್ಪನ್ನು ಮುಖಕ್ಕೆ ಸೋಕಿಸಲೂ ಬಿಟ್ಟಿಲ್ಲವಂತೆ. ಹಾಗೆ ಮಾಡಿದರೆ ಈ ಪಾತ್ರದ ಸಹಜ ಗ್ಲಾಮರ್ ಗೆ ಘಾಸಿಯಾಗುತ್ತೆ ಅನ್ನೋದು ಜೇಕಬ್ ವರ್ಗೀಸ್ ಕಾಳಜಿಯಾಗಿತ್ತು.

    ಒಟ್ಟಾರೆಯಾಗಿ ಚಂಬಲ್ ಒಂದು ವಿಶೇಷವಾದ ಚಿತ್ರವಾಗಿ ದಾಖಲಾಗೋದರ ಜೊತೆಗೇ ಭಾರೀ ಗೆಲುವನ್ನೂ ತನ್ನದಾಗಿಸಿಕೊಳ್ಳುತ್ತೆ ಅನ್ನೋ ಭರವಸೆ ಸೋನು ಗೌಡ ಅವರಿಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಂಬಲ್ ನಲ್ಲಿ ಹಳ್ಳಿ ಹೈದ ಸತೀಶ ಸಿಗೋದಿಲ್ಲ!

    ಚಂಬಲ್ ನಲ್ಲಿ ಹಳ್ಳಿ ಹೈದ ಸತೀಶ ಸಿಗೋದಿಲ್ಲ!

    ನೀನಾಸಂ ಸತೀಶ್ ಪಾಲಿಗೆ ಅಯೋಗ್ಯ ಚಿತ್ರ ದೊಡ್ಡ ಮಟ್ಟದಲ್ಲಿ ಬ್ರೇಕ್ ನೀಡಿರೋದು ಗೊತ್ತೇ ಇದೆ. ಈ ದೆಸೆಯಿಂದಲೇ ಅವರೀಗ ಬೇರೆ ಭಾಷೆಗಳಲ್ಲಿಯೂ ಮಿಂಚುತ್ತಿದ್ದಾರೆ. ಇಂಥಾದ್ದೊಂದು ಗೆಲುವಿನ ಶಕೆಯನ್ನು ಮುಂದುವರೆಸೋ ಸ್ಪಷ್ಟ ಸೂಚನೆಯೊಂದಿಗೆ ಬಿಡುಗಡೆಯೇ ತಯಾರಾಗಿರೋ ಚಿತ್ರ ಚಂಬಲ್.

    ಈ ಸಿನಿಮಾವನ್ನು ನಿರ್ದೇಶಕ ಜೇಕಬ್ ವರ್ಗೀಸ್ ಎಂದಿನಂತೆಯೇ ವಿಶಿಷ್ಟವಾಗಿ ರೂಪಿಸಿದ್ದಾರೆ. ಇದು ಟ್ರೈಲರ್ ಮೂಲಕವೇ ಸ್ಪಷ್ಟವಾಗಿದೆ. ಈ ಕಾರಣದಿಂದಲೇ ಭಾರೀ ಕುತೂಹಲಕ್ಕೆ ಕಾರಣವಾಗಿರುವ ಚಂಬಲ್ ನೀನಾಸಂ ಸತೀಶ್ ಅವರ ಈವರೆಗಿನ ಚಿತ್ರಗಳಿಗಿಂತ ತುಂಬಾ ಭಿನ್ನವಾದದ್ದು. ಈ ಹಿನ್ನೆಲೆಯಲ್ಲಿ ಚಂಬಲ್ ನೀನಾಸಂ ಸತೀಶ್ ಪಾಲಿಗೆ ಬಹು ಮುಖ್ಯವಾದ ಚಿತ್ರ.

    ಇದುವರೆಗೂ ನೀನಾಸಂ ಸತೀಶ್ ಪ್ರಸಿದ್ಧಿ ಪಡೆದಿದ್ದೇ ಮಂಡ್ಯ ನೆಲದ ಮಣ್ಣಿನ ಘಮಲು ಹೊಂದಿರೋ ಭಾಷಾ ಸೊಗಡಿನಿಂದ. ಆದರೆ ಚಂಬಲ್ ಚಿತ್ರದಲ್ಲಿ ಅವರು ನಿಷ್ಠಾವಂತ ಅಧಿಕಾರಿ. ಅವರ ಭಾಷೆ, ಹಾವಭಾವಗಳೆಲ್ಲವೂ ಚಂಬಲ್ ನಲ್ಲಿ ಬದಲಾಗಿದೆ.

    ಈ ಸಿನಿಮಾ ತನ್ನ ವೃತ್ತಿ ಬದುಕಲ್ಲಿ ತುಂಬಾ ವಿಶಿಷ್ಟವಾಗಿದೆ ಅಂತ ಖುದ್ದು ಸತೀಶ್ ಅವರೇ ಹೇಳಿಕೊಂಡಿದ್ದಾರೆ. ಆರಂಭದಲ್ಲಿ ಚಂಬಲ್ ಆಫರ್ ಬಂದಾಗ ಸತೀಶ್ ಒಪ್ಪಿಕೊಂಡಿದ್ದೇ ಬೆರಗಾಗಿಸುವಂಥಾ ಚಿತ್ರಕಥೆ ನೋಡಿಯಂತೆ. ಚಂಬಲ್ ಚಿತ್ರದಲ್ಲಿ ತನಗೆ ತಾನೇ ಹೊಸಬ ಅನ್ನಿಸುವಂಥಾ ಪಾತ್ರಕ್ಕೆ ಸತೀಶ್ ಜೀವ ತುಂಬಿದ್ದಾರಂತೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗಣಿನಾಡಿನ ಚಿತ್ರಮಂದಿರದಲ್ಲಿ `ಅಯೋಗ್ಯ’ ಚಿತ್ರ ವೀಕ್ಷಿಸಿದ ನಿನಾಸಂ ಸತೀಶ್

    ಗಣಿನಾಡಿನ ಚಿತ್ರಮಂದಿರದಲ್ಲಿ `ಅಯೋಗ್ಯ’ ಚಿತ್ರ ವೀಕ್ಷಿಸಿದ ನಿನಾಸಂ ಸತೀಶ್

    ಬಳ್ಳಾರಿ: ಗಣಿನಾಡು ಬಳ್ಳಾರಿಗೆ ಅಯೋಗ್ಯ ಚಿತ್ರತಂಡ ಭೇಟಿ ನೀಡಿದ್ದು, ಅಲ್ಲಿನ ಉಮಾ ಚಿತ್ರಮಂದಿರದಲ್ಲಿ ಸಿನಿಮಾವನ್ನು ವೀಕ್ಷಣೆ ಮಾಡಿದೆ.

    ಅಯೋಗ್ಯ ಚಿತ್ರ ವೀಕ್ಷಣೆಯ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ನಿನಾಸಂ ಸತೀಶ್ ಅವರು, ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಲ್ಲಾ ಕಡೆಯಿಂದಲೂ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಈ ಗೆಲವು ನನ್ನ ಗೆಲುವಲ್ಲ, ಅಭಿಮಾನಿಗಳ ಗೆಲುವಾಗಿದೆ. ಈ ಭಾಗದಲ್ಲಿ ಕನ್ನಡ ಸಿನಿಮಾಗಳಿಗೆ ಅತಿ ಹೆಚ್ಚು ಪ್ರೋತ್ಸಾಹ ದೊರಕುತ್ತಿದೆ. ಅದು ನನ್ನ ಸಿನಿಮಾವನ್ನು ಇಷ್ಟು ಬೆಂಬಲಿಸಿರುವುದು ನನ್ನ ಹಾಗೂ ನಮ್ಮ ಚಿತ್ರತಂಡದ ಪುಣ್ಯ ಎಂದು ಹೇಳಬಹುದು ಎಂದು ಹೇಳಿದ್ದಾರೆ.

    ನಾವು ಪ್ರಮುಖವಾಗಿ ಬಯಲು ಮುಕ್ತ ಶೌಚಾಲಯದ ದೃಷ್ಠಿಕೋನದಯಡಿಯಲ್ಲಿ ಚಿತ್ರೀಕರಣ ಮಾಡಿದ್ದೇವೆ. ಉತ್ತರ ಕರ್ನಾಟಕ ಭಾಗದಲ್ಲಿ ಬಯಲು ಶೌಚಾಲಯ ಇನ್ನೂ ಸಹ ಇದೆ. ಬಯಲು ಶೌಚಾಲಯಕ್ಕೆ ಹೋದಾಗ ಹಾವು ಕಚ್ಚಿ ಸತ್ತವರ ಸಂಖ್ಯೆ ಹೆಚ್ಚಾಗಿದೆ. ಅಲ್ಲದೇ ರೇಪ್ ಅಟೆಮ್ಟ್ ಕೂಡ ಹೆಚ್ಚು ನಡೆಯುತ್ತಿವೆ. ಈ ಎಲ್ಲಾ ಅವಾಂತರಗಳಿಂದ ತಪ್ಪಿಸುವ ಉದ್ದೇಶವೇ ನಮ್ಮ ಚಿತ್ರದ ಮೂಲ ಮಂತ್ರವಾಗಿದೆ. ಬಳ್ಳಾರಿ ಜನರಿಗೂ ನಮಗೂ ಅವಿನಾಭಾವ ಸಂಬಂಧವಿದೆ. ಮತ್ತೆ ನಾನು ಬಳ್ಳಾರಿಗೆ ಬರುವೆ ಎಂದು ಹೇಳಿದ್ದಾರೆ.

    ಈ ವೇಳೆ ಅಭಿಮಾನಿಗಳು ನಿನಾಸಂ ಸತೀಶ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದರು. ಈ ಚಿತ್ರದಲ್ಲಿ ನಿನಾಸಂ ಸತೀಶ್ ಅವರಿಗೆ ನಟಿ ರಚಿತಾ ರಾಮ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಯೋಗರಾಜ್ ಭಟ್ ಶಿಷ್ಯ ಮಹೇಶ್ ನಿರ್ದೇಶನದ ಮೊದಲ ಸಿನಿಮಾ ಇದಾಗಿದೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv