Tag: Nikil kumaraswamy

  • ನಿಖಿಲ್‍ಗೆ ಮುತ್ತು ನೀಡಿ ಶುಭ ಹಾರೈಸಿದ ವೃದ್ಧೆ

    ನಿಖಿಲ್‍ಗೆ ಮುತ್ತು ನೀಡಿ ಶುಭ ಹಾರೈಸಿದ ವೃದ್ಧೆ

    ಮಂಡ್ಯ: ಮಂಡ್ಯ ಕ್ಷೇತ್ರದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿರುವ ನಿಖಿಲ್ ಕುಮಾರಸ್ವಾಮಿ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಮದ್ದೂರಿನ ಕೆಸ್ತೂರು ಗ್ರಾಮದಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ನಿಖಿಲ್ ಅವರಿಗೆ ವೃದ್ಧೆಯೊಬ್ಬರು ಮುತ್ತು ನೀಡಿ ಶುಭ ಹಾರೈಸಿದ್ದಾರೆ.

    ಮದ್ದೂರಿನ ಹೆಮ್ಮನಹಳ್ಳಿ, ಕದಲೂರು, ಆತಗೂರು ಸೇರಿದಂತೆ ಹಲವು ಗ್ರಾಮದಲ್ಲಿ ಇಂದು ನಿಖಿಲ್ ಹಾಗೂ ಅವರ ಬೆಂಬಲಿಗರು ಜೊತೆಗೂಡಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಹೀಗೆ ಕೆಸ್ತೂರು ಗ್ರಾಮದಲ್ಲಿ ಜನರೊಂದಿಗೆ ನಿಖಿಲ್ ಅವರು ಮಾತನಾಡುತ್ತಿದ್ದ ವೇಳೆ ಅವರ ಬಳಿ ಬಂದ ವೃದ್ಧೆಯೊಬ್ಬರು ಅವರ ಕಿವಿಯಲ್ಲಿ ಶುಭ ಹಾರೈಸಿ ಮುತ್ತು ಕೊಟ್ಟಿದ್ದಾರೆ.

    ಇದಕ್ಕೂ ಮೊದಲು ಹೆಮ್ಮನಹಳ್ಳಿ ಗ್ರಾಮದಿಂದ ನಿಖಿಲ್ ಪ್ರಚಾರ ಆರಂಭಿಸಿದಾಗ ಆತಗೂರು ಗ್ರಾಮದಲ್ಲಿ ಪದ್ಮಮ್ಮ, ತಮ್ಮ ಮಕ್ಕಳಿಗೆ ಕೆಲಸವಿಲ್ಲ ಎಂದು ಕಣ್ಣೀರು ಹಾಕಿದ್ದರು. ಆಗ ನಿಖಿಲ್, ಪದ್ಮಮ್ಮ ಅವರ ಕಣ್ಣೀರು ಒರೆಸಿ ಕೆಲಸ ಕೊಡಿಸುವ ಭರವಸೆ ನೀಡಿದ್ದಾರೆ. ಅಲ್ಲದೆ ನಾನು ನಿಮ್ಮ ಮಗನಿದ್ದಂತೆ, ನಿಮ್ಮ ಮಕ್ಕಳಿಗೂ ಅಣ್ಣ-ತಮ್ಮನಂತೆ ನಾನಿದ್ದೇನೆ. ಉದ್ಯೋಗ ಸೃಷ್ಟಿ ಮಾಡುವ ವಿಷಯದ ಬಗ್ಗೆ ಬಹಳ ಸೂಕ್ಷ್ಮವಾಗಿ ಗಮನಿಸಿ ಮಾಡುತ್ತೇನೆ ಎಂದು ಮಹಿಳೆಯನ್ನು ಸಮಾಧಾನಪಡಿಸಿದ್ದರು. ಅಲ್ಲದೆ ಕೆಸ್ತೂರು ಗ್ರಾಮದಲ್ಲಿ ಪ್ರಚಾರ ಮಾಡುತ್ತಿದ್ದ ವೇಳೆ ನಾನೇನಾದರೂ ಕೆಲಸ ಮಾಡಲಿಲ್ಲ ಅಂದರೆ ಕುತ್ತಿಗೆ ಪಟ್ಟಿ ಹಿಡಿದು ಕೇಳಿ ಎಂದು ಮಹಿಳೆಯೊಬ್ಬರು ತಮ್ಮ ಅಳಲು ತೋಡಿಕೊಂಡ ಸಂದರ್ಭದಲ್ಲಿ ಹೇಳಿದ್ದಾರೆ.

  • ಹೃದಯ ಶಸ್ತ್ರಚಿಕಿತ್ಸೆಗೆ ಸಿಎಂ ನೆರವು – ಬಹಿರಂಗ ಸಭೆಗೆ ರಾಗಿಯ ಹೊರೆ ಹೊತ್ತು ಬಂದ ಬಾಲಕಿ

    ಹೃದಯ ಶಸ್ತ್ರಚಿಕಿತ್ಸೆಗೆ ಸಿಎಂ ನೆರವು – ಬಹಿರಂಗ ಸಭೆಗೆ ರಾಗಿಯ ಹೊರೆ ಹೊತ್ತು ಬಂದ ಬಾಲಕಿ

    ಮಂಡ್ಯ: ತನ್ನ ಹೃದಯ ಚಿಕಿತ್ಸೆಗೆ ಹಣ ಸಹಾಯ ಮಾಡಿದ್ದ ಸಿಎಂ ಕುಮಾರಸ್ವಾಮಿಗೆ ಅಭಿನಂದನೆ ತಿಳಿಸಲು, ಬಾಲಕಿಯೊಬ್ಬಳು ಜೆಡಿಎಸ್ ಬಹಿರಂಗ ಸಭೆಗೆ ರಾಗಿಯ ಹೊರೆ ಹೊತ್ತು ಬಂದು ನೆರೆದವರ ಗಮನ ಸೆಳೆದಿದ್ದಾಳೆ.

    ಹೊಸಕೋಟೆಯ ಹೆಮ್ಮಂಡಳ್ಳಿಯ ನಿವಾಸಿ ಸಂಪಂಗಿ, ಸಂಧ್ಯಾರಾಣಿ ದಂಪತಿ ಪುತ್ರಿ ಮೋನಿಕಾಗೆ ಸಿಎಂ ಹೃದಯ ಶಸ್ತ್ರಚಿಕಿತ್ಸೆಗೆ ಹಣ ನೀಡಿ ಜೀವ ಉಳಿಸಿದ್ದರು. ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ಹೃದಯ ಶಸ್ತ್ರಚಿಕತ್ಸೆ ಮಾಡಿಸಲು ಸಿಎಂ ನೆರವಾಗಿದ್ದರು. ಸಿಎಂ ಮಾಡಿದ ಸಹಾಯದಿಂದ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಬಾಲಕಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು.

    ಇಂದು ಮಂಡ್ಯ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಅವರು ನಾಮಪತ್ರ ಸಲ್ಲಿಸಿದ್ದಾರೆ. ಹಾಗೆಯೇ ಈ ವೇಳೆ ಸಾವಿರಾರು ಜೆಡಿಎಸ್ ಕಾರ್ಯಕರ್ತರು ಹಾಗೂ ಬೆಂಬಲಿಗರು ರ್ಯಾಲಿಯಲ್ಲಿ ಭಾಗಿಯಾಗಿದ್ದರು. ಅಲ್ಲದೆ ಇದೇ ಸಂದರ್ಭದಲ್ಲಿ ಮೋನಿಕಾ ಜೆಡಿಎಸ್ ಚಿಹ್ನೆ ಆಗಿರುವ ತೆನೆ ಹೊತ್ತ ಮಹಿಳೆ ರೀತಿ ಬಂದು ಕುಮಾರಸ್ವಾಮಿ ಅವರಿಗೆ ಧನ್ಯವಾದ ತಿಳಿಸಿದ್ದಾಳೆ.

  • ‘ರಾಜಹುಲಿ, ಐರಾವತ ಬಂದರೂ ಮಂಡ್ಯ ಚಕ್ರವ್ಯೂಹ ಭೇದಿಸೋದು ಅಭಿಮನ್ಯು ನಿಖಿಲ್’

    ‘ರಾಜಹುಲಿ, ಐರಾವತ ಬಂದರೂ ಮಂಡ್ಯ ಚಕ್ರವ್ಯೂಹ ಭೇದಿಸೋದು ಅಭಿಮನ್ಯು ನಿಖಿಲ್’

    – ಸಕ್ಕರೆ ನಾಡಲ್ಲಿ ರಂಗೇರಿದ ಕಣ
    – ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಪೋಸ್ಟ್

    ಬೆಂಗಳೂರು: ರಾಜಹುಲಿ ಬಂದರೂ ಅಷ್ಟೇ, ಐರಾವತ ಬಂದರೂ ಅಷ್ಟೇ, ಮಂಡ್ಯ ಚಕ್ರವ್ಯೂಹ ಭೇದಿಸೋದು ಅಭಿಮನ್ಯು ನಿಖಿಲ್ ಕುಮಾರಸ್ವಾಮಿನೇ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಸ್ಟಾರ್ ವಾರ್ ಶುರುಮಾಡಿದ್ದಾರೆ.

    ಹೌದು, ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದಂತೆ ಸಕ್ಕರೆ ನಾಡಲ್ಲಿ ಚುನಾವಣಾ ಕಣ ರಂಗೇರುತ್ತಿದೆ. ಸುಮಲತಾ, ಯಶ್, ದರ್ಶನ್ ಸುದ್ದಿಗೋಷ್ಠಿ ನಡೆಸಿದ ಬೆನ್ನಲ್ಲೇ ಮಂಡ್ಯದಲ್ಲಿ ಚುನಾವಣಾ ಕಾವು ಹೆಚ್ಚಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ವರ್ಸಸ್ ಸ್ಯಾಂಡಲ್‍ವುಡ್ ಸ್ಟಾರ್ ವಾರ್ ಶುರುವಾಗಿದೆ. ಫೇಸ್‍ಬುಕ್, ಟ್ವಿಟ್ಟರ್ ಸೇರಿದಂತೆ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಪರಸ್ಪರ ಪೋಸ್ಟ್ ಹಾಕುತ್ತ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

    ದರ್ಶನ್ ದೊಡ್ಡ ಮಗ, ಯಶ್ ಚಿಕ್ಕಮಗ ಎಂದಿದ್ದ ಸುಮಲತಾ ಹೇಳಿಕೆಗೆ ಜೆಡಿಎಸ್ ಹಾಗೂ ನಿಖಿಲ್ ಅಭಿಮಾನಿಗಳು ವ್ಯಂಗ್ಯವಾಡಿದ್ದಾರೆ. ದರ್ಶನ್ ದೊಡ್ಡ ಮಗ, ಯಶ್ ಚಿಕ್ಕ ಮಗನಾದರೇ ಅಭಿಷೇಕ್ ಯಾರು ಎಂದು ಪೋಸ್ಟ್ ನಲ್ಲಿ ಪ್ರಶ್ನಿಸಿ ಎಂದು ಟೀಕಿಸುತ್ತಿದ್ದಾರೆ.

    ಜೆಡಿಎಸ್ ಚನ್ನಪಟ್ಟಣ, ನಿಖಿಲ್ ಕುಮಾರಸ್ವಾಮಿ ಎಂಪಿ ಹೀಗೆ ಹಲವು ಫೇಸ್‍ಬುಕ್ ಖಾತೆಯಿಂದ ಸುಮಲತಾ ಅವರ ವಿರುದ್ಧ ಪೋಸ್ಟ್ ಮಾಡಲಾಗುತ್ತಿದೆ. ಮಂಡ್ಯ ಜನರ ಕಷ್ಟಕ್ಕೆ ಬರೋದು ಜೆಡಿಎಸ್ ಹೊರತು ನಟರಲ್ಲ ಎಂಬ ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

  • ಜನರಿಗಾಗಿ ಎರಡನೇ ಜನ್ಮ ಎತ್ತಿ ಬಂದಿದ್ದೇನೆ: ಸಿಎಂ ಕುಮಾರಸ್ವಾಮಿ

    ಜನರಿಗಾಗಿ ಎರಡನೇ ಜನ್ಮ ಎತ್ತಿ ಬಂದಿದ್ದೇನೆ: ಸಿಎಂ ಕುಮಾರಸ್ವಾಮಿ

    ಮಂಡ್ಯ: ಜನರಿಗಾಗಿ ನಾನು ಎರಡನೇ ಜನ್ಮ ಎತ್ತಿ ಬಂದಿದ್ದೇನೆ ಎಂದು ಸಿಎಂ ಕುಮಾರಸ್ವಾಮಿ ಇಂದು ನಡೆದ ಜೆಡಿಎಸ್ ಸಮಾವೇಶದಲ್ಲಿ ಹೇಳಿದ್ದಾರೆ.

    ನಿಖಿಲ್ ಗೌಡ ಮಂಡ್ಯದ ಅಧಿಕೃತ ಅಭ್ಯರ್ಥಿ ಎಂದು ಘೋಷಿಸಲು ಆಯೋಜನೆಗೊಂಡಿದ್ದ ಸಮಾವೇಶದಲ್ಲಿ ಮಾತನಾಡುತ್ತ, ನಾನು ಹುಟ್ಟಿದ್ದು ಹಾಸನದಲ್ಲಿ. ರಾಜಕೀಯವಾಗಿ ನನಗೆ ಜನ್ಮ ಕೊಟ್ಟಿದ್ದು ರಾಮನಗರದ ಜನತೆ. ರಾಜಕೀಯವಾಗಿ ನನ್ನನ್ನು ಹೆಮ್ಮರವಾಗಿ ಬೆಳೆಸಿದ್ದು ಮಂಡ್ಯದ ಜನತೆ. ಈ ಜನತೆಯ ಆಶೀರ್ವಾದದಿಂದ ನಾನು ಸಿಎಂ ಆಗಿದ್ದೇನೆ ಎಂದು ತಿಳಿಸಿದ್ದಾರೆ.

    ಈ ಹಿಂದೆ ಕೂಡ ನಿಮ್ಮ ಬೆಂಬಲದಿಂದಲೇ 2004ರಲ್ಲಿ ಬಿಜೆಪಿ- ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ನಾನು ಸಿಎಂ ಆಗಿದ್ದೆ. ರಾಮನಗರದಲ್ಲಿ ವಿಧಾನಸಭೆ ಚುನಾವಣೆಗೆ ನಾನು ಒಂದು ದಿನ ಮತ ಕೇಳಲು ಹೋಗಿಲ್ಲ. ಅವರೇ ನನ್ನ ಮೇಲೆ ಪ್ರೀತಿ ನಂಬಿಕೆ ಇಟ್ಟು ಗೆಲ್ಲಿಸಿದ್ದಾರೆ. ಮಂಡ್ಯ ಜಿಲ್ಲೆಯ ಋಣವನ್ನು ನಾನು ಹೃದಯದಲ್ಲಿಟ್ಟುಕೊಂಡಿದ್ದೇನೆ. ಅದನ್ನ ಜನ ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ.

    ಬಳಿಕ ನಾನು ಯಾವುದೇ ರಾಜಕೀಯ ಸ್ಥಾನಕ್ಕಾಗಿ ಮಂಡ್ಯಕ್ಕೆ ಬಂದಿಲ್ಲ. ಇಲ್ಲಿನ ಎಲ್ಲಾ ಜನರು ನನ್ನ ತಂದೆ ತಾಯಿಯರು. ಇಲ್ಲಿನ ಪ್ರತಿ ಯುವಕರ ಮನಸ್ಸನ್ನು ಗೆಲ್ಲಬೇಕು ಅಂತ ನಾನು ಇಲ್ಲಿಗೆ ಬಂದಿದ್ದೇನೆ. ನೀವು ನನಗೆ ಬೆಂಬಲಿಸಿದ್ದೀರ. ಜನರಿಗಾಗಿ ನಾನು ಮರು ಜನ್ಮ ಎತ್ತಿ ಬಂದಿದ್ದೇನೆ. ನನಗೆ ಅಧಿಕಾರಿ ನೀಡಿ ನನಗೆ ನೀವು ಮರು ಜನ್ಮ ಕೊಟ್ಟಿದ್ದೀರ. ನನಗೆ ಬೆಂಬಲ ನೀಡಿದಂತೆ ನನ್ನ ಮಗನಿಗೂ ಪ್ರೀತಿ ಬೆಂಬಲ ನೀಡಿ ಎಂದು ಮಂಡ್ಯ ಜನತೆ ಬಳಿ ಮನವಿ ಮಾಡಿಕೊಂಡಿದ್ದಾರೆ.

    ನನ್ನ ಮಗ ನಿಖಿಲ್ ಕುಮಾರಸ್ವಾಮಿಯನ್ನ ಚುನಾವಣೆಗೆ ನಿಲ್ಲಿಸಬೇಕೆಂಬ ಯೋಚನೆಯೇ ನನಗಿರಲಿಲ್ಲ. ರವೀಂದ್ರ ಶ್ರೀಕಂಠಯ್ಯ ಅವರು ನಿಖಿಲ್ ಹೆಸರನ್ನು ಮೊದಲು ಹೇಳಿದ್ದು. ಅವರ ಮಾತು ಕೇಳಿ ನನಗೆ ನಡುಕ ಬಂತು. ಜನರ ಒತ್ತಾಯದ ಮೇಲೆ ನಿಖಿಲ್ ರಾಜಕೀಯಕ್ಕೆ ಕಾಲಿಟ್ಟಿದ್ದಾನೆ. ಜನರ ಸೇವೆ ಮಾಡಲು ಮಂಡ್ಯಕ್ಕೆ ಬಂದಿದ್ದಾನೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ನಾನು ಹಾಸನದಲ್ಲಿ ಹುಟ್ಟಿ ರಾಮನಗರದಲ್ಲಿ ರಾಜಕೀಯ ಮಾಡ್ತಿಲ್ವೇ: ನಿಖಿಲ್ ಸ್ಪರ್ಧೆಗೆ ಸಿಎಂ ಪ್ರಶ್ನೆ

    ನಾನು ಹಾಸನದಲ್ಲಿ ಹುಟ್ಟಿ ರಾಮನಗರದಲ್ಲಿ ರಾಜಕೀಯ ಮಾಡ್ತಿಲ್ವೇ: ನಿಖಿಲ್ ಸ್ಪರ್ಧೆಗೆ ಸಿಎಂ ಪ್ರಶ್ನೆ

    – ನಿಖಿಲ್ ಯಾಕೆ ಮಂಡ್ಯದಲ್ಲಿ ರಾಜಕಾರಣ ಮಾಡಬಾರದು?
    – ಯಡಿಯೂರಪ್ಪ ಮಂಡ್ಯದಲ್ಲಿ ಹುಟ್ಟಿ ಶಿವಮೊಗ್ಗಕ್ಕೆ ಹೋಗಿಲ್ವೇ?

    ಬೆಂಗಳೂರು: ನಾನು ಹಾಸನದಲ್ಲಿ ಹುಟ್ಟಿ ರಾಮನಗರದಲ್ಲಿ ರಾಜಕೀಯ ಮಾಡುತ್ತಿದ್ದೇನೆ. ಹಾಗಾದರೆ ನಿಖಿಲ್ ಯಾಕೆ ಮಂಡ್ಯದಿಂದ ರಾಜಕಾರಣ ಮಾಡಬಾರದು ಎಂದು ಸಿಎಂ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

    ಲೋಕಸಭೆ ಚುನಾವಣೆ ಹಿನ್ನೆಲೆ ಮಂಡ್ಯದಲ್ಲಿ ನಿಖಿಲ್ ಅವರು ಸ್ಪರ್ಧಿಸುವ ಬಗ್ಗೆ ವಿರೋಧ ವ್ಯಕ್ತವಾಗುತ್ತಿದೆ. ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ, ಚುನಾವಣೆ ಅಂದಮೇಲೆ ಎಲ್ಲಾ ಕಡೆ ಪರ ವಿರೋಧ ಇರುತ್ತೆ. ಇವತ್ತು ಎಲ್ಲೋ ಹುಟ್ಟಿ ಎಲ್ಲೋ ಸ್ಪರ್ಧೆ ಮಾಡಿ ಸದಸ್ಯರಾಗಿದ್ದಾರೆ. ಸದಾನಂದಗೌಡ ಮಂಗಳೂರಲ್ಲಿ ಹುಟ್ಟಿ ಬೆಂಗಳೂರು ಉತ್ತರದಲ್ಲಿ ಎಂಪಿ ಆಗಿದ್ದಾರೆ. ಹಾಗೆಯೇ ಯಡಿಯೂರಪ್ಪ ಅವರು ಮಂಡ್ಯದಲ್ಲಿ ಹುಟ್ಟಿ ಶಿವಮೊಗ್ಗದಲ್ಲಿ ರಾಜಕೀಯ ಮಾಡ್ತಿಲ್ವೆ? ನಾನು ಹಾಸನದಲ್ಲಿ ಹುಟ್ಟಿ ರಾಮನಗರದಲ್ಲಿ ರಾಜಕೀಯ ಮಾಡುತ್ತಿಲ್ಲವೇ? ಯಾರು ಎಲ್ಲಿ ಬೇಕಾದರೂ ನಿಲ್ಲಬಹುದು ಎಂದು ಮಂಡ್ಯದಲ್ಲಿ ನಿಖಿಲ್ ಸ್ಪರ್ಧೆಯನ್ನು ವಿರೋಧಿಸುತ್ತಿರುವ ಮಂದಿಗೆ ತಿರುಗೇಟು ನೀಡಿದ್ದಾರೆ.

    ಸದ್ಯ ಮಂಡ್ಯ ಕ್ಷೇತ್ರದಲ್ಲಿ ಏನೇನು ನಡೆಯುತ್ತಿದೆ ಎಂಬುದು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಮಂಡ್ಯ ಜಿಲ್ಲೆಯ ಪ್ರೀತಿ ಅಭಿಮಾನವನ್ನು ದುರುಪಯೋಗ ಪಡಿಸಿಕೊಳ್ಳುವ ಕುಟುಂಬ ನಮ್ಮದಲ್ಲ. ಮಂಡ್ಯ ಜಿಲ್ಲೆಗೂ ನಮ್ಮ ಕುಟುಂಬಕ್ಕೂ ಹಲವು ವರ್ಷಗಳ ಸಂಬಂಧ ಇದೆ. ಯಾರು ಅವರ ನಾಯಕರಾಗಬೇಕು ಎನ್ನುವ ತೀರ್ಮಾನ ಆ ಜಿಲ್ಲೆಯ ಜನರು ಮಾಡ್ತಾರೆ. ಇದನ್ನು ಯಾರೋ ಪಕ್ಷದ ಮುಖಂಡರು ತೀರ್ಮಾನ ಮಾಡುವುದಲ್ಲ. ಜನರ ಮುಂದೆ ಬರುತ್ತೇವೆ. ಜನರು ತೀರ್ಮಾನ ಮಾಡ್ತಾರೆ ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜನರೇ ನಮ್ಮ ತಂದೇ ಮಾಡಿರುವ ಆಸ್ತಿ: ನಿಖಿಲ್ ಕುಮಾರಸ್ವಾಮಿ

    ಜನರೇ ನಮ್ಮ ತಂದೇ ಮಾಡಿರುವ ಆಸ್ತಿ: ನಿಖಿಲ್ ಕುಮಾರಸ್ವಾಮಿ

    ಮಂಡ್ಯ: ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಸಿಎಂ ಕುಮಾರಸ್ವಾಮಿ ಅವರು ನಡೆದ ಹಾದಿಯಲ್ಲೇ ನಾನು ಹೋಗಲು ಇಷ್ಟ ಪಡುತ್ತೇನೆ. ಜನರೇ ನಮ್ಮ ತಂದೆ ಮಾಡಿರುವ ಆಸ್ತಿ ಎಂದು ಜಿಲ್ಲೆಯ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದಲ್ಲಿ ನಟ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

    ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ ನಿಖಿಲ್ ಅವರು ವಿವಾಹಕ್ಕೂ ಮೊದಲು ನಡೆದ ಕಲ್ಯಾಣೋತ್ಸವದಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ನಿಖಿಲ್ ಅವರಿಗೆ ಸಚಿವ ಸಿ.ಎಸ್ ಪುಟ್ಟರಾಜು ಕೂಡ ಸಾಥ್ ನೀಡಿದರು. ಬಳಿಕ ಮಾತನಾಡಿದ ಅವರು, ಜೆಡಿಎಸ್ ಪಕ್ಷದಿಂದ ಎಲ್ಲರ ಅಭಿಪ್ರಾಯ ಪಡೆದುಕೊಂಡು ನನ್ನನ್ನ ಲೋಕಸಭೆ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ. ಜಿಲ್ಲೆಯ ಮೂವರು ಸಚಿವರು, ಶಾಸಕರು ಹಾಗೂ ಜಿಲ್ಲೆಯ ಜನರ ನಾಡಿ ಮಿಡಿತ ಅರಿತು ಹೆಸರು ಘೋಷಣೆ ಮಾಡಿದ್ದಾರೆ. ನಾನು ನಿಮ್ಮ ಗುಲಾಮನಾಗಿ ಕೆಲಸ ಮಾಡ್ತಿನಿ, ಒಂದು ಅವಕಾಶ ಮಾಡಿಕೊಡಿ ಎಂದು ವಿನಂತಿ ಮಾಡಿಕೊಂಡರು.

    ತಾತ ಹಾಗೂ ತಂದೆಯ ಹಾದಿಯಲ್ಲಿ ನಾನು ಸಾಗುತ್ತೇನೆ. ನನ್ನ ತಂದೆ ಆಸ್ತಿ ಅಂತ ಗಳಿಸಿದ್ದು ಜನರನ್ನ. ನೀವೇ ನಮಗೆ ಆಸ್ತಿ. ಜಿಲ್ಲೆಯ ಅಭಿವೃದ್ದಿಗಾಗಿ ಸಿಎಂ 9 ಸಾವಿರ ಕೋಟಿ ರೂ. ಘೋಷಣೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಹೊಸ ಸಕ್ಕರೆ ಕಾರ್ಖಾನೆ ಆರಂಭಿಸಿ ರೈತರಿಗೆ ಅನುಕೂಲ ಮಾಡಿಕೊಡಲು ಮುಂದಾಗಿದ್ದಾರೆ ಎಂದು ತಿಳಿಸಿದರು.

    ಬಳಿಕ ಮಂಡ್ಯ ಕ್ಷೇತ್ರದಲ್ಲಿ ಚುನಾವಣಾ ಅಭ್ಯರ್ಥಿ ವಿಚಾರವಾಗಿ ಚರ್ಚೆಯಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ನಾನು ಯಾರ ಬಗ್ಗೆಯೂ ಟೀಕೆ ಮಾಡುವುದಿಲ್ಲ. ಜಿಲ್ಲೆಯ ಅಭಿವೃದ್ಧಿಯ ನಿಟ್ಟಿನಲ್ಲಿ ಕೆಲಸ ಮಾಡಿಕೊಂಡು ಹೋಗುತ್ತೇನೆ. ಜಿಲ್ಲೆಯ ಜನರು ನಮ್ಮ ತಂದೆಗೆ ಪುನರ್ಜನ್ಮ ನೀಡಿದ್ದಾರೆ. ನಾನು ಜನರ ಪರವಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಸಿಕ್ತು ಹೊಸ ಬಾಡಿಗೆ ಮನೆ!

    ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಸಿಕ್ತು ಹೊಸ ಬಾಡಿಗೆ ಮನೆ!

    ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಟ ನಿಖಿಲ್ ಕುಮಾರಸ್ವಾಮಿ ಸಂಭಾವ್ಯ ಜೆಡಿಎಸ್ ಅಭ್ಯರ್ಥಿಯಾಗಿದ್ದು, ಮಂಡ್ಯದಲ್ಲೇ ಮನೆ ಮಾಡಲು ಯೋಚಿಸಿರುವ ಅವರು, ಜಿಲ್ಲೆಯ ಮರೀಗೌಡ ಬಡಾವನೆಯಲ್ಲಿ ಬಂಗಲೆಯೊಂದನ್ನು ಬಾಡಿಗೆಗೆ ಪಡೆಯಲು ನಿರ್ಧರಿಸಿದ್ದಾರೆ.

    ಮಂಡ್ಯ ಕ್ಷೇತ್ರದಿಂದ ನಿಖಿಲ್ ಅವರೇ ಜೆಡಿಎಸ್‍ನಿಂದ ಚುನಾವಣಾ ಕಣಕ್ಕೆ ಇಳಿಯುವುದು ಬಹುತೇಕ ಖಚಿತವಾಗಿದೆ. ಆದರಿಂದ ಜಿಲ್ಲೆಯ ಪ್ರತಿಷ್ಠಿತ ಬಡಾವಣೆಗಳಾದ ಬಂದೀಗೌಡ ಬಡಾವಣೆ, ಚಾಮುಂಡೇಶ್ವರಿ ನಗರ, ಮರೀಗೌಡ ಬಡಾವಣೆ ಹಾಗೂ ಅಶೋಕ ನಗರದಲ್ಲಿ ನಿಖಿಲ್ ಮನೆ ಹುಡುಕಾಟ ನಡೆಸುತ್ತಿದ್ದರು. ಈ ವೇಳೆ ಮರೀಗೌಡ ಬಡಾವಣೆಯಲ್ಲಿ ಪ್ರತಿಷ್ಠಿತ ಬಂಗಲೆಯೊಂದು ಬಾಡಿಗೆಗೆ ಪಡೆಯಲು ನಿಖಿಲ್ ನಿರ್ಧರಿಸಿದ್ದಾರೆ. ಮಂಡ್ಯ ನಗರಸಭೆ ಮಾಜಿ ಉಪಾಧ್ಯಕ್ಷ ಹಾಗೂ ಜೆಡಿಎಸ್ ಮುಖಂಡ ಚಿಕ್ಕಣ್ಣ ಎಂಬುವವರಿಗೆ ಸೇರಿದ ಮನೆಯನ್ನು ಸದ್ಯಕ್ಕೆ ಬಾಡಿಗೆ ಪಡೆಯಲು ನಿಖಿಲ್ ಚಿಂತಿಸಿದ್ದಾರೆ. ಇದನ್ನೂ ಓದಿ:ಅಂಬಿ ಅದೃಷ್ಟದ ಮನೆಗೆ ಶೀಘ್ರವೇ ಸುಮಲತಾ ಶಿಫ್ಟ್!

    ನಾಲ್ಕು ಬೆಡ್ ರೂಂ, ವಿಶಾಲವಾದ ದೇವರಮನೆ ಹಾಗೂ ವಾಸ್ತು ಪ್ರಕಾರ ಮನೆ ನಿರ್ಮಾಣವಾಗಿದ್ದು, ನಿಖಿಲ್ ರಾಜಕೀಯ ಚುಟುವಟಿಕೆಗೆ ಅನುಕೂಲವಾಗಲೆಂದು ಮನೆ ಬಾಡಿಗೆ ಪಡೆಯಲು ನಿರ್ಧರಿಸಿದ್ದಾರೆ. ಅಲ್ಲದೆ ಶೀಘ್ರದಲ್ಲೇ ಸ್ವಂತ ಮನೆ ಕಟ್ಟಲು ಕೂಡ ನಿಖಿಲ್ ತಯಾರಿ ನಡೆಸುತ್ತಿದ್ದಾರೆ ಎಂಬ ಮಾಹಿತಿ ದೊರಕಿದೆ. ಇದನ್ನೂ ಓದಿ:ಮಂಡ್ಯದಿಂದ ಸ್ಪರ್ಧೆ ಖಚಿತ: ಸುಮಲತಾ ಅಂಬರೀಶ್

    ಐದು ಎಕರೆ ಜಮೀನು ಖರೀದಿಸಿ ಅಲ್ಲಿಯೂ ತೋಟ, ಮನೆ ನಿರ್ಮಿಸಲು ಈಗಾಗಲೇ ನಿಖಿಲ್ ಪ್ಲಾನ್ ಮಾಡಿದ್ದಾರೆ. ರಾಜಕೀಯ, ಸಿನಿಮಾ ಜೊತೆಗೆ ಕೃಷಿಯಲ್ಲೂ ತೊಡಗಿಸಿಕೊಳ್ಳಲು ನಿಖಿಲ್ ಚಿಂತನೆ ನಡೆಸಿದ್ದಾರೆ. ಮಂಡ್ಯದಲ್ಲಿ ಸ್ವಂತ ಜಮೀನು, ಮನೆ ಮಾಡದಿದ್ದರೆ ಚುನಾವಣೆ ನಂತರ ನಿಖಿಲ್ ಮಂಡ್ಯಕ್ಕೆ ಬರಲ್ಲ ಎಂಬ ತಪ್ಪು ಸಂದೇಶ ರವಾನೆಯಾಗುತ್ತದೆ. ಇದು ಮತಗಳಿಕೆ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ. ಹೀಗಾಗಿ ಸ್ವಂತ ಕೃಷಿ ಜಮೀನು, ಮನೆ ನಿರ್ಮಿಸಿ ಮಂಡ್ಯ ಜನರನ್ನು ಭಾವನಾತ್ಮಕವಾಗಿ ಸೆಳೆಯಲು ನಿಖಿಲ್ ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.

    ನಿಖಿಲ್‍ಗೆ ಎದುರಾಳಿಯಾಗಿ ಸುಮಲತಾ ಅಂಬರೀಶ್ ಸ್ಪರ್ಧೆ ಮಾಡೋದು ಬಹುತೇಕ ಖಚಿತವಾಗಿದ್ದು, ಈಗಾಗಲೇ ಸುಮಲತಾ ಅವರು ಕೂಡ ಮಂಡ್ಯದ ಮಂಜುನಾಥ ನಗರದಲ್ಲಿರುವ ಸೈಟ್‍ನಲ್ಲಿ ಸ್ವಂತ ಮನೆ ಕಟ್ಟುವುದಾಗಿ ತಿಳಿಸಿದ್ದಾರೆ. ಇದರಿಂದ ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ದಿನದಿಂದ ದಿನಕ್ಕೆ ಮಂಡ್ಯ ಲೋಕಸಭಾ ಕ್ಷೇತ್ರ ರಂಗೇರುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಗನ ಒಳಿತಿಗಾಗಿ ಒಂದು ಕಾಲು ರೂಪಾಯಿ ಹರಕೆ ಹೊತ್ತ ಅನಿತಾ ಕುಮಾರಸ್ವಾಮಿ!

    ಮಗನ ಒಳಿತಿಗಾಗಿ ಒಂದು ಕಾಲು ರೂಪಾಯಿ ಹರಕೆ ಹೊತ್ತ ಅನಿತಾ ಕುಮಾರಸ್ವಾಮಿ!

    ಮಂಡ್ಯ: ನಟ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಮಂಡ್ಯ ಲೋಕಸಭಾ ಅಖಾಡಕ್ಕೆ ಇಳಿಯುವುದು ಬಹುತೇಕ ಖಚಿತವಾಗಿದ್ದು, ಒಂದೆಡೆ ನಿಖಿಲ್ ಸ್ಪರ್ಧಿಸುವ ಸುಳಿವು ನೀಡಿದ್ರೆ, ಮತ್ತೊಂದೆಡೆ ನಿಖಿಲ್ ತಾಯಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಮಗನ ರಾಜಕೀಯ ಭವಿಷ್ಯದ ಒಳಿತಿಗೆ ಹರಕೆ ಹೊತ್ತಿದ್ದಾರೆ.

    ನಿಖಿಲ್ ತಾಯಿ ಹಾಗೂ ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ, ಮದ್ದೂರಿನ ಹೊಳೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಭೇಟಿ ಕೊಟ್ಟು ಪುತ್ರನಿಗಾಗಿ ಒಂದು ಕಾಲು ರೂಪಾಯಿ ಹರಕೆ ಹೊತ್ತಿದ್ದಾರೆ. ಒಂದು ಕಾಲು ರೂಪಾಯಿ ಹರಕೆ ಹೊತ್ತರೆ, ಇಷ್ಠಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಹೊಳೆ ಆಂಜನೇಯಸ್ವಾಮಿ ದೇವಾಲಯದಲ್ಲಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅನಿತಾ ಕುಮಾರಸ್ವಾಮಿ, ನಾನು ನನ್ನ ಮಗನಿಗೆ ಒಳ್ಳೆಯದಾಗಲಿ ಎಂದು ಪೂಜೆ ಸಲ್ಲಿಸಿದ್ದೇನೆ ಅಂತಿದ್ದಾರೆ. ಇದೇ ವೇಳೆ ಮಂಡ್ಯದಿಂದ ಸುಮಲತಾ ಸ್ಪರ್ಧೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿ, ಆ ಬಗ್ಗೆ ನಾನೇನು ಮಾತನಾಡಲ್ಲ. ಆದರೆ ಮಂಡ್ಯ ಜೆಡಿಎಸ್ ಬೆಲ್ಟ್ ಎನ್ನುವ ಮೂಲಕ ತಮ್ಮ ಮಗನ ಸ್ಪರ್ಧೆ ಬಗ್ಗೆಯೂ ಸುಳಿವು ಬಿಟ್ಟುಕೊಟ್ಟಿದ್ದಾರೆ.

    ಜೆಡಿಎಸ್ ಹಾಗೂ ಕಾಂಗ್ರೆಸ್‍ನ ಮೈತ್ರಿ ಕೂಟದ ಅಭ್ಯರ್ಥಿಯಾಗಿ ನಿಖಿಲ್ ಕುಮಾರ್ ಸ್ಪರ್ಧೆ ಬಹುತೇಕ ಖಚಿತವಾಗಿದೆ ಅನ್ನೋ ಚರ್ಚೆ ಮಂಡ್ಯ ಜಿಲ್ಲೆಯಲ್ಲಿ ಜೋರಾಗಿರುವಾಗಲೇ ತಾಯಿ ಅನಿತಾ ಕುಮಾರಸ್ವಾಮಿ ಮಗನ ಶ್ರೇಯೋಭಿವೃದ್ಧಿಗಾಗಿ ದೇವರಲ್ಲಿ ಹರಕೆ ಹೊತ್ತಿದ್ದಾರೆ. ಇತ್ತ ನಿಖಿಲ್ ಕೂಡ ತಮ್ಮ ಸ್ಪರ್ಧೆ ಬಗ್ಗೆ ಮಾತನಾಡುತ್ತ, ಜಿಲ್ಲೆಯ ಜನರ ಭಾವನೆಗಳನ್ನು ಅರ್ಥೈಸಿಕೊಂಡು ನಮ್ಮ ಪಕ್ಷದ ನಾಯಕರು ತೀರ್ಮಾನ ಕೈಗೊಳ್ತಾರೆ ಅಂತಿದ್ದಾರೆ. ಈ ಮೂಲಕ ಈಗಾಗಲೇ ನಿಖಿಲ್ ಸ್ಪರ್ಧೆಗೆ ಒತ್ತಡ ಹೇರುತ್ತಿರುವ ಮುಖಂಡರ ಮನವಿಗೆ ಪಕ್ಷ ಸ್ಪಂದಿಸುತ್ತದೆ ಎಂಬುದನ್ನು ಪರೋಕ್ಷವಾಗಿ ಹೇಳಿದ್ದು, ತಮ್ಮ ಸ್ಪರ್ಧೆಯ ಬಗ್ಗೆ ಖಚಿತ ಪಡಿಸಿದ್ದಾರೆ.

    ಸಕ್ಕರೆ ನಾಡಲ್ಲಿ ಲೋಕಸಭಾ ಚುನಾವಣಾ ಕಣ ರಂಗೇರಿದ್ದು, ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಕೂಟದಿಂದ ನಿಖಿಲ್ ಕುಮಾರ್ ಹಾಗೂ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಷ್ ಸ್ಪರ್ಧೆ ಬಹುತೇಕ ಖಚಿತವಾಗಿದೆ ಎಂಬ ಚರ್ಚೆ ಜಿಲ್ಲೆಯಾದ್ಯಂತ ಜೋರಾಗಿ ಶುರುವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv