Tag: Nikil kumaraswamy

  • ಪ್ರಚಾರದ ವೇಳೆ ‘ಗೋ ಬ್ಯಾಕ್ ನಿಖಿಲ್’ ಘೋಷಣೆ ಕೂಗಿದ ಡಿ ಬಾಸ್ ಅಭಿಮಾನಿಗಳು

    ಪ್ರಚಾರದ ವೇಳೆ ‘ಗೋ ಬ್ಯಾಕ್ ನಿಖಿಲ್’ ಘೋಷಣೆ ಕೂಗಿದ ಡಿ ಬಾಸ್ ಅಭಿಮಾನಿಗಳು

    ಮೈಸೂರು: ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಈ ವೇಳೆ ದರ್ಶನ್ ಅಭಿಮಾನಿಗಳು ಡಿ ಬಾಸ್ ಎಂದು ಹೇಳಿ ಗೋ ಬ್ಯಾಕ್ ನಿಖಿಲ್ ಎಂದು ಘೋಷಣೆ ಕೂಗಿದ್ದಾರೆ.

    ಮೈಸೂರು ಜಿಲ್ಲೆಯ ಕೆ.ಆರ್ ನಗರ ತಾಲೂಕಿನ ಕೆಸ್ತೂರು ಕೊಪ್ಪಲು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಂದು ಕೊಪ್ಪಲು ಗ್ರಾಮಕ್ಕೆ ಬಂದು ಪ್ರಚಾರ ನಡೆಸುತ್ತಿದ್ದ ವೇಳೆ ನಿಖಿಲ್ ವಿರುದ್ಧ ಡಿ ಬಾಸ್ ಅಭಿಮಾನಿಗಳು ಸಿಡಿದೆದ್ದಿದ್ದರು. ಈ ವೇಳೆ ನಿಖಿಲ್ ಜೊತೆ ಇದ್ದ ಸಚಿವ ಸಾ.ರಾ ಮಹೇಶ್ ಅವರು ಘೋಷಣೆ ಕೂಗುತ್ತಿದ್ದವರ ಮೇಲೆ ಕ್ರಮ ತಗೆದುಕೊಳ್ಳಿ ಎಂದು ಪೊಲೀಸರಿಗೆ ಸೂಚನೆ ನೀಡಿದರು.

    ಬಳಿಕ ನಿಖಿಲ್ ವಾಹನದ ಹಿಂದೆ ನಿಂತು ಘೋಷಣೆ ಕೂಗುತ್ತಿದ್ದ ಯುವಕರನ್ನ ಪೊಲೀಸರು ಚದುರಿಸಿದ್ದಾರೆ. ಆಗ ದರ್ಶನ್ ಹಾಗೂ ನಿಖಿಲ್ ಅಭಿಮಾನಿಗಳು ಪರ ವಿರೋಧ ಘೋಷಣೆ ಕೂಗಿದ್ದಾರೆ. ಈ ವೇಳೆ, ಯಾರೋ ಒಂದಿಬ್ಬರು ಆ ರೀತಿ ಕೂಗಿದ್ರೆ ಏನಾಗಲ್ಲ ಬಿಡಿ ಅಣ್ಣ. ಇದೇ ತಿಂಗಳ 18 ರಂದು ತೋರಿಸುತ್ತಿರಲ್ಲ. ಗೊತ್ತಾಗುತ್ತೆ ಎಂದು ಹೇಳಿ ತಮ್ಮ ಪ್ರಚಾರ ಕಾರ್ಯವನ್ನು ನಿಖಿಲ್ ಅವರು ಮುಂದುವರಿಸಿದರು.

  • ಕೈ ಅತೃಪ್ತ ನಾಯಕರ ವಿರುದ್ಧ ಸಿಎಂ ಕೆಂಡಾಮಂಡಲ

    ಕೈ ಅತೃಪ್ತ ನಾಯಕರ ವಿರುದ್ಧ ಸಿಎಂ ಕೆಂಡಾಮಂಡಲ

    ಮಂಡ್ಯ: ನಿಖಿಲ್ ಕುಮಾರಸ್ವಾಮಿಯನ್ನು ಸೋಲಿಸಿ, ಸರ್ಕಾರ ಬೀಳಿಸಲು ಹೊರಟಿದ್ದಾರೆ ಸಿಎಂ ಕುಮಾರಸ್ವಾಮಿ ಕೈ ಅತೃಪ್ತ ನಾಯಕರ ವಿರುದ್ಧ ಕಿಡಿ ಕಾರಿದ್ದಾರೆ.

    ಪುತ್ರನ ಪರ ಪ್ರಚಾರದ ವೇಳೆ ಮಾತನಾಡಿದ ಅವರು, ಇಲ್ಲಿ ನಮ್ಮನ್ನು ಸೋಲಿಸಿ, ರಾಜ್ಯದಲ್ಲಿರುವ ಮೈತ್ರಿ ಸರ್ಕಾರವನ್ನು ಬೀಳಿಸಲು ಹೊರಟಿದ್ದಾರೆ. ಸುಮಲತಾ ಅಂಬರೀಶ್ ಅವರ ಜೊತೆಗೆ ಸೇರಿಕೊಂಡು ನನ್ನನ್ನು ಮುಗಿಸಲು ಹೊರಟಿದ್ದಾರೆ. ಅವರು ನಮ್ಮ ಜೊತೆಗೆ ಇದ್ದು ನಮ್ಮಲ್ಲೇ ಬೆಳದಂತವರು. ಈಗ ನಮ್ಮ ವಿರುದ್ಧವೇ ತಿರುಗಿ ಬಿದ್ದಿದ್ದಾರೆ ಎಂದು ಹೆಸರು ಪ್ರಸ್ತಾಪ ಮಾಡದೇ ಸ್ಥಳೀಯ ಕಾಂಗ್ರೆಸ್ಸಿನ ರೆಬೆಲ್ ನಾಯಕರ ವಿರುದ್ಧ ಸಿಎಂ ಕಿಡಿಕಾರಿದರು.

    ಕಾಂಗ್ರೆಸ್ ಮುಖಂಡ ರಮೇಶ್ ಬಂಡಿಸಿದ್ದೇಗೌಡ, ಚಲುವರಾಯಸ್ವಾಮಿ, ನರೇಂದ್ರ ಸ್ವಾಮಿ ಈ ಹಿಂದೆ ಕುಮಾರಸ್ವಾಮಿ ಜೊತೆಯಲ್ಲೇ ಕೆಲಸ ಮಾಡಿದ್ದಾರೆ. ಈಗ ಸಿಎಂ ಪುತ್ರ ಚುನಾವಣೆಗೆ ನಿಂತಿದ್ದರೂ ಈ ನಾಯಕರು ಪ್ರಚಾರಕ್ಕೆ ಈವರೆಗೂ ಬಂದಿಲ್ಲ. ಈ ವಿಚಾರವನ್ನು ಮುಂದಿಟ್ಟುಕೊಂಡು ಸಿಎಂ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

  • ಸುಮಲತಾಗೆ ಮೋದಿ ಬೆಂಬಲ- ನಿಷ್ಠೆ ಬದಲಿಸಿ ನಿಖಿಲ್ ಪರ ನಿಂತ್ರು ದರ್ಶನ್ ಫ್ಯಾನ್ಸ್

    ಸುಮಲತಾಗೆ ಮೋದಿ ಬೆಂಬಲ- ನಿಷ್ಠೆ ಬದಲಿಸಿ ನಿಖಿಲ್ ಪರ ನಿಂತ್ರು ದರ್ಶನ್ ಫ್ಯಾನ್ಸ್

    -ತೆನೆಯ ಹೊರೆ ಹೊತ್ತ ಡಿ ಫ್ಯಾನ್ಸ್

    ಮಂಡ್ಯ: ಪ್ರಧಾನಿ ನರೇಂದ್ರ ಮೋದಿ ಅವರು ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಂತೆ ದರ್ಶನ್ ಅಭಿಮಾನಿಗಳು ನಿಷ್ಠೆ ಬದಲಿಸಿದ್ದು, ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಬೆಂಬಲಿಸಲು ನಿರ್ಧರಿಸಿದ್ದಾರೆ.

    ಹೌದು, ಕಳೆದೊಂದು ವಾರದ ಹಿಂದೆ ದರ್ಶನ್ ಜೊತೆ ಇದ್ದ ಗಿರೀಶ್ ಎಂಬ ಅಭಿಮಾನಿ ಹಾಗೂ ಇನ್ನೂ ಒಂದೂವರೆ ಸಾವಿರ ಯುವಕರು ಜೆಡಿಎಸ್‍ಗೆ ಬೆಂಬಲಿಸಲು ಮುಂದಾಗಿದ್ದಾರೆ. ನಿಖಿಲ್ ಗೆದ್ದರೆ ಜಿಲ್ಲೆಯಲ್ಲಿ ಅಭಿವೃದ್ಧಿ ಆಗಲಿದೆ. ಅವರ ತಂದೆ ಸಿಎಂ ಆಗಿರುವುದರಿಂದ ಅಭಿವೃದ್ಧಿ ಕಾರ್ಯ ಜಿಲ್ಲೆಯಲ್ಲಿ ನಡೆಯುತ್ತದೆ. ಅಲ್ಲದೆ ಜಿಲ್ಲೆಯಲ್ಲಿ ಕಾವೇರಿ ನದಿಯಲ್ಲಿ ಡಿಸ್ನಿ ಲ್ಯಾಂಡ್ ಯೋಜನೆ ಕಾರ್ಯರೂಪಕ್ಕೆ ಬಂದರೆ ಈ ಭಾಗದ ಜನರಿಗೆ ಉದ್ಯೋಗ ಅವಕಾಶ ದೊರಕಲಿದೆ. ಆದರಿಂದ ನಾವು ನಿಖಿಲ್ ಪರ ಪ್ರಚಾರಕ್ಕೆ ಮುಂದಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.

    ಇನ್ನೊಂದೆಡೆ ಮೋದಿ ಹಾಗೂ ಬಿಜೆಪಿ ಸುಮಲತಾರಿಗೆ ಬೆಂಬಲ ನೀಡುತ್ತಿರುವುದಕ್ಕೆ ಅಲ್ಪಸಂಖ್ಯಾತರು ಮತ ಕೂಡ ಪಕ್ಷೇತರ ಅಭ್ಯರ್ಥಿ ಕೈತಪ್ಪುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಅವರು ಅಲ್ಪಸಂಖ್ಯಾತರನ್ನು ಕಡೆಗಣಿಸುತ್ತ ಬಂದಿದ್ದಾರೆ. ನಮ್ಮನ್ನು ಟಾರ್ಗೆಟ್ ಮಾಡಿ ಆರೋಪಗಳನ್ನು ಮಾಡುತ್ತಾರೆ. ಧರ್ಮದ ಆಧಾರದ ಮೇಲೆ ರಾಜಕೀಯ ಮಾಡುತ್ತಾರೆ. ಈಗ ಸುಮಲತಾರಿಗೆ ಬಿಜೆಪಿ ಬೆಂಬಲ ನೀಡುತ್ತಿದೆ. ಪರೋಕ್ಷವಾಗಿ ಸುಮಲತಾ ಅವರು ಬಿಜೆಪಿ ಪರ ಇದ್ದಾರೆ ಎನ್ನುವುದನ್ನು ಇದು ತೋರಿಸುತ್ತದೆ. ಆದರಿಂದ ನಾವು ಸುಮಲತಾರಿಗೆ ಬೆಂಬಲ ನೀಡಲ್ಲ ಎಂದು ಅಲ್ಪಸಂಖ್ಯಾತರು ಆರೋಪಿಸಿದ್ದಾರೆ.

  • ಪಕ್ಷಪಾತ ಆರೋಪ – ಮಂಡ್ಯ ಜಿಲ್ಲಾಧಿಕಾರಿ ಎತ್ತಂಗಡಿ

    ಪಕ್ಷಪಾತ ಆರೋಪ – ಮಂಡ್ಯ ಜಿಲ್ಲಾಧಿಕಾರಿ ಎತ್ತಂಗಡಿ

    ಬೆಂಗಳೂರು: ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ವಿಚಾರದಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಮಂಡ್ಯ ಜಿಲ್ಲಾಧಿಕಾರಿ ಮಂಜುಶ್ರೀ ಅವರ ತಲೆದಂಡವಾಗಿದೆ. ಮಂಜುಶ್ರೀ ಅವರನ್ನು ಚುನಾವಣಾ ಆಯೋಗ ವರ್ಗಾವಣೆ ಮಾಡಿದ್ದು, ನೂತನ ಜಿಲ್ಲಾಧಿಕಾರಿಯಾಗಿ ಪಿ.ಸಿ ಜಾಫರ್ ನೇಮಕವಾಗಿದ್ದಾರೆ.

    ಮಂಡ್ಯ ಡಿಸಿಯಾಗಿದ್ದ ಮಂಜುಶ್ರೀ ವಿರುದ್ಧ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ನಿಖಿಲ್ ಕುಮಾರಸ್ವಾಮಿ ಅವರ ನಾಮಪತ್ರ ಸಲ್ಲಿಕೆಯಲ್ಲಿ ವೇಳೆ ವಿಡಿಯೋ ದೃಶ್ಯ ನೀಡಿಲ್ಲ. ಅಷ್ಟೇ ಅಲ್ಲದೇ ಪಕ್ಷಪಾತ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸುಮಲತಾ ಅವರು ಆಯೋಗಕ್ಕೆ ದೂರು ನೀಡಿದ್ದರು.

    ಸುಮಲತಾ ಅವರ ದೂರನ್ನು ಗಂಭೀರವಾಗಿ ಪರಿಗಣಿಸಿದ ಚುನಾವಣಾ ಆಯೋಗ ಡಿಸಿ ಮಂಜುಶ್ರೀ ಅವರನ್ನು ವರ್ಗಾವಣೆ ಮಾಡಿ ಬಿಸಿ ಮುಟ್ಟಿಸಿದೆ.

    ಸುಮಲತಾ ಆರೋಪ ಏನಿತ್ತು?
    ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಸಲ್ಲಿಸಿದ ಫಾರ್ಮ್ ನಂಬರ್ 26ನಲ್ಲಿ ಸಂಪೂರ್ಣ ಮಾಹಿತಿ ನೀಡಿಲ್ಲ. ಚರಾಸ್ತಿ ಹಾಗೂ ಸ್ಥಿರಾಸ್ತಿಯ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ. ಹೀಗಾಗಿ ನಿಖಿಲ್ ಕುಮಾರಸ್ವಾಮಿ ಅವರ ನಾಮಪತ್ರವನ್ನು ತಿರಸ್ಕರಿಸಬೇಕೆಂದು ಸುಮಲತಾ ಅವರ ಚುನಾವಣಾ ಏಜೆಂಟ್ ಮದನ್ ಕುಮಾರ್ ಮನವಿ ಮಾಡಿದ್ದರು.

    ನಮ್ಮ ಮನವಿ ಸಲ್ಲಿಸಿದಾಗ ಆಕ್ಷೇಪಣಾ ಅರ್ಜಿ ಸಲ್ಲಿಸಿಲ್ಲ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದರು. ಇದರಿಂದಾಗಿ ನಾಮಪತ್ರ ಪರಿಶೀಲನೆಯ ದೃಶ್ಯವನ್ನು ಸೆರೆ ಹಿಡಿದ ದೃಶ್ಯವನ್ನು ನೀಡುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿಸಿ, ವಿಡಿಯೋ ಕ್ಯಾಮೆರಾಮನ್ ಯಾವುದೋ ಮದುವೆ ಕಾರ್ಯಕ್ಕೆ ಕಳಿಸಿದ್ದೇವೆ. ಹೀಗಾಗಿ ವಿಡಿಯೋ ಫುಟೇಜ್ ನೀಡಲು ಎರಡ್ಮೂರು ದಿನ ಸಮಯ ಬೇಕಾಗುತ್ತದೆ ಅಂತ ಹೇಳಿದ್ದರು. ಆದರೆ ಮರುದಿನವೇ ನಮಗೆ ಅರ್ಧ ವಿಡಿಯೋ ಮಾತ್ರ ಕೊಟ್ಟರು. ಅದರಲ್ಲಿ ನಾನು ಆಕ್ಷೇಪ ವ್ಯಕ್ತಪಡಿಸಿದ ದೃಶ್ಯವನ್ನೇ ಕತ್ತರಿಸಲಾಗಿತ್ತು. ಇದರಿಂದಾಗಿ ಸಂಪೂರ್ಣ ವಿಡಿಯೋ ನೀಡುವಂತೆ ಕೇಳಿದಾಗ, ವಿಡಿಯೋಗ್ರಾಫರ್ ಟ್ಯಾಂಪರ್ ಮಾಡಿದ್ದಾನೆ ಎಂಬ ಸಂಶಯ ಬರುತ್ತಿದೆ. ಈ ಸಂಬಂಧ ಆತನ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು ಎಂದು ಮದನ್ ಈ ಹಿಂದೆ ಮಾಧ್ಯಮಗಳಿಗೆ ತಿಳಿಸಿದ್ದರು. ಈ ಎಲ್ಲ ವಿಚಾರಗಳನ್ನು ಪ್ರಸ್ತಾಪಿಸಿ ಸುಮಲತಾ ಅವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.

  • ನಿಖಿಲ್‍ಗೆ ಇನ್ನೂ ವಯಸ್ಸಿದೆ, ಅತಿರೇಕದ ವರ್ತನೆ ಸರಿಯಲ್ಲ: ಸುಮಲತಾ

    ನಿಖಿಲ್‍ಗೆ ಇನ್ನೂ ವಯಸ್ಸಿದೆ, ಅತಿರೇಕದ ವರ್ತನೆ ಸರಿಯಲ್ಲ: ಸುಮಲತಾ

    ಮಂಡ್ಯ: ನಟ ಯಶ್ ಬಗ್ಗೆ ನಿಖಿಲ್ ಕುಮಾರಸ್ವಾಮಿ ಅವರು ಆಡಿದ ಮಾತಿಗೆ ಸುಮಲತಾ ಅಂಬರೀಶ್ ಆಕ್ರೋಶ ವ್ಯಕ್ತಪಡಿಸಿದ್ದು, ನಿಖಿಲ್‍ಗೆ ಇನ್ನೂ ವಯಸ್ಸಿದೆ. ಅವರ ಅತಿರೇಕದ ವರ್ತನೆ ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಿಖಿಲ್ ಕುಮಾರಸ್ವಾಮಿ ಕೂಡ ಫಿಲಂ ಇಂಡಸ್ಟ್ರಿಯಲ್ಲಿದ್ದಾರೆ. ಅದೇ ಇಂಡಸ್ಟ್ರಿಯಲ್ಲಿ ಬೆಳೆದಿರೊ ಒಬ್ಬ ನಟನ ಬಗ್ಗೆ ಮಾತಾಡೋದು ಸರಿಯಲ್ಲ. ಹಿರಿಯ ನಟರಿಗೆ ಕಿಂಚಿತ್ತೂ ಗೌರವ ನೀಡದೆ ಮಾತನಾಡಿರುವುದು ಅವರ ಅಹಂಕಾರವನ್ನ ಸೂಚಿಸುತ್ತದೆ. ವೈಯಕ್ತಿಕ ಟೀಕೆ ಬೇಕಾಗಿರಲಿಲ್ಲ. ಹೀಗೆ ನಾವು ಅವರ ಬಗ್ಗೆ ಮಾತನಾಡೋಕೆ ಹೊರಟರೆ ಏನಾಗಬಹುದು. ಅವರಿಗೆ ಇನ್ನೂ ವಯಸ್ಸಿದೆ, ಅತಿರೇಕದ ವರ್ತನೆ ಸರಿಯಲ್ಲ ಎಂದು ಗರಂ ಆದ್ರು.

    ಇಂದು ಶ್ರೀರಂಗಪಟ್ಟಣದ ಕಾಳೇನಹಳ್ಳಿಯಲ್ಲಿ ಸುಮಲತಾ ಅವರು ಪ್ರಚಾರ ನಡೆಸುತ್ತಿದ್ದು, ಜನರ ಬಳಿ ತಮಿಳಿನಲ್ಲೂ ಮಾತನಾಡಿ ಪ್ರಚಾರ ಮಾಡಿದರು. ಇಂದು ಮಧ್ಯಾಹ್ನದ ತನಕ ಶ್ರೀರಂಗಪಟ್ಟಣದಲ್ಲಿ ಪ್ರಚಾರ ಮಾಡ್ತೀವಿ. ಬಳಿಕ ಮಧ್ಯಾಹ್ನದ ಮೇಲೆ ಪಾಂಡವಪುರದಲ್ಲಿ ಪ್ರಚಾರ ಮಾಡ್ತೀವಿ. ಪಾಂಡವಪುರದಲ್ಲಿ ನಟ ದರ್ಶನ್ ಪ್ರಚಾರಕ್ಕೆ ಸೇರಿಕೊಳ್ಳುತ್ತಾರೆ ಎಂದು ತಿಳಿಸಿದರು.

    ಬಳಿಕ ಟಿಎಂ ಹೊಸೂರಿನಲ್ಲಿ ಪ್ರಚಾರ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿ, ಸಂದೇಶ ಹೋಗ್ಬೇಕಾಗಿದೆ, ಅವರನ್ನ ನಾನು ಬ್ಲೇಮ್ ಮಾಡೋದಿಲ್ಲ. ಅವರಿಗೆ ಏನ್ ಕಷ್ಟ ಇತ್ತೊ ಏನೊ ಎಂದು ತಮ್ಮ ಪ್ರತಿ ಸ್ಪರ್ಧಿ ಟಿಎಂ ಹೊಸೂರಿನ ಸುಮಲತಾ ಅವರ ಬಗ್ಗೆ ಮಾತನಾಡಿದರು.

    ನಿಖಿಲ್ ಹೇಳಿದ್ದೇನು?
    ಪಾಪ ಏಸಿಯಲ್ಲಿ ಕುಳಿತುಕೊಂಡು ಛತ್ರಿ ಹಿಡ್ಕೊಂಡು ಓಡಾಡುವವರಿಗೆ ಬಿಸಿಲಿನಲ್ಲಿ ಓಡಾಡೋದು ಕಷ್ಟ ಆಗ್ತಿರಬಹುದೆಂದು ಕುಮಾರಣ್ಣ ಹೇಳಿದ್ದರು. ಅದಕ್ಕೆ ಯಶ್, ದರ್ಶನ್ ಹಾಗೂ ಸುಮಲತಾ ಅವರು ಪ್ರತಿಕ್ರಿಯೆ ನೀಡಿದ್ದರು. ಈ ಬಗ್ಗೆ ಒಂದು ಮಾತು ಹೇಳೋಕೆ ಇಷ್ಟಪಡುತ್ತೀನಿ, ದೊಡ್ಡ ಮನುಷ್ಯ ಮಹಾನುಭಾವ ನಮ್ಮ ತಾತ ದೇವೇಗೌಡರು ಪ್ರಧಾನಿಯಾದಾಗ ನಾವು ಕತ್ರಿಗುಪ್ಪೆಯಲ್ಲಿ ಬಾಡಿಗೆ ಮನೆಯಲ್ಲಿದ್ದವರು. ಆಗ ನಮ್ಮ ತಾಯಿ 5 ಸಾವಿರ ರೂಪಾಯಿನಲ್ಲಿ ಮನೆ ನಿಭಾಯಿಸುತ್ತಿದ್ದರು. ಆದರೆ ಇವತ್ತು ಬಾಡಿಗೆ ಕೊಡದೇ ಇದ್ದವರು ಇಷ್ಟೆಲ್ಲಾ ಮಾತನಾಡುತ್ತಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಯ ಹಿರಿಮಗನೋ ಕಿರಿ ಮಗನೋ ಗೊತ್ತಿಲ್ಲ. ಬಾಡಿಗೆ ಮನೆಯವರಿಗೆ ಬಾಡಿಗೆ ಕೊಡದೇ ಇದ್ದವರು ಇವತ್ತು ನನ್ನ ಯೋಗ್ಯತೆ ಬಗ್ಗೆ ಮಾತನಾಡ್ತಾರೆ ಎಂದು ಬಹಿರಂಗವಾಗಿ ಯಶ್‍ಗೆ ನಿಖಿಲ್ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದರು.

  • ಸುಮಲತಾ ಬರುತ್ತಿದ್ದ ದಾರಿಯಲ್ಲಿದ್ದ ಜೆಡಿಎಸ್ ಕಾರ್ಯಕರ್ತರನ್ನು ಕೂಡಿಹಾಕಿದ ಪೊಲೀಸರು!

    ಸುಮಲತಾ ಬರುತ್ತಿದ್ದ ದಾರಿಯಲ್ಲಿದ್ದ ಜೆಡಿಎಸ್ ಕಾರ್ಯಕರ್ತರನ್ನು ಕೂಡಿಹಾಕಿದ ಪೊಲೀಸರು!

    ಮಂಡ್ಯ: ಮಂಡ್ಯ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಇಂದು ನಾಗಮಂಗಲ ತಾಲೂಕಿನಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಹೀಗಾಗಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು, ಪೊಲೀಸರು ಸುಮಲತಾ ಅವರು ಬರುವ ದಾರಿಯಲ್ಲಿದ್ದ ಜೆಡಿಎಸ್ ಕಾರ್ಯಕರ್ತರನ್ನು ಸ್ವಲ್ಪ ಹೊತ್ತು ಕೂಡಿ ಹಾಕಿದ್ದರು.

    ನಾಗಮಂಗಲದ ಚಾಮಲಾಪುರ ಗ್ರಾಮದಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಪ್ರಚಾರ ನಡೆಸುತ್ತಿದ್ದ ಹಿನ್ನೆಲೆ ಈ ಗ್ರಾಮದಲ್ಲಿ ಜೆಡಿಎಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಇದೇ ವೇಳೆ ಸುಮಲತಾ ಅವರು ಕೂಡ ಚಾಮಲಾಪುರ ಮಾರ್ಗವಾಗಿ ಬೆಳ್ಳೂರು ಕಡೆಗೆ ಹೋಗುತ್ತಿದ್ದರು. ಹೀಗಾಗಿ ಮುಂಜಾಗೃತೆ ಕ್ರಮವಾಗಿ ಚಾಮಲಾಪುರ ಗ್ರಾಮದಲ್ಲಿದ್ದ ಜೆಡಿಎಸ್ ಕಾರ್ಯಕರ್ತರನ್ನು ಬಂಗಲೆಯೊಂದರ ಕಾಂಪೌಂಡ್‍ನಲ್ಲಿ ಪೊಲೀಸರು ಕೂಡಿ ಹಾಕಿದ್ದರು.

    ಬೆಳ್ಳೂರು ಗ್ರಾಮ ಅತಿಸೂಕ್ಷ್ಮ ಪ್ರದೇಶ ಆಗಿರುವುದರಿಂದ ಇಬ್ಬರು ಅಭ್ಯರ್ಥಿಗಳು ಮುಖಾಮುಖಿಯಾದಾಗ ಯಾವುದೇ ಸಮಸ್ಯೆ ಆಗಬಾರದೆಂದು, ಗ್ರಾಮದಲ್ಲಿ ರಸ್ತೆ ಬದಿಯಲ್ಲಿ ಭಾರೀ ಪೊಲೀಸ್ ಭದ್ರತೆಯನ್ನು ನಿಯೋಜನೆ ಮಾಡಲಾಗಿತ್ತು. ಸುಮಾರು ಒಂದು ಕಿಲೋಮೀಟರ್ ರಸ್ತೆಯುದ್ದಕ್ಕೂ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು. ಅಲ್ಲದೆ ಸುಮಲತಾ ಅವರು ಹೋಗುವಾಗ ವಿರೋಧವಾಗಿ ಜೈಕಾರ ಕೂಗದಂತೆ ಜೆಡಿಎಸ್ ಕಾರ್ಯಕರ್ತರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದರು.

    ಸುಮಲತಾ ಅವರು ಚಾಮಲಾಪುರ ಮಾರ್ಗದಲ್ಲಿ ತೆರಳುತ್ತಿದ್ದ ಹಿನ್ನೆಲೆಯಲ್ಲಿ ಇದೇ ಸ್ಥಳದಲ್ಲಿದ್ದ ನಿಖಿಲ್ ಕುಮಾರಸ್ವಾಮಿ ಅವರನ್ನು ಕೂಡ ಐದು ನಿಮಿಷ ಗೇಟಿನಲ್ಲೇ ಪೊಲೀಸರು ತಡೆಹಿಡಿದಿದ್ದರು. ಈ ವೇಳೆ ಪೊಲೀಸರನ್ನು ಜೆಡಿಎಸ್ ಶಾಸಕ ಸುರೇಶ್ ಗೌಡ ತರಾಟೆಗೆ ತೆಗೆದುಕೊಂಡ ಬಳಿಕ ನಿಖಿಲ್ ಅವರ ವಾಹನವನ್ನು ಪೊಲೀಸರು ಬಿಟ್ಟು ಕಳುಹಿಸಿದರು.

  • ಬಾಡಿಗೆ ಕೊಡದೇ ಇದ್ದವರು ನನ್ನ ಯೋಗ್ಯತೆ ಬಗ್ಗೆ ಮಾತನಾಡ್ತಾರೆ: ಯಶ್‍ಗೆ ನಿಖಿಲ್ ಟಾಂಗ್

    ಬಾಡಿಗೆ ಕೊಡದೇ ಇದ್ದವರು ನನ್ನ ಯೋಗ್ಯತೆ ಬಗ್ಗೆ ಮಾತನಾಡ್ತಾರೆ: ಯಶ್‍ಗೆ ನಿಖಿಲ್ ಟಾಂಗ್

    ಮಂಡ್ಯ: ಬಾಡಿಗೆ ಮನೆಯಲ್ಲಿದ್ದಾಗ ಬಾಡಿಗೆ ಕೊಡದೆ ಇದ್ದವರು ಇವತ್ತು ಇಷ್ಟೆಲ್ಲಾ ಮಾತನಾಡ್ತಾರೆ. ನನ್ನ ಯೋಗ್ಯತೆ ಬಗ್ಗೆ ಮಾತನಾಡ್ತಾರೆ ಎಂದು ರಾಕಿಂಗ್ ಸ್ಟಾರ್ ಯಶ್‍ಗೆ ನಿಖಿಲ್ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.

    ನಾಗಮಂಗಲದ ಬೈರಸಂದ್ರದಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ಯಶ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಬಿಜೆಪಿ ಬೆಂಬಲಿತ ಅಭ್ಯರ್ಥಿಯ ಹಿರಿಮಗನೋ ಕಿರಿ ಮಗನೋ ಗೊತ್ತಿಲ್ಲ. ಬಾಡಿಗೆ ಮನೆಯವರಿಗೆ ಬಾಡಿಗೆ ಕೊಡದೇ ಇದ್ದವರು ಇವತ್ತು ನನ್ನ ಯೋಗ್ಯತೆ ಬಗ್ಗೆ ಮಾತನಾಡ್ತಾರೆ ಎಂದು ಬಹಿರಂಗವಾಗಿ ಯಶ್‍ಗೆ ಟಾಂಗ್ ಕೊಟ್ಟರು.

    ಪಾಪ ಎಸಿಯಲ್ಲಿ ಕುಳಿತುಕೊಂಡು ಛತ್ರಿ ಹಿಡ್ಕೊಂಡು ಓಡಾಡುವವರಿಗೆ ಬಿಸಿಲಿನಲ್ಲಿ ಓಡಾಡೋದು ಕಷ್ಟ ಆಗ್ತಿರಬಹುದೆಂದು ಕುಮಾರಣ್ಣ ಹೇಳಿದ್ದರು. ಅದಕ್ಕೆ ಯಶ್, ದರ್ಶನ್ ಹಾಗೂ ಸುಮಲತಾ ಅವರು ಪ್ರತಿಕ್ರಿಯೆ ನೀಡಿದ್ದರು. ಈ ಬಗ್ಗೆ ಒಂದು ಮಾತು ಹೇಳೋಕೆ ಇಷ್ಟಪಡುತ್ತೀನಿ, ದೊಡ್ಡ ಮನುಷ್ಯ ಮಹಾನುಭಾವ ನಮ್ಮ ತಾತ ದೇವೇಗೌಡರು ಪ್ರಧಾನಿಯಾದಾಗ ನಾವು ಕತ್ರಿಗುಪ್ಪೆಯಲ್ಲಿ ಬಾಡಿಗೆ ಮನೆಯಲ್ಲಿದ್ದವರು. ಆಗ ನಮ್ಮ ತಾಯಿ 5 ಸಾವಿರ ರೂಪಾಯಿನಲ್ಲಿ ಮನೆ ನಿಭಾಯಿಸುತ್ತಿದ್ದರು. ಆದರೆ ಇವತ್ತು ಬಾಡಿಗೆ ಕೊಡದೇ ಇದ್ದವರು ಇಷ್ಟೆಲ್ಲಾ ಮಾತನಾಡುತ್ತಾರೆ. ನೀವು ನಮ್ಮ ತಂದೆ ತಾಯಾಂದಿರು. ನನ್ನ ತಂದೆ ಹಾಗೂ ತಾತನಿಗೆ ಹೃದಯದಲ್ಲಿ ಸ್ಥಾನ ಕೊಟ್ಟಿದ್ದೀರ. ಹಾಗೆಯೇ ನನಗೂ ಕೊಡುತ್ತೀರ ಅಂತ ಬಂದಿದ್ದೀನಿ ಎಂದು ಪ್ರಚಾರ ಮುಂದುವರಿಸಿದರು.

  • ನಿಖಿಲ್ ಸೋಲಿಸಿ, ನನ್ನನ್ನು ಮುಗಿಸಲು ಎಲ್ಲಾ ಪ್ರಯತ್ನ ನಡೆದಿದೆ: ಸಿಎಂ

    ನಿಖಿಲ್ ಸೋಲಿಸಿ, ನನ್ನನ್ನು ಮುಗಿಸಲು ಎಲ್ಲಾ ಪ್ರಯತ್ನ ನಡೆದಿದೆ: ಸಿಎಂ

    ಉಡುಪಿ: ಮಂಡ್ಯ ಲೋಕಸಭಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಲೇ ಇದೆ. ಈ ನಡುವೆ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯನ್ನು ಸೋಲಿಸಿ ನನ್ನನ್ನು ಮುಗಿಸಲು ಪ್ರಯತ್ನ ನಡೆಯುತ್ತಿದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

    ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಂಡ್ಯದಲ್ಲಿ ನನ್ನನ್ನು ಮುಗಿಸಲು ಪ್ರಯತ್ನ ನಡೆಯುತ್ತಿದೆ. ನಾನು ಮಂಡ್ಯಕ್ಕೆ ಹೋಗಿ 6 ದಿನ ಆಯ್ತು ಅಷ್ಟೇ. ಅಲ್ಲಿ ಜೆಡಿಎಸ್ ಕುತಂತ್ರ ಮಾಡುತ್ತಿಲ್ಲ. ಕುತಂತ್ರ ಮಾಡುತ್ತಿರುವವರು ನಮ್ಮ ವಿರೋಧಿಗಳು. ಮಂಡ್ಯದಲ್ಲಿ ಸ್ಟ್ರಾಟಜಿ ಮಾಡಿ ಚುನಾವಣೆ ಮಾಡುವ ಅಗತ್ಯ ಇಲ್ಲ. ಮಂಡ್ಯ ಜಿಲ್ಲೆ ನಮ್ಮ ಹೃದಯ ಇದ್ದಂತೆ. ಅಲ್ಲಿನ ನಾಡಿಮಿಡಿತ ನಮಗೆ ಗೊತ್ತಿದೆ. ಯಾರ ಡ್ರಾಮಾನೂ ಮಂಡ್ಯದಲ್ಲಿ ನಡೆಯುವುದಿಲ್ಲ. ರೈತರು ಸತ್ತಾಗ ಯಾರೂ ಬಂದಿಲ್ಲ. ಕಂಪೌಂಡ್ ಕಟ್ಟಿಸಿದ ಮಾತ್ರಕ್ಕೆ ಅದು ಅಭಿವೃದ್ಧಿ ಆಗಲ್ಲ ಎಂದು ಸುಮಲತಾ ಅಂಬರೀಶ್‍ಗೆ ಸಿಎಂ ಟಾಂಗ್ ನೀಡಿದ್ದಾರೆ.

    ಬಳಿಕ ಮಂಡ್ಯದಲ್ಲಿ ನಾನು ನಮ್ಮ ಜೆಡಿಎಸ್ ಕಾರ್ಯಕರ್ತರ ಮೇಲೆ ಡಿಪೆಂಡ್ ಆಗಿದ್ದೇನೆ. ಯಾರ್ ಯಾರು ಏನೇನ್ ಮಾಡ್ತಾರೆ ಗೊತ್ತಿದೆ. ಮೂರು ತಿಂಗಳ ಹಿಂದೆಯಿಂದ ಎಲ್ಲವೂ ನಡೆಯುತ್ತಿದೆ. ಅಂಬರೀಶ್ ದೇಹಕ್ಕೆ ಅಗ್ನಿ ಸ್ಪರ್ಶ ಆದಕೂಡಲೇ ರಾಜಕೀಯ ಆರಂಭವಾಗಿದೆ. ಮಂಡ್ಯದಲ್ಲಿ ಜೆಡಿಎಸ್ ನಿರ್ನಾಮ ಮಾಡಲು ಎಲ್ಲರೂ ಹೊರಟಿದ್ದಾರೆ. ನಾನು ಚೆಲುವರಾಯ ಸ್ವಾಮಿ ಬಗ್ಗೆ ಮಾತೇ ಆಡಿಲ್ಲ. ಬೆನ್ನಿಗೆ ಚೂರಿ ಹಾಕುವವರ ಬಗ್ಗೆ ಮಾತನಾಡಿದ್ದೆ. ನಾನು ಚೆಲುವರಾಯಸ್ವಾಮಿ ಬೆನ್ನಿಗೆ ಚೂರಿ ಹಾಕುತ್ತಾರೆ ಅಂದಿಲ್ಲ ಎಂದು ಸಿಎಂ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.

  • ಬೆಂಗ್ಳೂರಿನ ಕುಡಿಯುವ ನೀರನ್ನು ಮಗನಿಗಾಗಿ ಮಂಡ್ಯಕ್ಕೆ ಧಾರೆಯೆರೆದ ಸಿಎಂ!

    ಬೆಂಗ್ಳೂರಿನ ಕುಡಿಯುವ ನೀರನ್ನು ಮಗನಿಗಾಗಿ ಮಂಡ್ಯಕ್ಕೆ ಧಾರೆಯೆರೆದ ಸಿಎಂ!

    ಬೆಂಗಳೂರು: ಈ ಬೇಸಿಗೆಯಲ್ಲಿ ಸಿಲಿಕಾನ್ ಸಿಟಿ ಮಂದಿಗೆ ಕಾವೇರಿ ನೀರು ಸಿಗಲ್ಲ. ಹನಿ ಹನಿ ನೀರಿಗೂ ತತ್ವಾರ ಬರಲಿದ್ದು, ಬೆಂಗಳೂರಿಗೆ ಬರುವ ಕಾವೇರಿ ಈ ಬಾರಿ ಫುಲ್ ಟೈಂ ಮಂಡ್ಯಗೆ ಮೀಸಲಾಗಿದ್ದಾಳೆ.

    ಹೌದು, ಮಂಡ್ಯ ಕ್ಷೇತ್ರದಲ್ಲಿ ಸಿಎಂ ಕುಮಾರಸ್ವಾಮಿ ಪುತ್ರ ಹಾಗೂ ಸುಮಲತಾ ಅಂಬರೀಶ್ ಮುಖಾಮುಖಿ ಆಗಿರುವುದು ಈಗ ಬೆಂಗಳೂರಿಗೆ ಮಹಾನ್ ಕಂಟಕ ತಂದೊಡ್ಡಿದೆ. ಮಂಡ್ಯವ್ಯೂಹ ಭೇದಿಸಲು, ಮಗನ ಗೆಲುವಿಗಾಗಿ ಪಣ ತೊಟ್ಟಿರುವ ಸಿಎಂ ಕುಡಿಯೋದಕ್ಕೆಂದು ಬೆಂಗಳೂರಿಗೆ ಮೀಸಲಾಗಿಟ್ಟ ನೀರನ್ನು ಕೂಡ ಮಂಡ್ಯದ ಜನರ ಕೃಷಿ ಹಾಗೂ ಕುಡಿಯಲು ಕಾಲುವೆಗೆ ಹರಿಸಲು ಸೂಚನೆ ಕೊಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಸಾಮಾನ್ಯವಾಗಿ ಬೇಸಿಗೆ ಬಂದರೆ ಮಂಡ್ಯ ಭಾಗದಲ್ಲಿ ಕೃಷಿಗೆ ನೀರನ್ನು ಕಡಿಮೆ ಪ್ರಮಾಣದಲ್ಲಿ ಬಿಡಲಾಗುತ್ತದೆ. ಯಾಕೆಂದರೆ ಮೈಸೂರು-ಬೆಂಗಳೂರು ಸೇರಿದಂತೆ ಒಟ್ಟು 13 ಟಿಎಂಸಿ ನೀರು ಕುಡಿಯೋದಕ್ಕೆ ಬೇಕಾಗುತ್ತದೆ. ಆದ್ದರಿಂದ ಸರ್ಕಾರವೇ ಭತ್ತ ಬೆಳೆಯಬೇಡಿ ಎಂದು ಮಂಡ್ಯದ ರೈತರಿಗೆ ಸೂಚನೆ ಕೊಡುತ್ತದೆ. ಆದ್ರೆ ಈ ಬಾರಿ ಮಾತ್ರ ದಿನದ 24 ಗಂಟೆಯೂ ಮಂಡ್ಯ ಕಾಲುವೆಯಲ್ಲಿ ಭರಪೂರ ನೀರು ಹರಿಯುತ್ತದೆ. ಬೆಂಗಳೂರಿಗೆ ಬಿಡುತ್ತಿದ್ದ ನೀರನ್ನು ಮಂಡ್ಯಕ್ಕೆ ಬಿಡಲು ಸಿಎಂ ಜಲಮಂಡಳಿಗೆ ಸೂಚಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಸಿಎಂ ಅವರ ಈ ನಿರ್ಧಾರದಿಂದ ಜಲಮಂಡಳಿ, ಜಲತಜ್ಞರು ಕಂಗಾಲಾಗಿದ್ದಾರೆ. ಅಲ್ಲದೆ 13 ಟಿಎಂಸಿ ಕುಡಿಯೋದಕ್ಕೆ ಬೇಕಾಗುತ್ತದೆ, ಕೃಷಿ ಉದ್ದೇಶಕ್ಕೆ ಕಡಿಮೆ ನೀರು ಬಿಡಿ ಎಂದು ಮುಖ್ಯಕಾರ್ಯದರ್ಶಿಗಳಿಗೆ ಸಭೆಯಲ್ಲಿ ಸೂಕ್ಷ್ಮವಾಗಿ ತಿಳಿಸಿದ್ದಾರೆ. ಇದರ ಜೊತೆಗೆ ಈ ಬಾರಿ ಮುಂಗಾರು ವಿಳಂಬವಾಗಲಿದ್ದು ಜುಲೈವರೆಗೂ ಒಳಹರಿವು ಇಲ್ಲದೆ ಇರೋದು ಇನ್ನೊಂದು ಟೆನ್ಶನ್‍ಗೆ ಕಾರಣವಾಗಿದೆ. ಆದ್ರೆ ಸಿಎಂ ಇದನ್ನೆಲ್ಲ ಕಿವಿಗೆ ಹಾಕಿಕೊಳ್ಳುವ ಗೋಜಿಗೆ ಹೋಗೋದು ಅನುಮಾನವಾಗಿರೋದ್ರಿಂದ ಸಿಎಂ ಪುತ್ರ ವಾತ್ಸಲ್ಯಕ್ಕೆ ಈ ಬಾರಿ ಬೆಂಗಳೂರಿಗರಿಗೆ ನೀರಿನ ಸಮಸ್ಯೆ ಫಿಕ್ಸ್ ಆಗುವ ಎಲ್ಲಾ ಲಕ್ಷಣಗಳು ಕಾಣಸಿಗುತ್ತಿದೆ.

  • ರಾಜ್ಯದಲ್ಲಿ ಡಾ.ರಾಜ್ ಹೆಸರು ಹೇಗೆ ಶಕ್ತಿಯೋ ಹಾಗೆ ದೇಶಕ್ಕೆ ಮೋದಿ ಶಕ್ತಿ: ತಾರಾ

    ರಾಜ್ಯದಲ್ಲಿ ಡಾ.ರಾಜ್ ಹೆಸರು ಹೇಗೆ ಶಕ್ತಿಯೋ ಹಾಗೆ ದೇಶಕ್ಕೆ ಮೋದಿ ಶಕ್ತಿ: ತಾರಾ

    ಹಾಸನ: ಕರ್ನಾಟಕದಲ್ಲಿ ಕನ್ನಡ ಭಾಷೆಗಾಗಿ ನಟ ಡಾ.ರಾಜ್‍ಕುಮಾರ್ ಹೇಗೆ ಜನರನ್ನು ಒಗ್ಗೂಡಿಸಿ ಶಕ್ತಿಯಾಗಿ ನಿಂತಿದ್ದರೋ, ಹಾಗೇ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಮುನ್ನಡೆಸುವ ಶಕ್ತಿಯಾಗಿ ನಿಂತಿದ್ದಾರೆ ಎಂದು ನಟಿ ಹಾಗೂ ಬಿಜೆಪಿ ನಾಯಕಿ ತಾರಾ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದು ದೇಶದ ಚುನಾವಣೆ, ಮೋದಿ ಅವರ ಮರು ಆಯ್ಕೆಯನ್ನು ಅನೇಕರು ಬಯಸಿದ್ದಾರೆ. ಮೋದಿ ಅಲೆ ಕಡಿಮೆಯಾಗಿದೆ ಎನ್ನುವುದು ಸುಳ್ಳು. 2014ರಲ್ಲಿದ್ದ ಅಲೆಗಿಂತ ಈ ಬಾರಿ ದೇಶದಲ್ಲಿ ಮೋದಿ ಪರ ಹೆಚ್ಚು ಬೆಂಬಲ ವ್ಯಕ್ತವಾಗುತ್ತಿದೆ. ಕರ್ನಾಟಕದಲ್ಲಿ ಡಾ.ರಾಜ್ ಹೆಸರು ಹೇಗೆ ಶಕ್ತಿಯೋ, ಹಾಗೆ ದೇಶದಲ್ಲಿ ಮೋದಿ ಅವರು ಒಂದು ಶಕ್ತಿ. ಮೋದಿ ಹೆಸರಲ್ಲೇ ಮೋಡಿ ಇದೆ. ಹೀಗಾಗಿ ನಾವು ಮೋದಿ ಹೆಸರನ್ನು ಎಲ್ಲೆಡೆ ಚಲಾವಣೆ ಮಾಡುತ್ತಿದ್ದೇವೆ. ಮೋದಿ ಅವರು ಪ್ರಧಾನಿಯಾದ ಮೇಲೆ ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶ ಬಹಳಷ್ಟು ಮುಂದೆ ಬಂದಿದೆ. ಜಗತ್ತಿನಲ್ಲಿರುವ ಪ್ರಭಾವಿ ಪ್ರಧಾನಿಗಳ ಪಟ್ಟಿಯಲ್ಲಿ ಮೋದಿ ಅವರೇ ಮೊದಲ ಸ್ಥಾನ ಪಡೆದಿದ್ದಾರೆ ಎಂದು ಪ್ರಧಾನಿಯ ನಾಮ ಬಲ ಗುಣಗಾನ ಮಾಡಿದರು.

    ದೇಶದ ಸರ್ವಾಂಗೀಣ ಅಭಿವೃದ್ಧಿಗೆ 5 ವರ್ಷ ಸಾಲದು, ಮತ್ತೈದು ವರ್ಷ ಬೇಕು. ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು ಎಂದರು. ಬಳಿಕ ಅನಂತ್‍ಕುಮಾರ್ ಪತ್ನಿ ತೇಜಸ್ವಿನಿ ಅವರಿಗೆ ಬೆಂಗಳೂರು ದಕ್ಷಿಣದಿಂದ ಟಿಕೆಟ್ ಕೈ ತಪ್ಪಿರುವುದಕ್ಕೆ ನಾನು ಪ್ರತಿಕ್ರಿಯಿಸಲ್ಲ ಅಂತ ಹೇಳಿದರು. ಹಾಗೆಯೇ ರಾಜ್ಯದಲ್ಲಿ ಯಡಿಯೂರಪ್ಪ ಅವರು ಮತ್ತೆ ಸಿಎಂ ಆಗುವುದು ನನಗೂ ಖುಷಿ ವಿಷಯ ಎಂದು ಅಭಿಪ್ರಾಯ ತಿಳಿಸಿದರು.

    ಸದ್ಯ ನಾನು ಅರಕಲಗೂಡು, ಹಳೇ ಮೈಸೂರಲ್ಲಿ ಬಿಜೆಪಿ ಅಭ್ಯರ್ಥಿ ಎ.ಮಂಜು ಪರ ಪ್ರಚಾರ ಮಾಡಲಿದ್ದೇನೆ. ಹಾಸನದಲ್ಲಿ ಈ ಬಾರಿ ಬದಲಾವಣೆಯ ಗಾಳಿ ಬೀಸಲಿದೆ. ನಮ್ಮ ವರಿಷ್ಠರು ಸೂಚನೆ ಕೊಟ್ಟರೆ ಮಂಡ್ಯದಲ್ಲಿ ಸುಮಲತಾ ಪರ ಪ್ರಚಾರ ಮಾಡುವೆ. ಸುಮಲತಾ, ನಿಖಿಲ್ ಇಬ್ಬರೂ ಸಿನಿಮಾ ಕ್ಷೇತ್ರದವರೇ ಆಗಿದ್ದಾರೆ. ಆದರೆ ನನ್ನ ಪಕ್ಷ ಯಾರ ಪರ ಪ್ರಚಾರ ಮಾಡಿ ಎಂದು ಸೂಚನೆ ನೀಡುತ್ತದೋ ಹಾಗೆ ಮಾಡುತ್ತೇನೆ ಎಂದು ಹೇಳಿದರು.