Tag: nidasheshi lake

  • ಕುಷ್ಟಗಿ ಪೊಲೀಸ್ರಿಂದ ನಿಡಶೇಷಿ ಕೆರೆಗೆ ಕಾಯಕಲ್ಪ- ಸಿಪಿಐ ಸುರೇಶ್ ತಳವಾರ್ ಪಬ್ಲಿಕ್ ಹೀರೋ

    ಕುಷ್ಟಗಿ ಪೊಲೀಸ್ರಿಂದ ನಿಡಶೇಷಿ ಕೆರೆಗೆ ಕಾಯಕಲ್ಪ- ಸಿಪಿಐ ಸುರೇಶ್ ತಳವಾರ್ ಪಬ್ಲಿಕ್ ಹೀರೋ

    ಕೊಪ್ಪಳ: ಜಿಲ್ಲೆಯ ಕುಷ್ಟಗಿಯ ಸಿಪಿಐ ಸುರೇಶ್ ತಳವಾರ್ ಅವರು 327 ಎಕರೆಯ ನಿಡಶೇಷಿ ಕೆರೆಗೆ ಕಾರ್ಯಕಲ್ಪ ನೀಡುವ ಮೂಲಕ ಪಬ್ಲಿಕ್ ಹೀರೋ ಎನಿಸಿಕೊಂಡಿದ್ದಾರೆ.

    ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಡಶೇಷಿಯಲ್ಲಿ 327 ಎಕರೆ ವಿಸ್ತೀರ್ಣದ ಕೆರೆಯಲ್ಲಿ ಇದೀಗ ಜಲಕಳೆ ನಳನಳಿಸುತ್ತಿದೆ. 1996ರಲ್ಲಿ ಕುಷ್ಟಗಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸಲು ನಿರ್ಮಾಣವಾದ ಕೆರೆ ಇದಾಗಿದೆ. ಕಾಲನಂತರ ಕೆರೆಯಲ್ಲಿ ಹೂಳು ತುಂಬಿಕೊಂಡಿತು. ಇದಕ್ಕೆ ಕುಷ್ಟಗಿ ಸಿಪಿಐ ಸುರೇಶ್ ತಳವಾರ್ ಮತ್ತು ಪಿಎಸ್‍ಐ ವಿಶ್ವನಾಥ ಹಿರೇಗೌಡ್ರು 8 ತಿಂಗಳ ಹಿಂದೆ ಕಾಯಕಲ್ಪ ನೀಡಲು ಮುಂದಾಗಿದ್ದಾರೆ.

    ಒಂದು ತಿಂಗಳ ವೇತನ ನೀಡಿದ ಕುಷ್ಟಗಿ ಪೊಲೀಸರು, ತಾಲೂಕು ಜನರಿಂದ ವಂತಿಗೆ ಸಂಗ್ರಹಿಸಲು ನಿಂತರು. ಪೊಲೀಸರ ಒಂದೊಳ್ಳೆ ಕೆಲಸಕ್ಕೆ ಮಠಾಧೀಶರು, ಹನುಮಸಾಗರದ ಕಲ್ಲು ಗಣಿಗಾರಿಕೆ ಮಾಲೀಕರು ಸಾಥ್ ನೀಡಿದರು. 76 ದಿನಗಳ ಕಾಲ ನಿರಂತರವಾಗಿ ನಿಡಶೇಷಿ ಕೆರೆಯ ಹೂಳು ತೆಗೆಯಲಾಯ್ತು. ಹಗಲು ರಾತ್ರಿ ಜೆಸಿಬಿ, ಇಟಾಚಿಗಳು ಘರ್ಜಿಸಿದವು. ಅಷ್ಟೊತ್ತಿಗೆ ಅದೃಷ್ಟವಶಾತ್ ಮಳೆಯೂ ಚೆನ್ನಾಗಿ ಬಂತು, ಕೆರೆಯೂ ತುಂಬಿತು ಅಂತ ಕುಷ್ಟಗಿ ಸಿಪಿಐ ಸುರೇಶ್ ತಳವಾರ್ ಹೇಳಿದ್ದಾರೆ.

    ನಿಡಶೇಷಿ ಕೆರೆ ತುಂಬಿದ ಪರಿಣಾಮ ಕುಷ್ಟಗಿ ಪಟ್ಟಣಕ್ಕೆ ನೀರಿನ ಬವಣೆ ತಪ್ಪಿದೆ. ಜೊತೆಗೆ ನಿಡಶೇಷಿ ಸುತ್ತಲಿನ ಹತ್ತಾರು ಹಳ್ಳಿಗಳಿಗೂ ಜೀವ ಜಲ ಸಿಕ್ಕಿವೆ. ಅಂತರ್ಜಲ ಹೆಚ್ಚಿ, ಬೋರ್‍ವೆಲ್‍ಗಳು ರೀಚಾರ್ಜ್ ಆಗುತ್ತಿವೆ.

    ಪೊಲೀಸರು ಮತ್ತು ಜನರು ಮನಸ್ಸು ಮಾಡಿದರೆ ಏನಾದ್ರೂ ಸಾಧನೆ ಮಾಡಬಹುದು ಅನ್ನೋದಕ್ಕೆ ನಿಡಶೇಷಿ ಕೆರೆ ಸಾಕ್ಷಿಯಾಗಿದೆ.