Tag: Nibhaanaa

  • ನನಗೆ ಯಾವುದೇ ಜಾತಿಯಿಲ್ಲ ನನ್ನದು ರೈತರ ಜಾತಿ – ಮುರುಗೇಶ್ ನಿರಾಣಿ

    ನನಗೆ ಯಾವುದೇ ಜಾತಿಯಿಲ್ಲ ನನ್ನದು ರೈತರ ಜಾತಿ – ಮುರುಗೇಶ್ ನಿರಾಣಿ

    ಹುಬ್ಬಳ್ಳಿ: ಕಲಘಟಗಿ ತಾಲೂಕಿನ ರೈತರು ಸಹಕಾರ ಕೊಟ್ಟು ಒಪ್ಪುವುದಾದರೆ ಒಂದೂವರೆ ವರ್ಷದಲ್ಲಿ ಕಲಘಟಗಿಯಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭ ಮಾಡುತ್ತೇನೆ. ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡುವಲ್ಲಿ ನನ್ನದು ಯಾವುದೇ ಸ್ವಾರ್ಥವಿಲ್ಲ ಉದ್ಯೋಗ ಬೇರೆ ರಾಜಕಾರಣ ಬೇರೆ, ನನಗೆ ಯಾವುದೇ ಜಾತಿಯಿಲ್ಲ ನನ್ನದು ರೈತರ ಜಾತಿ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರು ಹೇಳಿದ್ದಾರೆ.

    ನಗರದ ಹನ್ನೆರಡು ಮಠದಲ್ಲಿ ತಾಲೂಕಿನ ರೈತರ ಸಭೆಯಲ್ಲಿ ಮಾತನಾಡಿದ ನಿರಾಣಿ, ತಾಲೂಕಿನ ರೈತರು ಷೇರು ಸಂಗ್ರಹಿಸಿ ಉಳಿದ ಎಷ್ಟೇ ಹಣ ಖರ್ಚಾದರೂ ನಾನು ಸ್ವಂತ ದುಡ್ಡು ಹಾಕಿ ಸಕ್ಕರೆ ಕಾರ್ಖಾನೆ ಸ್ಥಾಪಿಸುತ್ತೇನೆ. ಈ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಮಾಡುವುದರಿಂದ ಇಲ್ಲಿನ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಮತ್ತು ಸಾಕಷ್ಟು ನಿರುದ್ಯೋಗಿಗಳಿಗೆ ಉದ್ಯೋಗ ಕೊಟ್ಟಂತಾಗುತ್ತದೆ. 12,200 ಎಕರೆ ಕಬ್ಬು ಕಲಘಟಗಿಯಲ್ಲಿ ಬೆಳೆಯುತ್ತಿದೆ ಒಂದು ತಿಂಗಳು ಸಮಯ ತೆಗೆದುಕೊಳ್ಳಿ ಒಂದು ಉತ್ತಮ ನಿರ್ಧಾರಕ್ಕೆ ಬನ್ನಿ ಆದಷ್ಟು ಬೇಗ ಸಕ್ಕರೆ ಕಾರ್ಖಾನೆ ಗುದ್ದಲಿ ಪೂಜೆ ಮಾಡಲು ಮುಂದಾಗೋಣ ಎಂದರು. ಇದನ್ನೂ ಓದಿ: ರಾಜ್ಯದಲ್ಲಿ ಮೊದಲ ಪ್ರಯತ್ನ- ಹುಬ್ಬಳ್ಳಿಯಲ್ಲಿ 2 ರೂ.ಗೆ ಸಿಗುತ್ತೆ ಸರ್ಜಿಕಲ್ ಮಾಸ್ಕ್!

    ಕಲಘಟಗಿಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡುವಲ್ಲಿ ನನ್ನದು ಯಾವುದೇ ಸ್ವಾರ್ಥವಿಲ್ಲ. ಉದ್ಯೋಗ ಬೇರೆ ರಾಜಕಾರಣ ಬೇರೆ ನನಗೆ ಯಾವುದೇ ಜಾತಿಯಿಲ್ಲ ನನ್ನದು ರೈತರ ಜಾತಿ ನಿಮಗೆ ತಿಳಿದವರಿಗೆ ಮತಹಾಕಿ ಯಾವುದೇ ಪಕ್ಷ ಬೇಧವಿಲ್ಲದೆ ತಾಲೂಕಿನ ರೈತರು ಕಾರ್ಖಾನೆ ಸ್ಥಾಪಿಸುವಲ್ಲಿ ಸರ್ಕಾರದೊಂದಿಗೆ ಸಹಕಾರ ನೀಡಬೇಕು. ಆಗ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಶಾಸಕ ಸಿಎಂ ನಿಂಬಣ್ಣವರ್ ಮುಂದಾಳತ್ವದಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭ ಮಾಡೋಣ ನನ್ನ ಒಡೆತನದಲ್ಲಿ 9 ಸಕ್ಕರೆ ಕಾರ್ಖಾನೆಗಳಿದ್ದು ಭಾರತ ದೇಶದಲ್ಲಿ 2ನೇ ಸ್ಥಾನ ನಮಗೆ ಲಭಿಸಿದೆ ಎಂದು ಅಭಿಪ್ರಾಯಪಟ್ಟರು.

    ಮನಸಿದ್ದರೆ ಮಾರ್ಗ ಮೊದಲು ಸಕ್ಕರೆ ಕಾರ್ಖಾನೆ ಮಾಡುವ ಸಂದರ್ಭದಲ್ಲಿ ಮನೆಯ ಕುಟುಂಬಸ್ಥರ ವಿರೋಧ ವ್ಯಕ್ತಪಡಿಸಿ ಮನೆಯಿಂದ ಹೊರ ಹಾಕಿದರು. ಆದರೆ ಛಲಬಿಡದೆ ಎಲ್ಲ ರೈತರ ಸಹಕಾರದೊಂದಿಗೆ ಕಾರ್ಖಾನೆ ಸ್ಥಾಪಿಸಿದ ನಂತರ ದಿನಗಳಲ್ಲಿ ಉತ್ತರ ಕರ್ನಾಟಕ ಅಷ್ಟೇ ಅಲ್ಲದೆ ಮೈಸೂರು ಭಾಗದಲ್ಲಿ ಕೂಡ ನನ್ನದೇ ಒಡೆತನದ ಸಕ್ಕರೆ ಕಾರ್ಖಾನೆ ಸ್ಥಾಪಿಸಿ ಉತ್ತರ ಕರ್ನಾಟಕದವರು ಯಾವುದು ಕಡಿಮೆ ಇಲ್ಲ ಎಂಬ ಹೆಗ್ಗಳಿಕೆ ಗಳಿಸಿದೆ. ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನದಲ್ಲಿದೆ ಸೌಹಾರ್ದ ಬ್ಯಾಂಕ್ ಸಿಮೆಂಟ್ ಫ್ಯಾಕ್ಟರಿ ಹಾಗೂ ನಿರಾಣಿ ಉದ್ದಿಮೆ ಸಂಸ್ಥೆ ಸೇರಿದಂತೆ ಸುಮಾರು 72 ಸಾವಿರ ಜನರಿಗೆ ಉದ್ಯೋಗವನ್ನು ನೀಡಿದ್ದೇನೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಮದುವೆ ದಿಬ್ಬಣ ಹೊರಟಿದ್ದ ಟಾಟಾ ಏಸ್ ಪೊಲೀಸರ ವಶಕ್ಕೆ

    ನಂತರ ಮಾತನಾಡಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮೋಹನ್ ಲಿಂಬಿಕಾಯಿ, ಕಚ್ಚಾವಸ್ತು ಭೂಮಿ, ನೀರು, ವಾಹನ ಸೌಕರ್ಯ, ಕೆಲಸ ಮಾಡುವ ಪರಿಣಿತ ನೌಕರರು ಇದ್ದರೆ ಮಾತ್ರ ಉದ್ಯಮವನ್ನು ಪ್ರಾರಂಭ ಮಾಡಲು ಸಾಧ್ಯವಾಗುತ್ತದೆ. ಒಬ್ಬ ಮನುಷ್ಯ ಜೀವಿತಾವಧಿಯಲ್ಲಿ ಏನು ಸಾಧಿಸಬೇಕು ಎಂಬುದನ್ನು ನಿರಾಣಿ ಅವರು ಉದ್ಯಮದ ಮೂಲಕ ಸಾಧಿಸಿ ತೋರಿಸಿದ್ದಾರೆ ಎಂದರು.

    ಶಾಸಕ ನಿಂಬಣ್ಣವರ್ ಮಾತನಾಡಿ ಮತಕ್ಷೇತ್ರದ ದೀರ್ಘಕಾಲದ ಬೇಡಿಕೆ ಸಕ್ಕರೆ ಕಾರ್ಖಾನೆ ಸ್ಥಾಪಿಸಬೇಕೆಂಬುದು, ಈ ಕನಸು ಈಗ ಸಾಕಾರಗೊಳ್ಳಲಿದೆ. ತಾಲೂಕಿನ ರೈತರು ಸಹಕಾರ ಅಗತ್ಯವಾಗಿದೆ ಇದರಿಂದ ತಾಲೂಕಿನ ರೈತರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಕಬ್ಬು ಬೆಳೆಗಾರರ ಸಮಸ್ಯೆ ನಿವಾರಣೆಯಾಗುತ್ತದೆ. ನನ್ನ ಅವಧಿ ಮುಗಿಯುವುದರೊಳಗೆ ಮತಕ್ಷೇತ್ರದಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭವಾಗಬೇಕು ಎಂಬುದು ನನ್ನ ಆಶಯ ಎಂದು ನುಡಿದರು.

    ಬಿಜೆಪಿ ತಾಲೂಕು ಅಧ್ಯಕ್ಷ ಬಸವರಾಜ ಶೆರೆವಾಡ, ನಿಂಗಪ್ಪ ಸುತ್ತುಗಟ್ಟಿ, ಗೀತಾ ಮರಲಿಂಗಣ್ಣವರ, ಚಂದ್ರಗೌಡ ಪಾಟೀಲ್, ನರೇಶ್ ಮಲ್ನಾಡ, ಸೋಮು ಕೂಪ್ಪದ, ಮಹಾಂತೇಶ್ ಹೆಂಬ್ಲಿ, ಎಸ್ ಎಂ ಚಿಕ್ಕಣ್ಣವರ, ವಿ.ಎಸ್ ಪಾಟೀಲ್ ಸೇರಿದಂತೆ ಬಿಜೆಪಿ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.