Tag: NIA

  • ಮಂಗಳೂರಲ್ಲಿ ಶಾಶ್ವತವಾಗಿ NIA ಕಚೇರಿ ಸ್ಥಾಪಿಸಲು ಕೇಂದ್ರಕ್ಕೆ ಬಜರಂಗದಳ ಮನವಿ

    ಮಂಗಳೂರಲ್ಲಿ ಶಾಶ್ವತವಾಗಿ NIA ಕಚೇರಿ ಸ್ಥಾಪಿಸಲು ಕೇಂದ್ರಕ್ಕೆ ಬಜರಂಗದಳ ಮನವಿ

    – ಕರಾವಳಿಯಲ್ಲಿಯ ಭಯೋತ್ಪಾದನಾ ಚಟುವಟಿಕೆಗಳ ಸರಿಯಾದ ತನಿಖೆಗೆ ಆಗ್ರಹ

    ಬೆಂಗಳೂರು: ಉಳ್ಳಾಲದ ಮಾಜಿ ಶಾಸಕ ಬಿ.ಎಂ ಇದಿನಬ್ಬ ಅವರ ಇನ್ನಷ್ಟು ಹೆಚ್ಚಿನ ತನಿಖೆಗೆ ಮತ್ತು ಮಂಗಳೂರಿನಲ್ಲಿ ಶಾಶ್ವತವಾಗಿ ಎನ್‍ಐಎ ಕಚೇರಿಯನ್ನು ಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ್ಯ ಸಂಚಾಲಕ ಕೆ.ಆರ್ ಸುನಿಲ್ ಒತ್ತಾಯಿಸಿದ್ದಾರೆ.

    ಉಳ್ಳಾಲದ ಮಾಜಿ ಶಾಸಕ ಬಿ.ಎಂ ಇದಿನಬ್ಬ ಪುತ್ರ ಅಬ್ದುಲ್ ರಹಿಮಾನ್ ಬಾಷಾ ಸಿರಿಯಾ ಮೂಲದ ಐಸಿಸ್ ಉಗ್ರ ಸಂಘಟನೆಯ ನಂಟು ಇರುವ ಶಂಕೆಯಲ್ಲಿ ಎನ್‍ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಾಷಾ ಅವರ ಮಾಸ್ತಿಕಟ್ಟೆಯಲ್ಲಿರುವ ಮನೆಗೂ ಎನ್‍ಐಎ ತಂಡ ದಾಳಿ ನಡೆಸಿ ದಿನವಿಡೀ ತನಿಖೆ ನಡೆಸಿತ್ತು. ಈ ವಿದ್ಯಾಮಾನದಿಂದ ಇಡೀ ಜಿಲ್ಲೆ ಹಾಗೂ ರಾಜ್ಯ ಆತಂಕಕ್ಕೆ ಒಳಗಾಗಿದೆ. ಅಲ್ಲದೆ ಐಸಿಸ್ ಉಗ್ರ ಸಂಘಟನೆಗೆ ಹಣ ಸಂಗ್ರಹಿಸುತ್ತಿದ್ದ ಆರೋಪದಡಿ ಬಾಷಾ ಅವರ ಕಿರಿಯ ಮಗ ಅಮ್ಮರ್ ಅಬ್ದುಲ್ ರೆಹಮಾನ್ ನ್ನು ವಶಕ್ಕೆ ಪಡೆದು ತೆರಳಿದ್ದರು.

    ಬಂಧಿತ ಆರೋಪಿ ಅಮ್ಮರ್ ರೆಹಮಾನ್ ಬಗ್ಗೆ ವಿಶೇಷ ತನಿಖೆ ನೆಡೆಸಬೇಕು. ಆತನ ಜೊತೆ ಕೈ ಜೋಡಿಸಿದವರ ಮತ್ತು ಆತನ ನಂಟಿನ ಬಗ್ಗೆ ಪತ್ತೆ ಹಚ್ಚಬೇಕು. ಏಕೆಂದರೆ ಕಳೆದ ಕೆಲವು ವರ್ಷಗಳಿಂದ ದೇಶದ ಯಾವುದೇ ಮೂಲೆಯಲ್ಲಿ ಉಗ್ರರ ಬಂಧನವಾದರೂ ಆ ಉಗ್ರರ ಜೊತೆಗೆ ಮಂಗಳೂರಿನ ನಂಟು ಕಂಡುಬರುತ್ತದೆ ಎಂದು ಸುನಿಲ್ ಆಗ್ರಹಿಸಿದ್ದಾರೆ.

    ನಿನ್ನೆ ಎನ್‍ಐಎ ದಾಳಿ ನಡೆಸಿದ ಬಾಷಾ ಅವರ ಮನೆ ಸೊಸೆ ಮತಾಂತರಕೊಂಡ ಹಿಂದೂ ಯುವತಿಯಾಗಿದ್ದು, ಆಕೆಯು ಸಹ ಕ್ರೋನಿಕಲ್ ಪೌಂಡೇಶನ್ ಎನ್ನುವ ಇನ್ ಸ್ಟ್ರಾಗ್ರಾಮ್ ಪೇಜ್ ನಲ್ಲಿ ಐಸಿಸ್ ಪರ ಅಜೆಂಡಾ ಹರಡುತ್ತಿದ್ದ ಆರೋಪ ಕೇಳಿ ಬಂದಿದೆ. ಇದು ಒಂದು ಲವ್ ಜಿಹಾದ್ ಪ್ರಕರಣ ಹಿಂದೂ ಯುವತಿಯರನ್ನು ಪ್ರೀತಿಯ ಹೆಸರಲ್ಲಿ ಮದುವೆಯಾಗಿ ಮತಾಂತರ ಮಾಡಿ ಉಗ್ರ ಚಟುವಟಿಕೆಗಳಲ್ಲಿ ಬಳಸಿಕೊಳ್ಳುತ್ತಾ ಇದ್ದಾರೆ ಈ ಬಗ್ಗೆಯೂ ತನಿಖೆಯಾಗಬೇಕು. ಇದನ್ನೂ ಓದಿ: ಉಗ್ರರ ಜೊತೆ ನಂಟು ಶಂಕೆ – ಮಾಜಿ ಶಾಸಕ ಇದಿನಬ್ಬ ಮಗನ ಮನೆ ಮೇಲೆ ಎನ್‍ಐಎ ದಾಳಿ

    ಭಟ್ಕಳ ಸಹೋದರರು ಇಲ್ಲಿಯೇ ನಂಟು ಹೊಂದಿದ್ದರು. ರಿಯಾಜ್ ಭಟ್ಕಳ್ ತೊಕ್ಕೊಟ್ಟಿನಲ್ಲಿ ಸಿಕ್ಕಿಬಿದ್ದ ಸಂದರ್ಭ ಬಾಂಬ್ ತಯಾರಿಯಯಲ್ಲಿ ತೊಡಗಿಕೊಂಡ ವ್ಯಕ್ತಿಯೊಬ್ಬನನ್ನ ಮುಕ್ಕಚೇರಿಯಿಂದ ಬಂಧಿಸಲಾಗಿತ್ತು. ಕಳೆದ ಹಲವು ವರ್ಷಗಳಿಂದ ಪಕ್ಕದ ರಾಜ್ಯ ಕೇರಳದ ಬಹುತೇಕ ಮುಸ್ಲಿಂ ಯುವಕರು ಸಿರಿಯಾ ಐಸಿಸ್ ಸಂಘಟನೆ ಸೇರಿದ್ದು ಭಯೋತ್ಪಾದನೆ ಚಟುವಟಿಕೆಯಲ್ಲಿ ತೊಡಗಿದ್ದಾರೆ. ತಕ್ಷಣ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ತನಿಖೆ ನಡೆಸಬೇಕು. ಅಲ್ಲದೆ ಮಂಗಳೂರಿನಲ್ಲಿ ಕಳೆದ ಡಿಸೆಂಬರ್ ತಿಂಗಳಿನಲ್ಲಿ ಉಗ್ರರ ಪರ ಗೋಡೆಬರಹ ಬರೆದ ಶಂಕಿತ 3 ಉಗ್ರರ ಬಂಧನವಾಗಿತ್ತು. ಈ ಬಗ್ಗೆ ಕೂಡ ತನಿಖೆ ಆಗಬೇಕು. ಮತ್ತು ಇಲ್ಲಿನ ಸ್ಥಳೀಯರು ಅಂತಹವರಿಗೆ ಸಹಕಾರ ನೀಡುತ್ತಿರುವ ಬಗ್ಗೆ ಸಾಕಷ್ಟು ಅನುಮಾನ ಗಳಿದ್ದು ಆ ವ್ಯಕ್ತಿಗಳನ್ನು ಕೂಡ ಪತ್ತೆ ಹಚ್ಚಿ ಬಂಧಿಸಬೇಕು.

    ಜಾಗತಿಕ ಮಟ್ಟದಲ್ಲಿ ಬೇರೂರಿರುವ ಭಯೋತ್ಪಾದನೆ ಚಟುವಟಿಕೆಯು ಕರಾವಳಿ ಜಿಲ್ಲೆಗಳಲ್ಲಿ ನೆಲೆಕಾಣಲು ಪ್ರಯತ್ನಿಸುತ್ತಿರುವುದಕ್ಕೆ ಇದು ಸಾಕ್ಷಿಯಾಗಿದ್ದು ಕೇಂದ್ರ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಆಮೂಲಾಗ್ರ ತನಿಖೆ ನಡೆಸಬೇಕೆಂದು ಮತ್ತು ಮಂಗಳೂರಿನಲ್ಲಿ ಶಾಶ್ವತವಾಗಿ ಎನ್‍ಐಎ ಕಚೇರಿಯನ್ನು ಸ್ಥಾಪಿಸಬೇಕು ಎಂದು ಬಜರಂಗದಳದ ಕರ್ನಾಟಕ ದಕ್ಷಿಣ ಪ್ರಾಂತ್ಯ ಸಂಚಾಲಕ ಕೆ.ಆರ್.ಸುನೀಲ್ ಆಗ್ರಹಿಸಿದ್ದಾರೆ.

  • ಮಾಜಿ ಶಾಸಕ ಇದಿನಬ್ಬನವರ ಮೊಮ್ಮಗನಿಗೆ ಐಸಿಸ್ ನಂಟು – ಎನ್‍ಐಎಯಿಂದ ಅರೆಸ್ಟ್

    ಮಾಜಿ ಶಾಸಕ ಇದಿನಬ್ಬನವರ ಮೊಮ್ಮಗನಿಗೆ ಐಸಿಸ್ ನಂಟು – ಎನ್‍ಐಎಯಿಂದ ಅರೆಸ್ಟ್

    – ಬೆಂಗಳೂರು, ಮಂಗಳೂರಿನಲ್ಲಿ ಶಂಕಿತರು ಅರೆಸ್ಟ್
    – ಜಮ್ಮು ಕಾಶ್ಮೀರದ ಇಬ್ಬರು ಅರೆಸ್ಟ್

    ನವದೆಹಲಿ/ಮಂಗಳೂರು: ಐಸಿಸ್ ಜೊತೆ ನಂಟು ಹಿನ್ನೆಲೆಯಲ್ಲಿ ಕರ್ನಾಟಕದ ಇಬ್ಬರು ಮತ್ತು ಜಮ್ಮು ಕಾಶ್ಮೀರದ ಇಬ್ಬರನ್ನು ರಾಷ್ಟ್ರೀಯ ತನಿಖಾ ದಳ(ಎನ್‍ಐಎ) ಬಂಧಿಸಿದೆ.

    ಐಸಿಸ್ ನಂಟು ಹಿನ್ನೆಲೆಯಲ್ಲಿ ಮಂಗಳೂರು, ಬೆಂಗಳೂರು ಮತ್ತು ಜಮ್ಮು ಕಾಶ್ಮೀರದಲ್ಲಿ ಎನ್‍ಐಎ ದಾಳಿ ನಡೆಸಿತ್ತು. ಉಳ್ಳಾಲದ ಮಾಜಿ ಕಾಂಗ್ರೆಸ್ ಶಾಸಕ, ಸಾಹಿತಿ ದಿವಂಗತ ಇದಿನಬ್ಬ ಅವರ ಮೊಮ್ಮಗ ಅಮರ್ ಅಬ್ದುಲ್ ರೆಹಮಾನ್, ಬೆಂಗಳೂರಿನ ಶಂಕರ್ ವೆಂಕಟೇಶ್ ಪೆರುಮಾಳ್, ಶ್ರೀನಗರದ ಹಮೀದ್, ಬಂಡಿಪೋರದ ಮುಜಾಮಿಲ್ ಹಸನ್ ಅವರನ್ನು ಎನ್‍ಐಎ ಬಂಧಿಸಿದೆ.

    ಉಗ್ರ ಚಟುವಟಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿ ಹಣಕಾಸು ಸಂಗ್ರಹ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಮತ್ತು ಜಮ್ಮು ಕಾಶ್ಮೀರದ 5 ಕಡೆ ಎನ್‍ಐಎ ದಾಳಿ ನಡೆಸಿತ್ತು. ಶೋಧ ನಡೆಸಿದ ವೇಳೆ ಲ್ಯಾಪ್ ಟಾಪ್, ಹಾರ್ಡ್ ಡಿಸ್ಕ್, ಪೆನ್ ಡ್ರೈವ್, ಹಲವು ಸಿಮ್ ಗಳು, ಎಲೆಕ್ಟ್ರಾನಿಕ್ ವಸ್ತುಗಳು ಎನ್‍ಐಎ ವಶಕ್ಕೆ ಪಡೆದಿದೆ. ಇದನ್ನೂ ಓದಿ: ಪ್ರವಾಹ, ಕೋವಿಡ್ ನಿರ್ವಹಣೆಗಾಗಿ ನೂತನ ಸಚಿವರಿಗೆ ಜಿಲ್ಲೆಗಳ ಜವಾಬ್ದಾರಿ

    ಬೆಳ್ಳಂಬೆಳಗ್ಗೆ ದಾಳಿ: ಇದಿನಬ್ಬ ಅವರ ಪುತ್ರನ ಮನೆಗೆ ಬುಧವಾರ ನಸುಕಿನಲ್ಲೇ ಎನ್‍ಐಎ ದಾಳಿ ನಡೆಸಿತ್ತು. ಮನೆಯಲ್ಲಿ ಇದಿನಬ್ಬ ಅವರ ಪುತ್ರ ಇಸ್ಮಾಯಿಲ್ ಬಾಷಾ ತಮ್ಮ ಕುಟುಂಬದ ಜೊತೆಗೆ ವಾಸವಿದ್ದಾರೆ.

    ಸಿರಿಯಾ ಮೂಲದ ಐಸಿಸ್ ಉಗ್ರ ಸಂಘಟನೆಯ ಕುರಿತು ನಂಟು ಇರುವ ಶಂಕೆಯಲ್ಲಿ ದಾಳಿ ನಡೆದಿದೆ. ನಾಲ್ಕು ಕಾರುಗಳಲ್ಲಿ 25 ಮಂದಿಯಿದ್ದ ತಂಡ ಉಳ್ಳಾಲದ ಮಾಸ್ತಿಕಟ್ಟೆಗೆ ಆಗಮಿಸಿತ್ತು. ಎನ್‍ಐಎ ಜೊತೆಗೆ ಮಂಗಳೂರಿನ ಸ್ಥಳೀಯ ಪೊಲೀಸರು ಕೂಡ ಭದ್ರತೆ ಒದಗಿಸಿದ್ದರು.

    ಮೂರು ವರ್ಷಗಳ ಹಿಂದೆ ಇಸ್ಮಾಯಿಲ್ ಬಾಷಾರ ಪುತ್ರಿಯ ಮಗಳಾದ ಅಜ್ಮಲ್ ಕುಟುಂಬ ನಿಗೂಢವಾಗಿ ನಾಪತ್ತೆಯಾಗಿತ್ತು. ಅಜ್ಮಲ್‍ಳನ್ನ ಕೇರಳ ಮೂಲದ ಎಂಬಿಎ ಪದವೀಧರ ಸಿಯಾಝ್ ಜೊತೆ ವಿವಾಹ ಮಾಡಿ ಕೊಡಲಾಗಿತ್ತು. ಆದರೆ ಆ ಸಂದರ್ಭದಲ್ಲೇ ಕಾಸರಗೋಡಿನ 17 ಮಂದಿ ಸಿರಿಯಾದ ಐಸಿಸ್ ಉಗ್ರ ಸಂಘಟನೆ ಸೇರಿದ್ದರು. ಆ 17 ಜನರ ಪೈಕಿ ಅಜ್ಮಲ್ ಕುಟುಂಬವೂ ಇತ್ತು. ಈ ಬಗ್ಗೆ ಕೇರಳ ಆಂತರಿಕ ಭದ್ರತಾ ಹಾಗೂ ಗುಪ್ತಚರ ಇಲಾಖೆ ಹಾಗೂ ರಾಷ್ಟ್ರೀಯ ತನಿಖಾ ದಳ ತನಿಖೆ ಆರಂಭಿಸಿತ್ತು. ಅದೇ ತನಿಖೆಯ ಭಾಗವಾಗಿ ಅಜ್ಮಲ್ ಅಜ್ಜ ಇಸ್ಮಾಯಿಲ್ ಭಾಷಾ ಮನೆಗೆ ಇಂದು ದಾಳಿ ನಡೆದಿದೆ.

    ಇದಿನಬ್ಬ ಪುತ್ರ ಇಸ್ಮಾಯಿಲ್ ಬಾಷಾ ಮಂಗಳೂರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ಇವರ ಪುತ್ರರು ವಿದೇಶದಲ್ಲಿದ್ದಾರೆ. ಇವರ ಕುಟುಂಬದವರು ಐಸಿಸ್ ಸಂಬಂಧಿಸಿದ ಯೂಟ್ಯೂಬ್ ಚಾನೆಲ್ ಗಳನ್ನು ಸಬ್ ಸ್ಕ್ರೈಬ್ ಮಾಡಿ, ಮೃದು ಧೋರಣೆ ಅನುಸರಿಸಿದ್ದರು ಎನ್ನಲಾಗಿದೆ. ಅಲ್ಲದೆ, ಐಸಿಸ್ ಸಂಪರ್ಕ ಮತ್ತು ಜಮ್ಮು ಕಾಶ್ಮೀರದ ಉಗ್ರ ಸಂಘಟನೆಯ ಯುವಕರ ಜೊತೆ ಮೊಬೈಲ್ ಸಂಪರ್ಕ ಇರುವ ಬಗ್ಗೆ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ವಿಚಾರಣೆಯ ಅಂತ್ಯದಲ್ಲಿ ಎಂ.ಕೆ.ಇದಿನಬ್ಬನವರ ಮೊಮ್ಮಗನನ್ನು ಎನ್‍ಐಎ ಅಧಿಕಾರಿಗಳು ವಶಕ್ಕೆ ಪಡೆದು ಬಂಧಿಸಿದ್ದಾರೆ.

  • ಉಗ್ರರ ಜೊತೆ ನಂಟು ಶಂಕೆ – ಮಾಜಿ ಶಾಸಕ ಇದಿನಬ್ಬ ಮಗನ ಮನೆ ಮೇಲೆ ಎನ್‍ಐಎ ದಾಳಿ

    ಉಗ್ರರ ಜೊತೆ ನಂಟು ಶಂಕೆ – ಮಾಜಿ ಶಾಸಕ ಇದಿನಬ್ಬ ಮಗನ ಮನೆ ಮೇಲೆ ಎನ್‍ಐಎ ದಾಳಿ

    ಮಂಗಳೂರು: ಸಿರಿಯಾ ಮೂಲದ ಐಸಿಸ್ ಉಗ್ರರ ಜೊತೆ ನಂಟು ಇರುವ ಆರೋಪದಡಿ ಮಂಗಳೂರಿನ ಮಾಜಿ ಶಾಸಕರಾದ ಬಿ.ಎಂ ಇದಿನಬ್ಬ ಅವರ ಮಗ ಬಿ.ಎಂ ಭಾಷ ಅವರ ಮನೆ ಮೇಲೆ ಎನ್‍ಐಎ ತಂಡ ದಾಳಿ ಮಾಡಿದೆ.

    ಬಿ.ಎಂ ಇದಿನಬ್ಬರ ಮಗ ಬಿ.ಎಂ ಭಾಷ ಮಂಗಳೂರಿನ ಉಳ್ಳಾಲದಲ್ಲಿ ನೆಲೆಸಿದ್ದಾರೆ. ಇವರಿಗೆ ಸಿರಿಯಾ ಮೂಲದ ಐಸಿಸ್ ಉಗ್ರರ ಜೊತೆ ನಂಟು ಇರುವ ಬಗ್ಗೆ ಅನುಮಾನ ಮೂಡಿರುವ ಪರಿಣಾಮ ಇಂದು ಬೆಳಗ್ಗೆ ಬೆಂಗಳೂರಿನಿಂದ ಬಂದ ಎನ್‍ಐಎ ಅಧಿಕಾರಿಗಳ ತಂಡ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ. ಇದನ್ನೂ ಓದಿ: ಮಂಗಳೂರು ವಿವಿ ಪದವಿ ಎಲ್ಲಾ ಪರೀಕ್ಷೆಗಳು ರದ್ದು

    ಬಿ.ಎಂ ಭಾಷ ಮಂಗಳೂರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ಇವರ ಪುತ್ರ ವಿದೇಶದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಇವರ ಕುಟುಂಬ ಸದಸ್ಯರು ಐಸಿಸ್ ಸಂಬಂಧಿಸಿದ ಯೂಟ್ಯೂಬ್ ಚಾನಲ್‍ಗಳನ್ನು ಸಬ್ ಸ್ಕ್ರೈಬ್ ಮಾಡಿ ಅವರೊಂದಿಗೆ ಮೃದು ಧೋರಣೆ ಇಟ್ಟುಕೊಂಡಿದ್ದಾರೆ ಮತ್ತು ಹಲವು ಗೌಪ್ಯ ಮಾಹಿತಿ ಹಿನ್ನೆಲೆ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ಕಳೆದ 10 ವರ್ಷಗಳ ಹಿಂದೆ ಇದಿನಬ್ಬ ಅವರ ಪುತ್ರಿ ಐಸಿಸ್ ಜೊತೆ ಸಂಪರ್ಕ ಹೊಂದಿ ಕೇರಳದಿಂದ ನಾಪತ್ತೆಯಾಗಿದ್ದರು.

    ಕವಿ, ಪತ್ರಕರ್ತ, ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಬಿ.ಎಂ ಇದಿನಬ್ಬ ಬಳಿಕ ರಾಜಕಾರಣಿಯಾಗಿ ಉಳ್ಳಾಲ ಕ್ಷೇತ್ರದಿಂದ ಮೂರು ಬಾರಿ ವಿದಾನಸಭೆಗೆ ಆಯ್ಕೆಯಾಗಿದ್ದರು.

  • ಐಐಎಸ್‍ಸಿ ಶೂಟೌಟ್ ಕೇಸ್ – 7ನೇ ಆರೋಪಿ ಬಿಡುಗಡೆ

    ಐಐಎಸ್‍ಸಿ ಶೂಟೌಟ್ ಕೇಸ್ – 7ನೇ ಆರೋಪಿ ಬಿಡುಗಡೆ

    ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‍ಸಿ) ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿದ್ದ 7ನೇ ಆರೋಪಿಯನ್ನು ಬೆಂಗಳೂರಿನ ಎನ್‍ಐಎ ಕೋರ್ಟ್ ಬಿಡುಗಡೆ ಮಾಡಿದೆ.

    2005ರಲ್ಲಿ ಐಐಎಸ್‍ಸಿಯಲ್ಲಿ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ 4 ವರ್ಷದ ಹಿಂದೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ) ತ್ರಿಪುರ ಮೂಲದ ಮೊಹಮ್ಮದ್ ಹಬೀಬ್‍ನನ್ನು(40) ಬಂಧಿಸಿತ್ತು.

    7ನೇ ಆರೋಪಿಯಾಗಿ ಬಂಧನಕ್ಕೆ ಒಳಗಾಗಿದ್ದ ಮೊಹಮ್ಮದ್ ಹಬೀಬ್ ವಿರುದ್ಧ ಯಾವುದೇ ಸೂಕ್ತ ಸಾಕ್ಷ್ಯಾಧಾರಗಳು ಲಭ್ಯವಿಲ್ಲವೆಂದು ಅಭಿಪ್ರಾಯಪಟ್ಟು ನ್ಯಾಯಾಧೀಶ ಡಾ. ಕಸನಪ್ಪ ನಾಯಕ್ ಬಿಡುಗಡೆ ಮಾಡುವಂತೆ ಆದೇಶಿಸಿದ್ದಾರೆ. ಇದನ್ನೂ ಓದಿ: ಪುಲ್ವಾಮಾ ದಾಳಿ- ಒಂದು ಮೊಬೈಲ್‍ನಿಂದ ಇಡೀ ಕೃತ್ಯದ ಮಾಹಿತಿ ಬಹಿರಂಗ

    ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಮೊದಲನೇ ಆರೋಪಿ ಶಹಾಬುದ್ದೀನ್ ಅಹ್ಮದ್ 2008ರ ಪೊಲೀಸರ ತನಿಖೆಯಲ್ಲಿ ಹಬೀಬ್ ವಿರುದ್ಧ ಜಿಹಾದಿ ಕೃತ್ಯಗಳ ಕುರಿತು ಆರೋಪಿಸಿದ್ದ. ಬೆಂಗಳೂರಿನಲ್ಲಿ ಉಗ್ರ ಚಟುವಟಿಕೆ ನಡೆಸಲು ಯೋಜನೆ ಹೊಂದಿದ್ದ ಆರೋಪ ಹಬೀಬ್ ಮೇಲಿತ್ತು.

    ಏನಿದು ಪ್ರಕರಣ?
    2005ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಶೂಟೌಟ್ ಪ್ರಕರಣ ನಡೆದಿತ್ತು. ಘಟನೆಯಲ್ಲಿ ದೆಹಲಿಯ ಅತಿಥಿ ಪ್ರೊಫೆಸರ್ ಎಂಸಿ ಪುರಿ ಮೃತಪಟ್ಟರೆ ಅನೇಕ ಮಂದಿಗೆ ಗಾಯಗಳಾಗಿತ್ತು. ಪ್ರಕರಣ ಸಂಬಂಧ ಮೊದಲು ಸದಾಶಿವ ನಗರ ಠಾಣೆಯಲ್ಲಿ ಎಫ್‍ಐಆರ್ ಆಗಿತ್ತು. ನಂತರ ಕೇಸ್ ಎನ್‍ಐಎಗೆ ವರ್ಗಾವಣೆಯಾಗಿತ್ತು.

    ಈ ಕೇಸ್ ನಲ್ಲಿ 4 ವರ್ಷಗಳ ಹಿಂದೆ ಅರೆಸ್ಟ್ ಆಗಿದ್ದ ಹಬೀಬ್ ಜೈಲು ಸೇರಿದ್ದರೂ ಕೂಡ ಒಮ್ಮೆಯೂ ವಿಚಾರಣೆ ನಡೆಸಿರಲಿಲ್ಲ. ಇತ್ತಿಚೆಗೆ ಪ್ರಕರಣದಿಂದ ಬಿಡುಗಡೆ ಮಾಡುವಂತೆ ಸಿಆರ್ಪಿಸಿ ಸೆಕ್ಷನ್ 227ರ ಅಡಿ ಅರ್ಜಿ ಸಲ್ಲಿಸಿದ್ದ.

  • 8 ವರ್ಷವಾದ್ರೂ ಚಾರ್ಜ್‍ಶೀಟ್ ಸಲ್ಲಿಕೆಯಾಗಿಲ್ಲ, ಇದು ಮಾನವ ಹಕ್ಕುಗಳ ಉಲ್ಲಂಘನೆ – ಭಟ್ಕಳದ ಸಿದ್ದಿಬಪ್ಪನಿಂದ ಜಾಮೀನಿಗೆ ಅರ್ಜಿ

    8 ವರ್ಷವಾದ್ರೂ ಚಾರ್ಜ್‍ಶೀಟ್ ಸಲ್ಲಿಕೆಯಾಗಿಲ್ಲ, ಇದು ಮಾನವ ಹಕ್ಕುಗಳ ಉಲ್ಲಂಘನೆ – ಭಟ್ಕಳದ ಸಿದ್ದಿಬಪ್ಪನಿಂದ ಜಾಮೀನಿಗೆ ಅರ್ಜಿ

    – ಉಗ್ರರ ಜೊತೆ ಸಂಪರ್ಕ ಆರೋಪ
    – ದುಬೈಯಲ್ಲಿ ಎನ್‍ಐಎಯಿಂದ ಬಂಧನ

    ಕಾರವಾರ: ತನ್ನ ವಿರುದ್ಧ ರಾಷ್ಟ್ರೀಯ ತನಿಖಾ ದಳ(ಎನ್‍ಐಎ) ಇನ್ನೂ ಆರೋಪಪಟ್ಟಿ ಸಲ್ಲಿಸದ ಹಿನ್ನೆಲೆಯಲ್ಲಿ ಭಟ್ಕಳದ ಅಬ್ದುಲ್ ವಾಹಿದ್ ಸಿದ್ದಿಬಪ್ಪ ಜಾಮೀನು ಮಂಜೂರು ಕೋರಿ ದೆಹಲಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾನೆ.

    ಉಗ್ರಗಾಮಿ ಚಟುವಟಿಕೆಯ ಆರೋಪದಡಿ 2012ರಲ್ಲಿ ದುಬೈನಲ್ಲಿ ವಾಹಿದ್ ಸಿದ್ದಿಬಪ್ಪನನ್ನು ಎನ್‍ಐಎ ಬಂಧಿಸಿದೆ. ಕಳೆದ ಎಂಟು ವರ್ಷಗಳಿಂದ 100ಕ್ಕೂ ಹೆಚ್ಚು ಬಾರಿ ಕೋರ್ಟ್ ವಿಚಾರಣೆ ನಡೆದಿದ್ದರೂ ಇನ್ನೂ ಚಾರ್ಜ್‍ಶೀಟ್ ಸಲ್ಲಿಕೆಯಾಗಿಲ್ಲ. ಹೀಗಾಗಿ ಜಾಮೀನು ಅರ್ಜಿ ಸಲ್ಲಿಸಿದ್ದು ಮೇ 6 ರಂದು ವಿಚಾರಣೆಗೆ ಬರಲಿದೆ.

    ಆರೋಪ ಏನು?
    2012ರ ಸೆಪ್ಟೆಂಬರ್ 10 ರಂದು ವಿದ್ವಂಸಕ ಕೃತ್ಯ, ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದಕ ಚಟುವಟಿಕೆ, ಭಯೋತ್ಪಾದಕ ರಿಯಾಜ್ ಭಟ್ಕಳ್ ನೊಂದಿಗೆ ಸಂಪರ್ಕ, ಹವಾಲ ಹಣ ವಹಿವಾಟು, ಬೆಂಗಳೂರು, ಮುಂಬೈ ಬಾಂಬ್ ಸ್ಫೋಟ ಸೇರಿದಂತೆ ಹಲವು ಆರೋಪದಲ್ಲಿ ಈತನನ್ನು ಬಂಧಿಸಿ ಕೇಸ್ ದಾಖಲಿಸಿತ್ತು.

    ಮೊದಲ ಹಂತದಲ್ಲಿ ಐದು ಜನರ ವಿರುದ್ಧ ತನಿಖೆ ನಡೆಸಿದ ಎನ್‍ಐಎ 4 ಜನರ ಮೇಲೆ ಸಪ್ಲಿಮೆಂಟ್ ಚಾರ್ಜ್‍ಶೀಟ್ ಹಾಕಿತು. ನಂತರ 20 ಜನರ ಮೇಲೆ ಚಾರ್ಜ್ ಶೀಟ್ ಹಾಕಿತ್ತು. ನಂತರ ಮೂರನೇ ಸಪ್ಲಿಮೆಂಟರಿ ಚಾರ್ಜ್ ಶೀಟ್ ಅನ್ನು 2016ರ ನವೆಂಬರ್ 15 ರಂದು ವಾಹಿದ್ ಸಿದ್ದಿಬಪ್ಪ ವಿರುದ್ಧ ಸಲ್ಲಿಕೆ ಮಾಡಿ ಮೂರನೇ ಆರೋಪಿಯಾಗಿ ಸೇರಿಸಿತು.

    2013ರ ಡಿಸೆಂಬರ್ 28 ರಂದು ಮೊದಲು ಜಾರ್ಜ್ ಶೀಟ್ ಸಲ್ಲಿಸಿದ ಪ್ರಕರಣದ ವಿಚಾರಣೆ ನಡೆದಿತ್ತು. ಆದರೆ ಎನ್‍ಐಎ ತನಿಖಾ ತಂಡ ಈತನ ವಿರುದ್ಧ ಸಾಕ್ಷಿ ನೀಡಲು 100 ದಿನಾಂಕಗಳನ್ನು ತೆಗೆದುಕೊಂಡರೂ ಯಾವುದೇ ಆರೋಪ ಪಟ್ಟಿ ಸಲ್ಲಿಕೆ ಮಾಡಿರಲಿಲ್ಲ.

    ಈ ನಡುವೆ ಸಿದ್ದಿಬಪ್ಪ ಎರಡು ಬಾರಿ ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿದ್ದು, ಎರಡೂ ಬಾರಿಯೂ ಅರ್ಜಿ ತಿರಸ್ಕೃತಗೊಂಡಿತ್ತು. ಈಗ ಮತ್ತೊಮ್ಮೆ ಜಾಮೀನು ಅರ್ಜಿ ಸಲ್ಲಿಸಿದ್ದು, ಮೇ 6 ರಂದು ವಿಚಾರಣೆಗೆ ಬರಲಿದೆ.

    ದೆಹಲಿಯ ತಿಹಾರ್ ಜೈಲಿನಲ್ಲಿ ಎಂಟು ವರ್ಷಗಳಿಂದ ಇದ್ದೇನೆ. ವಿರುದ್ಧ ಯಾವುದೇ ಆರೋಪ ಪಟ್ಟಿ ಸಲ್ಲಿಕೆಯಾಗಿಲ್ಲ. ತನಿಖೆ ನಡೆಸುವಲ್ಲಿ ವಿಳಂಬ ಮಾಡಲಾಗುತ್ತಿದ್ದು, ಇದರಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಆದಷ್ಟು ಬೇಗ ತನಿಖೆ ನಡೆಸಿ ತೀರ್ಪು ನೀಡಿ ಇಲ್ಲವೇ ನನಗೆ ಮಧ್ಯಂತರ ಜಾಮೀನು ನೀಡುವಂತೆ ಅಬ್ದುಲ್ ವಾಹಿದ್ ಸಿದ್ದಿಬಪ್ಪ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾನೆ.

  • ವಾಜೆಗೇಟ್- ನದಿಯಲ್ಲಿ ಸಿಕ್ತು 2 ಸಿಪಿಯು, 2 ಹಾರ್ಡ್ ಡಿಸ್ಕ್, 2 ಸಿಸಿಟಿವಿ ಡಿವಿಆರ್

    ವಾಜೆಗೇಟ್- ನದಿಯಲ್ಲಿ ಸಿಕ್ತು 2 ಸಿಪಿಯು, 2 ಹಾರ್ಡ್ ಡಿಸ್ಕ್, 2 ಸಿಸಿಟಿವಿ ಡಿವಿಆರ್

    ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ ಮನೆ ಬಳಿ ಸ್ಫೋಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರೀ ತಿರುವು ಸಿಕ್ಕ ಬೆನ್ನಲ್ಲೇ ಇದೀಗ ಎನ್‍ಐಎ ಅಧಿಕಾರಿಗಳು ಸಾಕ್ಷ್ಯ ನಾಶದ ಕುರಿತು ಎನ್‍ಕೌಂಟರ್ ಸ್ಪೆಷಲಿಸ್ಟ್ ಸಚಿನ್ ವಾಜೆ ಅವರನ್ನು ಸ್ಥಳ ಪರಿಶೀಲನೆಗೆ ಕರೆದೊಯ್ದಿದ್ದರು. ಈ ವೇಳೆ ನದಿಯಲ್ಲಿ ಭಾರೀ ಪ್ರಮಾಣದ ಸಾಕ್ಷ್ಯ ಸಿಕ್ಕಿವೆ ಎಂಬ ಮಾಹಿತಿ ಲಭ್ಯವಾಗಿದೆ.

    ಬಾಂದ್ರಾದ ಮಿಥಿ ನದಿ ಬಳಿ ಎಲೆಕ್ಟ್ರಾನಿಕ್ ತುಣುಕುಗಳ ಪುರಾವೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಾಕ್ಷ್ಯ ವಶಪಡಿಸಿಕೊಳ್ಳಲು ಎನ್‍ಐಎ ಅಧಿಕಾರಿಗಳು ಇಂದು ಮುಂಬೈ ಪೊಲೀಸ್‍ನಿಂದ ಅಮಾನತುಗೊಂಡ ಎಪಿಐ ಸಚಿನ್ ವಾಜೆ ಅವರನ್ನು ಮಿಥಿ ನದಿಯ ಸೇತುವೆ ಬಳಿ ಕರೆದೊಯ್ದಿದ್ದರು. ಈ ವೇಳೆ 11 ಈಜು ತಜ್ಞರಿಂದ 3 ಗಂಟೆಗೂ ಹೆಚ್ಚು ಕಾಲ ಶೋಧ ಕಾರ್ಯ ನಡೆಸಲಾಗಿದ್ದು, ಬಳಿಕ 2 ಸಿಸಿಟಿವಿ ಡಿವಿಆರ್‍ಗಳು, 2 ಸಿಪಿಯು, 2 ಹಾರ್ಡ್ ಡಿಸ್ಕ್ ಹಾಗೂ 2 ನಂಬರ್ ಪ್ಲೇಟ್‍ಗಳು ಪತ್ತೆಯಾಗಿವೆ. ಸಾಕ್ಷ್ಯ ನಾಶಪಡಿಸುವುದರ ಭಾಗವಾಗಿ ಸಚಿನ್ ವಾಜೆ ಸಹಚರ ಎಪಿಐ ರಿಯಾಜ್ ಕಾಜಿ ಈ ವಸ್ತುಗಳನ್ನು ನದಿಗೆ ಎಸೆದಿದ್ದನು ಎಂದು ತಿಳಿದುಬಂದಿದೆ.

    ಈಜು ತಜ್ಞರು ಲ್ಯಾಪ್‍ಟಾಪ್‍ನ್ನು ಸಹ ವಶಪಡಿಸಿಕೊಂಡಿದ್ದು, ಆದರೆ ಸ್ಕ್ರೀನ್ ಟ್ಯಾಮೇಜ್ ಆಗಿದೆ. ಪ್ರಿಂಟರ್ ಸೇರಿದಂತೆ ಹಲವು ವಸ್ತುಗಳನ್ನು ಸಹ ನದಿಗೆ ಎಸೆಯಲಾಗಿದೆ. ಅಲ್ಲದೆ ನದಿಗೆ ಎಸೆಯಲಾಗಿರುವ ಎರಡೂ ನಂಬರ್ ಪ್ಲೇಟ್‍ಗಳಲ್ಲಿ ಒಂದೇ ನಂಬರ್ ಇದೆ. ವಾಹನವನ್ನು ಒಂದು ವರ್ಷದ ಹಿಂದೆ ಔರಂಗಬಾದ್‍ನಿಂದ ಕಳ್ಳತನ ಮಾಡಲಾಗಿದೆ. ಈ ನಂಬರ್‍ನ್ನು ಆರ್‍ಟಿಒ ಆಗಲೇ ಬ್ಲ್ಯಾಕ್ ಲಿಸ್ಟ್‍ಗೆ ಸೇರಿಸಿದ್ದಾರೆ ಎಂಬ ಮಾಹಿತಿ ಸಹ ಲಭ್ಯವಾಗಿದೆ.

    ನಂಬರ್ ಪ್ಲೇಟ್ ಶಾಪ್ ಬಳಿ ಸಚಿನ್ ವಾಜೆ ಓಡಾಡಿರುವುದು ಸಹ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಸ್ಪೆಂಡ್ ಆಗಿರುವ ಎಪಿಐ ರಿಯಾಜ್ ಕಾಝಿ ನಂಬರ್ ಪ್ಲೇಟ್ ಅಂಗಡಿ ಪ್ರವೇಶಿಸುತ್ತಿರುವುದು ಹಾಗೂ ಮಾಲೀಕರೊಂದಿಗೆ ಮಾತನಾಡುವುದು ತಿಳಿದಿದೆ. ಅಲ್ಲದೆ ಅಂಗಡಿಯಿಂದ ಡಿವಿಡಿ ಹಾಗೂ ಕಂಪ್ಯೂಟರ್ ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಸಹ ಸೆರೆಯಾಗಿದೆ. ಬಳಿಕ ಇದೆಲ್ಲವನ್ನೂ ಮಿಥಿ ನದಿಗೆ ಎಸೆಯಲಾಗಿದೆ. ಅಂಟಿಲಿಯಾದ ಬಳಿ ಸ್ಫೋಟಕ ಪತ್ತೆ ಹಾಗೂ ಬ್ಯುಸಿನೆಸ್ ಮ್ಯಾನ್ ಮನ್ಸುಖ್ ಹಿರಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಸಹ ರಿಯಾಜ್ ಕಾಝಿಗೆ ಎನ್‍ಐಎ ಹಾಗೂ ಮುಂಬೈ ಪೊಲೀಸ್‍ನ ಎಟಿಎಸ್ ನಿಂದ ಸಮನ್ಸ್ ನೀಡಲಾಗಿತ್ತು. ಸಚಿನ್ ವಾಜೆ ನಕಲಿ ನಂಬರ್ ಪ್ಲೇಟ್ ಪಡೆಯಲು ಕಾಝಿ ಸಹಾಯ ಮಾಡಿದ್ದಾನೆ ಎಂದು ಎಟಿಎಸ್ ಹಾಗೂ ಎನ್‍ಐಎ ಹಲವು ಬಾರಿ ಶಂಕೆ ವ್ಯಕ್ತಪಡಿಸಿವೆ.

    ಏನಿದು ಪ್ರಕರಣ?
    ಉದ್ಯಮಿ ಮುಖೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‍ಕೌಂಟರ್ ಸ್ಪೆಷಲಿಸ್ಟ್ ಸಚಿನ್ ವಾಜೆ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ) ಮಾರ್ಚ್ 14ರಂದು ಬಂಧಿಸಿದೆ. ಇದರ ಬೆನ್ನಲ್ಲೇ ಮುಂಬೈ ಪೊಲೀಸ್ ಇಲಾಖೆಯಿಂದ ಸಚಿನ್ ವಾಜೆ ಅವರನ್ನು ಅಮಾನತು ಸಹ ಮಾಡಲಾಗಿದೆ.

    ಅಂಬಾನಿ ಮನೆ ಬಳಿ ಫೆಬ್ರವರಿ 25 ರಂದು ಸ್ಕಾರ್ಪಿಯೋ ಕಾರಿನಲ್ಲಿ ಜಿಲೆಟಿನ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‍ಐಎ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರನ್ನು ಎನ್‍ಐಎ ವಶಕ್ಕೆ ಪಡೆದು 12 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿ ನಂತರ ನ್ಯಾಯಾಲಯಕ್ಕೆ ಹಾಜರು ಪಡಿಸಿತ್ತು. ನ್ಯಾಯಾಲಯದ ಆದೇಶದಂತೆ ಸಚಿನ್ ವಾಜೆ ಅವರನ್ನು ವಿಚಾರಣೆಗಾಗಿ ಮಾರ್ಚ್ 25ರ ವರೆಗೆ ಎನ್‍ಐಎ ವಶಕ್ಕೆ ಪಡೆದುಕೊಂಡಿತ್ತು.

    ಎನ್‍ಐಎ ವಕ್ತಾರರ ಪ್ರಕಾರ, “ಫೆಬ್ರವರಿ 25 ರಂದು ಕಾರ್ಮೈಕಲ್ ರಸ್ತೆ ಬಳಿ ಸ್ಫೋಟಕಗಳಿಂದ ತುಂಬಿದ್ದ ವಾಹನವನ್ನು ಇರಿಸುವಲ್ಲಿ ಸಚಿನ್ ವಾಜೆರವರ ಪಾತ್ರವಿರುವುದರಿಂದ ಸೆಕ್ಷನ್ 286 (ಸ್ಫೋಟಕ ವಸ್ತುವಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ವರ್ತನೆ), 473 (ನಕಲಿ ಮುದ್ರೆಯನ್ನು ತಯಾರಿಸುವುದು ಅಥವಾ ಹೊಂದಿರುವುದು), 502 (2)(ಕ್ರಿಮಿನಲ್ ಬೆದರಿಕೆ), 120 ಬಿ ಅಡಿಯಲ್ಲಿ ಸಚಿನ್ ವಾಜೆರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದರು.

    ಅಂಬಾನಿ ನಿವಾಸದ ಬಳಿ ಪತ್ತೆಯಾಗಿದ್ದ ಸ್ಕಾರ್ಪಿಯೋ ಕಾರಿನ ಮಾಲೀಕ ಥಾಣೆ ಉದ್ಯಮಿ ಮನ್ಸುಖ್ ಹಿರಾನ್ ಸಾವಿಗೆ ಸಂಬಂಧಿಸಿದಂತೆ ಸಚಿನ್ ವಾಜೆ ಅವರ ಪಾತ್ರವಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಕುರಿತಂತೆ ತನಿಖೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.

  • ಬೆಂಗಳೂರು ಗಲಭೆ – ಎನ್‌ಐಎಯಿಂದ ಎಸ್‌ಡಿಪಿಐ, ಪಿಎಫ್‌ಐಯ 17 ಮಂದಿ  ಅರೆಸ್ಟ್‌

    ಬೆಂಗಳೂರು ಗಲಭೆ – ಎನ್‌ಐಎಯಿಂದ ಎಸ್‌ಡಿಪಿಐ, ಪಿಎಫ್‌ಐಯ 17 ಮಂದಿ ಅರೆಸ್ಟ್‌

    ಬೆಂಗಳೂರು: ದೇವರಜೀವನಹಳ್ಳಿ(ಡಿಜೆಹಳ್ಳಿ) ಮತ್ತು ಕಾಡುಗೊಂಡನ ಹಳ್ಳಿ(ಕೆಜೆಹಳ್ಳಿ) ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 17 ಮಂದಿ ಆರೋಪಿಗಳನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಬಂಧಿಸಿದೆ.

    ಎಸ್‌ಡಿಪಿಐ ನಾಯಕರಾದ ಕೆಜೆ ಹಳ್ಳಿ ವಾರ್ಡ್‌ನ ಅಧ್ಯಕ್ಷ ಇಮ್ರಾನ್ ಅಹ್ಮದ್, ಇತರ ಹಿರಿಯ ನಾಯಕ ರುಬಾ ವಕಾಸ್, ನಾಗವಾರ ವಾರ್ಡ್‌ನ ಎಸ್‌ಡಿಪಿಐ ಅಧ್ಯಕ್ಷ ಅಬ್ಬಾಸ್ ಆತನ ಸಹಚರರಾದ ಅಜಿಲ್ ಪಾಷಾ, ಇರ್ಫಾನ್ ಖಾನ್ ಮತ್ತು ಅಕ್ಬರ್ ಖಾನ್ ಸೇರಿದಂತೆ 17 ಮಂದಿಯನ್ನು ಬಂಧಿಸಲಾಗಿದೆ.

    ಕೃತ್ಯಕ್ಕೂ ಮುನ್ನ ಆಗಸ್ಟ್‌ 11ರ ಸಂಜೆ ಸಭೆ ನಡೆಸಿದ್ದಾರೆ. ಬೆಂಗಳೂರಿನ ಥಣಿಸಂದ್ರದ ಮತ್ತು ಕೆ.ಜಿ ಹಳ್ಳಿ ವಾರ್ಡ್‌ಗಳಲ್ಲಿ ನಡೆದ ಸಭೆಗಳಲ್ಲಿ ಪಿತೂರಿ ನಡೆಸಿ, ಗಲಭೆಗೆ ಜನರನ್ನು ಸಜ್ಜುಗೊಳಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ಹೆಚ್ಚಿನ ಜನಸಮೂಹ ಜಮಾವಣೆಗೆ ಕುಮ್ಮಕ್ಕು ನೀಡಿದ ಆರೋಪ ಇವರ ಮೇಲಿದೆ.

    ಆರೋಪಿಗಳಾದ ಸದ್ದಾಂ, ಸಯೀದ್ ಸೊಹೆಲ್, ಕಲೀಮುಲ್ಲಾ ಅಲಿಯಾಸ್‌ ಶಾರುಖ್ ಖಾನ್ ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ಮತ್ತು ವಾಟ್ಸಪ್‌ ಮೂಲಕ ಕೃತ್ಯಕ್ಕೆ ಪ್ರಚೋದನೆ ನೀಡಿ ಜನರು ಸೇರುವಂತೆ ಮಾಡಿದ್ದರು ಎಂದು ಎನ್‌ಐಎ ಹೇಳಿದೆ.

    17 ಮಂದಿ ಸೇರಿದಂತೆ ಒಟ್ಟು ಈ ಪ್ರಕರಣಕ್ಕೆ ಸಂಬಂಧಿಸಿಂತೆ 187 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎನ್‌ಐಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

  • ಮಂಗಳೂರಲ್ಲಿ ಉಗ್ರರ ಪರ ಗೋಡೆ ಬರಹ- ಎನ್‍ಐಎ ತನಿಖೆಗೆ ವಿಎಚ್‍ಪಿ ಆಗ್ರಹ

    ಮಂಗಳೂರಲ್ಲಿ ಉಗ್ರರ ಪರ ಗೋಡೆ ಬರಹ- ಎನ್‍ಐಎ ತನಿಖೆಗೆ ವಿಎಚ್‍ಪಿ ಆಗ್ರಹ

    ಮಂಗಳೂರು: ಉಗ್ರರ ಪರ ಗೋಡೆ ಬರಹ ಬರೆದ ಪ್ರಕರಣದ ತನಿಖೆಯನ್ನು ಎನ್‍ಐಎಗೆ ವಹಿಸುವಂತೆ ವಿಶ್ವ ಹಿಂದೂ ಪರಿಷತ್ ಒತ್ತಾಯಿಸಿದೆ.

    ಆರೋಪಿಗಳಾದ ತೀರ್ಥಹಳ್ಳಿಯ ಮಾಜ್ಸ್ ಮುನೀರ್ ಅಹಮದ್, ಮಹಮದ್ ಶರೀಕ್ ಹಾಗೂ ಸಾದತ್ ಮೂರು ಜನ ಶಂಕಿತ ಉಗ್ರರನ್ನು ಬಂಧಿಸಿದ ಪೊಲೀಸರ ಕೆಲಸ ಶ್ಲಾಘನೀಯ . ಆದರೆ ಆರೋಪಿಗಳ ವಿರುದ್ಧ ತನಿಖೆ ನಡೆಸಲು ಎನ್‍ಐಎಗೆ ವಹಿಸಬೇಕು ಎಂದು ವಿಎಚ್‍ಪಿ ಆಗ್ರಹಿಸಿದೆ.

    ಈ ಕುರಿತು ವಿಶ್ವ ಹಿಂದೂ ಪರಿಷತ್‍ನ ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಿಂದ ಐಸಿಸ್ ಉಗ್ರಗಾಮಿ ಸಂಘಟನೆಗಳ ಕುಖ್ಯಾತ ಕೆಲವು ವ್ಯಕ್ತಿಗಳ ವಿಡಿಯೋ, ಜಾಗತಿಕ ಭಯೋತ್ಫಾದಕ ಜಮೈಕಾ ಮೂಲದ ಶೇಕ್ ಅಬ್ದುಲ್ಲಾ ಫೈಝಲ್ ಪ್ರಚೋದನಕಾರಿ ಭಾಷಣ ಮತ್ತು ಉಗ್ರರ ಅಧ್ಯಯನಕ್ಕೆ ಸಂಬಂಧಿಸಿದಂತೆ ಪುಸ್ತಕಗಳು ಸಿಕ್ಕಿರುವುದು ಬಹಳ ಆತಂಕಕಾರಿ ವಿಷಯ. ಇವರ ಹಿಂದೆ ವ್ಯವಸ್ಥಿತ ಜಾಲ ಕೆಲಸ ಮಾಡುತ್ತಿದ್ದು, ಇನ್ನಷ್ಟು ವ್ಯಕ್ತಿಗಳು ಇದರ ಹಿಂದೆ ಕೆಲಸ ಮಾಡುತ್ತಿದ್ದಾರೆ ಎಂದು ಸ್ಪಷ್ಟವಾಗಿ ಗೋಚರವಾಗುತ್ತಿದೆ ಎಂದು ತಿಳಿಸಿದ್ದಾರೆ.

    ಎನ್‍ಐಎ ತನಿಖೆಗೆ ಒಳಪಡಿಸಿದರೆ ಇದರ ಹಿಂದಿರುವ ವ್ಯವಸ್ಥಿತ ಜಾಲ ಮತ್ತು ವ್ಯಕ್ತಿಗಳನ್ನು ಬೇಧಿಸಲು ಸಾಧ್ಯವಾಗುತ್ತದೆ. ಹೀಗಾಗಿ ಈ ಪ್ರಕರಣವನ್ನು ಎನ್‍ಐಎ ತನಿಖೆಗೆ ನೀಡಲು ಮಂಗಳೂರು ಪೊಲೀಸ್ ಕಮಿಷನರ್ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

  • ಉಗ್ರ ಸಂಘಟನೆಯೊಂದಿಗೆ ಸಂಪರ್ಕ- ಶಿರಸಿ ಯುವಕನನ್ನು ಬಂಧಿಸಿದ ಎನ್‍ಐಎ

    ಉಗ್ರ ಸಂಘಟನೆಯೊಂದಿಗೆ ಸಂಪರ್ಕ- ಶಿರಸಿ ಯುವಕನನ್ನು ಬಂಧಿಸಿದ ಎನ್‍ಐಎ

    ಕಾರವಾರ: ಲಷ್ಕರ್-ಎ-ತೊಯ್ಬಾ (ಎಲ್‍ಇಟಿ) ಉಗ್ರ ಸಂಘಟನೆಯ ಸಂಪರ್ಕದಲ್ಲಿದ್ದ ಆರೋಪದ ಮೇಲೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಯುವಕನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಅಧಿಕಾರಿಗಳು ಬಂಧಿಸಿದ್ದಾರೆ.

    28 ವರ್ಷದ ಸೈಯದ್ ಇದ್ರಿಸ್ ನಬಿ ಸಾಬ್ ಬಂಧಿತ ಆರೋಪಿಯಾಗಿದ್ದಾನೆ. ಲಷ್ಕರ್-ಎ-ತೊಯ್ಬಾದ ಸಂಘಟನೆಯಲ್ಲಿ ಗುರುತಿಸಿಕೊಂಡು ಪಶ್ಚಿಮಬಂಗಾಳದಲ್ಲಿ ಬಂಧಿಯಾಗಿದ್ದ ತಾನಿಯಾ ಪರ್ವೀನ್ ಎನ್ನುವವನೊಂದಿಗೆ ಈತ ಸಂಪರ್ಕ ಹೊಂದಿದ್ದ ಆರೋಪದಲ್ಲಿ ಈತನನ್ನು ಬಂಧಿಸಲಾಗಿದೆ.

    ಮೊಬೈಲ್ ಫೋನ್ ಆಧಾರದ ಮೇಲೆ ಈತನನ್ನ ಬಂಧಿಸಲಾಗಿದೆ. ಎನ್‍ಐಎ ಪ್ರಾಥಮಿಕ ತನಿಖೆಯ ಪ್ರಕಾರ ಈತ ಐಎಸ್‍ಐ ಉಗ್ರ ಸಂಘಟನೆಯೊಂದಿಗೂ ಸಂಪರ್ಕ ಹೊಂದಿದ್ದ ಎನ್ನಲಾಗಿದ್ದು, ಬಂಧಿಸಿ ಕೋಲ್ಕತ್ತಾಗೆ ಕರೆದೊಯ್ದಿದ್ದಾರೆ.

    ಬಂಧನ ಕುರಿತು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಎನ್‍ಐಎ, ಬಂಧಿತ ಪಾಕಿಸ್ತಾನ ಮೂಲದ ಹ್ಯಾಂಡ್ಲರ್ ಗಳು ನಿರ್ವಹಿಸುತ್ತಿದ್ದ ವಿವಿಧ ಸಾಮಾಜಿಕ ಜಾಲತಾಣಗಳ ಗುಂಪುಗಳ ಭಾಗವಾಗಿದ್ದು, ಇವುಗಳನ್ನು ಭಯೋತ್ಪಾದಕ ಚಟುವಟಿಕೆ ಮತ್ತು ಎಲ್‍ಇಟಿ ಉಗ್ರ ಸಂಘಟನೆಯ ಸ್ಪೀಪರ್ ಸೆಲ್ ಆಗಿ ನೇಮಕ ಮಾಡಿಕೊಳ್ಳಲು ಬಳಕೆ ಮಾಡಿಕೊಳ್ಳಲಾಗಿತ್ತು. ಆರೋಪಿಯನ್ನು ಕೋಲ್ಕತ್ತಾ ಎನ್‍ಐಎ ಕೋರ್ಟಿನಲ್ಲಿ ಹಾಜರುಪಡಿಸಲು ಕರೆದ್ಯೊಲಾಗುತ್ತಿದೆ ಎಂದು ತಿಳಿಸಿದೆ.

  • ಡಿಜೆ ಹಳ್ಳಿ ಗಲಭೆ- ಇಬ್ಬರು ಶಾಸಕರನ್ನ ವಿಚಾರಣೆ ನಡೆಸಿದ ಎನ್‍ಐಎ

    ಡಿಜೆ ಹಳ್ಳಿ ಗಲಭೆ- ಇಬ್ಬರು ಶಾಸಕರನ್ನ ವಿಚಾರಣೆ ನಡೆಸಿದ ಎನ್‍ಐಎ

    ಬೆಂಗಳೂರು: ಡಿ.ಜೆ.ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಎನ್‍ಐಎ ಇಬ್ಬರು ಕಾಂಗ್ರೆಸ್ ಶಾಸಕರನ್ನು ವಿಚಾರಣೆಗೆ ಒಳಪಡಿಸಿರುವ ಎಕ್ಸ್ ಕ್ಲೂಸಿವ್ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಶಿವಾಜಿ ನಗರ ಶಾಸಕ ರಿಜ್ವಾನ್ ಅರ್ಷದ್ ಮತ್ತು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಇಬ್ಬರು ಎನ್‍ಐಎ ವಿಚಾರಣೆ ಹಾಜರಾಗಿ ತಮ್ಮ ಹೇಳಿಕೆಯನ್ನ ದಾಖಲಿಸಿದ್ದಾರೆ. ಡಿಜೆ ಹಳ್ಳಿಯಲ್ಲಿ ಗಲಭೆ ನಡೆದಾಗ ಇಬ್ಬರು ಶಾಸಕರು ಘಟನಾ ಸ್ಥಳದಲ್ಲಿರುವ ಬಗ್ಗೆ ಎನ್‍ಐಎಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆ ಎನ್‍ಐಎ ಇಬ್ಬರನ್ನು ಬೆಂಗಳೂರಿನ ದೊಮ್ಮಲೂರಿನ ಕಚೇರಿಯಲ್ಲಿ ವಿಚಾರಣೆ ನಡೆಸಿದೆ. ಮಂಗಳವಾರ ಜಮೀರ್ ಅಹ್ಮದ್ ಮತ್ತು ಸೋಮವಾರ ರಿಜ್ವಾನ್ ಅರ್ಷದ್ ವಿಚಾರಣೆಗೆ ಹಾಜರಾಗಿದ್ದರು ಎಂದು ತಿಳಿದು ಬಂದಿದೆ.

    ಜಮೀರ್ ಅಹ್ಮದ್ ಅವರನ್ನು ಸುಮಾರು 20 ನಿಮಿಷ ಮತ್ತು ರಿಜ್ವಾನ್ ಅರ್ಷದ್ ಅವರನ್ನ ಅರ್ಧ ಗಂಟೆಗೂ ಹೆಚ್ಚು ಕಾಲ ಎನ್‍ಐಎ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದೆ. ಅಂದು ಗಲಭೆ ಸ್ಥಳಕ್ಕೆ ನೀವು ಹೋಗಿದ್ಯಾಕೆ? ಗಲಭೆ ಬಗ್ಗೆ ನಿಮಗೆ ಹೇಗೆ ಗೊತ್ತಾಯ್ತು? ಇದು ಪೂರ್ವ ನಿಯೋಜಿತ ಅಂತ ನಿಮಗೆ ಅನ್ನಿಸಿದೆಯಾ? ಉದ್ರಿಕ್ತರು ನಿಮ್ಮ ಮಾತು ಆಲಿಸುವ ಸೌಜನ್ಯ ತೋರಿಸಿದ್ರಾ? ಗಲಭೆ ಕೋರರನ್ನ ಕುರಿತು ಏನು ಹೇಳಿದಿರಿ ಎಂದು ಪ್ರಶ್ನೆ ಕೇಳಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಡಿ.ಜೆ. ಹಳ್ಳಿ, ಕೆ.ಜೆ.ಹಳ್ಳಿ ಗಲಭೆ ಪ್ರಕರಣ ಸಂಬಂಧ ಸಿಸಿಬಿ ಕೋರ್ಟ್ ಗೆ ಸಲ್ಲಿಸಿದ ದೋಷರೋಪ ಪಟ್ಟಿಯಲ್ಲಿನ ಮತ್ತಷ್ಟು ಸ್ಫೋಟಕ ವಿಚಾರಗಳು ಬೆಳಕಿಗೆ ಬಂದಿವೆ. ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಜೀವಂತ ದಹನಕ್ಕೆ ಸಂಚು ನಡೆದಿತ್ತು ಎಂಬ ವಿಚಾರ ಬಯಲಾಗಿದೆ. ಡಿ.ಜೆ. ಹಳ್ಳಿ ಗಲಭೆ ಹಿಂದೆ ಕಾಂಗ್ರೆಸ್-ಎಸ್‍ಡಿಪಿಐ ಪಾತ್ರವಿರೋ ಬಗ್ಗೆ ಚಾರ್ಜ್‍ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.

    ಮುಸ್ಲಿಂ ಬಾಹುಳ್ಯದ ತಿಲಕ್‍ನಗರ, ಚಾಮರಾಜಪೇಟೆ, ಗೋರಿಪಾಳ್ಯದ ಪುಂಡ ಯುವಕರನ್ನು ಪ್ರಚೋದಿಸಿ ಗಲಭೆ ಮಾಡಿಸಲಾಗಿದೆ. ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಕಾಂಗ್ರೆಸ್ಸಿಗರೇ ಬೆಂಕಿ ಹಚ್ಚಿಸಿದ್ದಾರೆ. ಅಖಂಡ ಮನೆಗೆ ಬೆಂಕಿ ಬಿದ್ದಾಗ, ಕೇವಲ 100 ಮೀಟರ್ ದೂರದಲ್ಲಿ ಇರುವ ಸಂತೋಷ್ ನಿವಾಸದಲ್ಲಿ ಸಂಪತ್ ರಾಜ್ ಇದ್ದರು. ಅಸಲಿಗೆ ಗಲಭೆಗೆ ಫಂಡಿಂಗ್ ಮಾಡಿದ್ದೇ ಸಂಪತ್ ರಾಜ್ ಮತ್ತು ಮಾಜಿ ಕಾರ್ಪೋರೇಟರ್ ಜಾಕೀರ್.

    ಗಲಭೆ ನಡೆಸಲು ಬಂದಿದ್ದ ಪುಂಡರಿಗೆ ಸಂಪತ್ ರಾಜ್ ಫ್ರೀಯಾಗಿ ಸಂಪತ್ ರಾಜ್ ಪೆಟ್ರೋಲ್ ಕೊಡಿಸಿದ್ರು. ಇದರ ಜವಾಬ್ದಾರಿಯನ್ನು ಅರುಣ್ ವಹಿಸಿಕೊಂಡಿದ್ದನು. ಕಾವಲ್ ಬೈರಸಂದ್ರದ ಬಸ್ ನಿಲ್ದಾಣದಲ್ಲೇ ಹಣ ಕೂಡ ಹಂಚಲಾಗಿತ್ತು ಎಂಬುದಕ್ಕೆ ದೃಶ್ಯ ಸಾಕ್ಷ್ಯ ಸಮೇತ ಸಿಸಿಬಿ ಕೋರ್ಟ್‍ಗೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ಚಾರ್ಜ್‍ಶೀಟ್ ಬೆನ್ನಲ್ಲೇ ಶಾಸಕ ಅಖಂಡ ಶ್ರೀನಿವಾಸ್ ಬೆಂಬಲಿಗರು ಸಂಪತ್ ರಾಜ್ ವಿರುದ್ಧ ಬೀದಿಗೆ ಇಳಿದಿದ್ದಾರೆ. ಟ್ಯಾನರಿ ರೋಡ್‍ನ ಸಂಪತ್ ರಾಜ್ ನಿವಾಸದೆದರು ಪ್ರತಿಭಟನೆ ನಡೆಸಿದರು. ಸಂಪತ್ ರಾಜ್, ಜಾಕೀರ್ ಬಂಧಿಸುವಂತೆ ಒತ್ತಾಯಿಸಿದರು.