Tag: NHAI

  • ನ.15 ರಿಂದ ಹೊಸ ಟೋಲ್ ನಿಯಮ – ಫಾಸ್ಟ್‌ಟ್ಯಾಗ್ ಇಲ್ಲದವರಿಗೆ‌ ಗುಡ್‌ನ್ಯೂಸ್‌, UPI ಪಾವತಿದಾರರಿಗೆ ಭಾರೀ ರಿಯಾಯಿತಿ

    ನ.15 ರಿಂದ ಹೊಸ ಟೋಲ್ ನಿಯಮ – ಫಾಸ್ಟ್‌ಟ್ಯಾಗ್ ಇಲ್ಲದವರಿಗೆ‌ ಗುಡ್‌ನ್ಯೂಸ್‌, UPI ಪಾವತಿದಾರರಿಗೆ ಭಾರೀ ರಿಯಾಯಿತಿ

    ನವದೆಹಲಿ: ಟೋಲ್ (Toll) ಪಾವತಿಗಳಿಗೆ ಸಂಬಂಧಿಸಿದಂತೆ ಡಿಜಿಟಲ್‌ ಪಾವತಿಯನ್ನ ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರ ಮತ್ತೊಂದು ಹೊಸ ನಿಯಮ ಪರಿಚಯಿಸಿದೆ. ಇದರಿಂದ ಫಾಸ್ಟ್‌ಟ್ಯಾಗ್‌ ಹೊಂದಿಲ್ಲದವರು ಯುಪಿಐ ಪಾವತಿ ಮೂಲಕವೂ ರಿಯಾಯಿತಿ ಗಳಿಸಬಹುದಾಗಿದೆ. ನವೆಂಬರ್‌ 15ರಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ.

    ಸಹೌದು. ಫಾಸ್ಟ್‌ ಟ್ಯಾಗ್‌ (FASTag) ಹೊಂದದೇ ಇರುವ ವಾಹನಗಳು ನವೆಂಬರ್ 15ರಿಂದ ನಗದುರೂಪದಲ್ಲಿ ಟೋಲ್ ಶುಲ್ಕ ಪಾವತಿಸಲು ಬಯಸಿದ್ರೆ ಅವು ಎರಡುಪಟ್ಟು ಹೆಚ್ಚು ಹಣ ಪಾವತಿಸಬೇಕಾಗುತ್ತದೆ. ಆದ್ರೆ ಯುಪಿಐ (UPI) ರೂಪದಲ್ಲಿ ಶುಲ್ಕ ಪಾವತಿಸುವವರಿಗೆ ನಿಗದಿಗಿಂತ 1.25 ಪಟ್ಟು ಅಧಿಕ ಶುಲ್ಕ ವಿಧಿಸಲಾಗುತ್ತದೆ. ಇದನ್ನೂ ಓದಿ: ಮುಂಬೈಗೆ ಸೈಕ್ಲೋನ್ `ಶಕ್ತಿʼಯ ಭೀತಿ – ಸೋಮವಾರ ಗುಜರಾತ್‌ಗೂ ಅಪ್ಪಳಿಸಲಿದೆ ಚಂಡಮಾರುತ

    ಫಾಸ್ಟ್‌ಟ್ಯಾಗ್‌ ಬಳಕೆದಾರರಲ್ಲದವರಿಗೆ ಅವರ ಟೋಲ್ ಶುಲ್ಕ (Toll) ಪಾವತಿಯ ವಿಧಾನವನ್ನ ಆಧರಿಸಿ ವಿಭಿನ್ನ ಶುಲ್ಕಗಳನ್ನು ವಿಧಿಸಲು ರಸ್ತೆ ಸಾರಿಗೆ ಹಾಗೂ ಹೆದ್ದಾರಿ (MORTH) ಸಚಿವಾಲಯವು ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರಗಳು ಹಾಗೂ ಆದಾಯ ನಿರ್ಧಾರ) ನಿಯಮಗಳು, 2008 ಅನ್ನು ತಿದ್ದುಪಡಿಗೊಳಿಸಿದೆ. ಟೋಲ್‌ ಪ್ಲಾಜಾಗಳಲ್ಲಿ (Toll Plaza) ಡಿಜಿಟಲ್ ಪಾವತಿ ಉತ್ತೇಜಿಸುವುದು ಹಾಗೂ ನಗದು ಬಳಕೆಯನ್ನು ಕಡಿಮೆಗೊಳಿಸುವುದು ಈ ಕ್ರಮದ ಉದ್ದೇಶವಾಗಿದೆ ಎಂದು ಇಂದು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

    ನವೆಂಬರ್‌ 15ರಿಂದ ನಿಯಮ ಜಾರಿ
    ಟೋಲ್‌ ಪ್ಲಾಜಾಗಳಲ್ಲಿ ನಗದು ವಹಿವಾಟು ಕಡಿಮೆಮಾಡಲು ಈ ಬದಲಾವಣೆ ತರಲಾಗಿದ್ದು, ನವೆಂಬರ್‌ 15ರಿಂದ ಹೊಸ ನಿಯಮ ಜಾರಿಗೆ ಬರಲಿದೆ. ಅಲ್ಲದೇ ಡಿಜಿಟಲ್‌ ಪಾವತಿ ಮಾಡುವುದರಿಂದ ಪಾರದರ್ಶಕತೆ ಕಾಯ್ದುಕೊಳ್ಳುವ ಜೊತೆಗೆ ವಾಹನ ದಟ್ಟಣೆಯೂ ಕಡಿಮೆಯಾಗಲಿದೆ, ಹೆದ್ದಾರಿ ಬಳಕೆದಾರರ ಪ್ರಯಾಣ ಸಮಯ ಉಳಿತಾಯ ಕೂಡ ಮಾಡಬಹುದಾಗಿದೆ. ಇದನ್ನೂ ಓದಿ: ಕಂದಮ್ಮಗಳ ಜೀವ ತೆಗೆದ ಕೆಮ್ಮಿನ ಸಿರಪ್ – ಕೇಂದ್ರ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ

    ಉದಾಹರಣೆಗೆ
    ಫಾಸ್ಟ್‌ಟ್ಯಾಗ್ ಮೂಲಕ ವಾಹನದ ಟೋಲ್ ಶುಲ್ಕ 100 ರೂ. ಆಗಿದ್ದರೆ, ನಗದು ರೂಪದಲ್ಲಿ ಪಾವತಿಸಿದರೆ 200 ರೂ. ಆಗುತ್ತದೆ, ಆದರೆ UPI ಮೂಲಕ ಡಿಜಿಟಲ್ ಆಗಿ ಪಾವತಿಸಿದರೆ 125 ರೂ. ಮಾತ್ರ ಆಗುತ್ತದೆ. ಇದರರ್ಥ ನವೆಂಬರ್ 15 ರಿಂದ FASTag ಅಲ್ಲದ ಬಳಕೆದಾರರು UPI ಮೂಲಕ ಪಾವತಿ ಮಾಡಿದ್ರೆ 100 ರೂ.ನಲ್ಲಿ 75 ರೂ. ಉಳಿತಾಯ ಮಾಡಬಹುದಾಗಿದೆ. ಇದನ್ನೂ ಓದಿ: ಬಿಹಾರದಲ್ಲಿ ವಿಧಾನಸಭೆ ಚುನಾವಣೆ; ತಯಾರಿ ಪರಿಶೀಲಿಸಿದ ಕೇಂದ್ರ ಚುನಾವಣಾ ಆಯೋಗ

  • ವಾರ್ಷಿಕ ಫಾಸ್ಟ್ಯಾಗ್ ಪಾಸ್ ಪಡೆಯುವುದು ಹೇಗೆ? ಯಾರೆಲ್ಲಾ ಅರ್ಹರು?

    ವಾರ್ಷಿಕ ಫಾಸ್ಟ್ಯಾಗ್ ಪಾಸ್ ಪಡೆಯುವುದು ಹೇಗೆ? ಯಾರೆಲ್ಲಾ ಅರ್ಹರು?

    ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಇತಿಹಾಸದಲ್ಲಿ ಕ್ರಾಂತಿಕಾರಕ ಯೋಜನೆಯಾಗಿರುವ ಫಾಸ್ಟ್ಯಾಗ್‌ ವಾರ್ಷಿಕ ಪಾಸ್‌ ಅನ್ನು (Fastag Annual Pass) ಆಗಸ್ಟ್‌ 15ರಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಹೌದು, ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ (Nitin Gadkari) ಅವರು ಕೆಲ ದಿನಗಳ ಹಿಂದೆ ಫಾಸ್ಟ್‌ಟ್ಯಾಗ್‌ ವಾರ್ಷಿಕ ಪಾಸ್‌ ಯೋಜನೆಯನ್ನು ಘೋಷಿಸಿದ್ದರು. ಅದು ಆಗಸ್ಟ್‌ 15ರಿಂದ ಶುರುವಾಗಿದ್ದು, ಇನ್ನು ಮುಂದೆ ವರ್ಷಕ್ಕೊಮ್ಮೆ ಹಣ ಪಾವತಿಸಿ, ಚಿಂತೆಯಿಲ್ಲದೆ ಹೆದ್ದಾರಿಯಲ್ಲಿ ಪ್ರಯಾಣಿಸಬಹುದಾಗಿದೆ.

    ಹಾಗಿದ್ರೆ ಏನಿದು ವಾರ್ಷಿಕ ಪಾಸ್‌ ಯೋಜನೆ? ದುಡ್ಡು ಎಷ್ಟು? ಟ್ರಿಪ್‌ಗಳನ್ನು ಹೇಗೆ ಲೆಕ್ಕ ಹಾಕುತ್ತಾರೆ? ಯಾವೆಲ್ಲಾ ರಸ್ತೆಯಲ್ಲಿ ವಾಹನ ಸವಾರರು ಓಡಾಡಬಹುದು? ವಾರ್ಷಿಕ ಪಾಸ್‌ ಪಡೆಯುವುದು ಹೇಗೆ? ಯಾರೆಲ್ಲ ಅರ್ಹರು ಎಂಬ ಗೊಂದಲಗಳಿಗೆ ಇಲ್ಲಿ ಉತ್ತರ ನೀಡಲಾಗಿದೆ.

    ಏನಿದು ಫಾಸ್ಟ್ಯಾಗ್‌ ವಾರ್ಷಿಕ ಪಾಸ್‌ ಯೋಜನೆ?
    ಆಗಸ್ಟ್ 15 ರಿಂದ ದೇಶಾದ್ಯಂತ ಸುಮಾರು 1,150 ಟೋಲ್ ಪ್ಲಾಜಾಗಳಲ್ಲಿ ಈ ಯೋಜನೆ ಜಾರಿಗೆ ಬಂತು. ಹಿಂದೆ ವಾಹನ ಚಾಲಕರು ಪ್ರತಿ ಟೋಲ್ ಗೇಟ್‌ನಲ್ಲಿ ನಿಲ್ಲಿಸಿ ಟೋಲ್‌ ಪಾವತಿಸಬೇಕಾಗಿತ್ತು. ಆದರೆ ಫಾಸ್ಟ್ಯಾಗ್‌ ಬಂದ ಮೇಲೆ ಇದು ಡಿಜಿಟಲ್ ಆಗಿ ಮಾರ್ಪಟ್ಟಿದೆ. ಇದೀಗ ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್‌ ಮೂಲಕ ಟೋಲ್‌ ಪಾವತಿ ಇನ್ನೂ ಸುಲಭವಾಗಲಿದೆ.

    ವಾರ್ಷಿಕ ಪಾಸ್ ಪಡೆಯುವುದು ಹೇಗೆ?
    ನಿಮ್ಮ ವಾಹನವು ಮಾನ್ಯವಾದ ಫಾಸ್ಟ್ಯಾಗ್‌ ಹೊಂದಿರಬೇಕು. ನಂತರ ನೀವು ರಾಜಮಾರ್ಗಯಾತ್ರೆ ಅಪ್ಲಿಕೇಶನ್‌ನಲ್ಲಿ ಅಥವಾ NHAIನ ಅಧಿಕೃತ ವೆಬ್‌ಸೈಟ್‌ನಲ್ಲಿ 3,000 ರೂ. ಪಾವತಿಸುವ ಮೂಲಕ ಪಾಸ್ ಅನ್ನು ಖರೀದಿಸಬಹುದು. ಪಾವತಿ ಮಾಡಿದ 2 ಗಂಟೆಗಳ ಒಳಗೆ ಪಾಸ್ ಅನ್ನು ಸಕ್ರಿಯಗೊಳಿಸಲಾಗುತ್ತದೆ.

    ವಾರ್ಷಿಕ ಪಾಸ್‌ನ ಪ್ರಯೋಜನಗಳೇನು?
    ವಾರ್ಷಿಕ ಪಾಸ್‌ನೊಂದಿಗೆ, ಪ್ರತಿ ಬಾರಿಯೂ ರೀಚಾರ್ಜ್ ಮಾಡುವ ಮತ್ತು ಹಣವನ್ನು ಪಾವತಿಸುವ ತೊಂದರೆ ಇರುವುದಿಲ್ಲ. ನೀವು ಒಂದು ವರ್ಷದಲ್ಲಿ ಸುಮಾರು 200 ಟ್ರಿಪ್‌ಗಳಿಗೆ ನಿಲ್ಲದೆ ಪ್ರಯಾಣಿಸಬಹುದು. ವಾರ್ಷಿಕವಾಗಿ ಅದನ್ನು ತೆಗೆದುಕೊಳ್ಳುವುದರಿಂದ ಬಹಳಷ್ಟು ಹಣ ಉಳಿತಾಯವಾಗುತ್ತದೆ.

    ಭಾರತದಲ್ಲಿ ಪ್ರಸ್ತುತ 8 ಕೋಟಿಗೂ ಹೆಚ್ಚು ಫಾಸ್ಟ್ಯಾಗ್‌ ಬಳಕೆದಾರರಿದ್ದಾರೆ. ಟೋಲ್‌ಗಳಲ್ಲಿ 98%ರಷ್ಟು ವಹಿವಾಟುಗಳನ್ನು ಡಿಜಿಟಲ್ ರೂಪದಲ್ಲಿ ಮಾಡಲಾಗುತ್ತಿದೆ. ಈ ವ್ಯವಸ್ಥೆಯು ಟೋಲ್‌ಗೇಟ್‌ಗಳಲ್ಲಿ ವಾಹನಗಳು ವೇಗವಾಗಿ ಚಲಿಸಲು ಸಹಾಯ ಮಾಡುತ್ತದೆ. ಈ ವಾರ್ಷಿಕ ಪಾಸ್ ಒಂದು ವರ್ಷ ಅಥವಾ 200 ಟೋಲ್ ಪ್ಲಾಜಾ ಕ್ರಾಸಿಂಗ್‌ಗಳಿಗೆ ಮಾನ್ಯವಾಗಿರುತ್ತದೆ. ಮಾನ್ಯ ಫಾಸ್ಟ್ಯಾಗ್ ಹೊಂದಿರುವ ಎಲ್ಲಾ ವಾಣಿಜ್ಯೇತರ ವಾಹನಗಳಿಗೆ ಇದು ಅನ್ವಯಿಸುತ್ತದೆ.

    ವಾರ್ಷಿಕ ಪಾಸ್ ಅನ್ನು ಎಲ್ಲಿ ಬಳಸಬಹುದು?
    ಇದು ರಾಷ್ಟ್ರೀಯ ಹೆದ್ದಾರಿ (NH) ಮತ್ತು ರಾಷ್ಟ್ರೀಯ ಎಕ್ಸ್‌ಪ್ರೆಸ್‌ವೇ (NE) ಟೋಲ್ ಫ್ಲಾಜಾಗಳಲ್ಲಿ ಮಾತ್ರ ಮಾನ್ಯವಾಗಿರುತ್ತದೆ. ಹೆದ್ದಾರಿ ಅಥವಾ ಎಕ್ಸ್‌ಪ್ರೆಸ್‌ವೇ ರಾಜ್ಯ ಅಥವಾ ಖಾಸಗಿಯಾಗಿದ್ದರೆ, ವಾರ್ಷಿಕ ಫಾಸ್ಟ್ಯಾಗ್ ಪಾಸ್‌ನೊಂದಿಗೆ ಉಚಿತ ಪ್ರವೇಶಕ್ಕೆ ಅವಕಾಶ ದೊರೆಯುವುದಿಲ್ಲ.

    ಪಾಸ್ ಅನ್ನು ಎಲ್ಲಿ ಖರೀದಿಸಬಹುದು?
    ಫಾಸ್ಟ್ಯಾಗ್ ವಾರ್ಷಿಕ ಪಾಸ್ ಗಾಗಿ ಮೀಸಲಾದ ಲಿಂಕ್ ರಾಜಮಾರ್ಗ್ ಯಾತ್ರಾ ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ. ಈ ಲಿಂಕ್ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ (MoRTH) ಅಧಿಕೃತ ವೆಬ್‌ಸೈಟ್‌ಗಳಲ್ಲಿಯೂ ಲಭ್ಯವಿರುತ್ತದೆ.

    ಪಾಸ್ ಅನ್ನು ಆಕ್ಟಿವೇಟ್‌ ಮಾಡುವುದು ಹೇಗೆ?
    ಪಾಸ್ ಅನ್ನು ಆಕ್ಟಿವೇಟ್ ಮಾಡಲು ನಿಮ್ಮ ವಾಹನ ಮತ್ತು ಫಾಸ್ಟ್‌ಟ್ಯಾಗ್ ಅನ್ನು ಪರಿಶೀಲಿಸಬೇಕಾಗುತ್ತದೆ. ತದನಂತರ 3,000 ರೂ. ಪಾವತಿಸಬೇಕಾಗುತ್ತದೆ. ಪೇಮೆಂಟ್ ಮಾಡಿದ ಎರಡು ಗಂಟೆಗಳಲ್ಲಿ ಅದು ಆಕ್ಟಿವೇಟ್‌ ಆಗುತ್ತದೆ. ತದನಂತರ ಪಾಸ್ ಅನ್ನು ಒಂದು ವರ್ಷದವರೆಗೆ ಬಳಸಬಹುದು. ರಾಜ್ಯ ಸರ್ಕಾರಗಳು ಅಥವಾ ಸ್ಥಳೀಯ ಸಂಸ್ಥೆಗಳಿಂದ ನಿರ್ವಹಿಸಲ್ಪಡುವ ಎಕ್ಸ್‌ಪ್ರೆಸ್‌ವೇಗಳು, ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್ಯಾಗ್ ನಿಯಮಿತವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಬಳಕೆದಾರರ ಶುಲ್ಕಗಳು ಅನ್ವಯಿಸಬಹುದು.

    ಫಾಸ್ಟ್ಯಾಗ್ ಹೊಂದಿರುವವರು ಮತ್ತೆ ಹೊಸದಾಗಿ ಖರೀದಿಸಬೇಕಾ?
    ಈಗಾಗಲೇ ತಮ್ಮ ವಾಹನಗಳಲ್ಲಿ ಫಾಸ್ಟ್ಯಾಗ್ ಹೊಂದಿರುವವರು ಹೊಸ ಫಾಸ್ಟ್ಯಾಗ್ ಖರೀದಿಸುವ ಅಗತ್ಯವಿಲ್ಲ. ನಿಮ್ಮ ಬಳಿ ಇರುವ ಪಾಸ್‌ನಲ್ಲಿಯೇ ಈ ಪಾಸ್ ಅನ್ನು ಆಕ್ಟಿವೇಟ್ ಮಾಡಿಕೊಳ್ಳಬಹುದು. ವಾರ್ಷಿಕ ಪಾಸ್ ಪಡೆಯಲು ಫಾಸ್ಟ್ಯಾಗ್‌ನ KYC ಅತ್ಯಗತ್ಯವಾಗಿರುತ್ತದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ತಿಳಿಸಿದೆ.

    ವಾರ್ಷಿಕ ಪಾಸ್ ಬಳಸಿ ಎಷ್ಟು ಬಾರಿ ಪ್ರಯಾಣಿಸಹುದು:
    ಫಾಸ್ಟ್ಯಾಗ್ ವಾರ್ಷಿಕ ಪಾಸ್ ಒಂದು ವರ್ಷದವರೆಗೆ ಮಾನ್ಯವಾಗಿರುತ್ತದೆ ಅಥವಾ 200 ಟ್ರಿಪ್‌ಗಳಿಗೆ ಅನುಮತಿ ನೀಡುತ್ತದೆ. ಒಂದು ವರ್ಷ ಅಥವಾ 200 ಟ್ರಿಪ್‌ಗಳು ಪೂರ್ಣಗೊಂಡ ನಂತರ, ಇದು ಮೊದಲಿನಂತೆ ಕೆಲಸ ಮಾಡಲು ಪ್ರಾರಂಭಿಸುತ್ತದೆ.

    ವಾರ್ಷಿಕ ಫಾಸ್ಟ್ಯಾಗ್ ಪಾಸ್‌ ಪಡೆಯಲು ಯಾರು ಅರ್ಹರಲ್ಲ?
    ನಿಮ್ಮ ಫಾಸ್ಟ್ಯಾಗ್ ಅನ್ನು ಚಾಸಿಸ್ ಸಂಖ್ಯೆಯನ್ನು ಬಳಸಿಕೊಂಡು ನೋಂದಾಯಿಸಿದ್ದರೆ ನಿಮಗೆ ಪಾಸ್ ಪಡೆಯಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ, ನೀವು ವಾಹನ ನೋಂದಣಿ ಸಂಖ್ಯೆಯನ್ನು (VRN) ನವೀಕರಿಸಬೇಕಾಗುತ್ತದೆ. ಅಲ್ಲದೆ, ಮೊಬೈಲ್ ಸಂಖ್ಯೆಯನ್ನು ನವೀಕರಿಸಬೇಕು.

    ವಾರ್ಷಿಕ ಪಾಸ್ ಖರೀದಿಯಿಂದ ಆಗುವ ಪ್ರಯೋಜನಗಳೇನು?
    ವಾರ್ಷಿಕ ಫಾಸ್ಟ್ಯಾಗ್ ಪಾಸ್‌ನಿಂದ ಟೋಲ್ ತೆರಿಗೆಯಲ್ಲಿ ರೂ. 5,000 ರಿಂದ 7,000 ರೂ.ವರೆಗೆ ಉಳಿಸಬಹುದು. ಇದಲ್ಲದೆ, ಪ್ರವಾಸದ ಮಧ್ಯದಲ್ಲಿ ರೀಚಾರ್ಜ್ ಖಾಲಿಯಾದರೂ ಚಿಂತಿಸಬೇಕಾದ ಅಗತ್ಯ ಇರಲ್ಲ.

    ವಾರ್ಷಿಕ ಫಾಸ್ಟ್ ಟ್ಯಾಗ್ ಪಾಸ್ ಅನ್ನು ಮತ್ತೊಂದು ವಾಹನಕ್ಕೆ ವರ್ಗಾಯಿಸಬಹುದೇ?
    ಇಲ್ಲ. ಹಾಗೆ ಮಾಡುವುದರಿಂದ ನಿಮ್ಮ ಪಾಸ್ ಅನ್ನು ಕಪ್ಪುಪಟ್ಟಿಗೆ ಸೇರಿಸಬಹುದು.

    ಫಾಸ್ಟ್ಯಾಗ್ ವಾರ್ಷಿಕ ಪಾಸ್ ಅನ್ನು ಖರೀದಿಸಿದ ನಂತರ, ಅದು ನಿಮ್ಮ ಅಸ್ತಿತ್ವದಲ್ಲಿರುವ ಫಾಸ್ಟ್ಯಾಗ್ ಖಾತೆ ಮತ್ತು ವಾಹನ ನೋಂದಣಿ ಸಂಖ್ಯೆಗೆ ಲಿಂಕ್ ಆಗುತ್ತದೆ. ಪಾಸ್ 200 ಟೋಲ್ ವಹಿವಾಟುಗಳನ್ನು ಅನುಮತಿಸುತ್ತದೆ. ಅಥವಾ ಸಕ್ರಿಯಗೊಳಿಸಿದ ದಿನಾಂಕದಿಂದ ಒಂದು ವರ್ಷದವರೆಗೆ ಇದು ಮಾನ್ಯವಾಗಿರುತ್ತದೆ. ನೀವು ಪ್ರತಿ ಬಾರಿ NHAI ಅಥವಾ MoRTH ನಿರ್ವಹಿಸುವ ಅರ್ಹ ಟೋಲ್ ಪ್ಲಾಜಾದ ಮೂಲಕ ಹಾದು ಹೋದಾಗ, ನಿಮ್ಮ ವಾರ್ಷಿಕ ಮಿತಿಯಿಂದ ಒಂದು ಟ್ರಿಪ್ ಅನ್ನು ಕಡಿತಗೊಳಿಸಲಾಗುತ್ತದೆ.

    200-ಟ್ರಿಪ್ ಮಿತಿ ಅಥವಾ ಒಂದು ವರ್ಷದ ಅವಧಿಯನ್ನು ತಲುಪಿದ ನಂತರ, ನಿಮ್ಮ ಫಾಸ್ಟ್ಯಾಗ್ ಖಾತೆಯು ಸ್ವಯಂಚಾಲಿತವಾಗಿ ನಿಯಮಿತ ಪೇ-ಪರ್-ಯೂಸ್ ಮಾದರಿಗೆ ಹಿಂತಿರುಗುತ್ತದೆ. ಪಾಸ್ ಅನ್ನು ವರ್ಗಾಯಿಸಲಾಗುವುದಿಲ್ಲ, ಮರುಪಾವತಿಸಲಾಗುವುದಿಲ್ಲ ಮತ್ತು ರಾಷ್ಟ್ರೀಯ ಹೆದ್ದಾರಿ ಅಥವಾ ಯೋಜನೆಯಿಂದ ಒಳಗೊಳ್ಳಲ್ಪಟ್ಟ ಎಕ್ಸ್‌ಪ್ರೆಸ್‌ವೇ ನೆಟ್‌ವರ್ಕ್‌ನ ಹೊರಗಿನ ಟೋಲ್‌ಗಳಲ್ಲಿ ಬಳಸಲಾಗುವುದಿಲ್ಲ. 200 ಟ್ರಿಪ್ ಅಥವಾ 1 ವರ್ಷದ ಅವಧಿ ಮುಗಿದ ಬಳಿಕ ಮತ್ತೆ ಚಾಲಕ ಅದನ್ನು ನವೀಕರಿಸಬೇಕಾಗುತ್ತದೆ. ಇದಕ್ಕಾಗಿ ಆತ ಮತ್ತೆ 3000 ರೂ. ಪಾವತಿಸಿ ಫಾಸ್ಟ್ಯಾಗ್ ವಾರ್ಷಿಕ ಪಾಸ್ ನವೀಕರಿಸಬೇಕಾಗುತ್ತದೆ.

    ಒಂದೊಂದು ಟೋಲ್ ಗೆ ಒಂದೊಂದು ಟ್ರಿಪ್ ಎಂದು ಲೆಕ್ಕ ಹಾಕಲಾಗುತ್ತದೆ. ಒಂದು ಸ್ಥಾನದಿಂದ ಮತ್ತೊಂದು ಗಮ್ಯ ಸ್ಥಾನದ ನಡುವೆ 4 ಟೋಲ್ ಗಳು ಬಂದರೆ ಆಗ ಅದನ್ನು 4 ಟ್ರಿಪ್ ಎಂದು ಪರಿಗಣಿಸಲಾಗುತ್ತದೆ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.‌

    ಖಾಸಗಿ ಟೋಲ್‌ಗೆ ಅನ್ವಯವಾಗಲ್ಲ:
    ವಾರ್ಷಿಕ ಟೋಲ್‌ ಫಾಸ್ಟ್ಯಾಗ್‌ ಪಾಸ್‌ ಕೇವಲ ರಾಷ್ಟ್ರೀಯ ಹೆದ್ದಾರಿಗಳಿಗೆ ಅನ್ವಯವಾಗುತ್ತದೆ. ರಾಜ್ಯ ಹೆದ್ದಾರಿಗಳಿಗೆ ಹಾಗೂ ಬೆಂಗಳೂರಿನ ನೈಸ್‌ನಂಥ ಖಾಸಗಿ ಹೆದ್ದಾರಿಗೆ ಅನ್ವಯವಾಗಲ್ಲ. ರಾಜ್ಯ ಹೆದ್ದಾರಿ ಹಾಗೂ ಖಾಸಗಿ ಹೆದ್ದಾರಿಗಳಲ್ಲಿ ಸಂಚರಿಸುವವರು ಎಂದಿನ ಟೋಲ್‌ ದರವನ್ನೇ ಪಾವತಿಸಬೇಕು ಎಂದು ಹೇಳಲಾಗಿದೆ. ಈ ಯೋಜನೆಗೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

    ಯಾವ ರಾಜ್ಯದಲ್ಲಿ ಹೆಚ್ಚು ಪಾಸ್‌ ಮಾರಾಟ?
    ಹೊಸದಾಗಿ ಪರಿಚಯಿಸಲಾದ ಫಾಸ್ಟ್ಯಾಗ್‌ ವಾರ್ಷಿಕ ಪಾಸ್ ಯೋಜನೆ ಆರಂಭಗೊಂಡ ಮೊದಲ ನಾಲ್ಕು ದಿನಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಮಂದಿ ಈ ಪಾಸ್‌ ಅನ್ನು ಪಡೆದುಕೊಂಡಿದ್ದಾರೆ ಎಂದು NHAI ತಿಳಿಸಿದೆ. ತಮಿಳುನಾಡಿನಲ್ಲಿ ಅತಿಹೆಚ್ಚು ವಾರ್ಷಿಕ ಪಾಸ್‌ ಖರೀಸಿಲಾಗಿದೆ. ತಮಿಳುನಾಡು ಬಳಿಕ ಕರ್ನಾಟಕ ಮತ್ತು ಹರಿಯಾಣದಲ್ಲಿ ಹೆಚ್ಚು ಫಾಸ್ಟ್ಯಾಗ್‌ ವಾರ್ಷಿಕ ಪಾಸ್ ಮಾರಾಟವಾಗಿದೆ. ಈ ಮೂಲಕ ತಮಿಳುನಾಡು, ಕರ್ನಾಟಕ ಮತ್ತು ಆಂಧ್ರಪ್ರದೇಶದ ಟೋಲ್ ಪ್ಲಾಜಾಗಳಲ್ಲಿ ಗರಿಷ್ಠ ವಹಿವಾಟುಗಳು ದಾಖಲಾಗಿವೆ ಎಂದು NHAI ದೃಢಪಡಿಸಿದೆ.

  • 12 ಗಂಟೆ ಟ್ರಾಫಿಕ್‌ನಲ್ಲೇ ಕಳೆಯೋದಾದ್ರೆ ಜನ ಟೋಲ್ ಯಾಕೆ ಪಾವತಿಸ್ಬೇಕು? – NHAI ವಿರುದ್ಧ ಸುಪ್ರೀಂ ಗರಂ

    12 ಗಂಟೆ ಟ್ರಾಫಿಕ್‌ನಲ್ಲೇ ಕಳೆಯೋದಾದ್ರೆ ಜನ ಟೋಲ್ ಯಾಕೆ ಪಾವತಿಸ್ಬೇಕು? – NHAI ವಿರುದ್ಧ ಸುಪ್ರೀಂ ಗರಂ

    ನವದೆಹಲಿ: 12 ಗಂಟೆಗಳ ಕಾಲ ಟ್ರಾಫಿಕ್ ಜಾಮ್‌ನಲ್ಲೇ ಕಳೆಯೋದಾದರೆ ಜನ ಏಕೆ ಟೋಲ್ (Toll) ಪಾವತಿಸಬೇಕು ಅಂತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ವಿರುದ್ಧ ಸುಪ್ರೀಂ ಕೋರ್ಟ್ (Supreme Court) ಗರಂ ಆಗಿದೆ.

    ತ್ರಿಶೂರಿನ ಪಾಲಿಯೆಕ್ಕರಾ ಟೋಲ್ ಸ್ಥಗಿತಕ್ಕೆ ಕೇರಳ ಹೈಕೋರ್ಟ್ (Kerala High Court) ಆದೇಶಿಸಿತ್ತು. ಇದನ್ನು ಪ್ರಶ್ನಿಸಿದ್ದ ಎನ್‌ಹೆಚ್‌ಎಐ ಹಾಗೂ ಗುರುವಾಯೂರು ಇನ್‌ಫ್ರಾಸ್ಟ್ರಕ್ಚರ್ ಕಂಪನಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದವು. ಮನೆ ಬಿಟ್ಟು ಈ ತುದಿಯಿಂದ ಆ ತುದಿಯ ರಸ್ತೆಗೆ ಹೋಗಲು 12 ಗಂಟೆ ಬೇಕಾಗೋದಾದರೆ ಟೋಲ್ ರೋಡ್ ಏಕೆ ಬೇಕು? 1 ಗಂಟೆಯ ಪ್ರಯಾಣ 11 ಗಂಟೆ ಹೆಚ್ಚುವರಿಯಾದರೆ ಯಾರು ಹೊಣೆ? ಇದಕ್ಕಾಗಿ ಏಕೆ 150 ರೂ. ಟೋಲ್ ಕಟ್ಟಬೇಕು ಅಂತ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತು. ಇದನ್ನೂ ಓದಿ: ಮೈಸೂರು-ಕುಶಾಲನಗರ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಷರತ್ತು ಬದ್ಧ ಅನುಮತಿ

    ಎನ್‌ಹೆಚ್‌ಎಐ ಪರ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಲಾರಿ ಅಚಾನಕ್ ಆಗಿ ಅಪಘಾತಕ್ಕೀಡಾಗಿ ಟ್ರಾಫಿಕ್ ಜಾಮ್ (Traffic Jam) ಆಗಿದ್ದು ‘ದೇವರ ಆಟ’. ಸರ್ವಿಸ್ ರೋಡ್ ಇದೆ. ಆದರೆ ಮಳೆಯೂ ಜೋರಾಗಿದ್ದು, ಕಾಮಗಾರಿ ವಿಳಂಬ, ಟ್ರಾಫಿಕ್ ಜಾಮ್‌ಗೆ ಕಾರಣ ಅಂದರು. ಇದಕ್ಕೆ ಸುಪ್ರೀಂ ಕೋರ್ಟ್ ಆಕ್ಷೇಪಿಸಿ, ಅದು ದೇವರ ಆಟ ಅಲ್ಲ, ಕಳಪೆ ನಿರ್ವಹಣೆಯಿಂದ ಸೃಷ್ಟಿಯಾದ ಗುಂಡಿ’ ಅಂತ ಗರಂ ಆಯ್ತು. ಅಲ್ಲದೇ ಕೇಸ್ ಆದೇಶವನ್ನು ಕಾಯ್ದಿರಿಸಿತು. ಇದನ್ನೂ ಓದಿ: 97 LCA ಮಾರ್ಕ್ 1A ಫೈಟರ್ ಜೆಟ್‌ ಖರೀದಿಗೆ 62,000 ಕೋಟಿ ರೂ. ಒಪ್ಪಂದಕ್ಕೆ ಭಾರತ ಅನುಮೋದನೆ

  • ಯೋಧನಿಗೆ ಟೋಲ್ ಪ್ಲಾಜಾ ಸಿಬ್ಬಂದಿಯಿಂದ ಥಳಿತ ಕೇಸ್ – 20 ಲಕ್ಷ ದಂಡ ವಿಧಿಸಿದ NHAI

    ಯೋಧನಿಗೆ ಟೋಲ್ ಪ್ಲಾಜಾ ಸಿಬ್ಬಂದಿಯಿಂದ ಥಳಿತ ಕೇಸ್ – 20 ಲಕ್ಷ ದಂಡ ವಿಧಿಸಿದ NHAI

    ಲಕ್ನೋ: ಕರ್ತವ್ಯಕ್ಕೆ ಮರಳುತ್ತಿದ್ದ ಯೋಧನನ್ನ ಟೋಲ್ ಪ್ಲಾಜಾ ಸಿಬ್ಬಂದಿ ಕಂಬಕ್ಕೆ ಕಟ್ಟಿ ಮನಸೋ ಇಚ್ಛೆ ಥಳಿಸಿದ್ದ ಘಟನೆಗೆ ಸಂಬಂಧಿಸಿದಂತೆ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿ (NHAI) ಮೀರತ್‌ನ ಟೋಲ್ ಸಂಸ್ಥೆಗೆ 20 ಲಕ್ಷ ರೂ. ದಂಡ ವಿಧಿಸಿದೆ.

    ಉತ್ತರ ಪ್ರದೇಶದ ಮೀರತ್‌ನಲ್ಲಿ ಯೋಧ ಕಪಿಲ್ ಕವಾಡ್ ಎನ್ನುವವರ ಮೇಲೆ ಟೋಲ್ ಸಿಬ್ಬಂದಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಈ ಅಮಾನವೀಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಈಗಾಗಲೇ ಆರು ಜನರನ್ನು ಬಂಧಿಸಿದ್ದಾರೆ.ಇದನ್ನೂ ಓದಿ: ಅತ್ಯಾಚಾರ ಆರೋಪ ಕೇಸ್ – ಬಿಜೆಪಿ ಶಾಸಕ ಪ್ರಭು ಚೌಹಾಣ್ ಪುತ್ರನಿಗೆ ಮಧ್ಯಂತರ ಜಾಮೀನು ಮಂಜೂರು

    ಏನಿದು ಘಟನೆ?
    ಭಾರತೀಯ ಸೇನೆಯ ರಜಪೂತ ರೆಜಿಮೆಂಟ್‌ನಲ್ಲಿದ್ದ ಕಪಿಲ್ ಕವಾಡ್, ರಜೆಯ ನಿಮಿತ್ತ ಮನೆಗೆ ತೆರಳಿದ್ದರು. ಶ್ರೀನಗರದಲ್ಲಿರುವ ತಮ್ಮ ಕರ್ತವ್ಯದ ಸ್ಥಳಕ್ಕೆ ಮರಳಲು ದೆಹಲಿ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಟೋಲ್ ಬೂತ್‌ನಲ್ಲಿ ಸಿಲುಕಿಕೊಂಡಿದ್ದಾರೆ. ತನ್ನ ವಿಮಾನಕ್ಕೆ ತಡವಾಗುತ್ತಿದೆ ಎಂಬ ಆತಂಕದಿಂದ ಕಪಿಲ್ ಕಾರಿನಿಂದ ಇಳಿದು ಟೋಲ್ ಬೂತ್ ಸಿಬ್ಬಂದಿಯೊಂದಿಗೆ ಮಾತನಾಡಲು ಪ್ರಾರಂಭಿಸಿದಾಗ ವಾಗ್ವಾದ ಉಂಟಾಗಿದೆ.

    ಟೋಲ್ ಪ್ಲಾಜಾದ ಐವರು ಸಿಬ್ಬಂದಿ ಕಪಿಲ್ ಮತ್ತು ಅವರ ಸೋದರ ಸಂಬಂಧಿಯನ್ನ ಥಳಿಸಿದ್ದಾರೆ. ಕಪಿಲ್‌ಗೆ ದೊಣ್ಣೆಯಿಂದ ಹೊಡೆಯುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಕೆಲವು ದಾಳಿಕೋರರು ಕಪಿಲ್ ಅವರನ್ನು ಕಂಬಕ್ಕೆ ಕಟ್ಟಿ ಮನಬಂದಂತೆ ಥಳಿಸಿದ್ದಾರೆ. ವಿಡಿಯೋ ವೈರಲ್ ಆಗ್ತಿದ್ದಂತೆ ಕೇಸ್ ದಾಖಲಿಸಿಕೊಂಡ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ.ಇದನ್ನೂ ಓದಿ:  ಭಾರೀ ಮಳೆಗೆ ವಿದ್ಯುತ್ ಸಮಸ್ಯೆ – ಮಾರ್ಗ ಮಧ್ಯದಲ್ಲೇ ನಿಂತ ಮೋನೋ ರೈಲು

  • ಶೀಘ್ರದಲ್ಲೇ ಜಾರಿಗೆ ಬರಲಿದೆ ಕಿಲೋಮೀಟರ್ ಆಧಾರಿತ ಹೊಸ ಟೋಲ್ ತೆರಿಗೆ ನೀತಿ

    ಶೀಘ್ರದಲ್ಲೇ ಜಾರಿಗೆ ಬರಲಿದೆ ಕಿಲೋಮೀಟರ್ ಆಧಾರಿತ ಹೊಸ ಟೋಲ್ ತೆರಿಗೆ ನೀತಿ

    ನವದೆಹಲಿ: ಭಾರತ ಸರ್ಕಾರ ಭಾರತದಲ್ಲಿ ಹೊಸ ಟೋಲ್ ನೀತಿಯನ್ನು ಪರಿಚಯಿಸಲು ಯೋಜಿಸುತ್ತಿದೆ. ಕಿಲೋಮೀಟರ್ ಆಧಾರಿತ ಹೊಸ ಟೋಲ್ ತೆರಿಗೆ ನೀತಿ (Kilometer-Based Toll Tax Policy) ಜಾರಿಗೆ ತರಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮುಂದಾಗಿದೆ.

    ಹೊಸ ನೀತಿಯಲ್ಲಿ ಪ್ರಯಾಣಿಕರು ತಾವು ಪ್ರಯಾಣಿಸಿದ ನಿಖರವಾದ ಕಿಲೋಮೀಟರ್ ದೂರದ ಆಧಾರದ ಮೇಲೆ ಟೋಲ್ ಶುಲ್ಕವನ್ನು ಪಾವತಿಸಬಹುದು. ಈ ಬದಲಾವಣೆಯಿಂದ ಟೋಲ್ ಸಂಗ್ರಹಣೆ ಹೆಚ್ಚು ಪಾರದರ್ಶಕವಾಗಲಿದೆ.

    ಹೊಸನೀತಿಯ ವಿಶೇಷತೆ ಏನು?
    ಕಿಲೋಮೀಟರ್ ಆಧಾರಿತ ಶುಲ್ಕ: ಹೊಸ ವ್ಯವಸ್ಥೆಯಡಿ, ಪ್ರಯಾಣಿಕರು ತಾವು ಹೆದ್ದಾರಿಯಲ್ಲಿ ಪ್ರಯಾಣಿಸಿದ ನಿಖರ ಕಿಲೋಮೀಟರ್‌ಗೆ ಅನುಗುಣವಾಗಿ ಟೋಲ್ ಶುಲ್ಕವನ್ನು ಪಾವತಿಸಬಹುದು. ಇದು ಸ್ಥಿರ ಟೋಲ್ ಶುಲ್ಕದ ಪ್ರಸ್ತುತ ವಿಧಾನವನ್ನು ಬದಲಾಯಿಸುತ್ತದೆ. ಸ್ಥಿರ ಟೋಲ್‌ನಲ್ಲಿ ದೂರವನ್ನು ಲೆಕ್ಕಿಸದೆ ಒಂದೇ ಶುಲ್ಕವನ್ನು ವಿಧಿಸಲಾಗುತ್ತದೆ. ಈ ವ್ಯವಸ್ಥೆ ಈಗ ಬದಲಾಗಲಿದೆ.

    ಜಿಪಿಎಸ್ ಆಧಾರಿತ ಟೋಲ್ ಸಂಗ್ರಹಣೆ: ಈ ವ್ಯವಸ್ಥೆಯನ್ನು ಕಾರ್ಯಗತಗೊಳಿಸಲು ಜಿಪಿಎಸ್ ಆಧಾರಿತ ಟೋಲ್ ಸಂಗ್ರಹಣೆ ತಂತ್ರಜ್ಞಾನವನ್ನು ಬಳಸಲಾಗುವುದು. ವಾಹನಗಳ ಚಲನೆಯನ್ನು ಟ್ರ‍್ಯಾಕ್ ಮಾಡಲು ಜಿಯೋ-ಫೆನ್ಸಿಂಗ್ ಮತ್ತು ಉಪಗ್ರಹ ಆಧಾರಿತ ಟ್ರ‍್ಯಾಕಿಂಗ್ ವ್ಯವಸ್ಥೆಗಳನ್ನು ಬಳಸಲಾಗುವುದು. ಇದು ಟೋಲ್ ಬೂತ್‌ಗಳ ಅಗತ್ಯವನ್ನು ಕಡಿಮೆ ಮಾಡಿ, ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

    ಪ್ರಯೋಗಾತ್ಮಕ ಯೋಜನೆ: ಈ ವ್ಯವಸ್ಥೆಯನ್ನು ಕೆಲವು ಆಯ್ದ ಹೆದ್ದಾರಿಗಳಲ್ಲಿ ಪ್ರಾಯೋಗಿಕವಾಗಿ ಪರೀಕ್ಷಿಸಲಾಗುವುದು. ಪರೀಕ್ಷೆ ಯಶಸ್ವಿಯಾದರೆ ಇದನ್ನು ದೇಶಾದ್ಯಂತ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಿಗೆ ವಿಸ್ತರಿಸಲಾಗುವುದು.

  • 327 ಕೋಟಿ ವೆಚ್ಚದ ನವಲಗುಂದ ಬೈಪಾಸ್ ರಸ್ತೆ ಕಾಮಗಾರಿಗೆ ಕೇಂದ್ರ ಅಸ್ತು

    327 ಕೋಟಿ ವೆಚ್ಚದ ನವಲಗುಂದ ಬೈಪಾಸ್ ರಸ್ತೆ ಕಾಮಗಾರಿಗೆ ಕೇಂದ್ರ ಅಸ್ತು

    – 10.575 ಕಿಮೀ ರಸ್ತೆ ನಿರ್ಮಾಣಕ್ಕೆ ಕೇಂದ್ರದಿಂದ ಅನುಮೋದನೆ – ಶೀಘ್ರವೇ ಟೆಂಡರ್‌ ಪ್ರತಿಕ್ರಿಯೆ ಶುರು

    ಹುಬ್ಬಳ್ಳಿ: ಸವದತ್ತಿ ಯಲ್ಲಮ್ಮನಗುಡ್ಡ ಸೇರಿದಂತೆ ವಿವಿಧ ಸುಕ್ಷೇತ್ರಗಳಿಗೆ ಸಂಪರ್ಕ ಕಲ್ಪಿಸುವ 327 ಕೋಟಿ ರೂ. ವೆಚ್ಚದ ನವಲಗುಂದ ಬೈಪಾಸ್‌ ರಸ್ತೆ (Navalgund Bypass Road) ಕಾಮಗಾರಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ತಿಳಿಸಿದ್ದಾರೆ.

    ನವಲಗುಂದ ಬೈಪಾಸ್ ರಸ್ತೆ ನಿರ್ಮಾಣಕ್ಕಾಗಿ ಈ ಹಿಂದೆಯೇ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಂತೆ ಇದೀಗ ಕಾಮಗಾರಿಗೆ ಅನುಮೋದನೆ ದೊರಕಿದೆ. ರಾಜ್ಯ ಸರ್ಕಾರ ಟೆಂಡರ್ ಕರೆದು ಕಾರ್ಯಾರಂಭ ಮಾಡುವ ಹಂತ ತಲುಪಿದೆ ಎಂದು ತಿಳಿಸಿದ್ದಾರೆ.

    ಈ ಬೈಪಾಸ್‌ ಸಂಬಂಧ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯಕ್ಕೆ ಸಲ್ಲಿಸಿದ್ದ ಜೋಡಣೆ (Alignment) ಮತ್ತು DPR (ವಿವರವಾದ ಯೋಜನಾ ವರದಿ) ಅನ್ನು ಅಲೈನ್‌ಮೆಂಟ್ ಅಪ್ರೂವಲ್ ಕಮಿಟಿ (Alignment Approval Committee (AAC) ಅನುಮೋದನೆ ನೀಡಿದೆ. ನವಲಗುಂದ ಪಟ್ಟಣಕ್ಕೆ 10.575 ಕಿ.ಮೀ. ವಿಸ್ತೀರ್ಣದ ಬೈಪಾಸ್‌ ರಸ್ತೆ ನಿರ್ಮಾಣವಾಗಲಿದೆ ಎಂದು ಹೇಳಿದ್ದಾರೆ.

    ಬೆಣ್ಣೆಹಳ್ಳ ಮತ್ತು ಅದನ್ನು ಸೇರುವ ಸಣ್ಣ ನಾಲಾಗಳು ಮಳೆಗಾಲದಲ್ಲಿ ತುಂಬಿ ಹರಿದು ಪ್ರವಾಹ ಪರಿಸ್ಥಿತಿ ಎದುರಾಗುತ್ತಿತ್ತು. ಇದರಿಂದ ಅಪಾರ ಕೃಷಿ ಭೂಮಿಯಲ್ಲಿ ಬೆಳೆ ಹಾನಿ ಸಂಭವಿಸುತ್ತಿತ್ತು ಮತ್ತು ಅನೇಕ ಕಡೆ ಸಂಪರ್ಕ ಕಡಿತಗೊಳ್ಳುತ್ತಿತ್ತು. ಇದನ್ನೆಲ್ಲ ಗಮನಿಸಿ ಶಾಶ್ವತ ಪರಿಹಾರ ಎನ್ನುವಂತೆ ಬೈಪಾಸ್‌ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ನಡೆಸಿದ ಪ್ರಯತ್ನಕ್ಕೆ ಇದೀಗ ಫಲ ಸಿಕ್ಕಿದೆ. ಅಲೈನ್‌ಮೆಂಟ್ ಅಪ್ರೂವಲ್ ಕಮಿಟಿ ಅನುಮತಿ ನೀಡಿದೆ ಎಂದು ಸಚಿವ ಜೋಶಿ ತಿಳಿಸಿದ್ದಾರೆ.

    ಹೆದ್ದಾರಿಯು ನವಲಗುಂದ ಪಟ್ಟಣದ ಮಧ್ಯ ಭಾಗದಿಂದ ಹಾದು ಹೋಗುವ ಕಾರಣ ಟ್ರಾಫಿಕ್ ಸಮಸ್ಯೆಗಳಿಂದಾಗಿ ಪಟ್ಟಣಿಗರು ರೋಸಿ ಹೋಗಿದ್ದರು. ಹೀಗಾಗಿ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಬಹು ವರ್ಷಗಳಿಂದಲೂ ಇದ್ದ ಬೇಡಿಕೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಂತೆ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರು ಸ್ಪಂದಿಸಿದ್ದಾರೆ. ಈ ಮೂಲಕ ಜನರ ಆಶಯ ಸಾಕಾರಗೊಂಡಿದೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದ್ದಾರೆ.

    ಉತ್ತರ ಕರ್ನಾಟಕದ ಆರಾಧ್ಯ ದೈವ ಸವದತ್ತಿ ಯಲ್ಲಮ್ಮ ದೇವಸ್ಥಾನ ಸೇರಿದಂತೆ ವಿವಿಧ ಐತಿಹಾಸಿಕ, ಧಾರ್ಮಿಕ ನಗರಗಳಿಗೆ ಸಂಪರ್ಕ ಜೋಡಿಸುತ್ತದೆ ನವಲಗುಂದ ಪಟ್ಟಣ. ಹೀಗಾಗಿ ಈ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಅಧಿಕವಾಗಿರುತ್ತದೆ. ಬೈಪಾಸ್ ರಸ್ತೆ ನಿರ್ಮಾಣದಿಂದ ಪ್ರಯಾಣಿಕರು ಮತ್ತು ಸ್ಥಳೀಯ ನಿವಾಸಿಗಳಿಗೂ ಅನುಕೂಲವಾಗಲಿದೆ ಎಂದಿದ್ದಾರೆ.

    ಕಳೆದ 10 ವರ್ಷಗಳ ಅವಧಿಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ಸಂಪೂರ್ಣ ಚಿತ್ರಣವೇ ಬದಲಾಗಿದೆ. ಆ ಮಟ್ಟದ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರು ಹೆದ್ದಾರಿಗಳ ಅಭಿವೃದ್ಧಿಗೆ ಸದಾ ಅಗತ್ಯ ನೆರವು ನೀಡುತ್ತಿದ್ದಾರೆಂದು ಈರ್ವರಿಗೂ ಜೋಶಿ ಅಭಿನಂದನೆ ಸಲ್ಲಿಸಿದ್ದಾರೆ.

    ಶೀಘ್ರ ಕಾಮಗಾರಿಗೆ ಒತ್ತಾಯ:
    ನವಲಗುಂದ ಬೈಪಾಸ್‌ ನಿರ್ಮಾಣ ಸಂಬಂಧ ಈಗಾಗಲೇ ಡಿಪಿಆ‌ರ್ ಸಿದ್ಧಗೊಂಡಿದ್ದು, ರಾಜ್ಯ ಸರ್ಕಾರ ಶೀಘ್ರವೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿಗಳಿಗೆ ತ್ವರಿತ ಚಾಲನೆ ನೀಡಬೇಕೆಂದು ಜೋಶಿ ಒತ್ತಾಯಿಸಿದ್ದಾರೆ.

  • ಮೇ 1 ರಿಂದ ಜಿಪಿಎಸ್ ಆಧಾರಿತ ಟೋಲ್ ಇಲ್ಲ – ಹೆದ್ದಾರಿ ಸಚಿವಾಲಯ ಸ್ಪಷ್ಟನೆ

    ಮೇ 1 ರಿಂದ ಜಿಪಿಎಸ್ ಆಧಾರಿತ ಟೋಲ್ ಇಲ್ಲ – ಹೆದ್ದಾರಿ ಸಚಿವಾಲಯ ಸ್ಪಷ್ಟನೆ

    ನವದೆಹಲಿ: ಜಿಪಿಎಸ್ ಆಧಾರಿತ ಟೋಲ್ (Satellite-based Tolling) ವ್ಯವಸ್ಥೆಯ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಶುಕ್ರವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಸ್ಪಷ್ಟನೆ ನೀಡಿದ್ದು, ಸದ್ಯ ಚಾಲ್ತಿಯಲ್ಲಿರುವ ಫಾಸ್ಟ್ಯಾಗ್‌ (FASTag) ಟೋಲ್ ವ್ಯವಸ್ಥೆಯೇ ಮುಂದುವರೆಯಲಿದೆ.

    ಮೇ 1ರಿಂದ ಜಿಪಿಎಸ್ ಆಧಾರಿತ ಫಾಸ್ಟ್ಯಾಗ್‌ ಟೋಲ್ ಇರಲಿದೆ ಎಂಬ ಸುದ್ದಿಯು ಹರಿದಾಡಿತ್ತು. ಈ ವರದಿಯನ್ನು ತಳ್ಳಿ ಹಾಕಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು, ಈ ರೀತಿಯ ಯಾವುದೇ ಚಿಂತನೆ ಇಲ್ಲ. ಸದ್ಯ ಫಾಸ್ಟ್ಯಾಗ್‌ ಟೋಲ್ ವ್ಯವಸ್ಥೆಯೇ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ನಿನ್ ಜೊತೆ ಮಲ್ಕೋಬೇಕು ಬಾ – ಟೀಂ ಇಂಡಿಯಾ ಮಾಜಿ ಆಟಗಾರ ಬಂಗಾರ್‌ ಪುತ್ರಿಗೆ ಕ್ರಿಕೆಟಿಗರಿಂದ ಲೈಂಗಿಕ ಕಿರುಕುಳ

    ಜಿಪಿಎಸ್ ಆಧಾರಿತ ಟೋಲ್ ವ್ಯವಸ್ಥೆ ಬಗ್ಗೆ ಸಲಹೆಗಳು ಬಂದಿವೆ. ಆದರೆ ಅದನ್ನು ಜಾರಿಗೆ ತರುತ್ತಿಲ್ಲ. ಕೆಲವು ಕಡೆ ಪ್ರಯೋಗಿಕವಾಗಿ ಎನ್‌ಪಿಆರ್ ಫಾಸ್ಟ್ಯಾಗ್‌ (NPR FASTag) ಆಳವಡಿಕೆಗೆ ಚಿಂತನೆ ಮಾಡಲಾಗುತ್ತಿದೆ. ನಂಬರ್ ಪ್ಲೇಟ್ ಆಧಾರಿತ ಫಾಸ್ಟ್ಯಾಗ್‌ ಇದಾಗಿದ್ದು, ಇದರ ಸಾಧಕ ಭಾದಕಗಳನ್ನ ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎನ್ನುವ ಮೂಲಕ ವರದಿಯನ್ನು ತಳ್ಳಿಹಾಕಿದೆ.

  • ಏ.1ರಿಂದ ಕರ್ನಾಟಕದಲ್ಲಿ ಟೋಲ್‌ ದರ ಶೇ.5ರಷ್ಟು ಹೆಚ್ಚಳ!

    ಏ.1ರಿಂದ ಕರ್ನಾಟಕದಲ್ಲಿ ಟೋಲ್‌ ದರ ಶೇ.5ರಷ್ಟು ಹೆಚ್ಚಳ!

    ಬೆಂಗಳೂರು: ಏಪ್ರಿಲ್‌ 1ರಿಂದ ಹೊಸ ಟೋಲ್‌ ನೀತಿ ಜಾರಿಯಾಗಲಿದ್ದು, ಕರ್ನಾಟಕದಾದ್ಯಂತ ಟೋಲ್‌ ಶುಲ್ಕ (Toll Price)  ಶೇ.5ರಷ್ಟು ಹೆಚ್ಚಾಗಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಮೂಲಗಳು ತಿಳಿಸಿವೆ.

    ಬೆಲೆ ಏರಿಕೆ, ಹಣದುಬ್ಬರಕ್ಕೆ ಅನುಗುಣವಾಗಿ ವಾರ್ಷಿಕವಾಗಿ ಮಾಡುವ ದರ ಪರಿಷ್ಕರಣೆ ಪ್ರಕ್ರಿಯೆಯ ಭಾಗವಾಗಿ ಕನಿಷ್ಠ ಶೇ 3 ರಿಂದ ಗರಿಷ್ಠ 5 ರಷ್ಟು ಏರಿಕೆಯಾಗಲಿವೆ ಎಂದು ತಿಳಿದುಬಂದಿದೆ. ರಾಜ್ಯದ 66 ಟೋಲ್ ಪ್ಲಾಜಾಗಳಲ್ಲಿ (Toll Plaza) ಹೆಚ್ಚಿನ ಟೋಲ್​ಗಳಿಗೆ ಪರಿಷ್ಕೃತ ದರಗಳು ಅನ್ವಯವಾಗಲಿವೆ. ಗರಿಷ್ಠ ಶೇ.5 ರಷ್ಟು ಮತ್ತು ಕನಿಷ್ಠ ಶೇ 3 ರಷ್ಟು ಹೆಚ್ಚಳವಾಗಲಿದೆ.

    delhi ncr toll plaza

    ರಾಷ್ಟ್ರೀಯ ಹೆದ್ದಾರಿಗಳ ಮೇಲಿನ ಸುಂಕಗಳಿಗೆ ಕೇಂದ್ರ ಸರ್ಕಾರ ಶೀಘ್ರವೇ ಹೊಸ ನೀತಿ ಪ್ರಕಟಿಸಲಿದೆ. ಇದರಲ್ಲಿ ಗ್ರಾಹಕರಿಗೆ ಕೆಲವು ರಿಯಾಯಿತಿ ದೊರೆಯಲಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದರೂ ಅದಿನ್ನೂ ಜಾರಿಯಾಗಿಲ್ಲ. 2008ರ ನೀತಿಯೇ ಅನ್ವಯವಾಗಲಿದೆ. ಟೋಲ್ ಗುತ್ತಿಗೆ ಅವಧಿಯನ್ನು ಆಧರಿಸಿ ದರಗಳು ಬದಲಾಗಲಿವೆ. ಈ ಹೆಚ್ಚುವರಿ ಶುಲ್ಕವನ್ನು ಗ್ರಾಹಕರಿಗೆ ವರ್ಗಾಯಿಸಲಾಗುವುದು ಎಂದು ಕರ್ನಾಟಕ ರಾಜ್ಯ ಟ್ರಾವೆಲ್ ಆಪರೇಟರ್ಸ್ ಅಸೋಸಿಯೇಷನ್ ತಿಳಿಸಿದೆ.

    ಕರ್ನಾಟಕದಲ್ಲಿ ಎಲ್ಲೆಲ್ಲಿ ಟೋಲ್ ಹೆಚ್ಚಳ?
    ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ಹೇಳಿರುವಂತೆ, ಗರಿಷ್ಠ ಶೇ.5 ಮತ್ತು ಕನಿಷ್ಠ ಶೇ.3 ರಷ್ಟು ಟೋಲ್ ದರ ಹೆಚ್ಚಳವಾಗಲಿದೆ. ಬೆಂಗಳೂರು-ಮೈಸೂರು ಮಾರ್ಗದ ಕನಮಿಣಿಕೆ ಮತ್ತು ಶೇಷಗಿರಿಹಳ್ಳಿ, ಬೆಂಗಳೂರು-ತಿರುಪತಿ ಮಾರ್ಗದ ನಂಗ್ಲಿ, ಬೆಂಗಳೂರು-ಹೈದರಾಬಾದ್ ಮಾರ್ಗದ ಬಾಗೇಪಲ್ಲಿ, ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯ ಸಾದಹಳ್ಳಿ, ಮತ್ತು ಹುಲಿಕುಂಟೆ ಹಾಗೂ ನಲ್ಲೂರು ದೇವನಹಳ್ಳಿ (ಸ್ಯಾಟಲೈಟ್ ಟೌನ್ ರಿಂಗ್ ರೋಡ್) ಟೋಲ್ ಪ್ಲಾಜಾಗಳಲ್ಲಿ ದರಗಳು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.

    ದೇಶದಾದ್ಯಂತ ಒಟ್ಟು 323 ರಾಜ್ಯ ಹೆದ್ದಾರಿ ಟೋಲ್ ಫ್ಲಾಜಾ ಸೇರಿದಂತೆ, ದೇಶದಲ್ಲಿ ಒಟ್ಟು 1,181 ಟೋಲ್ ಗಳಿವೆ. 2023-24 ರಲ್ಲಿ 42,196 ಕೋಟಿ ರೂ., 2024-25 ರಲ್ಲಿ 64,809 ಕೋಟಿ ರೂ. ಟೋಲ್‌ ಸಂಗ್ರಹ ಆಗಿದೆ. ಈ ವರ್ಷ ಈ ಗುರಿಯನ್ನ 1 ಲಕ್ಷ ಕೋಟಿಗೆ ಏರಿಕೆ ಮಾಡಲಾಗಿದೆ. ಇನ್ನು ಕರ್ನಾಟಕದಲ್ಲಿ 58 ಟೋಲ್ ಫ್ಲಾಜಾಗಳಿದ್ದು, ಕಳೆದ 5 ವರ್ಷಗಳಲ್ಲಿ ಈ ಟೋಲ್‌ಗಳಿಂದ 13,702 ಕೋಟಿ ಸಂಗ್ರಹವಾಗಿದೆ.

  • ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇನಲ್ಲಿ ಬೈಕ್ ಸವಾರರಿಗೆ ನೋ ಎಂಟ್ರಿ!

    ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇನಲ್ಲಿ ಬೈಕ್ ಸವಾರರಿಗೆ ನೋ ಎಂಟ್ರಿ!

    ಬೆಂಗಳೂರು: ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇನಲ್ಲಿ (Expressway) ದ್ವಿಚಕ್ರ ವಾಹನಗಳ ಪ್ರವೇಶವನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿಷೇಧಿಸಿದೆ. ಮಾ.2ರಂದು ಕೋಲಾರ (Kolar) ಜಿಲ್ಲೆಯ ಬಂಗಾರಪೇಟೆ (Bangarpete) ತಾಲೂಕಿನಲ್ಲಿ ಸಂಭವಿಸಿದ ಮೊದಲ ಅಪಘಾತದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

    ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇನಲ್ಲಿ ಪ್ರವೇಶ ಮತ್ತು ನಿರ್ಗಮನ ದ್ವಾರಗಳ ಬಳಿ ಬೈಕ್‌ಗಳ ಪ್ರವೇಶವನ್ನು ನಿಷೇಧಿಸಲು ಗಸ್ತು ವಾಹನಗಳಿಗೆ ಸೂಚನೆ ನೀಡಲಾಗಿದೆ. ಎಕ್ಸ್‌ಪ್ರೆಸ್‌ವೇನಲ್ಲಿ ಬೈಕ್‌ಗಳ ಬಳಕೆಯನ್ನು ನಿಷೇಧಿಸಲು ಸೈನ್‌ಬೋರ್ಡ್‌ಗಳ ಅಳವಡಿಕೆ ಕಾರ್ಯ ಶೀಘ್ರ ಆರಂಭವಾಗಲಿದೆ. ಇದನ್ನೂ ಓದಿ: ಮದುವೆಗೆ ನಿರಾಕರಿಸಿದ್ದಕ್ಕೆ ಪ್ರೇಯಸಿ ಕತ್ತು ಸೀಳಿ ಕೊಂದು ಪ್ರಿಯಕರ ಆತ್ಮಹತ್ಯೆ

    ದೇಶದ ಯಾವುದೇ ಎಕ್ಸ್‌ಪ್ರೆಸ್‌ವೇಗಳಲ್ಲೂ ಬೈಕ್ ಪ್ರವೇಶಕ್ಕೆ ಅವಕಾಶ ನೀಡಿಲ್ಲ. ದ್ವಿಚಕ್ರ ವಾಹನ ಸವಾರರು ಈ ಎಕ್ಸ್‌ಪ್ರೆಸ್‌ವೇ ಬಳಸದಂತೆ ನಾವು ಒತ್ತಾಯಿಸುತ್ತೇವೆ. ಎಕ್ಸ್‌ಪ್ರೆಸ್‌ವೇಗಳನ್ನು ಗರಿಷ್ಠ 120 ಕಿ.ಮೀ ವೇಗದಲ್ಲಿ ಚಾಲನೆ ಮಾಡಲು ವಿನ್ಯಾಸಗೊಳಿಸಲಾಗಿದೆ. ಇತರ ವಾಹನಗಳು ಹೆಚ್ಚಿನ ವೇಗದಲ್ಲಿ ಚಲಿಸುವಾಗ ಬೈಕ್ ಸವಾರರು ಈ ಮಾರ್ಗವನ್ನು ಬಳಸುವುದು ಸುರಕ್ಷಿತವಲ್ಲ. ಬೈಕ್ ಸವಾರರು ತಮ್ಮ ಜೀವ ಮತ್ತು ಇತರ ವಾಹನ ಸವಾರರನ್ನೂ ಅಪಾಯಕ್ಕೆ ಸಿಲುಕಿಸುತ್ತಾರೆ. ಈ ರಸ್ತೆ ಪೂರ್ಣಗೊಂಡಾಗ ವಾಹನ ಚಾಲಕರಿಗೆ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದೆವು. ಅನೇಕ ಬೈಕ್ ಸವಾರರು ಹೊಸ ಅನುಭವಕ್ಕಾಗಿ ಈ ಹೈವೇಗೆ ಬಂದಿದ್ದರು. ಜೀವಗಳು ಅಮೂಲ್ಯವಾಗಿರುವುದರಿಂದ ಬೈಕ್ ಸವಾರರು ಈ ರಸ್ತೆಯಲ್ಲಿ ಸಂಚಾರ ಮಾಡಬಾರದು ಎಂದು ಎನ್‌ಹೆಚ್‌ಎಐ ತಿಳಿಸಿದೆ. ಇದನ್ನೂ ಓದಿ: ಮಠದ ಜಾಗ ತೆರವು – 14 ಮಂದಿ ಮಸೀದಿ ಸದಸ್ಯರ ವಿರುದ್ಧ ಕೇಸ್‌ ದಾಖಲು

    ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇನಲ್ಲಿ 68 ಕಿ.ಮೀ. ಮಾರ್ಗವನ್ನು ಕಳೆದ ತಿಂಗಳು ತಾತ್ಕಾಲಿಕವಾಗಿ ವಾಹನ ಸಂಚಾರಕ್ಕಾಗಿ ತೆರೆಯಲಾಯಿತು. ಕರ್ನಾಟಕದಲ್ಲಿ 71 ಕಿ.ಮೀ. ಎಕ್ಸ್‌ಪ್ರೆಸ್‌ವೇ ಮಾರ್ಗದ ನಿರ್ಮಾಣವನ್ನು ಎನ್‌ಹೆಚ್‌ಎಐ ಪೂರ್ಣಗೊಳಿಸಿದೆ. ಹೊಸಕೋಟೆಯಿಂದ ಚೆನ್ನೈ ಬಳಿಯ ಶ್ರೀಪೆರಂಬುದೂರಿನವರೆಗಿನ 260 ಕಿ.ಮೀ. ಭಾಗವು ಆಂಧ್ರಪ್ರದೇಶ ಮತ್ತು ತಮಿಳುನಾಡಿನ ವ್ಯಾಪ್ತಿಗೆ ಬರುತ್ತದೆ. ಅದು ಈ ವರ್ಷಾಂತ್ಯದ ವೇಳೆಗೆ ತೆರೆಯುವ ಸಾಧ್ಯತೆಯಿದೆ. ಕರ್ನಾಟಕದ ಮಿತಿಯೊಳಗೆ, ಈ ಎಕ್ಸ್‌ಪ್ರೆಸ್‌ವೇ ಮೂಲಕ ಜನರು ಹೊಸಕೋಟೆ, ಮಾಲೂರು, ಕೆಜಿಎಫ್ ಮತ್ತು ಇತರ ಸ್ಥಳಗಳನ್ನು ತಲುಪಲು ಸಹಾಯ ಮಾಡುತ್ತದೆ. ಇದನ್ನೂ ಓದಿ: ಪ್ರೀತಿಸಿದ ಹುಡುಗಿ ಜೊತೆ ವಿವಾಹ – ಮದುವೆಯಾದ 3 ದಿನಕ್ಕೆ ಹೃದಯಾಘಾತದಿಂದ ನವವಿವಾಹಿತ ಸಾವು

  • ಟೋಲ್ ತಪ್ಪಿಸುತ್ತಿದ್ದ ವಾಹನ ಸವಾರರಿಗೆ ಹೆದ್ದಾರಿ ಪ್ರಾಧಿಕಾರ ಶಾಕ್; ಬಿಡದಿ ಬಳಿಯ ಎಕ್ಸಿಟ್ ರೋಡ್ ಬಂದ್

    ಟೋಲ್ ತಪ್ಪಿಸುತ್ತಿದ್ದ ವಾಹನ ಸವಾರರಿಗೆ ಹೆದ್ದಾರಿ ಪ್ರಾಧಿಕಾರ ಶಾಕ್; ಬಿಡದಿ ಬಳಿಯ ಎಕ್ಸಿಟ್ ರೋಡ್ ಬಂದ್

    ರಾಮನಗರ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ (Bengaluru Mysuru Expressway) ಟೋಲ್ ತಪ್ಪಿಸುತ್ತಿದ್ದ ವಾಹನ ಸವಾರರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಶಾಕ್ ಕೊಟ್ಟಿದೆ.

    ಟೋಲ್‌ನಿಂದ (Toll) ಎಸ್ಕೇಪ್‌ ಆಗುವುದನ್ನ ತಪ್ಪಿಸಲು ಬಿಡದಿ ಬಳಿಯ ನಿರ್ಗಮನ ರಸ್ತೆ ಬಂದ್ ಮಾಡಿದೆ. ಈ ಮೂಲಕ ಹೆದ್ದಾರಿಯಿಂದ ಸರ್ವೀಸ್ ರಸ್ತೆಗೆ ಇದ್ದ ಸಂಪರ್ಕವನ್ನು ಕಡಿತಗೊಳಿಸಿದೆ. ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ 3 ಸಾವಿರಕ್ಕೆ ವಾರ್ಷಿಕ, 30 ಸಾವಿರಕ್ಕೆ ಜೀವಿತಾವಧಿ ಟೋಲ್‌ ಪಾಸ್‌

    ಮೈಸೂರಿನಿಂದ ಬರುತ್ತಿದ್ದ ವಾಹನ ಸವಾರರು ಬಿಡದಿಯಿಂದ ಮುಂದೆ ಸರ್ವೀಸ್‌ ರಸ್ತೆಗೆ ಇಳಿದು ಟೋಲ್‌ ತಪ್ಪಿಸಿಕೊಳ್ಳುತ್ತಿದ್ದರು. ಎಕ್ಸ್‌ಪ್ರೆಸ್‌ವೇನಲ್ಲಿ ಸಂಚರಿಸಿ ಶೇಷಗಿರಿಹಳ್ಳಿ ಬಳಿ ಟೋಲ್ ಕಟ್ಟದೇ ಸರ್ವೀಸ್ ರಸ್ತೆ ಮೂಲಕ ಬೆಂಗಳೂರು ತಲುಪುತ್ತಿದ್ದರು. ಹೀಗಾಗಿ ಟೋಲ್‌ ತಪ್ಪಿಸುವ ವಾಹನಗಳಿಗೆ ಕಡಿವಾಣ ಹಾಕಲು ಹೆದ್ದಾರಿ ಪ್ರಾಧಿಕಾರ ಎಂಟ್ರಿಗೆ ಅವಕಾಶ ಕೊಟ್ಟು, ಎಕ್ಸಿಟ್‌ ರಸ್ತೆಯನ್ನು ಬಂದ್‌ ಮಾಡಿದೆ. ಇದನ್ನೂ ಓದಿ: ಗೌತಮ್‌ ಅದಾನಿ ಪುತ್ರನ ವಿವಾಹ ಪ್ರತಿಜ್ಞೆ – ಪ್ರತಿ ವರ್ಷ 500 ಅಂಗವಿಕಲ ಹೆಣ್ಣುಮಕ್ಕಳ ವಿವಾಹಕ್ಕೆ 10 ಲಕ್ಷ ನೆರವು ಘೋಷಣೆ

    ಹೆದ್ದಾರಿ ಪ್ರಾಧಿಕಾರದ ನಡೆಗೆ ವಾಹನ ಸವಾರರು ಆಕ್ರೋಶ ಹೊರಹಾಕಿದ್ದಾರೆ. ಸೂಚನಾ ಫಲಕವನ್ನೂ ಅಳವಡಿಸದೇ ಏಕಾಏಕಿ ಎಕ್ಸಿಟ್‌ ರಸ್ತೆಯನ್ನು ಬಂದ್‌ ಮಾಡಿರುವುದು ಸರಿಯಲ್ಲ. ರಾಮನಗರದಿಂದ ಬೆಂಗಳೂರಿಗೆ ಹೋಗೋದಕ್ಕೂ ದುಬಾರಿ ಟೋಲ್ ಕಟ್ಟಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ.

    ಶೀಘ್ರವೇ ವಾರ್ಷಿಕ, ಜೀವಿತಾವಧಿ ಟೋಲ್‌ ಪಾಸ್‌:
    ಇನ್ನೂ ಟೋಲ್‌ ಸಂಗ್ರಹದಲ್ಲಿ ಉಂಟಾಗುತ್ತಿದ್ದ ಕಿರಿಕಿರಿ ತಪ್ಪಿಸಲು ಹಾಗೂ ಕಾರು ಮಾಲೀಕರಿಗೆ ಅನುಕೂಲ ಮಾಡಿಕೊಡಲು ʻವಾರ್ಷಿಕ ಟೋಲ್‌ ಪಾಸ್‌ʼ ವ್ಯವಸ್ಥೆಯ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಚಿಂತನೆ ನಡೆಸಿದೆ. ಅದರಂತೆ ಒಮ್ಮೆಲೆ 3,000 ರೂ. ಪಾವತಿಸಿ ಒಂದು ವರ್ಷದಲ್ಲಿ ಎಷ್ಟು ಬಾರಿ ಬೇಕಾದರೂ ಟೋಲ್‌ಗಳಲ್ಲಿ ಸಂಚಾರ ಮಾಡಬಹುದು. 30,000 ರೂ. ಪಾವತಿಸಿದ್ರೆ ʻಜೀವಮಾನದ ಪಾಸ್‌ʼ ಒದಗಿಸುವ ಸಾಧ್ಯತೆಯೂ ಇದೆ. 30,000 ರೂ.ಗಳ ಪಾಸ್‌ ಪಡೆದರೆ 15 ವರ್ಷಗಳವರೆಗೆ ಟೋಲ್‌ಗಳಲ್ಲಿ ಸಂಚಾರಕ್ಕೆ ಅವಕಾಶ ಇರಲಿದೆ ಎಂದು ಮೂಲಗಳು ತಿಳಿಸಿವೆ.