Tag: NH-4

  • ಹುಬ್ಬಳ್ಳಿಯಲ್ಲಿ ವರುಣನ ಅಬ್ಬರ- ರಾಷ್ಟ್ರೀಯ ಹೆದ್ದಾರಿ ಬಂದ್, ಟ್ರಾಫಿಕ್ ಜಾಮ್

    ಹುಬ್ಬಳ್ಳಿಯಲ್ಲಿ ವರುಣನ ಅಬ್ಬರ- ರಾಷ್ಟ್ರೀಯ ಹೆದ್ದಾರಿ ಬಂದ್, ಟ್ರಾಫಿಕ್ ಜಾಮ್

    – ಮೈಸೂರಿನಲ್ಲಿ ಸಹ ಅಬ್ಬರಿಸಿದ ಮಳೆ

    ಹುಬ್ಬಳ್ಳಿ/ಮೈಸೂರು: ನಗರದಲ್ಲಿಂದು ಧಾರಾಕಾರವಾಗಿ ಮಳೆ ಸುರಿದಿದ್ದು, ಮಧ್ಯಾಹ್ನ ಒಂದು ಗಂಟೆಗೂ ಅಧಿಕ ಕಾಲ ಸುರಿದ ಭಾರೀ ಮಳೆಗೆ ಹುಬ್ಬಳ್ಳಿಯ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿ ವಾಹನ ಸವಾರರು ಪರದಾಡಿದ ಘಟನೆ ನಡೆದಿದೆ.

    ಭಾರೀ ಮಳೆಯಿಂದಾಗಿ ಹುಬ್ಬಳ್ಳಿಯ ಕುಂದಗೋಳ ಕ್ರಾಸ್ ಬಳಿ ನಡೆಯುತ್ತಿದ್ದ ಸೇತುವೆ ಕಾಮಗಾರಿಯಿಂದಾಗಿ ರಸ್ತೆ ಸಂಚಾರ ಸ್ಥಗಿತಗೊಂಡಿತು. ಮಳೆಯ ನೀರು ಹೆಚ್ಚು ಬಂದ ಪರಿಣಾಮ ಕೆಲಕಾಲ ರಸ್ತೆ ಸಂಚಾರ ಬಂದ್ ಆಗಿತ್ತು. ಹೀಗಾಗಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಾಕಷ್ಟು ಟ್ರಾಫಿಕ್ ಜಾಮ್ ಉಂಟಾಗಿತ್ತು. ಹುಬ್ಬಳ್ಳಿ- ಕುಂದಗೋಳ ರಸ್ತೆ ಹಾಗೂ ಹುಬ್ಬಳ್ಳಿ ಬೆಂಗಳೂರು ಮಾರ್ಗವಾಗಿ ಸಂಚರಿಸುವ ಪ್ರಯಾಣಿಕರು ಪರದಾಡುವಂತಾಯಿತು.

    ನೂರಾರು ವಾಹನಗಳು ರಸ್ತೆಯಲ್ಲಿಯೇ ನಿಂತಿದ್ದವು. ರಸ್ತೆಯಲ್ಲಿ ನೀರಿನ ಪ್ರಮಾಣ ಕಡಿಮೆ ಆದ ಬಳಿಕ ಟ್ರಾಫಿಕ್ ಜಾಮ್ ಸ್ವಲ್ಪ ತಗ್ಗಿತು. ಹೆದ್ದಾರಿಯಲ್ಲಿ ಸೇತುವೆ ಕಾಮಗಾರಿ ನಡೆಯುತ್ತಿರುವ ಪರಿಣಾಮ ಮಳೆ ನೀರಿನಿಂದ ಹೆದ್ದಾರಿ ಸಂಪೂರ್ಣ ಬಂದ್ ಆಗಿತ್ತು. ಹೀಗಾಗಿ ಕೆಲ ಕಾಲ ವಾಹನಗಳು ಸಾಲುಗಟ್ಟಿ ನಿಂತಿದ್ದವು. ವಾಹನ ಸವಾರರು ಪರದಾಡುವಂತಾಯಿತು. ಹುಬ್ಬಳ್ಳಿ-ಧಾರವಾಡ ನಗರಗಳಲ್ಲಿ ಕಳೆದ ಎರಡು ದಿನಗಳಿಂದ ಬಿಡುವು ನೀಡಿದ್ದ ಮಳೆ ಇಂದು ಮತ್ತೆ ಸುರಿಯಿತು.

    ಇತ್ತ ಮೈಸೂರಿನಲ್ಲಿಯೂ ಧಾರಾಕಾರ ಮಳೆ ಸುರಿದಿದ್ದು, ಸಂಜೆಯ ವೇಳೆಗೆ ದಿಢೀರ್ ಆರಂಭವಾದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಯಿತು. ಭಾರೀ ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತಾಯಿತು. ಮಳೆ ನೀರು ರಸ್ತೆಗಳಲ್ಲಿ ಉಕ್ಕಿ ಹರಿಯಿತು. ಇನ್ನೂ ಹಲವೆಡೆ ತಗ್ಗು ಪ್ರದೇಶಗಳಿಗೆ ಮಳೆಯ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ದಿಢೀರ್ ಮಳೆಗೆ ಮೈಸೂರು ಜನ ಹೈರಾಣಾಗಿದ್ದಾರೆ.

  • ಕಿತ್ತುಹೋಗಿರುವ ರಸ್ತೆ, ಪ್ರತಿನಿತ್ಯ ಅಪಘಾತ- ರಾಷ್ಟ್ರೀಯ ಹೆದ್ದಾರಿ ದುಸ್ಥಿತಿಗೆ ಸವಾರರು ಸುಸ್ತು

    ಕಿತ್ತುಹೋಗಿರುವ ರಸ್ತೆ, ಪ್ರತಿನಿತ್ಯ ಅಪಘಾತ- ರಾಷ್ಟ್ರೀಯ ಹೆದ್ದಾರಿ ದುಸ್ಥಿತಿಗೆ ಸವಾರರು ಸುಸ್ತು

    ಹಾವೇರಿ: ಈ ರಸ್ತೆಗಳಲ್ಲಿ ಹಾದು ಹೋಗಿ ನೀವೇನಾದ್ರೂ ಸುರಕ್ಷಿತವಾಗಿ ಅಂದುಕೊಂಡ ಜಾಗ ಸೇರಿದ್ರೆ ನೀವು ಸಾವು ಗೆದ್ದು ಬಂದಂತೆಯೇ. ಯಾಕೆಂದರೆ ಭಾರೀ ಮಳೆಗೆ ರಸ್ತೆಗಳು ಕಿತ್ತು ಹೋಗಿ ಗುಂಡಿಗಳಾಗಿವೆ. ಕಿತ್ತು ಹೋದ ರಸ್ತೆಯಲ್ಲೇ ವಾಹನ ಸವಾರರು ಸಾಗುವ ದುಸ್ಥಿತಿ ನಿರ್ಮಾಣವಾಗಿದೆ.

    ಹಾವೇರಿ ಜಿಲ್ಲೆಯ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಗುಂಡಿಮಯವಾಗಿವೆ. ಆಗಸ್ಟ್ ನಲ್ಲಿ ಸುರಿದ ಭಾರೀ ಮಳೆಯಿಂದಾಗಿ ರಸ್ತೆಗಳು ಕಿತ್ತುಹೋಗಿವೆ. ಅನೇಕ ಕಡೆಗಳಲ್ಲಿ ರಸ್ತೆಗಳ ಗುಂಡಿಗಳಲ್ಲಿ ನೀರು ತುಂಬಿಕೊಂಡಿದೆ. ಕೆಲವೆಡೆ ರಸ್ತೆಗಳು ಕೆಸರು ಗದ್ದೆಗಳಾಗಿವೆ. ಇಂಥಾ ರಸ್ತೆಗಳಲ್ಲಿ ವಾಹನ ಸವಾರರು ಜೀವ ಕೈಯಲ್ಲಿ ಹಿಡ್ಕೊಂಡು ಓಡಾಡುತ್ತಿದ್ದಾರೆ.

    ಮಳೆಗೆ ರಸ್ತೆ ಕಿತ್ತು ಹೋಗಿ ಮೂರು ತಿಂಗಳು ಕಳೆದರೂ ದುರಸ್ತಿ ಕಾರ್ಯ ನಡೆದಿಲ್ಲ. ಕಿತ್ತು ಹೋದ ರಸ್ತೆಗಳಲ್ಲಿ ಯಾವುದಾದರು ಒಂದು ವಾಹನ ಮುಂದೆ ಹೋಗೋದು ಸ್ವಲ್ಪ ತಡವಾದರೆ ವಾಹನಗಳು ಸಾಲುಗಟ್ಟಿ ನಿಂತು ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಅಲ್ಲದೇ, ಈ ರಸ್ತೆಗಳಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಅನಾಹುತಗಳು ನಡೆಯುತ್ತಿವೆ. ಅಲ್ಲದೆ ಜಿಲ್ಲೆಯಲ್ಲಿ ಹಾದು ಹೋಗಿರೋ ಪೂಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರ ಸ್ಥಿತಿಯಂತೂ ಹೇಳತೀರದ್ದು. ರಸ್ತೆ ಅಗಲೀಕರಣ ಕಾಮಗಾರಿ ತೀರಾ ಮಂದಗತಿಯಲ್ಲಿ ಸಾಗುತ್ತಿರುವುದರಿಂದ ವಾಹನ ಸವಾರರು ಈ ರಸ್ತೆಯಲ್ಲಿ ಓಡಾಡಲು ಹರಸಾಹಸ ಪಡಬೇಕಿದೆ.

    ಇನ್ನಾದರೂ ಜಿಲ್ಲಾಡಳಿತ ಮತ್ತು ಸರ್ಕಾರ ಈ ಬಗ್ಗೆ ಗಮನಹರಿಸಿ ಕಿತ್ತು ಹೋಗಿರೋ ರಸ್ತೆ ಸರಿಪಡಿಸಬೇಕಿದೆ. ಆಗ ಮಾತ್ರ ವಾಹನ ಸವಾರರ ಎದುರಿಸುತ್ತಿರುವ ತೊಂದೆರೆ ನಿವಾರಣೆಯಾಗಲಿದೆ ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

  • ಹಾವೇರಿ: ಕಾರು ಪಲ್ಟಿ ಹೊಡೆದು ಇಬ್ಬರ ಸಾವು

    ಹಾವೇರಿ: ಕಾರು ಪಲ್ಟಿ ಹೊಡೆದು ಇಬ್ಬರ ಸಾವು

    ಹಾವೇರಿ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಶಿಗ್ಗಾವಿ ತಾಲೂಕಿನ ಕಾಮನಹಳ್ಳಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ-4 ರಲ್ಲಿ ಈ ಅಪಘಾತ ಸಂಭವಿಸಿದೆ. ಬೆಂಗಳೂರು ಮೂಲದ ರವೀಂದ್ರನ್ (35) ಮತ್ತು ಲಕ್ಷ್ಮೀ (30) ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳು. ಕಾರಿನಲ್ಲಿದ್ದ ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಶಿಗ್ಗಾವಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರು ಹುಬ್ಬಳ್ಳಿ ನಗರದಿಂದ ಬೆಂಗಳೂರಿಗೆ ಹೋಗುತ್ತಿತ್ತು ಎಂದು ತಿಳಿದು ಬಂದಿದೆ.

    ಸ್ಥಳಕ್ಕೆ ಶಿಗ್ಗಾವಿ ಠಾಣಾ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.