ನ್ಯೂಯಾರ್ಕ್: ಕಾಶ್ಮೀರ ವಿಚಾರಕ್ಕೆ ಭಾರತದ ಮೇಲೆ ಅಂತರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೇರಲು ಪಾಕಿಸ್ತಾನ ವಿಫಲವಾಗಿದೆ ಎನ್ನುವುದನ್ನು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಒಪ್ಪಿಕೊಂಡಿದ್ದಾರೆ.
ಸದ್ಯ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕ್ ಪ್ರಧಾನಿ ಇಮ್ರಾನ್ ಖಾನ್ ನ್ಯೂಯಾರ್ಕ್‍ನಲ್ಲಿ ಇದ್ದಾರೆ. ಮಂಗಳವಾರ ಸುದ್ದಿಗೋಷ್ಠಿ ನಡೆಸಿದ್ದ ಇಮ್ರಾನ್ ಖಾನ್ ಅಂತರಾಷ್ಟ್ರೀಯ ಸಮುದಾಯಗಳ ವರ್ತನೆ ಬೇಸರವಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಈ ಮೂಲಕ ಕಾಶ್ಮೀರ ವಿಚಾರಕ್ಕೆ ಭಾರತದ ವಿರುದ್ಧ ಅಂತರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೇರಲು ಪಾಕ್ ವಿಫಲವಾಗಿದೆ ಎನ್ನುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ:ವೇದಿಕೆಯಲ್ಲೇ ಇಮ್ರಾನ್ ಖಾನ್ ಮರ್ಯಾದೆ ತೆಗೆದ ಟ್ರಂಪ್ – ವಿಡಿಯೋ ನೋಡಿ

ಭಾರತದ ಸರ್ಕಾರ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ರದ್ದು ಮಾಡಿದ್ದಕ್ಕೆ ಪಾಕಿಸ್ತಾನ ರೊಚ್ಚಿಗೆದ್ದಿದೆ. ಈ ವಿಚಾರವನ್ನು ಇಟ್ಟುಕೊಂಡು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮರ್ಯಾದೆ ಕಳೆಯಬೇಕು ಎಂದು ಪಾಕಿಸ್ತಾನ ನಿರಂತರವಾಗಿ ಹೊಂಚು ಹಾಕುತ್ತಲೇ ಇದೆ. ಆದರೆ ಪಾಕಿನ ಯಾವ ಕುತಂತ್ರವು ಯಶಸ್ವಿಯಾಗಿಲ್ಲ. ಕಾಶ್ಮೀರ ವಿಚಾರಕ್ಕೆ ಭಾರತವನ್ನು ದೋಷಿ ಮಾಡಲು ಪ್ರಯತ್ನ ಮಾಡಲು ಹೋಗಿ ಪ್ರತಿ ಬಾರಿ ಪಾಕಿಸ್ತಾನವೇ ಮುಖಭಂಗ ಅನುಭವಿಸುತ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರೀ ಟೀಕೆಗೆ ಗುರಿಯಾಗುತ್ತಿದೆ.
ಇದರಿಂದ ಬೇಸತ್ತಿರುವ ಇಮ್ರಾನ್ ಖಾನ್, ಕಾಶ್ಮೀರ ವಿಚಾರಕ್ಕೆ ಅಂತರಾಷ್ಟ್ರೀಯ ಸಮುದಾಯಗಳ ವರ್ತನೆ ಬೇಸರ ತಂದಿದೆ. ಈ ಸಂಬಂಧ ಯಾರೂ ಕೂಡ ಮೋದಿ ಮೇಲೆ ಯಾವುದೇ ಒತ್ತಡ ಹೇರುತ್ತಿಲ್ಲ. ಆದರೆ ನಾವು ಕಾಶ್ಮೀರದ ವಿಚಾರಕ್ಕೆ ಒತ್ತಡ ಹೇರುವುದನ್ನು ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಪಾಕಿಸ್ತಾನ ಕಾಶ್ಮೀರದ ಬಗ್ಗೆ ತೋರಿಸುತ್ತಿರುವ ಕಾಳಜಿಯನ್ನು ಏಕೆ ಕಡೆಗಣಿಸಲಾಗುತ್ತಿದೆ ಎಂದು ಹೇಳುವಾಗ ಇಮ್ರಾನ್ ಖಾನ್ ಭಾರತದ ಆರ್ಥಿಕ ಸ್ಥಿತಿ ಮತ್ತು ಜಾಗತಿಕ ಪ್ರಾಮುಖ್ಯತೆಯನ್ನು ಒಪ್ಪಿಕೊಂಡಿದ್ದಾರೆ. ಭಾರತದಲ್ಲಿ 120 ಕೋಟಿ ಜನಸಂಖ್ಯೆ ನೋಡಿ ನಮ್ಮ ವಾದವನ್ನು ಪರಿಗಣಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ವಿಶ್ವ ಸಮದಾಯಗಳೇ ಕಾಶ್ಮೀರದ ಕುರಿತು ಭಾರತದ ನಿರ್ಧಾರವನ್ನು ಒಪ್ಪಿಕೊಂಡಿದೆ. ಆದರೆ ಪಾಕಿಸ್ತಾನ ಮಾತ್ರ ಇದನ್ನು ಒಪ್ಪಿಕೊಳ್ಳಲು ಸಾಧ್ಯವಾಗದೇ ಹತಾಶೆಯನ್ನು ಹೊರಹಾಕುತ್ತಿದೆ. ಶುಕ್ರವಾರ ನಡೆಯುವ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಕೂಡ ಇಮ್ರಾನ್ ಖಾನ್ ಭಾಷಣ ಮಾಡುವಾಗ ಭಾರತದ ಸರ್ಕಾರದ ನಿರ್ಧಾರದ ವಿರುದ್ಧ ಪ್ರಸ್ತಾಪಿಸಲಿದ್ದಾರೆ ಎಂದು ಪಾಕ್ ಹೇಳಿದೆ.

ಸೋಮವಾರದಂದು ನಡೆದ ಡೊನಾಲ್ಡ್ ಟ್ರಂಪ್ ಹಾಗೂ ಇಮ್ರಾನ್ ಖಾನ್ ಜಂಟಿ ಸುದ್ದಿಗೋಷ್ಠಿಯಲ್ಲೂ ಕೂಡ ಪಾಕ್ ಭಾರೀ ಮುಖಭಂಗ ಅನುಭವಿಸಿತ್ತು. ವೇದಿಕೆ ಮೇಲೆಯೇ ಟ್ರಂಪ್ ಇಮ್ರಾನ್ ಖಾನ್ ಮರ್ಯಾದೆ ತೆಗೆದಿದ್ದರು. ಸುದ್ದಿಗೋಷ್ಠಿಯಲ್ಲಿ ಪಾಕಿಸ್ತಾನಿ ವರದಿಗಾರರೊಬ್ಬರು, ಕಾಶ್ಮೀರದ ವಿಚಾರದಲ್ಲಿ ಭಾರತ ತೆಗದುಕೊಂಡ ನಿರ್ಧಾರದ ಬಗ್ಗೆ ನೀವೇಕೆ ಮಾತನಾಡುತ್ತಿಲ್ಲ ಎಂದು ಟ್ರಂಪ್‍ಗೆ ಪ್ರಶ್ನೆ ಹಾಕಿದ್ದರು.
ಇದಕ್ಕೆ ಉತ್ತರಿಸಿದ ಟ್ರಂಪ್, ಇವರು ನಿಮ್ಮ ತಂಡದವರಾ? ಇಂಥವರನ್ನು ಎಲ್ಲಿಂದ ಹುಡುಕಿ ತರುತ್ತೀರಾ? ಇವರೆಲ್ಲಾ ಅದ್ಭುತ ವ್ಯಕ್ತಿಗಳು ಎಂದು ಇಮ್ರಾನ್ ಖಾನ್ ಅವರಿಗೆ ಹೇಳಿ ಕಾಲೆಳೆದಿದ್ದರು. ಹಾಗೆಯೇ ಮಾತು ಮುಂದುವರಿಸಿ, ನೀವು ಕೇಳಿದ್ದು ಪ್ರಶ್ನೆಯಲ್ಲ. ಅದು ನಿಮ್ಮ ಅಭಿಪ್ರಾಯ ಎಂದು ಖಡಕ್ ತಿರುಗೇಟು ನೀಡಿದ್ದರು. ಈ ವಿಡಿಯೋ ವಿಶ್ವಾದ್ಯಂತ ಸಖತ್ ವೈರಲ್ ಆಗಿತ್ತು. ಈ ಸುದ್ದಿಗೋಷ್ಠಿಯ ನೇರ ಪ್ರಸಾರ ನೀಡುತ್ತಿದ್ದ ಪಾಕ್ ಮಾಧ್ಯಮಗಳು ಟ್ರಂಪ್ ಇಮ್ರಾನ್ ಖಾನ್ ಮರ್ಯಾದೆ ತೆಗೆದ ತಕ್ಷಣ ಪ್ರಸಾರವನ್ನು ನಿಲ್ಲಿಸಿತ್ತು. ಇದರಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಅತೀ ಬುದ್ಧಿವಂತಿಕೆ ಪ್ರದರ್ಶಿಸಲು ಹೋಗಿ ಪಾಕ್ ಮತ್ತೆ ನನ್ನ ಮರ್ಯಾದೆ ತಾನೇ ಕಳೆದುಕೊಂಡಿದೆ.