Tag: news conference

  • ಅತೀ ಹಿಂದುಳಿದ ವರ್ಗಗಳ ಪ್ರತಿನಿಧಿಗಳಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್‍ಗೆ ಒತ್ತಾಯ

    ಅತೀ ಹಿಂದುಳಿದ ವರ್ಗಗಳ ಪ್ರತಿನಿಧಿಗಳಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್‍ಗೆ ಒತ್ತಾಯ

    ಬೆಂಗಳೂರು: ಮುಂಬರುವ ರಾಜ್ಯ ವಿಧಾನ ಪರಿಷತ್ ಚುನಾವಣೆಯಲ್ಲಿ ಅತಿ ಹಿಂದುಳಿದ ವರ್ಗಗಳ ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಎಮ್.ಸಿ. ವೇಣುಗೋಪಾಲ್ ಅವರು ಒತ್ತಾಯಿಸಿದ್ದಾರೆ.

    ಬೆಂಗಳೂರಿನ ಪ್ರೆಸ್ ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ವಿಧಾನ ಪರಿಷತ್‍ನ ಏಳು ಸ್ಥಾನಗಳಿಗೆ ಜೂನ್ ತಿಂಗಳಿನಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ ಮೂರು ರಾಜಕೀಯ ಪಕ್ಷಗಳು ಅತೀ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕು. ಅತೀ ಹಿಂದುಳಿದ ವರ್ಗಗಳಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿಪಡಿಸಿಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

    ಸ್ವಾತಂತ್ರ್ಯ ಬಂದ ಈ ಏಳೂವರೆ ದಶಕದಲ್ಲಿ ಅತೀ ಹಿಂದುಳಿದ ವರ್ಗಗಳ ಸುಮಾರು 197 ಸಮುದಾಯಗಳು ರಾಜಕೀಯ ಅವಕಾಶಗಳಿಂದ ವಂಚಿತವಾಗಿವೆ. ಪ್ರಸ್ತುತ ರಾಜ್ಯದ ಹಿಂದುಳಿದ ವರ್ಗಗಳ ಪಟ್ಟಿ ನ್ಯಾಯಮೂರ್ತಿ ಚಿನ್ನಪ್ಪ ರೆಡ್ಡಿ ಆಯೋಗ 1995ಕ್ಕಿಂತ ಹಿಂದೆ ಸಲ್ಲಿಸಿದ ವರದಿಯನ್ನು ಆಧರಿಸಿದೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿಲ್ಲ ಎಂದು ಆಯೋಗ ತನ್ನ ವರದಿಯಲ್ಲಿ ಸೇರಿಸದೇ ಕೈಬಿಟ್ಟ ಕೆಲವು ಜಾತಿ, ಉಪಜಾತಿಗಳನ್ನು ಸರ್ಕಾರ ಸ್ವಯಂ ಪ್ರೇರಣೆಯಿಂದಲೋ, ಒತ್ತಡಕ್ಕೆ ಒಳಗಾಗಿಯೋ ಸೇರ್ಪಡೆ ಮಾಡಿರುವುದರಿಂದ ಅರ್ಹ ಹಿಂದುಳಿದ ವರ್ಗಗಳಿಗೆ ಘೋರ ಅನ್ಯಾಯವಾಗಿದೆ. ಅನ್ಯಾಯದ ಫಲವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅರ್ಹ ಹಿಂದುಳಿದ ವರ್ಗಗಳಿಗೆ ನ್ಯಾಯವಾಗಿ ಸಿಗಬೇಕಾದ ಮೀಸಲಾತಿ ಕೋಟಾ ಸಿಗದೆ ಸಂವಿಧಾನದ ಆಶಯ ವಿಫಲವಾಗಿದೆ ಎಂದು ಹೇಳಿದ್ದಾರೆ.  ಇದನ್ನೂ ಓದಿ: ನವಜೋತ್‌ ಸಿಂಗ್‌ ಸಿಧುಗೆ 1 ವರ್ಷ ಜೈಲು ಶಿಕ್ಷೆ

    ವಿಧಾನ ಪರಿಷತ್ ಅಸ್ತಿತ್ವಕ್ಕೆ ಬಂದ 1952ರಿಂದ 2022ರವರೆಗಿನ 70 ವರ್ಷದಲ್ಲಿ ವಿಧಾನ ಪರಿಷತ್‍ನಲ್ಲಿ ದೊರೆತ 802 ಅವಕಾಶಗಳ ಪೈಕಿ ಪ್ರಬಲ ಸಮುದಾಯದವರೇ ಪರಿಷತ್ ಸದಸ್ಯತ್ವದ ಸಿಂಹಪಾಲು ಪಡೆದಿದ್ದಾರೆ. ಅಚ್ಚರಿಯಾಗಬಹುದಾದ ಅಧಿಕೃತ ವಿವರ ಈ ಕೆಳಕಂಡಂತಿದೆ. ಲಿಂಗಾಯತರು-141, ಒಕ್ಕಲಿಗ-158, ಬ್ರಾಹ್ಮಣ-91, ಪ.ಜಾ-65, ಮುಸ್ಲಿಂ-54, ಕುರುಬ-20, ಪ.ಪಂ-18, ಈಡಿಗ-18, ಕೊಡವ-15, ಜೈನ್-14, ಬಂಟ-14, ಬಲಿಜ-13, ಕ್ರೈಸ್ತ್-12, ಮರಾಠ-12, ಬೆಸ್ತ-11, ವೈಶ್ಯ-10, ರೆಡ್ಡಿ-9, ಗಾಣಿಗ-6, ದೇವಾಂಗ-5, ವಿಶ್ವಕರ್ಮ-4, ಉಪ್ಪಾರ-3, ನಾಯ್ಡು, ತಿಗಳ, ಮಡಿವಾಳ, ಹಿಂದೂ ಸಾದರು, ರಾಜು ಕ್ಷತ್ರಿಯ, ಭಂಡಾರಿ-ತಲಾ 2, ಗೊಲ್ಲ, ಕುಂಬಾರ, ರಜಪೂತ್, ಮುದಲಿಯಾರ್, ಅರಸು, ದೇವಳಿ, ಸಿಂಧಿ, ಭಾವಸಾರ ಕ್ಷತ್ರಿಯ, ಸವಿತಾ-ತಲಾ 1 ಸ್ಥಾನಗಳನ್ನು ಪಡೆದುಕೊಂಡಿದ್ದಾರೆ ಎಂದು ಅವರು ಅಂಕಿ ಅಂಶಗಳ ಮೂಲಕ ಮಾಹಿತಿ ನೀಡಿದರು.

    ಪ್ರಸ್ತುತ, ವಿಧಾನಪರಿಷತ್ತಿನ 74 ಸದಸ್ಯರ ಸಮುದಾಯದ ವಿವರ ಹೀಗಿದ್ದು, ಒಕ್ಕಲಿಗ-21, ಲಿಂಗಾಯತ-20, ಪ.ಜಾ-5, ಕುರುಬ-5, ಪ.ಪಂ, ಮುಸ್ಲಿಂ, ಬೆಸ್ತ-ತಲಾ 3, ಈಡಿಗ-3, ಕೊಡವ, ಬಂಟ, ಬ್ರಾಹ್ಮಣ-ತಲಾ 2, ತಿಗಳ, ವೈಶ್ಯ, ರೆಡ್ಡಿ, ವಿಶ್ವಕರ್ಮ ಮತ್ತು ಜೈನ್-ತಲಾ 1, ಇವರಲ್ಲಿ ಮುಂಬರುವ ಜೂನ್ ತಿಂಗಳಲ್ಲಿ 7 ಮಂದಿ ಸದಸ್ಯರು ನಿವೃತ್ತರಾಗುತ್ತಿದ್ದಾರೆ ಎಂದರು. ಇವರೆಲ್ಲಾ ವಿಧಾನಸಭಾ ಸದಸ್ಯರಿಂದ ಚುನಾಯಿತರಾದವರು. ಈ ಸ್ಥಾನಗಳನ್ನು ತುಂಬಲು ಜೂನ್ ಮೊದಲವಾರ ಚುನಾವಣೆ ನಡೆಯಲಿದೆ ಎಂದರು. ಇದನ್ನೂ ಓದಿ: ಜ್ಞಾನವಾಪಿ ಕೇಸ್ ವಾರಣಾಸಿ ಕೋರ್ಟ್‍ಗೆ ವರ್ಗಾವಣೆ – ವಾದ, ಪ್ರತಿವಾದ ಹೇಗಿತ್ತು?

    ಪ್ರಸಕ್ತ ವಿಧಾನ ಸಭೆಯ ಸದಸ್ಯರ ಬಲದಂತೆ (ಬಿಜೆಪಿ-4, ಕಾಂಗ್ರೆಸ್-2 ಮತ್ತು ದಳ-1) ಚುನಾಯಿತರಾಗುವ ಸಂಭವವಿದೆ. ಹಿಂದುಳಿದ ವರ್ಗಗಳು ಮತ್ತು ಅಲೆಮಾರಿ, ಅರೆ ಅಲೆಮಾರಿ ಹಾಗೂ ವಿಮುಕ್ತ ಬುಡಕಟ್ಟುಗಳ 46 ಸಮುದಾಯಗಳು ಹೊಂದಿರುವ ಜನಸಂಖ್ಯಾ ಸಾಮಥ್ರ್ಯಕ್ಕೆ ತಕ್ಕಂತೆ ಪರಿಷತ್ತಿನಲ್ಲಿ ಅವುಗಳ ಸಂಖ್ಯೆ ತೀರಾ ಕಡಿಮೆ ಇದೆ. ತಮ್ಮ ಪಕ್ಷದ ವತಿಯಿಂದ ಚುನಾಯಿಸಬಹುದಾದ ಸ್ಥಾನಗಳನ್ನೂ ಹಿಂದುಳಿದ ಮತ್ತು ಅಲೆಮಾರಿ, ಅರೆ ಅಲೆಮಾರಿ ಹಾಗೂ ವಿಮುಕ್ತ ಬುಡಕಟ್ಟುಗಳ 46 ಸಮುದಾಯಗಳಿಗೆ ಅನ್ವಯಿಸುವಂತೆ ಅವಕಾಶ ಕಲ್ಪಿಸಿಕೊಟ್ಟು ಈ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ದೊರಕಿಸಿ ಕೊಡಬೇಕೆಂದು ಎಂದು ಅವರು ಮನವಿ ಮಾಡಿದರು.

    ಇನ್ನೂ, ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‍ಗೆ ಚುನಾವಣೆ ನಡೆಸುವುದು ಮತ್ತು ಸ್ಥಳೀಯ ಸಂಸ್ಥೆಗಳ ಅಧಿಕಾರಾವಧಿ ಪೂರ್ಣಗೊಂಡ ನಂತರ ನಿರ್ವಾತ ಸೃಷ್ಠಿಯಾಗಲು ಬಿಡದೆ ಚುನಾವಣೆ ನಡೆಸಬೇಕಾಗಿರುವುದು ರಾಜ್ಯಗಳ ಸಾಂವಿಧಾನಿಕ ಹೊಣೆಗಾರಿಕೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ. ಹೀಗಾಗಿ ಸ್ಥಳೀಯ ಸಂಸ್ಥೆಗಳಿಂದ ಪರಿಷತ್‍ಗೆ ಚುನಾವಣೆ ನಡೆಸುವ ಸನ್ನಿವೇಶ ಕರ್ನಾಟಕದಲ್ಲೂ ಎದುರಾಗಿದೆ. ಹಾಗೇ ಯಾವುದೇ ಕ್ಷಣದಲ್ಲೂ ಚುನಾವಣೆ ದಿನಾಂಕ ಘೋಷಣೆಯಾಗುವ ಸಂಭವವಿದೆ. ಈ ಹಂತದಲ್ಲಿ ರಾಜ್ಯದ ಮೂರೂ ರಾಜಕೀಯ ಪಕ್ಷಗಳು ಅತಿ ಹಿಂದುಳಿದ ವರ್ಗಗಳ ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಅವರು ಒತ್ತಾಯಿಸಿದರು.

    ಸ್ಥಳೀಯ ಸಂಸ್ಥೆಯ ಚುನಾವಣೆಗಳಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಹಿಂದುಳಿದ ವರ್ಗಗಳ ಮೀಸಲಾತಿ ವಿಚಾರವಾಗಿ ನಿಜವಾಗಿಯೂ ಆಸಕ್ತಿ ಮತ್ತು ಕಾಳಜಿ ಇದ್ದಲ್ಲಿ ಸಾಮೂಹಿಕವಾಗಿ ಒಂದು ತೀರ್ಮಾನಕ್ಕೆ ಬಂದು ಓಬಿಸಿ ಮೀಸಲಾತಿಯನ್ನು ಅಭ್ಯರ್ಥಿಯ ಬದಲು ಕ್ಷೇತ್ರಗಳಲ್ಲಿ ಮೀಸಲಾತಿಯನ್ನು ನೀಡಿದಾಗ ಮಾತ್ರ ಕರ್ನಾಟಕದ ಶೇ. 62ಕ್ಕೂ ಹೆಚ್ಚಿರುವ ಹಿಂದುಳಿದ, ಅತಿ ಹಿಂದುಳಿದ ವರ್ಗಗಳ ಬಗ್ಗೆ ಸಾಮಾಜಿಕ ಕಳಕಳಿಯನ್ನು ಕಾಣಬಹುದು ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಅತೀ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಪ್ರಧಾನ ಕಾರ್ಯದರ್ಶಿ ಎಮ್. ನಾಗರಾಜ್, ಖಜಾಂಚಿ ಎಲ್.ಎ. ಮಂಜುನಾಥ್ ಮೊದಲಾದವರು ಉಪಸ್ಥಿತರಿದ್ದರು.

     

  • ಜಿಲ್ಲೆಯ 1.7 ಲಕ್ಷ ಕಟ್ಟಡ ಕಾರ್ಮಿಕರಿಗೆ ತಲಾ 3 ಸಾವಿರ ರೂ. ನೆರವು: ಕೆ.ಎಸ್.ಈಶ್ವರಪ್ಪ

    ಜಿಲ್ಲೆಯ 1.7 ಲಕ್ಷ ಕಟ್ಟಡ ಕಾರ್ಮಿಕರಿಗೆ ತಲಾ 3 ಸಾವಿರ ರೂ. ನೆರವು: ಕೆ.ಎಸ್.ಈಶ್ವರಪ್ಪ

    ಶಿವಮೊಗ್ಗ: ಕೋವಿಡ್ ಲಾಕ್‍ಡೌನ್‍ನಿಂದ ಆರ್ಥಿಕ ಸಂಕಷ್ಟಕ್ಕೀಡಾದ ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರಿಗೆ ತಲಾ 3 ಸಾವಿರ ರೂ. ನೆರವು ಒದಗಿಸಲಾಗುತ್ತಿದ್ದು, ಜಿಲ್ಲೆಯಲ್ಲಿ 1,07,286 ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ನಗದು ವರ್ಗಾವಣೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

    ಸುದ್ದಿಗೋಷ್ಟಿಯಲ್ಲಿ ಈ ಕುರಿತು ಮಾತನಾಡಿದ ಅವರು, ಈಗಾಗಲೇ ಜಿಲ್ಲೆಯಲ್ಲಿ 72,065 ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ಒಟ್ಟು 21.61 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ. ಇವರ ಪೈಕಿ 11,040 ಕಾರ್ಮಿಕರಿಗೆ ಜಮಾಗೊಳಿಸಲಾದ ಮೊತ್ತ ಅವರ ಖಾತೆಗಳು ನಿಷ್ಕ್ರಿಯವಾಗಿರುವುದರಿಂದ ಹಾಗೂ ಬ್ಯಾಂಕ್ ಖಾತೆ ಆಧಾರ್ ಸಂಖ್ಯೆಗೆ ಜೋಡಣೆಯಾಗದಿರುವ ಕಾರಣ 3.31 ಕೋಟಿ ರೂ. ಇನ್ನೂ ಜಮಾ ಆಗಿಲ್ಲ. ಕಾರ್ಮಿಕರು ತಮ್ಮ ಬ್ಯಾಂಕ್ ಖಾತೆಯನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಮಾಡಿಕೊಳ್ಳಲು ಮನವಿ ಮಾಡಲಾಗಿದೆ ಎಂದು ಹೇಳಿದ್ದಾರೆ.

    ಆಹಾರ ಕಿಟ್ ವಿತರಣೆ
    ಕಾರ್ಮಿಕ ಇಲಾಖೆ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕಾರ್ಮಿಕರ ನೆರವಿಗೆ ಹಲವು ಸೌಲಭ್ಯ ಒದಗಿಸಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಸಂಕಷ್ಟಕ್ಕೀಡಾಗಿರುವ ನಿರ್ಮಾಣ ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ 32 ವಾರ್ಡ್‍ಗಲ್ಲಿರುವ 10,850 ಫಲಾನುಭವಿಗಳಿಗೆ ಸೋಮವಾರದಿಂದ ಆಯಾ ವಾರ್ಡ್ ನಲ್ಲಿ ಆಹಾರ ಕಿಟ್ ಒದಗಿಸಲಾಗುವುದು. ಫಲಾನುಭವಿಗಳು ಕಾರ್ಮಿಕ ಕಾರ್ಡ್ ಮತ್ತು ಆಧಾರ್ ಕಾರ್ಡ್ ತಂದು ಬೆಳಗ್ಗೆ ವಿತರಣಾ ಕೇಂದ್ರದಲ್ಲಿ ಟೋಕನ್ ಪಡೆಯಬೇಕು. ಮರುದಿನ ಆಹಾರ ಕಿಟ್ ವಿತರಣೆ ಮಾಡಲಾಗುವುದು. ಆಹಾರ ಕಿಟ್ ಕಾರ್ಮಿಕರಿಗೆ ವಿತರಿಸಲು ಅನುಕೂಲವಾಗುವಂತೆ 9 ತಂಡಗಳನ್ನು ರಚಿಸಲಾಗಿದ್ದು, 32 ಕೇಂದ್ರಗಳಲ್ಲಿ ನೋಡಲ್ ಅಧಿಕಾರಿಗಳ ತಂಡದ ನೇತೃತ್ವದಲ್ಲಿ ವಿತರಣೆ ಕಾರ್ಯ ಕೈಗೊಳ್ಳಲಾಗುವುದು ಎಂದು ಹೇಳಿದರು.

    ಈ ವೇಳೆ ಮೇಯರ್ ಸುನಿತಾ ಅಣ್ಣಪ್ಪ, ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಜಿಲ್ಲಾ ಕಾರ್ಮಿಕ ಅಧಿಕಾರಿ ವಿಶ್ವನಾಥ್ ಮತ್ತಿತರರು ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು. ಇದನ್ನೂ ಓದಿ: ರಾಯಚೂರು ಜಿಲ್ಲೆಯಲ್ಲಿ ಜೋರು ಮಳೆ – ನೂರಾರು ಎಕರೆ ಜಮೀನಿಗೆ ನುಗ್ಗಿದ ನೀರು

  • ಪತ್ರಕರ್ತನ ಮುಖಕ್ಕೆ ಸ್ಯಾನಿಟೈಸರ್ ಸ್ಪ್ರೇ ಮಾಡಿದ ಪ್ರಧಾನಿ- ವೀಡಿಯೋ ವೈರಲ್

    ಪತ್ರಕರ್ತನ ಮುಖಕ್ಕೆ ಸ್ಯಾನಿಟೈಸರ್ ಸ್ಪ್ರೇ ಮಾಡಿದ ಪ್ರಧಾನಿ- ವೀಡಿಯೋ ವೈರಲ್

    ಬ್ಯಾಂಕಾಕ್: ಪತ್ರಕರ್ತರೊಬ್ಬರು ಪ್ರಶ್ನೆ ಕೇಳಿದ್ದಕ್ಕೆ ಥೈಲ್ಯಾಂಡ್ ಪ್ರಧಾನಿ ಪ್ರಯುತ್ ಚಾನ್-ಒ-ಚಾ ಇರುಸುಮುರುಸಿಗೆ ಒಳಗಾಗಿದ್ದು, ಮುಖಕ್ಕೆ ಸ್ಯಾನಿಟೈಸರ್ ಸ್ಪ್ರೇ ಮಾಡಿ ವಿಕೃತಿ ಮೆರೆದಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.

    ಪತ್ರಿಕಾಗೋಷ್ಠಿಯಲ್ಲಿ ಈ ಘಟನೆ ನಡೆದಿದ್ದು, ಪತ್ರಕರ್ತರು ಕೇಳಿದ ಪ್ರಶ್ನೆಗೆ ಕಸಿವಿಸಿಗೊಂಡ ಪ್ರಯುತ್ ಚಾನ್ ಓಚಾ, ಸ್ಟೇಜ್ ಮೇಲಿಂದ ಇಳಿದು ಬಂದು ಪತ್ರಕರ್ತನ ಮುಖಕ್ಕೆ ಸ್ಯಾನಿಟೈಸರ್ ಸ್ಪ್ರೇ ಮಾಡಿದ್ದಾರೆ. ಇದನ್ನು ಕಂಡ ಉಳಿದ ಪತ್ರಕರ್ತರು ತಬ್ಬಿಬ್ಬಾಗಿದ್ದು, ಪ್ರಧಾನಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ನಿಮ್ಮ ಪ್ರಶ್ನೆಗಳಲ್ಲೇ ಕೆಟ್ಟ ವೈರಸ್ ಇದೆ. ಮೊದಲು ಅದನ್ನು ಹೊಡೆದೋಡಿಸಬೇಕು ಎಂದು ಸ್ಯಾನಿಟೈಸರ್ ಸ್ಪ್ರೇ ಮಾಡಿದ್ದಾರೆ. ಪ್ರಧಾನಿ ಪ್ರಯುತ್ ಚಾನ್ ಸಂಪುಟದ ಮೂವರು ಸಚಿವರು ಭ್ರಷ್ಟಾಚಾರದಲ್ಲಿ ಜೈಲಿಗೆ ಹೋಗಿದ್ದು, ಇದಕ್ಕೆ ಸಂಬಂಧಿಸಿದಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಈ ರೀತಿ ದುರ್ವರ್ತನೆ ತೋರಿದ್ದಾರೆ ಎನ್ನಲಾಗಿದೆ.

    ಪೋಡಿಯಂನಿಂದ ಇಳಿದು ಬಂದು ಸ್ಯಾನಿಟೈಸರ್ ಬಾಟಲಿಯನ್ನು ಹಿಡಿದು, ಪತ್ರಕರ್ತರ ಬಳಿ ಆಗಮಿಸುತ್ತಾರೆ. ಬಳಿಕ ನೆರೆದಿದ್ದ ಪತ್ರಕರ್ತರಿಗೆ ಸ್ಯಾನಿಟೈಸರ್ ಸ್ಪ್ರೇ ಮಾಡುತ್ತಾರೆ. ಬಳಿಕ ಪತ್ರಿಕಾಗೋಷ್ಠಿಯಿಂದ ಹೊರ ನಡೆಯುತ್ತಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಸಹ ತರಾಟೆಗೆ ತೆಗೆದುಕೊಂಡಿದ್ದಾರೆ.

  • 5 ವರ್ಷದ ಮಗು ಕೊಂದು ನೀರಿನ ಟ್ಯಾಂಕಿನಲ್ಲಿ ಶವ ಬಚ್ಚಿಟ್ಟ ಚಿಕ್ಕಪ್ಪ

    5 ವರ್ಷದ ಮಗು ಕೊಂದು ನೀರಿನ ಟ್ಯಾಂಕಿನಲ್ಲಿ ಶವ ಬಚ್ಚಿಟ್ಟ ಚಿಕ್ಕಪ್ಪ

    – ಸುದ್ದಿಗೋಷ್ಠಿಯಲ್ಲಿ ವಿಭಿನ್ನತೆ ಮೆರೆದ ರವಿ ಡಿ.ಚೆನ್ನಣ್ಣನವರ್

    ಬೆಂಗಳೂರು: ಸಾಮಾನ್ಯವಾಗಿ ಸುದ್ದಿಗೋಷ್ಠಿಯನ್ನು ಉನ್ನತ ಮಟ್ಟದ ಅಧಿಕಾರಿಗಳು ನಡೆಸುವುದು ಸಹಜ, ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್ಪಿ ರವಿ.ಡಿ.ಚನ್ನಣ್ಣವರ್ ಇಂದು ಸಿಪಿಐಗೆ ಮಾಧ್ಯಮಗಳಿಗೆ ವಿವರಣೆ ನೀಡುವಂತೆ ಸಲಹೆ ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ನಗರದ ದಾನೋಜಿಪಾಳ್ಯದಲ್ಲಿ ಕಳೆದ ಐದು ದಿನದ ಹಿಂದೆ ಐದು ವರ್ಷದ ಮಗು ರಿಯಾನ್ ಕೊಲೆ ನಡೆದಿತ್ತು. ಮಗುವಿನ ಚಿಕ್ಕಪ್ಪ ದಾದಾಪೀರ್ ಕ್ಷುಲ್ಲಕ ವಿಚಾರದಲ್ಲಿ, ಮಗುವನ್ನ ಕೊಲೆ ಮಾಡಿ ಮನೆಯ ಮೇಲಿನ ನೀರಿನ ಸಿಂಟೆಕ್ಸ್ ನಲ್ಲಿ ಹಾಕಿ ಪರಾರಿಯಾಗಿದ್ದ. ಈ ಪ್ರಕರಣವನ್ನು ಐದು ದಿನದಲ್ಲಿ ಬೇದಿಸುವಲ್ಲಿ ನೆಲಮಂಗಲ ಟೌನ್ ಪೊಲೀಸರು ಯಶಸ್ವಿಯಾಗಿದ್ದಾರೆ.

    ಈ ಪ್ರಕರಣ ಸಂಬಂಧ ಇಂದು ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಗ್ರಾಮಾಂತರ ಎಸ್.ಪಿ ರವಿ ಡಿ ಚೆನ್ನಣ್ಣನವರ್ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ನಾಳೆ ನಿವೃತ್ತಿಯಾಗಲಿರುವ ನೆಲಮಂಗಲ ಸಿಪಿಐ ಶಿವಣ್ಣರಿಗೆ ಮಾತನಾಡಲು ಅನುವು ಮಾಡಿಕೊಟ್ಟಿದ್ದಾರೆ. ನಾಳೆ ನಿವೃತ್ತಿಯಾಗಲಿರುವ ಸಿಪಿಐ ಶಿವಣ್ಣರಿಗೆ ರವಿ.ಡಿ.ಚನ್ನಣ್ಣವರ್ ಅಭಿನಂಧಿಸಿರು.

    ಈ ವೇಳೆ ಮಾತನಾಡಿದ ರವಿ.ಡಿ.ಚನ್ನಣ್ಣವರ್ ಸಾಕಷ್ಟು ಪ್ರಕರಣದಲ್ಲಿ ಸಿಪಿಐ ಶಿವಣ್ಣ ಉತ್ತಮ ಕೆಲಸ ಮಾಡಿ ನಾಳೆ ಪೊಲೀಸ್ ಸೇವೆಯಿಂದ ನಿವೃತ್ತಿ ಹೊಂದುತ್ತಿದ್ದು, ಅವರ ಮುಂದಿನ ಜೀವನ ಸುಖಕರವಾಗಿರಲಿ ಎಂದು ಆಶಿಸಿದರು. ಅಲ್ಲದೆ ಕ್ರೀಡಾಪಟು ಆಗಿದ್ದ ಶಿವಣ್ಣ ಪೊಲೀಸ್ ಇಲಾಖೆಗೆ ಸೇರಿ ರಾಜ್ಯದ ನಾನಾ ಕಡೆ ಸೇವೆ ಸಲ್ಲಿಸಿ ಉತ್ತಮ ವ್ಯಕ್ತಿಯಾಗಿ ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರರಾಗಿದ್ದು, ಇಲಾಖೆಯಲ್ಲಿಯು ಉತ್ತಮ ಕೆಲಸ ಮಾಡಿದ್ದಾರೆ ಎಂದರು.

  • ನಾನು ಯಾವುದಕ್ಕೂ ಹೆದರಲ್ಲ, ಎಲ್ಲವನ್ನೂ ಎದುರಿಸುತ್ತೇನೆ: ಡಿಕೆಶಿ

    ನಾನು ಯಾವುದಕ್ಕೂ ಹೆದರಲ್ಲ, ಎಲ್ಲವನ್ನೂ ಎದುರಿಸುತ್ತೇನೆ: ಡಿಕೆಶಿ

    ಬೆಂಗಳೂರು: ನಾನು ಯಾವುದೇ ಬೇನಾಮಿ ಆಸ್ತಿ ಮಾಡಿಲ್ಲ. ಇದೆಲ್ಲಾ ದುಡಿದ ಆಸ್ತಿ. ನಾನು ಯಾವುದಕ್ಕೂ ಹೆದರಲ್ಲ, ಎಲ್ಲವನ್ನೂ ಎದುರಿಸುತ್ತೇನೆ ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.

    ಇಡಿ ಸಮನ್ಸ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಿಮ್ಮೆಲ್ಲರಿಗೂ ಅಭಿನಂದನೆಗಳು. ಆಗಸ್ಟ್ 2 2017ರಿಂದ ನನ್ನ ಬಗ್ಗೆ ವಿವಿಧ ರೀತಿಯಲ್ಲಿ ನೀವೆಲ್ಲಾ ವ್ಯಾಖ್ಯಾನ ಮಾಡಿದ್ದೀರಿ. ಪ್ರಜಾಪ್ರಭುತ್ವದಲ್ಲಿ ನಾನು ಈ ಬಗ್ಗೆ ನಾನು ಮಾತನಾಡಲ್ಲ. ಅದು ನಿಮ್ಮ ಹಕ್ಕು, ಕೆಲವರು ಸತ್ಯಾಂಶ ಮಾಡಿದ್ದೀರಿ, ಕೆಲವರು ಇರೋ ವಿಚಾರವನ್ನ ತಿರುಚಿ ತಮ್ಮದೆಯಾದ ರೀತಿಯಲ್ಲಿ ಕಲ್ಪನೆ ಮಾಡಿಕೊಂಡಿದ್ದೀರಿ. ನಿಮ್ಮ ಅನುಕೂಲಕ್ಕೆ ಯಾವ ರೀತಿ ಬಿಂಬಿಸಬೇಕೋ ಹಾಗೆ ಬಿಂಬಿಸಿದ್ದೀರಿ ಎಂದರು.

    ಪಕ್ಷದ ನಿಷ್ಠಾವಂತ ಸೈನಿಕನ ರೀತಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಗುಜರಾತ್, ಮಹಾರಾಷ್ಟ್ರ ಹಾಗೂ ನಮ್ಮ ಶಾಸಕರನ್ನು ಕಾಪಾಡುವ ಜವಾಬ್ದಾರಿ ನಿಭಾಯಿಸಿಕೊಂಡು ಬಂದಿದ್ದೇನೆ. ಕಳೆದ 40 ವರ್ಷದಿಂದ ನನ್ನದೆ ರೀತಿಯಲ್ಲಿ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಕೆಲವೊಮ್ಮೆ ಟೀಕೆ ಮಾಡಿರಬಹುದು, ಕೆಲವೊಮ್ಮೆ ಸಹಾಯ ಮಾಡಿರಬಹುದು. ನನ್ನ ಹೋರಾಟದಲ್ಲಿ ಕೆಲವರು ಸಂತೋಷ ಪಟ್ಟಿರಬಹುದು, ಕೆಲವರು ದು:ಖ ಪಟ್ಟಿರಬಹುದು. ಪಕ್ಷಕ್ಕಾಗಿ ನಿರಂತರವಾಗಿ ಪ್ರಾಮಾಣಿಕೆಯಿಂದ ಕೆಲಸ ಮಾಡಿಕೊಂಡು ಬಂದಿದ್ದೇನೆ. ಆದರೆ ಈಗ ನನ್ನ ಮೇಲೆ, ನನ್ನ ಕುಟುಂಬ ಹಾಗೂ ಸ್ನೇಹಿತರ ಮೇಲೆ ಇಡಿ ದಾಳಿ ನಡೆಸಿದೆ. ಈ ಬಗ್ಗೆ ನಾನು ನಮ್ಮ ಶಾಸಕರ ಜೊತೆ ರೆಸಾರ್ಟಿನಲ್ಲಿದ್ದಾಗ ನೀವು ತೋರಿಸಿದ್ದೀರಿ ಎಂದು ತಿಳಿಸಿದರು.

    ನಾನೊಬ್ಬ ಕಾನೂನಿಗೆ, ನ್ಯಾಯಕ್ಕೆ ಗೌರವ ಕೊಡುವ ಶಾಸಕ. ನ್ಯಾಯಾಲಯಕ್ಕೆ, ಶಾಸಕಾಂಗಕ್ಕೆ ಏನೆಲ್ಲಾ ಗೌರವ ಕೊಡಬೇಕು ಅದನ್ನು ನಾನು ಕೊಡುತ್ತೇನೆ, ಈ ಬಗ್ಗೆ ನನಗೆ ಅರಿವಿದೆ ಸಮಯದ ಪ್ರಜ್ಞೆ ಕೂಡ ಇದೆ. ಅನೇಕ ಸಂದರ್ಭದಲ್ಲಿ ನನಗೆ ಸಾಕಷ್ಟು ನೋಟಿಸ್ ಬಂದಿದೆ. ನನ್ನ ಸ್ನೇಹಿತರಿಗೂ ಬಂದಿರುವ ನೋಟಿಸ್‍ಗೆ ನಾನೇ ಉತ್ತರ ಕೊಟ್ಟಿದ್ದೇನೆ, ಕೆಲವೊಮ್ಮೆ ನಮ್ಮ ಆಡಿಟರ್‍ಗಳನ್ನು ಕಳುಹಿಸಿ ಉತ್ತರ ಕೊಟ್ಟಿದ್ದೇನೆ, ಕೊಡುತ್ತಿದ್ದೇನೆ, ಇನ್ನೂ ಸಾಕಷ್ಟು ಉತ್ತರ ಕೇಳುತ್ತಿರುವುದಕ್ಕೆ ಅದಕ್ಕೂ ನಾನು ಸ್ಪಂಧಿಸುತ್ತೇನೆ. ಇದನ್ನು ಹಲವರು ತಮ್ಮದೆಯಾದ ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಿದ್ದಾರೆ ಎಂದು ಹೇಳಿದರು.

    85 ವರ್ಷದ ನನ್ನ ತಾಯಿಗೆ ಇಬ್ಬರು ಗಂಡುಮಕ್ಕಳು ಒಬ್ಬ ಸಂಸದ ಇನ್ನೊಬ್ಬ ಮಾಜಿ ಮಂತ್ರಿ. ನಾನು ಬಡತನದಿಂದ ಬಂದವನೇನು ಅಲ್ಲ. ನಾನು ಮಧ್ಯಮ ವರ್ಗದ ಕುಟುಂಬದಿಂದ ಬಂದವನು. ಇದೆಲ್ಲಾ ನಾನು ಸಂಪಾದನೆ ಮಾಡಿರುವ ಆಸ್ತಿ, ಕುಟುಂಬದ ಆಸ್ತಿ. ಆದರೆ ಇದೆಲ್ಲಾ ಬೇನಾಮಿ ಆಸ್ತಿ ಎಂದು ಆದಾಯ ತೆರಿಗೆ ಇಲಾಖೆ ನಿರ್ಧಾರ ಮಾಡಿದೆ. ಇದನ್ನು ಪ್ರಶ್ನಿಸಿ ನಾನು ನ್ಯಾಯಾಲಯಕ್ಕೆ ಹೋಗಿದ್ದೇನೆ, ತಡೆಯಾಜ್ಞೆ ತಂದಿದ್ದೇನೆ. ತಾಯಿ ಮಗನನ್ನು ನಂಬದೆ, ಮಗ ತಾಯಿಯನ್ನು ನಂಬದೆ ಮತ್ತೆ ಯಾರ ಮೇಲೆ ನಂಬಿಕೆ ಇಟ್ಟು ಬದುಕನ್ನ ನಡೆಸಬೇಕು? ಇದು ಸಾರ್ವಜನಿಕರಿಗೆ ತಿಳಿಸಬೇಕಾದ ವಿಚಾರ ಎಂದರು.

    ಇದಾದ ಮೇಲೆ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಿದರು. ನಾವು ಈ ಬಗ್ಗೆ ಹೋರಾಟ ಮಾಡುತ್ತಿದ್ದೇವೆ. ಸುಮಾರು 16 ದಿನ ಈ ಬಗ್ಗೆ ನಾನು ನ್ಯಾಯಾಧೀಶೆ ಮುಂದೆ ಕಟಕಟೆಯಲ್ಲಿ ನಿಂತು ಉತ್ತರ ನೀಡಿದ್ದೇನೆ. ಅದಕ್ಕೆ ಅವರು ಕೇಸ್ ಅನ್ನು ಡಿಸ್ಚಾರ್ಜ್ ಮಾಡಬೇಡಿ ಟ್ರಯಲ್ ಮಾಡಿ ಎಂದಿದ್ದಾರೆ. ಕಾನೂನನ್ನು ನಾವೇ ಮಾಡಿದ್ದೇವೆ. ಇದನ್ನು ಜಾರಿಗೆ ತರಲು ಅಧಿಕಾರಿಗಳಿಗೆ ಅವಕಾಶ ಕೊಟ್ಟಿದ್ದೇವೆ. ನಾನು ಮೇಲ್ಮನೆಗೆ ಹೋಗಿ ಮನವಿ ಮಾಡಿದ್ದಕ್ಕೆ ಅಲ್ಲಿ ಕೂಡ ಅದಕ್ಕೆ ತಾತ್ಕಾಲಿಕ ತಡೆ ಕೊಟ್ಟಿದ್ದಾರೆ. ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದಲ್ಲಿದ್ದ ಕೇಸ್ ಈಗ ಇಡಿಗೆ ಹೋಗಿದೆ. ನನ್ನ ಹಾಗೂ ನನ್ನ ಸ್ನೇಹಿತರ ಮನೆಯಲ್ಲಿ ಸಿಕ್ಕಿರೋದು ನಾವು ದುಡಿದ ಹಣ. ಈ ಬಗ್ಗೆ ನಾವು ಸಾಕ್ಷಿಯನ್ನು ಕೂಡ ತೆರಿಗೆ ಇಲಾಖೆಗೆ ಸಲ್ಲಿಸಿದ್ದೇವೆ. ಆದರೂ ಪತ್ತೆಯಾದ ಹಣ ನನ್ನ ದುಡ್ಡು ಎಂದು ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.

    ಒಂದೂವರೆ ವರ್ಷ ಆದಮೇಲೆ, ಚುನಾವಣೆ ಹತ್ತಿರ ಬರುತ್ತಿದ್ದಾಗ ಇದನ್ನು ಮತ್ತೆ ತೆರೆದಿದ್ದಾರೆ. ಇಡಿ ಸಮನ್ಸ್ ಬಂದಿದೆ. ವಿಚಾರಣೆಗೆ ಕರೆದಿದ್ದಾರೆ. ಆದರೆ ನನಗೆ ವೈಯಕ್ತಿಕ ಕೆಲಸವಿದ್ದ ಕಾರಣಕ್ಕೆ ತಕ್ಷಣ ಬರಲು ಆಗುವುದಿಲ್ಲ ಎಂದು ಸಮಯ ಪಡೆದಿದ್ದೇನೆ. ನಾವು ತಪ್ಪು ಮಾಡಿಲ್ಲ. ಯಾರ ದುಡ್ಡನ್ನು ಹೊಡೆದಿಲ್ಲ. ಹೀಗಾಗಿ ಇದನ್ನು ಪ್ರಶ್ನಿಸಿ ನಾನು ಕೋರ್ಟಿಗೆ ಹೋಗಿದ್ದೆ. ನಾನು ವೈಯಕ್ತಿಕ ಕೆಲಸ ಮೇಲೆ ಹೊರಹೋಗಿದ್ದೆ. ಆದರೆ ಮಾಧ್ಯಮ ಮಿತ್ರರು ನಾನು ಕೋರ್ಟಿನಲ್ಲಿಯೇ ಇದ್ದೇನೆ ಎಂದಿದ್ದರು. ಬಳಿಕ ನಾನು ರಾತ್ರಿ 9:30 ಆಸುಪಾಸಿಗೆ ಕುಟುಂಬದ ಜೊತೆ ಮನೆಗೆ ವಾಪಸ್ಸಾದೆ. ನಮ್ಮ ಕುಟುಂಬದವರ ಬಗ್ಗೆಯೂ ಮಾಧ್ಯಮದಲ್ಲಿ ತೋರಿಸುತ್ತಿದ್ದರು. ನಮಗೂ ವೈಯಕ್ತಿಕ ಕೆಲಸವಿರುತ್ತದೆ ಎಂದು ಮಾಧ್ಯಮಗಳ ವಿರುದ್ಧ ಕಿಡಿಕಾರಿದರು.

    ಇದನ್ನು ಕಾನೂನು ಚೌಕಟ್ಟಿನಲ್ಲೂ ಎದುರಿಸಬೇಕಾಗುತ್ತೆದೆ, ರಾಜಕೀಯವಾಗಿಯೂ ಎದುರಿಸ ಬೇಕಾಗುತ್ತದೆ. ನಾನು ತಪ್ಪು ಮಾಡಿಲ್ಲ, ಕೊಲೆ ಮಾಡಿಲ್ಲ, ಮೋಸ ಮಾಡಿಲ್ಲ. ನ್ಯಾಯಯುತವಾಗಿ ದುಡಿದಿದ್ದೇನೆ, ಬದುಕಿದ್ದೇನೆ. ಷಡ್ಯಂತ್ರಗಳನ್ನು ಮಾಡಿ ಈ ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ನ್ಯಾಯಯುತವಾಗಿ ಹೋರಾಡುತ್ತೇನೆ ಎಂದು ಹೇಳಿದರು.

    ನಾನು ಹೆದರಿಕೊಂಡು ಹೋಗುವ ಕೆಂಪೇಗೌಡನ ಮಗನಲ್ಲ. ನಾನು ಕಾನೂನಾಗಿ, ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಎದುರಿಸುತ್ತೇನೆ. ನಮ್ಮ ಮನೆಗಳಲ್ಲಿ ಸಿಕ್ಕ ಹಣದ ಬಗ್ಗೆ ನಾವು ಸಾಕ್ಷಿ ಕೊಡುತ್ತೇವೆ. ಆದರೆ ಬಿಜೆಪಿ ಆಪರೇಷನ್ ಮಾಡಿದಾಗ ಕೋಟಿಗಟ್ಟಲೆ ಹಣದ ವ್ಯವಹಾರ ಮಾಡಿರುವ ಬಗ್ಗೆ ಯಾಕೆ ಯಾರು ಪ್ರಶ್ನಿಸಿಲ್ಲ. ಅವರಿಗೆ ಯಾಕೆ ನೋಟಿಸ್ ಕೊಟ್ಟಿಲ್ಲ. ಸದನದಲ್ಲಿ ಬಹಿರಂಗವಾಗಿಯೇ ಬಿಜೆಪಿ ಕೋಟಿಗಟ್ಟಲೇ ಹಣದ ಆಮಿಷ ಒಡ್ಡಿರುವ ಬಗ್ಗೆ ನಮ್ಮ ನಾಯಕರು ಹೇಳಿದ್ದಾರೆ. ಆದರೂ ಬಿಜೆಪಿ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಒಬ್ಬರಿಗೆ ಒಂದು ನ್ಯಾಯ, ಇನ್ನೊಬ್ಬರಿಗೆ ಒಂದು ನ್ಯಾಯ ಅಂದರೆ ಹೇಗೆ? ನಾನು ಯಾವುದಕ್ಕೂ ಹೆದರಲ್ಲ. ನಾನು ತಪ್ಪು ಮಾಡಿಲ್ಲ. ಇಡಿ ನೊಟಿಸ್‍ಗೆ ಗೌರವಿಸುತ್ತೇನೆ, ಅದಕ್ಕೆ ಉತ್ತರ ಕೂಡ ನೀಡುತ್ತೇನೆ ಎಂದು ಕಿಡಿಕಾರಿದರು.

  • ಸಿದ್ದರಾಮಯ್ಯ ಎಲ್ಲಿದ್ದಾರೋ ಗೊತ್ತಾಗುತ್ತಿಲ್ಲ, ಅವರು ಬೇಗ ಹೊರಗೆ ಬರಲಿ: ಎಚ್. ವಿಶ್ವನಾಥ್

    ಸಿದ್ದರಾಮಯ್ಯ ಎಲ್ಲಿದ್ದಾರೋ ಗೊತ್ತಾಗುತ್ತಿಲ್ಲ, ಅವರು ಬೇಗ ಹೊರಗೆ ಬರಲಿ: ಎಚ್. ವಿಶ್ವನಾಥ್

    ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲಿದ್ದಾರೋ ಗೊತ್ತಾಗುತ್ತಿಲ್ಲ. ಮೈಸೂರಲ್ಲೂ ಕಾಣುತ್ತಿಲ್ಲ, ಬಾದಾಮಿ ಕ್ಷೇತ್ರದಲ್ಲೂ ಕಾಣುತ್ತಿಲ್ಲ. ಅವರ ಬೇಗ ಹೊರಗೆ ಬಂದು ಸರ್ಕಾರಕ್ಕೆ ಮಾರ್ಗದರ್ಶನ ಮಾಡಬೇಕು ಎಂದು ಅನರ್ಹ ಶಾಸಕ ಎಚ್. ವಿಶ್ವನಾಥ್ ಹೇಳಿದ್ದಾರೆ.

    ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಸಿಎಂ ಯಡಿಯೂರಪ್ಪಗೆ ಬರೆದ ಪತ್ರದಲ್ಲಿ ಒಳ್ಳೆಯ ಸಲಹೆ ಕೊಟ್ಟಿದ್ದಾರೆ. ಒಬ್ಬ ಮತ್ಸದ್ದಿಯಾಗಿ ಅವರು ಕೊಟ್ಟ ಸಲಹೆಗಳು ಬಹಳ ಉತ್ತಮವಾಗಿವೆ ಎಂದು ಹೇಳಿದರು.

    ಇದೇ ವೇಳೆ ರಾಜ್ಯದಲ್ಲಿ ದೂರವಾಣಿ ಕದ್ದಾಲಿಕೆ ದೊಡ್ಡ ಮಟ್ಟದಲ್ಲಿ ನಡೆದಿದೆ. ಸಿದ್ದರಾಮಯ್ಯ ಅವರ ಪಿಎ ವೆಂಕಟೇಶ್ ಎಂಬವರ ಫೋನ್ ಕದ್ದಾಲಿಕೆ ಮಾಡಲಾಗಿದೆ. ರೆಬೆಲ್ ಶಾಸಕರ ದೂರವಾಣಿ ಕದ್ದಾಲಿಕೆ ಮಾಡಲಾಗಿದೆ. ಹೀಗೆ ಕದ್ದಾಲಿಕೆ ಮಾಡಿ ರೆಬೆಲ್ ಶಾಸಕರನ್ನು ಸಿಎಂ (ಹೆಚ್‍ಡಿಕೆ) ಕಚೇರಿಯಿಂದ ಬ್ಲಾಕ್ ಮೇಲ್ ಮಾಡಲಾಯಿತು. ಜೆಡಿಎಸ್ ರಾಜ್ಯಾಧ್ಯಕ್ಷನಾಗಿದ್ದವನ ದೂರವಾಣಿಯನ್ನು ಜೆಡಿಎಸ್ ಮುಖ್ಯಮಂತ್ರಿಯೇ ಕದ್ದಾಲಿಕೆ ಮಾಡಿದ್ದಾರೆ. ನಮ್ಮ ಮೇಲೆ ನಿಮಗೆ ವಿಶ್ವಾಸ ಇರಲಿಲ್ಲವೇ ಎಂದು ವಿಶ್ವನಾಥ್ ಪ್ರಶ್ನೆ ಮಾಡಿದರು.

    ವಿಶ್ವನಾಥ್ ಮಾತನಾಡಿರುವುದು ಸಿಕ್ಕಿದೆ ಚೀ ಚೀ ಕೇಳಿಸಿಕೊಳ್ಳಲು ಆಗಲ್ಲ ಎಂದು ಕುಮಾರಸ್ವಾಮಿ ಸದನದಲ್ಲಿ ಹೇಳಿದ್ದರು. ನಾನು ಮೊಬೈಲ್‍ನಲ್ಲಿ ಸಾವಿರ ಮಾತನಾಡುತ್ತೇನೆ. ಹೀಗೆ ಮಾತಾಡಬೇಕು ಎಂದು ಹೇಳೋಕೆ ನೀವು ಯಾರು? ಬೆಂಗಳೂರು ಪೊಲೀಸ್ ಆಯುಕ್ತರ ದೂರವಾಣಿಯೆ ಕದ್ದಾಲಿಕೆ ಮಾಡಲಾಗಿದೆ. ರಾಜ್ಯದ ಸಿಎಂ ಆಗಿ ಹೆಚ್‍ಡಿಕೆ ಎಲ್ಲಾ ಕಾನೂನು ಉಲ್ಲಂಘನೆ ಮಾಡಿದರು. ಹಳ್ಳಿ ಕಡೆ ಮನೆಯವರಿಗೆ ಮನೆಯವರೇ ಮದ್ದು ಹಾಕುತ್ತಾರೆ ಎನ್ನುವ ಮಾತಿದೆ ಇದು ಅದೇ ಕಥೆ ಎಂದು ವ್ಯಂಗ್ಯವಾಡಿದರು.

    ಜಿಟಿ ದೇವೇಗೌಡರ ಜೊತೆ ಸಿಎಂ ಭೇಟಿ ವಿಚಾರವಾಗಿ ಮಾತನಾಡಿದ ವಿಶ್ವನಾಥ್, ಸಿಎಂ ಭೇಟಿ ಸಹಜ, ಇಬ್ಬರು ರಾಜಕಾರಣಿಗಳು ಭೇಟಿಯಾದ ಮೇಲೆ ರಾಜಕಾರಣ ಮಾತನಾಡದೆ ಇರೋಕೆ ಆಗುತ್ತಾ? ಜಿಟಿ ದೇವೇಗೌಡರಿಗೆ ಬಿಜೆಪಿ ಹಳೆಯ ಪಾರ್ಟಿ, ಅವರೇನೂ ಬಿಜೆಪಿಗೆ ಹೊಸಬರಲ್ಲ. ನೆರೆ ಪ್ರವಾಹದ ಹಿನ್ನೆಲೆಯಲ್ಲಿ ಸರಳ ದಸರಾ ಮಾಡಬಾರದು, ದಸರಾ ಅದ್ಧೂರಿಯಾಗೆ ಮಾಡಬೇಕು. ದಸರಾದಲ್ಲಿ ಸರಳತೆ ಬೇಡ ಎಲ್ಲಾ ಕಷ್ಟ ನಿವಾರಿಸು ಅಂತಾನೇ ನಾಡಹಬ್ಬ ಮಾಡುವುದು ಇದರಲ್ಲಿ ಸರಳತೆ ಬೇಡ ಎಂದು ಹೇಳಿದರು.

    ಶಾಸಕರ ಅನರ್ಹತೆ ಪ್ರಕರಣದಲ್ಲಿ ನ್ಯಾಯಾಲಯದ ನಿಲುವಿಗೆ ಎಚ್.ವಿಶ್ವನಾಥ್ ಪ್ರತಿಕ್ರಿಯಿಸಿ, ಇದನ್ನು ತ್ವರಿತಗತಿಯಲ್ಲಿ ವಿಚಾರಣೆ ಸಾಧ್ಯವಿಲ್ಲ. ನಮಗೆ ಅನರ್ಹಗೊಳಿಸವಾಗ ನಿಯಮಗಳನ್ನು ಪಾಲಿಸಿಲ್ಲ. ನಮಗೆ ನ್ಯಾಯ ಸಿಕ್ಕಿಲ್ಲ. ಈ ವಿಚಾರವಾಗಿ ನಾವು ನ್ಯಾಯಾಲಯದ ಮೊರೆ ಹೋಗಿದ್ದೇವೆ. ನಾವು ಎಲ್ಲರೂ ಧೈರ್ಯವಾಗಿದ್ದೇವೆ. ನಾವೆಲ್ಲರೂ ಧೈರ್ಯವಂತರೇ ಇರುವುದು ಎಂದು ಹೇಳಿದರು.

  • ಜಿಂದಾಲ್ ಉತ್ತಮ ಕಂಪನಿ, ಯಾವುದೇ ಬಾಕಿ ಉಳಿಸಿಕೊಂಡಿಲ್ಲ – ಜಾರ್ಜ್

    ಜಿಂದಾಲ್ ಉತ್ತಮ ಕಂಪನಿ, ಯಾವುದೇ ಬಾಕಿ ಉಳಿಸಿಕೊಂಡಿಲ್ಲ – ಜಾರ್ಜ್

    ಬೆಂಗಳೂರು: ಜಿಂದಾಲ್ ಉತ್ತಮ ಕಂಪನಿಯಾಗಿದ್ದು ಸರ್ಕಾರಕ್ಕೆ ಯಾವುದೇ ರೀತಿಯ ಬಾಕಿ ಉಳಿಸಿಕೊಂಡಿಲ್ಲ ಎಂದು ಬೃಹತ್ ಕೈಗಾರಿಕಾ ಸಚಿವ ಕೆ.ಜೆ ಜಾರ್ಜ್ ಸ್ಪಷ್ಟಪಡಿಸಿದ್ದಾರೆ.

    ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಂದಾಲ್ ಕಂಪನಿಯಿಂದ ಹಣ ಪಡೆದು ಮೈತ್ರಿ ಸರ್ಕಾರ ಅವರಿಗೆ ಅಕ್ರಮವಾಗಿ ಭೂಮಿ ಮಂಜೂರು ಮಾಡಿದೆ ಎಂಬ ಆರೋಪವನ್ನು ತಳ್ಳಿಹಾಕಿದ್ದಾರೆ.

    1971ರಲ್ಲಿ 7 ಸಾವಿರ ಎಕರೆ ಭೂಮಿಯನ್ನು ಕೇಂದ್ರ ಸರ್ಕಾರ ವಶ ಪಡಿಸಿಕೊಂಡಿತ್ತು. ಆಗ ದೇವೇಗೌಡರು ನೇತೃತ್ವದ ಸರ್ಕಾರ 1995 ರಲ್ಲಿ 3 ಸಾವಿರ ಎಕ್ರೆಯನ್ನು ವಿಜಯನಗರ ಘಟಕಕ್ಕೆ ನೀಡಿದ್ದರು. ನಂತರ ಈ ಭೂಮಿಯನ್ನು 2005 ರಲ್ಲಿ ಧರ್ಮಸಿಂಗ್ ಸಿಎಂ ಆಗಿದ್ದಾಗ ಲೀಸ್ ಕೊಡಲಾಗಿತ್ತು. 2006ರಲ್ಲಿ ಸಿಎಂ ಆದ ಕುಮಾರಸ್ವಾಮಿ ಅವರು ಎಕ್ರೆಗೆ 90 ಸಾವಿರ ನಿಗದಿ ಮಾಡಿ 2007ರಲ್ಲಿ ಸುಮಾರು 1,200 ಎಕ್ರೆರೆ ಜಾಗವನ್ನು ಹೆಚ್ಚುವರಿಯಾಗಿ ನೀಡಿದ್ದರು ಎಂದು ತಿಳಿಸಿದರು.

    ಈಗ 90 ಸಾವಿರ ಬದಲಾಗಿ 1.26 ಲಕ್ಷ ಪ್ರತಿ ಎಕರಗೆ ಬೆಲೆ ನಿಗದಿ ಮಾಡಲಾಗಿದೆ. ಹೊಸ ದರದ ಅನ್ವಯ ಸರ್ಕಾರ ಭೂಮಿಯನ್ನು ನೀಡಿದೆ. ಜೆಎಸ್‍ಡಬ್ಲೂ ಈಗ ಎಲ್ಲಾ ಷರತ್ತುಗಳನ್ನ ಒಪ್ಪಿಕೊಂಡಿದೆ ಮತ್ತು ಯಾವುದೇ ಹಣವನ್ನು ಬಾಕಿ ಉಳಿಸಿಕೊಂಡಿಲ್ಲ. ಹೀಗಾಗಿ ಕ್ಯಾಬಿನೆಟ್‍ನಲ್ಲಿ ಒಪ್ಪಿಗೆ ನೀಡಲಾಗಿದೆ. ಲೋಕಸಭಾ ಚುನಾವಣೆ ನೀತಿ ಸಂಹಿತೆ ಬಂದ ಹಿನ್ನಲೆಯಲ್ಲಿ ಅದನ್ನು ಆಗ ಮಾಡಲು ಸಾಧ್ಯವಾಗಿರಲಿಲ್ಲ. ರಾಜ್ಯಕ್ಕೆ ಕೈಗಾರಿಕೆ ಬರುವ ಹಿನ್ನಲೆಯಲ್ಲಿ ನಾವು ಜಿಂದಾಲ್‍ಗೆ ಭೂಮಿ ನೀಡಲಾಗಿದೆ. ಈ ವಿಚಾರದಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಕೆ.ಜೆ ಜಾರ್ಜ್ ಸಮರ್ಥಿಸಿಕೊಂಡರು.

    ಇದೇ ವೇಳೆ ಎಚ್.ಕೆ ಪಾಟೀಲ್ ಅವರ ಪತ್ರದ ಬಗ್ಗೆ ಕೇಳಿದ್ದಾಗ, ಅವರಿಗೆ ಏನಾದರೂ ಸಂಶಯ ಇದ್ದರೆ ಅವರು ನನ್ನ ಕೇಳಿದರೆ ಹೇಳುತ್ತೇನೆ. ಆ ರೀತಿಯ ಅಕ್ರಮ ನಡೆದಿರುವ ಬಗ್ಗೆ ದಾಖಲಾತಿ ಇದ್ದರೆ ನೀಡಲಿ ನಾನು ಪರಿಶೀಲನೆ ಮಾಡಿಸುತ್ತೇನೆ. ಅವರು ನನ್ನ ಸಹೋದ್ಯೋಗಿ ಅವರ ಜೊತೆ ನಾನು ಮಾತನಾಡುತ್ತೇನೆ. ನಮಗೆ ರಾಜ್ಯದ ಹಿತ ಮುಖ್ಯ ಜೆಎಸ್‍ಡಬ್ಲೂ ಉತ್ತಮ ಸಂಸ್ಥೆ ರಾಜ್ಯಕ್ಕೆ ಕೈಗಾರಿಕೆ ಬಂದರೆ ನಮ್ಮ ಅನುಕೂಲವಾಗುತ್ತದೆ. ಅನಾವಶ್ಯಕವಾಗಿ ಸುದ್ದಿ ಮಾಡಿದರೆ ನಮ್ಮ ರಾಜ್ಯಕ್ಕೆ ಅನ್ಯಾಯ ಆಗುತ್ತದೆ ಎಂದು ಹೇಳಿದರು.

    ಜಿಂದಾಲ್ ಅಕ್ರಮ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿಭಟನೆ ಮಾಡುವ ವಿಚಾರದ ಬಗ್ಗೆ ಪ್ರತಿಕ್ರಿಯಿದ ಜಾರ್ಜ್, ಈಗ ನಾನು ಹೇಳಿದ ಅಂಶಗಳ ಬಗ್ಗೆ ಯಡಿಯೂರಪ್ಪ ಗಮನಹರಿಸಲಿ. ಇದರಲ್ಲಿ ಏನಾದರೂ ತಪ್ಪು ಇದ್ದರೆ ನನ್ನನ್ನು ಕೇಳಲಿ ಅಮೇಲೆ ನಾನು ಉತ್ತರ ಕೊಡುತ್ತೇನೆ ಎಂದು ಹೇಳಿದರು.

  • ಕಟುಕನ ಕೈಗೆ ಕುರಿ ಕೊಟ್ಟಂತೆ ಆಗಿದೆ- ಡಿಕೆಶಿ ವಿರುದ್ಧ ಹಿರೇಮಠ್ ಕಿಡಿ

    ಕಟುಕನ ಕೈಗೆ ಕುರಿ ಕೊಟ್ಟಂತೆ ಆಗಿದೆ- ಡಿಕೆಶಿ ವಿರುದ್ಧ ಹಿರೇಮಠ್ ಕಿಡಿ

    ಬಳ್ಳಾರಿ: ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರಿಗೆ ಜಿಲ್ಲೆಯ ಉಸ್ತುವಾರಿ ಹೊಣೆ ನೀಡಿರುವುದು ಕಟುಕನ ಕೈಗೆ ಕುರಿ ಕೊಟ್ಟಂತೆ ಆಗಿದೆ ಎಸ್ ಆರ್ ಹಿರೇಮಠ್ ಲೇವಡಿ ಮಾಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇಂಧನ ಸಚಿವರಾಗಿ ಸೋಲಾರ್ ಹಗರಣ, ರಿಪಬ್ಲಿಕ್ ಆಫ್ ರಾಮನಗರ ಮಾಡಿದ್ದು ಡಿಕೆಶಿ. ಭ್ರಷ್ಟಾಚಾರದ ಪ್ರತಿರೂಪವಾದ ಡಿಕೆಶಿಯನ್ನು ಬಳ್ಳಾರಿ ಜಿಲ್ಲೆಗೆ ಉಸ್ತುವಾರಿ ಮಾಡಿರುವುದು ಸರ್ಕಾರದ ನಿಷ್ಕ್ರಿಯತೆಯನ್ನು ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಎಂಎಂಎಲ್ ಗಣಿ ಕಂಪೆನಿಯಿಂದ 10.8 ಲಕ್ಷ ಮೆಟ್ರಿಕ್ ಟನ್ ಅದಿರನ್ನು ಡಿಕೆಶಿ ಲೂಟಿ ಮಾಡಿದ್ದಾರೆ. ಇಂಥವರಿಗೆ ಜಿಲ್ಲಾ ಉಸ್ತುವಾರಿ ಸಚಿವ ನೀಡುವುದು ಸರಿಯಲ್ಲ. ಇದು ಸಮ್ಮಿಶ್ರ ಸರ್ಕಾರಕ್ಕೆ ನಾಚಿಗೇಡುತನದ ವಿಷಯವಾಗಿದೆ. ನಾಚಿಕೆಗೇಡಿಗೂ ಮಿತಿಯಿರುತ್ತದೆ ಅದನ್ನು ಈ ಸರ್ಕಾರ ಮೀರಿದೆ. ಅಕ್ರಮ ಗಣಿಗಾರಿಕೆ ಸಂಬಂಧ ನ್ಯಾಯಾಧೀಶ ಸಂತೋಷ್ ಹೆಗಡೆ ಅವರು ನೀಡಿದ ಎರಡು ವರದಿಗಳು ಇದುವರೆಗೂ ಅನುಷ್ಠಾನವಾಗಿಲ್ಲ. ಈಗಿನ ಸಮ್ಮಿಶ್ರ ಸರ್ಕಾರಕ್ಕೆ ಮರ್ಯಾದೆಯಿದ್ದರೆ ಅನುಷ್ಠಾನ ಮಾಡಲಿ ಗಣಿಭಾದಿತ ಪ್ರದೇಶಗಳ ಅಭಿವೃದ್ಧಿಗೆ ಮೀಸಲಿರುವ ಸಾವಿರಾರು ಕೋಟಿ ಹಣ ಬೇರೆಡೆ ಬಳಕೆಯಾಗಲು ಅವಕಾಶ ಮಾಡಿಕೊಡಬಾರದು ಎಂದು ಆಗ್ರಹಿಸಿದರು.

    ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾಗಿರುವ ಡಿಕೆ ಶಿವಕುಮಾರ್ ಅವರಿಗೆ ರಾಮನಗರ ಮತ್ತು ಬಳ್ಳಾರಿ ಜಿಲ್ಲೆಯ ಉಸ್ತುವಾರಿಯನ್ನು ನೀಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ರಾಜ್ಯ ಸರ್ಕಾರದಿಂದಲೇ ಮೀನುಗಾರರಿಗೆ ಸೀಮೆಎಣ್ಣೆ ವಿತರಣೆ: ಸಚಿವ ವೆಂಕಟರಾವ್ ನಾಡಗೌಡ

    ರಾಜ್ಯ ಸರ್ಕಾರದಿಂದಲೇ ಮೀನುಗಾರರಿಗೆ ಸೀಮೆಎಣ್ಣೆ ವಿತರಣೆ: ಸಚಿವ ವೆಂಕಟರಾವ್ ನಾಡಗೌಡ

    ಬೆಂಗಳೂರು: ರಾಜ್ಯ ಸರ್ಕಾರವೇ ಮೀನುಗಾರರಿಗೆ ಸೀಮೆಎಣ್ಣೆ ವಿತರಣೆ ಮಾಡಲಿದೆ ಎಂದು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಹೇಳಿದ್ದಾರೆ. ಕೇಂದ್ರ ಸರ್ಕಾರ ಸೀಮೆಎಣ್ಣೆ ವಿತರಿಸೋದನ್ನು ನಿಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವೇ ವಿತರಿಸಲಿದೆ ಸ್ಪಷ್ಟಪಡಿಸಿದರು.

    ಜರ್ಮನಿ ಕಂಪೆನಿಯ ಬ್ಯಾಟರಿ ಚಾಲಿತ ಯಂತ್ರದ ಬೋಟ್‍ಗಳನ್ನು ಪ್ರಾಯೋಗಿಕವಾಗಿ ಬಳಸಲು ಚಿಂತನೆ ನಡೆದಿದ್ದು, ಇದರ ಬಗ್ಗೆ ಸಿಎಂ ಜೊತೆ ಮಾತುಕತೆ ನಡೆಸಿ ಅಂತಿಮ ನಿರ್ಧಾರ ಮಾಡುತ್ತೇವೆ. ಮೀನುಗಾರಿಕೆ ಬಳಕೆಗೆ ಫ್ಲೋಟಿಂಗ್ ಜೆಟ್ಟಿ ತರಲು ಚಿಂತನೆ ನಡೆದಿದೆ. ಈಗಾಗಲೇ ಗೋವಾದಲ್ಲಿ ಫ್ಲೋಟಿಂಗ್ ಜೆಟ್ಟಿ ಇದೆ. ಅಲ್ಲಿಗೆ ಹೋಗಿ ಪರಿಶೀಲನೆ ಮಾಡುತ್ತೇವೆ ಹಾಗೂ ಮೀನುಗಾರರ ಮಹಿಳೆಯರಿಗೆ ಶೂನ್ಯ ಬಡ್ಡಿದರದಲ್ಲಿ 50 ಸಾವಿರ ಸಾಲ ಸೌಲಭ್ಯ ಸಿಗಲಿದೆ ಎಂದರು.

    ಹಾಲು ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನ ಪಡೆದಿದೆ. ನಾವು ಸರ್ಕಾರದಿಂದ ಕೊಡುವ ಸಹಾಯಧನ 5 ರೂಪಾಯಿ ಕೊಡುವುದನ್ನ ನಿಲ್ಲಿಸೋದಿಲ್ಲ ಅದನ್ನು ಹಾಗೇ ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.

    ಹಾಲಿನ ಪೌಡರ್ ಮಾಡಲು ಹೆಚ್ಚು ವೆಚ್ಚ ತಗಲುವದರಿಂದ ಹಾಗಾಗಿ ಪೌಡರ್ ಮಾಡಲ್ಲ. ಆದ್ರೆ ಬೇರೆ ಬೇರೆ ಉತ್ಪನ್ನಗಳನ್ನು ತಯಾರಿಸುವ ಚಿಂತನೆಗಳಿವೆ. ಬೇರೆ ರಾಜ್ಯಗಳಿಂದ ಹಾಲು ರಾಜ್ಯಕ್ಕೆ ಬರುತ್ತಿದ್ದು, ಜಿಎಸ್ ಟಿ ಬಂದ ಮೇಲೆ ಹೊರ ರಾಜ್ಯದ ಹಾಲು ಮಾರಾಟಕ್ಕೆ ನಿರ್ಬಂಧ ಹಾಕುವುದು ಕಷ್ಟ. ಆದ್ರೆ ಕಲಬೆರಕೆ ಹಾಲಿನ ಬಗ್ಗೆ ಕ್ರಮ ಕೈಗೊಳ್ಳಲು ಶೀಘ್ರ ಸಭೆ ಕರೆದು ಚರ್ಚೆ ಮಾಡುತ್ತೇವೆ ಎಂದು ವೆಂಕಟರಾವ್ ನಾಡಗೌಡ ಹೇಳಿದ್ದಾರೆ.

    ಸದ್ಯ ಹಾಲಿನ ದರ ಹೆಚ್ಚಳದ ಬಗ್ಗೆ ಕುರಿತು ಯಾವುದೇ ಪ್ರಸ್ತಾಪ ಸರ್ಕಾರ ಮುಂದೆ ಬಂದಿಲ್ಲ. ಹಾಲು ಒಕ್ಕೂಟಗಳಿಂದಲ್ಲೂ ಕೂಡ ಯಾವುದೇ ದರ ಏರಿಕೆ ಪ್ರಸ್ತಾಪಗಳು ಬಂದಿಲ್ಲ ಎಂದು ವೆಂಕಟರಾವ್ ನಾಡಗೌಡ ತಿಳಿಸಿದರು.

  • ಸಿಎಂ ಕನ್ನಡ ಸಂಘಟನೆಗಳನ್ನು ರಾಜಕೀಯ ಪ್ರೇರಿತ ಕೆಲಸಗಳಿಗೆ ಬಳಕೆಗೆ ಮಾಡುತ್ತಿದ್ದಾರೆ: ಆರ್. ಅಶೋಕ್

    ಸಿಎಂ ಕನ್ನಡ ಸಂಘಟನೆಗಳನ್ನು ರಾಜಕೀಯ ಪ್ರೇರಿತ ಕೆಲಸಗಳಿಗೆ ಬಳಕೆಗೆ ಮಾಡುತ್ತಿದ್ದಾರೆ: ಆರ್. ಅಶೋಕ್

    ಬೆಂಗಳೂರು: ರಾಜ್ಯದ ಕನ್ನಡ ಸಂಘಟನೆಗಳನ್ನು ಸಿಎಂ ಸಿದ್ದರಾಮಯ್ಯ ಅವರು ರಾಜಕೀಯ ಪ್ರೇರಿತ ಕೆಲಸಗಳಿಕೆ ಬಳಕೆ ಮಾಡಲು ಮುಂದಾಗಿದ್ದಾರೆ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ಆರೋಪಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಹಾಗೂ ಅಮಿತ್ ಷಾ ಅವರು ರಾಜಕ್ಕೆ ಬರುವ ದಿನ ಬಂದ್ ಮಾಡಲಾಗುತ್ತಿದೆ. ಇದು ಸಿದ್ದರಾಮಯ್ಯ ಅವರ ಪ್ರಯೋಜಿತ ಬಂದ್ ಆಗಿದ್ದು, ಅವರು ಕಪ್ಪು ಬಾವುಟ ತೋರಿಸಿದರೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ರಾಜ್ಯಕ್ಕೆ ಬಂದಾಗ ನಾವು ಕೂಡ ಅದನ್ನೇ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿಗೆ ಮತ ಹಾಕದಂತೆ ಕರವೇ ಕರೆ ನೀಡದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದಕ್ಕೂ ನಮಗೂ ಸಂಬಂಧ ಇಲ್ಲ. ನಾವು ನಾರಾಯಣ ಗೌಡ ಬಣದ ವಿರುದ್ಧ ಅಥವಾ ಬೇರೆಯವರ ವಿರುದ್ಧ ಮಾತನಾಡಿಲ್ಲ. ಈ ಬಗ್ಗೆ ನಾವೂ ಯಾವುದೇ ಹೇಳಿಕೆ ಕೊಡಲ್ಲ. ಬಿಜೆಪಿ ವಿರುದ್ಧ ಹೇಳಿಕೆಗೂ ನಮಗೂ ಸಂಬಂಧ ಇಲ್ಲ, ಗೋಹತ್ಯೆಯ ನಿಲುವಿನ ಬಗ್ಗೆ ನಮಗೆ ಯಾರೂ ಹೇಳಿಕೊಡಬೇಕಾಗಿಲ್ಲ ಎಂದರು.

    ಇದೇ ವೇಳೆ ರಾಜ್ಯದಲ್ಲಿ ನಡೆಯುತ್ತಿರುವ ಅಪರಾದ ಕೃತ್ಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರ, ಬೆಂಗಳೂರಲ್ಲಿ ಪೊಲೀಸರಿಗೆ ರಕ್ಷಣೆ ಇಲ್ಲ. ಜನ ಪೊಲೀಸರ ರಕ್ಷಣೆಯಲ್ಲಿದ್ದಾರಾ? ಅಥವಾ ಗೂಂಡಾಗಳು ಅಳ್ವಿಕೆಯಲ್ಲಿದ್ದಾರಾ?. ಎಸಿಪಿಯವರ ಶ್ರೀಮತಿಯ ಸರ ಅಪಹರಣ ಅಗುತ್ತದೆ ಎಂದರೆ ಸಾಮಾನ್ಯರಿಗೆ ರಕ್ಷಣೆ ಎಲ್ಲಿ ಎಂದು ಪ್ರಶ್ನಿಸಿದರು. ಮಹಿಳೆಯರು ಇನ್ನು ಮುಂದೆ ಪೊಲೀಸ್ ಠಾಣೆಗೆ ಫೋನ್ ಮಾಡಿ ಮನೆ ಹೊರಗಡೆ ಬಂದು ರಂಗೋಲಿ ಹಾಕಬಹುದಾ ಎಂದು ಕೇಳಿ, ಹೊರ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಒಂದು ತಿಂಗಳಲ್ಲಿ 13 ಮಂದಿ ಪೊಲೀಸರ ಮೇಲೆ ಹಲ್ಲೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಇದನ್ನೂ ಓದಿ: ಜ.25ರ ಬಂದ್ ಅವಶ್ಯಕತೆಯಿಲ್ಲ, ಮೈಸೂರ್ ಗೂ ಮಹದಾಯಿಗೂ ಏನ್ ಸಂಬಂಧ- ಬಿಎಸ್‍ವೈ ಪ್ರಶ್ನೆ

    ಬೆಂಗಳೂರು ಈಗ ಕ್ರೈಮ್ ಸಿಟಿಯಾಗಿದೆ. ಪೊಲೀಸರನ್ನು ಮೂರು ತಿಂಗಳಿಗೊಮ್ಮೆ ವರ್ಗಾವಣೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಪೊಲೀಸರು ಮಲಗಿದ್ದಾರೆ. ಗುಂಡಾಗಳು ಆಳ್ವಿಕೆ ಮಾಡುತ್ತಿದ್ದಾರೆ. ಗೃಹ ಇಲಾಖೆ ಪ್ರಸ್ತುತ ಮನೆಯೊಂದು ಮೂರು ಬಾಗಿಲು ಆಗಿದೆ. ಒಂದು ಕಡೆ ಸಿಎಂ, ಇನ್ನೊಂದು ಕಡೆ ಕೆಂಪಯ್ಯ, ಮತ್ತೊಂದೆಡೆ ರಾಮಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ಭಾರೀ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಬಂದ್ ಕಾಂಗ್ರೆಸ್ ಪ್ರಾಯೋಜಿತ, ರಾಜ್ಯಕ್ಕೆ ರಾಹುಲ್ ಗಾಂಧಿ ಬಂದಾಗ ನಾವ್ ಬಂದ್ ಮಾಡ್ತೀವಿ- ಜಗದೀಶ್ ಶೆಟ್ಟರ್