Tag: News and Broadcasting Department

  • ದೂರದರ್ಶನದಲ್ಲೂ ಪ್ರಸಾರವಾಗುತ್ತೆ ಐಪಿಎಲ್- ಆದಾಯ ಹಂಚಿಕೆ ಹೇಗೆ?

    ದೂರದರ್ಶನದಲ್ಲೂ ಪ್ರಸಾರವಾಗುತ್ತೆ ಐಪಿಎಲ್- ಆದಾಯ ಹಂಚಿಕೆ ಹೇಗೆ?

    ನವದೆಹಲಿ: 11ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಕ್ರಿಕೆಟ್ ಲೀಗ್ ಗೆ ಏಪ್ರಿಲ್ 7 ರಿಂದ ಚಾಲನೆ ದೊರೆಯಲಿದ್ದು, ದೂರದರ್ಶನ ವಾಹಿನಿಯಲ್ಲೂ ಐಪಿಎಲ್ ಪಂದ್ಯಗಳನ್ನು ವೀಕ್ಷಿಸಬಹುದು.

    ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ನಡೆದ ಐಪಿಎಲ್ ನೇರ ಪ್ರಸಾರದ ಮಾರಾಟ ಹಕ್ಕುಗಳನ್ನು ಸ್ಟಾರ್ ವಾಹಿನಿ ಪಡೆದುಕೊಂಡಿತ್ತು. ಸದ್ಯ ಇದರ ಜೊತೆಗೆ ಭಾರತದಲ್ಲಿ ನಡೆಯುವ ಎಲ್ಲಾ ದ್ವಿಪಕ್ಷೀಯ ಸರಣಿಯ ನೇರ ಪ್ರಸಾರದ ಹಕ್ಕನ್ನು ಸ್ಟಾರ್ ಸಂಸ್ಥೆ 6,138 ಕೋಟಿ ರೂ. ಗೆ ಪಡೆದುಕೊಂಡಿದೆ.

    ಈ ವೇಳೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನೀಡಿದ ಸಲಹೆ ಮೇರೆಗೆ ಡಿಡಿ ವಾಹಿನಿಯಲ್ಲೂ ಪ್ರಸಾರ ನೀಡಲು ಅನುಮತಿ ನೀಡಿದೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಸಾರ ಭಾರತಿ ಡಿಡಿ ವಾಹಿನಿಯಲ್ಲಿ ಐಪಿಎಲ್ ಪಂದ್ಯಗಳ ಪ್ರಸಾರವನ್ನು ಖಚಿತ ಪಡಿಸಿದೆ.

     

    ಸ್ಟಾರ್ ವಾಹಿಸಿ ಸಿಇಒ ಉದಯ್ ಶಂಕರ್ ನಿಡಿರುವ ಮಾಹಿತಿ ಪ್ರಕಾರ ಐಪಿಎಲ್ ನ ಭಾನುವಾರ ಎರಡು ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಮಾತ್ರ ಪ್ರಸಾರ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಅಲ್ಲದೇ ಸ್ಟಾರ್ ವಾಹಿನಿಯಲ್ಲಿ ಪ್ರಸಾರವಾದ ಬಳಿಕ ಒಂದು ಗಂಟೆ ತಡವಾಗಿ ದೂರದರ್ಶನ ಚಾನೆಲ್ ನಲ್ಲಿ ಐಪಿಎಲ್ ಪಂದ್ಯಗಳು ಪ್ರಸಾರವಾಗಲಿದೆ. ಇದು ಭಾರತದಲ್ಲಿ ನಡೆಯುವ ಪಂದ್ಯಗಳನ್ನು ಜನರ ಅನುಕೂಲಕ್ಕಾಗಿ ಪ್ರಸಾರ ಮಾಡಲು ಅವಕಾಶ ಮಾಡಿಕೊಡಬೇಕೆಂಬ ದೂರದರ್ಶನದ ಮನವಿಗೆ ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

    ಡಿಡಿ ವಾಹಿನಿಗೆ ಆದಾಯ ಸೃಷ್ಟಿ ಮಾಡುವ ಉದ್ದೇಶದಿಂದ ವಾರ್ತಾ ಸಚಿವಾಲಯದ ಅಭಿಪ್ರಾಯದ ಮೇರೆಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಈ ಮನವಿಯನ್ನು ಸ್ಟಾರ್ ಸಂಸ್ಥೆಯ ಮುಂದೆ ಪ್ರಸ್ತುತ ಪಡಿಸಿತ್ತು. ಆದರೆ ಭಾರತದಲ್ಲಿ ನಡೆಯುವ ಇತರೇ ಲೀಗ್ ಗಳ ಪ್ರಸಾರದ ಕುರಿತು ನಿಯಮಗಳ ಒಪ್ಪಂದ ಕುರಿತು ನಿರ್ಧಾರ ಕೈಗೊಳ್ಳುವುದಾಗಿ ಸಚಿವಾಲಯ ಅಧಿಕಾರಿಗಳು ತಿಳಿಸಿದ್ದಾರೆ.

    ಆದಾಯ ಹಂಚಿಕೆ ಹೇಗೆ: ದೂರದರ್ಶನದಲ್ಲಿ ಪ್ರಸಾರವಾಗುವ ಪಂದ್ಯಗಳಿಂದ ಗಳಿಸುವ ಆದಾಯದಲ್ಲಿ ಶೇ.50 ಆಧಾರ ಮೇಲೆ ಹಂಚಿಕೆ ಮಾಡಿಕೊಳ್ಳಲಿದೆ. ಈ ಕುರಿತು ಮಾಹಿತಿ ಮತ್ತು ಪ್ರಸಾರ ಇಲಾಖೆ ಅನುಮತಿಗಾಗಿ ಸಿದ್ಧತೆ ನಡೆಸಿದೆ.

    ಈ ನಿರ್ಧಾರದಿಂದ ಸ್ಟಾರ್ ವಾಹಿನಿಯ ಸಂಪರ್ಕ ಇಲ್ಲದ ಐಪಿಎಲ್ ಅಭಿಮಾನಿಗಳು ದೂರದರ್ಶನದ ಮೂಲಕ ಪಂದ್ಯಗಳನ್ನು ನೋಡಬಹುದಾಗಿದೆ.