Tag: newbornbaby

  • ಅಂಬ್ಯುಲೆನ್ಸ್ ಸಿಗದೆ ಜನ್ಮ ನೀಡಿದ 1 ಗಂಟೆಯಲ್ಲೇ ಮಗು ಸಾವು

    ಅಂಬ್ಯುಲೆನ್ಸ್ ಸಿಗದೆ ಜನ್ಮ ನೀಡಿದ 1 ಗಂಟೆಯಲ್ಲೇ ಮಗು ಸಾವು

    ಚಾಮರಾಜನಗರ: ಗರ್ಭಿಣಿಯೊಬ್ಬರು ಅರಣ್ಯ ಇಲಾಖೆಯ ವಾಹನದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಮಗು ಹುಟ್ಟಿದ ಒಂದೇ ಗಂಟೆಯಲ್ಲಿ ಮೃತಪಟ್ಟಿರುವ ಘಟನೆ ಚಾಮರಾಜನಗರ ಜಿಲ್ಲಾಸ್ಪತ್ರೆ ಮುಂಭಾಗದಲ್ಲಿ ನಡೆದಿದೆ.

    ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದ ಭೂತಾಣೆಪೋಡಿನ ಮಾದಮ್ಮ ತುಂಬು ಗರ್ಭೀಣಿಯಾಗಿದ್ದರು. ಹಾಗೆಯೇ ಮಂಗಳವಾರ ಮಧ್ಯಾಹ್ನ 12.30ರ ಸುಮಾರಿಗೆ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ.

    ತಕ್ಷಣ ಅಂಬುಲೆನ್ಸ್ ಕರೆ ಮಾಡಿದ್ದಾರೆ. ಆದರೆ ಅಂಬುಲೆನ್ಸ್ ಬರುವುದು ತಡವಾಗಿದೆ. ಹೀಗಾಗಿ ಬಿಳಿಗಿರಿರಂಗನ ಬೆಟ್ಟದ ಜಂಗಲ್ ಲಾಡ್ಜ್ ಬಳಿಯಿದ್ದ ಅರಣ್ಯ ಇಲಾಖೆಯ ಜಿಪ್ಸಿ ವಾಹನದಲ್ಲಿ ಸುಮಾರು 27 ಕಿ.ಮೀ ಅತ್ಯಂತ ವೇಗವಾಗಿ ಕರೆದುಕೊಂಡು ಚಾಮರಾಜನಗರಕ್ಕೆ ಬಂದಿದ್ದಾರೆ. ಚಾಮರಾಜನಗರ ಜಿಲ್ಲಾಸ್ಪತ್ರೆಯ ಮುಂಭಾಗಕ್ಕೆ ಬರುತ್ತಿದಂತೆಯೇ ಮಾದಮ್ಮ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

    ವಾಹನದಲ್ಲೇ ಮಗುವಿಗೆ ಜನ್ಮ ನೀಡಿದ್ದನ್ನ ಗಮನಿಸಿದ ನರ್ಸ್‍ಗಳು ಮಗುವನ್ನ ಎತ್ತಿಕೊಂಡು ಓಡಿ ಹೋಗಿ ಸುಮಾರು ಒಂದು ಗಂಟೆ ತೀವ್ರ ನೀಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತ ಪಟ್ಟಿದೆ ಎನ್ನಲಾಗಿದೆ.

    ಈ ಬಗ್ಗೆ ಮಹಿಳೆ ಮಾತನಾಡಿ, ಹೊಟ್ಟೆ ನೋವು ಕಾಣಿಸಿಕೊಂಡ ತಕ್ಷಣ ಅಂಬುಲೆನ್ಸ್ ಗೆ ಕರೆ ಮಾಡಿದ್ವಿ. ಆವಾಗ ಅವರು ಅಂಬುಲೆನ್ಸ್ ಬೇರೆ ಕಡೆ ಇದೆ ಅಂದ್ರು. ಹೀಗಾಗಿ ಬೇರೆ ದಾರಿಯಲ್ಲದೆ ಫಾರೆಸ್ಟ್ ಜೀಪಿನಲ್ಲಿ ನನ್ನ ಕರೆದುಕೊಂಡು ಬಂದರು. ಆದರೆ ಆಸ್ಪತ್ರೆಗೆ ಬರುತ್ತಿದ್ದಂತೆಯೇ ಮಗುವಿಗೆ ಜನ್ಮ ನೀಡಿದೆ. ಮಗು 3 ಕೆ.ಜಿ ಇತ್ತು. ಜೀಪಿನಲ್ಲಿ ಬರುವಾಗ ಕುಲುಕಿ ಮಗು ತೀರಿಕೊಂಡಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

  • ಹೆರಿಗೆಯಾದ 10 ನಿಮಿಷದಲ್ಲೇ ನವಜಾತ ಶಿಶು ಸಾವು

    ಹೆರಿಗೆಯಾದ 10 ನಿಮಿಷದಲ್ಲೇ ನವಜಾತ ಶಿಶು ಸಾವು

    ಯಾದಗಿರಿ: ಸಕಾಲಕ್ಕೆ ಚಿಕಿತ್ಸೆ ಸಿಗದೆ ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶು ಸಾವನ್ನಪ್ಪಿದ ಘಟನೆ ಯಾದಗಿರಿಯಲ್ಲಿ ನಡೆದಿದೆ.

    ಜಿಲ್ಲೆಯ ಶಹಾಪುರ ತಾಲೂಕಿನ ಚಾಮನಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಡರಾತ್ರಿ ಹುಟ್ಟಿದ 10 ನಿಮಿಷದಲ್ಲೇ ಮಗು ಮೃತಪಟ್ಟಿದೆ. ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದಲೇ ಮಗು ಸಾವನ್ನಪ್ಪಿರುವ ಆರೋಪ ಕೇಳಿಬರುತ್ತಿದೆ.

    ಸುರಪುರ ತಾಲೂಕಿನ ಏವೂರ ತಾಂಡದ ಕಾಜಲ್ ಎಂಬವರು, ಸಂಜೆ ಹೆರಿಗೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಕಾಜಲ್ ಗೆ ತಡರಾತ್ರಿ ಹೆರಿಗೆಯಾಗಿತ್ತು. ಹೆರಿಗೆ ಆದ ಬಳಿಕ ನವಜಾತ ಶಿಶುವಿಗೆ ಸಕಾಲಕ್ಕೆ ನೀಡಬೇಕಾದ ಚಿಕಿತ್ಸೆ ಸಿಗದೆ ಇರುವುದಕ್ಕೆ ಹೆರಿಗೆಯಾದ ಹತ್ತೆ ನಿಮಿಷದಲ್ಲಿ ಮಗು ಸಾವನ್ನಪ್ಪಿದೆ ಎನ್ನಲಾಗುತ್ತಿದೆ.

    ಕಳೆದ ಆರು ತಿಂಗಳಿಂದ ಈ ಆಸ್ಪತ್ರೆಯಲ್ಲಿ ನುರಿತ ವೈದ್ಯರೇ ಇಲ್ಲ. ಹೀಗಾಗಿ ಹೆರಿಗೆಯಾದ ಬಾಣಂತಿಗೆ ಮತ್ತು ಮಗುವಿಗೆ ಸರಿಯಾಗಿ ಆರೈಕೆ ಮಾಡುವವರಿಲ್ಲದಂತಾಗಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

  • ಮಗುವನ್ನು ಚರಂಡಿಗೆ ಬಿಸಾಕಿದ ತಾಯಿ- ಶ್ವಾನಗಳಿಂದ ಶಿಶುವಿನ ರಕ್ಷಣೆ

    ಮಗುವನ್ನು ಚರಂಡಿಗೆ ಬಿಸಾಕಿದ ತಾಯಿ- ಶ್ವಾನಗಳಿಂದ ಶಿಶುವಿನ ರಕ್ಷಣೆ

    ಚಂಡೀಗಢ: ಶ್ವಾನಗಳೆರಡು ಚರಂಡಿಯಲ್ಲಿ ಬಿದ್ದ ಶಿಶುವನ್ನು ರಕ್ಷಣೆ ಮಾಡಿದ್ದು, ಆ ಕಂದಮ್ಮನನ್ನು ಉಳಿಸಿಕೊಳ್ಳಲು ಆಸ್ಪತ್ರೆ ಸಿಬ್ಬಂದಿ ಹರಸಾಹಸ ಪಡುತ್ತಿರುವ ಆತಂಕಕಾರಿ ಘಟನೆಯೊಂದು ಹರಿಯಾಣದ ಕೈತಾಲ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

    ಪುಟ್ಟ ಮಗುವನ್ನು ಅದರ ತಾಯಿಯೇ ಪ್ಲಾಸ್ಟಿಕ್ ನಲ್ಲಿ ಕಟ್ಟಿ ಚರಂಡಿಗೆ ಬಿಸಾಡಿದ್ದಾಳೆ. ಈ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಶನಿವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ನಡೆದಿದೆ.

     ಸಿಸಿಟಿವಿಯಲ್ಲೇನಿತ್ತು?:
    ಮುಂಜಾನೆ ಮಹಿಳೆಯೊಬ್ಬಳು ಕೈತಾಲ್ ನಲ್ಲಿರುವ ಡೋಗ್ರಾ ಗೇಟ್ ಬಳಿ ನಡೆದುಕೊಂಡು ಬರುತ್ತಾಳೆ. ಪಕ್ಕದಲ್ಲೇ ಚರಂಡಿಯೊಂದಿದ್ದು, ಮಹಿಳೆ ತನ್ನ ಕೈಯಲ್ಲಿದ್ದ ವಸ್ತುವನ್ನು ಎಸೆಯುತ್ತಾಳೆ. ಹೀಗೆ ಚರಂಡಿಗೆ ಬಿದ್ದ ಮಗು ಜೋರಾಗಿ ಬಿದ್ದು ಅಳಲು ಆರಂಭಿಸಿದೆ. ಈ ಶಬ್ಧ ಕೇಳಿ ಪಕ್ಕದಲ್ಲಿದ್ದ ಬೀದಿ ನಾಯಿಗಳು ಬೊಗಳಲು ಆರಂಭಿಸಿವೆ. ಅಲ್ಲದೆ ಕೂಡಲೇ ಶಬ್ಧ ಕೇಳಿ ಬಂದ ಕಡೆ ದೌಡಾಯಿಸಿವೆ. ಹೀಗೆ ಚರಂಡಿ ಬಳಿ ಬಂದ ನಾಯಿಗಳು ಮಗುವನ್ನು ಚರಂಡಿಯಿಂದ ಮೇಲಕ್ಕೆತ್ತಿವೆ.

    ನಾಯಿಗಳು ಏನು ಮಾಡುತ್ತಿವೆ ಎಂದು ನಿಂತು ನೋಡುತ್ತಿದ್ದ ಜನರಿಗೆ ಅದು ಮಗು ಎಂದು ಗೊತ್ತಾದ ಕೂಡಲೇ ಎಚ್ಚೆತ್ತು ಸ್ಥಳೀಯರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಈ ವಿಷಯ ತಿಳಿದ ತಕ್ಷಣವೇ ಅಧಿಕಾರಿಗಳು ಸ್ಥಳಕ್ಕೆ ಬಂದು ಶಿಶುವನ್ನು ಸ್ಥಳೀಯ ಕೈತಾಲ್ ಸಿವಿಲ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಶಿಶು ಬದುಕಿದ್ದು, ಆದರೆ ಆಕೆಯ ಸ್ಥಿತಿ ಚಿಂತಾಜನಕವಾಗಿದೆ. ಮಗು ಸರಿಸುಮಾರು 100 ಗ್ರಾಂ ಇದ್ದು, ಆಕೆಯನ್ನು ಬದುಕಿಸುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಆಸ್ಪತ್ರೆಯ ವೈದ್ಯರು ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಶಿಶುವಿನ ಆರೋಗ್ಯ ಸುಧಾರಿಸಿದ ಬಳಿಕ ಮಗುವನ್ನು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ(ಎನ್‍ಸಿಪಿಸಿಆರ್)ಗೆ ಹಸ್ತಾಂತರಿಸಲಾಗುವುದು. ಆ ಬಳಿಕ ಅಲ್ಲಿಂದ ಹಲವು ಪ್ರಕ್ರಿಯೆಗಳ ಮೂಲಕ ಪಂಚಕುಲ ಅನಾಥಾಶ್ರಮಕ್ಕೆ ಮಗುವನ್ನು ನೀಡಲಾಗುವುದು ಎಂದು ಮತ್ತೊಬ್ಬ ವೈದ್ಯ ತಿಳಿಸಿದ್ದಾರೆ.

    ಶಿಶುವನ್ನು ಚರಂಡಿಗೆ ಬಿಸಾಕಿದ ಸಂಬಂಧ ಆಕೆಯ ತಾಯಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನೆ ನಡೆದ ಸುತ್ತಮುತ್ತಲಿನ ಸಿಸಿಟಿವಿಗಳನ್ನು ಪರಿಶೀಲಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.