Tag: New Year’s Eve

  • ನಿಷೇಧಾಜ್ಞೆಯಿಂದಾಗಿ ಹೊಸ ವರ್ಷಕ್ಕೆ 40 ಕೋಟಿ ನಷ್ಟ: ಅಬಕಾರಿ ಸಚಿವ ನಾಗೇಶ್

    ನಿಷೇಧಾಜ್ಞೆಯಿಂದಾಗಿ ಹೊಸ ವರ್ಷಕ್ಕೆ 40 ಕೋಟಿ ನಷ್ಟ: ಅಬಕಾರಿ ಸಚಿವ ನಾಗೇಶ್

    ಕೋಲಾರ: ಕೊರೊನಾ ಹಾಗೂ ಸರ್ಕಾರದ ನಿಷೇಧಾಜ್ಞೆಯಿಂದ ಅಬಕಾರಿ ಇಲಾಖೆಗೆ ಹೊಸ ವರ್ಷದಂದು ಸುಮಾರು 40 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಬಕಾರಿ ಸಚಿವ ಹೆಚ್.ನಾಗೇಶ್ ತಿಳಿಸಿದರು.

    ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ನಿಷೇಧಾಜ್ಞೆಯಿಂದಾಗಿ ಹೊಸ ವರ್ಷದಂದು ಅಬಕಾರಿ ಇಲಾಖೆಗೆ ಕೇವಲ 161 ಕೋಟಿ ರೂಪಾಯಿ ಆದಾಯ ಬಂದಿದೆ. ಕಳೆದ ಬಾರಿ ಹೊಸ ವರ್ಷಕ್ಕೆ 200 ಕೋಟಿ ರೂಪಾಯಿ ಆದಾಯ ಬಂದಿತ್ತು. ಆದರೆ ಈ ಬಾರಿ ಹಲವು ಗೊಂದಲಗಳಿಂದ ಸುಮಾರು 40 ಕೋಟಿ ರೂಪಾಯಿಯಷ್ಟು ನಷ್ಟ ಆಗಿದೆ ಎಂದು ಅವರು ಹೇಳಿದರು.

    ಈ ನಷ್ಟಕ್ಕೆ ಸರ್ಕಾರದ ನಿಷೇಧಾಜ್ಞೆ ಜಾರಿ ಮಾಡದ್ದೇ ಕಾರಣ. ಜಿಲ್ಲೆಗೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಆಗಮಿಸಿದ್ದಾರೆ, ಹಾಗಾಗಿ ಜಿಲ್ಲೆಯ ಹಲವು ವಿಚಾರಗಳನ್ನ ಚರ್ಚೆ ಮಾಡುವ ನಿಟ್ಟಿನಲ್ಲಿ ಎಲ್ಲ ಶಾಸಕರನ್ನು ಕರೆದು ವಿಚಾರ ಮಾಡುವೆ. ಅಲ್ಲದೆ ಜಿಲ್ಲೆಗೆ ಮೆಡಿಕಲ್ ಕಾಲೇಜು ನೀಡುವುದು ಹಾಗೂ ರಿಂಗ್ ರಸ್ತೆ ಮಾಡುವಂತೆ ಮನವಿ ಮಾಡುವುದಾಗಿ ಅವರು ಹೇಳಿದರು.

  • ತೋಳದ ಮುಖವಾಡ ಧರಿಸಿ ಬಿದಿಯಲ್ಲಿ ಓಡಾಡುತ್ತಿದ್ದ ವ್ಯಕ್ತಿ ಅರೆಸ್ಟ್!

    ತೋಳದ ಮುಖವಾಡ ಧರಿಸಿ ಬಿದಿಯಲ್ಲಿ ಓಡಾಡುತ್ತಿದ್ದ ವ್ಯಕ್ತಿ ಅರೆಸ್ಟ್!

    – ಹೊಸ ವರ್ಷದಂದು ಭಯ ಹುಟ್ಟಿಸಲು ಹೋಗಿ ಸಿಕ್ಕಿಬಿದ್ದ

    ಇಸ್ಲಾಮಾಬಾದ್: ಹೊಸ ವರ್ಷಾಚರಣೆಯ ವೇಳೆ ತೋಳದ ಮಾಸ್ಕ್ ಧರಿಸಿ ಬೀದಿಯಲ್ಲಿ ಅಡ್ಡಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

    ಪಾಕಿಸ್ತಾನ ಖೈಬರ್-ಪಖ್ತುನ್ಖ್ವಾ ಪ್ರಾಂತ್ಯದ ವ್ಯಕ್ತಿಯೊಬ್ಬ ಹೊಸ ವರ್ಷಾಚರಣೆಯಂದು ರಾತ್ರಿ ತೋಳದ ಮುಖದ ರೀತಿಯ ಮುಖವಾಡ ಧರಿಸಿದ್ದನು. ಅಲ್ಲದೇ ಸಾರ್ವಜನಿಕರಲ್ಲಿ ಭಯವನ್ನು ಉಂಟು ಮಾಡಿದ್ದಾನೆ. ಈತ ಹೊಸ ವರ್ಷಾಚರಣೆಯ ಸಂಭ್ರಮದಲ್ಲಿರುವ ಜನರಿಗೆ ಭಯ ಹುಟ್ಟಿಸಲೆಂದೇ ಈ ರೀತಿಯ ಮುಖವಾಡ ಧರಿಸಿದ್ದನು ಎಂದು ಆತನನ್ನು ಪಾಕ್ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಈ ಮುಖವಾಡ ನೋಡಲು ತುಂಬಾ ಭಯವಾಗುತ್ತಿದೆ. ಈ ತೋಳದ ಮಾಸ್ಕ್ ನೋಡಿ ಕೊರೊನಾ ಹತ್ತಿರವೂ ಸುಳಿಯುವುದಿಲ್ಲ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಈ ಚರ್ಚೆ ಮಾಡುತ್ತಿದ್ದಾರೆ.

  • ಡಿ.31ರಂದು ರಾತ್ರಿ 8ರಿಂದ ಆಯ್ದ ರಸ್ತೆಗಳಲ್ಲಿ ವಾಹನ ಓಡಾಟಕ್ಕೆ ನಿರ್ಬಂಧ – ಹೋಟೆಲ್ ಟಿಕೆಟ್ ಇದ್ರೆ ಮಾತ್ರ ಅವಕಾಶ

    ಡಿ.31ರಂದು ರಾತ್ರಿ 8ರಿಂದ ಆಯ್ದ ರಸ್ತೆಗಳಲ್ಲಿ ವಾಹನ ಓಡಾಟಕ್ಕೆ ನಿರ್ಬಂಧ – ಹೋಟೆಲ್ ಟಿಕೆಟ್ ಇದ್ರೆ ಮಾತ್ರ ಅವಕಾಶ

    – ಕುಡಿದು ವಾಹನ ಚಲಿಸುವವರಿಗೆ ರಕ್ತ ತಪಾಸಣೆ
    – ನಗರದ ಸುತ್ತ ನಾಕಾಬಂದಿ, ಹೊರಗೆ ತೆರಳದಂತೆ ಕ್ರಮ

    ಬೆಂಗಳೂರು: ರಾತ್ರಿ ಕರ್ಫ್ಯೂ ವಿವಾದದ ಬಳಿಕ ಇದೀಗ ಪೊಲೀಸರು ಎಚ್ಚೆತ್ತುಕೊಂಡಿದ್ದು, ಹೊಸ ವರ್ಷದ ಅಂಗವಾಗಿ ಅನಗತ್ಯ ತಿರುಗಾಟಕ್ಕೆ ಬ್ರೇಕ್ ಹಾಕಲು ಸಿದ್ಧತೆ ಮಾಡಿಕೊಂಡಿದ್ದಾರೆ. ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಡಿ.31ರ ರಾತ್ರಿ 8 ಗಂಟೆಯಿಂದಲೇ ಆಯ್ದ ರಸ್ತೆಗಳಲ್ಲಿ ವಾಹನ ಓಡಾಟ ನಿರ್ಬಂಧಿಸಲಾಗುತ್ತಿದೆ.

    ಹೊಸ ವರ್ಷದ ಆಚರಣೆ ಅಂಗವಾಗಿ ವಿವಿಧ ಕ್ರಮ ಕೈಗೊಂಡಿರುವ ಕುರಿತು ಸಂಚಾರಿ ಪೊಲೀಸ್ ಜಂಟಿ ಆಯುಕ್ತ ರವಿಕಾಂತೇಗೌಡ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಹೊಸ ವರ್ಷಕ್ಕೆ ಸಂಚಾರಿ ನಿಯಮ ಹಾಗೂ ಮಾರ್ಗಸೂಚಿಗಳ ಕುರಿತು ವಿವರಿಸಿದ್ದಾರೆ. ಹೊಸ ವರ್ಷಾಚರಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಬೆಂಗಳೂರಿನಲ್ಲಿ ವಿಶೇಷ ಬಂದೋಬಸ್ತ್ ಗೆ ತೀರ್ಮಾನಿಸಲಾಗಿದೆ. ಕಳೆದ ವರ್ಷ ಕೇಂದ್ರ, ವಾಣಿಜ್ಯ ವಲಯಗಳಲ್ಲಿ ಜನಸಂದಣಿಗೆ ಅವಕಾಶ ಇರುತ್ತಿತ್ತು. ಈ ಬಾರಿ ಎಲ್ಲಿಯೂ ಹೊರಗಡೆ ಹಾಗೂ ರಸ್ತೆಯ ಮೇಲೆ ಆಚರಣೆಗೆ ಅವಕಾಶವಿಲ್ಲ ಎಂದು ಮಾಹಿತಿ ನೀಡಿದರು.

    ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಮ್ಯೂಸಿಯಂ ರಸ್ತೆ, ಚರ್ಚ್ ಸ್ಟ್ರೀಟ್, ರೆಸ್ಟ್ ಹೌಸ್ ರಸ್ತೆಯಲ್ಲಿ ನಾಳೆ ರಾತ್ರಿ ಎಂಟು ಗಂಟೆಯಿಂದ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ರಾತ್ರಿ ಎಂಟು ಗಂಟೆಯ ಬಳಿಕ ಈ ರಸ್ತೆಯಲ್ಲಿ ವಾಹನಗಳಿಗೆ ಅವಕಾಶವಿಲ್ಲ. ಹೋಟೆಲ್‍ಗಳು ನೀಡಿರುವ ಪಾಸ್, ಟಿಕೆಟ್ ಇದ್ದರೆ ಮಾತ್ರ ವಾಹನ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

    ಮೇಲ್ಸೇತುವೆಗಳಲ್ಲಿ ಡ್ರ್ಯಾಗ್ ರೇಸ್, ವ್ಹೀಲಿಂಗ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ರಾತ್ರಿ 10 ಗಂಟೆಯ ನಂತರ ಎಲ್ಲ ಫ್ಲೈ ಓವರ್‍ಗಳನ್ನು ಬಂದ್ ಮಾಡಲಾಗುವುದು. ವಿಮಾನ ನಿಲ್ದಾಣ ರಸ್ತೆಯ ಎಲಿವೆಟೆಡ್ ಫ್ಲೈ ಓವರ್ ಸಹ ಬಂದ್ ಮಾಡಲಾಗುವುದು. ಮಾತ್ರವಲ್ಲದೆ ಹಲವಾರು ಮಾರ್ಗ ಬದಲಾವಣೆಗಳನ್ನು ಸಹ ಮಾಡಲಾಗಿದೆ ಎಂದರು.

    15 ಕಡೆ ವಾಹನ ನಿಲುಗಡೆಗೆ ನಿಷೇಧ ಹೇರಲಾಗಿದೆ. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಇನ್ಫೆಂಟ್ರಿ ರಸ್ತೆ, ಇಂದಿರಾನಗರ 100 ಫೀಟ್ ಸೇರಿದಂತೆ 15 ಕಡೆ ವಾಹನ ಪಾರ್ಕಿಂಗ್ ನಿಷೇಧಿಸಲಾಗಿದೆ. 668 ಕಡೆಗಳ ರಸ್ತೆಗಳಲ್ಲಿ ಸಂಚಾರಿ ಪೊಲೀಸರನ್ನು ನಿಯೋಜಿಸಲಾಗಿದೆ. ನೈಸ್ ರಸ್ತೆಯ ಮೇಲೂ ನಿಗಾ ವಹಿಸಲಾಗಿದೆ. 2,600 ಟ್ರಾಫಿಕ್ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

    ನಗರದ ಹೊರಗಡೆ ತೆರಳುವ ಎಲ್ಲ ಮಾರ್ಗಗಳಲ್ಲಿ ನಾಕಾಬಂದಿ ಹಾಕಲಾಗುವುದು. ಎರಡ್ಮೂರು ಬಾರಿ ಓಡಾಡಿದರೆ ರಿಜಿಸ್ಟರ್ ನಲ್ಲಿ ಎಂಟ್ರಿ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ ಎಂದರು.

    191 ಚೆಕ್ ಪಾಯಿಂಟ್ ಗಳಲ್ಲಿ ಪೊಲೀಸಲು ವಾಹನ ತಪಾಸಣೆ ಮಾಡಲಿದ್ದಾರೆ. ಮದ್ಯ ಸೇವನೆ ಮಾಡಿ ತೆರಳುವವರ ಮೇಲೆ ನಿಗಾ ವಹಿಸಲಾಗುತ್ತದೆ. ಈ ಬಗ್ಗೆ ಹೋಟೆಲ್ ಗಳ ಮಾಲೀಕರ ಜೊತೆ ಮಾತುಕತೆ ನಡೆಸಲಾಗಿದೆ. ಯಾರಾದರೂ ಚಾಲಕರು ಮದ್ಯ ಸೇವನೆ ಮಾಡಿದರೆ ಮೊದಲಿಗೆ ಅವರಿಗೆ ತಿಳಿಸಲಾಗುತ್ತೆ. ಪಬ್ ಬಾರ್ ನವರು ಬೇರೆ ವ್ಯವಸ್ಥೆ ಮಾಡೋದಕ್ಕೆ ತಯಾರಿದ್ದಾರೆ. ಇದನ್ನು ಹೊರತುಪಡಿಸಿ ಓಲಾ ಉಬರ್ ವ್ಯವಸ್ಥೆ ಮಾಡಿಕೊಳ್ಳಬಹುದು ಎಂದರು.

    191 ಕಡೆ ಪೊಲೀಸ್ ಪಿಕ್ ಅಪ್ ಪಾಯಿಂಟ್ ಮಾಡಲಾಗಿದೆ. ಕುಡಿದವರನ್ನು ಪಿಕ್ ಮಾಡಿಕೊಂಡು ರಕ್ತ ಪರೀಕ್ಷೆಗೆ ಕರೆದೊಯ್ಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೋವಿಡ್ ಇರುವುದರಿಂದ ಡಿಡಿ ಚೆಕ್ ಮಾಡುವುದಿಲ್ಲ. ಆದರೆ ಕುಡಿದು ವಾಹನ ಚಾಲನೆ ಮಾಡಿದರೆ ಕಾನೂನಿನ ಕ್ರಮ ಕೈಗೊಳ್ಳಲಾಗುವುದು. ಚಾಲನಾ ಪರವಾನಗಿಯನ್ನು ಸಹ ಮುಟ್ಟುಗೋಲು ಹಾಕಿಕೊಳ್ಳಲು ಶಿಫಾರಸ್ಸು ಮಾಡಲಾಗಿದೆ. ಸಿಆರ್‍ಪಿಸಿ ಅಡಿ ಕಾನೂನಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ಈ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸಹ ಟ್ವೀಟ್ ಮಾಡಿದ್ದು, ಚಾಲ್ತಿಯಲ್ಲಿರುವ ಕೊರೊನಾ ರೋಗದ ನಡುವೆ ರೊಪಾಂತರಗೊಂಡಿರುವ ಹೊಸ ವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ ಮುಂಬರುವ ಹೊಸ ವರ್ಷದ ಸಂಭ್ರಮಾಚರಣೆಗೆ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಬೆಂಗಳೂರಿನಲ್ಲಿ ಡಿಸೆಂಬರ್ 31 ಸಂಜೆ 6 ರಿಂದ ಜನವರಿ 1 ಬೆಳಗ್ಗೆ 6 ರವರೆಗೆ ಸೆಕ್ಷನ್ 144 ಜಾರಿ ಮಾಡಲಾಗಿದೆ. ಸಾರ್ವಜನಿಕ ಸ್ಥಳಗಳಾದ ಮುಖ್ಯ ರಸ್ತೆ, ಪಾರ್ಕ್, ಪ್ಲೇಗ್ರೌಂಡ್‍ಗಳಲ್ಲಿ ಯಾವುದೇ ರೀತಿಯ ಗುಂಪುಗೂಡುವುದನ್ನು ನಿಷೇಧಿಸಲಾಗಿದೆ.

    ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಚರ್ಚ್‍ಸ್ಟ್ರೀಟ್, ಕೋರಮಂಗಲ, ಇಂದಿರಾ ನಗರಗಳನ್ನು ಸಂಚಾರ ನಿಷೇಧಿತ ವಲಯವೆಂದು ಪರಿಗಣಿಸಲಾಗಿದೆ. ಅದೇ ರೀತಿ ಅನವಶ್ಯಕ ಸಂಚಾರ, ಬೈಕ್ ಸುತ್ತಾಟ, ವ್ಹೀಲಿಂಗ್ ಮಾಡುವುದನ್ನು ನಿಷೇಧಿಸಲಾಗಿದೆ. ನಗರದ ಎಲ್ಲಾ ಫ್ಲೈಓವರ್‍ಗಳನ್ನು ಮುಚ್ಚಲಾಗಿರುತ್ತದೆ ಮತ್ತು ಕೆಲವೆಡೆ ಸಂಚಾರ ನಿಯಂತ್ರಣ ಜಾರಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.

    ಮನೆಗಳಲ್ಲಿ, ಪ್ರೈವೇಟ್ ಕ್ಲಬ್, ರೆಸಿಡೆನ್ಯಿಯಲ್ ಕಾಂಪ್ಲೆಕ್ಸ್‍ಗಳಲ್ಲಿ ಸದಸ್ಯರು ಮಾತ್ರ ಆಚರಿಸಲು ಅವಕಾಶವಿದೆ. ಮುಂಚಿತವಾಗಿ ಬುಕ್ಕಿಂಗ್ ಮಾಡಿರುವ ಸದಸ್ಯರಿಗೆ ಮಾತ್ರ ಕ್ಲಬ್, ರೆಸ್ಟಾರೆಂಟ್‍ಗಳಿಗೆ ಪ್ರವೇಶವಿರುತ್ತದೆ ಎಂದಿದ್ದಾರೆ. ಈ ಆದೇಶಗಳನ್ನು ಉಲ್ಲಂಘಿಸಿದರೆ ದಂಡದ ಜೊತೆಗೆ, ಐಪಿಸಿ ಸೆಕ್ಷನ್ 188 ಹಾಗೂ ಎನ್‍ಡಿಎಮ್‍ಎ ಕಾಯ್ದೆಯಡಿ ಪ್ರಕರಣ ದಾಖಲಿಸುದಾಗಿ ಎಚ್ಚರಿಕೆ ನೀಡಿದ್ದಾರೆ.

  • ಸಚಿವರಲ್ಲೇ ಗೊಂದಲ- ನೈಟ್ ಕರ್ಫ್ಯೂ ಮುಗಿದ ಅಧ್ಯಾಯವೆಂದ ಸುಧಾಕರ್, ಅಗತ್ಯವೆಂದ ಅಶೋಕ್

    ಸಚಿವರಲ್ಲೇ ಗೊಂದಲ- ನೈಟ್ ಕರ್ಫ್ಯೂ ಮುಗಿದ ಅಧ್ಯಾಯವೆಂದ ಸುಧಾಕರ್, ಅಗತ್ಯವೆಂದ ಅಶೋಕ್

    – ಕಾಟಾಚರದ ಬದಲು, ರಿಯಲ್ ನೈಟ್ ಕರ್ಫ್ಯೂ ಬೇಕೆಂದ ಅಶೋಕ್

    ಬೆಂಗಳೂರು: ಕರ್ಫ್ಯೂ ವಿಚಾರದಲ್ಲಿ ಸಚಿವರು ಒಂದೊಂದು ರೀತಿಯ ಹೇಲಿಕೆ ನೀಡುತ್ತಿದ್ದಾರೆ. ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ನೈಟ್ ಕರ್ಫ್ಯೂ ಮುಗಿದ ಅಧ್ಯಾಯವೆಂದರೆ, ಕಂದಾಯ ಸಚಿವ ಆರ್.ಅಶೋಕ್ ಕಟ್ಟುನಿಟ್ಟಿನ ನೈಟ್ ಕರ್ಫ್ಯೂ ಅಗತ್ಯ ಎಂದು ಹೇಳಿದರು.

    ಈ ಕುರಿತು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ಯಾವದೇ ರೀತಿಯ ಕರ್ಫ್ಯೂ ಜಾರಿಗೆ ತಂದರೂ ಸರಿಯಾದ ರೀತಿಯಲ್ಲಿ ತರಬೇಕು. ಕಾಟಾಚಾರಕ್ಕೆ ಕರ್ಫ್ಯೂ ಜಾರಿಗೆ ತರದೆ, ಸೂಕ್ತ ನಿರ್ಬಂಧಗಳನ್ನು ಹೇರುವ ಮೂಲಕ ಜನರ ಓಡಾಟ ತಪ್ಪಿಸಬೇಕು. ರಿಯಲ್ ಕರ್ಫ್ಯೂ ಜಾರಿಗೆ ತರಲು ಮುಖ್ಯಮಂತ್ರಿಗಳೊಂದಿಗೆ ನಾನು ಚರ್ಚಿಸುತ್ತೇನೆ. ಈಗ ಕರ್ಫ್ಯೂ ಜಾರಿಗೆ ತರುವುದು ತುಂಬಾ ಮುಖ್ಯವಾಗಿದೆ. ಬ್ರಿಟನ್ ವೈರಸ್ ತುಂಬಾ ವೇಗವಾಗಿ ಹಬ್ಬುತ್ತದೆ ಎಂದು ಆರ್.ಅಶೋಕ್ ತಿಳಿಸಿದರು.

    ಹೊಸ ವರ್ಷಾಚರಣೆ ಸಂದರ್ಭದಲ್ಲಿ ನೈಟ್ ಕರ್ಫ್ಯೂ ಸಂಬಂಧಿಸಿದಂತೆ 15 ದಿನಗಳ ಹಿಂದೆಯೇ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ನಾನು ಸೇರಿದಂತೆ ಹಲವರು ಸಭೆ ಸೇರಿ ಮಾರ್ಗಸೂಚಿಯನ್ನು ಹೊಡಿಸಿದ್ದೇವೆ. ಬೆಂಗಳೂರಿನಲ್ಲಿಯೇ ಹೊಸ ವರ್ಷದ ಆಚರಣೆ ಹೆಚ್ಚಾಗಿ ನಡೆಯುವುದರಿಂದ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ಈಗಾಗಲೇ ಮಾರ್ಗಸೂಚಿ ಹೊರಡಿಸಿದ್ದಾರೆ. ಕರ್ಫ್ಯೂ ನಿಯಮಗಳನ್ನು ಜನ ಕಟ್ಟುನಿಟ್ಟಾಗಿ ಪಾಲಿಸಬೇಕು. ನಿಯಮ ಪಾಲಿಸುವುದು ಜನ ಸಾಮಾನ್ಯರ ಕರ್ತವ್ಯವಾಗಿದೆ ಎಂದು ಎಚ್ಚರಿಸಿದರು.

    ಶಾಲಾಕಾಲೇಜು ತೆರೆಯುವ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಶಿಕ್ಷಣ ಸಚಿವ ಸುರೇಶ್ ಕುಮಾರ್ ತೀರ್ಮಾನಿಸುತ್ತಾರೆ. ಕೆಲವು ಪೋಷಕರು ಶಾಲೆ ತೆರೆಯಬೇಕೆಂದು, ಮತ್ತೆ ಕೆಲವರು ಶಾಲೆ ತೆರೆಯುವುದುಬೇಡ ಎಂದು ಹೇಳುತ್ತಿದ್ದಾರೆ. ಮಕ್ಕಳ ಭವಿಷ್ಯದಲ್ಲಿ ಇದು ಕಪ್ಪು ಚುಕ್ಕಿಯಾಗಬಾರದು. ಕಟ್ಟುನಿಟ್ಟಿನ ಕ್ರಮ ಕೈಗೊಂಡು ಶಾಲೆಯನ್ನು ಪ್ರಾರಂಭಿಸುವುದು ಮುಖ್ಯವಾಗಿದೆ. ಸರ್ಕಾರ ಶೀಘ್ರದಲ್ಲೇ ಗೊಂದಲ ನಿವಾರಣೆ ಮಾಡುತ್ತದೆ ಎಂದು ತಿಳಿಸಿದರು.

    ಧರ್ಮೇಗೌಡರ ಸಾವಿನ ಕುರಿತು ತನಿಖೆ ಅಗತ್ಯ
    ಧರ್ಮೇಗೌಡರ ಸಾವಿನ ಕುರಿತು ಬೇಸರ ವ್ಯಕ್ತಪಡಿಸಿದ ಆರ್.ಅಶೋಕ್, ವಿಧಾನ ಸೌಧದ ಮಾಜಿ ಉಪಸಭಾ ಪತಿ ಧರ್ಮೇಗೌಡರ ಸಾವು ನಿಜಕ್ಕೂ ದುಃಖ ತಂದಿದೆ. ಅವರ ಸಾವು ರಾಜಕಾರಣಿಗಳಿಗೆ ಒಂದು ಪಾಠ ಆಗಬೇಕು. ಧರ್ಮೇಗೌಡ ಒಬ್ಬ ಸಜ್ಜನ ರಾಜಕಾರಣಿ, ಅವರ ಸಾವು ನಿಜಕ್ಕೂ ಎಲ್ಲರಿಗೂ ದುಃಖ ತಂದಿದೆ. ವಿಧಾನ ಪರಿಷತ್ತಿನಲ್ಲಿ ನಡೆದ ಗಲಾಟೆಯಿಂದ ಬಹಳ ಮನನೊಂದಿದ್ದರು ಎಂದು ಡೆತ್ ನೋಟ್‍ನಲ್ಲಿ 2 ಬಾರಿ ಉಲ್ಲೇಖನ ಮಾಡಿದ್ದಾರೆ ಎಂಬ ಮಾಹಿತಿ ನನಗೆ ದೊರೆತಿದ್ದು, ಈ ವಿಚಾರವಾಗಿ ತನಿಖೆಯ ನಂತರ ಸತ್ಯ ಬಹಿರಂಗಗೊಳ್ಳಲಿದೆ ಎಂದರು.

    ವಿಧಾನ ಪರಿಷತ್ತಿನಲ್ಲಿ ಯಾವುದೇ ಗಲಾಟೆ ನಡೆಯುತ್ತಿದ್ದಾಗ ಕುರ್ಚಿಯಿಂದ ಅವರನ್ನು ಎಳೆದು ಮತ್ತೊಬ್ಬರು ಕುಳಿತುಕೊಳ್ಳುವುದು ಒಳ್ಳೆಯ ಪರಿಪಾಠವಲ್ಲ. ಕುರ್ಚಿ ಬೇಕಿದ್ದಲ್ಲಿ ಮಾತಿನ ಮೂಲಕ ಕೇಳಬಹುದಾಗಿತ್ತು. ಈ ಹಿಂದೆ ಶಂಕರ್ ಮೂರ್ತಿಯವರು ಎಂಎಲ್‍ಸಿಗಳು ಕುಳಿತುಕೊಳ್ಳುವ ಸ್ಥಳದಲ್ಲಿ ಕುಳಿತುಕೊಂಡು ಉಪಸಭಾಪತಿಗಳಿಗೆ ಸಭೆ ನಡೆಸಲು ಅವಕಾಶ ಕಲ್ಪಿಸಿಕೊಟ್ಟಿದ್ದರು. ಶಂಕರ್ ಮೂರ್ತಿಯವರು ಪಾಲಿಸಿದ ನಿಯಮವನ್ನೇ ಧರ್ಮೇಗೌಡರು ಪಾಲನೆ ಮಾಡಿದ್ದರು. ಧರ್ಮೇಗೌಡರ ಸಾವಿನ ವಿಚಾರವಾಗಿ ತನಿಖೆಯಾಗಬೇಕು ಮುಂದೆ ಈ ರೀತಿಯ ಘಟನೆಗಳು ಮತ್ತೆ ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

    ವಿಧಾನ ಪರಿಷತ್ತಿನ ಬಾಗಿಲಿಗೆ ಒದೆಯುವುದು, ಎಳೆದಾಡುವ ಪದ್ಧತಿಗಳನ್ನು ರಾಜಕಾರಣಿಗಳು ಮಾಡಬಾರದು. ಸುಸಜ್ಜಿತ ಪ್ರಜಾಪ್ರಭುತ್ವದ ವ್ಯವಸ್ಥೆ ವಿಧಾನಸಭೆ ಮತ್ತು ವಿಧಾನ ಪರಿಷತ್ ಎರಡರಲ್ಲಿಯೂ ಬರಬೇಕು ಎಂಬುವುದು ನನ್ನ ವೈಯಕ್ತಿಕ ಅಭಿಪ್ರಾಯ. ಹೊಡಿಬಡಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಕಾಶವಿಲ್ಲ. ಒಳ್ಳೆಯ ಸಂಸ್ಕೃತಿಯನ್ನು ರೂಢಿಸಿಕೊಳ್ಳುವ ಪ್ರಯತ್ನ ಮಾಡಿ, ಧರ್ಮೇಗೌಡರ ಸಾವು ರಾಜಕಾರಣಿಗಳಿಗೆ ಒಂದು ಪಾಠ ಆಗಬೇಕು. ಎಲ್ಲರಿಗೂ ಮಾರ್ಗದರ್ಶನವಾಗಬೇಕು. ಆಗ ಅವರ ಆತ್ಮಕ್ಕೆ ಶಾಂತಿಸಿಗುತ್ತದೆ ಎಂದರು.

    ಬಿಜೆಪಿಯ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮತ್ತು ಮುಖ್ಯಮಂತ್ರಿ ಸಿಎಂ ಬಿ.ಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮೊದಲ ಬಾರಿಗೆ ರಾಜ್ಯಾದ್ಯಂತ ಬಿಜೆಪಿ ಸ್ಥಳೀಯ ಮಟ್ಟದಲ್ಲಿ ಮತ್ತು ಗ್ರಾಮ ಪಂಚಾಯತಿ ಮಟ್ಟದಲ್ಲಿ ಗೆಲುವು ಸಾಧಿಸುವ ಮೂಲಕ ಮೇಲು ಗೈ ಸಾಧಿಸಿದೆ. ಇದರಿಂದ ಕಾಂಗ್ರೆಸ್ ಹಿನ್ನಡೆಗೊಳ್ಳುವ ಸಂದರ್ಭ ಸೃಷ್ಟಿಸಿದ್ದೇವೆ. ಕರ್ನಾಟಕದ ಇಡೀ ಜನ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಆಶೀರ್ವಾದ ಮಾಡಿದ್ದಾರೆ. ಜನ ಕೊಟ್ಟಿರುವ ಬೆಂಬಲಕ್ಕೆ ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಯಡಿಯೂರಪ್ಪನವರ ನೇತೃತ್ವದಲ್ಲಿ ಮಾಡುವುದಾಗಿ ತಿಳಿಸಿದರು.

  • ಬೆಂಗ್ಳೂರು ರಸ್ತೆಯಲ್ಲಿ ಪಾರ್ಟಿ ಇಲ್ಲ – ಪಬ್, ಕ್ಲಬ್, ಬಾರ್ ಎಲ್ಲ ಓಪನ್

    ಬೆಂಗ್ಳೂರು ರಸ್ತೆಯಲ್ಲಿ ಪಾರ್ಟಿ ಇಲ್ಲ – ಪಬ್, ಕ್ಲಬ್, ಬಾರ್ ಎಲ್ಲ ಓಪನ್

    – ಇಡೀ ರಾತ್ರಿ ಡ್ರಿಂಕ್ ಆ್ಯಂಡ್ ಡ್ರೈವ್ ಚೆಕ್ಕಿಂಗ್
    – ಶೇ.50ರಷ್ಟು ಗ್ರಾಹಕರಿಗೆ ಮಾತ್ರ ಅವಕಾಶ
    – ಡಿ.31ರ ಸಂಜೆಯಿಂದ 144 ಸೆಕ್ಷನ್ ಜಾರಿ

    ಬೆಂಗಳೂರು: ಕೊರೊನಾ ಹಿನ್ನೆಲೆ ಹೊಸ ವರ್ಷದ ಪಾರ್ಟಿಗೆ ನಿರ್ಬಂಧಗಳನ್ನು ಹೇರಲಾಗಿದ್ದು, ರಸ್ತೆ, ಹೊರ ಜಾಗಗಳಲ್ಲಿ ಯಾವುದೇ ರೀತಿಯ ಪಾರ್ಟಿ ಆಯೋಜಿಸುವಂತಿಲ್ಲ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂಥ್ ತಿಳಿಸಿದ್ದಾರೆ. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಸೇರಿದಂತೆ ನ್ಯೂ ಇಯರ್ ಪಾರ್ಟಿ ನಡೆಯುತ್ತಿದ್ದ ಪ್ರಮುಖ ರಸ್ತೆಗಳಲ್ಲಿ ಪಾರ್ಟಿಗೆ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.

    ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡಿಸೆಂಬರ್ 31 ರಂದು ರಾತ್ರಿ 144 ಸೆಕ್ಷನ್ ಜಾರಿಯಲ್ಲಿರುತ್ತದೆ. ರಸ್ತೆ, ಹೊರಜಾಗದಲ್ಲಿ ನ್ಯೂ ಇಯರ್ ಪಾರ್ಟಿ ಮಾಡುವಂತಿಲ್ಲ. ಖಾಸಗಿ ಜಾಗಗಳಲ್ಲಿ ಪಾರ್ಟಿ ಮಾಡಿಕೊಳ್ಳಬಹುದು. ಆದರೆ ಯಾವುದೇ ವಿಶೇಷ ಕಾರ್ಯಕ್ರಮಗಳಿಗೆ ಅವಕಾಶ ಇಲ್ಲ. ಪಬ್, ಬಾರ್, ಕ್ಲಬ್ ಗಳಲ್ಲಿ ಯಾವುದೇ ಸಂಗೀತ ಕಾರ್ಯಕ್ರಮ, ಡ್ಯಾನ್ಸ್, ಮ್ಯೂಸಿಕ್ ಇರುವುದಿಲ್ಲ. ಸಾಮಾನ್ಯವಾಗಿ ಅಳವಡಿಸುವ ಮ್ಯೂಸಿಕ್ ಹಾಕಿಕೊಳ್ಳಬಹುದು ಎಂದು ವಿವರಿಸಿದರು.

    ಪಬ್, ಬಾರ್, ಕ್ಲಬ್ ಗಳಲ್ಲಿ ಶೇ.50ರಷ್ಟು ಗ್ರಾಹಕರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಎಂ.ಜಿ.ರಸ್ತೆ, ಕೋರಮಂಗಲ, ಇಂದಿರಾ ನಗರಗಳಲ್ಲಿ ಪ್ರವೇಶಕ್ಕೆ ಸಂಬಂಧಪಟ್ಟ ಹೋಟೆಲ್, ಪಬ್‍ನ ಪಾಸ್ ಅಥವಾ ಕೂಪನ್ ಹೊಂದಿರಬೇಕು. ಇಲ್ಲವಾದಲ್ಲಿ ಈ ಪ್ರದೇಶಗಳಲ್ಲಿ ಅನವಶ್ಯಕವಾಗಿ ಸಂಚರಿಸುವವರಿಗೆ ಅವಕಾಶವಿಲ್ಲ. ಮಾರ್ಗಸೂಚಿ ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕೊರೊನಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಯಾವುದೇ ರೀತಿಯ ಉಲ್ಲಂಘನೆ ಕಂಡುಬಂದರೆ ಸಾರ್ವಜನಿಕರು ದೂರು ನೀಡಬಹುದು ಎಂದು ಕಮಲ್ ಪಂಥ್ ತಿಳಿಸಿದರು.

    ಡಿಸೆಂಬರ್ 31ರಂದು ಅನವಶ್ಯಕವಾಗಿ ಯಾರೂ ಹೊರಗಡೆ ಓಡಾಡಬಾರದು. ಆ ರೀತಿ ತಿರುಗಾಡೋದು ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ವ್ಹೀಲಿಂಗ್ ಮಾಡಿದರೆ ವಾಹನ ಜಪ್ತಿ ಮಾಡಲಾಗುವುದು. ಡಿಸೆಂಬರ್ 31ರ ಸಂಜೆ 6 ಗಂಟೆಯಿಂದ ಜನವರಿ 1 ಬೆಳಗ್ಗೆ 6 ಗಂಟೆಯವರೆಗೆ 144 ಸೆಕ್ಷನ್ ಜಾರಿಯಲ್ಲಿರುತ್ತದೆ.

    ಮೇಟ್ರೋ ಓಡಾಟದ ಬಗ್ಗೆ ಬಿಎಮ್‍ಆರ್‍ಸಿಎಲ್ ತಿರ್ಮಾನ ತೆಗೆದುಕೊಳ್ಳುತ್ತದೆ. ಆದರೆ ಇಡೀ ರಾತ್ರಿ ಡ್ರಿಂಕ್ ಆ್ಯಂಡ್ ಡ್ರೈವ್ ಚೆಕ್ಕಿಂಗ್ ಇರುತ್ತೆ. ಪಬ್ ಆ್ಯಂಡ್ ಬಾರ್‍ಗಳಿಗೆ ಯಾವುದೇ ಸಮಯ ಇರುವುದಿಲ್ಲ. ಈ ಹಿಂದಿನಂತೆ ಓಪನ್ ಇರುತ್ತವೆ. ಲೈಸೆನ್ಸ್‍ನಲ್ಲಿ ಎಷ್ಟು ಸಮಯದವರೆಗೆ ವ್ಯಾಪಾರ ಮಾಡಬಹುದು ಎಂದು ಅನುಮತಿ ಪಡೆದಿದ್ದಾರೋ ಅಲ್ಲಿಯವರೆಗೆ ಓಪನ್ ಮಾಡಬಹುದಾಗಿದೆ.

  • ಬಂಡೀಪುರ, ಬಿಆರ್‌ಟಿಯಲ್ಲಿ ಹೊಸ ವರ್ಷದ ಮೋಜು, ಮಸ್ತಿಗೆ ಬ್ರೇಕ್

    ಬಂಡೀಪುರ, ಬಿಆರ್‌ಟಿಯಲ್ಲಿ ಹೊಸ ವರ್ಷದ ಮೋಜು, ಮಸ್ತಿಗೆ ಬ್ರೇಕ್

    – ಡಿ.31, ಜ.1ರಂದು ವಾಸ್ತವ್ಯಕ್ಕೆ ನಿರ್ಬಂಧ

    ಚಾಮರಾಜನಗರ: ಜಿಲ್ಲೆ ಪ್ರವಾಸಿಗರ ನೆಚ್ಚಿನ ತಾಣವಾಗಿದ್ದು, ದೇಶ, ವಿದೇಶದಿಂದ ಹಲವರು ಪ್ರವಾಸಕ್ಕೆ ಆಗಮಿಸುತ್ತಾರೆ. ಎರಡು ಹುಲಿ ಸಂರಕ್ಷಿತಾರಣ್ಯ ಹೊಂದಿರುವ ಜಿಲ್ಲೆ ಎಂಬ ಹೆಗ್ಗಳಿಕೆ ಕೂಡ ಚಾಮರಾಜನಗರಕ್ಕಿದೆ. ಬಂಡೀಪುರ, ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯದಲ್ಲಿ ಈ ಬಾರಿ ಹೊಸ ವರ್ಷಾಚರಣೆಗೆ ಬ್ರೇಕ್ ಬಿದ್ದಿದೆ. ಕೊರೊನಾ ಹಿನ್ನೆಲೆ ಮೋಜು, ಮಸ್ತಿಗೆ ಕಡಿವಾಣ ಹಾಕಲಾಗಿದೆ.

    ಬಂಡೀಪುರ, ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯದಲ್ಲಿ ಹೊಸ ವರ್ಷಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಆದರೆ ಈ ಬಾರಿ ಇದಕ್ಕೆ ಬ್ರೇಕ್ ಬಿದ್ದಿದೆ. ಡಿಸೆಂಬರ್ 31 ಹಾಗೂ ಜನವರಿ 1ರಂದು ಬಂಡೀಪುರದಲ್ಲಿ ಪ್ರವಾಸಿಗರ ವಾಸ್ತವ್ಯಕ್ಕೆ ನಿಷೇಧ ಹೇರಲಾಗಿದೆ. ಪ್ರತಿವರ್ಷದ ಕೊನೆ ದಿನ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದರು. ಆದರೆ ಈ ವರ್ಷ ಕೊರೊನಾ ಹಿನ್ನೆಲೆ ಅರಣ್ಯ ಇಲಾಖೆ ಪ್ರವಾಸಿಗರ ವಾಸ್ತವ್ಯಕ್ಕೆ ನಿರ್ಬಂಧ ಹೇರಿದೆ.

    ಹೊಸ ವರ್ಷಾಚರಣೆಗೆ ಕೆಲದಿನಗಳ ಮುಂಚೆಯೇ ಇಲ್ಲಿನ ಕಾಟೇಜ್ ಹಾಗೂ ಡಾರ್ಮೆಟರಿಗಳನ್ನು ಪ್ರವಾಸಿಗರು ಆನ್‍ಲೈನ್ ಮೂಲಕ ಬುಕ್ ಮಾಡುತ್ತಿದ್ದರು. ಆದರೆ ಈ ಬಾರಿ ಡಿಸೆಂಬರ್ 31 ಹಾಗೂ ಜನವರಿ 1ಕ್ಕೆ ಆನ್‍ಲೈನ್ ಮೂಲಕ ಬುಕ್ ಮಾಡುವುದನ್ನು ಬ್ಲಾಕ್ ಮಾಡಲಾಗಿದೆ. ಎಂದಿನಂತೆ ಬೆಳಗ್ಗೆ ಹಾಗೂ ಸಂಜೆ ಸಫಾರಿ ಇರಲಿದೆ. ಪ್ರವಾಸಿಗರು ಪ್ರಾಣಿಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಆದರೆ ವಾಸ್ತವ್ಯ ಮಾಡುವಂತಿಲ್ಲ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ನಟೇಶ್ ತಿಳಿಸಿದ್ದಾರೆ.

    ಬಿಳಿಗಿರಿ ರಂಗನ ಬೆಟ್ಟದ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿಯೂ ಕಾಟೇಜಸ್ ಹಾಗೂ ಡಾರ್ಮೇಟರಿಗಳಿಗೆ ಡಿ.31 ಮತ್ತು ಜ.1 ರಂದು ನಿಷೇಧಿಸಿದೆ ಎಂದು ಬಿ.ಆರ್.ಟಿ ಯ ಸಿಎಫ್ ಸಂತೋಷ್ ಮಾಹಿತಿ ನೀಡಿದ್ದಾರೆ. ಈ ಮೂಲಕ ಹೊಸ ವರ್ಷ ಸಂಭ್ರಮಾಚರಣೆಯ ಖುಷಿಯಲ್ಲಿದ್ದ ಪ್ರವಾಸಿಗರ ಆಸೆಗೆ ತಣ್ಣೀರೆರಚಿದಂತಾಗಿದೆ. ಅಲ್ಲದೆ ಬಂಡೀಪುರದಲ್ಲಿ ಕೊರೊನಾ ಮುಂಜಾಗೃತಾ ಕ್ರಮವಾಗಿ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಶೇ.50ರಷ್ಟು ಮಾತ್ರ ಕಾಟೇಜ್, ಡಾರ್ಮೇಟರಿಗಳ ಬುಕ್ಕಿಂಗ್ ವ್ಯವಸ್ಥೆ ಕಲ್ಪಿಸುತ್ತಿದೆ. ಹೊಸ ವರ್ಷಕ್ಕೆ ಸಂಪೂರ್ಣ ನಿಷೇಧ ಹೇರಿರುವುದು ಪ್ರವಾಸಿಗರಲ್ಲಿ ಬೇಸರ ಮೂಡಿಸಿದೆ.

  • ಕೈ ಹಿಡಿದು ಎಳೆದ ಮಹಿಳೆಗೆ ಹೊಡೆದ ಪೋಪ್: ವಿಡಿಯೋ

    ಕೈ ಹಿಡಿದು ಎಳೆದ ಮಹಿಳೆಗೆ ಹೊಡೆದ ಪೋಪ್: ವಿಡಿಯೋ

    – ಕೋಪದ ನಡೆಗೆ ಕ್ಷಮೆಯಾಚನೆ

    ವ್ಯಾಟಿಕನ್ ಸಿಟಿ: ಕೈ ಹಿಡಿದು ಎಳೆದ ಮಹಿಳೆಯೊಬ್ಬರ ಮೇಲೆ ಪೋಪ್ ಕೆಂಡಾಮಂಡಲಾಗಿ ಆಕೆಯ ಕೈಗೆ ಹೊಡೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವ್ಯಾಟಿಕನ್ ನಗರದ ಸೇಂಟ್ ಪೀಟರ್ಸ್ ನಲ್ಲಿ ಪೋಪ್ ಫ್ರಾನ್ಸಿಸ್ ಅವರು ಮಂಗಳವಾರ ಹೊಸ ವರ್ಷದ ಸಂದರ್ಭದಲ್ಲಿ ಜನರಿಗೆ ಶುಭಾಶಯ ಕೋರುತ್ತಿದ್ದರು. ಈ ವೇಳೆ ಸಾಲಿನಲ್ಲಿ ನಿಂತಿದ್ದ ಮಹಿಳೆಯೊಬ್ಬರು ಪೋಪ್ ಅವರ ಕೈಯನ್ನು ಹಿಡಿದು ಎಳೆದಿದ್ದಾರೆ. ಇಂದರಿಂದ ಕೋಪಗೊಂಡ ಪೋಪ್, ಮಹಿಳೆಯ ಕೈಗೆ ಹೊಡೆದು ಹೊರಟುಹೋದರು.

    ಮಹಿಳೆಗೆ ಹೊಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೋಪ್ ಅವರು, ಬುಧವಾರ ಕ್ಷಮೆಯಾಚಿಸಿದರು. ಮಹಿಳೆ ಏಕಾಏಕಿ ಹಿಡಿದು ಏಳೆದಿದ್ದರಿಂದ ನಾನು ನನ್ನ ತಾಳ್ಮೆ ಕಳೆದುಕೊಂಡಿದ್ದೆ ಎಂದು ಪೋಪ್ ಹೇಳಿದ್ದಾರೆ.

    ಈ ಘಟನೆಯ ಫೋಟೋ, ವಿಡಿಯೋ ವೈರಲ್ ಆಗುತ್ತಿವೆ. ಈ ವಿಚಾರವಾಗಿ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ. ನಾನು ಕ್ಯಾಥೊಲಿಕ್ ಅಲ್ಲ. ಆದರೆ ಮಹಿಳೆ ಪೋಪ್ ಅವರ ಕೈ ಹಿಡಿದು ಎಳೆದಿದ್ದು ಸರಿಯಲ್ಲ. ಪೋಪ್ ಅವರು ನೋವಿನಿಂದ ಹೀಗೆ ಮಾಡಿದ್ದಾರೆ ಎಂದು ಭಾವಿಸುತ್ತೇನೆ ಎಂದು ನೆಟ್ಟಿಗರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಮಹಿಳೆ ತಪ್ಪು ಮಾಡಿದ್ದಾಳೆ. ಆದರೆ ಪೋಪ್ ವರ್ತನೆ ಅವರ ಸ್ಥಾನಕ್ಕೆ ಘನತೆಗೆ ಅನುಗುಣವಾಗಿಲ್ಲ. ಅವರು ತಾಳ್ಮೆಯಿಂದಿರಬೇಕು ಎಂದು ಮತ್ತೊಬ್ಬ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

  • ಅರಮನೆಯಲ್ಲಿ ಮುಗಿಲು ಮುಟ್ಟಿದ ಹೊಸ ವರ್ಷದ ಸಂಭ್ರಮ

    ಅರಮನೆಯಲ್ಲಿ ಮುಗಿಲು ಮುಟ್ಟಿದ ಹೊಸ ವರ್ಷದ ಸಂಭ್ರಮ

    ಮೈಸೂರು: ಮೈಸೂರು ಮಾಗಿ ಉತ್ಸವ ಹಾಗೂ ಹೊಸ ವರ್ಷಾಚರಣೆ ಸಂಭ್ರಮ ಹಿನ್ನೆಲೆಯಲ್ಲಿ ಬುಧವಾರ ಅಂಬಾವಿಲಾಸ ಅರಮನೆ ಆವರಣದಲ್ಲಿ ಸಂಭ್ರಮ ಮನೆ ಮಾಡಿತ್ತು.

    ಅರಮನೆಯಲ್ಲಿ ಬುಧವಾರ ಸಂಜೆ 7ರಿಂದ 9 ಗಂಟೆಯವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಕಣ್ಮನ ಸೆಳೆದವು. ಪೊಲೀಸ್ ಬ್ಯಾಂಡ್ ಹಾಗೂ ಸುನಿತಾ ಚಂದ್ರಕುಮಾರ್ ನೇತೃತ್ವದಲ್ಲಿ ಶ್ರೀ ರಘುಲೀಲ ಸಂಗೀತ ಮಂದಿರ ತಂಡದ 110 ಜನರಿಂದ ಶ್ರೀ ಶ್ರೀನಿವಾಸ ಕಲ್ಯಾಣ `ನೃತ್ಯ ವೈಭವ’ ಜನರ ಮನ ಗೆದ್ದಿತು. ರಾತ್ರಿ 9ರಿಂದ 9:30 ಗಂಟೆಯವರೆಗೆ ಬಣ್ಣಗಳ ಚಿತ್ತಾರಗಳಿಂದ ಕೂಡಿದ ಶಬ್ದ ರಹಿತ ಪಟಾಕಿ ಸಿಡಿಸುವ ಕಾರ್ಯಕ್ರಮ ಹೊಸ ವರ್ಷದ ಸಂಭ್ರಮವನ್ನು ಹೆಚ್ಚಿಸಿತ್ತು.

    ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ನಿಧನ ಹಿನ್ನೆಲೆಯಲ್ಲಿ ಶೋಕಾಚರಣೆ ಇದ್ದ ಕಾರಣ ನಿನ್ನೆ ನಡೆಯಬೇಕಿದ್ದ ಕಾರ್ಯಕ್ರಮ ಇವತ್ತು ನಡೆಯಿತು. ಇಂದು ಅರಮನೆಯಲ್ಲಿ ಸಂಭ್ರಮದಿಂದ ಹೊಸ ವರ್ಷವನ್ನು ಆಚರಿಸಲಾಯಿತು.

  • ಜನ್ಮದಾತರ ಪಾದಪೂಜೆ ಮಾಡಿ ವಿದ್ಯಾರ್ಥಿಗಳಿಂದ ವಿಶೇಷವಾಗಿ ಹೊಸ ವರ್ಷಾಚರಣೆ

    ಜನ್ಮದಾತರ ಪಾದಪೂಜೆ ಮಾಡಿ ವಿದ್ಯಾರ್ಥಿಗಳಿಂದ ವಿಶೇಷವಾಗಿ ಹೊಸ ವರ್ಷಾಚರಣೆ

    ಶಿವಮೊಗ್ಗ: ಕುಡಿದು, ಕುಣಿದು ಕುಪ್ಪಳಿಸಿ ಹೊಸ ವರ್ಷವನ್ನು ಆಚರಿಸುವುದು ಸಾಮಾನ್ಯ. ಆದರೆ ಶಿವಮೊಗ್ಗದ ಶಾಲೆಯೊಂದರಲ್ಲಿ ಹೊಸವರ್ಷದ ದಿನದಂದು ಪೋಷಕರ ಪಾದಪೂಜೆ ಮಾಡುವ ಮೂಲಕ ಮಕ್ಕಳು ಹೊಸ ವರ್ಷಾಚರಣೆ ಮಾಡಿದ್ದಾರೆ.

    ಶಿವಮೊಗ್ಗ ತಾಲೂಕು ಅನುಪಿನಕಟ್ಟೆಯಲ್ಲಿನ ರಾಮಕೃಷ್ಣ ಗುರುಕುಲ ವಸತಿ ಶಾಲೆಯಲ್ಲಿ ಕಳೆದ 15 ವರ್ಷಗಳಿಂದ ಹೊಸವರ್ಷದ ದಿನದಂದು ರೀತಿ ಕೇಕ್ ಕಟ್ ಮಾಡಿ, ಡ್ಯಾನ್ಸ್ ಮಾಡಿ ಆಚರಣೆ ಮಾಡುವುದಿಲ್ಲ. ಬದಲಿಗೆ ವಿದ್ಯಾರ್ಥಿಗಳು ಸತ್ಯನಾರಾಯಣ ಪೂಜೆ ಹಾಗೂ ತಮ್ಮ ಜನ್ಮದಾತರ ಪಾದಪೂಜೆ ಮಾಡುವ ಮೂಲಕ ಹೊಸ ವರ್ಷಾಚರಣೆ ಮಾಡುತ್ತಾರೆ.

    ಹೊಸ ವರ್ಷದ ದಿನದಂದು ಪೋಷಕರು ಎಲ್ಲರೂ ಸಾಂಪ್ರದಾಯಿಕ ಉಡುಪು ಧರಿಸಿ ಶಾಲೆಗೆ ಬರುತ್ತಾರೆ. ಪುರುಷರು ಪಂಚೆ, ಅಂಗಿ ಧರಿಸಿದರೆ, ಮಹಿಳೆಯರು ಸೀರೆಯಲ್ಲಿ ಬರುತ್ತಾರೆ. ಈ ವೇಳೆ ವಿದ್ಯಾರ್ಥಿಗಳು ತಮ್ಮ ತಂದೆ, ತಾಯಿಯರ ಪಾದ ತೊಳೆದು, ಸಂಪ್ರದಾಯ ಬದ್ಧ, ಶಾಸ್ತ್ರೋತ್ರವಾಗಿ ಪಾದ ಪೂಜೆ ಮಾಡುತ್ತಾರೆ. ಪೋಷಕರ ಪಾದ ತೊಳೆದು, ಒರೆಯಿಸಿ, ವಿಭೂತಿ, ಅರಿಶಿನ, ಕುಂಕುಮ ಹಚ್ಚಿ, ಹೂವು ಇಟ್ಟು ಗಂಧದ ಕಡ್ಡಿ ಬೆಳಗಿ ಮಂಗಳಾರತಿ ಮಾಡಿ ಪಾದಪೂಜೆ ಮಾಡುತ್ತಾರೆ.

    ವಿದ್ಯಾರ್ಥಿಗಳಿಗೆ ಶಾಲೆಯ ಹಿರಿಯರೊಬ್ಬರು ಪೂಜೆಯನ್ನು ಹೇಗೆ ಮಾಡುವುದು ಎಂದು ಮಾರ್ಗದರ್ಶನ ನೀಡುತ್ತಾರೆ. ಅದರಂತೆ ವಿದ್ಯಾರ್ಥಿಗಳು ಪೂಜೆ ಮಾಡುತ್ತಾರೆ. ವಿದ್ಯಾರ್ಥಿಗಳು ಈ ರೀತಿ ಪಾದಪೂಜೆ ಮಾಡುವುದರಿಂದ ಪೋಷಕರ ಬಗ್ಗೆ ಪ್ರೀತಿ, ಗೌರವ ಹೆಚ್ಚಾಗುತ್ತದೆ. ಇಬ್ಬರ ನಡುವೆ ಆತ್ಮೀಯತೆ ಬೆಳೆಯುತ್ತದೆ. ಇದು ವಸತಿ ಶಾಲೆಯಾದ ಕಾರಣ ವಿದ್ಯಾರ್ಥಿಗಳು ತಮ್ಮ ಪೋಷಕರನ್ನು ಬಿಟ್ಟು ದೂರ ಇರುತ್ತಾರೆ. ಈ ರೀತಿಯ ಕಾರ್ಯಕ್ರಮದಿಂದ ಅವರು ಹತ್ತಿರವಾಗುತ್ತಾರೆ. ಅಲ್ಲದೆ ವಿದ್ಯಾರ್ಥಿ ಹಾಗೂ ತಂದೆ- ತಾಯಿಗಳಿಬ್ಬರ ನಡುವೆ ಆತ್ಮೀಯತೆ ಬೆಳೆಯುತ್ತದೆ ಎಂಬ ಉದ್ದೇಶದಿಂದ ಈ ಪೂಜೆ ಮಾಡಿಸಲಾಗುತ್ತದೆ.

    ರಾಮಕೃಷ್ಣ ಶಾಲೆಯಲ್ಲಿ ಕಳೆದ 15 ವರ್ಷಗಳಿಂದ ಪಾದಪೂಜೆ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಪ್ರತಿ ವರ್ಷದ ಕಾರ್ಯಕ್ರಮಕ್ಕೆ ಪೋಷಕರು ತಮ್ಮ ಮಕ್ಕಳು ಶಾಲೆಯಲ್ಲಿ ಇರುವಷ್ಟು ವರ್ಷ ತಪ್ಪದೆ ಬರುತ್ತಾರೆ.

    ಈ ಬಾರಿಯ ಕಾರ್ಯಕ್ರಮದ ಸಾನಿಧ್ಯವನ್ನು ಕೊಡಲಿ ಮಠದ ವಿದ್ಯಾರಣ್ಯ ಭಾರತಿ ಸ್ವಾಮೀಜಿ ವಹಿಸಿದ್ದರು. ಮಕ್ಕಳು ತಮ್ಮ ತಂದೆ-ತಾಯಿಗಳಿಂದ ದೂರವಿದ್ದು ಅವರಿಬ್ಬರ ನಡುವೆ ಆತ್ಮೀಯತೆ ಕಡಿಮೆಯಾಗಿ, ಮುಂದೆ ವಯಸ್ಸಾದ ತಂದೆ ತಾಯಿಯರನ್ನು ನೋಡಿ ಕೊಳ್ಳದೆ ವೃದ್ಧಾಶ್ರಮಕ್ಕೆ ಸೇರಿಸುತ್ತಾರೆ. ಹೀಗಾಗಿ ಮಕ್ಕಳು ಹಾಗೂ ಪೋಷಕರ ನಡುವೆ ಕೊಂಡಿಯಾಗಿ ಶಾಲೆಯು ಪಾದಪೂಜೆ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ ಎಂದು ಶಾಲೆಯ ಮ್ಯಾನೇಜಿಂಗ್ ಟ್ರಸ್ಟಿ ಶೋಭಾ ವೆಂಟಕರಮಣ ತಿಳಿಸಿದ್ದಾರೆ.

    ವಿದ್ಯಾರ್ಥಿಗಳು ಸಹ ಪಾದಪೂಜೆಯಿಂದ ನಮ್ಮಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

  • ಕಾಮುಕರನ್ನು ಒದ್ದು ಜೈಲಿಗೆ ಹಾಕಿ: ಪ್ರಮೋದ್ ಮುತಾಲಿಕ್

    ಕಾಮುಕರನ್ನು ಒದ್ದು ಜೈಲಿಗೆ ಹಾಕಿ: ಪ್ರಮೋದ್ ಮುತಾಲಿಕ್

    ಬೆಳಗಾವಿ/ಚಿಕ್ಕೋಡಿ: ಹೊಸ ವರ್ಷದ ಆಚರಣೆಯಲ್ಲಿ ಅಟ್ಟಹಾಸ ಮೆರೆದ ಕಾಮುಕರನ್ನು ತಕ್ಷಣವೇ ಒದ್ದು ಜೈಲಿಗೆ ಹಾಕಬೇಕು ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಒತ್ತಾಯಿಸಿದ್ದಾರೆ.

    ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಇಂಥ ಹೊಸ ವರ್ಷಾಚರಣೆಗೆ ಸರ್ಕಾರ ಅನುಮತಿ ಕೊಟ್ಟಿದ್ದೇ ತಪ್ಪು. ಹೊಸ ವರ್ಷದ ಆಚರಣೆ ಕುಡುಕರ ಆಚರಣೆ ಆಗಿದೆ. ಸರ್ಕಾರವೇ ಇಂಥ ಕಾಮುಕರಿಗೆ ಕುಡುಕರಿಗೆ ಡ್ರಗಿಸ್ಟ್ ಗಳಿಗೆ ಅವಕಾಶ ಕೊಟ್ಟು ಈ ರೀತಿ ಗಲಾಟೆ ಮಾಡಲು ಪ್ರೋತ್ಸಾಹ ನೀಡಿದಂತಾಗಿದೆ. ಇಂತಹ ಅವಾಂತರಗಳಿಗೆ ಸರ್ಕಾರ ನೇರ ಕಾರಣ ಎಂದು ಕಿಡಿ ಕಾರಿದರು.

    ನಮ್ಮ ದೇಶದಲ್ಲಿ ಹೊಸ ವರ್ಷ ಯುಗಾದಿ ದಿನ. ನಿನ್ನೆ ಮಾಡಿದ್ದ ಹೊಸ ವರ್ಷಾಚರಣೆ ಅವೈಜ್ಞಾನಿಕ. ಹೊಸ ವರ್ಷ ಆಚರಣೆ ಈಗ ಬೂಟಾಟಿಕೆ ಆಗಿದೆ. ಸರ್ಕಾರ ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿ ಹೊಸ ವರ್ಷಾಚರಣೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಇಂತಹ ಆಚರಣೆಗೆ ಅವಕಾಶ ಕೊಡಬಾರದು. ಇಂಥ ಕಾರ್ಯಕ್ರಮಗಳು ನಿಂತರೆ ಮಹಿಳೆಯರು ಸುರಕ್ಷಿತವಾಗಿರುತ್ತಾರೆ ಎಂದರು.

    ಬೇಕಾದರೆ ಅವರವರ ಮನೆಯಲ್ಲಿ ಆಚರಿಸ್ಕೊಳ್ಳುತ್ತಾರೆ. ಈ ರೀತಿ ರಸ್ತೆಗಳ ಮೇಲೆ ಆಚರಣೆ ಮಾಡಲು ಅವಕಾಶ ಕೊಡಬಾರದು. ತಕ್ಷಣವೇ ಕಾಮುಕರನ್ನು ಪೊಲೀಸರು ಒದ್ದು ಒಳಗೆ ಹಾಕಬೇಕು ಎಂದು ಪ್ರಮೋದ ಮುತಾಲಿಕ್ ಆಗ್ರಹಿಸಿದ್ದಾರೆ.