Tag: New Year 2025

  • ಬದಲಾವಣೆಗೇಕೆ ಹೊಸ ವರ್ಷ?

    ಬದಲಾವಣೆಗೇಕೆ ಹೊಸ ವರ್ಷ?

    ದಲಾವಣೆ ಜಗದ ನಿಯಮ. ಜಗತ್ತಿನಲ್ಲಿ ದಿನೇ ದಿನೇ ಒಂದಲ್ಲ ಒಂದು ರೀತಿಯಲ್ಲಿ ಪ್ರತಿಯೊಂದು ವಸ್ತು, ಜೀವಿ ಮುಂತಾದವು ಯಾವುದೋ ಒಂದು ರೀತಿಯಲ್ಲಿ ಬದಲಾವಣೆ ಆಗುತ್ತಲೇ ಇರುತ್ತದೆ.

    ಬದಲಾವಣೆಗಳಲ್ಲಿ ಕೆಲವೊಂದು ಕಣ್ಣಿಗೆ ಕಾಣಿಸುವ ಬದಲಾವಣೆ, ಕೆಲವೊಂದು ಕಣ್ಣಿಗೆ ಕಾಣಿಸದಿರುವ ಬದಲಾವಣೆ. ಆದರೆ ಎಲ್ಲದಕ್ಕೂ ತಾಳ್ಮೆಯಿಂದ ಕಾಯಬೇಕು ಅಷ್ಟೆ. ಆದರೆ ಮನುಷ್ಯನಲ್ಲಿ ತಾಳ್ಮೆ ಅನ್ನೋದೇ ಇಲ್ಲ. ಯಾವುದೋ ಒಂದು ರೀತಿಯ ನಿರ್ಧಾರದಿಂದ ಇಲ್ಲಸಲ್ಲದ ಅಚಾತುರ್ಯಗಳನ್ನು ಮಾಡಿಕೊಳ್ಳುತ್ತಾನೆ. ಇದು ಒಂದು ರೀತಿ ಮೊದಲಿನಿಂದಲೂ ನಡೆದುಕೊಂಡು ಬಂದ ಬಳುವಳಿಯಾಗಿದೆ. ಯಾರಿಗೂ ಒಂದುಕ್ಷಣ ಸುಮ್ಮನೇ ಕುಳಿತು ಯೋಚಿಸುವ ತಾಳ್ಮೆಯೇ ಇಲ್ಲ. ದೇವರು ಇದ್ದಾನೋ ಇಲ್ವೋ ಗೊತ್ತಿಲ್ಲ? ಹಣೆಬರಹ ಇದೆಯೋ ಇಲ್ವೋ ಗೊತ್ತಿಲ್ಲ? ದೇವರು ಏನಾದರೂ ಮಾಡಬಹುದು, ಹಣೆಬರಹದಲ್ಲಿ ಇದ್ದ ಹಾಗೆಯೇ ಆಗುತ್ತದೆ ಎಂದು ನಂಬಿ ಕುಳಿತುಕೊಳ್ಳುವವರೂ ಇದ್ದಾರೆ. ಆದರೆ ಅದನ್ನೆಲ್ಲಾ ನಂಬಿ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ.

    ಮನುಷ್ಯ ಬದಲಾವಣೆಯನ್ನು ಬಯಸುತ್ತಾನೆ. ಆದರೆ ಅದಕ್ಕಾಗಿ ಕಾಯುವುದೂ ಇಲ್ಲ, ಅದಕ್ಕೆ ಬೇಕಾದ ಪರಿಶ್ರಮವನ್ನೂ ಪಡುವುದಿಲ್ಲ. ಮನುಷ್ಯ ಬಯಸುವುದು ದಿಡೀರ್ ಬದಲಾವಣೆ ಮತ್ತು ಪರಿಶ್ರಮ ರಹಿತ ಬದಲಾವಣೆ. ಇದು ಎಲ್ಲಾ ಸಮಯದಲ್ಲೂ ಸಾಧ್ಯವಿಲ್ಲ. ಜೀವನ ಎನ್ನುವುದು ಇಲ್ಲಿ ನಾವು ಏನು ಮಾಡುತ್ತೇವೆ? ಯಾಕೆ ಮಾಡುತ್ತೇವೆ? ಹೇಗೆ ಮಾಡುತ್ತೇವೆ? ಯಾರಿಗೋಸ್ಕರ ಮಾಡುತ್ತೇವೆ? ಎನ್ನುವುದರ ಮೇಲೆ ನಿಂತಿದೆ. ಒಂದು ಮಾತು ಮಾತ್ರ ಸತ್ಯ, ಇವತ್ತು ನಾವು ಮಾಡುವ ಪ್ರತಿಯೊಂದು ಕೆಲಸ ಕೂಡ ನಾಳಿನ ಭವಿಷ್ಯ ಆಗುತ್ತದೆ. ಏನೇ ಮಾಡಬೇಕು ಎಂದುಕೊಂಡಿದ್ದರೂ ಒಳ್ಳೆಯದನ್ನು ಮಾಡಿ, ಅದು ನಿಮ್ಮ ಭವಿಷ್ಯವನ್ನು ಒಳ್ಳೆಯದನ್ನಾಗಿ ಮಾಡುತ್ತದೆ. ಕೆಟ್ಟದ್ದನ್ನೇ ಮಾಡುವುದಾದರೆ ಮಾಡಿ, ಅದನ್ನು ಮುಂದೆ ನೀವು ಅನುಭವಿಸುತ್ತೀರಿ. ಅಷ್ಟೇ ಬೇರೆ ಯಾರಿಗೂ ಯಾವುದೇ ರೀತಿ ತೊಂದರೆಯಿಲ್ಲ. ಬೇರೆಯವರಿಗಾಗಿ ಒಳ್ಳೆಯದನ್ನು ಮಾಡಬೇಕಾ? ಬಿಡಬೇಕಾ? ನಿಮ್ಮ ಇಷ್ಟ. ಆದರೆ ಮಾಡಿದ ಮೇಲೆ ಅವರಿಂದ ಯಾವತ್ತೂ ಕೂಡ ಅದರ ಪ್ರತಿಫಲಕ್ಕಾಗಿ ಕಾಯಬೇಡಿ. ಸಿಗಬಹುದು, ಸಿಗದೇ ಇರಬಹುದು.

    ಭವಿಷ್ಯ ಎನ್ನುವುದು ಮಾತ್ರ ನಿಮ್ಮ ಇಂದಿನ ನಡೆವಳಿಕೆಯನ್ನು ಅವಲಂಬಿಸಿದೆ. ಭವಿಷ್ಯದಲ್ಲಿ ಉತ್ತಮ ರೀತಿಯಲ್ಲಿ, ಖುಷಿಯಿಂದ ಬದುಕಬೇಕು ಎಂದುಕೊಂಡಿದ್ದರೆ ಅದಕ್ಕೆ ಇಂದಿನಿಂದಲೇ ಪರಿಶ್ರಮ ಪಡಿ. ಏನೇ ಸಿಗುವುದಾದರೂ ಅದು ನಿಮಗೆ. ನೀವು ಪಟ್ಟ ಶ್ರಮಕ್ಕೆ ಪ್ರತಿಫಲ ಸಿಗದೇ ಇದ್ದರೆ, ಮುಂದುವರಿಯಿರಿ. ಒಂದಲ್ಲ ಒಂದಿನ ನಿಮ್ಮ ಭೂತಕಾಲದ ಪರಿಶ್ರಮ ಅವಶ್ಯವಾಗಿ ಭವಿಷ್ಯವಾಗುತ್ತದೆ. ಆದರೆ ತಾಳ್ಮೆಯಿಂದ ಕಾಯುತ್ತಲಿರಿ.

    ಯಾವುದಾದರೂ ಒಳ್ಳೆಯ ಕೆಲಸ ಮಾಡಬೇಕು ಎಂದುಕೊಂಡಿದ್ದರೆ ನಾಳೆಗಾಗಿ ಕಾಯಬೇಡಿ. ರಾತ್ರಿ ಮಲಗಿದ ಮೇಲೆ ಬೆಳಿಗ್ಗೆ ಎದ್ದೇಳುತ್ತೆವಾ ಎಂದು ಗೊತ್ತಿಲ್ಲ. ಶುರು ಮಾಡಿ. ಕೆಲವೊಮ್ಮೆ ಯಾವುದೋ ಕೆಲಸ ಬಂದಾಗ ಇನ್ನೇನು 2 ತಿಂಗಳಲ್ಲಿ ವರ್ಷಾನೇ ಮುಗಿಯತ್ತದೆ ಎಂದು ಮುಂದಿನ ವರ್ಷ ಮಾಡಿದರೆ ಆಯಿತು ಎಂದು ಮುಂದಕ್ಕೆ ಹಾಕಬೇಡಿ. ಒಳ್ಳೆಯದನ್ನು ಮಾಡುವುದೇ ಆದರೆ ಯಾಕೆ ಮುಂದಕ್ಕೆ ತಳ್ಳಬೇಕು. ಈಗಲೇ ಬದಲಾಗಿ ನಾಳೆಗೋಸ್ಕರ ಕಾಯೋದು ಬೇಡ, ನಾಳೆನೇ ನಮಗೋಸ್ಕರ ಬೇಗ ಬರಲಿ ಎನ್ನುವ ಮನೋಭಾವ ಇರಬೇಕು. ಆಗುವುದೆಲ್ಲ ಒಳ್ಳೆಯ ಕಾರಣಕ್ಕೆ ಎಂದು ನಂಬಿ ತಾಳ್ಮೆಯಿಂದ ಕಾಯಿರಿ. ಅವಶ್ಯವಾಗಿ ನಿಮ್ಮಿಂದ ಯಾವುದೋ ರೀತಿಯಲ್ಲಿ ಒಂದು ಒಳ್ಳೆಯ ಬದಲಾವಣೆ ತರುವ ಕೆಲಸ ನಡೆಯುತ್ತದೆ. ನಿಮ್ಮ ಜೀವನದಲ್ಲಿ ಬದಲಾವಣೆ ಬಯಸುತ್ತಿದ್ದರೆ ತಡ ಮಾಡಬೇಡಿ, ಈಗಲೇ ಶುರು ಮಾಡಿ. ಕೆಲವೊಮ್ಮೆ ನಾಳೆ ಏನು ಆಗುತ್ತದೆ ಎಂದು ಗೊತ್ತಿರಲ್ಲ. ಇನ್ನೂ ಮುಂದಿನ ವರ್ಷದ ಬಗ್ಗೆ ಮಾತನಾಡುವುದು ಯಾಕೆ? ಈಗಿನ ಕ್ಷಣವನ್ನು ಅನುಭವಿಸಿ. ಖುಷಿಯಿಂದ ಇರಿ.

    ಬದಲಾವಣೆ ಎನ್ನುವುದು ಸುಲಭ ಕಾರ್ಯವಲ್ಲ. ಆದರೆ ಅದು ಯಾವಾಗಲೂ ಸಾಧ್ಯವಾಗುವಂತಹ ಸಂಗತಿ. ಅವಶ್ಯವಾಗಿ ಈಗಿನ ಬದಲಾವಣೆ ಭವಿಷ್ಯದ ಬದಲಾವಣೆಯನ್ನೆ ಮಾಡಬಹುದು ಯಾರಿಗೊತ್ತು? ಹೊಸ ವರ್ಷದಲ್ಲಿ ಮಾಡಬಹುದಾದ ವಿಷಯಗಳ ಕುರಿತು ಸಂಕಲ್ಪವಿರಲಿ. ಆದರೆ ತಡ ಬೇಡ. ಪ್ರತಿ ಕ್ಷಣವೂ ನಿಮ್ಮದು. ಅದೇ ನಿಮ್ಮ ಕೊನೆಕ್ಷಣ ಎಂದು ಅಂದುಕೊಂಡು ಮುಂದುವರೆಯಿರಿ.

    ಸರ್ವರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು!

  • ವರ್ಷ ಭವಿಷ್ಯ 01-01-2025

    ವರ್ಷ ಭವಿಷ್ಯ 01-01-2025

    ಪಂಚಾಂಗ
    ವಾರ: ಬುಧವಾರ
    ತಿಥಿ: ದ್ವಿತೀಯ
    ನಕ್ಷತ್ರ: ಉತ್ತರಾಷಾಢ
    ಯೋಗ: ವ್ಯಾಘಾತ
    ಕರಣ: ಬಾಲವ

    ರಾಹುಕಾಲ: 12:29 ರಿಂದ 1:52
    ಗುಳಿಕಕಾಲ: 11:01 ರಿಂದ 12:27
    ಯಮಗಂಡಕಾಲ: 8:09 ರಿಂದ 9:35

    ಮೇಷ: ಈ ವರ್ಷದಲ್ಲಿ ಗುರುವು ವೃಷಭ ರಾಶಿಯಲ್ಲಿ ಸಂಚಾರ ಮಾಡುವ ತನಕ ಧನ ಲಾಭ, ಐಶ್ವರ್ಯ ವೃದ್ಧಿ, ಯತ್ನ ಕಾರ್ಯಾ ಅನುಕೂಲ, ಶುಭ ಫಲ ಲಭ್ಯವಾಗುತ್ತೆ. ಗುರು ಮಿಥುನ ರಾಶಿಯಲ್ಲಿ ಸಂಚಾರ ಮಾಡುವಾಗ ಅನರ್ಥಗಳು, ಅಪಘಾತಗಳು, ಧನ ನಷ್ಟಗಳನ್ನ ಅನುಭವಿಸಬೇಕಾಗುತ್ತದೆ, ಶನಿಯು ಕುಂಭ ರಾಶಿಯಲ್ಲಿ ಸಂಚಾರ ಮಾಡುವಾಗ, ಶುಭ ಫಲಗಳನ್ನು ಕೊಟ್ಟು ಮೀನ ರಾಶಿಯಲ್ಲಿ ಸಂಚಾರ ಮಾಡುವಾಗ ಕಷ್ಟ ಕಾರ್ಪಣ್ಯಗಳು ಹೆಚ್ಚಾಗುತ್ತೆ.

    ವೃಷಭ: ಈ ವರ್ಷ ಗುರುವು ವೃಷಭ ಮಿಥುನ ರಾಶಿಯಲ್ಲಿ ಸಂಚಾರ ಮಾಡುವಾಗ ಮೊದಲ ಭಾಗದಲ್ಲಿ ಕಷ್ಟಕಾರ್ಪಣ್ಯ, ಮೇ ನಂತರ ಗುರುಬಲ ಪ್ರಾಪ್ತಿ, ಶುಭ ಯೋಗ ಪ್ರಾಪ್ತಿ. ಶನಿಯು ಮಾರ್ಚ್ ನಂತರ ಏಕಾದಶದಲ್ಲಿ ಬರಲಿದ್ದು, ಶುಭಫಲ, ಧನಪ್ರಾಪ್ತಿ, ಸಾಲ ಮರು ಪಾವತಿ, ಆರೋಗ್ಯ ವೃದ್ಧಿ, ಆಸ್ತಿಪಾಸ್ತಿ ಕೊಳ್ಳುವಿಕೆ, ಯತ್ನ ಕಾರ್ಯ ಅನುಕೂಲ ಪ್ರಾಪ್ತಿ.

    ಮಿಥುನ: ಈ ವರ್ಷ ಗುರು ಜನ್ಮಕ್ಕೆ ಬರಲಿದ್ದು, ಸ್ಥಾನ ಭ್ರಷ್ಟತ್ವ, ದುಷ್ಟಬುದ್ಧಿ, ಮನಃಕ್ಲೇಶ, ಕರ್ಮಸ್ಥಾನಕ್ಕೆ ಶನಿ ಬಂದ ನಂತರ ಮಾಡುವ ಕೆಲಸದಲ್ಲಿ ಬದಲಾವಣೆ, ಅನುಕೂಲ, ಕಿರುಕುಳಗಳು,ನಷ್ಟ ಅಧಿಕ.

    ಕಟಕ: ಈ ವರ್ಷ ಗುರು ನಷ್ಟಕ್ಕೆ ಬರಲಿದ್ದು, ಅಧಿಕವಾದ ನಷ್ಟಗಳು, ಆರೋಗ್ಯ ಸಮಸ್ಯೆ, ಚಿಕಿತ್ಸೆಗೆ ಖರ್ಚು ವೆಚ್ಚ ಹೆಚ್ಚಾಗುತ್ತವೆ, ನಾನಾ ರೀತಿಯ ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ. ಭಾಗ್ಯಸ್ಥಾನಕ್ಕೆ ಶನಿಯು ಪ್ರವೇಶಿಸಲಿದ್ದು, ಭಾಗ್ಯೋದಾರರಾಗುವ ವರ್ಷವಾಗುತ್ತೆ.

    ಸಿಂಹ: ಈ ವರ್ಷ ಗುರುವು 11ನೇ ಮನೆಗೆ ಬಂದ ನಂತರ ಅನುಕೂಲ ಹೆಚ್ಚಾಗುವುದು. ಆಸ್ತಿಪಾಸ್ತಿ ಹೆಚ್ಚಿಸಿಕೊಳ್ಳುವಿರಿ, ಶನಿಯು ಅಷ್ಟಮದಲ್ಲಿ ಸಂಚಾರ ಮಾಡುವಾಗ ಸಾಲ ಮಾಡುವ ಸಂಭವ, ಆಸ್ತಿ ನಷ್ಟ, ಕುಟುಂಬದಲ್ಲಿ ಕಲಹ ಹೆಚ್ಚಾಗುವ ಸಾಧ್ಯತೆ, ಈ ವರ್ಷ ಆದಾಯಕ್ಕಿಂತ ಖರ್ಚು ಹೆಚ್ಚು.

    ಕನ್ಯಾ: ಈ ವರ್ಷ ಗುರು ಕರ್ಮಸ್ಥಾನದಲ್ಲಿ ಸಂಚಾರ ಮಾಡುವಾಗ ಉನ್ನತ ಸ್ಥಾನಮಾನ, ಉದ್ಯೋಗ ಲಾಭ, ಬಡ್ತಿ, ಗೃಹಪ್ರವೇಶ ಯೋಗ, ಶನಿ 7ನೇ ಮನೆಗೆ ಬಂದ ನಂತರ, ಶನಿ ಪ್ರಾರಂಭ, ಕಷ್ಟಗಳು ಅಧಿಕ, ಸಾಲಬಾಧೆ, ಶತ್ರು ಕಾಟ, ಕೈಕಾಲಿಗೆ ಪೆಟ್ಟು, ಆರೋಗ್ಯದಲ್ಲಿ ವ್ಯತ್ಯಾಸ, ಕುಟುಂಬದಲ್ಲಿ ಕಲಹ, ದಾಯಾದಿಗಳ ಕಾಟ, ಅಶುಭ ಫಲ.

    ತುಲಾ: ಈ ವರ್ಷ ಗುರು ಶನಿ ಆರನೇ ಮನೆ, 9ನೇ ಮನೆಯಲ್ಲಿ ಸಂಚಾರ ಮಾಡುವಾಗ ಶುಭಫಲ ಹೆಚ್ಚುತ್ತೆ, ಮಾನಸಿಕ ನೆಮ್ಮದಿ, ಕುಟುಂಬದಲ್ಲಿ ಶಾಂತಿ ನೆಮ್ಮದಿ, ಮನೆಯಲ್ಲಿ ಶುಭಕಾರ್ಯ ಜರುಗುವಿಕೆ, ಧನ ಲಾಭ, ಆಸ್ತಿಕೊಳ್ಳುವ ಶುಭಯೋಗ, ಹೆಚ್ಚಾಗಿ ಶುಭಫಲ ಅನುಭವಿಸುವ ವರ್ಷ. ಎಚ್ಚರಿಕೆ ಇರಲಿ ನಂಬಿಕೆ ದ್ರೋಹ, ಹಿತ ಶತ್ರುವಿನ ಬಾಧೆ.

    ವೃಶ್ಚಿಕ: ಈ ವರ್ಷ ಪಂಚಮ ಸ್ಥಾನದಲ್ಲಿ ಶನಿ ಸಂಚಾರ ಮಾಡಲಿದ್ದು, ಆರೋಗ್ಯದಲ್ಲಿ ವ್ಯತ್ಯಾಸ, ಆಪರೇಷನ್, ನರಗಳ ದೌರ್ಬಲ್ಯ, ಮಾನಸಿಕ ವೇದನೆ, ಹೇಳಲಾರದಂತಹ ಸಂಕಷ್ಟ, ಇವೆಲ್ಲವೂ ಹೆಚ್ಚಾಗುವ ಸಾಧ್ಯತೆ, ಅಷ್ಟಮದಲ್ಲಿ ಗುರು ಸಂಚಾರ ಮಾಡುವಾಗ ಧನ ನಷ್ಟ, ಆಸ್ತಿಪಾಸ್ತಿ ನಷ್ಟ, ಅಪಘಾತವಾಗುವ ಸಂಭವ, ಶತ್ರು ಬಾಧೆ, ನ್ಯಾಯವಾಗಿ ಮಾತನಾಡುವುದು ಉತ್ತಮ.

    ಧನಸ್ಸು: ಈ ವರ್ಷ ಸುಖ ಸ್ಥಾನದಲ್ಲಿ ಶನಿಯ ಸಂಚಾರ, ಸಪ್ತಮ ಸ್ಥಾನದಲ್ಲಿ ಗುರು ಸಂಚಾರ ಮಾಡುವಾಗ, ಋಣ ಬಾಧೆಯಿಂದ ಮುಕ್ತಿ, ಸಾಲ ಮರುಪಾವತಿ, ಅಡಮಾನ ಬಿಡಿಸಿಕೊಳ್ಳುವಿಕೆ, ಧನ ಲಾಭ, ವಿವಾಹ ಯೋಗ, ಗೃಹಪ್ರವೇಶ ಯೋಗ, ಮನೆಯಲ್ಲಿ ಶುಭಕಾರ್ಯ, ವ್ಯಾಪಾರದಲ್ಲಿ ಅಧಿಕ ಲಾಭ, ಈ ವರ್ಷದಲ್ಲಿ ಹೆಚ್ಚು ಶುಭ ಫಲ.

    ಮಕರ: ಈ ವರ್ಷ ಏಳರ ಆಟ ಶನಿ ಮುಕ್ತಾಯವಾಗಲಿದ್ದು, ಸಂಪತ್ತು ವೃದ್ಧಿ, ವಿವಾಹ ಯೋಗ, ಶುಭಕಾರ್ಯ ಹೆಚ್ಚಾಗಿ ನಡೆಯುತ್ತವೆ, ಆಸ್ತಿ ಕೊಳ್ಳುವಿಕೆ, ಗೃಹ ನಿರ್ಮಾಣ ಮಾಡುವ ಸಾಧ್ಯತೆ, ಹೊಸ ಹೊಸ ಯೋಜನೆ ಪ್ರಾರಂಭಿಸುವಿರಿ, ಅಧಿಕಾರ ಪ್ರಾಪ್ತಿ, ಮೇಲಾಧಿಕಾರಿಗಳಿಂದ ಹೊಗಳಿಕೆ, ಹೆಚ್ಚಾದ ಶುಭಫಲ.

    ಕುಂಭ: ಈ ವರ್ಷ ಗುರು ಸುಖ ಸ್ಥಾನದಲ್ಲಿ ಸಂಚಾರ, ಮಾನಹಾನಿ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ಧನ ನಷ್ಟ, ರಕ್ತ ಸಂಬAಧವಾದ ಕಾಯಿಲೆಗಳು, ಕಷ್ಟಕಾರ್ಪಣ್ಯಗಳು ಹೆಚ್ಚು, ಉದ್ಯೋಗದಲ್ಲಿ ಕಿರಿಕಿರಿ, ವಿದ್ಯಾರ್ಥಿಗಳಲ್ಲಿ ಚಂಚಲ, ಮನಃಕ್ಲೇಶ, ಹೇಳಿಕೊಳ್ಳಲಾರದಂತಹ ಸಂಕಷ್ಟ.

    ಮೀನ: ಈ ವರ್ಷ ಜನ್ಮದಲ್ಲಿ ಶನಿ ಸಂಚಾರ ಮಾಡಲಿದ್ದು, ಸ್ಥಾನ ಭ್ರಷ್ಟತ್ವ, ಸ್ವಯಂಕೃತ ಅಪರಾಧ, ನಾನಾ ರೀತಿಯ ತೊಂದರೆ, ಮಾನಹಾನಿ, ದಂಡ ಕಟ್ಟುವಿಕೆ, ಕುಟುಂಬದಲ್ಲಿ ಕಲಹ ಸಾಧ್ಯತೆ. ಗುರು ನಾಲ್ಕನೇ ಮನೆಯಲ್ಲಿ ಸಂಚಾರ, ಸುಖ ಇಲ್ಲದ ಜೀವನ, ಕುಟುಂಬದಿAದ ಬೇರೆಯಾಗುವ ಸಾಧ್ಯತೆ, ಕುಟುಂಬದವರೇ ಶತ್ರುವಾಗುವ ಸಾಧ್ಯತೆ, ಆರೋಗ್ಯದಲ್ಲಿ ವ್ಯತ್ಯಾಸ, ಆಪರೇಷನ್ ಆಗುವ ಸಂಭವ, ಚಿಕಿತ್ಸೆಗೆ ಹೆಚ್ಚು ಹಣ ಖರ್ಚು ಮಾಡುವ ಸಂಭವ.

  • ಸರ್ಕಾರ ನಡೀತಿರೋದೆ ಮದ್ಯಪ್ರಿಯರಿಂದ, ಆದ್ರೂ ಏನ್‌ ಅನ್ಯಾಯ ಗುರು? – ಯುವಕನ ಮಾತು

    ಸರ್ಕಾರ ನಡೀತಿರೋದೆ ಮದ್ಯಪ್ರಿಯರಿಂದ, ಆದ್ರೂ ಏನ್‌ ಅನ್ಯಾಯ ಗುರು? – ಯುವಕನ ಮಾತು

    ಬೆಂಗಳೂರು: 2025ರ ಹೊಸ ವರ್ಷ (New Year 2025) ಸ್ವಾಗತಕ್ಕೆ ಕೆಲವೇ ನಿಮಿಷಗಳು ಬಾಕಿಯಿದೆ. ರಾಜಧಾನಿ ಬೆಂಗಳೂರಿನಲ್ಲಿ ಸಂಭ್ರಮಾಚರಣೆಗೆ ನೆರೆದಿರುವ ಜನಸಮೂಹ 2024ಕ್ಕೆ ಗುಡ್‌ಬೈ ಹೇಳಿ 2025ಕ್ಕೆ ಹಾಯ್ ಹೇಳಲು ತುದಿಗಾಲಲ್ಲಿ ನಿಂತಿದ್ದಾರೆ. ಕೆಲವರು ಆಗಲೇ ಎಣ್ಣೆ ಹೊಡೆದು ಜೋಶ್‌ನಲ್ಲಿ ತೇಲಾಡುತ್ತಿದ್ದಾರೆ.

    ಈ ನೆಡುವೆ ಯುವ ಸಮೂಹ ʻಪಬ್ಲಿಕ್‌ ಟಿವಿʼ ಜೊತೆಗೆ ಮಾತನಾಡಿದ್ದು, ಮದ್ಯದ ದರ ಏರಿಕೆ ಮಾಡಿರುವುದಕ್ಕೆ ಆಕ್ರೋಶ ಹೊರಹಾಕಿದೆ. ಒಂದೆಡೆ ಅಭಿಮಾನಿಗಳು ಆರ್‌ಸಿಬಿ… ಆರ್‌ಸಿಬಿ… ಈ ಸಲ ಕಪ್‌ ನಮ್ದೇ ಅಂತ ಜೈಕಾರ ಹಾಕುತ್ತಿದ್ದರೆ, ಮತ್ತೊಂದೆಡೆ, ಮದ್ಯದ ದರ ಏರಿಕೆಯಾಗಿದೆ ಎಂದು ಬೇಸರ ಹೊರಹಾಕಿದ್ದಾರೆ.

    ಇದೇ ವೇಳೆ ಯುವಕನೊಬ್ಬ ಮಾತನಾಡುತ್ತಾ, ಮದ್ಯಪ್ರಿಯರಿಗೆ ಬಂದಿರುವ ಕಷ್ಟ ಏನಂದ್ರೆ? ಗುರು… ಅಲ್ಲಿ ಮಾರೋದು 500 ರೂಪಾಯಿ, ಇಲ್ಲಿ ಮಾರೋದು 300 ರೂಪಾಯಿ, ಆಚೆ ಹೋದ್ರೆ 150 ರೂಪಾಯಿ… ಏನ್‌ ಅನ್ಯಾಯ ಗುರು..? ಸರ್ಕಾರ ನಡೀತಿರೋದೇ ಮದ್ಯಪ್ರಿಯರಿಂದ ಆದ್ರೆ, ಎಣ್ಣೆ ರೇಟ್‌ ಜಾಸ್ತಿ ಮಾಡಿದ್ದಾರೆ, ನಾವೇನ್‌ ಹೊರದೇಶದಿಂದ ಬಂದವರಾ ಎಂದೆಲ್ಲಾ ಅಲವತ್ತುಕೊಂಡಿದ್ದಾರೆ.

  • ದಿನಕ್ಕೆ 16 ಬಾರಿ ಸೂರ್ಯೋದಯ, ಸೂರ್ಯಾಸ್ತ ದರ್ಶನದೊಂದಿಗೆ ಹೊಸ ವರ್ಷ ಸ್ವಾಗತ!

    ದಿನಕ್ಕೆ 16 ಬಾರಿ ಸೂರ್ಯೋದಯ, ಸೂರ್ಯಾಸ್ತ ದರ್ಶನದೊಂದಿಗೆ ಹೊಸ ವರ್ಷ ಸ್ವಾಗತ!

    ವಾಷಿಂಗ್ಟನ್‌: ಸಹವಾಗಿ ಭೂಮಿಯಲ್ಲಿರುವ ನಮಗೆ ದಿನಕ್ಕೆ ಒಂದು ಬಾರಿ ಸೂರ್ಯೋದಯ, ಸೂರ್ಯಾಸ್ತ (Sunrises And Sunsets) ಕಾಣಿಸುತ್ತದೆ. 12 ಗಂಟೆ ಬೆಳಕು, 12 ಗಂಟೆ ರಾತ್ರಿಯಲ್ಲಿ ಕಳೆಯುತ್ತೇವೆ. ಆದ್ರೆ ಒಂದು ದಿನದಲ್ಲಿ 16 ಬಾರಿ ಸೂರ್ಯೋದಯ, ಸೂರ್ಯಾಸ್ತ ನೋಡುತ್ತಾರೆ ಅಂದ್ರೆ ನಂಬೋಕಾಗುತ್ತಾ?

    ಹೌದು.. ಅಸಾಧ್ಯ ಅನ್ನಿಸಿದರೂ ಇದನ್ನ ನಂಬಲೇಬೇಕು. 2025ರ ಹೊಸ ವರ್ಷವನ್ನು ಭೂಮಿಯಲ್ಲಿರುವ ಜನ ಪಾರ್ಟಿ, ಮೋಜು ಮಸ್ತಿ, ದೇವಸ್ಥಾನ ಯಾತ್ರೆ, ಕೇಕ್‌ ಕತ್ತಿರಿಸಿ ಸಂಭ್ರಮಿಸುತ್ತಾ ಬರಮಾಡಿಕೊಳ್ಳುತ್ತಿದ್ದಾರೆ. ಆದ್ರೆ ಸುನೀತಾ ವಿಲಿಯಮ್ಸ್‌ (Sunita Williams) ದಿನಕ್ಕೆ 16 ಬಾರಿ ಸೂರ್ಯೋದಯ, ಸೂರ್ಯಾಸ್ತ ನೋಡುವ ಮೂಲಕ ಬರಮಾಡಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಹಗಲು ರಾತ್ರಿ ಹೇಗಿರಲಿದೆ ಅನ್ನೋ ಚಿತ್ರಗಳನ್ನ ನಾಸಾ ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ. ಅಷ್ಟಕ್ಕೂ ಏನಿದು ವಿಜ್ಞಾನದ ಕೌತುಕ ಅನ್ನೋದನ್ನ ತಿಳಿಯಬೇಕಾ? ಹಾಗಿದ್ದರೆ ಮುಂದೆ ಓದಿ…

    16 ಸೂರ್ಯೋದಯ ಮತ್ತು ಸೂರ್ಯಾಸ್ತಗಳ ಹಿಂದಿನ ವಿಜ್ಞಾನ ಕಾರಣವೇನು?
    ಜೂ.5 ರಂದು ಬೋಯಿಂಗ್ ಸ್ಟಾರ್‌ಲೈನರ್ ಹೊತ್ತೊಯ್ದಿದ್ದ ರಾಕೆಟ್, ಜೂ.6 ರಂದು ಬಾಹ್ಯಾಕಾಶ ನಿಲ್ದಾಣದ ಬಳಿ ತಲುಪಿತು. ಆದರೆ ಸ್ಟಾರ್‌ಲೈನರ್ ಎಂಜಿನ್‌ಗಳಲ್ಲಿ ದೋಷ ಕಂಡಿದ್ದರಿಂದ ನೌಕೆಯನ್ನು ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್) ಜೋಡಿಸಲಾಯಿತು. ಈಗ ಇಬ್ಬರೂ ಗಗನಯಾತ್ರಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲೇ ಇದ್ದಾರೆ. ಇತ್ತೀಚೆಗೆ ಕ್ರೀಸ್ಮಸ್‌ ಹಬ್ಬದ ಸಂಭ್ರಮಾಚರಣೆಯನ್ನು ಸುನೀತಾ ವಿಲಿಯಮ್ಸ್‌ ಸ್ಪೇಸ್‌ನಲ್ಲೇ ಆಚರಿಸಿದರು. ಅದು ಪ್ರತಿ ಗಂಟೆಗೆ ಸರಿಸುಮಾರು 28,000 ಕಿಮೀ ವೇಗದಲ್ಲಿ ಭೂಮಿಯನ್ನು ಸುತ್ತುತ್ತಿದೆ. ಐಎಸ್‌ಎಸ್ ಪ್ರತಿ 90 ನಿಮಿಷಗಳಿಗೊಮ್ಮೆ ಭೂಮಿಯ ಪೂರ್ತಿ ಕಕ್ಷೆಯನ್ನು ಪೂರ್ಣಗೊಳಿಸುತ್ತದೆ.

    ವೇಗವಾಗಿ ಚಲಿಸುವ ಬಾಹ್ಯಾಕಾಶ ನೌಕೆಯಲ್ಲಿ ಗಗನಯಾತ್ರಿಗಳು ಸುಮಾರು 45 ನಿಮಿಷಗಳಿಗೊಮ್ಮೆ ಸೂರ್ಯೋದಯ ಅಥವಾ ಸೂರ್ಯಾಸ್ತವನ್ನು ಅನುಭವಿಸುತ್ತಾರೆ. ಭೂಮಿ ಮೇಲಿರುವ ಜನರು ದಿನಕ್ಕೆ ಒಂದು ಬಾರಿ ಸೂರ್ಯೋದಯ ಮತ್ತು ಸೂರ್ಯಾಸ್ತ ಅನುಭವ ಹೊಂದುತ್ತಾರೆ. ಆದರೆ, ನಾವು ದಿನಕ್ಕೆ 16 ಬಾರಿ ಸೂರ್ಯ ಉದಯಿಸುವುದು ಮತ್ತು 16 ಬಾರಿ ಮುಳುಗುವುದನ್ನು ಕಾಣುತ್ತಿದ್ದೇವೆಂದು ಗಗನಯಾತ್ರಿಗಳು ಹೇಳಿಕೊಂಡಿದ್ದಾರೆ.

    ಬಾಹ್ಯಾಕಾಶದಲ್ಲಿ ಹೊಸ ಹಗಲು-ರಾತ್ರಿಗಳ ರಿದಮ್!
    ಭೂಮಿಯ ಮೇಲಿನ ಜೀವನಕ್ಕಿಂತ ಬಾಹ್ಯಾಕಾಶದ ಬದುಕು ಭಿನ್ನವಾಗಿರುತ್ತದೆ. ಭೂಮಿಯಲ್ಲಿ ಒಂದು ದಿನವು 12 ಗಂಟೆಗಳ ಬೆಳಕು ಮತ್ತು 12 ಗಂಟೆಗಳ ಕತ್ತಲೆಯನ್ನು ಒಳಗೊಂಡಿರುತ್ತದೆ. ಆದರೆ, ಐಎಸ್‌ಎಸ್‌ನಲ್ಲಿ ಗಗನಯಾತ್ರಿಗಳು ಹೆಚ್ಚು ವೇಗದ ಚಕ್ರದ ಮೂಲಕ ಬದುಕುತ್ತಾರೆ. ಅವರು 45 ನಿಮಿಷಗಳ ಹಗಲು ಮತ್ತು ಅಷ್ಟೇ ನಿಮಿಷಗಳ ಕತ್ತಲನ್ನು ಅನುಭವಿಸುತ್ತಾರೆ. ಇದು ಹಗಲು-ರಾತ್ರಿಗಳ ನಿರಂತರ ಲಯವನ್ನು ಸೃಷ್ಟಿಸುತ್ತದೆ.

    ಭಾರತೀಯ ಮೂಲದ ಅಮೆರಿಕನ್ ಗಗನಯಾತ್ರಿ ಸುನಿತಾ ವಿಲಿಯಮ್ಸ್ 2024ರ ಜೂನ್‌ನಿಂದ ಬಾಹ್ಯಾಕಾಶದಲ್ಲಿದ್ದಾರೆ. 8 ದಿನಗಳ ಕಾರ್ಯಾಚರಣೆಗಾಗಿ ಬಾಹ್ಯಾಕಾಶಕ್ಕೆ ತೆರಳಿದ್ದ ಅವರು ಬಾಹ್ಯಾಕಾಶ ನೌಕೆಯ ಸಮಸ್ಯೆ ಹಾಗೂ ತಾಂತ್ರಿಕ ದೋಷಗಳಿಂದಾಗಿ ಹಿಂದಿರುಗಲು ಸಾಧ್ಯವಾಗಿಲ್ಲ. 2025ರ ಫೆಬ್ರವರಿ ತಿಂಗಳಲ್ಲಿ ಭೂಮಿಗೆ ಮರಳಲಿದ್ದಾರೆ ಎಂದು ವರದಿಗಳು ತಿಳಿಸಿವೆ.

  • ಕೆಲವೇ ಕ್ಷಣಗಳಲ್ಲಿ ಬಂದೇ ಬಿಡ್ತು ಹೊಸ ವರ್ಷ – ಹೇಗಿದೆ ಯುವಜನರ ಜೋಶ್‌?

    ಕೆಲವೇ ಕ್ಷಣಗಳಲ್ಲಿ ಬಂದೇ ಬಿಡ್ತು ಹೊಸ ವರ್ಷ – ಹೇಗಿದೆ ಯುವಜನರ ಜೋಶ್‌?

    ಬೆಂಗಳೂರು: 2025ರ ಹೊಸ ವರ್ಷ (New Year 2025) ಸ್ವಾಗತಕ್ಕೆ ಇಡೀ ಜಗತ್ತೇ ಸಜ್ಜಾಗಿದೆ. ಹೊಸ ಹುರುಪಿನೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಲು ರಾಜ್ಯ ರಾಜಧಾನಿಯೂ ಸಜ್ಜಾಗಿದೆ. 2024ಕ್ಕೆ ಗುಡ್‌ಬೈ ಹೇಳಿ 2025ಕ್ಕೆ ಹಾಯ್ ಹೇಳಲು ಸಿಲಿಕಾನ್ ಸಿಟಿ ಮಂದಿ ಕಾತರರಾಗಿದ್ದಾರೆ.

    ಈಗಾಗಲೇ ಬೆಂಗಳೂರು ಸಂಭ್ರಮಾಚರಣೆಯ ಮೂಡ್‌ನಲ್ಲಿದೆ.. ಹೊಸ ವರ್ಷದ ಹಾಟ್‌ಸ್ಪಾಟ್‌ಗಳಾದ ಎಂ.ಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್‌, ಕೋರಮಂಗಲ, ಇಂದಿರಾ ನಗರ ಕಲರ್‌ಫುಲ್ ಆಗಿವೆ.. ಝಗಮಗ ಎನ್ನುತ್ತಿವೆ.. ಸಹಸ್ರ ಸಹಸ್ರ ಮಂದಿ ಕುಣಿದು ಕುಪ್ಪಳಿಸಲು.. ಗೆಳೆಯ ಗೆಳೆತಿಯರ ಜೊತೆ ಸಂಭ್ರಮಿಸಲು ಸೆಲೆಬ್ರೆಷನ್ ಸ್ಟಾಟ್‌ಗಳಿಗೆ ಬರ್ತಿದ್ದಾರೆ.

    ರಾತ್ರಿ 12 ಗಂಟೆ ಹೊತ್ತಿಗೆ ಎಂ.ಜಿ ರೋಡ್, ಬ್ರಿಗೇಡ್ ರೋಡ್‌ನಲ್ಲಿ 2 ಲಕ್ಷ ಮಂದಿ ಸೇರುವ ನಿರೀಕ್ಷೆ ಇದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಮಹಿಳೆಯರಿಗಾಗಿ 40 ಸೇಫ್ಟಿ ಐಲ್ಯಾಂಡ್, ವಾಚ್ ಟವರ್ ನಿರ್ಮಿಸಲಾಗಿದೆ. ಮಧ್ಯರಾತ್ರಿ 1 ಗಂಟೆ ವರೆಗೆ ಮಾತ್ರ ಸಂಭ್ರಮಾಚರಣೆಗೆ ಅವಕಾಶ ನೀಡಲಾಗಿದೆ.

    ಮಹಿಳೆಯರ ಸುರಕ್ಷತೆಗಾಗಿ ಪ್ರತಿ ಮೆಟ್ರೋ ಕೋಚ್‌ನಲ್ಲೂ ಭದ್ರತಾ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ. ಫ್ಲೈಓವರ್‌ಗಳನ್ನು ಮುಂಜಾಗ್ರತಾ ಕ್ರಮವಾಗಿ ಬಂದ್ ಮಾಡಲಾಗಿದೆ.

  • 2024ರೊಂದಿಗೆ ಮರೆಯಾದ ಪ್ರಸಿದ್ಧ ಗಣ್ಯರು

    2024ರೊಂದಿಗೆ ಮರೆಯಾದ ಪ್ರಸಿದ್ಧ ಗಣ್ಯರು

    ಹೊಸವರ್ಷ ಆಚರಣೆಗೆ ಇನ್ನೇನು ಕೆಲವೇ ಗಂಟೆಗಳು ಬಾಕಿಯಿದೆ. ಹೊಸ ವರ್ಷದ ಗುಂಗಿನಲ್ಲಿದ್ದರೂ ಕೆಲವೊಂದು ಹಳೆಯ ಘಟನೆಗಳು, ನೆನಪುಗಳು ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದುಬಿಡುತ್ತದೆ. ಅದೇ ರೀತಿ 2024ರಲ್ಲಿ ಬಹಳಷ್ಟು ಸಂತೋಷದ ವಿಚಾರಗಳು ಮನಸ್ಸಿಗೆ ಮುದ ನೀಡಿದರೆ ಇನ್ನೊಂದೆಡೆ ಅನೇಕ ಅಹಿತಕರ ಘಟನೆಗಳು ಹಾಗೂ ಸಾವು-ನೋವುಗಳು ಬೇಸರ ತಂದಿವೆ. 2024ರಲ್ಲಿ ಸಿನಿಮಾ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳ ಅನೇಕ ಪ್ರಸಿದ್ಧ ಗಣ್ಯರು, ತಾರೆಯರು ನಮ್ಮನ್ನು ಅಗಲಿದ್ದಾರೆ. ಹೀಗೆ ಮರೆಯಾದವರ ಪೈಕಿ ಸದಾ ನೆನಪಿನಲ್ಲಿ ಉಳಿಯುವಂತಹ ಒಂದಿಷ್ಟು ಗಣ್ಯರ ಲಿಸ್ಟ್ ಇಲ್ಲಿದೆ.

    ಎಸ್‌ಎಂ ಕೃಷ್ಣ:
    ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಮಹಾರಾಷ್ಟ್ರದ ಮಾಜಿ ರಾಜ್ಯಪಾಲರಾಗಿದ್ದ ಎಸ್‌ಎಂ ಕೃಷ್ಣ ಅವರು 2024ರ ಡಿ.10ರಂದು ನಿಧನರಾದರು. 92 ವರ್ಷದ ಎಸ್‌ಎಂ ಕೃಷ್ಣ ಸುಮಾರು 6 ತಿಂಗಳಿನಿಂದ ಶ್ವಾಸಕೋಶದ ಸಮಸ್ಯೆ ಎದುರಿಸುತ್ತಿದ್ದರು. ಮೂಲತಃ ಮಂಡ್ಯ ಜಿಲ್ಲೆಯವರಾದ ಕೃಷ್ಣ 1932ರ ಮೇ.1ರಂದು ಜನಿಸಿದರು. 1994ರ ವಿಧಾನಸಭೆ ಚುನಾವಣೆಯಲ್ಲಿ ಪಾಂಚಜನ್ಯ ಮೊಳಗಿಸುವ ಮೂಲಕ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವಲ್ಲಿ ಎಸ್‌ಎಂ ಕೃಷ್ಣ ಪ್ರಮುಖ ಪಾತ್ರ ವಹಿಸಿದ್ದರು.

    ರತನ್ ಟಾಟಾ:
    ಸರಳ ವ್ಯಕ್ತಿತ್ವದ ಖ್ಯಾತ ಭಾರತೀಯ ಕೈಗಾರಿಕೋದ್ಯಮಿ ರತನ್ ಟಾಟಾ 2024ರ ಅ.09ರಂದು ಅನಾರೋಗ್ಯದಿಂದ ವಿಧಿವಶರಾದರು. ಟಾಟಾ ಗ್ರೂಪ್ ಹಾಗೂ ಟಾಟಾ ಸನ್ಸ್ನ ಅಧ್ಯಕ್ಷರಾಗಿದ್ದ ರತನ್ ಟಾಟಾ ಅನೇಕ ಸಾಮಾಜಿಕ ಸೇವೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಇವರ ಸೇವೆಗಳನ್ನು ಗುರುತಿಸಿ 2000ನೇ ಇಸವಿಯಲ್ಲಿ ಭಾರತ ಸರ್ಕಾರ ಪದ್ಮಭೂಷಣ ಹಾಗೂ 2008ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.

    ಮನಮೋಹನ್ ಸಿಂಗ್:
    ಭಾರತದ ಮಾಜಿ ಪ್ರಧಾನಿ, ಅರ್ಥ ಶಾಸ್ತçಜ್ಞ ಡಾ.ಮನಮೋಹನ್ ಸಿಂಗ್ ದೀರ್ಘಕಾಲದ ಉಸಿರಾಟ ಸಮಸ್ಯೆಯಿಂದ 2024ರ ಡಿ.26ರಂದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮನಮೋಹನ್ ಸಿಂಗ್ ಅವರು 2004 ರಿಂದ 2014 ರವರೆಗೆ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಅಡಿಯಲ್ಲಿ ಸಮ್ಮಿಶ್ರ ಸರ್ಕಾರವನ್ನು ಮುನ್ನಡೆಸುವ ಮೂಲಕ ಸತತ ಎರಡು ಬಾರಿ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ಅವರು 1991 ರಲ್ಲಿ ಪಿವಿ ನರಸಿಂಹ ರಾವ್ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ ಭಾರತದ ಆರ್ಥಿಕ ಉದಾರೀಕರಣದ ವಾಸ್ತುಶಿಲ್ಪಿಯಾಗಿದ್ದರು. 2005ರಲ್ಲಿ ಮನಮೋಹನ್ ಸಿಂಗ್ ಸಂಕೀರ್ಣ ಮಾರಾಟ ತೆರಿಗೆಯ ಬದಲು ಮೌಲ್ಯ ವರ್ಧಿತ ತೆರಿಗೆ (ವ್ಯಾಟ್) ಅನ್ನು ಜಾರಿಗೊಳಿಸಿದರು. ಇದು ದೇಶದ ಅರ್ಥ ವ್ಯವಸ್ಥೆಯಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿತು.

    ಸೀತಾರಾಮ್ ಯೆಚೂರಿ:
    ಹಿರಿಯ ರಾಜಕಾರಣಿ ಹಾಗೂ ಸಿಪಿಐ ಹಿರಿಯ ಮುಖಂಡ ಸೀತಾರಾಮ್ ಯೆಚೂರಿ 2024ರ ಸೆ.12ರಂದು ನಿಧನರಾದರು. ತೀವ್ರ ಉಸಿರಾಟದ ಸಮಸ್ಯೆಯಿಂದಾಗಿ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಇತ್ತೀಚೆಗೆ ಆಕ್ಸಿಜನ್ ಸಪೋರ್ಟ್ನಲ್ಲಿ ಇರಿಸಲಾಗಿತ್ತು. 1974ರಲ್ಲಿ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಸೇರಿದಾಗ ಯೆಚೂರಿಯವರ ರಾಜಕೀಯ ಪಯಣ ಆರಂಭವಾಯಿತು. ಆ ಬಳಿಕ ರಾಜಕೀಯದ ಮೆಟ್ಟಿಲುಗಳನ್ನು ಅತ್ಯಂತ ಶೀಘ್ರವಾಗಿ ಏರಿದ್ದರು. ಮೂರು ಬಾರಿ ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾಗಿದ್ದ ಸೀತಾರಾಮ್ ಯೆಚೂರಿ ಬಳಿಕ, ಎಸ್‌ಎಫ್‌ಐನ ಅಖಿಲ ಭಾರತ ಅಧ್ಯಕ್ಷರಾಗಿದ್ದರು. 1984 ರಲ್ಲಿ, ಅವರು ಸಿಪಿಐ(ಎಂ) ಕೇಂದ್ರ ಸಮಿತಿಗೆ ಆಯ್ಕೆಯಾದ ಅವರು ಬಳಿಕ ಶಾಶ್ವತ ಆಹ್ವಾನಿತರೆನಿಸಿಕೊಂಡಿದ್ದರು. 1992 ರ ಹೊತ್ತಿಗೆ, ಅವರು ಪಾಲಿಟ್‌ಬ್ಯೂರೊದ ಸದಸ್ಯರಾಗಿದ್ದರು, ಅವರು ಮೂರು ದಶಕಗಳ ಕಾಲ ಈ ಸ್ಥಾನವನ್ನು ಹೊಂದಿದ್ದರು.

    ರೋಹಿತ್ ಬಾಲ್:
    ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿದ್ದ ಖ್ಯಾತ ವಸ್ತ್ರ ವಿನ್ಯಾಸಕ ರೋಹಿತ್ ಬಾಲ್ ನ.1ರ ತಡರಾತ್ರಿ ಅಸುನೀಗಿದರು. ಭಾರತದ ಮೊದಲ ಫ್ಯಾಷನ್ ಡಿಸೈನರ್‌ಗಳಲ್ಲಿ ಒಬ್ಬರಾಗಿದ್ದ ರೋಹಿತ್ ಬಾಲ್, 1990ರ ದಶಕದಲ್ಲಿ ವಸ್ತ್ರ ವಿನ್ಯಾಸ ವೃತ್ತಿಯನ್ನು ಕೈಗೆಟುಕುವ ಹಾಗೂ ಗ್ಲಾಮರಸ್ ವೃತ್ತಿಯಾಗಿ ಜನಪ್ರಿಯಗೊಳಿಸಿದ್ದರು. ಭಾರತದ ಮೊದಲ ಫ್ಯಾಷನ್ ಡಿಸೈನರ್‌ಗಳಲ್ಲಿ ಒಬ್ಬರಾಗಿದ್ದ ರೋಹಿತ್ ಬಾಲ್, 1990ರ ದಶಕದಲ್ಲಿ ವಸ್ತ್ರ ವಿನ್ಯಾಸ ವೃತ್ತಿಯನ್ನು ಕೈಗೆಟುಕುವ ಹಾಗೂ ಗ್ಲಾಮರಸ್ ವೃತ್ತಿಯಾಗಿ ಜನಪ್ರಿಯಗೊಳಿಸಿದ್ದರು. ಅವರ ನವನವೀನ ರಚನೆಯ ಬಟ್ಟೆಗಳನ್ನು ತೊಡದ ಸೆಲೆಬ್ರಿಟಿಗಳೇ ಇಲ್ಲ. ಹಾಲಿವುಡ್ ತಾರೆಗಳು ಮತ್ತು ಸೂಪರ್ ಮಾಡೆಲ್‌ಗಳ ಅಂದವನ್ನು ರೋಹಿತ್ ಬಾಲ್ ವಿನ್ಯಾಸದ ಬಟ್ಟೆಗಳು ಸಹಾಯ ಮಾಡಿದ್ದವು. ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಮಕಾಲೀನ ಟ್ರೆಂಡ್‌ನೊಂದಿಗೆ ಸಂಯೋಜಿಸುವಲ್ಲಿ ಅವರು ಹೆಸರುವಾಸಿಯಾಗಿದ್ದರು.

    ಜಾಕೀರ್ ಹುಸೇನ್:
    ತಬಲಾ ಮಾಂತ್ರಿಕ ಎಂದೇ ಖ್ಯಾತರಾಗಿರುವ ಜಾಕಿರ್ ಹುಸೇನ್ ಡಿ.15ರಂದು ಇಹಲೋಕ ತ್ಯಜಿಸಿದರು. ಇವರ ನಿಧನಕ್ಕೆ ಕೇವಲ ಭಾರತ ಮಾತ್ರವಲ್ಲ, ಇಡೀ ವಿಶ್ವವೇ ಮರುಗಿದೆ. ಜಾಕಿರ್ ತಬಲಾ ಸದ್ದು ಜನರ ನಶೆ ಏರುವಂತೆ ಮಾಡುತ್ತಿತ್ತು, ಜನ ಅವರನ್ನು ವಾಹ್ ಉಸ್ತಾದ್ ಎನ್ನುತ್ತಿದ್ದರು. ಜಾಕಿರ್ ತನ್ನ ಕಲೆಯ ಪತಾಕೆಯನ್ನು ದೇಶ ಮಾತ್ರವಲ್ಲದೆ ವಿಶ್ವದಾದ್ಯಂತ ಹಾರಿಸಿದ್ದರು. ಜಾಕಿರ್ ಹುಸೇನ್ ಮಾರ್ಚ್ 9 1951ರಲ್ಲಿ ಮುಂಬೈನಲ್ಲಿ ಜನಿಸಿದರು. ಅನೇಕ ಕಠಿಣ ಹಾದಿಗಳು, ಸವಾಲುಗಳನ್ನು ದಾಟಿ ಪ್ರಪಂಚದಾದ್ಯಂತ ಜನರ ಹೃದಯದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ಜಾಕಿರ್ ಹುಸೇನ್‌ಗೆ 2009ರಲ್ಲಿ ಗ್ರ‍್ಯಾಮಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. 1988 ರಲ್ಲಿ ಪದ್ಮಶ್ರೀ ಮತ್ತು 2002 ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಗಿತ್ತು. 1990 ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

    ಶ್ಯಾಮ್ ಬೆನಗಲ್:
    ಭಾರತೀಯ ಚಿತ್ರರಂಗದ ಹಿರಿಯ ನಿರ್ದೇಶಕ ಶ್ಯಾಮ್ ಬೆನಗಲ್ ಡಿ.23ರಂದು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅನಂತ್ ನಾಗ್ ನಟನೆಯ ಅಂಕುರ್, ಗಿರೀಶ್ ಕಾರ್ನಾಡ್ ಅಭಿನಯದ ನಿಶಾಂತ್, ಸ್ಮಿತಾ ಪಾಟೀಲ್ ನಟನೆಯ ಮಂಥನ್, ಭೂಮಿಕಾ ಸೇರಿದಂತೆ ಹಲವು ಸಿನಿಮಾಗಳನ್ನು ಶ್ಯಾಮ್ ಬೆನಗಲ್ ನಿರ್ದೇಶಿಸಿದ್ದರು. ಪ್ಯಾರಲಲ್ ಸಿನಿಮಾ ಮೂಲಕ ಅವರು ಭಾರತೀಯ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದರು. 18 ಬಾರಿ ಶ್ಯಾಮ್ ಬೆನಗಲ್ ಅವರು ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಅವರಿಗೆ ಗೌರವಿಸಲಾಗಿತ್ತು. ಫಿಲ್ಮ್ ಫೇರ್, ನಂದಿ ಅವಾರ್ಡ್ ಮುಂತಾದ ಗೌರವಗಳು ಕೂಡ ಅವರಿಗೆ ಸಿಕ್ಕಿದ್ದವು. ಪದ್ಮಶ್ರೀ, ಪದ್ಮ ಭೂಷಣ ಪ್ರಶಸ್ತಿಗಳು ಸಹ ಶ್ಯಾಮ್ ಬೆನಗಲ್ ಅವರ ಮುಡಿಗೇರಿದ್ದವು. ರಿಯಲಿಸ್ಟಿಕ್ ಸಿನಿಮಾಗಳ ಮೂಲಕ ಶ್ಯಾಮ್ ಬೆಗನಲ್ ಅವರು ಹೆಸರುವಾಸಿ ಆಗಿದ್ದರು.

    ದ್ವಾರಕೀಶ್:
    ಕರ್ನಾಟಕದ ಕುಳ್ಳ ಎಂದೇ ಫೇಮಸ್ ಆಗಿದ್ದ ಹಿರಿಯ ನಟ, ನಿರ್ಮಾಪಕ ನಿರ್ದೇಶಕ ದ್ವಾರಕೀಶ್ ಏ.16ರಂದು ಇಹಲೋಕ ತ್ಯಜಿಸಿದರು. 81 ವರ್ಷ ವಯಸ್ಸಿನ ದ್ವಾರಕೀಶ್ ಅವರು ವಯೋಸಹಜ ಕಾಯಿಲೆಯಿಂದ ಬಳುತ್ತಿದ್ದರು.ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಬಾಲಕೃಷ್ಣ, ಅಶ್ವಥ್, ಸೇರಿದಂತೆ ಕನ್ನಡ ಚಿತ್ರರಂಗದ ದೊಡ್ಡ ದೊಡ್ಡ ಸ್ಟಾರ್‌ಗಳ ಜೊತೆ ಅಭಿನಯಿಸಿದ ಕೀರ್ತಿ ದ್ವಾರಕೀಶ್ ಅವರಿಗೆ ಸಲ್ಲುತ್ತದೆ. 1964ರಲ್ಲಿ ವೀರಸಂಕಲ್ಪ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಬಂದ ದ್ವಾರಕೀಶ್ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. 40ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಿಸಿರುವ ಇವರು 15ಕ್ಕೂ ಹೆಚ್ಚು ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ. ಡಾ.ರಾಜ್‌ಕುಮಾರ್, ವಿಷ್ಣುವರ್ಧನ್ ಅವರಂತಹ ದಿಗ್ಗಜರ ಸಿನಿಮಾಗಳನ್ನು ನಿರ್ಮಿಸಿ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದರು. ಚಿತ್ರರಂಗದಲ್ಲಿ ಅವರ ಅಪಾರ ಸೇವೆ ಪರಿಗಣಿಸಿ ಬೆಂಗಳೂರು ವಿಶ್ವವಿದ್ಯಾನಿಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಿತ್ತು.

    ಅಪರ್ಣಾ:
    ಅಪ್ಪಟ ಕನ್ನಡದಲ್ಲಿಯೇ ನಿರೂಪಣೆ ಮಾಡುತ್ತಿದ್ದ ಅಪರ್ಣಾ ಧ್ವನಿಗೆ ಮಾರುಹೋಗದವರೇ ಇಲ್ಲ. ನನ್ನ ಗುರುತು ಕನ್ನಡ, ನನ್ನ ಅಸ್ತಿತ್ವ ಕನ್ನಡ ಎಂದು ಹೆಮ್ಮೆಯಿಂದ ಹೇಳುತ್ತಿದ್ದ ಅಪರ್ಣಾ 2024ರ ಜುಲೈ 11 ರಂದು ಶ್ವಾಸಕೋಶದ ಕ್ಯಾನ್ಸರ್‌ನಿಂದ ನಿಧನರಾದರು. ನಿರೂಪಣೆಯಷ್ಟೇ ಅಲ್ಲದೇ ಮಸಣದ ಹೂವು, ಇನ್ಸ್ ಪೆಕ್ಟರ್ ವಿಕ್ರಮ್ ಸೇರಿದಂತೆ ಹಲವು ಚಿತ್ರಗಳಲ್ಲೂ ಅಪರ್ಣಾ ನಟಿಸಿದ್ದರು.ನಮ್ಮ ಮೆಟ್ರೋ ಸೇರಿದಂತೆ ಅನೇಕ ಪ್ರಕಟಣೆಗಳಿಗೆ ಧ್ವನಿ ನೀಡಿದ್ದ ಅಪರ್ಣಾ, ಮೂಡಲ ಮನೆ, ಮುಕ್ತ ಮುಕ್ತ ಮೊದಲಾದ ಧಾರಾವಾಹಿಗಳಲ್ಲೂ ನಟಿಸಿದ್ದರು. ದೀಪಾವಳಿ ಕಾರ್ಯಕ್ರಮದಲ್ಲಿ ಸತತ 8 ಗಂಟೆಗಳ ಕಾಲ ನಿರೂಪಣೆ ಮಾಡಿದ್ದ ಅಪರ್ಣಾ, 2013 ರಲ್ಲಿ ಬಿಗ್ ಬಾಸ್ ಶೋ ನಲ್ಲಿಯೂ ಭಾಗವಹಿಸಿದ್ದರು.

    ರಾಮೋಜಿ ರಾವ್:
    ಆಂಧ್ರ ಪ್ರದೇಶದ ಗುಂಟೂರಿನ ಸಮೀಪದ ಪೆದಪರುಪುಡಿ ಗ್ರಾಮದಲ್ಲಿ 1936 ನವೆಂಬರ್ 16ರಂದು ರೈತ ಕುಟುಂಬದಲ್ಲಿ ಜನಿಸಿದ ರಾಮೋಜಿ ರಾವ್ ಸಾಧನೆ ಅಸಾಮಾನ್ಯವಾದದ್ದು. 2024 ಜೂನ್ 8ರಂದು ತಮ್ಮ 87ನೇ ವಯಸ್ಸಿನಲ್ಲಿ ರಾವ್ ಇಹಲೋಕ ತ್ಯಜಿಸಿದರು. ಆದರೆ ತಾವು ಪ್ರವೇಶಿಸಿದ ಪ್ರತಿಯೊಂದು ಕ್ಷೇತ್ರಕ್ಕೂ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡಿದ್ದು, ಶಾಶ್ವತ ಪರಂಪರೆಯನ್ನೇ ಬಿಟ್ಟು ಹೋಗಿದ್ದಾರೆ. 1962ರಲ್ಲಿ ಮಾರ್ಗದರ್ಶಿ ಚಿಟ್‌ಫಂಡ್, 1974ರಲ್ಲಿ ಈನಾಡು, 1980ರಲ್ಲಿ ಪ್ರಿಯಾ ಫುಡ್ಸ್, 1980ರಲ್ಲಿ ಡಾಲ್ಫಿನ್ ಗ್ರೂಪ್ ಆಫ್ ಹೋಟೆಲ್ಸ್, 1983ರಲ್ಲಿ ಉಷಾಕಿರಣ್ ಮೂವೀಸ್, 1995ರಲ್ಲಿ ಈಟಿವಿ ವಾಹಿನಿಗಳು, 1996ರಲ್ಲಿ ರಾಮೋಜಿ ಫಿಲ್ಮ್ ಸಿಟಿ, 2002ರಲ್ಲಿ ರಮಾದೇವಿ ಪಬ್ಲಿಕ್ ಸ್ಕೂಲ್ ಮತ್ತು 2019ರಲ್ಲಿ ಈಟಿವಿ ಭಾರತ್ ಸ್ಥಾಪಿಸಿದರು. ಇಂದಿಗೂ ಈ ಎಲ್ಲಾ ಸಂಸ್ಥೆಗಳು ಯಶಸ್ವಿಯಾಗಿ ನಡೆಯುತ್ತಿವೆ.

  • New Year 2025: ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರ ಜಾತ್ರೆ – ಮಸಾಲೆ ಹಚ್ಚಿಕೊಂಡು ಕಾಯುತ್ತಿರುವ ತಾಜಾ ಮೀನು

    New Year 2025: ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರ ಜಾತ್ರೆ – ಮಸಾಲೆ ಹಚ್ಚಿಕೊಂಡು ಕಾಯುತ್ತಿರುವ ತಾಜಾ ಮೀನು

    ಉಡುಪಿ: ಹೊಸ ವರ್ಷ ಬರಮಾಡಿಕೊಳ್ಳಲು ಜನ ಸಿದ್ಧರಾಗಿದ್ದಾರೆ. ಕರಾವಳಿ ಜಿಲ್ಲೆ ಉಡುಪಿ ಪ್ರತಿ ದಿನ ಲಕ್ಷ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಬರಮಾಡಿಕೊಳ್ಳುತ್ತಿದೆ.

    ಮಲ್ಪೆ ಬೀಚ್ ಪ್ರವಾಸಿಗರಿಂದ ತುಂಬಿ ತುಳುಕಿದೆ. ವಾಟರ್ ಸ್ಪೋರ್ಟ್ಸ್‌ಗಳಲ್ಲಿ ಜನ ಮೈ ಮರೆತು ಸಂಭ್ರಮಿಸುತಿದ್ದಾರೆ. ಸೈಂಟ್ ಮೇರೀಸ್ ಐಲ್ಯಾಂಡ್, ಸ್ಪೀಡ್ ಬೋಟ್, ರೋಲಿಂಗ್ ಬಲೂನ್ ಜನರ ಖುಷಿಯನ್ನು ಹೆಚ್ಚು ಮಾಡುತ್ತಿದೆ.

    ನ್ಯೂ ಇಯರ್ ಹಿನ್ನೆಲೆ ಉಡುಪಿಗೆ ಬರುವ ಪ್ರವಾಸಿಗರಿಗೆ ಫ್ರೆಶ್ ಫಿಶ್ ಖಾದ್ಯಗಳು ಸಿದ್ಧವಾಗುತ್ತಿವೆ. ಬಂಗುಡೆ, ಮಾಂಜಿ, ಫ್ರಾನ್ಜ್, ನಾಟಿಕೋಳಿಯ ತರೆಹೇವಾರಿ ಐಟಂ ರೆಡಿಯಾಗುತ್ತಿದೆ.

    ಬೀಚ್‌ನಲ್ಲಿ ಹೊಸ ವರ್ಷ ಆಚರಿಸಿ, ಮೀನು ತಿಂದು ಮಸ್ತಿ ಮಾಡೋ ಜನಕ್ಕೆ ಸರ್ವ್ ಮಾಡೋದಕ್ಕೆ ಹೋಟೆಲ್, ಫುಡ್ ಕೋರ್ಟ್‌ಗಳು ಸರ್ವ ಸನ್ನದ್ಧವಾಗಿವೆ.

    ಐಸ್ ಹಾಕದ ಸಮುದ್ರದ ತಾಜಾ ಮೀನುಗಳು ಮಸಾಲೆ ಹಚ್ಚಿಕೊಂಡು ರೆಡಿಯಾಗುತ್ತಿವೆ. ಆಹಾರ ಪ್ರಿಯರ ಬಾಯಲ್ಲಿ ನೂರೂರಿಸುವಂತಿದೆ ದೃಶ್ಯಗಳು.

  • ಹೊಸ ವರ್ಷ ಆಚರಣೆಗೆ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭಕ್ತರ ದಂಡು

    ಹೊಸ ವರ್ಷ ಆಚರಣೆಗೆ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭಕ್ತರ ದಂಡು

    ಮಂಗಳೂರು: ಹೊಸ ವರ್ಷ ಆಚರಣೆ ಹಿನ್ನೆಲೆ ಕರಾವಳಿಯ ಪ್ರಸಿದ್ಧ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭಕ್ತರ ದಂಡೇ ಆಗಮಿಸಿದೆ.

    ಮಂಜುನಾಥ ಸ್ವಾಮಿಯ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತು ಭಕ್ತರು ದರ್ಶನ ಪಡೆದರು. ಈ ವರ್ಷದ ಕೊನೆಯ ದಿನವಾದ ಇಂದು ಭಕ್ತರು ಶ್ರೀಕ್ಷೇತ್ರ ಧರ್ಮಸ್ಥಳದಲ್ಲೇ ವಾಸ್ತವ್ಯ ಹೂಡಲಿದ್ದು, ಮಂಜುನಾಥ ಸ್ವಾಮಿಯ ಸನ್ನಿಧಾನದಲ್ಲೇ ಹೊಸ ವರ್ಷವನ್ನ ಸ್ವಾಗತಿಸಲಿದ್ದಾರೆ.

    ಬೆಂಗಳೂರು, ಮೈಸೂರು, ಹುಬ್ಬಳಿ ಸೇರಿ ಉತ್ತರ ಕರ್ನಾಟಕ ಹಾಗೂ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡಿನಿಂದಲೂ ಆಗಮಿಸಿದ ಭಕ್ತರ ದಂಡು ಆಗಮಿಸಿದೆ.

  • ಹೊಸ ವರ್ಷಾಚರಣೆಗೆ ಕ್ಷಣಗಣನೆ – ಮೇಕೆದಾಟು, ಸಂಗಮಕ್ಕೆ ಪ್ರವಾಸಿಗರ ನಿರ್ಬಂಧ

    ಹೊಸ ವರ್ಷಾಚರಣೆಗೆ ಕ್ಷಣಗಣನೆ – ಮೇಕೆದಾಟು, ಸಂಗಮಕ್ಕೆ ಪ್ರವಾಸಿಗರ ನಿರ್ಬಂಧ

    ರಾಮನಗರ: ಹೊಸ ವರ್ಷ ಸಂಭ್ರಮಾಚರಣೆಗೆ (New Year 2025) ಕ್ಷಣಗಣನೆ ಆರಂಭವಾಗಿದ್ದು, ರಾಮನಗರದ (Ramanagara) ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.

    ಕನಕಪುರ ತಾಲೂಕಿನ ಸಂಗಮ, ಮೇಕೆದಾಟು (Mekedatu) ಹಾಗೂ ಚುಂಚಿ ಫಾಲ್ಸ್‌ಗೆ (Chunchi Falls) ಸಾರ್ವಜನಿಕ ನಿಷೇಧ ವಿಧಿಸಲಾಗಿದೆ. ಡಿ.31ರಿಂದ ಜ.1ರ ಮಧ್ಯರಾತ್ರಿವರೆಗೂ ನಿರ್ಬಂಧ ಹೇರಿ ಕನಕಪುರ ತಾಲೂಕು ಆಡಳಿತ ಆದೇಶ ಹೊರಡಿಸಿದೆ. ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸ್ಥಳೀಯ ಆಡಳಿತ ಮುನ್ನೆಚ್ಚರಿಕೆ ಕ್ರಮ ವಹಿಸಿದೆ. ಅಲ್ಲದೇ ಕಾವೇರಿ ನದಿ ಪಾತ್ರ ಹಾಗೂ ಅರ್ಕಾವತಿ ನದಿ ಪಾತ್ರದಲ್ಲೂ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದೆ. ಇದನ್ನೂ ಓದಿ: Haveri| ನ್ಯೂ ಇಯರ್‌ ಪಾರ್ಟಿಗೆ ಗೋವಾಗೆ ತೆರಳುತ್ತಿದ್ದಾಗ ಅಪಘಾತ – 10 ಮಂದಿಗೆ ಗಾಯ

    ರಾತ್ರಿ ವೇಳೆ ಕುಡಿದು ವಾಹನ ಚಲಾವಣೆ ಮಾಡುವಂಥವರ ವಿರುದ್ಧವೂ ಪೊಲೀಸರು ನಿಗಾ ವಹಿಸಿದ್ದು, ಪ್ರಮುಖ ರಸ್ತೆಗಳಲ್ಲಿ ವಾಹನ ತಪಾಸಣೆ ನಡೆಸಲಿದ್ದಾರೆ. ಇದನ್ನೂ ಓದಿ: ಚಾಕುವಿನಿಂದ ಕುತ್ತಿಗೆ ಕೊಯ್ದು ವ್ಯಕ್ತಿಯ ಬರ್ಬರ ಹತ್ಯೆ

  • New Year 2025: ಹೊಸ ವರ್ಷಾಚರಣೆಗೆ ಕ್ಷಣಗಣನೆ – ನ್ಯೂ ಇಯರ್ ಸ್ವಾಗತಕ್ಕೆ ಸಜ್ಜಾದ ಬೆಂಗಳೂರು

    New Year 2025: ಹೊಸ ವರ್ಷಾಚರಣೆಗೆ ಕ್ಷಣಗಣನೆ – ನ್ಯೂ ಇಯರ್ ಸ್ವಾಗತಕ್ಕೆ ಸಜ್ಜಾದ ಬೆಂಗಳೂರು

    – ಎಂ.ಜಿ. ರೋಡ್, ಬ್ರಿಗೇಡ್ ರೋಡ್ ಕಲರ್‌ಫುಲ್

    ಬೆಂಗಳೂರು: ನ್ಯೂ ಇಯರ್ ಸೆಲೆಬ್ರೇಷನ್‌ಗೆ ಕ್ಷಣಗಣನೆ ಶುರುವಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈಗಾಗಲೇ ನ್ಯೂಇಯರ್ ಜೋಶ್ ಹೆಚ್ಚಾಗಿದೆ. ಜನರು ಪಾರ್ಟಿ ಮೂಡ್‌ನಲ್ಲಿದ್ರೆ, ಎಂಜಿ ರೋಡ್ ಮತ್ತು ಬ್ರಿಗೇಡ್ ರೋಡ್ ಕಲರ್ ಕಲರ್ ಲೈಟಿಂಗ್‌ನೊಂದಿಗೆ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ.

    ಸಿಲಿಕಾನ್ ಸಿಟಿಯಲ್ಲಿ ನ್ಯೂಇಯರ್ ಸಂಭ್ರಮಾಚರಣೆಯ ಹಾಟ್ ಸ್ಪಾಟ್‌ಗಳಾದ ಬ್ರಿಗೇಡ್ ರೋಡ್, ಎಂ.ಜಿ. ರೋಡ್, ಚರ್ಚ್ ಸ್ಟ್ರೀಟ್, ಕೋರಮಂಗಲದಲ್ಲಿ ಸಿದ್ಧತೆ ನಡೆದಿದೆ.

    ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸ್ ಕಣ್ಗಾವಲು ಹಾಕಲಾಗಿದೆ. ಕುಡಿದು ಟೈಟ್ ಆಗೋರಿಗೆ ಬೆಡ್ ವ್ಯವಸ್ಥೆ ಮಾಡಲಾಗಿದೆ. ಹೆಣ್ಣುಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ರಾಣಿ ಚೆನ್ನಮ್ಮ ಪಡೆ ಕೂಡ ಕಾರ್ಯ ನಿರ್ವಸಲಿದೆ. 12 ಮಹಿಳಾ ಸೇಫ್ಟಿ ಐಲ್ಯಾಂಡ್, ಹೆಲ್ತ್ ಕೇರ್, ವಾಚ್ ಟವರ್ ನಿಯೋಜನೆ ಮಾಡಲಾಗಿದೆ. ಜೊತೆಗೆ ಭದ್ರತೆಗೆ ಅಂತ ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್ ಸುತ್ತಮುತ್ತ ಎರಡು ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿದೆ. ಅದೇ ರೀತಿ ಕೋರಮಂಗಲದಲ್ಲಿಯೂ ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ನಿಯೋಜನೆಗೆ ನೀಲಿ ನಕ್ಷೆ ಹಾಕಿಕೊಂಡಿದ್ದಾರೆ. ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. 180 ಕ್ಯಾಮೆರಾಗಳನ್ನ ಹೆಚ್ಚುವರಿಯಾಗಿ ಅಳವಡಿಸಲಾಗಿದೆ. ಸಿಸಿಟಿವಿ ಮಾನಿಟರಿಂಗ್‌ಗೆ ಮಿನಿ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ.

    ಬೆಂಗಳೂರಿನ ಎಲ್ಲಾ ಫ್ಲೈಓವರ್‌ಗಳು ರಾತ್ರಿ 10 ಗಂಟೆಯ ನಂತರ ಬಂದ್ ಆಗಲಿವೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸಬಾರದೆಂದು ಫ್ಲೈಓವರ್‌ಗಳು ಬಂದ್ ಆಗಲಿವೆ. ಏರ್‌ಪೋರ್ಟ್ ರೋಡ್ ಹೊರತುಪಡಿಸಿ ಆನಂದ್‌ರಾವ್ ವೃತ್ತ, ಮೈಸೂರು ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ಯಶವಂತಪುರ ಫ್ಲೈಓವರ್‌ ಸೇರಿ ಎಲ್ಲಾ ಫ್ಲೈಓವರ್‌ಗಳು ಕ್ಲೋಸ್ ಮಾಡಲಾಗುತ್ತದೆ. ಡ್ರಂಕ್ & ಡ್ರೈವ್‌ ಕಾರ್ಯಾಚರಣೆಯನ್ನು ಕೈಗೊಳ್ಳಲಾಗುತ್ತದೆ.

    ಜನರು ನ್ಯೂಇಯರ್ ಸೆಲೆಬ್ರೆಷನ್‌ನಲ್ಲಿ ಭಾಗಿ ಆಗಿ ಮತ್ತೆ ವಾಪಸ್ ತೆರಳಲು ಮೆಟ್ರೋ, ಬಿಎಂಟಿಸಿ ಬಸ್‌ಗಳ ವ್ಯವಸ್ಥೆ ಇರಲಿದೆ. ರಾತ್ರಿ 2 ಗಂಟೆಯವರೆಗೆ ಮೆಟ್ರೋ ರೈಲು ಸಂಚರಿಸಲಿದೆ. ಎಂಜಿ ರೋಡ್‌ನ ಮೆಟ್ರೋ ಸ್ಟೇಷನ್ ಬಂದ್ ಆಗಲಿದೆ. ಟ್ರಿನಿಟಿ ಹಾಗೂ ಕಬ್ಬನ್‌ಪಾರ್ಕ್ ಮೆಟ್ರೋ ಸ್ಟೇಷನ್‌ಗಳು ಓಪನ್ ಇರಲಿವೆ. ಇತ್ತ ಎಂ.ಜಿ. ರಸ್ತೆಯಿಂದ ನಗರದ ವಿವಿಧ ಭಾಗಗಳಿಗೆ ಹೆಚ್ಚಿನ ಸಾರಿಗೆ ಸೌಲಭ್ಯ ಒದಗಿಸಲಾಗಿದೆ. ನಗರದ ಕೆಲ ಏರಿಯಾಗಳಿಗೆ ಎಂಜಿ ರೋಡ್‌ನಿಂದ ಬಸ್ ಸೌಲಭ್ಯ ಇರಲಿದೆ.